ಸೊಂಟನೋವಿನ ಸಮಸ್ಯೆ ಸಾಮಾನ್ಯವಾಗಲು ಬಹಳ ಕಾರಣಗಳಿವೆ. ಅವುಗಳಲ್ಲಿ ಆಹಾರದಲ್ಲಿನ ಪೋಷಕಾಂಶಗಳ ಕೊರತೆ ಮತ್ತು ತಪ್ಪಾದ ಜೀವನಶೈಲಿಯೇ ಮುಖ್ಯ ಕಾರಣಗಳು.
ಕೆಲವು ವರ್ಷಗಳ ಹಿಂದಿನವರೆಗೆ ರಸ್ತೆ ಅಪಘಾತ ಅಥವಾ ಎತ್ತರದಿಂದ ಬೀಳುವುದು ಮುಂತಾದ ಕಾರಣಗಳಿಂದ ಮಾತ್ರ ಜನರು ಸೊಂಟದ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ ಇಂದು ಕೇವಲ ಸೊಂಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾತ್ರ ಚಿಕಿತ್ಸೆ ಕೊಡುವ ಕ್ಲಿನಿಕ್ ಅಥವಾ ಆಸ್ಪತ್ರೆಗಳು ಇವೆ. ಇಷ್ಟರಮಟ್ಟಿಗೆ ಸೊಂಟನೋವಿನ ಸಮಸ್ಯೆ ಸಾಮಾನ್ಯವಾಗಲು ಬಹಳ ಕಾರಣಗಳಿವೆ. ಅವುಗಳಲ್ಲಿ ಆಹಾರದಲ್ಲಿನ ಪೋಷಕಾಂಶಗಳ ಕೊರತೆ ಮತ್ತು ತಪ್ಪಾದ ಜೀವನಶೈಲಿಯೇ ಮುಖ್ಯ ಕಾರಣಗಳು.
ಬೇರೆ ಬೇರೆ ರೋಗಗಳಿಂದಲೂ ಸೊಂಟ ನೋವು ಬರುತ್ತದೆಯಾದರೂ ಸಾಮಾನ್ಯ ವಾಗಿ ಕಂಡುಬರುವ ಡಿಸ್ಕ್ ಮತ್ತು ನರಕ್ಕೆ ಸಂಬಂಧಿಸಿದ ಸೊಂಟ ನೋವಿನ ಬಗ್ಗೆ ಮಾತ್ರ ಇಂದು ನಾವು ತಿಳಿದುಕೊಳ್ಳೋಣ. ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಳ್ಳೆಯ ಕೊಬ್ಬನ್ನು ಸೇವಿಸದೇ ಇರುವುದು, ಕ್ಯಾಲ್ಸಿಯಂ, ಮೆಗ್ನೀಷಿಯಂ ಮುಂತಾದ ಖನಿಜಾಂಶಗಳು, ಸಿ, ಡಿ ಮತ್ತು ಕೆ ವಿಟಮಿನ್ ಗಳ ಕೊರತೆ ನಮ್ಮ ಆಹಾರದಲ್ಲಿ ಇದ್ದಾಗ ಸೊಂಟ ನೋವಿನ ಸಮಸ್ಯೆ ಸುಲಭವಾಗಿ ಬರುತ್ತದೆ.
ಜೊತೆಗೆ ತುಂಬಾ ಹೊತ್ತು ಕುಳಿತಲ್ಲಿಯೇ ಕುಳಿತಿರುವುದು, ಅತಿಯಾಗಿ ಭಾರವನ್ನು ಎತ್ತುವುದು, ಅತಿ ಕಡಿಮೆ ಅಥವಾ ಅತಿ ಹೆಚ್ಚು ವ್ಯಾಯಾಮ ಮಾಡುವುದು ಮತ್ತು ಮಾನಸಿಕ ಒತ್ತಡಗಳು ಇತ್ತೀಚೆಗೆ ಸೊಂಟ ನೋವು ತುಂಬಾ ಹೆಚ್ಚಾಗಲು ಕಾರಣವಾಗಿವೆ. ಹಾಗಾಗಿ ಎಲ್ಲಾ ರೀತಿಯ ಪೋಷಕಾಂಶಗಳು ಸಿಗುವಂತೆ ಆಹಾರವನ್ನು ಸೇವಿಸುವುದು ಅತ್ಯಂತ ಮುಖ್ಯವಾದದ್ದು.
ಜೊತೆಗೆ ನಿತ್ಯವೂ ಯೋಗಾಸನ ಅಥವಾ ಬೆನ್ನನ್ನು ಸುಸ್ಥಿತಿಯಲ್ಲಿಡುವ ವ್ಯಾಯಾಮಗಳನ್ನು ಮಾಡುವುದರಿಂದ ಸೊಂಟ ನೋವು ಅಥವಾ ಡಿಸ್ಕ್ ಸಮಸ್ಯೆಗಳನ್ನು ತಡೆಯಬಹುದು. ಆದರೆ ಸೊಂಟುನೋವು ಪ್ರಾರಂಭವಾದ ನಂತರ ಅಥವಾ ಡಿಸ್ಕ್ ಗೆ ಸಂಬಂಧಿಸಿದ ಸಮಸ್ಯೆಯಿದೆ ಎಂಬುದು ಗೊತ್ತಾದ ನಂತರ ವೈದ್ಯರು, ಯೋಗ ಗುರುಗಳು ಅಥವಾ ಫಿಸಿಯೋಥರೆಪಿಸ್ಟ್ ಸಲಹೆಯ ಮೇಲೆಯೇ ವ್ಯಾಯಾಮ ಮಾಡಬೇಕು. ಹೀಗೆ ಮಾಡಿದರೆ ಪ್ರಾರಂಭಿಕ ಹಂತದಲ್ಲಿರುವ ಸೊಂಟದ ಸಮಸ್ಯೆಯನ್ನು ಕೇವಲ ವ್ಯಾಯಾಮದ ಮೂಲಕವೇ ಬಗೆಹರಿಸಿಕೊಳ್ಳಬಹುದು. ಆಯುರ್ವೇದದ ಪ್ರಕಾರ ನಿತ್ಯವೂ ಎಣ್ಣೆ ಹಚ್ಚಿಕೊಳ್ಳುವುದರಿಂದ ಸೊಂಟನೋವನ್ನು ತಡೆಯಬಹುದು. ಪ್ರತಿನಿತ್ಯ ಎಣ್ಣೆಯನ್ನು ಹಚ್ಚಿಕೊಂಡು ನಂತರ ಸ್ನಾನ ಮಾಡುವುದರಿಂದ ಸಣ್ಣ ಪ್ರಮಾಣದಲ್ಲಿರುವ ಸೊಂಟನೋವು ಗುಣವಾಗುತ್ತದೆ.
ಕೆಲಸ ಮಾಡುವಾಗ ಅಥವಾ ಬೇರೆ ಯಾವುದೇ ಕಾರಣಕ್ಕೆ ಕುಳಿತಿರುವಾಗಲೂ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸೊಂಟದ ಮೇಲಿನ ಒತ್ತಡ ತುಂಬಾ ಕಡಿಮೆ ಆಗುತ್ತದೆ. ಕೆಲಸದ ಮಧ್ಯದಲ್ಲಿ ಆಗಾಗ ನಿಂತು ಹಿಂದೆ ಬಗ್ಗುವ ವ್ಯಾಯಾಮ ಮಾಡಬೇಕು. ಭಾರ ಎತ್ತುವಾಗ ಮುಂದೆ ಬಗ್ಗಿ ಭಾರ ಎತ್ತಬಾರದು. ತುದಿಗಾಲಲ್ಲಿ ಕುಳಿತು ವಸ್ತುವನ್ನು ದೇಹದ ಸಮೀಪಕ್ಕೆ ಇಟ್ಟುಕೊಂಡು ನಿಧಾನವಾಗಿ ಮೇಲೇಳಬೇಕು. ಏಳುವಾಗ ದೇಹವನ್ನು ನೇರವಾಗಿಟ್ಟುಕೊಳ್ಳಬೇಕು. ಮೋಟಾರ್ ಸೈಕಲ್ ಗಳನ್ನು ಅತಿಯಾಗಿ ಬಳಸುವುದು ಕೂಡ ಡಿಸ್ಕ್ ಗಳಿಗೆ ತೊಂದರೆಯಾಗಲು ಮುಖ್ಯ ಕಾರಣ. ಹಾಗಾಗಿ ಏರು ತಗ್ಗುಗಳು ಇರುವ ರಸ್ತೆಗಳಲ್ಲಿ ಮೋಟಾರ್ ಸೈಕಲ್ ಗಳನ್ನು ಸಾಧ್ಯವಾದಷ್ಟು ನಿಧಾನವಾಗಿ ಚಲಾಯಿಸುವುದು ಒಳ್ಳೆಯದು.
ಸೊಂಟ ನೋವು ಹೆಚ್ಚಿದ್ದಾಗ ಒಂದು ಮ್ಯಾಟ್ ಅಥವಾ ಕಂಬಳಿಯ ಮೇಲೆ ಬೆನ್ನು ಕೆಳಗಿರುವಂತೆ ಮಲಗಿ ಸೊಂಟ ಮತ್ತು ಮಂಡಿಯಲ್ಲಿ 90 ಡಿಗ್ರಿ ಆಗುವಂತೆ ಕಾಲುಗಳನ್ನು ಬಗ್ಗಿಸಿ ಮಂಡಿಯ ಮುಂದಿನ ಭಾಗವನ್ನು ಕುರ್ಚಿಯ ಮೇಲೆ ಇಟ್ಟು ಆರಾಮವಾಗಿ ಹತ್ತರಿಂದ ಹದಿನೈದು ನಿಮಿಷ ಮಲಗಿಕೊಳ್ಳಬೇಕು ಇದರಿಂದ ಸೊಂಟದ ಡಿಸ್ಕ್ ಗಳಿಗೆ ಮತ್ತು ಅಲ್ಲಿಂದ ಹಾದು ಬರುವ ನರಗಳಿಗೆ ವಿಶ್ರಾಂತಿ ಸಿಕ್ಕು ನೋವು ಕಡಿಮೆಯಾಗುತ್ತದೆ.
ಉಗುರು ಬೆಚ್ಚಗಿನ ನೀರಿನ ಕಟಿಸ್ನಾನ ಅಂದರೆ ಒಂದು ಅಗಲವಾದ ಟಬ್ ನಲ್ಲಿ ಉಗುರು ಬೆಚ್ಚಗಿನ ನೀರು ಹಾಕಿ ಅದರಲ್ಲಿ ಪ್ರತಿನಿತ್ಯ 10 ನಿಮಿಷ ಕುಳಿತುಕೊಳ್ಳುವುದರಿಂದ ಸೊಂಟಕ್ಕೆ ಅನುಕೂಲವಾಗುತ್ತದೆ. ಈ ರೀತಿ 45 ದಿನ ಮಾಡಿದರೆ ಫಲಿತಾಂಶವನ್ನು ಕಾಣಬಹುದು. ಇದಾದ ನಂತರ ಸಾಧ್ಯವಾದರೆ ಮಣ್ಣಿನ ಸ್ನಾನವನ್ನು ಮಾಡಿಕೊಳ್ಳಬಹುದು. ಅಂದರೆ ಹುತ್ತದ ಮಣ್ಣನ್ನು ತಂದು ನೀರಿನಲ್ಲಿ ಕಲಸಿ ಸ್ವಲ್ಪ ಬಿಸಿ ಮಾಡಿ ಸೊಂಟ ನೋವು ಇರುವ ಭಾಗದ ಮೇಲೆ ತೆಳುವಾಗಿ ಹಚ್ಚಿಕೊಳ್ಳುವುದು. ಅದು ಒಣಗಿದ ನಂತರ ಬಿಸಿನೀರಿನಲ್ಲಿ ತೊಳೆದುಕೊಳ್ಳಬೇಕು. ವಾರಕ್ಕೊಮ್ಮೆ ಅಥವಾ ಕನಿಷ್ಠ ತಿಂಗಳಿಗೊಮ್ಮೆ ಹರಳೆಣ್ಣೆಯನ್ನು ಕುಡಿದು ಭೇದಿ ಮಾಡಿಕೊಳ್ಳುವುದರಿಂದಲೂ ಭವಿಷ್ಯದಲ್ಲಿ ಬರಬಹುದಾದ ಸೊಂಟ ನೋವಿನ ಸಮಸ್ಯೆಯನ್ನು ತಡೆಯಲು ಸಹಾಯವಾಗುತ್ತದೆ.