Vydyaloka

ಪ್ರಕೃತಿ ಚಿಕಿತ್ಸೆ- ಆರೋಗ್ಯ ವೃದ್ಧಿಗೆ ಸ್ವದೇಶಿ ಪದ್ಧತಿ

ಪ್ರ ಕೃತಿ ಚಿಕಿತ್ಸೆ ಜೀವನ ಶೈಲಿಯಿಂದ ಬರುವ ರೋಗಗಳ ತಡೆಗಟ್ಟುವಲ್ಲಿ ಪರಿಣಾಮಕಾರಿ. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಪದ್ಧತಿಯ ಜಾಗೃತಿ ಎಲ್ಲೆಡೆ ಹರಡುತ್ತಿದೆ.

ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯ ಹಾದಿಯಲ್ಲಿರುವ ಮನುಜ ಕುಲವು ತನ್ನ ಅಸ್ತಿತ್ವದ ಮೂಲವನ್ನು ಅರಿಯದೆ ಇರುವುದು ವಿಪರ್ಯಾಸವೇ ಸರಿ. ಆಧುನಿಕ ಲೋಕದ ಮನುಷ್ಯ ನವ್ಯತೆಯ ಮಧ್ಯೆ ಪ್ರಾಚೀನ ಪದ್ಧತಿಗಳ ಉಲ್ಲಂಘನೆ ಅಥವಾ ನಿರಾಸಕ್ತಿ ತೋರುತ್ತ ಪ್ರಕೃತಿಯಿಂದ ದೂರ ಉಳಿದು ಕಣ್ಣಿಗೆ ಕಾಣದ ಅಣುಗಳಿಂದ ರೋಗಕ್ಕೆ ತುತ್ತಾಗುತ್ತಿರುವುದು ಆಶ್ಚರ್ಯ ಪಡುವಂತದ್ದೇನಲ್ಲ.

ಹೌದು ಅನೇಕ ಕೆಲಸ ಕಾರ್ಯಗಳಲ್ಲಿ ತೊಡಗಿ ಒತ್ತಡದ ಜೀವನ ಶೈಲಿಯಲ್ಲಿ ಮುಳುಗಿ ಸರಿ ಪಡಿಸಲಾರದ ಜಂಜಾಟಗಳಲ್ಲಿ ಸಿಲುಕಿ ಮಾನವ ದೈಹಿಕ ಮಾನಸಿಕ ರೋಗಗಳ ಆಹ್ವಾನ ಮಾಡುತ್ತಿದ್ದಾನೆ. ಮನುಷ್ಯನ ಸಹಜ ಹಾಗೂ ಸರಳ ಆರೋಗ್ಯ ಸ್ಥಿತಿಗೆ ತನುಮನಗಳ ಸಮತೋಲನ ಅತೀ ಅವಶ್ಯಕ. ಅರಿವಿಲ್ಲದ ಮೂರ್ಖತನದ ಜೀವನ ಪದ್ಧತಿಯಿಂದಾಗಿ ಇಂದು ಸ್ಥಿರವಿಲ್ಲದ ಅನಾರೋಗ್ಯದ ಸಮಾಜವನ್ನು ನಾವೆಲ್ಲ ಕಟ್ಟಿದ್ದೇವೆ.

ಆಧುನಿಕ ವೈದ್ಯಕೀಯ ಸೌಲಭ್ಯಗಳು ಮನುಷ್ಯರಿಗೆ ಅವಶ್ಯಕ ನಿಜ ಆದರೆ ಮನುಜನ ಅಸಹಜ ಜೀವನ ಶೈಲಿಯಿಂದ ಬರುವ ರೋಗಗಳ ತಡೆಗಟ್ಟುವಲ್ಲಿ ನಾವೆಲ್ಲ ಹಿಂದುಳಿದಿದ್ದೇವೆ. ತುರ್ತು ಚಿಕಿತ್ಸೆಗೆ ಮಾತ್ರ ಆಧುನಿಕ ವೈದ್ಯಕೀಯ ಪದ್ದತಿಯನ್ನು ಬಳಸುತ್ತ ಇನ್ನು ಉಳಿದ ಸರ್ವೇಸಾಮಾನ್ಯವಾಗಿರುವ ಅಧಿಕ ರಕ್ತದೊತ್ತಡ, ಮಧುಮೇಹ, ಥೈರಾಯಿಡ್ ನಂತಹ ಅನೇಕ ರೋಗಗಳಿಗೆ ಸ್ವದೇಶಿ ಪದ್ದತಿಯನ್ನು ಬಳಸುತ್ತಾ ಸಾಗಿದರೆ ಅವಶ್ಯಕವಾಗಿ ಆರೋಗ್ಯ ಸಮಾಜವನ್ನು ಸರಳ ರೀತಿಯಿಂದ ಕಟ್ಟುವಲ್ಲಿ ನಾವೆಲ್ಲ ಯಶಸ್ವಿಯಾಗುತ್ತೇವೆ.

ಭಾರತೀಯ ವೈದ್ಯಕೀಯ ಪದ್ದತಿಯಲ್ಲಿ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ, ಯುನಾನಿ, ಸಿದ್ದ ಹಾಗು ಹೋಮಿಯೋಪತಿ, ಭಾರತ ಸರ್ಕಾರದ ಆಯುಷ್ ಇಲಾಖೆಯಡಿ ಸೇವೆ ಸಲ್ಲಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಪದ್ಧತಿಯ ಜಾಗೃತಿ ಎಲ್ಲೆಡೆ ಹರಡುತ್ತಿದೆ.

ದೇಶ ವಿದೇಶಗಳಲ್ಲೆಲ್ಲ ಜನರು ತಮ್ಮ ವಾಸ್ತವಿಕ ದೈನಂದಿನ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆಯ ಮೊರೆ ಹೋಗುತ್ತಿರುವುದು ಕಂಡು ಬರುತ್ತದೆ. ಪ್ರಕೃತಿ ಚಿಕಿತ್ಸೆಯ ಮೂಲ ತತ್ವ ಮನುಷ್ಯನ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದು. ಪ್ರಕೃತಿ ತಾನಾಗೇ ಕೊಟ್ಟಿರುವ ಈ ಶಕ್ತಿಯನ್ನು ಸದಾ ನಾವು ಕಾಪಾಡಿಕೊಂಡರೆ ಮಾನವ ಯಾವುದೇ ರೋಗಕ್ಕೆ ತುತ್ತಾದರು ಅದರಿಂದ ಹಾನಿಯಾಗದೆ ಆರೋಗ್ಯ ಜೀವನಕ್ಕೆ ಬಹು ಬೇಗ ಮರಳುತ್ತಾನೆ.

ಪ್ರಕೃತಿ ಚಿಕಿತ್ಸೆಯ ಮೂಲ ತತ್ವಗಳು :-
೧) ಪ್ರಕೃತಿ ನೀಡಿರುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು
೨) ದೇಹವನ್ನು ದೈಹಿಕ ಮತ್ತು ಮಾನಸಿಕವಾಗಿ ಸಂಪೂರ್ಣ ಗುಣಪಡಿಸುವುದು
೩) ವೈದ್ಯರು ಆರೋಗ್ಯದ ಜಾಗೃತಿಗೆ ಶಿಕ್ಷಕರಂತೆ ಸೇವೆ ಸಲ್ಲಿಸುವುದು
೪) ರೋಗಿಗೆ ಹಾನಿಮಾಡದಿರುವುದು
೫) ರೋಗದ ಮೂಲ ಕಾರಣ ತಿಳಿದು ಚಿಕಿತ್ಸೆ ನೀಡುವುದು
೬) ರೋಗ ಬರದಂತೆ ಮುನ್ನೆಚ್ಚರ ವಹಿಸುವುದು.

ಇಂತಹ ಅಮೂಲ್ಯವಾದ ಚಿಕಿತ್ಸಾ ಪದ್ಧತಿಯನ್ನು ನಮ್ಮ ಪ್ರಾಚೀನರು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಅದರ ಮಹತ್ವವನ್ನರಿತು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯ ಸಮಾಜವನ್ನು ಸೃಷ್ಟಿಸೋಣ.

ಕರ್ನಾಟಕ ರಾಜ್ಯದಲ್ಲಿ ಅನೇಕ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಅನೇಕ ಜನರ ಆಸರೆಯ ಆಶಾಕಿರಣವಾಗಿರುವ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಪೂಜ್ಯಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಪ್ರಕೃತಿ ಚಿಕಿತ್ಸಾ ಕೇಂದ್ರಗಳು ತಮ್ಮ ಸೇವೆಯನ್ನು ಸಲ್ಲಿಸುತ್ತಿವೆ.

ನಮ್ಮ ನೆಡೆ ಪ್ರಕೃತಿಯ ಕಡೆ ಎಂಬ ನಿಲುವು ನಮ್ಮದಾಗಲಿ ಪ್ರಕೃತಿಯಿಂದ ಪ್ರಕೃತಿಯೊಡನೆ ಸಾಗುತ್ತ ಪ್ರಕೃತಿಯಲ್ಲೇ ಲೀನವಾಗಬೇಕು. ಇರುವವರೆಗೂ ಆರೋಗ್ಯ ಜೀವನ ಶೈಲಿ ನಮ್ಮದಾಗಲಿ .

ಮಹಾವೈದ್ಯ
ಪ್ರಕೃತಿಯ ಈ ಕಾಯಾ
ಪ್ರಕೃತಿಗೆ ಸಲ್ಲಿಪುದು
ಎಷ್ಟರಿತೆವು ನಾವು ಆರೋಗ್ಯದ ಎಣಿಕೆ
ಸೃಷ್ಟಿಯ ಸಂಕ್ಷಿಪ್ತ ಲೆಕ್ಕಣಿಕೆ
ಸಾಗರವಾದರೆ ವೈದ್ಯ ವಿಜ್ಞಾನ
ಭೂಮಿಯೊಳಗಲ್ಲವೆ ಅದರ ಜನನ
ವಿಸ್ತರಿಸಿ ಕಂಡರೂ ಮನುಜ ರೋಗ ಜ್ಞಾನ
ಪೃಕೃತಿಗೂ ಮಿಗಿಲಾದ ‘ಮಹಾವೈದ್ಯ’ ಯಾರಿಹರೊ ಕವಿನಂದನ

ಡಾ. ಸುಜಾತ ಕೆ. ಜೆ (ಹಿರಿಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ತಜ್ಞರು)

ಡಾ. ಕೊಟ್ರೇಶ್ ಹಿರೇಮಠ (ಸ್ನಾತಕೋತ್ತರ ವಿದ್ಯಾರ್ಥಿ), SDMCNYS.

Share this: