Vydyaloka

ಶ್ರೀ ಕೃಷ್ಣ ಜನ್ಮಾಷ್ಟಮಿ:ಮಕ್ಕಳಿಗು ಬೆಣ್ಣೆಗೂ ಯಾವ ಸಂಬಂಧ ?

ಶ್ರೀ ಕೃಷ್ಣ ಜನ್ಮಾಷ್ಟಮಿ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣ ಭಗವಂತನು ಹುಟ್ಟಿದ ಪರ್ವ ದಿನ. ಕೃಷ್ಣನಿಗೆ ಬೆಣ್ಣೆಯ ಮೇಲಿದ್ದ ಬಯಕೆ ಅತೀತ, ನವನೀತ ಚೋರ ಎಂದೇ ಪ್ರಸಿದ್ದಿಯಾಗಿದ್ದ ಕೃಷ್ಣನಿಗೆ ಬೆಣ್ಣೆ ಬಲು ಪ್ರಿಯವಾದದ್ದು.ಆದರೆ ವೈಜ್ನಾನಿಕವಾಗಿ ಅಥವಾ ವೈದ್ಯಕೀಯವಾಗಿ ನಾವು ನೋಡಿದಾಗ,ಮಕ್ಕಳಿಗೆ ಬಹು ಉಪಯುಕ್ತವಾಗಿರುವ, ಹಲವು ರೋಗಗಳಿಗೆ ಮದ್ದಾಗಿರುವ ಬೆಣ್ಣೆಯನ್ನು ಸಾಂಕೇತಿವಾಗಿ ಕೃಷ್ಣನ ಬಾಲ್ಯಾವಸ್ಥೆಯಲ್ಲಿ ಬಿಂಬಿಸಲಾಗಿದೆ ಎನಿಸುವುದು.

ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣ ಭಗವಂತನು ಹುಟ್ಟಿದ ಪರ್ವ ದಿನ. ಧರ್ಮಸಂಸ್ಥಾಪನೆಗಾಗಿ, ದುಷ್ಟತನದ ಸಂಹಾರಕ್ಕಾಗಿ, ಭಕ್ತಿ ಹಾಗೂ ಕರ್ಮ ಸಿದ್ದಾಂತವನ್ನು ಪ್ರಚುರಪಡಿಸಲು ವಸುದೇವ ಮತ್ತು ದೇವಕಿಯ ಪುತ್ರನಾಗಿ ಮಥುರೆಯಲ್ಲಿ ಶ್ರಾವಣಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜನ್ಮಿಸಿದನು. ಈ ದಿನವನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲಾಗುವುದು.

ವಿಶೇಷವಾಗಿ ಈ ದಿನ ಬಾಲರೂಪದ ಕೃಷ್ಣನನ್ನು ಆರಾಧನೆ ಮಾಡಲಾಗುವುದು. ಮಧ್ಯರಾತ್ರಿ ಕೃಷ್ಣನಿಗೆ ಅಭಿಷೇಕ ಮಾಡಿ, ತೊಟ್ಟಿಲಲ್ಲಿ ಇರಿಸಿ, ಫಲ ಪುಷ್ಪಗಳಿಂದ ಅಲಂಕರಿಸಿ ಅರ್ಚಿಸಲಗುವುದು. ದಕ್ಷಿಣ ಭಾರತದಲ್ಲಿ ಪ್ರತಿ ಮನೆಯಲ್ಲಿ ಪುಟ್ಟ ಪುಟ್ಟ ಪಾದಗಳನ್ನು ಬಾಗಿಲಿನಿಂದ ತೊಟ್ಟಿಲವರೆಗಿ ರಚಿಸಿ, ಮನೆಗೆ ಸಾಂಕೇತಿಕವಾಗಿ ಬರಮಾಡಿಕೊಳ್ಳಲಗುವುದು.

ಕೃಷ್ಣನಿಗೆ ಬೆಣ್ಣೆ ಬಲು ಪ್ರಿಯವಾದದ್ದು:

ಬಾಲಕೃಷ್ಣನೆಂದರೆ ಬೆಣ್ಣೆ ಮೆತ್ತಿದ ಮುಖ, ಅಂಬೆಗಾಲಿನ ಕೃಷ್ಣ, ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದ ಸಂಗತಿ, ಅವನ ತುಂಟತನ, ಲೀಲೆಗಳು ನೆನಪಾಗುತ್ತದೆ. ಕೃಷ್ಣನಿಗೆ ಬೆಣ್ಣೆಯ ಮೇಲಿದ್ದ ಬಯಕೆ ಅತೀತ, ನವನೀತ ಚೋರ ಎಂದೇ ಪ್ರಸಿದ್ದಿಯಾಗಿದ್ದ ಕೃಷ್ಣನಿಗೆ ಬೆಣ್ಣೆ ಬಲು ಪ್ರಿಯವಾದದ್ದು. ಆದರೆ ವೈಜ್ನಾನಿಕವಾಗಿ ಅಥವಾ ವೈದ್ಯಕೀಯವಾಗಿ ನಾವು ನೋಡಿದಾಗ, ಬಾಲ್ಯಾವಸ್ಥೆಯ ಮಕ್ಕಳಿಗು ಬೆಣ್ಣೆಗೂ ಇರುವ ಸಂಬಂಧ ಹಾಗೂ ಮಕ್ಕಳಿಗೆ ಬೆಣ್ಣೆಯ ಸೇವನೆಯಿಂದಾಗುವ ಆರೋಗ್ಯದ ಲಾಭಗಳು ಮಹತ್ವದ್ದಾಗಿದೆ. ಮಕ್ಕಳಿಗೆ ಬಹು ಉಪಯುಕ್ತವಾಗಿರುವ, ಹಲವು ರೋಗಗಳಿಗೆ ಮದ್ದಾಗಿರುವ ಬೆಣ್ಣೆಯನ್ನು ಸಾಂಕೇತಿವಾಗಿ ಕೃಷ್ಣನ ಬಾಲ್ಯಾವಸ್ಥೆಯಲ್ಲಿ ಬಿಂಬಿಸಲಾಗಿದೆ ಎನಿಸುವುದು.

Also read: ನಿಮ್ಮ ಮಕ್ಕಳೊಂದಿಗೆ ಸ್ನೇಹದಿಂದಿರಿ

1. ಬೆಣ್ಣೆಯ ವಿಶೇಷ ಗುಣವನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಹಸುವಿನ ಬೆಣ್ಣೆಯು ಉತ್ತಮದಾಗಿದೆ. ಇದು ಪ್ರಾಕೃತವಾಗಿ ದೇಹದ ಪಿತ್ತದ ಅಂಶವನು, ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿ ಹೇರಳವಾಗಿ ಜೀವಸತ್ವಗಳಾದ ವಿಟಮಿನ್ ಎ, ಡಿ, ಈ, ಕೆ ಇರುವುದರಿಂದ ದೇಹಕ್ಕೆ ಪುಷ್ಥಿಯನ್ನು, ಪೋಷಣೆಯನ್ನು ನೀಡಿ ವ್ಯಾಧಿಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

2. ಜೀರ್ಣಶಕ್ತಿಯನ್ನು ವಿಶೇಷವಾಗಿ ಹೆಚ್ಚಿಸಿ ದೇಹಕ್ಕೆ ಉತ್ಸಾಹವನ್ನು ನೀಡುತ್ತದೆ. ಅಲ್ಲದೆ ಮಕ್ಕಳ ಚರ್ಮದ ಕಾಂತಿ ಹಾಗೂ ಬಲವನ್ನು ವೃದ್ದಿಸುತ್ತದೆ. ಆದ್ದರಿಂದ ಕಣ್ಣಿನ ರೋಗಗಳಿಗೆ, ಪಾರ್ಶ್ವವಾಯು, ಪೈಲ್ಸ್, ಮಾನಸಿಕ ವಿಕಾರಗಳಿಗೆ, ಲೈಂಗಿಕ ನಿಶಕ್ತಿ, ಅತೀವ ರಕ್ತಸ್ರಾವ, ಮುಂತಾದ ರೋಗಗಳಿಗೆ ಬೆಣ್ಣೆ ಉತ್ತಮ ಔಷಧಿ.

3. ಬೆಣ್ಣೆಯಲ್ಲಿ ವಿಶೇಷ ಆಕೃತಿಯುಳ್ಳ ಸ್ಯಾಚುರೇಟೆಡ್ ಕೊಬ್ಬಿನಂಶದಿಂದಾಗಿ ಖನಿಜಾಂಶಗಳಾದ ಕ್ಯಾಲ್ಶಿಯಂ, ಪಾಸ್ಪರಸ್, ವಿಟಮಿನ್ ಎ, ಡಿ ಅನ್ನು ದೇಹದಲ್ಲಿ ಉಳಿಯುವಂತೆ ಮಾಡಿ ಶಕ್ತಿಯನ್ನು ನೀಡುತ್ತದೆ. ಇದರಿಂದ ಮಕ್ಕಳಿಗೆ ವಿಶೇಷವಾಗಿ ವ್ಯಾಧಿನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಮೆದುಳಿನ ಹಲವು ಪದರಗಳಿಗೆ, ಜೀವಕೋಶಗಳಿಗೆ ಪೋಷಕಾಂಶಗಳು ತಲುಪಲು ಸಾಧ್ಯವಾಗುತ್ತದೆ ಮತ್ತು ಮೆಧುಳು ಉತ್ತಮವಾಗಿ ಬೆಳೆಯಲು, ತನ್ನ ಕ್ರಿಯೆಯನ್ನು ಉತ್ತಮರೀತಿಯಲ್ಲಿ ನಿರ್ವಹಿಸಲು ಸಹಕಾರಿಯಾಗುತ್ತದೆ.

4. ವಿಟಮಿನ್ ಡಿ ಹೇರಳವಾಗಿರುವುದರಿಂದ ಬೆಳೆಯುತ್ತಿರುವ ಮೆದುಳಿಗೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ.

5. ಗರ್ಭಿಣಿಯರಿಗೆ ನಾಲ್ಕನೇ ತಿಂಗಳಿನಲ್ಲಿ ಹಾಲಿನೊಂದಿಗೆ ಒಂದು ಅಕ್ಷ ಮಾತ್ರದಲ್ಲಿ ಬೆಣ್ಣೆಯನ್ನು ಸೇವಿಸಲು ಆಯುರ್ವೇದದಲ್ಲಿ ತಿಳಿಸಲಾಗಿದೆ. ಈ ತಿಂಗಳಲ್ಲಿ ಗರ್ಭದಲ್ಲಿನ ಮಗುವಿನ ಅಂಗಾಗಳ ಉತ್ಪತ್ತಿ ಹಾಗೂ ಬೆಳವಣಿಗೆ ಪ್ರಾರಂಭವಾಗುವುದರಿಂದ, ಇದು ಪೋಷಣೆಯನ್ನು ನೀಡಿ ಮಗುವಿನ ಉತ್ತಮ ಬೆಳೆವಣಿಗೆಗೆ ನೆರವಾಗುತ್ತದೆ.

 6. ಮಕ್ಕಳಲ್ಲಾಗುವ ರಾತ್ರಿಯಲ್ಲಿನ ಮೂತ್ರ ಪ್ರವೃತ್ತಿ ಅಥವಾ ಬೆಡ್ ವೆಟ್ಟಿಂಗ್ ಅನ್ನು ನಿಯಂತ್ರಿಸುತ್ತದೆ.

7. ಬೆಣ್ಣೆಯನ್ನು ಸೇವಿಸುವುದರಿಂದ ಮತ್ತು ಹೊರಗಿನಿಂದ ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಚರ್ಮಕ್ಕೆ ವಿಶೇಷ ಕಾಂತಿ, ಹೊಳಪು ಲಭ್ಯವಾಗುತ್ತದೆ ಮತ್ತು ಚರ್ಮದ ಆರೋಗ್ಯ ಉತ್ತಮವಾಗುತ್ತದೆ.

8. ಫಂಗಸ್ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುವ ವಿಶೇಷ ಗುಣದಿಂದಾಗಿ ಮಕ್ಕಳಲ್ಲಿ ಕಾಡುವ ಸಣ್ನ ಸೋಂಕು, ಚಳಿ, ಜ್ವರ ಮತ್ತು ಫ್ಲೂ ನಂತಹ ರೋಗಗಳನ್ನು ತಡೆಗಟ್ಟುತ್ತದೆ.

9. ವಿಶೇಷವಾಗಿ ಹಲ್ಲುಗಳಲ್ಲಾಗುವ ಹುಳುಕನ್ನು ತಡೆಯುತ್ತದೆ.

10. ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಹೇರಳವಾಗಿ ಆಂಟಿಆಕ್ಸಿಡೆಂಟ್ಸ್ ಇರುವುದರಿಂದ ಹೃದಯವನ್ನು ರಕ್ಷಿಸುತ್ತದೆ ಮತ್ತು ದೇಹದ ಜೀವಕೋಶಗಳನ್ನು ನಾಶಮಾಡುವ ಅಂಶವನ್ನು ಕಡಿಮೆಗೊಳಿಸುತ್ತದೆ.

11. ಅಲ್ಲದೆ, ಮಸ್ಸಿನ ಕ್ಲೇಶಗಳನ್ನು ನಿವಾರಿಸಿ ಮನಸ್ಸನ್ನು ತಿಳಿಮಾಡುತ್ತದೆ ಮತ್ತು ಮಾನಸಿಕ ರೋಗಗಳಿಗೆ ಬೆಣ್ಣೆ ಉತ್ತಮ ಔಷಧಿ.

ಹೀಗೆ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಬೆಣ್ಣೆಯು ಹಲವಾರು ಔಷಧೀಯಗುಣಗಳಿಂದ ಕೂಡಿದೆ ಮತ್ತು ವಿಶೇಷವಾಗಿ ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಅಮೃತಪ್ರಾಯವಾಗಿದೆ.

Also watch : ಅವಲಕ್ಕಿಯಲ್ಲಿರುವ ಆರೋಗ್ಯ ಲಾಭಗಳು..! Health benefits of poha

ಡಾ. ಮಹೇಶ್ ಶರ್ಮಾ ಎಂ.
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಮೈಸೂರು ರಸ್ತೆ, ಅಂಚೇಪಾಳ್ಯ, ಬೆಂಗಳೂರು
ದೂ.: 9964022654
drsharmamysr@gmail.com

Share this: