Vydyaloka

ಸರಳ ಜೀವನ, ಲೈಫು ಪಾವನ

ಸರಳ ಜೀವನ, ಲೈಫು ಪಾವನ. ನಮ್ಮಲ್ಲೇ ಅಡಗಿರುವ ಖುಷಿಯನ್ನು ಮರೆತು ಇರದ ದುಃಖವನ್ನ ಮೈ ಮೇಲೆ ಎಳ್ಕಂಡು ಒದ್ದಾಡೋದು ಬಹಳಷ್ಟು ಜನರ ಹವ್ಯಾಸವಾಗಿದೆ. ಲೈಫ್ ಸಿಂಪಲ್ ಆಗಿದೆ. ಜಾಸ್ತಿ ತಲೆ ಕೆಡಿಸಿಕೊಳ್ಳದೆ ಖುಷಿಯನ್ನ ಹಂಚಿ.

ನಮ್ಮ ಅಜೀಬು ದುನಿಯಾದಲ್ಲಿ ಎಲ್ಲವೂ ಕೈಪಿಡಿಯೊಂದಿಗೇ ಬರಲ್ಲ. ಯಾಕಂದ್ರೆ ಈ ನಮ್ ಲೈಫ್ ಅನ್ನೋದು ಯಂತ್ರ ಅಲ್ವಲ್ಲ..! ಈ  ನಮ್ಮ ಜೀವನ ತುಂಬಾನೆ ಸಿಂಪಲ್ ಆಗಿದೆ. ನಾವೇ ಅದನ್ನು ಕಾಂಪ್ಲೆಕ್ಸ್ ಮಾಡ್ಕೋಂಡು ಒದ್ದಾಡ್ತಾ ಇರ್ತೀವೆನೋ ಅಂತ ಬಹಳಷ್ಟು ಸಾರಿ ನಿಮಗೇ ಅನ್ನಿಸಿರತ್ತೆ!

‘ಕಂಕುಳಲ್ಲೇ ಮಗೂನ ಇಟ್ಕೊಂಡು ಊರೆಲ್ಲಾ ಹುಡುಕಿದ್ರು’ ಅನ್ನೋತರ ನಮ್ಮಲ್ಲೇ ಅಡಗಿರುವ ಖುಷಿಯನ್ನು ಮರೆತು ಇರದ ದುಃಖವನ್ನ ಮೈ ಮೇಲೆ ಎಳ್ಕಂಡು ಒದ್ದಾಡೋದು ಬಹಳಷ್ಟು ಜನರ ಹವ್ಯಾಸವಾಗಿದೆ. Be CheerUp..! ನಾನು ಓದಿದ್ದು, ಕೇಳಿದ್ದು ಕೆಲವನ್ನ ನಿಮ್ಮತ್ರ ಹಂಚ್ಕೊತೀನಿ. ಅದರಿಂದ ನಿಮ್ಮಲ್ಲೂ ಏನಾದ್ರೂ ಕಿಂಚಿತ್ತಾದರೂ ಬದಲಾವಣೆ ಬಂದ್ರೆ ಅಥವಾ ಅಲ್ಪ ಕಾಲಕ್ಕಾದ್ರೂ ನಿಮ್ಮ ಮನಸ್ಸಿಗೆ ಖುಷಿ ಸಿಕ್ಕಿದ್ರೆ ಅದೇ ಈ ಬರಹಕ್ಕೊಂದು ಅರ್ಥ..!

ಗಟ್ಟಿಯಾಗೊಮ್ಮೆ ಹ್ಯಾಂಡ್ ಶೇಕ್ ಮಾಡಿ 

ಜೀವನದಲ್ಲಿ ಹಾಗೆ ಬದುಕಬೇಕು, ಹೀಗಿರಬೇಕು. ಅವರು ನನ್ನ ಆದರ್ಶ. ಇವರೇ ನನ್ನ ರೋಲ್ ಮಾಡೆಲ್ ಅಂತೆಲ್ಲಾ ಅಂದ್ಕೊಳ್ಳೋದು ಸೆಕೆಂಡರಿ. ಮೊದಲು ನಾವು ಬೇರೆಯವರಿಗೆ ಇಂಪ್ರೆಸ್ ಮಾಡಿದ್ರೆ ತಾನೆ ಲೈಫಲ್ಲಿ ಮಜಾ!? ಅದಕ್ಕಾಗಿ ನಾವೇನು ಸತತ ಸಾಧನೆ ಮಾಡಿಯೇ ಉದ್ಧಾರವಾಗಬೇಕಂತೇನಿಲ್ಲ. ಕೆಲವು ಸರಳ ವಿಚಾರಗಳನ್ನ ನಾವು ಮರೆತಿರ್ತೇವೆ, ಅದನ್ನು ಮಾಡ್ತಾ ಹೋದ್ರೆ ನಾವೇ ರೋಲು, ನಾವೇ ಮಾಡಲ್ಲು! ಅಪರಿಚಿತರಿದ್ರೂ ಸರಿ ಪರಿಚಯವಾಗ್ತಿದ್ದಂಗೆ ಗಟ್ಟಿಯಾಗೊಮ್ಮೆ ಅವರ ಹ್ಯಾಂಡ್ ಶೇಕ್ ಮಾಡಿ ನೋಡಿ ಅವರು ಬಹುಬೇಗ ಆತ್ಮೀಯವಾಗಿ ಬಿಡ್ತಾರೆ. (ಅದ್ಕೂ ಮೊದ್ಲು ಮತ್ತು ನಂತರ ಕೈಗೆ ಸ್ಯಾನಿಟೈಸರ್ ಹಾಕ್ಕೊಳೋದನ್ನ ಮರಿಬೇಡಿ).

Also Read: ವಿಶ್ವ ಕೈತೊಳೆಯುವ ದಿನ- ಅಕ್ಟೋಬರ್ 15 : ಕೈ ತೊಳೆಯುವುದರ ಲಾಭಗಳು ಏನು? 

ಮಾತಾಡೋವಾಗ ಕಣ್ಣು ನೋಡಿ ಮಾತನಾಡಿ. ಇಂತಹ ಸರಳ ಸುಂದರ ಟೆಕ್ನಿಕ್‍ಗಳು ನಾವ್ಯಾರೂ ಆಚರಿಸೋದೇ ಇಲ್ಲ. ಅದಕ್ಕೇ ಮಗುವಾಗಿದ್ದಾಗ ಅರಾಮಾಗಿದ್ದ ಜೀವನ ಬೆಳೆದಂತೆಲ್ಲಾ ಮಾನಸಿಕವಾಗಿ ಲೈಫ್ ಹಳ್ಳ ಹಿಡಿಯೋದು. ಸ್ನಾನ ಮಾಡುವಾಗ ಹಾಡು ಹೇಳಬೇಕು. ಆಗಾಗ ಒಬ್ಬೊಬ್ರೆ ನಗ್ತಿರಬೇಕು. ಜನ ಹುಚ್ಚ ಅಂದ್ರೂ ಪರವಾಗಿಲ್ಲ. ಆ ಬಗ್ಗೆ ಪ್ರೂವ್ ಮಾಡೋ ಪರಿಸ್ಥಿತಿ ಬಂದಾಗ ನೋಡೋಣ. ಅಪ್ಪಿ ತಪ್ಪಿ ಜಗಳವಾಡುವ ಪರಿಸ್ಥಿತೀನೇ ಬಂತು ಅಂತಿಟ್ಕೊಳಿ, ಮುಲಾಜೇ ಬೇಡ, ನೀವೇ ಹೊಡಿರಿ ಮೊದ್ಲು. ಅದೂ ಹೆಂಗೆ? ಎದುರಾಳಿ ತಿರುಗಿಸಿ ಥಳಿಸಲಾರದಂತೆ..! ಬಿಟ್ಟು ಕೊಡ್ಲೇಬಾರ್ದು ಲೈಫಲ್ಲಿ ಏನನ್ನೂ! ಪವಾಡಗಳು ಯಾವಾಗ್ಲೂ ನಡಿತಾನೇ ಇರ್ತವೆ.

ಯಾರಾದ್ರೂ ಕೈ ಚಾಚಿದ್ರೆ ಸಹಾಯ ಮಾಡಿ.

ಯಾರಾದ್ರೂ ಕೈ ಚಾಚಿದ್ರೆ ಸಹಾಯ ಮಾಡಿ. ನಾವು ‘ಹ್ಯಾಂಡ್‍ಸಂ’ ಇದೀವಿ ಅಂತ ಹೇಳಿಸ್ಕೋ ಬೇಕಾದ್ರೆ ಹ್ಯಾಂಡ್ ಕೊಡ್ಲೇ ಬೇಕು ಸಂಬಡಿಗೆ. ಹಾಗಂತ ಕಂಡ ಕಂಡವರಿಗೆಲ್ಲಾ ಕೈ ಕೊಡಬೇಕು ಅಂತಲ್ಲ, ಸಹಾಯ ಮಾಡಬೇಕು ಅಂತಾ! ಸಹಾಯ ಮಾಡಿದ್ರೆ ಮಾತ್ರ ನಮ್ಮ ವ್ಯಕ್ತಿತ್ವ ಹೊಳೆಯೋದು. ಒಬ್ಬೊಬ್ರೆ ಇದ್ದಾಗ ವಿಶಲ್ ಹೊಡ್ಯೋಣ. ಒಳ್ಳೊಳ್ಳೆ ಪುಸ್ತಕ ಓದಿ ತಿಳಿಯೋಣ. ಮಕ್ಕಳ ಜೊತೆ ಆಗಾಗ ಆಟ ಆಡೋಣ. ಅವರನ್ನೇ ಗೆಲ್ಲೋಕೆ ಬಿಡೋಣ. ಸೋತು ಗೆಲ್ಲೋದನ್ನ ನಾವೂ ಕಲಿಯೋಣ. ಜನರಿಗೆ ಎರಡನೇ ಅವಕಾಶ ಕೊಟ್ಟು ನೋಡೋಣ. ಆದ್ರೆ ಮೂರನೇ ಅವಕಾಶ ಖಂಡಿತಾ ಬೇಡ.

ಲೈಫ್ ಲಿ ಕೊಂಚ ರೊಮ್ಯಾಂಟಿಕ್ ಆಗಿರೋಣ. ನಾವು ಜಾಸ್ತಿ ಖುಷಿ ಪಡೋ ಜಾಗದಲ್ಲಿ ಮೊಬೈಲ್ ಫೋನ್ ತೊಂದರೆ ಮಾಡದ ಹಾಗೆ ಸೈಲೆಂಟ್‍ಗೆ ಹಾಕೋಣ. ಇಂದು ಉತ್ತಮವಾಗಿ ಸೋತವ ಮಾತ್ರಾ ಅತ್ಯುತ್ತಮವಾಗಿ ಗೆಲ್ಲೋಕೆ ಸಾಧ್ಯ. ಮತ್ಯಾಕೆ ವರಿ ಮಾಡ್ಕೋಬೇಕು ಸೋತ್ರೆ?! ಯಾರಾದ್ರೂ ತುಂಬಾ ಇಷ್ಟ ಆದ್ರಾ ಹೋಗಿ ಅಪ್ಪಿಕೊಳ್ಳಿ. ಮುಂದೆನಾಗತ್ತೆ ಅನ್ನೋ ಬಗ್ಗೆ ತಿಳಿದು ಹಗ್ ಮಾಡಿದ್ರೆ ಉತ್ತಮ. ಸ್ನೇಹಿತರೋ ಸಂಬಂಧಿಗಳೋ ಆಸ್ಪತ್ರೆಯಲ್ಲಿದ್ರೆ ಹೋಗಿ ನೋಡಿ ಬರೋಣ. ಅವರೊಂದಿಗಿನ ಆ ಸಮಯದಲ್ಲಿ ನಾವು ಕೆಲವೇ ಕ್ಷಣವಿದ್ದರೂ ಅದು ಅವರ ಪಾಲಿಗೆ ಮರೆಯಲಾರದ ಸಮಯವೇ!

ಸಂಗೀತಕ್ಕೊಂದು ಶಕ್ತಿ ಇದೆ. ಶಕ್ತಿಯೊಂದಿಗೇ ಅರಂಭವಾಗಲಿ ದಿನ. ಪೋನಲ್ಲಿ ಮಾತಾಡೋವಾಗ ನಾವು ಹೆಂಗೆಂಗೋ ಮಾತಾಡ್ತೀವಿ. ಅದರ ಬಗ್ಗೆಯೂ ಗಮನ ಕೊಟ್ರೆ ಲೈಫ್ ಸೂಪರ್. ನಮ್ಮ ಸಿಂಪಲ್ ಲೈಫಲ್ಲಿ ಯಾವಾಗ್ಲೂ ಒಂದು ಪೆನ್ನು ಪೇಪರ್ರು ಇದ್ರೆ ಚೆನ್ನ. ನಮ್ ಮೈಂಡ್ ಯಾವ್ಯಾಗ್ಲೂ ಏನಾದ್ರೂ ಯೋಚನೆ ಮಾಡ್ತಾನೇ ಇರತ್ತೆ. ಯಾರಿಗೆ ಗೊತ್ತು, ಮಿಡ್ ನೈಟ್ ಮೂರು ಘಂಟೆಗೆ ಎಚ್ಚರವಾಗಿ ಏನಾದ್ರೂ ಹೊಳೆದ್ರೆನೂ ಬರೆಯೋಕೆ ಆಗಲೇ ರೆಡಿ ಇರ್ಬೇಕಲ್ವಾ?

ತಲೆ ಕೆಡಿಸಿಕೊಳ್ಳದೆ ಖುಷಿಯನ್ನ ಹಂಚಿ.

ಇನ್ನು ಪ್ರೀತಿ ವಿಷಯಕ್ಕೆ ಬಂದ್ರೆ ಭಗ್ನ ಪ್ರೇಮಿಗಳೇ ಹೆಚ್ಚಾಗಿ ಕಾಣ ಸಿಗ್ತಾರೆ. ಪ್ರೀತಿ ಕಳೆದುಕೊಂಡು ಮನಸ್ಸಿನಲ್ಲಿಯೇ ನಗ್ನವಾಗಿ ರೊಧಿಸ್ತಾ ಇರ್ತಾರೆ. ಅಂತವರಲ್ಲಿ ಹೆಚ್ಚಿನವ್ರು ಒನ್ ಸೈಡ್ ಲವರ್ಸ್. ಅವರು ತಮ್ಮ ಮುಚ್ಚಿಟ್ಟ ಪ್ರೀತಿ ಎನ್ನುವ ಮೊಟ್ಟೆಗೆ ಸರಿಯಾಗಿ ಕಾವು ಕೊಡದೇ ಕೊಳೆತು ಹೋದ ಮೇಲೆ ಒಬ್ರೇ ರೊಧಿಸ್ತಾ ಇರ್ತಾರೆ. ಹೇಳ್ಕೊಬೇಕು ಓಪನ್ನಾಗಿ. ಅದೇ ಪ್ರೀತಿ ಸಿಕ್ರೆ ಚೆನ್ನಾಗಿ ನೋಡ್ಕೋಳೊದು. ಇಲ್ಲಾಂದ್ರೆ ಹೊಸತು ಹುಡ್ಕೋದು. ಎಲ್ಲಾ ನಮ್ಮ ನಮ್ಮ ತಲೆಯಲ್ಲೇ ಇದೆ ಅಷ್ಟೆ!

ಯಾವಾಗ್ಲೂ ಲೈಫ್ ಬೆಳ್ಳಗೇ ಇರತ್ತೆ ಅಂತೇನಿಲ್ಲ. ಕಷ್ಟ, ದುಃಖ, ನೋವು ಎಲ್ಲಾ ಇದ್ರೂ ಅದನ್ನು ಎದುರಿಸೋ ಸ್ಥೈರ್ಯ ಅನ್ನೋ ಸ್ನೇಹಿತನನ್ನ ನಾವು ಯಾವಾಗಲೂ ನಮ್ಮ ಜೊತೆಗೇ ಇಟ್ಕೊಂಡಿರಬೇಕು. ಸಕ್ಸಸ್ ಅಂದ್ರೆ ಯಾವಾಗ್ಲೂ ನಾವೇ ಬೆಸ್ಟು, ಎಲ್ಲಾದ್ರಲ್ಲೂ ಗೆಲ್ತೀವಿ ಅನ್ನೋದಲ್ಲ. ಸಕ್ಸಸ್ ಅಂದ್ರೆ ಕೆಟ್ಟ ಪರಿಸ್ಥಿತಿಯನ್ನೂ ನಾವು ಹೆಂಗೆ ಎದುರಿಸಿದ್ವಿ ಮತ್ತು ಹೇಗೆ ಹೋರಾಡಿದ್ವಿ ಅನ್ನೋದು!

ಲೈಫ್ ಸಿಂಪಲ್ ಆಗಿದೆ. ಜಾಸ್ತಿ ತಲೆ ಕೆಡಿಸಿಕೊಳ್ಳದೆ ಖುಷಿಯನ್ನ ಹಂಚಿ. ಬೂಮರಾಂಗ್  ತರಾ ನಿಮ್ಮತ್ರಾನೇ ವಾಪಸ್ ಬರ್ತದೆ.!

Share this: