Vydyaloka

ತೆಂಗಿನ ಮಹತ್ವ ಹಾಗೂ ಆರೋಗ್ಯಕ್ಕೆ ಇದರ ಕೊಡುಗೆ

ತೆಂಗಿನ ಮಹತ್ವ ಹಾಗೂ ಆರೋಗ್ಯಕ್ಕೆ ಇದರ ಕೊಡುಗೆ ಹೆಚ್ಚು. ಬಹಳ ಜನ ತೆಂಗಿನಕಾಯಿ, ಕೊಬ್ಬರಿ, ಕೊಬ್ಬರಿ ಎಣ್ಣೆ ಬಳಕೆ ಮಾಡೋಲ್ಲ. ಪಾಶ್ಚಾತ್ಯ ಎಣ್ಣೆ ತಯಾರಿಕೆ ಹಾಗೂ ತಾಳೆ ಎಣ್ಣೆ ಉತ್ಪಾದಕರ ಕೆಟ್ಟ ಪ್ರಚಾರದಿಂದ ಜನರಿಗೆ ಕೊಬ್ಬರಿಎಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ.

ತೆಂಗಿನಕಾಯಿ ದಕ್ಷಿಣ ಭಾರತದ ಆಹಾರದಲ್ಲಿ ನಿತ್ಯ ಬಳಕೆಯಾಗುತ್ತದೆ. ತೆಂಗು – ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು ಎಂಬ ಗಾದೆ ಕೇಳಿದ್ದೀರಾ? ತೆಂಗಿನ ತಿರುಳಲ್ಲಿ ಗರಿಷ್ಠ ಪೌಷ್ಠಿಕತೆ, ನಾರಿನಲ್ಲಿ ಶ್ರೀಮಂತಿಕೆ ಇವೆ. ಜೀವಸತ್ವಗಳಾದ ಸಿ, ಇ, ಬಿ, ಬಿ3, ಬಿ5, ಹಾಗೂ ಬಿ6, ಖನಿಜಗಳಾದ ಕಬ್ಬಿಣ, ಸೆಲೇನಿಯಂ, ಸೋಡಿಯಂ, ಕ್ಯಾಲ್ಸಿಯಂ, ಮ್ಯಾಗ್ನೇಶಿಯಂ ಹಾಗೂ ರಂಜಕಗಳು ತೆಂಗಿನಲ್ಲಿ ತುಂಬಿವೆ.

ಎಳನೀರು ಜೀವರಕ್ಷಕ :

ದೇಹದಲ್ಲಿಯ ಸ್ನಾಯುಗಳು ಹಾಗೂ ನರಗಳು ಚೆನ್ನಾಗಿ ಕೆಲಸ ಮಾಡುವಂತಾಗಲು, ಶರೀರದಲ್ಲಿ ಸಾಕಷ್ಟು ಜಲವಿರಬೇಕು. ಇದಕ್ಕೆ ಎಳನೀರು ನೆರವು ನೀಡುತ್ತದೆ.  ಹಸಿರು ತೆಂಗಿನಕಾಯಿಯ ಎಳನೀರು ದೇಹಕ್ಕೆ ಜಲಸಂಚಯ ಮಾಡುತ್ತದೆ. ದೇಹ ನಿರ್ಜಲೀಕರಣದಿಂದ ಬಳಲುವಾಗ, ಎಳನೀರು ಜೀವರಕ್ಷಕ ಪುನರ್ಜಲೀಕರಣ ಒದಗಿಸುತ್ತದೆ. ಕುಡಿದಾಗ ಇದು ನಮಗೆ ಹೊಸ ಚೈತನ್ಯ ನೀಡುತ್ತದೆ. ಇದು ಎಂದೂ ಕಲುಷಿತವಾಗದ, ಪ್ರಕೃತಿಯ ಸ್ವಾಭಾವಿಕ, ಪರಿಶುದ್ಧ ದ್ರವ. ತೆಂಗಿನ ಎಳನೀರಿನಲ್ಲಿ ಎಲಕ್ಟ್ರೋಲೈಟ್ಸ್ ಅಂದರೆ ವಿದ್ಯುದ್ವಿಚ್ಛೇದ್ಯಗಳು ಇವೆ.

ಎಳನೀರಿನಲ್ಲಿ ಕ್ಯಾಲರಿಗಳು, ಪಿಷ್ಟ, ಸಕ್ಕರೆ ಕಡಿಮೆ ಇದ್ದು, ಅದು ಸಂಪೂರ್ಣ ಕೊಬ್ಬು ಮುಕ್ತವಾಗಿದೆ. ಆಸ್ಕಾರ್ಬಿಕ್ ಆಮ್ಲ, ಬಿ ಜೀವಸತ್ವಗಳು ಹಾಗೂ ಸಸಾರಜನಕ ಹೆಚ್ಚಿದೆ. ಆಸ್ಕಾರ್ಬಿಕ್ ಆಮ್ಲ ಎಂದರೆ ಸಿ ಜೀವಸತ್ವ. ಕೆಲವು ಪ್ರಾಣಿಗಳು ತಮಗೆ ತಾವೇ  ಸಿ ಜೀವಸತ್ವ ತಯಾರಿಸಿಕೊಳ್ಳುತ್ತವೆ. ಆದರೆ ಮನುಷ್ಯರು ಆಹಾರ ಹಾಗೂ ಇತರ ಮೂಲಗಳಿಂದಲೇ ಇದನ್ನು ಪಡೆಯಬೇಕು. ತಜ್ಞರು ಹೇಳುವಂತೆ ಪೂರಕ ಆಹಾರ ಪದಾರ್ಥ ತಿನುವುದಕ್ಕಿಂತ, ಹಣ್ಣುಗಳು ಹಾಗೂ ತರಕಾರಿಗಳಿಂದಲೇ ಸಿ ಜೀವಸತ್ವ ಪಡೆಯುವುದು ಒಳ್ಳೆಯದಂತೆ. ತೆಂಗಿನ ಒಳಗಿನ ಮೃದು ಅಂಶ, ಉತ್ಕರ್ಷಣದಿಂದಾದ ಜೀವಕೋಶ ನಾಶ ತಡೆದು, ಮೂಲಸ್ಥಿತಿಗೆ ಒಯ್ಯಲು  ನೆರವು ನೀಡುತ್ತದೆ.

ಕೇರಳದ ಮಹಿಳೆಯರ ಸೌಂದರ್ಯ ಹಾಗೂ ಕೇಶ ರಕ್ಷಣೆಯ ಗುಟ್ಟು:

ಬಹಳ ಜನ ತೆಂಗಿನಕಾಯಿ, ಕೊಬ್ಬರಿ, ಕೊಬ್ಬರಿ ಎಣ್ಣೆ ಬಳಕೆ ಮಾಡೋಲ್ಲ. ಅವರಿಗೆ ಪಾಶ್ಚಾತ್ಯ ವೈದ್ಯ ಪದ್ಧತಿ ಹಾಗೂ ಪ್ರಯೋಗಗಳು, ಪಾಶ್ಚಾತ್ಯ ಎಣ್ಣೆ ತಯಾರಿಕೆ ಹಾಗೂ ತಾಳೆ ಎಣ್ಣೆ ಉತ್ಪಾದಕರ ಕೆಟ್ಟ ಪ್ರಚಾರದಿಂದ ಹಾಗೂ ತಮಗೇ ತಿಳಿಯದ ರುಚಿ ಹಾಗೂ ಪದಾರ್ಥದ ಬಗ್ಗೆ ಪಾಶ್ಚಾತ್ಯರು ನೀಡಿರುವ ವಿವರಗಳು, ಗಾಬರಿ ತಂದಿವೆ. ಸ್ವಾಭಾವಿಕ ಗುಣ ಮಾಡುವ ಅದ್ಭುತ ಗುಣಗಳಿದ್ದರೂ, ಜನರಿಗೆ ಕೊಬ್ಬರಿಎಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ.

ಕೇರಳದ ಜನರ ಸೌಂದರ್ಯ ರಕ್ಷಣೆಯಲ್ಲಿ ಮುಖ್ಯ ವಿಧಾನ ಆರ್ಯುವೇದ. ಇಲ್ಲಿಯ ಜನ ದಿನ ನಿತ್ಯದ ಸೌಂದರ್ಯ ಕಾಳಜಿಗೆ ಮನೆಯಲ್ಲಿ ಮಾಡಿದ ಹಾಗೂ ಸ್ವಾಭಾವಿಕ ಚಿಕಿತ್ಸೆಗಳತ್ತಲೇ ನಂಬಿಕೆಯಿಟ್ಟು ಅಳವಡಿಸಿಕೊಂಡಿದ್ದಾರೆ. ಕೇರಳದ ಮಹಿಳೆಯರು ತಮ್ಮ ತಲೆಕೂದಲಿಗೆ ಹೇರಳವಾಗಿ ಕೊಬ್ಬರಿ ಎಣ್ಣೆ ಹಚ್ಚುವುದರಿಂದ, ಅವರ ತಲೆಕೂದಲು ಕಪ್ಪಗೆ, ದಟ್ಟವಾಗಿ ಮಿಂಚುತ್ತದೆ. ಅವರ ಆಹಾರದಲ್ಲಿ ಮುಖ್ಯವಾಗಿ ತೆಂಗು ಹಾಗೂ ಕೊಬ್ಬರಿ ಎಣ್ಣೆ ಇರುತ್ತದೆ.

ದ್ರವ ಎಣ್ಣೆಗಳಿಗೆ ಘನ ರೂಪ ಬರಲು, ಬಳಸಲು -ಮಾರಲು ಹಳೆಯದಾಗದಂತೆ, ಸಿದ್ಧ ಆಹಾರ ವಸ್ತು ಹೆಚ್ಚು ಕಾಲ ಉಳಿಸಲು, ವೆಚ್ಚ ಕಡಿಮೆ ಮಾಡಲು, ರಾಸಾಯನಿಕ ವಿಧಾನದಿಂದ ಜಲಜನಕದ ಕಣಗಳನ್ನು ಅಸಂತೃಪ್ತಿ ಎಣ್ಣೆಗೆ ಸೇರಿಸುತ್ತಾರೆ. ಆದರೆ ಪರಿಶುದ್ಧ ಕೊಬ್ಬರಿ ಎಣ್ಣೆ, ಪ್ರೌಢ ತೆಂಗಿನ ಕಾಯಿಗಳ ಗಡುಸಾದ ತಿರುಳಿನಿಂದ ಮಾಡಲ್ಪಟ್ಟಿದ್ದು, 90ರಿಂದ 100 ಡಿಗ್ರಿ ಫ್ಯಾರನ್ ಹೀಟ್‍ನ ಲ್ಲಿ ಉಷ್ಣ ನಿಯಂತ್ರಿತ ವಾತಾವರಣದಲ್ಲಿ ಸಂಸ್ಕರಿಸಲಾಗಿರುತ್ತದೆ.

ಸಂಸ್ಕರಿಸದ, ಪರಿಶುದ್ಧಗೊಳಿಸದ, ಕಚ್ಛಾ ಕೊಬ್ಬರಿ ಎಣ್ಣೆ, ಜಲಜನಕೀಕರಣಕ್ಕೊಳಗಾಗದೇ, ಬಳಕೆಗೆ ಉತ್ತಮ ಆಯ್ಕೆಯಾಗಿದೆ. ಇದು ಅಧಿಕ ಕ್ಯಾಲರಿ ಇರುವ, ಕೊಲೆಸ್ಟರಾಲ್‍ನಿಂದ ತುಂಬಿರುವ, ಸಂತೃಪ್ತ ಕೊಬ್ಬುಗಳ ಉದ್ದ ಕೊಂಡಿಯಿಂದ ಭಿನ್ನವಾಗಿದೆ. ಇದು ಮಧ್ಯಮ ಕೊಂಡಿಯ ಕೊಬ್ಬಿನ ಆಮ್ಲದಲ್ಲಿ ಶ್ರೀಮಂತವಾಗಿದ್ದು, ದೇಹದ ಚಯಾಪಚಯ (ಮೆಟಾಬಾಲಿಸಂ) ಹೆಚ್ಚಿಸಲು ಸಹಾಯ ಮಾಡುತ್ತದಲ್ಲದೇ, ಕೊಬ್ಬು ನಾಶದಲ್ಲಿ ನೆರವು ನೀಡುತ್ತದೆ. ಇದು ವೇಗದ ಚಯಾಪಚಯ ಕ್ರಿಯೆಯಿಂದ, ನಿಮ್ಮ ಹೊಟ್ಟೆಗೆ ಅಂಟಿಕಕೊಳ್ಳುವ ಕೊಬ್ಬಾಗದೇ, ಶಕ್ತಿಯಾಗಿ ಸುಟ್ಟು ಹೋಗುತ್ತದೆ.

ನಿಮ್ಮ ದೇಹವನ್ನು ನಿರ್ವಿಷೀಕರಿಸಿ, ನಿಮ್ಮ ಜೀರ್ಣಾಂಗ ವ್ಯವಸ್ಥೆ ಸಮತೋಲ ಮಾಡುತ್ತದೆ. ಆಹಾರ ತಯಾರಿಸಲು ಅಡುಗೆ ಮಾಡುವಾಗ ಕೊಬ್ಬರಿಎಣ್ಣೆ ಬಳಸಿದರೆ, ಅದು ಹೆಚ್ಚಿನ ಶಾಖದ ಅಡುಗೆಯಲ್ಲೂ, ತಾಪಮಾನದಲ್ಲಿ ಸುರಕ್ಷಿತವಾಗಿ ಉಳಿಯುತ್ತದೆ. ಸಾಮಾನ್ಯ ಅಡುಗೆಯಲ್ಲಿ ಇತರ ತರಕಾರಿ ಜನ್ಯ ಎಣ್ಣೆಗಳಂತೆ, ಕೊಬ್ಬರಿ ಎಣ್ಣೆ ಹಾನಿಕಾರಕ ಉಪ ಉತ್ಪನ್ನಗಳನ್ನು ರೂಪಿಸುವುದಿಲ್ಲ. ಕಚ್ಛಾ, ರುಚಿಕರ, ವೇಗನ್ ಭೋಜನಾ ನಂತರದ ಸಿಹಿ ಭಕ್ಷಗಳಿಗೂ ಕೊಬ್ಬರಿಎಣ್ಣೆ ಬಳಸಬಹುದು.

ಆರೋಗ್ಯ ಲಾಭಗಳು:

1. ದೇಹದ ರೋಗನಿರೋಧಕ ಶಕ್ತಿಗೆ ಬೆಂಬಲ ಕೊಡುತ್ತದೆ.

2. ರೋಗಕಾರಕ ಸೂಕ್ಷ್ಮಜೀವಿಗಳು, ಅಣುಜೀವಿಗಳು, ಶಿಲೀಂದ್ರಗಳ ಸೋಂಕು, ಪರಾವಲಂಬಿಗಳ ವಿರುದ್ಧ ದೇಹದಲ್ಲಿ ಕಾರ್ಯ ಮಾಡುತ್ತದೆ.

3. ವೇಗದ ಶಕ್ತಿ ಪೂರೈಸುವ ಸ್ವಾಭಾವಿಕ ಮೂಲವಾಗಿದ್ದು, ಶಾರೀರಿಕ ಹಾಗೂ ಕ್ರೀಡಾ ಪ್ರದರ್ಶನ ಶಕ್ತಿ ಹೆಚ್ಚಿಸುತ್ತದೆ.

4. ಜೀರ್ಣಶಕ್ತಿ ಹೆಚ್ಚಿಸಿ, ಪೌಷ್ಠಿಕಾಂಶ, ಜೀವಸತ್ವ ಹಾಗೂ ಖನಿಜಗಳನ್ನು ಹೀರಿಕೊಳ್ಳುತ್ತ, ದೇಹಕ್ಕೆ ಒಳಿತು ಮಾಡುತ್ತದೆ.

5. ಇನ್ಸುಲಿನ್ ಉತ್ಪತ್ತಿ ಸುಧಾರಿಸಿ, ಮಧುಮೇಹದೊಂದಿಗೆ ಸೇರಿಕೊಂಡಿರುವ ಲಕ್ಷಣಗಳನ್ನು ಸುಧಾರಿಸುತ್ತದೆ.

6. ಕ್ಯಾನ್ಸರ್‍ನಿಂದ ದೇಹ ರಕ್ಷಿಸಿ, ಅವಧಿಪೂರ್ವ ವಯಸ್ಸಾಗುವಿಕೆ ಹಾಗೂ ಕ್ಷೀಣಗೊಳ್ಳುವ ಕಾಯಿಲೆ ಉಂಟುಮಾಡುವ ತೀವ್ರಗಾಮಿಗಳನ್ನು ಹೊರಹಾಕುತ್ತದೆ.

7. ಹೃದಯ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ಹೆಚ್ಚಿಸುತ್ತದೆ.

8. ಥೈರಾಯಿಡ್ ಕ್ರಿಯೆ ಬೆಂಬಲಿಸಿ, ಪುನರ್ ಸ್ಥಾಪಿಸುತ್ತದೆ.

9. ಮೂತ್ರಪಿಂಡಗಳ ಕಾಹಿಲೆ ಹಾಗೂ ಮೂತ್ರಾಶಯ ಸೋಂಕಿನ ವಿರುದ್ಧ ರಕ್ಷಣೆ ಕೊಡುತ್ತದೆ.

10. ತೂಕ ಇಳಿಸಲು ಉತ್ತೇಜನ ನೀಡುತ್ತದೆ.

11. ಕೂದಲು ಹಾಗೂ ಚರ್ಮ ಆರೊಗ್ಯವಂತವಾಗಿರಲು, ಯೌವ್ವನ ಕಾಣಿಸಲು ನೆರವು ನೀಡಿ, ಸುಕ್ಕುಗಳು, ಚರ್ಮದ ಕುಸಿತ, ವಯಸ್ಸಿನ ಕುರುಹುಗಳು ಕಾಣದಂತೆ ಮಾಡುತ್ತದೆ. ಸೂರ್ಯನ ಶಾಖದಿಂದ ರಕ್ಷಣೆ ನೀಡುತ್ತದೆ.

12. ತೆಂಗಿನ ಎಣ್ಣೆ ನಿಮ್ಮ ಹಸಿವು ಕಡಿಮೆ ಮಾಡುತ್ತದೆ. ಕೀಟೋನ್ಸ್ ಹಸಿವು ಕಡಿಮೆ ಮಾಡುವ ಪರಿಣಾಮಕಾರಿ ಶಕ್ತಿ ಹೊಂದಿದೆ. ದೀರ್ಘಕಾಲದ ಬಳಕೆಯಿಂದ ದೇಹದ ತೂಕ ಕಡಿಮೆಯಾಗುತ್ತದೆ.

13. ಮಕ್ಕಳಲ್ಲಿ ಮೂರ್ಛೆರೋಗದ ಸೆಳೆವು ಕಡಿಮೆ ಮಾಡಲು, ಕೆಟೋಜೆನಿಕ್ ಎಂಬ ಕಡಿಮೆ ಪಿಷ್ಠ ಹಾಗೂ ಹೆಚ್ಚು ಕೊಬ್ಬಿರುವ ಆಹಾರ ಪದ್ಧತಿ ಬಗ್ಗೆ ಅಧ್ಯಯನ ನಡೆದಿದೆ. ಕೊಬ್ಬರಿಎಣ್ಣೆಯ ಕೊಬ್ಬಿನ ಆಮ್ಲ ಯಕೃತ್ತಿಗೆ ಹೋಗಿ ಕಿಟೋನ್‍ಗಳಾಗಿ, ಆಹಾರದಲ್ಲಿ ಹೆಚ್ಚು ಪಿಷ್ಠವಿರಲು ಅನುಕೂಲ ಮಾಡುತ್ತದೆ.

14. ಬಾಯಿ ತೊಳೆಯುವ ದ್ರವವಾಗಿ ಬಳಸಿದರೆ, ಬಾಯಿಯಲ್ಲಿಯ ಹಾನಿಕಾರಕ ಅಣುಜೀವಿಗಳನ್ನು ಕೊಂದು, ಹಲ್ಲಿನ ಆರೋಗ್ಯ ಸುಧಾರಿಸಿ, ಬಾಯಿಯ ದುರ್ವಾಸನೆ ಕಡಿಮೆ ಮಾಡುತ್ತದೆ.

15. ಆಲ್‍ಝೈಮರ್ಸ್ ರೋಗಿಗಳಲ್ಲಿ, ಮೆದುಳಿನ ಕೆಲಭಾಗಗಳಲ್ಲಿ, ಶಕ್ತಿಗಾಗಿ ಗ್ಲೂಕೋಸ್ ಬಳಸುವ ಶಕ್ತಿ ಕಡಿಮೆಯಾಗಿರುತ್ತದೆ. ಇಂಥ ರೋಗಿಗಳಿಗೆ ಪರ್ಯಾಯ ಶಕ್ತಿ ಮೂಲವಾಗಿ ಕೊಬ್ಬರಿಎಣ್ಣೆ, ಮೆದುಳಿನ ಜೀವಕೋಶಗಳಿಗೆ ಶಕ್ತಿ ನೀಡಿ, ಆಲ್‍ಝೈಮರ್ಸ್ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು, ಸಂಶೋಧಕರು ತಿಳಿಸಿದ್ದಾರೆ.

16. ಹೊಟ್ಟೆ ಭಾಗದ ಕೊಬ್ಬು ಇಳಿಸಲು ಇದು ಅನುಕೂಲಕಾರಿ.

17. 30 ಮಿಲಿಲೀಟರ್ ಅಥವಾ 2 ಚಮಚ ಕೊಬ್ಬರಿಎಣ್ಣೆ ನಿತ್ಯ ಸೇವಿಸಿದರೆ 12 ವಾರಗಳಲ್ಲಿ ಸೊಂಟದ ಸುತ್ತಳತೆ ಹಾಗೂ ದೇಹದ ಭೌತಿಕ ದ್ರವ್ಯರಾಶಿ ಸೂಚಿ ಇಳಿಕೆಯಾಗಿರುವುದು, ಒಂದು ಅಧ್ಯಯನದಿಂದ ಕಂಡು ಬಂದಿದೆ. ಸಾವಯುವ ಕಚ್ಛಾ ಕೊಬ್ಬರಿ ಎಣ್ಣೆ ಬಳಸಿದರೆ ಅತ್ಯುತ್ತಮ.

18. ಎಕ್ಷಿಮಾ, ಸೋರಿಯಸಿಸ್ ಇದ್ದಾಗ ಶುದ್ಧ ತಾಜಾ ಕೊಬ್ಬರಿ ಎಣ್ಣೆ ಲೇಪನದಿಂದ ಭೀಕರತೆ ಕಡಿಮೆಯಾಗುತ್ತದೆ.

19. ಚರ್ಮರೋಗಗಳಿಗೆ ಒಣಚರ್ಮಕ್ಕೆ ಕೊಬ್ಬರಿ ಎಣ್ಣೆ ಉತ್ತಮ.

ಎನ್.ವ್ಹಿ ರಮೇಶ್
ಮೊ: 98455-65238

Share this: