Vydyaloka

ಸೋದರ ಸಂಬಂಧಿಗಳಲ್ಲಿ ವಿವಾಹ

ಸೋದರ ಸಂಬಂಧಿಗಳಲ್ಲಿ ವಿವಾಹ ಹಲವಾರು ಕಾರಣಗಳಿಂದ ಕಂಡು ಬರುತ್ತಿದೆ. ಸಾಧ್ಯವಾದ ಮಟ್ಟಿಗೆ ರಕ್ತಸಂಬಂಧಿಗಳು ಪರಸ್ಪರ ವಿವಾಹವಾಗುವುದನ್ನು ತಪ್ಪಿಸುವುದು ಒಳ್ಳೆಯದು.  ನೆಮ್ಮದಿ ಮತ್ತು ಆರೋಗ್ಯವಂತ ಕುಟುಂಬವನ್ನು ಹೊಂದಬೇಕಾದರೆ ಮತ್ತು ಬಂಜೆತನವನ್ನು ತಡೆಗಟ್ಟಲು ಆದಷ್ಟು ಮಟ್ಟಿಗೆ ರಕ್ತಸಂಬಂಧಿಗಳ ವಿವಾಹ ಮಾಡುವುದನ್ನು ತಡಗಟ್ಟುವುದು ಸೂಕ್ತ.

ಜೀವನದಲ್ಲಿ ಮದುವೆ ಎಂಬುದು ಒಂದು ಪ್ರಮುಖ ಅಧ್ಯಾಯ. ಮದುವೆಯ ಪರಿಕಲ್ಪನೆ ನಮ್ಮ ಸಂಸ್ಕøತಿಯ ಒಂದು ಅವಿಭಾಜ್ಯ ಅಂಗ. ಜೀವಂತಿಕೆಯ ಸಂಕೇತವಾಗಿ, ಸಂಪ್ರದಾಯದ ಚೌಕಟ್ಟಿನೊಳಗೆ ನಡೆಯುವ ಒಂದು ಕಾರ್ಯಕ್ರಮ ವಿವಾಹ. ಹದಿಹರೆಯದ ಹೆಣ್ಣು ಗಂಡುಗಳನ್ನು ಧರ್ಮದ ನೆಲೆಗಟ್ಟಿನಲ್ಲಿ, ಪವಿತ್ರ ವಿಧಿವಿಧಾನಗಳ ಮೂಲಕ ಗುರು ಹಿರಿಯರ ಆಶೀರ್ವಾದದ ಮೂಲಕ ದಾಂಪತ್ಯ ಜೀವನಕ್ಕೆ ಪ್ರವೇಶಿಸುವ ಶುಭಗಳಿಗೆಯೇ ವಿವಾಹ. ಬ್ರಹ್ಮಚರ್ಯವನ್ನು ದಾಟಿ ಗೃಹಸ್ಥಾ ಶ್ರಮಕ್ಕೆ ಕಾಲಿಡುವ ಸುಸಂದರ್ಭದಲ್ಲಿ ಧರ್ಮೇಚ, ಅರ್ಥೇಚ, ಕಾಮೇಚ, ನಾತಿಚರಾಮಿ ಎಂದು ಅಗ್ನಿಸಾಕ್ಷಿಯಾಗಿ ನೀಡುವ ವಾಗ್ದಾನದಲ್ಲಿ ಇಡೀ ದಾಂಪತ್ಯ ಜೀವನದ ಕಲ್ಪನೆಯೇ ಅಡಕವಾಗಿದೆ.

ವಿವಾಹದ ಉದ್ದೇಶಗಳು:

ವಿವಾಹದ ಪ್ರಮುಖ ಉದ್ದೇಶಗಳಲ್ಲಿ ಸ್ತ್ರೀ ಪುರುಷರಿಬ್ಬರೂ ಮನುಕುಲವನ್ನು ಮುಂದುವರೆಸುವ ಕಾಯಕಲ್ಪವೇ ಅಡಗಿದೆ. ಜೊತೆಗೆ ಸ್ತ್ರೀ ಪುರುಷರಿಬ್ಬರೂ ತಮ್ಮ ಕೌಟುಂಬಿಕ ಚೌಕಟ್ಟಿನಲ್ಲಿಯೇ ದೈಹಿಕ ಕಾಮನೆಗಳನ್ನು ಆರೋಗ್ಯಕರವಾಗಿ ಪಡೆಯಲು ಮಾಡಿರುವ ಸಾಮಾಜಿಕ ಪದ್ಧತಿಯಾಗಿ ವಿವಾಹ ಕಂಡುಬರುತ್ತದೆ. ತಾರುಣ್ಯದ ಹೊಸ್ತಿಲಲ್ಲಿರುವ ಹದಿಹರೆಯದ ಗಂಡು ಹೆಣ್ಣುಗಳನ್ನು ಸಾಮಾಜಿಕವಾಗಿ, ಧಾರ್ಮಿಕವಾಗಿ, ನೈತಿಕವಾಗಿ, ಸಮಾಜಮುಖಿಯಾಗಿ ಕುಟುಂಬ, ಸಂಸಾರ ಎಂಬ ಬಂಧದಲ್ಲಿ ಒಂದುಗೂಡಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ವಿವಾಹ ಪ್ರಮಖ ಪಾತ್ರ ವಹಿಸುತ್ತದೆ.

ವಿವಾಹದ ಬಗೆಗಳು:

ಹಿಂದಿನಿಂದ ಇಂದಿನವರೆಗೂ ಸಾಗುತ್ತ ಬಂದಿರುವ ವಿವಾಹ ಪದ್ಧತಿಗಳಲ್ಲಿ ಹಲವಾರು ಬಗೆಗಳಿವೆ. ಅವುಗಳಲ್ಲಿ ಗಾಂಧರ್ವ ವಿವಾಹ, ಸ್ವಯಂವರ, ಬಾಲ್ಯವಿವಾಹ, ಪ್ರೇಮ ವಿವಾಹ, ನಿರ್ಧಾರಿತ ವಿವಾಹ ಮುಖ್ಯವಾದವುಗಳು.

1. ಗಾಂಧರ್ವ ವಿವಾಹ: ಇದು ಪ್ರಾಚೀನ ಕಾಲದ ಒಂದು ವಿವಾಹ ಪದ್ಧತಿ. ಹಿಂದೆ ರಾಜಮಹಾರಾಜರುಗಳು ಅನುಸರಿಸುತ್ತಿದ್ದ ಈ ಪದ್ಧತಿಯಲ್ಲಿ ಗಂಡು ಹೆಣ್ಣು ಪರಸ್ಪರ ಮೋಹಿಸಿ, ಪಂಚಭೂತಗಳನ್ನು ಸಾಕ್ಷಿಯಾಗಿ ಇಟ್ಟುಕೊಂಡು ವಿವಾಹವಾಗುತ್ತಿದ್ದರು. ಪುರಾಣಗಳಲ್ಲಿ ದುಶ್ಯಂತ ಮಹಾರಾಜ ಶಾಕುಂತಲೆಯನ್ನು ವರಿಸಿದ್ದು ಗಾಂಧರ್ವ ರೀತಿಯ ವಿವಾಹದಿಂದ ಎಂದು ಓದಿದ್ದೇವೆ. ಆದರೆ ಈ ವಿವಾಹ ಪದ್ಧತಿ ಈಗ ಬಳಕೆಯಲ್ಲಿಲ್ಲ.

2. ಸ್ವಯಂವರ: ಪುರಾಣ ಕಾಲದಲ್ಲಿ ನಾವು ಅನೇಕ ಬಗೆಯ ಸ್ವಯಂವರ ಪದ್ಧತಿಯ ವಿವಾಹಗಳನ್ನು ಕಾಣುತ್ತೇವೆ. ರಾಜಕನ್ಯೆಯರಿಗೆ ವರನನ್ನು ಆಯ್ಕೆ ಮಾಡುವಾಗ ಅನೇಕ ರೀತಿಯ ಸ್ಪರ್ಧೆಗಳನ್ನು ಹೂಡಿ ಅದರಲ್ಲಿ ವಿಜೇತರಾದವರಿಗೆ ವಧುವನ್ನು ನೀಡುವ ಹಾಗೂ ವಧುವೇ ಸ್ವತಃ ವರನನ್ನು ಹೂಮಾಲೆ ಹಾಕಿ ವರಿಸುವ ವಿಧಾನವೂ ಈ ಸ್ವಯಂವರ ಪದ್ಧತಿಯಲ್ಲಿದೆ. ರಾಮ ಸೀತೆಯನ್ನು ವರಿಸಿದ್ದು, ಅರ್ಜುನ ದ್ರೌಪದಿಯನ್ನು ಗೆದ್ದದ್ದು ಈ ಸ್ವಯಂವರ ಪದ್ಧತಿಯಿಂದಲೇ ಎಂದು ಹೇಳಲ್ಪಟ್ಟಿದೆ. ಇತಿಹಾಸದಲ್ಲಿ ರಾಜಕನ್ಯೆ ಸಂಯುಕ್ತೆ ರಜಪೂತ ದೊರೆ ಪೃಥ್ವಿರಾಜನನ್ನು ಸ್ಯಯಂವರ ಪದ್ಧತಿಯಿಂದ ವಿವಾಹವಾಗಿದ್ದು ಕಂಡುಬರುತ್ತದೆ.

3. ಬಾಲ್ಯವಿವಾಹ: ಹಿಂದಿನ ಕಾಲದಲ್ಲಿ ಈ ಬಾಲ್ಯ ವಿವಾಹ ಪದ್ಧತಿ ರೂಢಿಯಲ್ಲಿತ್ತು. ಈಗಲೂ ಕೆಲವು ಕಡೆ ಕಂಡುಬರುತ್ತದೆ. ಈ ಪದ್ಧತಿಯಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಈ ವಿವಾಹದಿಂದ ಹುಡುಗ ಹುಡುಗಿಯರಲ್ಲಿ ದೈಹಿಕವಾಗಿ, ಮಾನಸಿಕವಾಗಿ ಬೆಳವಣಿಗೆ ಯಾಗಿರುವುದಿಲ್ಲ. ಇದರಿಂದ ಮುಂದೆ ಅವರಲ್ಲಿ ಬಿರುಕು ಮೂಡಬಹುದು. ಬೆಳೆಯುತ್ತಾ ಹೋದಂತೆ ಒಬ್ಬರಿಗೊಬ್ಬರು ಇಷ್ಟವಾಗದೇ ಹೋಗಬಹುದು. ಇದರಿಂದ ಅವರು ಜೀವನಪೂರ್ತಿ ನೆಮ್ಮದಿಯಿಂದ, ಸಂತೋಷದಿಂದ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಆದುದರಿಂದಲೇ ಸರ್ಕಾರವು ಹುಡುಗಿಗೆ 18 ವರ್ಷ, ಹುಡುಗನಿಗೆ 21 ವರ್ಷ ವಯಸ್ಸಾಗುವವರೆಗೂ ವಿವಾಹ ಮಾಡಬಾರದೆಂದೂ, ಹಾಗೇನಾದರೂ ಮಾಡಿದರೆ ಕಾನೂನಿನ ಪ್ರಕಾರ ಅಪರಾಧ ಎಂದು ಕಾನೂನು ಮಾಡಿದೆ. ಆದುದರಿಂದ ಈ ರೀತಿಯ ವಿವಾಹವನ್ನು ಯಾರೂ ಮಾಡಬಾರದೆಂದೂ, ಹಾಗೆ ಮಾಡುತ್ತಿದ್ದರೆ ಅದು ಅಪರಾಧವೆಂದು ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.

4. ಪ್ರೇಮ ವಿವಾಹ: ಪುರಾಣ ಕಾಲದಲ್ಲಿ ನಳ ದಮಯಂತಿಯರು ಪರಸ್ಪರ ಪ್ರೇಮಿಸಿ ಮದುವೆಯಾಗಿರುವುದನ್ನು ಕೇಳಿದ್ದೇವೆ. ಅದರಂತೆ ಇತಿಹಾಸದಲ್ಲೂ ಸಾಕಷ್ಟು ಅಮರ ಪ್ರೇಮಿಗಳನ್ನು ಕಂಡಿದ್ದೇವೆ. ಇಂದಿನ ಆಧುನಿಕ ಯುಗದಲ್ಲಿ ಪ್ರೇಮ ವಿವಾಹಕ್ಕೆ ಮನ್ನಣೆಯಿದ್ದು, ಪರಸ್ಪರ ಪ್ರೀತಿಸಿ ಮದುವೆಯಾಗುವುದನ್ನು ಕಾಣುತ್ತಿದ್ದೇವೆ. ಇಂದಿಗೂ ಪ್ರಚಲಿತವಿರುವ ವಿವಾಹ ಪದ್ಧತಿ ಈ ಪ್ರೇಮ ವಿವಾಹ.

5. ನಿರ್ಧಾರಿತ ವಿವಾಹ: ವರನ ತಂದೆ ತಾಯಿ ಹಾಗೂ ವಧುವಿನ ತಂದೆ ತಾಯಿ ತಾವೇ ಸ್ವತಃ ಆಯ್ಕೆ ಮಾಡಿ ನಡೆಸುವ ವಿವಾಹ ಈ ನಿರ್ಧಾರಿತ ವಿವಾಹ. ಈ ಬಗೆಯ ವಿವಾಹವೇ ಇಂದು ಹೆಚ್ಚಾಗಿ ಪ್ರಚಲಿತವಿದ್ದರೂ ಈ ಪದ್ಧತಿಯಲ್ಲಿ ಕಂಡುಬರುವ ರಕ್ತ ಸಂಬಂಧಿಗಳಲ್ಲಿ ವಿವಾಹ ಪದ್ಧತಿಯು ವೈದ್ಯಕೀಯ ಹಾಗೂ ವೈಜ್ಞಾನಿಕವಾಗಿ ಸಮ್ಮತವಲ್ಲದ ಒಂದು ವಿವಾಹ ಪದ್ಧತಿಯಾಗಿದೆ.

6. ರಕ್ತ ಸಂಬಂಧಿಗಳಲ್ಲಿ ವಿವಾಹ: ಹಿಂದಿನ ಕಾಲದಿಂದ ಇಂದಿನವರೆಗೂ ರಕ್ತ ಸಂಬಂಧಿ ಅಥವಾ ಸೋದರ ಸಂಬಂಧಿಗಳಲ್ಲಿ ವಿವಾಹವಾಗುವುದನ್ನು ಕಾಣುತ್ತಿದ್ದೇವೆ. ರಕ್ತ ಸಂಬಂಧಿ ಅಥವಾ ಸೋದರ ಸಂಬಂಧಿಗಳಲ್ಲಿ ವಿವಾಹ ಎಂದರೆ ಸೋದರ ಮಾವನ ಮಕ್ಕಳನ್ನು, ಸೋದರತ್ತೆಯ ಮಕ್ಕಳನ್ನು, ಅಪ್ಪನ ಮಕ್ಕಳನ್ನೂ ಮದುವೆ ಆಗುವ ಪದ್ಧತಿ ಹಿಂದೂ ಸಂಸ್ಕೃತಿಯಲ್ಲಿದೆ. ಅದರಂತೆ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳನ್ನು ಮದುವೆ ಆಗುವ ಪದ್ಧತಿ ಮುಸ್ಲಿಂ ಜನಾಂಗದಲ್ಲಿದೆ. ಇದನ್ನೇ ಸೋದರ ಸಂಬಂಧಿಗಳಲ್ಲಿ ವಿವಾಹ ಅಥವಾ ರಕ್ತಸಂಬಂಧಿಗಳಲ್ಲಿ ವಿವಾಹ ಎಂದು ಕರೆಯಲಾಗುವುದು. ಆದರೆ ಸೋದರ ಸಂಬಂಧಿಗಳಲ್ಲಿ ಅಥವಾ ರಕ್ತಸಂಬಂಧಿಗಳಲ್ಲಿ ವಿವಾಹ ಆಗುವುದು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳಬೇಕಾದುದು ಅತ್ಯಗತ್ಯವಾಗಿದೆ.

ಸೋದರ ಸಂಬಂಧಿಗಳ ರೇಖಾನಕ್ಷೆ-ವಿಧಗಳು:

ಈ ರೇಖಾನಕ್ಷೆಯಲ್ಲಿ ಮಗುವಿನ ಎರಡು ತಲೆಮಾರಿನ ಸೋದರ ಸಂಬಂಧಿಗಳನ್ನು ಕಾಣಬಹುದು.
ಚಿತ್ರದ ವಿವರಣೆ: ಚಿತ್ರದಲ್ಲಿರುವ ಎಲ್ಲರೂ ಮಗುವಿನ ರಕ್ತಸಂಬಂಧಿಗಳೇ. ಇವರ್ಯಾರನ್ನು ಮದುವೆಯಾಗುವಂತಿಲ್ಲ. ಅದರಲ್ಲೂ ಮುಖ್ಯವಾಗಿ ಮೊದಲ ಸೋದರ ಸಂಬಂಧಿಗಳು ಮತ್ತು ತಂದೆ /ತಾಯಿಯರ ಸೋದರ, ಸೋದರಿಯರನ್ನು ಮದುವೆಯಾಗಲೇಬಾರದು.

ಸೋದರ ಸಂಬಂಧಿಗಳನ್ನು ಹಲವಾರು ವಿಧಗಳಲ್ಲಿ ಗುರುತಿಸಬಹುದು. ಅದರಲ್ಲೂ ಮುಖ್ಯವಾಗಿ

1. ಮೊದಲನೇ ಹಂತದ ಸಂಬಂಧಿಗಳು: ಇವರುಗಳು ಮಗುವಿನ ಅಜ್ಜ-ಅಜ್ಜಿಯ (ತಂದೆ-ತಾಯಿಯ ಅಪ್ಪ ಮತ್ತು ಅಮ್ಮ) ಮಕ್ಕಳು ಮತ್ತು ಮೊಮ್ಮಕ್ಕಳು ಇವರುಗಳನ್ನು ಮದುವೆಯಾಗಲೇಬಾರದು.
2. ಎರಡನೇ ಹಂತದ ಸೋದರ ಸಂಬಂಧಿಗಳು: ಮಗುವಿನ ಮುತ್ತಜ್ಜ ಮತ್ತು ಮುತ್ತಜ್ಜಿಯರ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳು ಇವರುಗಳನ್ನು ಮದುವೆ ಆಗುವುದನ್ನು ತಪ್ಪಿಸುವುದು ಒಳ್ಳೆಯದು.

ಸೋದರ ಸಂಬಂಧಿಗಳಲ್ಲಿ ವಿವಾಹದ ಉದ್ದೇಶಗಳು:

ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ಪರಸ್ಪರ ಸೋದರ ಸಂಬಂಧಿಗಳಲ್ಲಿ ವಿವಾಹವಾಗುವಂತಹ ಸನ್ನಿವೇಶಗಳು ಹೆಚ್ಚಾಗಿ ಕಂಡು ಬರುತ್ತಿದೆ. ಅಧಿಕವಾಗಿರುವ ಆಸ್ತಿಯನ್ನು, ವ್ಯಾಪಾರ ವಹಿವಾಟನ್ನು ರಕ್ತಸಂಬಂಧಿಗಳಲ್ಲೇ ಹಂಚಿಕೊಳ್ಳಬೇಕೆಂಬ ಮನೋವಾಂಛಲ್ಯದಿಂದ ಇಂತಹ ವಿವಾಹಗಳಿಗೆ ಕುಟುಂಬದ ಹಿರಿಯರು ಪ್ರೋತ್ಸಾಹ ಮಾತ್ರವಲ್ಲ, ಒತ್ತಡವನ್ನೂ ಹೇರುತ್ತಿದ್ದಾರೆ. ಸೋದರ ಸಂಬಂಧಿಗಳಾಗಿರುವ ತರುಣ, ತರುಣಿಯರು ಪರಸ್ಪರ ವಿವಾಹವಾಗುವ ಇಚ್ಛೆ ಇಲ್ಲದಿದ್ದರೂ ಪೋಷಕರ ನಿರಂತರ ಒತ್ತಡಕ್ಕೆ ಒಳಗಾಗಿ ಅಥವಾ ತಮಗೆ ಸಿಗಬಹುದಾದ ಆಸ್ತಿ ಮತ್ತು ಇನ್ನಿತರ ಸೌಲಭ್ಯಗಳಿಗಾಗಿ ವಿವಾಹವಾಗುತ್ತಾರೆ.

ಇಂತಹ ವಿವಾಹಗಳಿಂದ ಯಾವ ರೀತಿ ದಾಂಪತ್ಯ ಜೀವನ ನಡೆಸಬೇಕೋ ಅದಕ್ಕೆ ವಿರುದ್ಧವಾಗಿ ಬಾಳ್ವೆ ನಡೆಸಬೇಕಾದಂತಹ ಪರಿಸ್ಥಿತಿ ಏರ್ಪಟ್ಟು ದಾಂಪತ್ಯ ಜೀವನ ವಿಫಲವಾಗುತ್ತಿರುವ ಉದಾಹರಣೆಗಳೂ ಸಾಕಷ್ಟಿವೆ. ಪ್ರೀತಿ, ಪ್ರೇಮ, ಪರಸ್ಪರ ಒಲವಿನಿಂದ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಬದುಕಬೇಕಾದ ಯುವ ದಂಪತಿಗಳು ಒಲ್ಲದ ಮನಸ್ಸಿನಿಂದ ತಂದೆ, ತಾಯಿಗಳ ಅಥವಾ ಹಿರಿಯರ ಒತ್ತಡಕ್ಕೆ ಒಳಗಾಗಿ ತಮ್ಮ ಸುಖಮಯ ದಾಂಪತ್ಯವನ್ನು ನಿರಾಶಮಯವಾಗಿ ಮಾಡಿಕೊಳ್ಳುತ್ತಾರೆ. ಯಾವುದೋ ಒತ್ತಡಕ್ಕೆ ಒಳಗಾಗಿ ಸೋದರ ಸಂಬಂಧಿಗಳಲ್ಲೇ ವಿವಾಹವಾಗುವ ಅನೇಕ ಜೋಡಿಗಳಲ್ಲಿ ಇರಲೇಬೇಕಾದ ಪರಸ್ಪರ ಅರಿವಿನ ಪ್ರೀತಿ, ವಿಶ್ವಾಸಗಳಿಂದ ವಂಚಿತರಾಗಿ ಮೂಕವೇದನೆಯನ್ನು ಅನುಭವಿಸುತ್ತಿದ್ದಾರೆ.

ಸೋದರ ಸಂಬಂಧಿಗಳ ವಿವಾಹದಿಂದಾಗುವ ದುಷ್ಪರಿಣಾಮಗಳು:

ಈ ರೀತಿ ಹತ್ತಿರದ ರಕ್ತಸಂಬಂಧಿಗಳನ್ನು ಮದುವೆಯಾಗುವುದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.

1. ಇಂತಹ ದಂಪತಿಗಳಿಗೆ ಹುಟ್ಟುವ ಮಕ್ಕಳಲ್ಲಿ ಅಂಗವಿಕಲತೆ ಉಂಟಾಗುವ ಸಾಧ್ಯತೆ ಸಾಮಾನ್ಯ ದಂಪತಿಗಳಿಗಿಂತ ಹತ್ತು ಪಟ್ಟು ಹೆಚ್ಚಾಗಿರುತ್ತದೆ. ಈ ದಂಪತಿಗಳಲ್ಲಿ ಗರ್ಭಪಾತಗಳೂ ಅಧಿಕ, ಬಂಜೆತನವೂ ಸಹ ಹೆಚ್ಚಾಗಿ ಕಂಡುಬರುತ್ತದೆ.

2. ದಾಂಪತ್ಯ ಸುಖದಿಂದಲೂ ಅತೃಪ್ತರಾಗುವ ಈ ದಂಪತಿಗಳಿಗೆ ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಅಂಗಹೀನತೆ, ಹೃದಯದ ಕಾಯಿಲೆಗಳು, ಶ್ವಾಸಕೋಶದ ತೊಂದರೆಗಳು, ವಾಕ್ ಮತ್ತು ಶ್ರವಣ ದೋಷ ಮುಂತಾದ ತೊಂದರೆಗಳು ಉಂಟಾಗುತ್ತವೆ.

3. ಕೆಲವು ಪ್ರಕರಣಗಳಲ್ಲಿ ‘ಸಂತಾನಹೀನತೆ’ಯೂ ಉಂಟಾಗಿ ವಂಶಾಭಿವೃದ್ಧಿಯೇ ಇಲ್ಲದಂತಾಗಿ ಕುಟುಂಬದಲ್ಲಿ ಅಶಾಂತ ವಾತಾವರಣದಿಂದಾಗಿ ಎಲ್ಲರೂ ಮಾನಸಿಕ ಕ್ಷೋಭೆಗೆ ಒಳಗಾಗಿರುವುದನ್ನು ನಾವು ಗಮನಿಸಿದ್ದೇವೆ.

4. ಸಾಧ್ಯವಾದ ಮಟ್ಟಿಗೆ ರಕ್ತಸಂಬಂಧಿಗಳು ಪರಸ್ಪರ ವಿವಾಹವಾಗುವುದನ್ನು ತಪ್ಪಿಸುವುದು ಒಳ್ಳೆಯದು. ಇದರಿಂದ ಅವರುಗಳ ಕುಟುಂಬ ಮಾತ್ರವಲ್ಲ, ಸಮಾಜವೂ ಸಹ ನೆಮ್ಮದಿಯಿಂದ ಬಾಳ್ವೆ ನಡೆಸಬಹುದು.

5. ಅನೇಕ ಸಂದರ್ಭಗಳಲ್ಲಿ ಮದುವೆಯಾದ ರಕ್ತಸಂಬಂಧಿಗಳಲ್ಲಿ ಇಂತಹ ಯಾವುದೇ ವಿಕೃತಿಗಳು ಕಂಡುಬಾರದಿರುವ ಪ್ರಕರಣಗಳೂ ಇವೆ. ಆದ್ದರಿಂದ ಬೆರಳೆಣಿಕೆಯಷ್ಟು ಪ್ರಮಾಣದಲ್ಲಿ ಸಿಗಬಹುದಾದ ಕೆಲವು ಒಂದೆರಡು ಪ್ರಕರಣಗಳಿಂದ ಇಡೀ ಸಮುದಾಯಕ್ಕೆ ಒಳ್ಳೆಯದಾಗುತ್ತದೆ ಎಂಬುದು ಸರಿಯಲ್ಲ.

6. ಬುದ್ಧಿಮಾಂದ್ಯ ಮತ್ತು ವಿಕಲಾಂಗ ಶಿಶುಗಳನ್ನು ಪರೀಕ್ಷಿಸಿದಾಗ ಬಹುತೇಕ ಪ್ರಕರಣಗಳಲ್ಲಿ ರಕ್ತಸಂಬಂಧಿಗಳನ್ನು ವಿವಾಹವಾಗಿರುವ ಅಂಶ ಕಂಡುಬಂದಿದೆ. ಅಲ್ಲದೆ ದೇಶ ವಿದೇಶಗಳಲ್ಲಿ ಕೈಗೊಳ್ಳಲಾದ ನೂರಾರು ಸಂಶೋಧನೆಗಳಿಂದಲೂ, ಪರಿಶೀಲನೆಯಿಂದಲೂ ಇದು ದೃಢ ಪಟ್ಟಿದೆ.

7. ನೆಮ್ಮದಿ ಮತ್ತು ಆರೋಗ್ಯವಂತ ಕುಟುಂಬವನ್ನು ಹೊಂದಬೇಕಾದರೆ ಮತ್ತು ಬಂಜೆತನವನ್ನು ತಡೆಗಟ್ಟಲು ಆದಷ್ಟು ಮಟ್ಟಿಗೆ ರಕ್ತಸಂಬಂಧಿಗಳ ವಿವಾಹ ಮಾಡುವುದನ್ನು ತಡಗಟ್ಟುವುದು ಸೂಕ್ತ.

ರಕ್ತಸಂಬಂಧಿಗಳ ವಿವಾಹ ತಡೆಗಟ್ಟುವ ಮಾರ್ಗೋಪಾಯಗಳು:

ರಕ್ತಸಂಬಂಧಿಗಳ ವಿವಾಹ ತಡೆಗಟ್ಟುವ ಸಲುವಾಗಿ ಪ್ರಮುಖವಾಗಿ ಎಲ್ಲರಲ್ಲೂ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಾಗಿದೆ. ಈ ದಿಸೆಯಲ್ಲಿ ವೈದ್ಯರು, ಸಮಾಜ ಸೇವಕರು, ವಿದ್ಯಾವಂತ ಯುವಕರು ಕೈಜೋಡಿಸಿ ಅಶಿಕ್ಷಿತರು ಹಾಗೂ ಗ್ರಾಮೀಣ ಪ್ರದೇಶದ ಜನತೆಗೆ ಈ ವಿಷಯದ ಬಗ್ಗೆ ಅರಿವು ಮೂಡಿಸಬೇಕು. ಹೀಗೆ ರಕ್ತ ಸಂಬಂಧಿಗಳ ವಿವಾಹ ತಡೆಗಟ್ಟಲು ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಗಬೇಕು. ಇದರೊಂದಿಗೆ ಸರ್ಕಾರವೂ ಸಹ ಕಠಿಣ ಕಾನೂನು ಕ್ರಮಗಳ ಮೂಲಕ ರಕ್ತಸಂಬಂಧಿಗಳ ವಿವಾಹ ತಡೆಗೆ ಕಾರ್ಯತತ್ಪರವಾಗಬೇಕು. ಹೀಗಾದಲ್ಲಿ ರಕ್ತಸಂಬಂಧಿಗಳ ವಿವಾಹಕ್ಕೆ ಎಷ್ಟೋ ತಡೆ ಹಾಕಿದಂತಾಗುವುದಲ್ಲದೆ ಮುಂದೆ ಬುದ್ಧಿಮಾಂದ್ಯ, ವಿಕಲಾಂಗ ಶಿಶುಗಳ ಜನನ ಪ್ರಮಾಣದಲ್ಲೂ ಸಹ ಗಮನಾರ್ಹ ಬದಲಾವಣೆ ಉಂಟಾಗುತ್ತದೆ ಹಾಗೂ ಸುಗಮ ದಾಂಪತ್ಯ ಜೀವನಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ.

Also Watch our video:

ಸೋದರ ಸಂಬಂಧಿಗಳಲ್ಲಿ ವಿವಾಹ ಏಕೆ ಬೇಡ? ಸಮೀಕ್ಷೆ ವರದಿ : ಸೋದರ ಸಂಬಂಧಿಗಳಲ್ಲಿ ವಿವಾಹ • ತಮಿಳ್ನಾಡಿಗೆ ಮೊದಲ ಸ್ಥಾನ • ಕರ್ನಾಟಕಕ್ಕೆ ದ್ವಿತೀಯ ಸ್ಥಾನ ಸೋದರ ಸಂಬಂಧದಲ್ಲಿ ವಿವಾಹ ಬೇಡವೇ ಬೇಡ. 

ಡಾ|| ಸಿ. ಶರತ್ ಕುಮಾರ್
ಅಂತರ ರಾಷ್ರೀಯ ಖ್ಯಾತ ಲೈಂಗಿಕ ಮತ್ತು ಗರ್ಭಧಾರಣ ತಜ್ಞವೈದ್ಯರು
Website: www.drcsharath.com.
email: drcsharath@hotmail.com
Ph : 99805 25100
ಬೆಂಗಳೂರು: ಡಾ ಶರತ್ಸ್ ಮೆನ್ಸ್ ಕ್ಲಿನಿಕ್
34/82, 20 ನೇ ಮುಖ್ಯ ರಸ್ತೆ
ಬಸವ ಮಂಟಪ ರಸ್ತೆ, ವೆಸ್ಟ್ ಕಾರ್ಡ್ ರಸ್ತೆ
ನವರಂಗ ಥಿಯೇಟರ್ ಹತ್ತಿರ
ರಾಜಾಜಿನಗರ ಬೆಂಗಳೂರು 10.
ದೂ:080 41570100/ 7829447100
ಮೈಸೂರು: ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ: 0821-2444441/ 4255019
www.mediwave.net

Share this: