ಪ್ರೋಬಯೋಟಿಕ್ಸ್ -ಔಷಧಿಗಳ ಔಷಧಿ.ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಬೇಕಾಗಿ ಬಳಸುವ ಔಷಧಿಯನ್ನು “ಪ್ರೋಬಯೋಟಿಕ್ಸ್” ಎಂದು ಕರೆಯಲಾಗುತ್ತದೆ.
ಕೆಲವೊಮ್ಮೆ ರೋಗದ ಚಿಕಿತ್ಸೆಗಾಗಿ ವೈದ್ಯರು ಆಂಟಿಬಯೋಟಿಕ್ ಔಷಧಿ ನೀಡಿದಾಗ ರೋಗಿಗಳಿಗೆ ವಿಪರೀತ ಬೇಧಿ ಉಂಟಾಗುತ್ತದೆ. ನಾವು ಸೇವಿಸಿದ ಆಂಟಿಬಯೋಟಿಕ್‍ಗಳು ಉಪದ್ರಕಾರಕ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವುದರ ಜೊತೆಗೆ, ಕರುಳಿನ ಒಳಭಾಗದಲ್ಲಿರುವ ಉಪಕಾರ ಮಾಡುವ ಲಾಕ್ಟೋಬಾಸಿಲಸ್ ಜಾತಿಯ ಬ್ಯಾಕ್ಟೀರಿಯಾಗಳನ್ನು ನಿರ್ಮೂಲನ ಮಾಡುತ್ತದೆ. ಈ ಬ್ಯಾಕ್ಟೀರಿಯಾಗಳು ದೇಹದೊಳಗೆ ವಿಟಮಿನ್ ಕೆ ಉತ್ಪಾದನೆ ಮತ್ತು ವಿಟಮಿನ್ ಬಿ12 ಉತ್ಪಾದನೆ ಮಾಡಲು ದೇಹಕ್ಕೆ ಅತೀ ಅಗತ್ಯ. ಇಂತಹಾ ಸಂದರ್ಭಗಳಲ್ಲಿ ರೋಗಿಗಳಿಗೆ ಬೇಧಿಯನ್ನು ತಡೆಯಲು ಮತ್ತು ಬೇಧಿಯನ್ನು ನಿಲ್ಲಿಸಲು ಪ್ರೋಬಯೋಟಿಕ್ ಔಷಧಿ ನೀಡಲಾಗುತ್ತದೆ. ಆ ಮೂಲಕ ಕರುಳಿನ ಒಳಭಾಗದಲ್ಲಿ ಕಳೆದುಹೋದ ಲಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾಗಳನ್ನು ಪುನಃ ಪ್ರತಿಷ್ಠಾಪಿಸಿ ಬೇಧಿಯನ್ನು ಉಂಟಾಗದಂತೆ ಮಾಡಲಾಗುತ್ತದೆ. ಕೆಲವೊಮ್ಮೆ ವೈದ್ಯರು ಆಂಟಿಬಯೋಟಿಕ್‍ಗಳ ಜೊತೆಗೆ ಮೊಸರು ಸೇವಿಸಲು ಹೇಳುವುದರ ಒಳಗಿನ ಮರ್ಮ ಇದುವೇ ಆಗಿರುತ್ತದೆ ಔಷಧಿ ಜೊತೆಗೆ ಮೊಸರು ಸೇವಿಸಿದಲ್ಲಿ ಬೇಧಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ಪ್ರೋಬಯೋಟಿಕ್ಸ್ ಬಳಸಿ ರೋಗಕಾರಕ ಬ್ಯಾಕ್ಟೀರಿಯಗಳ ಸಂಖ್ಯೆ ಕ್ಷೀಣಿಸುವಂತೆ ಮಾಡಲಾಗುತ್ತದೆ:
ಕರುಳಿನ ಒಳಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಲಾಕ್ಟೋಬಾಸಿಲಸ್ ಜಾತಿಯು ಬ್ಯಾಕ್ಟೀರಿಯಾಗಳು ಬೇರೆ ರೋಗಾಣುಗಳು ಬೆಳೆಯದಂತೆ ತಡೆಯುತ್ತದೆ. ಆ ಮೂಲಕ ದೇಹಕ್ಕೆ ರೋಗ ಬರದಂತೆ ತಡೆಯುತ್ತದೆ. ಆದರೆ ದೇಹದ ರಕ್ಷಣಾಶಕ್ತಿ ಕುಂದಿದಾಗ, ವಿಪರೀತ ಒತ್ತಡ ಸನ್ನಿವೇಶಗಳಲ್ಲಿ ಆಹಾರದಲ್ಲಿ ಭಾರೀ ವ್ಯತ್ಯಾಸವಾದಾಗ ಅಥವಾ ಅತೀ ಪ್ರಬಲ ಆಂಟಿಬಯೋಟಿಕ್ ಸೇವಿಸಿದಾಗ ಈ ಲಾಕ್ಟೋಬಾಸಿಲಸ್‍ಗಳ ಸಂಖ್ಯೆ ಕ್ಷಿಣಿಸಿ ಇತರ ರೋಗಕಾರಕ ಬ್ಯಾಕ್ಟೀರಿಯಾಗಳು ವೃದ್ಧಿಸಿ ರೋಗಕ್ಕೆ ಮುನ್ನುಡಿ ಬರೆಯುತ್ತದೆ.
ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾ ಗಾಲಕ್ಟೊಸಿಡೋಸ್ ಎಂಬ ಕಿಣ್ವವನ್ನು ಉತ್ಪತ್ತಿ ಮಾಡುತ್ತದೆ ಈ ಕಿಣ್ವ ಲಾಕ್ಟೋನ್ ಅಸಹಿಷ್ಟತೆ ಇರುವ ವ್ಯಕ್ತಿಗಳಿಗೆ ಲ್ಯಾಕ್ಟೋಸ್ ಸಕ್ಕರೆಯನ್ನು ಜೀರ್ಣಿಸಲು ಸಹಾಯ ಮಾಡುತ್ತದೆ. ಆ ಮೂಲಕ ಭೇದಿಯಾಗುವುದನ್ನು ತಪ್ಪಿಸುತ್ತದೆ. ಈ ಕಾರಣದಿಂದಲೇ ಲ್ಯಾಕ್ಟೋಸ್ ಅಸಹಿಷ್ಟತೆ ಇರುವವರಿಗೆ ಹೆಚ್ಚಾಗಿ ಪ್ರೋಬಯೋಟಿಕ್ಸ್ ಬಳಕೆಯನ್ನು ಹೆಚ್ಚಾಗಿ ಮಾಡುವಂತೆ ಪ್ರಚೋದಿಸಲಾಗುತ್ತದೆ. ಯಕೃತ್ತಿನ ತೊಂದರೆ ಇರುವವರಲ್ಲಿಯೂ ಈ ಪ್ರೋಬಯೋಟಿಕ್ ಬಳಕೆ ಮಾಡಲಾಗುತ್ತದೆ.ಯೋನಿಯ ಸೋಂಕು ಇರುವ ಮಹಿಳೆಯರಲ್ಲಿ ಮತ್ತು ಮೂತ್ರದ ಸೋಂಕು ಇರುವ ವ್ಯಕ್ತಿಗಳಲ್ಲಿ ಪ್ರೋಬಯೋಟಿಕ್ಸ್ ಬಳಸಿ ರೋಗಕಾರಕ ಬ್ಯಾಕ್ಟೀರಿಯಗಳ ಸಂಖ್ಯೆ ಕ್ಷೀಣಿಸುವಂತೆ ಮಾಡಲಾಗುತ್ತದೆ. ಪ್ರೋಬಯೋಟಿಕ್ ಔಷಧಿಗಳ ಮಾತ್ರೆಯ ರೂಪದಲ್ಲಿ, ಗುಳಿಗೆ ಅಥವಾ ಕ್ಯಾಪ್ಸೂಲ್ ರೂಪದಲ್ಲಿ, ಪೌಡರ್‍ನ ರೂಪದಲ್ಲಿ ಅಥವಾ ಗ್ರಾನ್ಯೂಲ್‍ಗಳ ರೂಪದಲ್ಲಿ ಸಿಗುತ್ತದೆ. ಸಾಮಾನ್ಯವಾಗಿ ವಯಸ್ಕರಿಗೆ 1ರಿಂದ 2 ಬಿಲಿಯನ್ ಯುನಿಟ್‍ಗಳಷ್ಟು ಪ್ರೋಬಯೋಟಿಕ್ ದಿನವೊಂದರಲ್ಲಿ ನೀಡಲಾಗುತ್ತದೆ. ಇತರ ಆಂಟಿಬಯೋಟಿಕ್‍ಗಳು ಮಧ್ಯಪಾನ ಅಥವಾ ಗರ್ಭ ನಿರೋಧಕ ಔಷಧಿಗಳು ಈ ಪ್ರೋಬಯೋಟಿಕ್ಸ್ ಔಷಧಿಯ ಕಾರ್ಯಕ್ಷಮತೆಗೆ ಧಕ್ಕೆ ತರುವುದಿಲ್ಲ.
ಬ್ಯಾಕ್ಟೀರಿಯಗಳ ಸಮತೋಲನದಲ್ಲಿ ಇಡಲು ಬಳಸುವ ಒಂದು ಔಷಧಿ:
ನಮ್ಮ ದೇಹ ಎನ್ನುವುದು ಬ್ಯಾಕ್ಟೀರಿಯಗಳ ಗಣಿ ಇದ್ದಂತೆ. ನಮ್ಮ ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಗಿಂತ ಹತ್ತು ಪಟ್ಟು ಜಾಸ್ತಿ ಬ್ಯಾಕ್ಟೀರಿಯಾಗಳು ನಮ್ಮ ದೇಹದೊಳಗೆ ವಾಸಿಸುತ್ತದೆ. ನಮ್ಮ ದೇಹದೊಳಗಿನ ಈ ಬ್ಯಾಕ್ಟೀರಿಯಾಗಳನ್ನು ಒಳ್ಳೆಯ ಬ್ಯಾಕ್ಟೀರಿಯಾ ಮತ್ತು ಕೆಟ್ಟ ಬ್ಯಾಕ್ಟೀರಿಯಾ ಎಂಬುದಾಗಿ ವಿಂಗಡಿಸಲಾಗುತ್ತದೆ. ಈ ಒಳ್ಳೆ ಬ್ಯಾಕ್ಟೀರಿಯಾಗಳನ್ನು ಒಟ್ಟಾಗಿ ಪ್ರೋಬಯೋಟಿಕ್ ಎಂದು ಕರೆಯಲಾಗುತ್ತದೆ. ನಮ್ಮ ದೇಹದೊಳಗಿರುವ ಬ್ಯಾಕ್ಟೀರಿಯಗಳಲ್ಲಿ ಶೇಕಡಾ 80ರಷ್ಟು ನಮ್ಮ ಕರುಳಿನ ಮತ್ತು ಜೀರ್ಣಾಂಗ ವ್ಯೂಹದಲ್ಲಿರುತ್ತದೆ ಮತ್ತು ಶೇಕಡಾ 80ರಷ್ಟು ಜೀವಾಣುಗಳ ಉಪದ್ರಕಾರಕವಲ್ಲದ ಜೀವಿಗಳು ನಮ್ಮ ದೇಹದ ತೂಕದ ನಿಯಂತ್ರಣ, ಜೀರ್ಣ ಪ್ರಕ್ರಿಯೆಯನ್ನು ಸರಿಯಾಗಿಡುವುದು, ದೇಹದ ರಕ್ಷಣ ಪ್ರಕ್ರಿಯೆಯನ್ನು ಸಮತೋಲನದಲ್ಲಿಡುವುದು ಮತ್ತು ರೋಗ ನಿಯಂತ್ರಣ ಮುಂತಾದ ಕೆಲಸಗಳನ್ನು ಈ ಒಳ್ಳೆಯ ಬ್ಯಾಕ್ಟೀರಿಯಗಳ ಸದ್ದಿಲ್ಲದೆ ಮಾಡುತ್ತಿರುತ್ತದೆ.
ಕಾರಣಾಂತರಗಳಿಂದ ಈ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ಕ್ಷೀಣಿಸಿದಾಗ ದೇಹದ ಆರೋಗ್ಯದ ಸಮತೋಲನ ತಪ್ಪಿ ಹೋಗುತ್ತದೆ. ಆ ಸಂದರ್ಭಗಳು ಈ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಬೇಕಾಗಿ ಬಳಸುವ ಔಷಧಿಯನ್ನು “ಪ್ರೋಬಯೋಟಿಕ್ಸ್” ಎಂದು ಕರೆಯಲಾಗುತ್ತದೆ. ಒಟ್ಟಿನಲ್ಲಿ ‘ಪ್ರೊಬಯೋಟಿಕ್’ ಎನ್ನುವುದು ಜೀವಂತ ಬ್ಯಾಕ್ಟೀರಿಯಾಗಳನ್ನು ನಿಗದಿತ ಸಂಖ್ಯೆ ಮತ್ತು ಸಾಂದ್ರತೆಯಲ್ಲಿ ಶೇಖರಿಸಿ ಔಷಧಿಯ ರೂಪದಲ್ಲಿ ಮಾತ್ರೆ, ಗುಳಿಗೆ, ಅಥವಾ ಕ್ಯಾಪ್ಸೂಲ್‍ನ ರೂಪದಲ್ಲಿ ದೇಹಕ್ಕೆ ನೀಡಿ ದೇಹದಲ್ಲಿನ ಬ್ಯಾಕ್ಟೀರಿಯಗಳ ಸಮತೋಲನದಲ್ಲಿ ಇಡಲು ಬಳಸುವ ಒಂದು ಔಷಧಿ ಎಂದರೂ ತಪ್ಪಲ್ಲ. ದೇಹಕ್ಕೆಬೇಕಾದ ಪ್ರೋಬಯೋಟಿಕ್ಸ್ ಔಷಧಿಯ ಪ್ರಮಾಣ ಮತ್ತು ಅವಶ್ಯಕತೆಯನ್ನು ವೈದ್ಯರೇ ನಿರ್ಧರಿಸುತ್ತಾರೆ ಮತ್ತು ವೈದ್ಯರ ಅನುಮತಿ ಇಲ್ಲದೆ ಈ ಔಷಧಿಗಳನ್ನು ಬಳಸುವುದು ಒಳೆಯದಲ್ಲ.
ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
Email: drmuraleemohan@gmail.com