Vydyaloka

ಪ್ರಾಣಾಯಾಮ: ಶ್ವಾಸಕೋಶ,ಮಾನಸಿಕ ಒತ್ತಡ ಸಮಸ್ಯೆಗೆ ಸಹಾಯಕ

ಪ್ರಾಣಾಯಾಮ  ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಪ್ರಾಣಾಯಾಮಗಳ ನಿರಂತರ ಆಭ್ಯಾಸದಿಂದ ಶ್ವಾಸಕೋಶದ ಸಮಸ್ಯೆಯನ್ನು ಕಡಿಮೆಮಾಡಬಹುದು ಹಾಗೂ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಿ ಆರೋಗ್ಯವನ್ನು ಪಡೆಯಬಹುದು.

ಪ್ರಾಣಾಯಾಮವು `ಪ್ರಾಣ’ ಮತ್ತು `ಆಯಾಮ’ ಪದಗಳ ಸಂಗಮ. ಪ್ರಾಣ ಎಂದರೆ ವೈಟಲ್ ಫೋರ್ಸ್ ಹಾಗೂ ಆಯಾಮ ಎಂದರೆ ವಿಸ್ತಾರ. ಒಟ್ಟಿನಲ್ಲಿ ಪ್ರಾಣಾಯಾಮವೆಂದರೆ ವೈಟಲ್ ಫೋರ್ಸ್‌ನ  ವಿಸ್ತರಣೆ ಎಂಬ ಅರ್ಥವನ್ನು ಕೊಡುತ್ತದೆ. ಪ್ರಾಣಾಯಾಮವು ದೇಹ ಹಾಗೂ ಮನಸ್ಸನ್ನು ಬೆಸೆಯುವ ಕೊಂಡಿಯಾಗಿದೆ. ಪ್ರಾಣಾಯಾಮವು ಒಂದು ದೈಹಿಕ ಕ್ರಿಯೆಯಾದರೂ ಅದರ ನಿರಂತರ ಅಭ್ಯಾಸದಿಂದ ಮನಸ್ಸಿನಲ್ಲಿ ನೆಮ್ಮದಿ, ಶಾಂತಿ ಹಾಗೂ ಸ್ಥಿರತೆಯನ್ನು ಕೊಡುತ್ತದೆ.

ಯೋಗ ಶಾಸ್ತ್ರದ ಪ್ರಕಾರ ಮಾನವನ ಶರೀರವು ಪಂಚಕೋಶ ಹಾಗೂ ಪಂಚಪ್ರಾಣದಿಂದ ರಚಿತವಾಗಿದೆ. ನಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿ ನೇರವಾಗಿ ಪ್ರಾಣಮಯ ಕೋಶ ಹಾಗು ವೈಟಲ್ ಫೋರ್ಸ್ ನ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಆಹಾರಶೈಲಿ ಹಾಗೂ ಜೀವನಶೈಲಿಯಲ್ಲಿ ವ್ಯತ್ಯಯವಾದರೆ ಅದು ಪ್ರಾಣದ ಅಥವಾ ವೈಟಲ್ ಫೋರ್ಸ್‌ನ ಸಂಚಾರಕ್ಕೆ ತಡೆಯನ್ನುಂಟು ಮಾಡಿ ಅಂಗಾಂಗಗಳ ಪ್ರಾಣ ಶಕ್ತಿಯ ಕುಂದಿಗೆ ಕಾರಣಾವಾಗುತ್ತದೆ. ಆದರೆ ಪ್ರಾಣಾಯಾಮದ ಅಭ್ಯಾಸವು ಅಂಗಾಂಗಗಳಿಗೆ ವೈಟಲ್ ಫೋರ್ಸ್ ಸಂಚಾರವಾಗುವಂತೆ ಮಾಡಿ ಪುನರುಚ್ಛೇತನಗೊಳಿಸುತ್ತದೆ.

2014ರಲ್ಲಿ ಜರ್ನಲ್ ಆಫ್ ಕ್ಲಿನಿಕಲ್ ಮತ್ತು ಡಯಗ್ನೋಸ್ಟಿಕ್ ರಿಸರ್ಚ್ ಪ್ರಕಟಿಸಿದ ವರದಿಯಂತೆ ನಾಡಿಶುದ್ಧಿ, ಭಸ್ತ್ರಿಕ, ಬ್ರಾಹ್ಮರಿ ಪ್ರಾಣಾಯಾಮ ಹಾಗೂ ಕಪಾಲಭಾತಿ ಕ್ರಿಯೆಗಳ ಅಭ್ಯಾಸದಿಂದ ಶ್ವಾಸಕೋಶಕ್ಕೆ ಹೆಚ್ಚು ಆಮ್ಲಜನಕದ ಪೂರೈಕೆಯಾಗಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ ಎಂದು ತಿಳಿದುಬಂದಿದೆ. ಈ ಪ್ರಾಣಾಯಾಮಗಳ ನಿರಂತರ ಆಭ್ಯಾಸದಿಂದ ಶ್ವಾಸಕೋಶದ ಸಮಸ್ಯೆಯನ್ನು ಕಡಿಮೆಮಾಡಬಹುದು ಹಾಗೂ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಿ ಆರೋಗ್ಯವನ್ನು ಪಡೆಯಬಹುದು.

ಯಾವುದೇ ರೀತಿಯ ಉಸಿರಾಟದ ಸಮಸ್ಯೆಯಿದ್ದರೆ ಅದರ ತೀವ್ರತೆಯನ್ನು ವೈದ್ಯರುಗಳು ಪೀಕ್ ಫ಼್ಲೋ ಮೀಟರ್‌ನಿಂದ ತಿಳಿಯುತ್ತಾರೆ. ಈ ಮೀಟರ್ ನ ಸಹಾಯದಿಂದ ಪೀಕ್ ಎಕ್ಸ್ಪಿರೇಟರಿ ಫ಼್ಲೋ ಮತ್ತು ಶ್ವಾಸಕೋಶದ ಶಕ್ತಿಯನ್ನು ಕಂಡುಹಿಡಿಯಬಹುದು. ಈ ಪೀಕ್ ಎಕ್ಸ್ಪಿರೇಟರಿ ಫ಼್ಲೋನ ಮಟ್ಟ ಕಡಿಮೆಯಿದ್ದರೆ ಅದು ಉಸಿರಾಟದ ಸಮಸ್ಯೆಯ ಸಂಕೇತವಾಗಿರಬಹುದು. ಡ್ರಗ್ ಇನ್ವೆನ್ಷನ್ ಟುಡೇ ಎಂಬ ವೈಜ್ಙಾನಿಕ ನಿಯತಕಾಲಿಕದಲ್ಲಿ ಪ್ರಕಟವಾದ ಒಂದು ಸಂಶೋಧನಾ ಲೇಖನವು ಭಸ್ತ್ರಿಕಾ ಪ್ರಾಣಾಯಾಮದ ನಿರಂತರ ಅಭ್ಯಾಸದಿಂದ ಪೀಕ್ ಫ಼್ಲೋ ಮೀಟರ್ ನಿಂದ ಅಳೆಯುವ ಪೀಕ್ ಎಕ್ಸ್ಪಿರೇಟರಿ ಫ಼್ಲೋ ಅನ್ನು ಹೆಚ್ಚು ಮಾಡಿ ತನ್ಮೂಲಕ ಉಸಿರಾಟದ ಸಮಸ್ಯೆಯನ್ನು ಕಡಿಮೆಮಾಡಿ ಶ್ವಾಸಾಂಗಹವ್ಯೂಹದ ಆರೋಗ್ಯವನ್ನು ಕಾಪಾಡಬಹುದು ಎಂದು ಪ್ರಕಟಿಸಿದೆ.

ಪ್ರಾಣಾಯಾಮ  ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು:

ನಮ್ಮ ಉತ್ತಮ ಆರೋಗ್ಯಕ್ಕೆ ದೇಹದ ರೋಗ ನಿರೋಧಕ ಶಕ್ತಿ ಸಹ ಬಹುಮುಖ್ಯ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ಉತ್ತಮವಾಗಿದ್ದರೆ ಯಾವುದೇ ಆರೋಗ್ಯ ಸಮಸ್ಯೆಯಾದರೂ ನಮ್ಮ ಬಳಿ ಬರಲು ಹೆದರುವುದು. ನಿರಂತರ ಪ್ರಾಣಾಯಾಮದ ಅಭ್ಯಾಸವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ನಿರಂತರ ಪ್ರಾಣಾಯಾಮದ ಅಭ್ಯಾಸದಿಂದ ಸೆಲ್ ಮಿಡಿಯೆಟೆಡ್ ಮತ್ತು ಮ್ಯೂಕೋಸಲ್ ಇಮ್ಯೂನಿಟಿಯನ್ನು (ಮೂಗಿನ ಮತ್ತು ಗಂಟಲಿನ ಒಳಪದರದ ರೋಗ ನಿರೋಧಕ ಶಕ್ತಿ) ಹೆಚ್ಚಿಸಬಲ್ಲದು ಎಂದು ಅನೇಕ ಸಂಶೋಧನೆಗಳು ತಿಳಿಸಿದೆ. ಅಂತೆಯೇ ಈ ಕರೋನಾ (ಕೊವಿಡ್-19)  ಆರೋಗ್ಯದ ಸವಾಲಿನ ಸಂಧರ್ಭದಲ್ಲಿ ಸಮಾಜದ ಎಲ್ಲರೂ ಕೂಡ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಮಾನಸಿಕ ಒತ್ತಡವು ಸಹ ರೋಗ ನಿರೋಧಕ ಶಕ್ತಿಯನ್ನು ಕಡಿಮೆಮಾಡುತ್ತದೆ. ಮಾನಸಿಕ ಒತ್ತಡವನ್ನು ಕ್ರಮಬದ್ಧವಾಗಿ ನಾಡಿಶುದ್ಧಿಯಂತಹ ಸರಳ ಪ್ರಾಣಾಯಾಮವನ್ನು ಪ್ರತಿನಿತ್ಯ ಅನೇಕ ಬಾರಿ ಅಭ್ಯಾಸ ಮಾಡುವುದರಿಂದ  ಕಡಿಮೆಮಾಡಬಹುದು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: