Vydyaloka

ಸೊಂಟದ ವಿಷ್ಯ….ಗರ್ಭಕೋಶಕ್ಕೆ ಕತ್ತರಿಯಾಕೆ ?

(ಇದು ತಿಳಿಬೇಕಾದ ವಿಷ್ಯ)

ವರ್ಷಕ್ಕೆ ಹತ್ತಿಪ್ಪತ್ತು ಸಲ ನೆಗಡಿಯಿಂದ ಮೂಗು ಸೋರಿದರೆ ನಾವು ಮೂಗು ತೆಗೆಸಿಕೊಳ್ಳುವದಿಲ್ಲ. ಮತ್ತೆ ಗರ್ಭಕೋಶಕ್ಕೆ ಕತ್ತರಿಯಾಕೆ….. ?

“ಡಾಕ್ಟ್ರೇ ಸೋಂಟಾ ನೋವು…. ಅವಾಗಾವಾಗ ಬಲೆಕಾಟ ಕೊಡುತ್ತೆ. . . ಏನಾದರೂ ಮಾಡಿ” ಎಂದು ಮಧ್ಯವಯಸ್ಕ ಮಹಿಳೆಯರು ತೊಂದರೆ ಹೇಳಿದಾಗ. ನನ್ನ ಮುಂದಿನ ಪ್ರಶ್ನೆ
“ನಿಮ್ಮಮುಟ್ಟು ಹೇಗಿದೆ… ?”
“ಅಯ್ಯೋ ಅದೆಲ್ಲಾ ನಿಂತೋಯ್ತು…. ನಾನು ದೋಡ್ಡ ಆಪರೇಷನ್ ಮಾಡಿಸ್ಕೊಂಡೆ…. ಗರ್ಭ ಚೀಲ ತೆಗೆದಾಕದ್ರು ಅವಾಗಿಂದ ಈ ತೊಂದರೆ. ಮುಟ್ಟಿನ ವಿಷಯ ಬಿಡಿ ಸೊಂಟದ ವಿಷ್ಯ ಹೇಳಿ” ಎಂದು ವಿಷಯಾಂತರದ ಪ್ರಯತ್ನ ಮಾಡಲು ನಾನು ಗರ್ಭಕೋಶ ತೆಗೆಸುವ ಹಿಂದಿನ ಕಾರಣದ ಹಿಂದೆ ಬೀಳುತ್ತೇನೆ.
ಸುಮಾರು 90% ಗರ್ಭಕೋಶ ತೆಗೆಸಿದ ಮಹಿಳೆಯರಲ್ಲಿ ಯಾವ ಗಂಭೀರ ತೊಂದರೆ ಇರದೆ ಗರ್ಭಕೊಶಕ್ಕೆ ಕತ್ತರಿ ಹಾಕಿಸಿಕೊಳ್ಳುತ್ತಾರೆ.
“ಏನಾಯ್ತಮ್ಮ ? ಯಾಕಮ್ಮ ಗರ್ಭಕೋಶ ತೆಗೆಸ್ದೆ ?” ಎಂದರೆ
“ಸಾರ್ ಬೀಡಿಂಗ್ ಜಾಸ್ತಿ ಹೋತಾ ಇತ್ತು….. ಆದ್ಕೆತೆಗೆಸ್ದೆ ಸಾ…. ” ಎಂಬ ಖುಷಿಯ ಉತ್ತರ. ಅಂದರೆ ಮುಟ್ಟು ನಿಂತದ್ದು ಖುಷಿಯಾ…..? ಇಲ್ಲಾ ಗರ್ಭ ಹೋದ ಸಂಭ್ರಮವಾ…. ?
ಇನ್ನೊಂದು ಉದಾಹರಣೆ
“ಸಾರ್ ವಿಪರೀತ ವೈಟೋತಾ ಇತ್ತು ಸಾ ಅದಕೆ ಎತ್ತಬಿಟ್ರು ಸಾ ಗರ್ಭ ಚೀಲಾನಾ….. ” ಎಂಬ ಸಮಾಧಾನದ ಉತ್ತರ.
ಮಾಸಿಕ ಸ್ರಾವ ಹೆಚ್ಚಾಗಲಿ, ಅಥವಾ ಅಂತರ್ಮಾಸಿಕಸ್ರಾವ, ಅಥವಾ ಅಕಾಲಿಕ ಸ್ರಾವವಿರಲಿ ಅದಕ್ಕೆ ಮೊದಲು ಮದ್ದು ಔಷಧಿ ಮಾಡಿ ನಂತರ ಪರಿಸ್ಥಿತಿ ಕೈ ಮೀರಿದರೆ ಗರ್ಭಕೋಶ ತೆಗೆಸಬಹುದು. ಇತ್ತೀಚಿಗೆ ಒಂದೆರಡು ಸ್ರಾವಗಳು ಏರುಪೇರಾದರೆ ಸಾಕು ಗರ್ಭಕೋಶದ ನಿಧನ. ಒಬ್ಬ ಮಹಿಳೆಗೆ ಎರಡು ಅಥವಾ ಮೂರು ಮಕ್ಕಳಾಗಿದ್ದರೆ ಸಾಕು ಗರ್ಭಕೊಶದ ಋಣ ತೀರಿದಂತೆ ಅದಕ್ಕೆ ಆದಷ್ಟು ಬೇಗ ಮೋಕ್ಷ ಗತಿಸಿಬಿಡುತ್ತಾರೆ.
ನಾನು ಹಳ್ಳಿಗಾಡಿನಲ್ಲಿಹೆಚ್ಚು ಕೆಲಸ ಮಾಡಿದ್ದುದರಿಂದ ನನ್ನ ಎಲ್ಲ ಉದಾಹರಣೆಗಳು ಹೆಚ್ಚಾಗಿ ಹಳ್ಳಿಗಾಡಿನವೆ. ಹುಡುಗಿಯೋಬ್ಬಳು ಮೈನೆರೆದು ಮಹಿಳೆಯಾದ ದಿನದಿಂದ ದೇಹದಲ್ಲಿ ಹಾರ್ಮೋನುಗಳ ಚಕ್ರಾಧಿಪತ್ಯ. ಈಸ್ಟ್ರೋಜನ್ ಪ್ರೋಜೆಸ್ಟಿರಾನ್ಗಳ ಸಮಬಲದ ಹಗ್ಗ ಜಗ್ಗಾಟದಿ ಮಹಿಳೆಯ ನಲವತ್ತರಿಂದ ಐವತ್ತರ ವರೆಗಿನ ಋತುಚಕ್ರದ ಸಹ ಜೀವನ ನಡೆಯುತ್ತದೆ. ಇದರಲ್ಲಿ ಕೆಲಸಾರಿ ಒಂದೋಂದು ಹಾರ್ಮೋನ್, ರಸದೂತಗಳ ಶಕ್ತಿ ಹೆಚ್ಚಾದಂತೆ ಚಕ್ರಗಳಲ್ಲಿ ಏರು ಪೇರು.
ಇನ್ನ ಸ್ತ್ರೀ ರಸದೂತಗಳ ಕೆಲಸಗಳು ಇಪ್ಪತ್ತೆಂಟು ದಿನಗಳ ಋತು ಚಕ್ರ ನಿರ್ವಹಣೆಯಿಂದ ಹಿಡಿದು. ಗರ್ಭಕೋಶದ ಬೆಳವಣಿಗೆ, ಗರ್ಭಧಾರಣೆಯ ತಯಾರಿ ಒಟ್ಟು ಗರ್ಭಕೋಶದ ಆರೋಗ್ಯ ನಿರ್ವಹಣೆ. ಇದರ ಜೊತೆಗೆ ಬೇರೆ ಮುಖ್ಯ ಕೆಲಸಗಳೆಂದರೆ ಮಹಿಳೆಯ ಮಾನಸಿಕ ಸಂತುಲನ ಕಾಪಾಡುವುದು, ಮುಟ್ಟು ನಿಂತ ಮೇಲೆ ಖಿನ್ನತೆಗೆ ಕಾರಣ ಈಗ ಗೊತ್ತಾಗಿರಬಹುದು. ಅದರ ಜೋತೆಗೆ ದೇಹದ ಕೊಬ್ಬಿನ ನಿರ್ವಹಣೆ, ಹಾಗಾಗಿ ಹೃದಯಾಘಾತದಿಂದ ಸುರಕ್ಷೆ…!! ಮೂಳೆಗಳ ಗಟ್ಟಿಗೊಳಿಸುವಿಕೆ ಹಾಗೂ ಮೂಳೆಯಲ್ಲಿನ ಕ್ಯಾಲ್ಷಿಯಂ ಹಾಗೂ ಇತರೆ ಲವಣಗಳ ಆಯ ವ್ಯಯದ ದೇಖರೋಖಿ ಈ ಹಾರ್ಮೋನ್ದೆ. ಮೈನೆರೆದ ಕಿಶೋರಿಯೋಬ್ಬಳು ಮಹಿಳೆಯಾಗಿ ಬೇಳೆಯುವುದಕ್ಕೂ ಇದೆ ಹಾರ್ಮೋನ್ ಬೇಕು. ಅಂಗಾಂಗ ಬೆಳವಣಿಗೆ, ಪುರುಷರತ್ತ ಆಕರ್ಷಣೆ ಎಲ್ಲ ಈ ಹಾರ್ಮೋನಿನ ಪಿತೂರಿಗಳೆ.
ಈ ಹಾರ್ಮೋನ್ಗಳೆಲ್ಲ ಒಟ್ಟಾಗಿ ಉಳಿದೆಲ್ಲ ಹಾರ್ಮೋನ್ಗಳ ಜೋತೆ ಕಾರ್ಯ ನಿರ್ವಹಿಸುತ್ತವೆ. ಹಾಗಾಗಿ ಕೆಲಬೇರೆ ಹಾರ್ಮೋನ್ಗಳ ಏರುಪೇರಾದರೆ ಮುಟ್ಟಿನ ತೊಂದರೆಗಳಾಗ ಬಹುದು. ಹಾಗಾಗಿ ಗರ್ಭಕೋಶ ತೆಗೆಸಿ ಮುಟ್ಟುಗಳನ್ನು ನಿಲ್ಲಿಸಿದಾಗ ಮೊಟ್ಟ ಮೊದಲ ಕಷ್ಟ ಎದುರಾಗುವುದು ಸೊಂಟದ ನೋವು……. ಮೂಳೆಗಳು ಮೆದುವಾಗುವ ಮೋದಲ ಚಿಹ್ನೆ. ಕಾಲ್ಷಿಯಂ ಲವಣ ನಿರ್ವಹಿಸುವವರಿಲ್ಲದೆ ಮೂಳೆಗಳು ಮೆತ್ತಗಾಗಿ ಚೀತ್ಕಾರ ಆರಂಭಿಸುತ್ತವೆ. ನಂತರ ಆರಂಭವಾಗುವುದು ನಿರಂತರ ಆಸ್ಪತ್ರೆಗಳ ಅಲೆದಾಟ, ಹಣ ಖರ್ಚು. ಒಬ್ಬ ವೈದ್ಯರಿಂದ ಸರಿಹೋಗದೆ ಇನ್ನೊಬ್ಬ ವೈದ್ಯರ ಸಮಾಲೋಚನೆ ಹಾಗೆಯೆ, ಸಮಯ, ಹಣ, ಮಾನಸಿಕ ನೆಮ್ಮದಿಗಳು ಕಡಿಮೆಯಾಗುತ್ತ ಮಹಿಳೆಯೊಬ್ಬಳು ಆನಾರೋಗ್ಯದ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾಳೆ.

ಪ್ರತಿ ಸಾರಿ ಒಂದು ಹೊಸ ಸ್ಕ್ಯಾನ್, ಹೊಸ ರಕ್ತ ಮೂತ್ರ ಪರೀಕ್ಷೆ, ಹೊಸ ದಾಗಿ ಮಾತ್ರೆಗಳ ಕೊರ್ಸು. ಒಬ್ಬ ಬಡಕುಟುಂಬದ ಮಹಿಳೆಗೆ ಇದು ಆರ್ಥಿಕವಾಗಿ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ಕೊಟ್ಯಾಂತರ ಮಹಿಳೆಯರಿರುವ ದೇಶದಲ್ಲಿ ಈ ತರಹದ ಅನವಶ್ಯಕ ಅಥವಾ ಅಸಮಂಜಸ ಖರ್ಚು, ದೇಶದ ಆರ್ಥಿಕತೆಯ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತಿದೆ.
1.ಗರ್ಭ ಕೋಶ ತೆಗೆದ ಬಳಿಕ ಅದರ ಮುಖಾಂತರ ಹೋಗುವ ಅಂಡಾಶಯದ ರಕ್ತನಾಳಗಳ ಮೊಟಕುಗೊಳಿಸುವಿಕೆಯಿಂದ ಅಂಡಾಶಯಗಳಿಂದ ಒಸರುವ ಹಾರ್ಮೋನ್ಗಳ ತೀವ್ರ ಏರು ಪೇರಲಾಗಲಾರಂಭಿಸುತ್ತವೆ.
2.ಲೈಂಗಿಕ ಆಸಕ್ತಿ ಕಡಿಮೆಯಾಗಿ ಗಂಡಹೆಂಡಿರ ಹೊಂದಾಣಿಕೆಗಳು ತಾಳತಪ್ಪಿ ಸಂಶಯದಿಂದ ಆರಂಭವಾಗುವ ಸಮಸ್ಯೆ, ಗಲಾಟೆ ಜಗಳಲ್ಲಿ ಮುಂದುವರಿಯುತ್ತದೆ. ಗರ್ಭಕೋಶವಿಲ್ಲದೆ ಜನನಾಂಗದ ತೇವಾಂಶ ಕಡಿಮೆಯಾಗಿ ಗಂಡಹೆಂಡಿರ ಸಮಾಗಮ ಮಹಿಳೆಗೆ ನೋವು ಕೊಡಬಹುದು, ಅಥವಾ ಸರಿಯಾದ ಸಂತೃಪ್ತಿ ಲಭಿಸದೆ ಮಹಿಳೆ ದೈಹಿಕ ಸುಖದಿಂದ ವಿಮುಖಳಾಗಬಹುದು.
3.ಕೆಲ ಸಾರಿ ನಿರಾಸಕ್ತ ಮಹಿಳೆಯ ಗಂಡ ಅನೈತಿಕ ಸಂಬಂಧ ಬಗ್ಗೆ ಯೋಚಿಸಬಹುದು, ಹೊಂದಬಹುದು, ನಂತರದ ನಡೆಯವ ವಿದ್ಯಮಾನಗಳ ಬಗ್ಗೆ ನಾನು ಹೇಳಬೇಕಾಗಿಲ್ಲ.
4.ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯ ಕಿಬ್ಬೋಟ್ಟೆಯ ಅಂಗಾಂಗಳ ಸಮಗ್ರತೆ ಭಂಗವಾಗಿ ಮೂತ್ರ, ಬಹಿರ್ದೆಸೆಯ ಸಮಸ್ಯಗೆಳು ಕಾಣಿಸಿಕೊಳ್ಳಲಾರಂಭಿಸುತ್ತವೆ.
ನಾನು ಹಳ್ಳಿಗಾಡಿನ ವೈದ್ಯನಾಗಿ ಮಹಿಳೆಯರು ಗರ್ಭತೆಗೆಸಿಕೊಳ್ಳುವ ಆತುರದಲ್ಲಿದ್ದರೆ, ಮೇಲಿನ ಎಲ್ಲ ಸಮಸ್ಯೆಗಳನ್ನು ಹೇಳಿ ಹೆದರಿಸಿ. ಅವರ ಗರ್ಭಕೋಶ ಉಳಿಸುವ ಪ್ರಯತ್ನ ಮಾಡುತ್ತೆನೆ.
ಮೊದಲು ಮುಟ್ಟಿನ ಏರುಪೇರುಗಳಿದ್ದರೆ ಅದಕ್ಕೆ ಸರಿಯಾದ ಚಿಕಿತ್ಸೆ ಮಾಡಬೇಕು. ನಾನಂತೂ ಕಣ್ಣು ಮುಚ್ಚಿ ಆಯುರ್ವೇದ ಔಷಧಿಗಳತ್ತ ಮುಖ ಮಾಡಿ ಅಂತಹವರಿಗೆ ಆಯುರ್ವೇದ ಔಷಧಿಕೊಟ್ಟು ಸಫಲ ಪಲಿತಾಂಶ ಪಡೆದಿದ್ದೆನೆ. ಆದರೆ ಆಯುರ್ವೇದದಲ್ಲಿ ಚಿಕಿತ್ಸೆ ನಿಧಾನ. ಗುಣ ಕಾಣಿಸಲು ಒಂದೆರಡು ತಿಂಗಳೆ ಬೇಕಾಗಬಹುದು. ವ್ಯವಧಾನ ಭಕ್ತಿ, ನಂಬಿಕೆಯಿಂದ ಔಷಧಿ ಸ್ವೀಕರಿಸಿದರೆ ಫಲಿತಾಂಶ ಶತ ಸಿದ್ದ. ತುರ್ತು ಆರಾಮು ಬೇಕಾದವರು ಎಲ್ಲೆಲ್ಲೋ ಹೋಗಿ ಗರ್ಭ ಕೋಶ ತೆಗೆಸಿಕೊಂಡು ನರಳಾಡುತ್ತ, ಪಶ್ಚಾತ್ತಾಪ ಪಡಲಾರಂಭಿಸುತ್ತಾರೆ.
ಇನ್ನು ಬಿಳುಪಿನ ತೊಂದರೆಯಿರುವವರು ವೈಯುಕ್ತಿಕ ಶುಚಿತ್ವದತ್ತ ತೀವ್ರ ನಿಗಾ ವಹಿಸಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಕೆಲ ನಕಲಿ ವೈದ್ಯರು ಹಳ್ಳಿಯ ಮುಗ್ಧ ಮಹಿಳೆಯರಿಗೆ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಈ ತರಹ ಕಾಯಿಯಾಗುತ್ತದೆಂದು ಹೆದರಿಸಿ. ದೇಹದಲ್ಲಿ ಶಾಖ ಹೆಚ್ಚಾಗಿ ಪ್ರೆಷರ್ ಕುಕ್ಕರ್ನಂತೆ ದೇಹ ಸಿಡಿದು ಛಿದ್ರವಾಗುತ್ತದೆಂದ ಹೆದರಿಸಿ” ನಿಂಗೆ ಬಾಡಿ ಹೀಟು ಜಾಸ್ತಿ” (ತಮಾಷೆಗೆ), ಚಿಲ್ಲರೆ ಕಮಿಷನ್ ಆಸೆಗೆ ಅಂತಹವರನ್ನು ಗರ್ಭಕೋಶ ತೆಗೆಸುವಲ್ಲಿ ಸಫಲರಾಗುತ್ತಾರೆ. ಹಳ್ಳಿಗಾಡಿನ ಕೃಷಿಕೂಲಿ ಮಾಡುವ ಮಹಿಳೆಯರಲ್ಲಿ ಬಿಳುಪಿನ ತೊಂದರೆ ಇರುವವರಿಗೆ ನಾನು ವೈಯುಕ್ತಿಕ ಸ್ವಚ್ಛತೆಯ ಜೊತೆಗೆ ನಿಯಮಿತವಾಗಿ ಒಳುಡುಪುಗಳನ್ನು ತೊಡುವ ಸಲಹೆ ಇತ್ತು ಅಚ್ಚರಿ ಪಡುವಂತಹ ಫಲಿತಾಂಶಗಳನ್ನು ಪಡೆದಿದ್ದೇನೆ. ಶಿಲೀಂಧ್ರ, (ಫಂಗಸ್) ಸೂಕ್ಷ್ಮಾಣು ಜೀವಿಗಳ ವಿರುಧ್ದ ಸರಿಯಾದ ಔಷಧಿ ಬಳಸಿದರೆ ಬಿಳಿ ಸೆರಗಿನಿಂದ ಮುಕ್ತಿ ಹೊಂದಿ ಗರ್ಭಕೋಶ ಕಾಪಾಡಿಕೊಳ್ಳಬಹುದು.
ಪ್ರಾಣಕ್ಕೆ ಮಾರಕ ವಾಗುವಂತಹ ಕ್ಯಾನ್ಸರ್, ಅಥವಾ ವಿಪರೀತ ಸ್ರಾವಗಳಂತಹ ಅಸಾಮಾನ್ಯ ತೊಂದರೆಗಳಿಗೆ ಗರ್ಭಕೋಶದ ಬಲಿಯೊಂದೆ ದಾರಿ. ಈ ಚರ್ಚೆಯಲ್ಲಿ ಅತಿಮುಖ್ಯವಾದ ವಿಷಯವೆಂದರೆ ವೈದ್ಯರು ಹಾಗೂ ಆಸ್ಪತ್ರೆಗಳು. ಗರ್ಭಕೋಶ ನಿರ್ಮೂಲನೆಯ ಮಹತ್ಕಾರ್ಯ ಮಾಡುತ್ತಿರುವ ಕೆಲ ಆಸ್ಪತ್ರೆ ವೈದ್ಯರುಗಳ ಬಗ್ಗೆ ನಾವು ಅಗಾಗ ಕೇಳಿದ್ದೆವೆ. ಈ ಭೂಗತ ಧಂಧೆಯಲ್ಲಿ ಕೆಲ ಮಧ್ಯವರ್ತಿಗಳೂ ಇದ್ದಾರೆ. ಅಪಾರ ಹಣದ ಈ ವ್ಯವಹಾರದ ತಿಮಿಂಗಿಲಗಳು ಕಾನೂನಿನ ದುರ್ಬಲ ಬಲೆಯನ್ನು ಹಣದ ಶಕ್ತಿಯಿಂದ ತೂತಾಗಿಸಿ ಹೊರಬಂದು ತಮ್ಮ ಧಂದೆ ಮುಂದುವರಿಸುತ್ತಾರೆ. ನಮ್ಮ ಅಂಗಾಂಗಗಳ ಬಗ್ಗೆ ನಾವೆ ಜಾಗರೂಕರಾಗಿದ್ದರೆ ಇಷ್ಟೆಲ್ಲ ತೊಂದರೆಗಳಿಂದ ಉಳಿಯಬಹುದು. ಮೊಟ್ಟ ಮೊದಲು ನಮ್ಮ ದೇಹದ ಪ್ರಮುಖ ಅಂಗಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಿಷ್ಪ್ರಯೋಜಕ ಜ್ಞಾನ ಹೊಂದುವದಕ್ಕಿಂತ ನಮ್ಮ ಆರೋಗ್ಯ ಕಾಪಾಡಲು ಬೇಕಾದ ಜ್ಞಾನ ಹೊಂದುವುದು ಹಲವಾರು ಗಂಡಾಂತರಗಳಿಂದ ಕಾಪಾಡಬಹುದು
ವರ್ಷಕ್ಕೆ ಹತ್ತಿಪ್ಪತ್ತು ಸಲ ನೆಗಡಿಯಿಂದ ಮೂಗು ಸೋರಿದರೆ ನಾವು ಮೂಗು ತೆಗೆಸಿಕೊಳ್ಳುವದಿ ಲ್ಲ, ಮತ್ತೆ ಗರ್ಭಕೋಶಕ್ಕೆ ಕತ್ತರಿಯಾಕೆ…..?

-ಅಬುಯಾಹ್ಯಾ


ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this: