Vydyaloka

ಸೊಂಟ ನೋವಿಗೆ ಪರಿಹಾರವೇನು?

ಸೊಂಟ ನೋವಿಗೆ ಪರಿಹಾರವೇನು? ಇದಕ್ಕೆ ಬಹುತೇಕವಾಗಿ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಮತ್ತು ತಪ್ಪಾದ ಜೀವನಶೈಲಿಯೇ ಕಾರಣ. ಪ್ರತಿನಿತ್ಯ ಎಣ್ಣೆಯನ್ನು ಹಚ್ಚಿಕೊಂಡು ನಂತರ ಸ್ನಾನ ಮಾಡುವುದರಿಂದ ಸಣ್ಣ ಪ್ರಮಾಣದಲ್ಲಿರುವ ಸೊಂಟನೋವು ಗುಣವಾಗುತ್ತದೆ.

“ತಡೆಯಲಾರದ ಸೊಂಟ ನೋವಿದೆ; ಕಾಲಿಗೂ ನೋವು ಹರಡುತ್ತಿದೆ, ಸ್ವಲ್ಪ ಹೊತ್ತು ಕುಳಿತುಕೊಳ್ಳಲೂ ಆಗುವುದಿಲ್ಲ, ನನ್ನ ಡಿಸ್ಕ್ ಜಾರಿದೆ ಎಂದು ವೈದ್ಯರು ಹೇಳಿದ್ದಾರೆ.” ಇದು ಇತ್ತೀಚೆಗೆ ಬಹುತೇಕ ಜನರು ಹೇಳುವ ಮಾತು. ನಲವತ್ತು ದಾಟಿದ ಎಷ್ಟೋ ಜನ ಈ ಸೊಂಟ ನೋವು ಅಥವಾ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಷ್ಟೋ ಜನರಿಗೆ ಮಲಗುವುದೂ ಕಷ್ಟವಾಗಿಬಿಟ್ಟಿರುತ್ತದೆ. ಇದಕ್ಕೆ ಬಹುತೇಕವಾಗಿ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಮತ್ತು ತಪ್ಪಾದ ಜೀವನಶೈಲಿಯೇ ಕಾರಣ.

ನಿತ್ಯವೂ ಯೋಗಾಸನ ಅಥವಾ ಬೆನ್ನನ್ನು ಸುಸ್ಥಿತಿಯಲ್ಲಿಡುವ ವ್ಯಾಯಾಮಗಳನ್ನು ಮಾಡುವುದರಿಂದ ಸೊಂಟನೋವು ಅಥವಾ ಡಿಸ್ಕ್ ಸಮಸ್ಯೆಯನ್ನು ತಡೆಯಬಹುದು. ಆದರೆ ಸೊಂಟ ನೋವು ಪ್ರಾರಂಭವಾದ ನಂತರ ಅಥವಾ ಡಿಸ್ಕ್ ಗೆ ಸಂಬಂಧಿಸಿದ ಸಮಸ್ಯೆಯಿದೆ ಎಂಬುದು ಗೊತ್ತಾದ ನಂತರ ವೈದ್ಯರು, ಯೋಗ ಗುರುಗಳು ಅಥವಾ ಫಿಸಿಯೋಥರೆಪಿಸ್ಟ್ ಸಲಹೆಯ ಮೇಲೆಯೇ ವ್ಯಾಯಾಮ ಮಾಡಬೇಕು. ಹೀಗೆ ಮಾಡಿದರೆ ಪ್ರಾರಂಭಿಕ ಹಂತದಲ್ಲಿರುವ ಸೊಂಟದ ಸಮಸ್ಯೆಯನ್ನು ಕೇವಲ ವ್ಯಾಯಾಮದ ಮೂಲಕವೇ ಬಗೆಹರಿಸಿಕೊಳ್ಳಬಹುದು.

ಕುಳಿತುಕೊಂಡೇ ಕೆಲಸ ಮಾಡುವವರು ಬೆನ್ನನ್ನು ನೇರವಾಗಿಟ್ಟು ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕೆಲಸದ ಮಧ್ಯದಲ್ಲಿ ಆಗಾಗ ನಿಂತು ಹಿಂದೆ ಬಗ್ಗುವ ವ್ಯಾಯಾಮ ಮಾಡಬೇಕು. ಭಾರ ಎತ್ತುವಾಗ ಮುಂದೆ ಬಗ್ಗಿ ಭಾರ ಎತ್ತಬಾರದು. ತುದಿಗಾಲಲ್ಲಿ ಕುಳಿತು ವಸ್ತುವನ್ನು ದೇಹದ ಸಮೀಪಕ್ಕೆ ಇಟ್ಟುಕೊಂಡು ನಿಧಾನವಾಗಿ ಮೇಲೇಳಬೇಕು. ಏಳುವಾಗ ದೇಹವನ್ನು ನೇರವಾಗಿಟ್ಟುಕೊಳ್ಳಬೇಕು.

ಆಯುರ್ವೇದದ ಪ್ರಕಾರ ನಿತ್ಯವೂ ಎಣ್ಣೆ ಹಚ್ಚಿಕೊಳ್ಳುವುದರಿಂದ ವಾತರೋಗಗಳನ್ನು ತಡೆಯಬಹುದು. ಸೊಂಟನೋವು ಕೂಡಾ ಒಂದು ರೀತಿಯಲ್ಲಿ ವಾತರೋಗವೇ. ಹಾಗಾಗಿ ಪ್ರತಿನಿತ್ಯ ಎಣ್ಣೆಯನ್ನು ಹಚ್ಚಿಕೊಂಡು ನಂತರ ಸ್ನಾನ ಮಾಡುವುದರಿಂದ ಸಣ್ಣ ಪ್ರಮಾಣದಲ್ಲಿರುವ ಸೊಂಟನೋವು ಗುಣವಾಗುತ್ತದೆ.

ನೋವು ನಿವಾರಕವಾಗಿ “ಪತ್ರ ಪಿಂಡ ಸ್ವೇದ” ಎಂಬ  ಶಾಖ

ಆಯುರ್ವೇದ ಔಷಧ ಅಂಗಡಿಗಳಲ್ಲಿ ಸಿಗುವ ಮಹಾನಾರಾಯಣ ತೈಲ ಅಥವಾ ಸಹಚರಾದಿ ತೈಲದಂತಹ ತೈಲಗಳನ್ನು ತೆಗೆದುಕೊಂಡು ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಕುದಿಯುತ್ತಿರುವ ನೀರಿನ ಮೇಲೆ ಇಟ್ಟು ಬಿಸಿ ಮಾಡಿಕೊಳ್ಳಬೇಕು. ಹೀಗೆ ಬಿಸಿಯಾದ ಎಣ್ಣೆಯನ್ನು ಸೊಂಟಕ್ಕೆ ಹಚ್ಚಿಕೊಳ್ಳಬೇಕು. ನೋವು ಹೆಚ್ಚಿನ ಪ್ರಮಾಣದಲ್ಲಿದ್ದರೆ ಎಣ್ಣೆ ಹಚ್ಚಿಕೊಂಡ ನಂತರ ಮನೆಯಲ್ಲಿಯೇ ಔಷಧಯುಕ್ತ ಶಾಖ ತೆಗೆದುಕೊಳ್ಳಬಹುದು.

ಆಯುರ್ವೇದದಲ್ಲಿ ಹಲವು ರೀತಿಯ ಶಾಖಗಳ ಬಗ್ಗೆ ಹೇಳಿದ್ದಾರೆ. ಅವುಗಳಲ್ಲಿ “ಪತ್ರ ಪಿಂಡ ಸ್ವೇದ” ಎಂಬ ರೀತಿಯ ಶಾಖವನ್ನು ಮನೆಯಲ್ಲಿಯೇ ಸುಲಭವಾಗಿ ತೆಗೆದುಕೊಳ್ಳಬಹುದು. ಅದಕ್ಕೆ ತಲಾ ಒಂದು ಹಿಡಿಯಷ್ಟು ಲಕ್ಕಿ ಸೊಪ್ಪು, ಔಡಲ ಗಿಡದ ಸೊಪ್ಪು, ನುಗ್ಗೆ ಸೊಪ್ಪು ಮತ್ತು ಅರ್ಧ ಹಿಡಿಯಷ್ಟು ಎಕ್ಕೆ ಸೊಪ್ಪುಗಳನ್ನು ತಂದು ಹೆಚ್ಚಿಕೊಂಡು ಬಾಣಲಿಯಲ್ಲಿ ಸ್ವಲ್ಪ ಎಣ್ಣೆಯಲ್ಲಿ ಹುರಿಯಬೇಕು. ಹುರಿಯುವಾಗ ಸ್ವಲ್ಪ ಕೊಬ್ಬರಿ, ಅರ್ಧ ನಿಂಬೆ ಹಣ್ಣಿನ ಹೋಳುಗಳು ಮತ್ತು ಉಪ್ಪನ್ನು ಹಾಕಿಕೊಳ್ಳಬೇಕು.

ಮೆತ್ತಗಾಗಿ ರಸ ಬಿಡುವಂತೆ ಹುರಿದ ನಂತರ ಅದನ್ನು ದಪ್ಪನೆಯ ಹತ್ತಿ ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿಕೊಳ್ಳಬೇಕು. ಈ ಗಂಟನ್ನು ಬಾಣಲಿಯ ಮೇಲಿಟ್ಟು ಬಿಸಿ ಮಾಡುತ್ತಾ ಎಣ್ಣೆ ಹಚ್ಚಿದ ಜಾಗಕ್ಕೆ ಇಟ್ಟುಕೊಳ್ಳಬೇಕು. ಹಾಗೆ ಮಾಡುವಾಗ ಸುಡದಂತೆ ಜಾಗ್ರತೆ ವಹಿಸಬೇಕು. ಈ ಸೊಪ್ಪುಗಳ ಸಾರವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಇದನ್ನು ಹತ್ತರಿಂದ ಹದಿನೈದು ದಿನಗಳ ಕಾಲ ನಿರಂತರವಾಗಿ ಮಾಡಬಹುದು.

ಆದರೆ ತುಂಬಾ ದಿನಗಳ ಕಾಲ ನೋವಿದ್ದಾಗ, ನೋವು ತೀವ್ರವಾಗಿದ್ದಾಗ, ನೋವು ಕಾಲಿಗೆ ಹರಡುತ್ತಿದ್ದರೆ, ಕಾಲು ಮರಗಟ್ಟುತ್ತಿದ್ದರೆ, ಕುಳಿತುಕೊಳ್ಳುವುದು, ನಿಲ್ಲುವುದು, ನಡೆಯುವುದು ತುಂಬಾ ಕಷ್ಟವಾಗುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಪ್ರಕೃತಿ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆಗಳು, ಆಕ್ಯುಪ್ರೆಶರ್-ಆಕ್ಯುಪಂಕ್ಚರ್ ನಂತಹ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಚಿಕಿತ್ಸೆಗಳನ್ನು ಸರಿಯಾಗಿ ಪಡೆದುಕೊಂಡರೆ, ಸೊಂಟನೋವಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಿದರೆ ಬಹುತೇಕ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು.

ಹೀಗೆ ಸೊಂಟನೋವು, ಅದಕ್ಕಿರುವ ಕಾರಣ, ಡಿಸ್ಕ್ ತೊಂದರೆಯ ತೀವ್ರತೆ ಇವೆಲ್ಲಗಳ ಆಧಾರದಲ್ಲಿ ಸಂದರ್ಭಕ್ಕೆ ತಕ್ಕಂತೆ ಚಿಕಿತ್ಸೆ ಮತ್ತು ವ್ಯಾಯಾಮಗಳನ್ನು ಪಾಲಿಸಿದರೆ ಸೊಂಟನೋವು ಅಂದುಕೊಂಡಷ್ಟು ದೊಡ್ಡ ಸಮಸ್ಯೆಯಾಗಿರುವುದಿಲ್ಲ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this: