Vydyaloka

ಸೊಗದೇ ಬೇರು (ನನ್ನಾರಿ)- ಆರೋಗ್ಯ ಪ್ರಯೋಜನಗಳು

ಸೊಗದೇ ಬೇರು (ನನ್ನಾರಿ) – ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಗರ್ಭಿಣಿಯರಿಂದ ಹಿಡಿದು ಎದೆಹಾಲು ಕೊಡುವ ತಾಯಂದಿರವರೆಗೆ ಎಲ್ಲರೂ ಬಳಸಬಹುದು.

ಈ ಬೇಸಿಗೆಯಲ್ಲಿ ದೇಹಕ್ಕೆ ಮತ್ತು ಮನಸ್ಸಿಗೆ ತಂಪು ನೀಡುವ, ವೈರಸ್ ಗಳನ್ನು ನಿರೋಧಿಸುವ ಗುಣವಿರುವ ಒಂದು ವಿಶೇಷ ಗಿಡದ ಬಗ್ಗೆ ಇಂದು ತಿಳಿದುಕೊಳ್ಳೋಣ. ಬಹುತೇಕ ಎಲ್ಲ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುವ ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಗರ್ಭಿಣಿಯರಿಂದ ಹಿಡಿದು ಎದೆಹಾಲು ಕೊಡುವ ತಾಯಂದಿರವರೆಗೆ ಎಲ್ಲರೂ ಬಳಸಬಹುದು. ಅದೇ ಸೊಗದೇ ಬೇರು ಅಥವಾ ನನ್ನಾರಿ. ಇದರ ಬಳ್ಳಿಗೆ ಹಾಲು ಬರುವ ಕಾರಣ ಹಾಲು ಬಳ್ಳಿ ಬೇರು ಎಂದೂ ಕರೆಯುತ್ತಾರೆ. ಪೂರ್ತಿ ಬೇರನ್ನು ತೆಗೆಯಲಾಗದಷ್ಟು ಆಳಕ್ಕೆ ಬೇರು ಬಿಡುವ ಕಾರಣ ’ಅನಂತಮೂಲ’ ಎಂದೂ ಕರೆಯುತ್ತಾರೆ.

ನಮ್ಮ ದೇಹಕ್ಕೆ ತೊಂದರೆ ಕೊಡುವ ಹಲವಾರು ವೈರಸ್ ಗಳ ವಿರುದ್ಧ ಹೋರಾಡಲು ಇದು ದೇಹಕ್ಕೆ ಚೈತನ್ಯ ಕೊಡುತ್ತದೆ ಎಂಬುದು ಸಾಬೀತಾಗಿದೆ. ವಿಶೇಷವಾಗಿ ಸರ್ಪಸುತ್ತಿಗೆ ಕಾರಣವಾಗುವ ವೈರಸ್ ಅನ್ನು ನಿರೋಧಿಸುವ ಗುಣ ಇದಕ್ಕಿದೆ. ಏಡ್ಸ್ ವೈರಸ್ ವಿರುದ್ಧ ಕೆಲಸ ಮಾಡುವ ತಾಕತ್ತು ಕೂಡಾ ಇದಕ್ಕಿದೆ. ಅಮೃತಬಳ್ಳಿ, ಶುಂಠಿ, ನೆಲನೆಲ್ಲಿ, ಅರಿಶಿನ, ಜೇಷ್ಠಮಧು (ಎಲ್ಲವೂ ಗ್ರಂಥಿಗೆ ಅಂಗಡಿಗಳಲ್ಲಿ ಲಭ್ಯ) ಇವುಗಳನ್ನು ತಲಾ ಎರಡು ಗ್ರಾಂ ಹಾಕಿ 4 ಲೋಟ ನೀರಿನಲ್ಲಿ ಕುದಿಸಿ ಒಂದು ಲೋಟಕ್ಕೆ ಇಳಿಯುತ್ತಿದ್ದಂತೆ ಅದಕ್ಕೆ ಮೂರು ಗ್ರಾಂ ಈ ಸೊಗದೇ ಬೇರು ಅಥವಾ ಅದರ ಪುಡಿಯನ್ನು ಹಾಕಿ ಬೆಂಕಿ ಆರಿಸಿ ಮುಚ್ಚಿಡಬೇಕು. ಈ ಕಷಾಯ ತಣಿದ ನಂತರ ಕುಡಿದರೆ ದೇಹಕ್ಕೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಜೊತೆಗೆ ಸೊಗದೇ ಬೇರಿರುವ ಕಾರಣದಿಂದ ಉಷ್ಣತೆಯಾಗುವುದಿಲ್ಲ.

ದೇಹದಲ್ಲಿ ಉಷ್ಣತೆಯ ಕಾರಣದಿಂದ ಪದೇ ಪದೇ ಚರ್ಮರೋಗ, ಮೊಡವೆ, ದೇಹ ಕಪ್ಪಾಗುವುದು, ಉರಿಮೂತ್ರ, ಹಸ್ತ ಪಾದಗಳು ಉರಿಯಾಗುವುದು, ಮುಟ್ಟಿನ ಸಮಯದಲ್ಲಿ ಅತಿಯಾಗಿ ರಕ್ತಸ್ರಾವವಾಗುವುದು, ಬಿಳಿ ಮುಟ್ಟಿನ ಸಮಸ್ಯೆಯಾಗುವುದು ಇಂತಹ ತೊಂದರೆಗಳಾಗುತ್ತಿದ್ದರೆ ಈ ಬೇರನ್ನು ಬಳಸಬೇಕು. ಇದರಿಂದ ದೇಹದ ಕಾಂತಿ ಕೂಡಾ ಹೆಚ್ಚುತದೆ. ಮನಸ್ಸು ಶಾಂತವಾಗುತ್ತದೆ. ವೀರ್ಯವೃದ್ಧಿಯಾಗುತ್ತದೆ. ಬಾಯಿ ರುಚಿ ಕಡಿಮೆಯಾಗಿದ್ದರೆ, ಒಣಕೆಮ್ಮು, ವಿಷದೋಷ, ಪದೇಪದೇ ಜ್ವರ, ಭೇದಿಗಳಿದ್ದರೂ ಕಡಿಮೆಯಾಗುತ್ತದೆ. ತಂಪು ಗುಣ ಹೊಂದಿದ್ದರೂ ಅಗ್ನಿವೃದ್ಧಿ ಮಾಡಿ ಅಜೀರ್ಣವನ್ನು ಕಡಿಮೆ ಮಾಡುತ್ತದೆ. ರಕ್ತಶುದ್ಧಿ ಮಾಡುವ ಗುಣವಿರುವ ಕಾರಣ ಚರ್ಮರೋಗಗಳಲ್ಲಿ, ವಿಶೇಷವಾಗಿ ಪಿತ್ತದಿಂದ ಆದ ಚರ್ಮರೋಗದಲ್ಲಿ ಅತ್ಯಂತ ಉಪಯುಕ್ತವಾದದ್ದು. ಮೂತ್ರಮಾರ್ಗದ ಸಮಸ್ಯೆಗಳಲ್ಲಂತೂ ಇದು ಅತ್ಯಂತ ವಿಶೇಷ ಗುಣಕಾರಿ. ಕಿಡ್ನಿಯ ಬಾವಿನಿಂದ ಮೂತ್ರ ಸರಿಯಾಗಿ ಆಗದಿದ್ದಾಗ ಇದನ್ನು ಬಳಸಬೇಕು ಎಂದು ಹಲವಾರು ಆಧುನಿಕ ಸಂಶೋಧನೆಗಳೇ ಹೇಳಿವೆ. ಮೂತ್ರದಲ್ಲಿ ಉರಿ, ಉಷ್ಣದ ಕಾರಣದಿಂದ ಸರಾಗವಾಗಿ ಮೂತ್ರವಾಗದಿದ್ದರೆ, ಮೂತ್ರ ಮಾಡುವ ಜಾಗದಲ್ಲಿ ಹುಣ್ಣುಗಳಾಗುತ್ತಿದ್ದರೆ ಇದರ ಬಳಕೆ ಅತ್ಯಂತ ಲಾಭದಾಯಕ. ಎಷ್ಟೋ ಜನರಿಗೆ ಹಸ್ತ ಪಾದಗಳಲ್ಲಿ ಅತಿಯಾಗಿ ಬೆವರುವ ಕಾರಣ ತುಂಬಾ ಹಿಂಸೆಯಾಗುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಶ್ರೀಗಂಧದ ಚೂರುಗಳ ಕಷಾಯ ಮಾಡಿ ಅದಕ್ಕೆ ಈ ಸೊಗದೇ ಬೇರನ್ನು ಹಾಕಿ ಕುಡಿಯುವುದು ಸಹಾಯಕ.

ಇದರ ಬೇರನ್ನು ತಂದು ಹಾಲಿನಲ್ಲಿ ತೇಯ್ದು ಅಥವಾ ಪುಡಿಯನ್ನು ಹಾಲಿನಲ್ಲಿ ಹಾಕಿ ಕುಡಿಯಬಹುದು. ಪ್ರತಿದಿನ ಅರ್ಧ ಚಮಚದಷ್ಟು ಬಳಕೆ ಮಾಡಬಹುದು. ನಿತ್ಯ ಕಷಾಯ ಕುಡಿಯುವ ರೂಢಿಯಿದ್ದರೆ ಕಷಾಯ ಪುಡಿಗೆ ಇದನ್ನು ಸೇರಿಸಿಟ್ಟುಕೊಳ್ಳಬಹುದು. ಆದರೆ ಇದನ್ನು ತುಂಬಾ ಕುದಿಸುವುದು ಸರಿಯಲ್ಲ. ಕಷಾಯ ತಯಾರಾಗುತ್ತಿದ್ದಂತೆ ಇದನ್ನು ಹಾಕಿ ಬೆಂಕಿ ಆರಿಸುವುದು ಸೂಕ್ತ. ಇದು ಸೌಂದರ್ಯ ವರ್ಧಕವೂ ಹೌದು. ಹಾಲಿನಲ್ಲಿ ಇದರ ಪುಡಿಯನ್ನು ಕಲಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಕಪ್ಪುಕಲೆಗಳು ಹೋಗುವುದಲ್ಲದೇ ಮುಖದ ಕಾಂತಿ ಕೂಡಾ ಹೆಚ್ಚುತ್ತದೆ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this: