Vydyaloka

ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಣ ಹೇಗೆ ?

ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವ ಮತ್ತು ಸಂಖ್ಯೆ ವೃದ್ಧಿಸುವುದನ್ನು ನಿಯಂತ್ರಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಬೇಕಾದ ತುರ್ತು ಅವಶ್ಯಕತೆ ಇದೆ. ಮಲೇರಿಯಾ, ಆನೆಕಾಲು ರೋಗ, ಡೆಂಘಿ, ಚಿಕೂನ್‍ಗೂನ್ಯ, ಮೆದುಳು ಜ್ವರ ಮುಂತಾದ ಕಾಯಿಲೆಗಳಿಗೆ ಮುನ್ನುಡಿ ಬರೆಯುವ ಕೆಲಸ ಸೊಳ್ಳೆಗಳು ಸದ್ದಿಲ್ಲದೇ ಮಾಡುತ್ತಿರುತ್ತದೆ. 

ಒಂದು ಕಾಲದಲ್ಲಿ ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂದು ಹೇಳಲಾಗುತ್ತಿತ್ತು. ಆದರೆ  ಮಳೆಗಾಲದಲ್ಲಿ ಸೊಳ್ಳೆಗಳದ್ದೇ ಕಾರುಬಾರು. ಆ ಕಾರಣಕ್ಕಾಗಿಯೇ ಬೇಸಿಗೆಯಲ್ಲಿ ಸೆಕೆಯಕಾಟ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಎಂದು ಹೇಳಲಾಗುತ್ತಿದೆ. ಏನೇ ಇದ್ದರೂ ಮಳೆಗಾಲದಲ್ಲಿ ಸೊಳ್ಳೆಗಳಿಗೆ ಪರ್ವಕಾಲ. ಅವುಗಳು ಹೆಚ್ಚಿನ ಸಂತಾನೋತ್ಪತ್ತಿ ಮಾಡುವುದು ಮಳೆಗಾಲದಲ್ಲಿಯೇ. ಸೊಳ್ಳೆಗಳ ಆಟ ಆರ್ಭಟ ಹೆಚ್ಚಾಗಿ ಕಾಣ ಸಿಗುವುದು ಮಳೆಗಾಲದಲ್ಲಿಯೇ. ಬೇಸಿಗೆಯಲ್ಲಿ ಕಾಣದಂತೆ ಮಾಯವಾಗುವ ಸೊಳ್ಳೆಗಳು ಮಳೆಬಂದು ಅಲ್ಲಿಲ್ಲಿ ನೀರು ನಿಂತೊಡನೆಯೇ ತಮ್ಮತಮ್ಮ ರುದ್ರ ನರ್ತನವನ್ನು ಮನಕುಲದ ಮೇಲೆ ತೋರಿಸಿಬಿಡುತ್ತದೆ.

ಸೊಳ್ಳೆಗಳಿಗೆ ಮನುಷ್ಯನ ರಕ್ತವೆಂದರೆ ಅತೀವ ಪ್ರೀತಿ. ಮನುಷ್ಯನ ರಕ್ತವನ್ನು ಹೀರಿ ರೋಗಗಳನ್ನು ಹರಡಿಸುವ ಮನೆಮುರುಕು ಕೆಲಸ, ಉಂಡ ಮನೆಗೆ ದ್ರೋಹ ಬಗೆಯ ಕಾರ್ಯವನ್ನು ಸೊಳ್ಳೆಗಳು ಸದ್ದಿಲ್ಲದೆ ಮಾಡುತ್ತದೆ. ಮಲೇರಿಯಾ, ಆನೆಕಾಲು ರೋಗ, ಡೆಂಘಿ, ಚಿಕೂನ್‍ಗೂನ್ಯ, ಮೆದುಳು ಜ್ವರ ಮುಂತಾದ ಕಾಯಿಲೆಗಳಿಗೆ ಮುನ್ನುಡಿ ಬರೆಯುವ ಕೆಲಸ ಸೊಳ್ಳೆಗಳು ಸದ್ದಿಲ್ಲದೇ ಮಾಡುತ್ತಿರುತ್ತದೆ. ಅನಾಫೆಲಿಸ್ ಹೆಣ್ಣು ಸೊಳ್ಳೆ, ಏಡಿಸ್ ಸೊಳ್ಳೆ ಮತ್ತು ಕ್ಯೂಲೆಕ್ಸ್ ಸೊಳ್ಳೆ ಇವುಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರುಗಳು. ಅನಾಫೆಲೀಸ್ ಮಲೇರಿಯಾ ರೋಗಕ್ಕೆ ನಾಂದಿ ಹಾಡಿದಲ್ಲಿ, ಏಡಿಸ್ ಸೊಳ್ಳೆ ಡೆಂಘಿ ಮತ್ತು ಚಿಕೂನ್‍ಗೂನ್ಯ ರೋಗಕ್ಕೆದಾರಿ ಮಾಡಿಕೊಡುತ್ತದೆ. ಕ್ಯೂಲೆಕ್ಸ್ ಸೊಳ್ಳೆಯಿಂದ ಮೆದುಳು ಜ್ವರ ಮತ್ತು ಆನೆಕಾಲು ರೋಗ ಹರಡುತ್ತದೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಸೊಳ್ಳೆಗಳು ದೇಹದ ಗಾತ್ರದಲ್ಲಿ ಬಹಳ ಚಿಕ್ಕದಾಗಿದ್ದರೂ, ಮನುಕುಲದ ಬಹುದೊಡ್ಡ ವೈರಿ. ನಮ್ಮ ಮನುಷ್ಯರ ಜೀವನ ನಾಟಕದಲ್ಲಿ ಖಳ ನಾಯಕ ಪಾತ್ರವನ್ನು ಯಶಸ್ವಿಯಾಗಿಯೇ ವರ್ಷಗಳಿಂದ ನಿರ್ವಹಿಸುತ್ತಲೇ ಇದೆ. ಸೊಳ್ಳೆಗಳು ಮನುಷ್ಯನ ಏಳಿಗೆಗೆ ಬಹುದೊಡ್ಡ ಕಂಟಕವೆಂದರೂ ತಪ್ಪಲ್ಲ. ಜೀವನ ಕ್ರಿಕೇಟ್‍ ಆಟದಲ್ಲಿ ಮನುಷ್ಯನ ಕಡುವೈರಿ ಸೊಳ್ಳೆಗಳೇ. ಇವು ಯಾವತ್ತೂ ಹಾವು ಮುಂಗುಸಿಗಳು ಇದರ ನಡುವಿನ ವೈರಾತ್ವಕ್ಕೆ ಸರಿಸಾಟಿ ಇನ್ಯಾವುದೂ ಸಿಗಲಿಕ್ಕಿಲ್ಲ. ಮಲೇರಿಯಾದ ಕಪಿಮುಷ್ಟಿಗೆ ಸಿಕ್ಕಿ ಮನುಕುಲ ವಿಲವಿಲನೆ ಒದ್ದಾಡಿದೆ. ಮಲೇರಿಯಾ ಬಾಧಿಸಿದಷ್ಟು ತೊಂದರೆ, ಆರ್ಥಿಕ ನಷ್ಟ, ಸಾವು ನೋವು ಇನ್ನಾವುದೇ ರೋಗದಿಂದಲೂ ಬಂದಿಲ್ಲ. ಆ ಕಾರಣದಿಂದಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅನಾಫೆಲಿಸ್ ಹೆಣ್ಣು ಸೊಳ್ಳೆ ಅನಾಯಾಸವಾಗಿ ಯಾವತ್ತೂ ಪಡೆದುಕೊಳ್ಳುತ್ತಿದೆ.

ಒಂದು ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ ವರ್ಷಕ್ಕೆ5 ಮಿಲಿಯನ್ ಮಂದಿ ಮಲೇರಿಯಾದಿಂದ ಬಳಲುತ್ತಿದ್ದಾರೆ. ಮಲೇರಿಯಾ ಮನಕುಲವನ್ನು ಗಡಗಡನೆ ನಡುಗಸುತ್ತಲೇ ಇದೆ. ವಿಪರ್ಯಾಸ್ಯವೆಂದರೆ ಮಲೇರಿಯಾ ಬಂದವರು ಚಳಿ ಜ್ವರದಿಂದ ನಡುಗುತ್ತಿದ್ದರೆ, ರೋಗ ಬರದವರು ರೋಗ ತೀವ್ರತೆಯನ್ನು ನೆನೆಸಿ ನಡುಗುತ್ತಿದ್ದಾರೆ. ಲಕ್ಷಾಂತರ ಮಂದಿ ಸಾಯುತ್ತಲೇ ಇದ್ದಾರೆ. ಹೊಸ ಹೊಸ ಔಷಧಿಗಳು, ಹೊಸ ಅಣು ಜೀವಿಗಳು ಹುಟ್ಟುತ್ತಲೇ ಇವೆ. ಸೊಳ್ಳೆಗಳ ರುದ್ರನರ್ತನ ಮಂದುವರಿಯುತ್ತಲೇ ಇದೆ. ಮಲೇರಿಯಾದ ಜೊತೆಗೆ ಇತರ ಡೆಂಘಿ, ಮೆದುಳು ಜ್ವರ, ಆನೆಕಾಲು ರೋಗ, ಚಿಕೂನ್‍ಗೂನ್ಯ ಜ್ವರ ಹೀಗೆ ಸೊಳ್ಳೆಗಳು ಒಂದಾದ ಮೇಲೊಂದರಂತೆ ಮನಕುಲದ ಮೇಲೆ ಪ್ರಹಾರ ಮಾಡುತ್ತಲೇ ಇದೆ.

ಜೀವ ಜಗತ್ತಿನ ಪ್ರಭೇದಗಳಲ್ಲಿ ಕೀಟ ಪ್ರಭೇದ ಬಹಳ ದೊಡ್ಡದು. ಇದರಲ್ಲಿ ಸೊಳ್ಳೆಗಳದ್ದೇ ಸಿಂಹಪಾಲು. ಜಗತ್ತಿನಾದ್ಯಂತ ಜನಿಸುವ ಸೊಳ್ಳೆಗಳಲ್ಲಿ ಶೇಕಡಾ 80ರಿಂದ 90ರಷ್ಟು ಕಾಡುಗಳಲ್ಲಿ ಹುಟ್ಟಿ ಬೆಳೆದು ಸಾಯುತ್ತದೆ. ಕೇವಲ 10ರಿಂದ 20 ಶೇಕಡಾ ಮಾತ್ರ ಮನುಷ್ಯರ ಸಂಪರ್ಕಕ್ಕೆ ಬರುತ್ತದೆ. ಸಂತಸದ ವಿಚಾರವೆಂದರೆ ಈ ಶೇಕಡಾ 10ರಲ್ಲಿ, ಕೇವಲ ನೂರಲ್ಲಿ ಒಂದೆರಡು ಸೊಳ್ಳೆಗಳಿಗೆ ಮಾತ್ರ ಮಾನವನ ರಕ್ತಹೀರುವ ಅವಕಾಶ ದೊರಕುತ್ತದೆ. ಎಲ್ಲಾ ಸೊಳ್ಳೆಗಳಿಗೂ ಮನುಷ್ಯನ ರಕ್ತಹೀರುವ ಅವಕಾಶ ದೊರೆತಲ್ಲಿ ನಮ್ಮ ಉಹೆಗೂ ನಿಲುಕದ ರೋಗಗಳು ಹುಟ್ಟಬಹುದು ಮತ್ತು ಹರಡ ಬಹುದು.

ಸೊಳ್ಳೆಗಳ ನಿಯಂತ್ರಣ ಹೇಗೆ ?

ಕಾಡು ಬಿಟ್ಟು ನಾಡು ಸೇರಿದ ಸೊಳ್ಳೆಗಳಿಗೆ ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ರಕ್ತವೇ ಆಹಾರ. ಕಾಡು ಕಡಿದು ಕಾಂಕ್ರೀಟ್‍ ನಾಡು ಮಾಡಿರುವ ಮನುಷ್ಯನಿಗೆ ಉಚಿತವಾಗಿ ದೊರಕಿದ ಸಂಗಾತಿ ಸೊಳ್ಳೆ ಎಂದರೂ ತಪ್ಪಲ್ಲ. ಕಾಡು ಮೇಡುಗಳಲ್ಲಿ ಹಾಯಾಗಿದ್ದ ಸೊಳ್ಳೆ ಮನೆ ಮಠ ಕಳೆದು ಕೊಂಡು ಬೀದಿಗೆ ಬಿದ್ದಾಗ ಪಾಪ ಹೊಟ್ಟೆ ಪಾಡಿಗಾಗಿ ಮನುಷ್ಯರ ರಕ್ತ ಹೀರಲೇಬೇಕು. ಇದು ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧ. ಹೆಣ್ಣು ಸೊಳ್ಳೆಗಳಿಗೆ ಮೊಟ್ಟೆ ಇಡುವ ಸಮಯದಲ್ಲಿ ರಕ್ತ ಅತೀ ಅಗತ್ಯ. ಇದಕ್ಕಾಗಿ ಇವುಗಳು ಹೆಚ್ಚಾಗಿ ಮನುಷ್ಯನ ಮತ್ತು ಇತರ ಪ್ರಾಣಿಗಳ ರಕ್ತ ಹೀರುತ್ತದೆ.

ಈ ಪ್ರಕ್ರಿಯೆಯಲ್ಲಿ ರೋಗಿಗಳಿಂದ ಹೀರಿದ ರಕ್ತಗಳ ಜೊತೆಗೆ ರೋಗಿಯಲ್ಲಿನ ಜೀವಾಣುಗಳನ್ನು ಹೀರಿಕೊಂಡು ಬಿಡುತ್ತದೆ. ಆ ಬಳಿಕ ಈ ರೋಗಾಣುಯುಕ್ತ ಸೊಳ್ಳೆ ಆರೋಗ್ಯವಂತ ಮನುಷ್ಯರನ್ನು ಕಚ್ಚಿ ತನ್ನಎಂಜಲಿನಲ್ಲಿನ ರೋಗಾಣುಗಳನ್ನು ಆತನಿಗೂ ಹಬ್ಬಿಸಿ ರೋಗವನ್ನು ಹರಡಿಸುತ್ತದೆ. ಹೀಗೆ ಸೊಳ್ಳೆಗಳು ರೋಗವಾಹಕಕೀಟಗಳಾಗಿ ಮನುಕುಲಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದೆ. ಸೊಳ್ಳೆ ನಿಯಂತ್ರಣಕ್ಕೆ ಈ ಕೆಳಗಿನ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

1. ಪರಿಸರದ ಸ್ವಚ್ಛತೆಯನ್ನು ಕಾಪಾಡಬೇಕು. ಪರಿಸರ, ನೀರು ಮತ್ತು ಗಾಳಿ ಕಲುಷಿತಗೊಳ್ಳದ ರೀತಿಯಲ್ಲಿ ನಾವು ಬದುಕಬೇಕಾದ ಅನಿವಾರ್ಯತೆ ಇದೆ ಮತ್ತು ಇತರ ಜೀವ ಸಂಕುಲಗಳನ್ನು ಬದುಕಲು ಬಿಡಬೇಕು.

2. ಸೂಕ್ತ ನೀರಿನ ನಿರ್ವಹಣೆಗಾಗಿ ಬೇಕಾದ ವ್ಯವಸ್ಥೆ ಮಾಡಬೇಕು. ಉತ್ತಮಚರಂಡಿ ವ್ಯವಸ್ಥೆ, ನದಿ, ಕೆರೆ, ತೊರೆ, ಕಾಲುವೆಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.

3. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತ ನೀರು ಸೊಳ್ಳೆಗಳಿಗೆ ಸ್ವರ್ಗವಿದ್ದಂತೆ.

4. ಎಲ್ಲೆಂದರಲ್ಲಿ ಕಸ ಎಸೆಯುವುದು, ತಿಪ್ಪೆಗುಂಡಿಗಳಲ್ಲಿ ನೀರು ನಿಲ್ಲುವುದು, ಘನ ಮತ್ತು ದ್ರವ್ಯ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು ಇತ್ಯಾದಿಗಳಿಂದ ಸೊಳ್ಳೆಗಳ ಸಂಖ್ಯೆ ವೃದ್ಧಿಸುತ್ತದೆ.

5. ಕೃತಕವಾಗಿ ನೀರು ನಿಲ್ಲುವ ಜಾಗಗಳಾದ ತೆಂಗಿನ ಚಿಪ್ಪು, ಹೂದಾನಿ, ಟಯರ್, ಖಾಲಿ ಡಬ್ಬ ಮತ್ತು ಕ್ಯಾನ್‍ಗಳು, ಅಕ್ವೇರಿಯಂ, ಏರ್‍ಕಂಡಿಷನರ್ ಮತ್ತು ಏರ್‍ಕೂಲರ್ ಇತ್ಯಾದಿಗಳಲ್ಲಿ ಸೊಳ್ಳೆ ನಿಲ್ಲದಂತೆ ಮಾಡಿಕೊಳ್ಳಬೇಕು

6. ಸೊಳ್ಳೆ ಮರಿಗಳನ್ನು ತಿನ್ನುವ ಗಪ್ಪಿವಿನುಗಳನ್ನು ಬೆಳೆಸಿ ಸೊಳ್ಳೆಗಳ ನಿಯಂತ್ರಣ ಮಾಡಬೇಕು.

7. ಕೀಡನಾಶಕಗಳ ಬಳಕೆ ಸೊಳ್ಳೆ ನಿಯಂತ್ರಣ ಮಾಡುವ ಔಷಧಿಗಳ ಬಳಕೆ ಮುಂತಾದುವುಗಳಿಂದ ಸೊಳ್ಳೆಗಳ ಸಂತಾನಭಿವೃದ್ಧಿ ಆಗದಂತೆ ಮಾಡಬೇಕು.

8. ಸೊಳ್ಳೆಗಳ ಬೆಳವಣಿಗೆಗೆ ಪೂರಕವಾಗುವಂತಹ ಯಾವುದೇ ರೀತಿಯ ಪರಿಸರ ಮಾಲಿನ್ಯವನ್ನ ತಡೆಗಟ್ಟಬೇಕು.

ವಿಶ್ವ ಸೊಳ್ಳೆಗಳ ದಿನ –ಆಗಸ್ಟ್20

ಜಗತ್ತಿನಾದ್ಯಂತ ಆಗಸ್ಟ್ 20ನ್ನು ವಿಶ್ವ ಸೊಳ್ಳೆಗಳ ದಿನ ಎಂದು ಆಚರಿಸಲಾಗುತ್ತಿದೆ. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಮನುಕುಲದ ಮಹೋನ್ನತಿಗೆ ಮಹತ್ತರ ಕೊಡುಗೆ ನೀಡಿ, 1902ರಲ್ಲಿ ವೈದ್ಯ ವಿಜ್ಞಾನಕ್ಕಾಗಿ ನೊಬೆಲ್ ಪ್ರಶಸ್ತಿ ದೊರೆತ ಭಾರತೀಯ ಸಂಜಾತ ಬ್ರಿಟಿಷ್ ವೈದ್ಯ ಸರ್‍ರೋನಾಲ್ಡ್‍ರೋಸ್‍ ಅವರನ್ನು ಸ್ಮರಿಸುವ ಸುದಿನ. 1897ನೇ ಆಗಸ್ಟ್ 20ರಂದು ತಾನು ಮಾಡಿದ ಸಂಶೋಧನೆಗಳ ಮೂಲಕ ಸೊಳ್ಳೆಗಳಿಂದ ಮನುಷ್ಯನಿಗೆ ಮಲೇರಿಯಾ ಹರಡುತ್ತದೆಎಂದು ಜಗತ್ತಿಗೆ ಸಾರಿಹೇಳಿದ ಸುದಿನ.

ಆ ಮಹಾನ್ ವ್ಯಕ್ತಿಯನ್ನು ಸ್ಮರಿಸುತ್ತಾ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮಾಡಿಸುವ ಸದುದ್ದೇಶದಿಂದ ವಿಶ್ವದಾದ್ಯಂತ ಆಗಸ್ಟ್ 20ರಂದು ವಿಶ್ವ ಸೊಳ್ಳೆಗಳ ದಿನ ಎಂದು ಆಚರಿಸಲಾಗುತ್ತಿದೆ. ಒಟ್ಟಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವ ಮತ್ತು ಸಂಖ್ಯೆ ವೃದ್ಧಿಸುವುದನ್ನು ನಿಯಂತ್ರಿಸುವ ಕೆಲಸಕ್ಕೆ ಹೆಚ್ಚು ಒತ್ತುನೀಡಬೇಕಾದ ತುರ್ತು ಅವಶ್ಯಕತೆ ಇದೆ.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ
ಹೊಸಂಗಡಿ, ಮಂಜೇಶ್ವರ- 671 323
ದೂ.: 04998-273544, 235111  ಮೊ.: 98451 35787
www.surakshadental.com
email: drmuraleemohan@gmail.com

Share this: