Vydyaloka

ಸಂಕ್ರಾಂತಿ ಹಬ್ಬದ ಎಳ್ಳು ಬೆಲ್ಲ – ಇದು ಕೇವಲ ಸಂಪ್ರದಾಯವಲ್ಲ

ಸಂಕ್ರಾಂತಿ ಗ್ರಾಮೀಣ ಸೊಗಡಿನ ವಿಶಿಷ್ಟ ಹಬ್ಬ. ಈ ಹಬ್ಬವು ಧಾರ್ಮಿಕ, ವೈಚಾರಿಕ, ಸಾಮಾಜಿಕ, ವೈಜ್ಞಾನಿಕ ತತ್ತ್ವಗಳಿಂದಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಸಂಕ್ರಾಂತಿಯ ಹಬ್ಬದಂದು ಎಳ್ಳು ಬೆಲ್ಲದ ಸೇವನೆ ಕೇವಲ ಸಂಪ್ರದಾಯವಲ್ಲದೆ ಆರೋಗ್ಯದ ದೃಷ್ಠಿಯಿಂದಲೂ ಬಹಳ ಪ್ರಮುಖವಾಗಿದೆ.

ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಆಚರಿಸಲ್ಪಡುವ ಹಲವು ಹಬ್ಬಗಳಲ್ಲಿ ಮಕರ ಸಂಕ್ರಾಂತಿಯು ರೈತಾಪಿ ವರ್ಗದ ಸುಗ್ಗಿಯ ಹಬ್ಬ. ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆಗೆ, ಪ್ರಕೃತಿಗೆ, ಭೂತಾಯಿಗೆ, ರಾಸುಗಳಿಗೆ ಕೃತಜ್ಞತೆ ಸಲ್ಲಿಸುವ ಗ್ರಾಮೀಣ ಸೊಗಡಿನ ವಿಶಿಷ್ಟ ಹಬ್ಬ. ನಮ್ಮ ಹಿರಿಯರು ರೂಪಿಸಿರುವ ಈ ಹಬ್ಬವು ಕೇವಲ ಸಾಂಪ್ರದಾಯಿಕ ಆಚರಣೆ ಮಾತ್ರವಲ್ಲ. ಈ ಹಬ್ಬವು ಧಾರ್ಮಿಕ, ವೈಚಾರಿಕ, ಸಾಮಾಜಿಕ, ವೈಜ್ಞಾನಿಕ ತತ್ತ್ವಗಳಿಂದಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.

ಮಾನವನು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು ಪ್ರಕೃತಿಯಲ್ಲಿ ವರ್ಷವಿಡೀ ನಿರಂತರವಾಗಿ ಆಗುವ ಬದಲಾವಣೆಯಿಂದ ಪ್ರಭಾವಿತನಾಗುತ್ತಾನೆ. ಆದ್ದರಿಂದ ಕಾಲಕ್ಕೆ ಅನುಗುಣವಾದ ಅಹಾರ ಹಾಗೂ ಜೀವನಶೈಲಿಯನ್ನು ಸಾಂಪ್ರದಾಯಿಕ ಆಚರಣೆಗಳ ಮೂಲಕ ಅಳವಡಿಸಲಾಗಿದೆ. ಸಂಕ್ರಾಂತಿ ಎಂದರೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವ ಕ್ರಿಯೆ. ಸೂರ್ಯನ ಧನು ರಾಶಿಯಿಂದ ಮಕರ ರಾಶಿಯ ಕ್ರಮಣವು ಮಕರ ಸಂಕ್ರಾಂತಿಯಾಗಿ ಆಚರಿಸಲ್ಪಡುತ್ತದೆ. ಇದು ಉತ್ತರಾಯಣಾರಂಭವನ್ನು ಸೂಚಿಸುತ್ತದೆ.

ಈ ಹಬ್ಬವು ಹೇಮಂತ ಋತುವಿನ ಪುಷ್ಯಮಾಸದಲ್ಲಿ ಆಚರಿಸಲ್ಪಡುತ್ತದೆ. ಈ ಮಾಸದಲ್ಲಿ ಸೂರ್ಯನ ಪ್ರಖರತೆ ಕಡಿಮೆಯಾಗಿದ್ದು, ಮೋಡ ಕವಿದ ವಾತಾವರಣವಿರುತ್ತದೆ. ಉತ್ತರ ದಿಕ್ಕಿನಿಂದ ಬೀಸುವ ಶೀತ ಗಾಳಿಯಿಂದಾಗಿ ಚಳಿ ಹಾಗೂ ಶುಷ್ಕತೆ ಹೆಚ್ಚಾಗಿರುತ್ತದೆ.

ಆಯುರ್ವೇದ ಶಾಸ್ತ್ರವು ಕೇವಲ ರೋಗ ಪರಿಹಾರಾರ್ಥವಿರುವ ವೈದ್ಯ ಪದ್ಧತಿಯಷ್ಟೇ ಅಲ್ಲದೆ ಸ್ವಾಸ್ಥ್ಯ ರಕ್ಷಣೆಗೆ ಅಗತ್ಯವಿರುವ ಜೀವನ ಶೈಲಿಯನ್ನು, ದಿನಚರಿಯನ್ನು ಅರ್ಥಪೂರ್ಣವಾಗಿ ತಿಳಿಸುವ ಅಥರ್ವವೇದದ ಉಪವೇದವಾಗಿದೆ. ಆಯುರ್ವೇದದ ಪ್ರಕಾರ ಈ ಮಾಸದಲ್ಲಿ ಅತಿಯಾದ ಶೀತ ಗಾಳಿಯಿಂದಾಗಿ ವಾತದೋಷವು ಉಲ್ಬಣಿಸುತ್ತದೆ. ಅದ್ದರಿಂದ ಚರ್ಮವು ತೇವಾಂಶವನ್ನು ಕಳೆದುಕೊಂಡು ಒಣಗಿದಂತಾಗುತ್ತದೆ. ವಾತದೋಷದಿಂದ ಸಂಧಿನೋವುಗಳು ಹೆಚ್ಚಾಗಬಹುದು.

ಎಳ್ಳು ಬೆಲ್ಲದ ಸೇವನೆ ಕೇವಲ ಸಂಪ್ರದಾಯವಲ್ಲ

ಪ್ರಕೃತಿಯಲ್ಲಿನ ಅತಿಯಾದ ಶೀತವನ್ನು ತಡೆದುಕೊಳ್ಳಲು ದೇಹವು ಪ್ರಾಕೃತವಾಗಿ ಒಳ ಉಷ್ಣತೆಯನ್ನು ಹೆಚ್ಚಿಸಿ ಉಷ್ಣಾಂಶವನ್ನು ಸಮತೋಲನಗೊಳಿಸುತ್ತದೆ. ಹಾಗಾಗಿ ಹಸಿವು, ಜೀರ್ಣಶಕ್ತಿಯು ಹೆಚ್ಚಾಗುತ್ತದೆ. ಕಷ್ಟ ಜೀರ್ಣವಾದ ಅಹಾರ ಪದಾರ್ಥಗಳನ್ನು, ಜಿಡ್ಡಿನ ಪದಾರ್ಥಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಆದುದರಿಂದ ಈ ಮಾಸದಲ್ಲಿ ತೈಲಾಂಶವಿರುವ ಕಷ್ಟ ಜೀರ್ಣಕರ ಹಾಗೂ ಮಧುರರಸ ಪ್ರಧಾನ ಅಹಾರ ಪದಾರ್ಥಗಳಾದ ಎಳ್ಳು, ಉದ್ದು, ಬೆಲ್ಲ ಹೊಸ ಅಕ್ಕಿಯ ಸೇವನೆ ಹಾಗೂ ತಿಲತೈಲದ ಅಭ್ಯಂಜನ, ಸೂರ್ಯನಮಸ್ಕಾರಗಳನ್ನು ವಿಧಿಸಲಾಗಿದೆ.

ಅಂತೆಯೇ ಮಕರ ಸಂಕ್ರಮಣದ ದಿನದಂದು ವಿಶೇಷವಾಗಿ ಸೂರ್ಯನಿಗೆ ಪೂಜೆ ಸಲ್ಲಿಸಿ ಎಳ್ಳು, ಬೆಲ್ಲಗಳನ್ನು ಪರಸ್ವರ ವಿನಿಮಯ ಮಾಡಿಕೊಳ್ಳುತ್ತೇವೆ. ಸಾಂಕೇತಿಕವಾಗಿ ಎಳ್ಳು ಸ್ನೇಹದ ಪ್ರತೀಕವಾದರೆ, ಬೆಲ್ಲ ಪ್ರೀತಿಯ ಸಂಕೇತ, ಆದರೆ ವೈಜ್ಞಾನಿಕವಾಗಿ ಎಳ್ಳಿನಲ್ಲಿ 5-7% ತೇವಾಂಶ, 54% ಕೊಬ್ಬಿನಾಂಶವಿದ್ದು, ಉಷ್ಣ, ಸ್ನಿಗ್ಧ ಗುಣಗಳಿಂದಾಗಿ ಚರ್ಮದ ರೂಕ್ಷತೆಯನ್ನು ಕಡಿಮೆ ಮಾಡಿ ಅಗತ್ಯ ತೈಲಾಂಶವನ್ನು ನೀಡುತ್ತದೆ, ವಾತದೋಷವನ್ನು ನಿಯಂತ್ರಿಸಿ ಹಲವು ನೋವುಗಳನ್ನು ನಿವಾರಿಸುತ್ತದೆ. ಅಲ್ಲದೆ ವಸಡುಗಳ ಹಾಗೂ ಶರೀರ ಬಲವನ್ನು ವೃದ್ಧಿಸುತ್ತದೆ.

ಇನ್ನು ಬೆಲ್ಲದಲ್ಲಿ ಅತಿ ಹೆಚ್ಚು ಮೆಗ್ನೀಷಿಯಂ ಹಾಗೂ ಕಬ್ಬಿಣಾಂಶವಿರುವುದರಿಂದ ನರಗಳ ಬಲವನ್ನು, ರಕ್ತವನ್ನು ವೃದ್ಧಿಸುತ್ತದೆ. ಪೊಟಾಶಿಯಂ ಅಂಶವು ದೇಹದ ದ್ರವಾಂಶವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ. ಆದ್ದರಿಂದ ಸಂಕ್ರಾಂತಿಯ ಹಬ್ಬದಂದು ಎಳ್ಳು ಬೆಲ್ಲದ ಸೇವನೆ ಕೇವಲ ಸಂಪ್ರದಾಯವಲ್ಲದೆ ಆರೋಗ್ಯದ ದೃಷ್ಠಿಯಿಂದಲೂ ಬಹಳ ಪ್ರಮುಖವಾಗಿದೆ.

Also Read: ಮಕರ ಸಂಕ್ರಾಂತಿ – ಮಕರ ಸಂಕ್ರಮಣ : ರೈತರ ಸುಗ್ಗಿಯ ಹಬ್ಬ

ಹೀಗೆ ಪುಷ್ಯಮಾಸದ ಚಳಿಯಲ್ಲಿ ದೇಹಕ್ಕೆ ವೈಜ್ಞಾನಿಕವಾಗಿ ಅಗತ್ಯವಿರುವ ಆಹಾರ ದ್ರವ್ಯಗಳನ್ನು ಸಾಂಪ್ರದಾಯಿಕವಾಗಿ ಮಕರ ಸಂಕ್ರಾಂತಿಯ ದಿನದಂದು ಸೇವಿಸುತ್ತೇವೆ. ಆದ್ದರಿಂದ ಎಳ್ಳು ಬೆಲ್ಲ ಮೆಲ್ಲುತ್ತಾ, ಇದರ ಮಹತ್ವವನ್ನು ಅರಿಯುತ್ತಾ, ಪರಸ್ವರ ಹಂಚುತ್ತಾ ಒಳ್ಳೆ ಮಾತನಾಡುತ್ತಾ, ಪರಸ್ವರ ಪ್ರೀತಿ ವಿಶ್ವಾಸದಿಂದ, ಮಧುರ ಬಾಂಧವ್ಯವನ್ನು ಬೆಳೆಸುತ್ತಾ, ಆರೋಗ್ಯವನ್ನು ವೃದ್ಧಿಸುತ್ತಾ ಈ ಸುಗ್ಗಿಯ ಹಬ್ಬವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸೋಣ.

Share this: