Vydyaloka

ಥೈರಾಯ್ಡ್ ಗೆ ಹೆದರಬೇಡಿ

ಥೈರಾಯ್ಡ್ ಗೆ ಹೆದರಬೇಡಿ. ಇದು ಭಯಪಡುವ ಕಾಯಿಲೆ ಅಲ್ಲ.ವಿಶ್ವದಲ್ಲಿ, ಥೈರಾಯ್ಡ್ ಕಾಯಿಲೆ ಬಗ್ಗೆ ಅರಿವು ಮೂಡಿಸಲು ನಾವು ಹೆಚ್ಚು ಪ್ರಯತ್ನ ಮಾಡಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವಂತೆ,  ಅಯೋಡಿನ್ ಕೊರತೆಯೇ ಕಾರಣ.

ನನಗೆ ಹನ್ನೆರಡು ವರ್ಷಗಳ ಹಿಂದೆಯೇ ಥೈರಾಯಿಡ್ ಇದೆ ಅಂತ ತಿಳಿದಾಗ ಬಹಳ ಗಾಬರಿಯಾಯಿತು. ನಾನು ದಿನಕ್ಕೆ 20 ಗಂಟೆಗಳಿಗಿಂತ ಹೆಚ್ಚು ಚಟುವಟಿಕೆಯಿಂದ ಇದ್ದು, ಕಡಿಮೆ ಆಹಾರ ಸೇವಿಸುತ್ತಿದ್ದರೂ  ಕ್ರಮೇಣ ಸ್ವಲ್ಪ ದಪ್ಪವಾಗುತ್ತಾ ಬೊಜ್ಜು ಬರುತ್ತಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ನನ್ನ ತಾಯಿ ದಿನೇ ದಿನೇ ತೆಳ್ಳಗಾಗುತ್ತಾ ಬಂದರು. ಒಂದೇ ಕುಟುಂಬದ ನಮ್ಮ, ಅಂದರೆ ತಾಯಿ-ಮಗನ ಊಟ ಹಾಗೂ ದೈನಂದಿಕ ಚಟುವಟಿಕೆಗಳು ಹೆಚ್ಚು ಕಡಿಮೆ ಒಂದೇ ಆಗಿದ್ದರೂ ನಮ್ಮಿಬ್ಬರಲ್ಲಿ ಏಕೆ ಈ ವ್ಯತ್ಯಾಸ? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ವೈದ್ಯಮಿತ್ರರನ್ನು ಕಂಡೆ. ಆಗ ನನಗೆ ಇದ್ದ ಥೈರಾಯ್ಡ್ ಸ್ಥಿತಿಯಿಂದ ಹೀಗಾಗುತ್ತಿದೆ ಎಂದು ತಿಳಿಯಿತು. ಹಾಗೆಯೇ ಮುಂದೆ ನಮ್ಮ ತಾಯಿಯ ಸ್ಥಿತಿಗೂ, ಥೈರಾಯ್ಡ್‍ ಕಾರಣ ಎಂದು ಮನವರಿಕೆಯಾಯಿತು.

ಅಂದಿನಿಂದ ನಾನು ಪ್ರತಿ ಬೆಳಗಿನ ಜಾವ  ಮಾತ್ರೆ ಜೀವಂತ ಪರ್ಯಂತ ತೆಗೆದುಕೊಳ್ಳಬೇಕು ಹಾಗೂ ಆಗಾಗ ನನ್ನ ರಕ್ತ ತಪಾಸಣೆಯಲ್ಲಿ ಥೈರಾಯ್ಡ್ ಅಂಶದ ಪರೀಕ್ಷೆ ಅವಶ್ಯ ಎಂದು ಕುಟುಂಬ ವೈದ್ಯರು ತಿಳಿಸಿದ್ದರು. 1994ರಲ್ಲಿ ನನ್ನ ತಾಯಿ ಗಿರಿಜಮ್ಮ ಅವರಿಗೆ ಗಂಟಲು ಬಳಿ ಉಬ್ಬಿ, ಗಳಗಂಡ ಎಂದು ತಿಳಿದಾಗ, ಅದಕ್ಕೆ ಮೈಸೂರಿನಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿದ ನೆನಪು ಅಚ್ಚಳಿಯದೇ ಉಳಿದಿದೆ. ನನ್ನ ಸಕ್ಕರೆ ಫ್ಯಾಕ್ಟರಿ ಹೆಂಡತಿಗೆ, ಸುಮಾರು ಮೂರು ತಿಂಗಳ ಕೆಳಗೆ ಆಕೆಯ ಮೈ ಸ್ಥೂಲಕಾಯವಾಗುತ್ತಾ, ಜಡವಾಗುತ್ತಾ, ಜೀವನದಲ್ಲಿ ಆಸಕ್ತಿ, ಲವಲವಿಕೆ, ಚೈತನ್ಯ ಕಡಿಮೆ ಆಗುತ್ತಿರುವುದನ್ನು ಗಮನಿಸಿ, ಆಕೆಯ ರಕ್ತ ಪರೀಕ್ಷೆ ಹಾಗೂ ಥೈರಾಯ್ಡ್ ಪರೀಕ್ಷೆ ಮಾಡಿಸಿದೆ. ಆಗ ತಿಳಿದುಬಂದಂತೆ, ಆಕೆಗೆ ಥೈರಾಯ್ಡ್ ಕಾಯಿಲೆ ಇದೆ ಎಂದು ತಿಳಿಯಿತು. ಆಗ ಆಕೆ ಗಾಬರಿ, ಒತ್ತಡಗಳಿಗೆ ತುತ್ತಾದಾಗ, ನನಗೆ ಗೊತ್ತಿದ್ದ, ವಿವರಗಳನ್ನು ಆಕೆಗೆ ವಿವರಿಸಿದೆ. ಆಕೆಯಂತಹ ಇತರರಿಗೂ ಗಾಬರಿ ತಪ್ಪಿಸಲು, ಥೈರಾಯ್ಡ್ ಬಗ್ಗೆ ನಾನು ಓದಿ, ನೋಡಿ, ಕೇಳಿ, ವೈದ್ಯರೊಂದಿಗೆ ಚರ್ಚಿಸಿ, ತಿಳಿದುಕೊಂಡದ್ದನ್ನು, ಓದುಗ ಮಿತ್ರರೊಂದಿಗೆ ಈಗ ಹಂಚಿಕೊಳ್ಳುತ್ತಿದ್ದೇನೆ.

ಭಯಪಡುವ ಕಾಯಿಲೆ ಅಲ್ಲ- ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಅಪಾಯವಿದೆ:

ಇದು ಭಯಪಡುವ ಕಾಯಿಲೆ ಅಲ್ಲ. ಆದರೂ ಇದಕ್ಕೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಅಪಾಯವಿದೆ. ಅತ್ಯಂತ ವಿಚಿತ್ರ ಹಾಗೂ ಆಶ್ಚರ್ಯಕಾರಿ ಸಂಗತಿಯೆಂದರೆ, ಶೇ.60ರಷ್ಟು ಜನರಿಗೆ ತಮಗಿರುವ ಥೈರಾಯ್ಡ್ ಕಾಯಿಲೆ ಬಗ್ಗೆ ತಿಳಿದೇ ಇಲ್ಲ. ಥೈರಾಯ್ಡ್ ಬರುವ ಸಾಧ್ಯತೆ, ಪುರುಷರಿಗಿಂತ ಸ್ತ್ರೀಯರಿಗೆ ಶೇ.5 ರಿಂದ 8ರಷ್ಟು ಹೆಚ್ಚು. ವಿಶ್ವದಲ್ಲಿ, ಥೈರಾಯ್ಡ್ ಕಾಯಿಲೆ ಬಗ್ಗೆ ಅರಿವು ಮೂಡಿಸಲು ನಾವು ಹೆಚ್ಚು ಪ್ರಯತ್ನ ಮಾಡಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವಂತೆ,  ಅಯೋಡಿನ್ ಕೊರತೆಯೇ ಕಾರಣ. ಪ್ರತಿ ದಿನ 150mg. ಅಯೋಡಿನ್‍ನ್ನು ಆಹಾರದಲ್ಲಿ ಸ್ವೀಕರಿಸಲೇಬೇಕಾಗಿದೆ. ಪ್ರಪಂಚದಲ್ಲಿ ಸುಮಾರು 750 ದಶಲಕ್ಷ ಜನ ಥೈರಾಯ್ಡ್ ಅವ್ಯವಸ್ಥೆ ಹೊಂದಿದ್ದಾರೆ. ಥೈರಾಯ್ಡ್ ಎಂಬ ಹೆಸರು ಕೊಟ್ಟವ ಥಾಮಸ್ ವ್ಹಾರ್ಟನ್. ಕ್ರಿ.ಶ.ಪೂ.2700ರಲ್ಲಿ ಚೀನಾ ದೇಶದಲ್ಲಿ ಗೊಯಿಟ್ರೆ ಚಿಕಿತ್ಸೆಗೆ, ಸುಟ್ಟ ಸ್ಪಂಜ್ ಹಾಗೂ ಸಮುದ್ರ ಕಳೆ ಬಳಸುತ್ತಿದ್ದರಂತೆ. ಆಯುರ್ವೇದದಲ್ಲಿ ಸುಶ್ರೂತ ಸಂಹಿತೆ, ಕ್ರಿ.ಶ.ಪೂ. 1400ರಲ್ಲೇ ಹೈಪರ್, ಹೈಪೋ ಥೈರಾಯ್ಡಿಸಮ್ ಹಾಗೂ ಗೊಯಿಟ್ರೆ ಬಗ್ಗೆ ಪ್ರಸ್ತಾಪಿಸಿದೆ. ಐದನೇ ಶತಮಾನದಲ್ಲಿ ಅರಿಸ್ಟಾಟಲ್ ಹಾಗೂ ಎಕ್ಸೆನೋಫೋನ್ ಗ್ರೇವ್ ಈ ಕಾಯಿಲೆ ಬಗ್ಗೆ ವಿವರಿಸಿದ್ದಾರೆ.

ಥೈರಾಯ್ಡ್ ಗ್ರಂಥಿಯ ಕಾರ್ಯಗಳು:

ನಮ್ಮ ಕತ್ತಿನ ಮುಂಭಾಗದಲ್ಲಿರುವ, ಕುತ್ತಿಗೆಯ ಧ್ವನಿ ಪೆಟ್ಟಿಗೆ ಸುತ್ತುವರಿದಿರುವ, ಪಾತರಗಿತ್ತಿಯ ಆಕಾರದಲ್ಲಿರುವ ಈ ನಿರ್ನಾಳ ಗ್ರಂಥಿ, ವಯಸ್ಕರಲ್ಲಿ 25ಗ್ರಾಂ. ತೂಕ ಹೊಂದಿರುತ್ತದೆ. ಇದರಲ್ಲಿ ಎರಡು ಹಾಲೆಗಳು ಇದ್ದು, ಅದು ಕಿರಿದಾದ ಭಾಗದಿಂದ ಕೂಡಿಸಲ್ಪಟ್ಟಿದೆ. ಎಡ ಹಾಗೂ ಬಲ ಭಾಗಗಳು ಪ್ರತಿಯೊಂದು 5 ಸೆಂ.ಮೀ. ಉದ್ದ, 3 ಸೆಂ.ಮೀ. ಅಗಲ, 2 ಸೆಂ.ಮೀ. ದಪ್ಪ ಇವೆ. ಮಹಿಳೆಯರಲ್ಲಿ ಈ ಗ್ರಂಥಿ ದೊಡ್ಡದಾಗಿದ್ದು, ಬಸಿರಿನ ಸಮಯ ಆಕಾರ ಹೆಚ್ಚುತ್ತದೆ. ಎಡ ಹಾಗೂ ಬಲ ಭಾಗದ ಹಾಲೆಗಳ ಹಿಂದೆ ನಾಲ್ಕು ಪ್ಯಾರಾ ಥೈರಾಯ್ಡ್ ಗ್ರಂಥಿಗಳಿವೆ. ಈ ಗ್ರಂಥಿ ಥೈರಾಯ್ಡ್ ಅಂತಃಸ್ರಾವಗಳನ್ನು ಸ್ರವಿಸುತ್ತದೆ. ಇದು ವಾಹನದ ಚಕ್ರದಲ್ಲಿರುವ ಗಾಳಿಯಿದ್ದಂತೆ. ಟೈರ್ ಚಲಿಸಲು ಸರಿಯಾದ ಗಾಳಿ ಇರಬೇಕು. ಹಾಗೆಯೇ ದೇಹದ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಥೈರಾಯ್ಡ್ ಗ್ರಂಥಿ ಅವಶ್ಯಕ.

ಮುಖ್ಯವಾಗಿ ಇದು ದೇಹದ ಚಯಾಪಚಯ ಕ್ರಿಯೆ  ಹಾಗೂ ಸಸಾರಜನಕ ಸಂಶ್ಲೇಷಣೆ ಮೇಲೆ ಪ್ರಭಾವ ಬೀರುತ್ತದೆ. ದೇಹದ ಅಭಿವೃದ್ಧಿಯ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತದೆ. ಥೈರಾಯ್ಡ್ ಗ್ರಂಥಿ ಸ್ರವಿಸುವ ಅಂತಃಸ್ರಾವಗಳೆಂದರೆ, ಟ್ರಯೋಡೋಥೈರಾನೈನ್  ಹಾಗೂ ಥೈರಾಕ್ಸಿನ್ ಗಳು. ಇವು ಅಯೋಡಿನ್ ಹಾಗೂ ಟೈರೋಸಿನ್‍ಗಳಿಂದ ಸೃಷ್ಟಿಸಲ್ಪಟ್ಟಿವೆ. ಹಾರ್ಮೊನ್ ಕ್ಯಾಲ್ಸಿಟೋನಿನ್‍ನ್ನು ಇದು ಉತ್ಪಾದಿಸುತ್ತದೆ. ವಾತಾವರಣದ ಬದಲಾವಣೆಗಳಿಗೆ ಪರಿಹಾರ ಸೂಚಿಸಲು, ಆಂತರಿಕ ಸ್ಥಿರತೆ ಮುಂದುವರೆಸಲು ಕ್ರಮ ತೆಗೆದುಕೊಳ್ಳುವ ಶಕ್ತಿ  ಬಲಪಡಿಸುತ್ತವೆ. ಈ ರಸಸ್ರಾವಗಳನ್ನು ನಿಯಂತ್ರಿಸುವ ಚೋದಕರಸ  ಮುಂಭಾಗದಲ್ಲಿರುವ ಪಿಟ್ಯೂಟರಿ ಗ್ರಂಥಿಯಿಂದ ಉತ್ಪಾದನೆಯಾಗುತ್ತದೆ. ಅಂತಃಸ್ರಾವಗಳು, ದೇಹದ ಅಭಿವೃದ್ಧಿ, ಹೃದಯಕ್ಕೆ ಸಂಬಂಧಿಸಿದ ಹಾಗೂ ಆಹಾರವು ಶಕ್ತಿಯಾಗಿ ಪರಿವರ್ತನೆಯಾಗುವ ರಾಸಾಯನಿಕ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ನಿತ್ಯದ ಚಟುವಟಿಕೆಗೆ ಅಗತ್ಯವಾದ ಜೀವ ರಾಸಾಯನಿಕ ಕ್ರಿಯೆ ಪೂರ್ಣಗೊಳ್ಳಲು, ಥೈರಾಯ್ಡ್ ಗ್ರಂಥಿಯ ಪೂರ್ಣ ಪ್ರಮಾಣದ ಸ್ರವಿಸುವಿಕೆ ಅಗತ್ಯ.

ದೇಹದ ತಾಪಮಾನ ಸುಸ್ತಿತಿಯಲ್ಲಿಡಲು, ಜೀರ್ಣಕ್ರಿಯೆ, ಶಕ್ತಿಯ ಬಳಕೆ, ಹೃದಯ ಹಾಗೂ ಯಕೃತ್‍ಗಳ ಕಾರ್ಯನಿರ್ವಹಣೆ, ಇವೆಲ್ಲ ಜವಾಬ್ದಾರಿ ಹೊತ್ತಿದೆ ಈ ಗ್ರಂಥಿ. ಹಸಿವಾಗುವಿಕೆ, ವಸ್ತುಗಳ ಹೀರಿಕೊಳ್ಳುವಿಕೆ, ಕರುಳಿನ ಚತುರತೆಗಳ ಮೇಲೆ ಈ ಅಂತಃಸ್ರಾವಗಳು ಪ್ರಭಾವ ಬೀರುತ್ತವೆ. ಕರುಳಿನಲ್ಲಿ ಹೀರಿಕೊಳ್ಳುವಿಕೆ, ಉತ್ಪಾದನೆ, ಕೋಶಗಳ ಹೀರಿಕೊಳ್ಳುವಿಕೆ, ಗ್ಲೂಕೋಸ್‍ನ ವಿಘಟನೆ, ಉಚಿತ ಕೊಬ್ಬಿನ ಆಮ್ಲಗಳನ್ನು ಹೆಚ್ಚಿಸುವುದು, ಎಲ್ಲ ಇವುಗಳ ಕಾರ್ಯ. ಇವು ಕೊಬ್ಬಿನ ವಿಘಟನೆಗೆ ಪ್ರಚೋದಿಸಿದರೂ, ಕೊಲೆಸ್ಟರಾಲ್ ಮಟ್ಟ ಇಳಿಸುತ್ತವೆ. ಹೃದಯದ ಬಡಿತದ ದರ ಹಾಗೂ ಶಕ್ತಿ ಹೆಚ್ಚಿಸುತ್ತವೆ. ಉಸಿರಾಟದ ವೇಗ ಹೆಚ್ಚಿಸಿ, ಆಮ್ಲಜನಕವನ್ನು ಒಳಗೆ ತೆಗೆದುಕೊಳ್ಳುವುದು ಹಾಗೂ ಅದರ ಬಳಕೆ ಹೆಚ್ಚಿಸುತ್ತವೆ. ಮಿಟೋಚಾಂಡ್ರಿಯಾದ ಚಟುವಟಿಕೆ ಹೆಚ್ಚಿಸುತ್ತಿವೆ.

ಈ ಎಲ್ಲ ಅಂಶಗಳಿಂದ ರಕ್ತ ಸಂಚಲನದ ವೇಗ ಹಾಗೂ ದೇಹದ ಉಷ್ಣತೆ ಹೆಚ್ಚಿಸುತ್ತವೆ. ಯುವಜನರ ಬೆಳವಣಿಗೆ ವೇಗ ಹೆಚ್ಚಿಸುತ್ತವೆ. ದೇಹದ ಸ್ವಾಭಾವಿಕ ಬೆಳವಣಿಗೆಗೆ, ಅಭಿವೃದ್ಧಿಯಾಗುತ್ತಿರುವ ಮೆದುಳಿನ ಬೆಳವಣಿಗೆಯ ಕೋಶಗಳ ಮೇಲೆ ಪ್ರಭಾವ ಬೀರುತ್ತವೆ. ಭ್ರೂಣದ ಬೆಳವಣಿಗೆಯ ಹಂತದಲ್ಲಿ, ಮೆದುಳಿನ ಪ್ರೌಢಿಮೆ, ಸಾಮಾನ್ಯ ಲೈಂಗಿಕ ಕ್ರಿಯೆ, ನಿದ್ರೆ, ಹಾಗೂ ವಿಚಾರ ಮಾಡುವ ವಿಧಾನಗಳು, ಇವುಗಳ ಮೇಲೆ ಥೈರಾಯ್ಡ್ ಅಂತಃಸ್ರಾವಗಳ ಪ್ರಭಾವ ಗಾಢವಾದುದ್ದು. ಅಂತಃಸ್ರಾವಗಳ ಮಟ್ಟ ಹೆಚ್ಚಿದರೆ ವೈಚಾರಿಕ ಅಭಿವೃದ್ಧಿ ವೇಗ ಹೆಚ್ಚಿದರೂ, ಗಮನ ಕಡಿಮೆಯಾಗುತ್ತದೆ. ಲೈಂಗಿಕ ಕ್ರಿಯೆ, ಲೈಂಗಿಕ ಆಸಕ್ತಿ, ಮಾಸಿಕ ಮುಟ್ಟಿನ ಚಕ್ರ ಇಲ್ಲೆಲ್ಲಾ ಇವುಗಳದ್ದೇ ಕಾರಭಾರು. ಥೈರಾಯ್ಡ್ ಗ್ರಂಥಿ ಸ್ರವಿಸುವ ಕ್ಯಾಲ್ಸಿಟೋನಿನ್, ರಕ್ತದಲ್ಲಿಯ ಸುಣ್ಣದಂಶ ನಿಯಂತ್ರಿಸುತ್ತದೆ. ಮೂಳೆಗಳಿಂದ ಕ್ಯಾಲ್ಸಿಯಂ ಬಿಡುಗಡೆ ಕಡಿಮೆ ಮಾಡುತ್ತದೆ.

ತೂಕ ಹೆಚ್ಚಾದರೆ ಥೈರಾಯ್ಡ್ ಪರೀಕ್ಷೆ:

ಗಂಟಲಲ್ಲಿ ನೋವು, ಹೆಚ್ಚುತ್ತಿರುವ ದೇಹದ ತೂಕ, ಮುಟ್ಟು ಸರಿಯಾಗಿ ಆಗ್ತಿಲ್ಲ. ಪದೇ ಪದೇ ಗರ್ಭಪಾತ, ಈ ರೀತಿ ಸಮಸ್ಯೆಗಳಿದ್ದರೆ, ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳಿ. ದೇಹದಲ್ಲಿ ಅಯೋಡಿನ್ ಕೊರತೆಯಾದಾಗ ಮಹಿಳೆಯರಲ್ಲಿ ಈ ಸಮಸ್ಯೆ ಉಂಟಾಗುತ್ತೆ.

ಥೈರಾಯ್ಡ್ ಸಮಸ್ಯೆ  ಸ್ವಾಭಾವಿಕ ಲಕ್ಷಣಗಳು:

ದೇಹದ ಜಡತೆ, ಕಡಿಮೆ ಶಕ್ತಿ, ತೂಕದ ಹೆಚ್ಚಳ, ಶೀತ ತಡೆಯಲಾಗದ್ದು, ಹೃದಯದ ಕಡಿಮೆ ದರ, ಒಣಚರ್ಮ, ಮಲಬದ್ಧತೆ. ಈ ಗ್ರಂಥಿಯ ಕ್ಷಮತೆ, ಕಡಿಮೆಯಾದರೆ, ಖಿನ್ನತೆ, ನಿರುತ್ಸಾಹತೆ, ಇಡೀ ದಿನ ಏನು ಮಾಡಲೂ ಮನಸ್ಸು ಬಾರದೇ ಇರುವುದು, ಚಟುವಟಿಕೆ ತಪ್ಪಿಸಿಕೊಳ್ಳಲು ನೆವ ಹುಡುಕುವುದು, ಜೀರ್ಣಕ್ರಿಯೆ ವ್ಯತ್ಯಯವಾಗಿ ಮಲಬದ್ಧತೆ, ವಿಸರ್ಜನೆ 2-3 ದಿನ ತಡವಾಗುವುದು, ಸ್ಮರಣಶಕ್ತಿ ಹಾಗೂ ಮೆದುಳಿನ ಕ್ಷಮತೆ ಕುಂದುವುದು. ಮುಂದೆ ಬರುವುದನ್ನು ಊಹಿಸುವ ಶಕ್ತಿ ಕಡಿಮೆಯಾಗುವುದು, ಸ್ಥೂಲಕಾಯ, ನಿಮಿರು ದೌರ್ಬಲ್ಯ, ಪ್ರೇಮ ಚಟುವಟಿಕೆಯಲ್ಲಿ ನಿರುತ್ಸಾಹ, ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣದಲ್ಲಿ ಏರಿಕೆ, ಇವೆಲ್ಲಾ ಸಾಮಾನ್ಯ. ಕೆಲವು ಮಹಿಳೆಯರಿಗೆ ಗರ್ಭನಿರೋಧಕ ಮಾತ್ರೆ ಸೇವಿಸಲಾರಂಭಿಸಿದ ಒಂದು ತಿಂಗಳಲ್ಲಿ ತಲೆಸುತ್ತು, ಸುಸ್ತು ಕಾಣಿಸಿಕೊಂಡರೆ, ಅದು ಥೈರಾಯ್ಡ್ ಸಮಸ್ಯೆ ಆಗಿರಬಹುದು.

ಥೈರಾಯ್ಡ್ ರೋಗಿಗಳ ಆಹಾರ:

ದಿನ ಅರ್ಧ ಗಂಟೆ ಪ್ರಾಣಾಯಾಮ ಮತ್ತು ವ್ಯಾಯಾಮ ಮಾಡುವುದರಿಂದ, ದೇಹದಲ್ಲಿರುವ ಒತ್ತಡ ಕಡಿಮೆಯಾಗುತ್ತದೆ. ಮಹಿಳೆಯರಲ್ಲಿ ಶೇ.90ರಷ್ಟು ಜನರಿಗೆ, ಥೈರಾಯ್ಡ್ ಸಮಸ್ಯೆಯಿಂದ ತಲೆಸುತ್ತು, ಒತ್ತಡ, ನಿದ್ರಾಹೀನತೆ, ಕುತ್ತಿಗೆ ಬಳಿ ನೋವು ಕಾಣಿಸಿಕೊಂಡಾಗ – ಅಶ್ವಗಂಧ ಈ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿ. ಆಹಾರದಲ್ಲಿ ಎರಡು ಚಮಚ ಶೇಂಗಾದಿಂದ ತಯಾರಿಸಿದ ಬೆಣ್ಣೆ, ಸ್ವಲ್ಪ ನಟ್ಸ್, ಒಂದು ಕಪ್ ಹಾಲು ಹಾಗೂ ಮೊಸರು ಇರಬೇಕು. ಪೂರ್ಣ ಧಾನ್ಯಗಳು, ಕೊಬ್ಬಿರುವ ಮೀನು ಹಾಗೂ ಹೈನುಗಾರಿಕೆ ಆಹಾರಗಳು ಹೈಪೋ ರೋಗಿಗಳಿಗೆ, ಒಮೇಗಾ-3 ಕೊಬ್ಬು, ಶ್ರೀಮಂತವಾಗಿರುವ ಆಹಾರ, ಹೈಪರ್ ರೋಗಿಗಳಿಗೆ ವರದಾನ. ಸ್ಟ್ರಾಬರಿ, ಅಣಬೆಗಳು, ಬೆಳ್ಳುಳ್ಳಿ, ಪಾಲಕ್ ಸೊಪ್ಪು, ಕೆಂಪು ಮಾಂಸ, ಮೊಟ್ಟೆ, ಬ್ರೊಕೋಲಿ ಎಂಬ ಹಸಿರು ತರಕಾರಿ, ಕೊಬ್ಬರಿ ಎಣ್ಣೆ, ಒಯ್‍ಸ್ಟರ್ಸ್ ಇವೆಲ್ಲಾ ತಿನ್ನಬಹುದು.

ಥೈರಾಯಿಡ್ ಕಾಯಿಲೆಗಳು:

ಥೈರಾಯ್ಡ್‍ಗೆ ಸಂಬಂಧಿಸಿ ಅನೇಕ ಕಾಯಿಲೆಗಳು ಬರುತ್ತವೆ. (1) ಹೈಪೋ, (2) ಹೈಪರ್, (3) ರಚನೆಯ ಅಸ್ವಾಭಾವಿಕತೆಗಳು. ಇಲ್ಲಿ ಗ್ರಂಥಿ ದೊಡ್ಡದಾಗಿರುತ್ತದೆ. ಕ್ಯಾನ್ಸರ್ ಅಥವಾ ಕ್ಯಾನ್ಸರ್ ಅಲ್ಲದ ಗ್ರಂಥಿಗಳು ಇರಬಹುದು. (4) ಅಸ್ವಾಭಾವಿಕ ಥೈರಾಯ್ಡ್ ಕ್ರಿಯೆಗಳು.

ಹೈಪರ್ ಥೈರಾಯ್ಡಿಸಮ್:

ಈ ಗ್ರಂಥಿ ಹೆಚ್ಚು ಥೈರಾಯ್ಡ್ ಅಂತಃಸ್ರಾವಗಳನ್ನು ಉತ್ಪಾದಿಸಲು, ಅತಿ ಸಾಮಾನ್ಯ ಕಾರಣ ಗ್ರೇವ್ಸ್ ಕಾಯಿಲೆ. ಗೊಯಿಟ್ರೆ ಕಾಯಿಲೆಯಲ್ಲಿ, ಪಿಟ್ಯೂಟರಿ ಗ್ರಂಥಿಯಿಂದ ಅಯೋಡಿನ್ ಹೆಚ್ಚು ಉತ್ಪಾದಿಸಲ್ಪಡುತ್ತವೆ. ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಹಸಿವು, ನಿದ್ರಾಭಂಗ ಹೆಚ್ಚಿಸುತ್ತದೆ. ಉಷ್ಣ ತಡೆಯುವ ಶಕ್ತಿ ಕಡಿಮೆಯಾಗುತ್ತದೆ. ನಡುಕ, ಉದ್ವೇಗ, ಅಧೀರತೆ, ಉಬ್ಬರವಿಳಿತ ಎಲ್ಲ ಲಕ್ಷಣಗಳು. ಕೆಲವರಲ್ಲಿ ನೋವು, ಭೇದಿ, ಕೂದಲು ಉದುರುವುದು, ನರ ದೌರ್ಬಲ್ಯ ಕಾಣಬಹುದು. ಥೈರಾಯ್ಡ್ ಕ್ರಿಯೆ ಕಡಿಮೆ ಮಾಡುವ ಮಾತ್ರೆಗಳನ್ನು ವೈದ್ಯರು ಆಗ ಕೊಡುತ್ತಾರೆ. ಕೆಲವರ ಉಬ್ಬಿದ ಗಂಟಲಿನ ಥೈರಾಯ್ಡ್ ಗ್ರಂಥಿಯ ಭಾಗವನ್ನು ಶಸ್ತ್ರ ಕ್ರಿಯೆಯಿಂದ ತೆಗೆಯಬಹುದು. ನನ್ನ ತಾಯಿಗೆ 1994ರಲ್ಲಿ ಆದ ಶಸ್ತ್ರಕ್ರಿಯೆ ಇದೇ.

ಹೈಪೋಥೈರಾಯ್ಡಿಸಮ್ ಥೈರಾಯ್ಡ್ ಗ್ರಂಥಿಗಳು ಅತಿ ಕಡಿಮೆ ಕೆಲಸ ಮಾಡುವ ಸ್ಥಿತಿ ಇದು. ಅಂತಃಸ್ರಾವಗಳ ಉತ್ಪಾದನೆ ಕಡಿಮೆ. ಇವುಗಳಿಗೆ ಅತಿ ಸಾಮಾನ್ಯ ಕಾರಣ ಅಯೋಡಿನ್ ಕೊರತೆ. ತಡೆಯಬಲ್ಲ ಬೌದ್ಧಿಕ ವಿಕಲತೆಯ ಕಾರಣವೂ ಇದೇ. ಕಾರಣಗಳು: ಅನುವಂಶಿಕ ಅಸ್ವಾಭಾವಿಕ ಬೆಳವಣಿಗೆಗಳು, ಅಸ್ತಿರವಾದ ಉರಿಯೂತ, ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಿದ ಭಾಗ, ಕೆಲವು ಔಷಧಗಳನ್ನು ತೆಗೆದುಕೊಳ್ಳುವುದರಿಂದ ಇದು ಬರುತ್ತವೆ. ಅಲ್ಲದೇ ದೇಹದ ಮೇಲೆ ಅಪಾಯಕಾರಿಯಲ್ಲದ, ಕ್ಯಾನ್ಸರ್ ಅಲ್ಲದ, ಅನೇಕ ಗಂಟುಗಳು ಕಾಣುತ್ತವೆ.

ಥೈರಾಯ್ಡ್ ಕ್ಯಾನ್ಸರ್:

ಥೈರಾಯ್ಡ್ ಗ್ರಂಥಿ ಕೆಲವು ತರಹಗಳ ಗಂಟುಗಳು ಹಾಗೂ ಕ್ಯಾನ್ಸರ್‍ಗೆ ಕಾರಣವಾಗಬಹುದು. ಆಗ ದೇಹದ ತೂಕದ ಅಸ್ವಾಭಾವಿಕ ಹೆಚ್ಚಳ, ಸುಸ್ತು, ಮಲಬದ್ಧತೆ, ಮುಟ್ಟಿನಲ್ಲಿ ಹೆಚ್ಚು ರಕ್ತ ಚಿಮ್ಮುವಿಕೆ, ಕೂದಲು ಉದುರುವುದು, ಶೀತ ತಡೆಯಲಾಗದ ಸ್ಥಿತಿ, ಹೃದಯದ ವೇಗ ಕಡಿಮೆಯಾಗುತ್ತದೆ. ಗಂಟಲಲ್ಲಿ ಊತ, ಇದ್ದಕ್ಕಿದ್ದ ಹಾಗೆ ಶಬ್ಧದಲ್ಲಿ ವ್ಯತ್ಯಾಸ, ಗಂಟಲು ನಾಳ ದಪ್ಪವಾಗುವುದು, ಅಲರ್ಜಿ ಹಾಗೂ ಕಡಿಮೆಯಾಗದ ಕೆಮ್ಮು, ಇದ್ದರೆ ಇವು ಥೈರಾಯ್ಡ್ ಕ್ಯಾನ್ಸರ್ ಲಕ್ಷಣಗಳು.
ಚಿಕಿತ್ಸೆ:

ಥೈರಾಯ್ಡ್ ಕ್ಯಾನ್ಸರ್ ಉಂಟಾದರೆ, ಕಲೆ ಮತ್ತು ನೋವಿಲ್ಲದೆ ಶಸ್ತ್ರ ಚಿಕಿತ್ಸೆ ಮಾಡಬಹುದು. ನಂತರ ಅಯೋಡಿನ್ ಚಿಕಿತ್ಸೆಯನ್ನು ನೀಡಲಾಗುವುದು. ರೋಗಿ ಸ್ವಲ್ಪ ಗುಣಮುಖವಾದ ನಂತರ ಥೈರಾಯ್ಡ್ ಹಾರ್ಮೋನ್ ಮಾತ್ರೆ ನೀಡಲಾಗುವುದು. ಈ ಮಾತ್ರೆಯನ್ನು ಜೀವಿಸಿರುವಷ್ಟು ಕಾಲ ತೆಗೆದುಕೊಳ್ಳಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ.

2008ರಲ್ಲಿ ಆರಂಭವಾದ ವಿಶ್ವ ಥೈರಾಯ್ಡ್ ದಿನ ಪ್ರತಿ ವರ್ಷ ಮೇ 25 ರಂದು ವಿಶ್ವದಾದ್ಯಂತ ಆಚರಿಸಲ್ಪಡುತ್ತದೆ. ನಮ್ಮ ದೇಶದಲ್ಲೂ ಸಾಮಾನ್ಯ ಜನರಿಗೆ ಥೈರಾಯ್ಡ್ ಬಗ್ಗೆ ವೈದ್ಯರು, ರಕ್ತ ಶೋಧನಾ ಕೇಂದ್ರಗಳು, ಸರಿಯಾದ ಸಂಪೂರ್ಣ ಮಾಹಿತಿ ಕೊಟ್ಟು, ತಪಾಸಣೆ, ಚಿಕಿತ್ಸೆ ನೀಡುವುದರ ಜೊತೆಗೆ ರೋಗಿಗಳಿಗೆ ಸಮಾಧಾನ ಹಾಗೂ ಮನೋಧೈರ್ಯ ಹೇಳುವ ಜವಾಬ್ದಾರಿ ಹೊಂದಿದ್ದಾರೆ.

ಎನ್.ವ್ಹಿ.ರಮೇಶ್
ಮೋ: 98455 65238

 

Share this: