Vydyaloka

ಪ್ಲಾಸ್ಟಿಕ್ ಮಾಲಿನ್ಯತೆ ಹೊಡೆದಟ್ಟಿ – ಪ್ರಕೃತಿಯೇ ಆರಾಧ್ಯ ದೈವ

ಪ್ಲಾಸ್ಟಿಕ್ ಮಾಲಿನ್ಯತೆ ಹೊಡೆದಟ್ಟಿ ಜೂನ್ 5ರ ವಿಶ್ವ ಪರಿಸರ ದಿನಾಚರಣೆಯ ಈ ವರ್ಷದ ಧ್ಯೇಯವಾಕ್ಯ.  ಪ್ರಕೃತಿಗೂ, ಸ್ವಚ್ಛ ಪರಿಸರಕ್ಕೂ ಮಾನವ ಆರೋಗ್ಯಕ್ಕೂ ನೇರ ಕೊಂಡಿಯಿದೆ. ಹಾಗೆಯೇ ಇದರ ಮಾಲಿನ್ಯತೆ ಹಾಗೂ ಕಲುಷಿತ ತನಕ್ಕೂ ಅನಾರೋಗ್ಯಕ್ಕೂ ನೇರ ಸಂಬಂಧವಿದೆ. ಪ್ರತೀವರ್ಷ ಪ್ರಪಂಚ 500 ಶತಕೋಟಿ ಪ್ಲಾಸ್ಟಿಕ್ ಬ್ಯಾಗ್ ಬಳಸುತ್ತದೆ. ಸಾಗರಗಳಲ್ಲಿ ಕನಿಷ್ಠ 8 ದಶಲಕ್ಷ ಜನ ಪ್ಲಾಸ್ಟಿಕ್ ಶೇಖರಣೆಯಾಗುತ್ತಿದೆ. ವಿಶ್ವದಲ್ಲಿ ತುರ್ತುಸ್ಥಿತಿಯಿದ್ದು ನಾವು ಕುಡಿಯುವ ನೀರಿನಲ್ಲಿ, ತಿನ್ನುವ ಆಹಾರದಲ್ಲಿ ಪ್ಲಾಸ್ಟಿಕ್ ಇದೆ.

ಪ್ಲಾಸ್ಟಿಕ್ ಮಾಲಿನ್ಯತೆ ಹೊಡೆದಟ್ಟಿ - ಪ್ರಕೃತಿಯೇ ಆರಾಧ್ಯ ದೈವ

ಹಿಂದಿನಿಂದ ನಮ್ಮ ಪೂರ್ವಜರು ಪ್ರಕೃತಿಯನ್ನ ಅದರ ಅಂಗಗಳನ್ನ ದೈವವೆಂದು ಪೂಜಿಸಿ ರಕ್ಷಿಸುತ್ತಿದ್ದರು. ಆದರೆ ಅಭಿವೃದ್ಧಿಯ ಪಥದಲ್ಲಿ ಮನುಷ್ಯ ಮುಂದುವರೆದಂತೆ ಪ್ರಕೃತಿಯ ತೋಟದಲ್ಲಿ ಪ್ರಗತಿಯ ಸ್ಫೋಟವಾಗಿದೆ. ಸ್ವಾಭಾವಿಕ ಪ್ರಕೃತಿಗೂ, ಸ್ವಚ್ಛ ಪರಿಸರಕ್ಕೂ ಮಾನವ ಆರೋಗ್ಯಕ್ಕೂ ನೇರ ಕೊಂಡಿಯಿದೆ. ಹಾಗೆಯೇ ಇದರ ಮಾಲಿನ್ಯತೆ ಹಾಗೂ ಕಲುಷಿತ ತನಕ್ಕೂ ಅನಾರೋಗ್ಯಕ್ಕೂ ನೇರ ಸಂಬಂಧವಿದೆ. ಸರಕಾರ ಹಾಗೂ ಕೈಗಾರಿಕೆಗಳು ಅಭಿವೃದ್ಧಿಯ ಮಂತ್ರ ಜಪಿಸಿದರೆ, ಪರಿಸರವಾದಿಗಳು ಅಭಿವೃದ್ಧಿ ಪ್ರಕೃತಿಯ ಮೇಲೆ ಆಕ್ರಮಣ ಮಾಡಕೂಡದು ಎನ್ನುತ್ತಾರೆ. ಪ್ರತೀ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ. ಈ ವರ್ಷದ ಧ್ಯೇಯವಾಕ್ಯ ಪ್ಲಾಸ್ಟಿಕ್ ಮಾಲಿನ್ಯತೆ ಹೊಡೆದಟ್ಟಿ. ಈ ಹಿನ್ನೆಲೆಯಲ್ಲಿ ಈ ವರ್ಷ ಫೆಬ್ರವರಿ 19ರಂದು ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇಶದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಗಳ ಸಚಿವರಾದ ಡಾ. ಹರ್ಷವರ್ಧನ್ ಹಾಗೂ ವಿಶ್ವಸಂಸ್ಥೆಯ ಆಧೀನ ಮಹಾ ಕಾರ್ಯದರ್ಶಿ ಹಾಗೂ ವಿಶ್ವಸಂಸ್ಥೆಯ ಪರಿಸರ ವಿಭಾಗದ ಮುಖ್ಯಸ್ಥರಾದ ಎರಿಕ್ ಸೋಲ್‍ಹೈಮ್ ಜಂಟಿಯಾಗಿ ಘೋಷಿಸಿದಂತೆ, ಈ ವರ್ಷದ ವಿಶ್ವ ಪರಿಸರ ದಿನಾಚರಣೆಯಂದು ಇಡೀ ವಿಶ್ವದಾಚರಣೆಯ ಪ್ರಾಯೋಜಕತ್ವ ನಮ್ಮ ಭಾರತ ದೇಶದ್ದು.

ಪ್ಲಾಸ್ಟಿಕ್ ಮಾಲಿನ್ಯತೆ

ಇಡೀ ವಿಶ್ವ ಏಕ ಬಳಕೆಯ ಪ್ಲಾಸ್ಟಿಕ್ ಮಾಲಿನ್ಯತೆ ತಡೆಯಲು ಒಂದಾಗುತ್ತಲಿದೆ. ಒಂದು ಕ್ರಿಕೆಟ್ ಪಂದ್ಯದ ಒಂದು ಓವರ್‍ನಲ್ಲಿ ಹಾರ್ದಿಕ್ ಪಾಂಡ್ಯ ಮಾಡುವ ಬೌಲಿಂಗ್ ಸಮಯದಲ್ಲಿ, ಸಾಗರದಲ್ಲಿ 4 ಕಸದ ಲಾರಿಗಳಷ್ಟು ಪ್ಲಾಸ್ಟಿಕ್ ಎಸೆಯಲ್ಪಟ್ಟಿರುತ್ತದೆ. ಈ ವರ್ಷದ ಧ್ಯೇಯವಾಕ್ಯ, ಸರಕಾರಗಳು, ಕೈಗಾರಿಕೆಗಳು, ಸಮುದಾಯಗಳು ಹಾಗೂ ವ್ಯಕ್ತಿಗಳನ್ನ್ನು ಒಂದುಗೂಡಿಸಲು ಹಾಗೂ ಸುಸ್ಥಿರವಾದ ಬೇರೆ ಸಾಧ್ಯತೆಗಳನ್ನು ಅನ್ವೇಷಿಸಲು, ಸಾಗರಗಳ ಜೀವನ ನಾಶ ಮಾಡುತ್ತಿರುವ ಹಾಗೂ ಮಾನವ ಆರೋಗ್ಯವನ್ನು ಹೆದರಿಸುತ್ತಿರುವ, ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ ತಗ್ಗಿಸಲು, ಅತಿಯಾದ ಬಳಕೆ ನಿಲ್ಲಿಸಲು, ಪ್ಲಾಸ್ಟಿಕ್ ಮಾಲಿನ್ಯತೆ ಕಡಿಮೆ ಮಾಡಲು ಪ್ರೇರೇಪಿಸುತ್ತಿದೆ. ಭಾರತೀಯ ತತ್ವಶಾಸ್ತ್ರ ಹಾಗೂ ಜೀವನ ಶೈಲಿಯಲ್ಲಿ ಹಿಂದಿನಿಂದ ಬಂದಿರುವಂತೆ, ಪ್ರಕೃತಿಯೊಂದಿಗೆ ಸಹಜೀವನ ಎಂಬ ಬೇರಿದೆ. ಭೂಗೃಹವನ್ನು ಹೆಚ್ಚು ಸ್ವಚ್ಛಮಾಡಲು ಹಾಗೂ ಹಸಿರಾಗಿಡಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ. ಡಾ ಹರ್ಷವರ್ಧನ್.

“ ಈ ಭೂಗೃಹದಲ್ಲಿರುವ ನಾವು ಪ್ರತಿಯೊಬ್ಬರೂ, ಪ್ರತಿದಿನ ಕನಿಷ್ಟ ಒಂದು ಹಸಿರು ಒಳ್ಳೆಯ ಕೆಲಸ ಮಾಡಿದರೆ, ಅದು ನಮ್ಮ ಸಾಮಾನಿಕ ಹಸಿರು ಜವಾಬ್ದಾರಿಯಾಗುತ್ತದೆ. ಇದರಿಂದ ಪ್ರತಿನಿತ್ಯ ಶತಕೋಟಿ ಒಳ್ಳೆಯ ಹಸಿರು ಕೆಲಸಗಳಾಗುತ್ತವೆ. ಸಾರ್ವಜನಿಕ ಆಸಕ್ತಿ ಹಾಗೂ ಭಾಗವಹಿಸುವಿಕೆಗಾಗಿ ವಿಶ್ವ ಪರಿಸರ ದಿನಾಚರಣೆ ಸಂಘಟಿಸಲು ಚಟುವಟಿಕೆಗಳು ಹಾಗೂ ಘಟನೆಗಳನ್ನು ಸಂಘಟಿಸಲು, ನಾವು ಬದ್ಧರಾಗಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ, ರಾಷ್ಟ್ರೀಯ ಅರಣ್ಯಗಳು ಹಾಗೂ ರಕ್ಷಿತ ಪ್ರದೇಶಗಳಲ್ಲಿ, ಕಡಲ ತಡಿಗಳಲ್ಲಿ, ಪ್ಲಾಸ್ಟಿಕ್ ಸ್ವಚ್ಛತಾ ಆಂದೋಳನ ಕಾರ್ಯಕ್ರಮಗಳು ಇತರರಿಗೆ ಉದಾಹರಣೆಯಾಗಿ ನಿಲ್ಲುವಂತೆ ನಮ್ಮ ಭಾರತ ಪ್ರೇರಣಾತ್ಮಕವಾಗಿ ಕಾರ್ಯ ಮಾಡಲಿದೆ”. ಎರಿಕ್ ಸೋಲ್‍ಹೈಮ್ ಅಂದು ಮಾತನಾಡಿದಂತೆ “ಈ ದೇಶ ಹವಾಮಾನ ಬದಲಾವಣೆಯಲ್ಲಿ ವಿಶ್ವ ನಾಯಕತ್ವ ಸಿದ್ಧ ಮಾಡಿ ತೋರಿಸಿದೆ, ಪ್ಲಾಸ್ಟಿಕ್ ಮಾಲಿನ್ಯತೆ ದೂರ ಮಾಡುವಲ್ಲಿ ಭಾರತ ಮಹಾಕ್ರಿಯೆಗೆ ವೇಗ ತರಲಿದೆ ಸದ್ಯ ವಿಶ್ವದಲ್ಲಿ ತುರ್ತುಸ್ಥಿತಿಯಿದ್ದು ನಾವು ಕುಡಿಯುವ ನೀರಿನಲ್ಲಿ, ತಿನ್ನುವ ಆಹಾರದಲ್ಲಿ ಪ್ಲಾಸ್ಟಿಕ್ ಇದೆ”.

ಸಾಗರಗಳಲ್ಲಿ  ಪ್ಲಾಸ್ಟಿಕ್ ಶೇಖರಣೆ

ಪ್ರತೀವರ್ಷ ಪ್ರಪಂಚ 500 ಶತಕೋಟಿ ಪ್ಲಾಸ್ಟಿಕ್ ಬ್ಯಾಗ್ ಬಳಸುತ್ತದೆ. ಸಾಗರಗಳಲ್ಲಿ ಕನಿಷ್ಠ 8 ದಶಲಕ್ಷ ಜನ ಪ್ಲಾಸ್ಟಿಕ್ ಶೇಖರಣೆಯಾಗುತ್ತಿದೆ. ಪ್ರತಿ ನಿಮಿಷ ಒಂದು ಲಾರಿ ಕೊಳಚೆಗೆ ಇದು ಸಮ. ಇಡೀ ಶತಮಾನಕ್ಕಿಂತ ಕಳೆದ ದಶಕದಲ್ಲಿ ಹೆಚ್ಚು ಪ್ಲಾಸ್ಟಿಕ್ ಉತ್ಪಾದಿಸಿದ್ದೇವೆ. ಪ್ರತಿ ನಿಮಿಷ 1 ದಶಲಕ್ಷ ಪ್ಲಾಸ್ಟಿಕ್ ಶೀಷೆಗಳನ್ನು ಕೊಳ್ಳುತ್ತೇವೆ. ನಾವು ಉತ್ಪಾದಿಸುವ ಎಲ್ಲ ತ್ಯಾಜ್ಯದ ಶೇಕಡಾ 10ರಷ್ಟು ಪ್ಲಾಸ್ಟಿಕ್ಕೇ ಇದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ಪ್ರಪಂಚ ಕನಸೇ!? ಎಂಬ ಪ್ರಶ್ನೆಗೆ ಉತ್ತರವಾಗಿ ಈ ಕೆಲವು ಉತ್ತಮ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಉತ್ತರ ಭಾರತದ ಹಿಮಾಲಯದ ಬಳಿ ಪಾನ್‍ಗಾಟ್ ಎಂಬ ದಟ್ಟ ಅರಣ್ಯದ ಪ್ರದೇಶದಲ್ಲಿ, ಸ್ವಚ್ಛ ಪರ್ವತದ ಗಾಳಿ ಇದ್ದು, 200 ಸ್ಥಳೀಯ ಹಕ್ಕಿಗಳ ತಳಿಗಳಿವೆ. ಪ್ರಪಂಚದ ಮೇಲೆ ಮೂಲೆಗಳಿಂದ ಹಕ್ಕಿ ಪ್ರಿಯ ನೋಡುಗರು, ಪ್ರಕೃತಿ ಪ್ರಿಯರು ಧಾವಿಸುತ್ತಿದ್ದಾರೆ. ಅತಿ ಹೆಚ್ಚು ಪ್ರವಾಸಿಗಳ ಆಗಮನ ವ್ಯಾಪಾರಸ್ಥರ ಚಿಕ್ಕ ಸೈನ್ಯವನ್ನೇ ಅಲ್ಲಿಗೆ ಸೆಳೆಯಿತು. ಪ್ಲಾಸ್ಟಿಕ್ ಬಾಟಲಿಗಳ ನೀರು, ಬಿಸ್ಕೇಟು, ಉಪ್ಪೇರಿ, ಪ್ಲಾಸ್ಟಿಕ್ ಸುತ್ತಿದ ಸೋಪುಗಳು ಮಾರಾಟವಾದವು.

ಪ್ಲಾಸ್ಟಿಕ್ ಕಸ ನಿವಾರಣೆ ಕೆಲವೇ ತಿಂಗಳ ಹಿಂದಿನವರೆಗೆ ಅಸಾಧ್ಯವಾಗಿತ್ತು. ಸ್ಥಳೀಯ ಹಳ್ಳದಲ್ಲಿ ಎಸೆದ ಕಸ, ಸ್ಥಳೀಯ ನದಿ ಸೇರಿ ತೇಲುತ್ತಿತ್ತು. ಕಳೆದ ವರ್ಷ ಒಂದು ದಿನ ಸ್ಥಳೀಯ ವಸತಿಗೃಹ ಮಾಲಿಕ, ಮೋಹಿತ್ ಅಗ್ಗರ್‍ವಾಲಾ, ಚಿಂತನ ಎಂಬ ಲಾಭರಹಿತ ಸಂಸ್ಥೆಯೊಂದಿಗೆ ತ್ಯಾಜ್ಯ ನಿವಾರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡ. ಆ ಸ್ವಾಭಾವಿಕ ಸ್ವರ್ಗಕ್ಕೆ ಪ್ಲಾಸ್ಟಿಕ್‍ನಿಂದ ಮುಕ್ತಿ ಕೊಡಿಸಲು, ಎಲ್ಲ ವಸತಿಗೃಹಗಳ ಮಾಲಿಕರನ್ನು ಭೇಟಿಯಾದ. ಕಾಳಜಿ ಇರುವ ನಾಗರಿಕರು, ಶಾಲಾ ಮಕ್ಕಳ ಬೆಂಬಲದೊಂದಿಗೆ, ಇವರು ಪ್ಲಾಸ್ಟಿಕ್ ಕಸ ನಿವಾರಣೆಯಲ್ಲಿ ತೊಡಗಿದ್ದಾರೆ. ಹೋಟೆಲ್‍ಗಳಲ್ಲಿಯ ಆಹಾರ ತ್ಯಾಜ್ಯದಲ್ಲಿ, ಹಸಿಯನ್ನು ಗೊಬ್ಬರಕ್ಕೆ ಹಾಕುತ್ತ, ಅತಿಥಿಗಳಿಗೆ ಬಟ್ಟೆ, ಚೀಲಗಳು, ಮರುಬಳಕೆಯಾಗುವ ನೀರಿನ ಬಾಟಲಿ ಕೊಡುತ್ತಿದ್ದಾರೆ. ಮನೆಯ ಕಸ ನಿವಾರಣೆಗೆ ಮನೆಯವರಿಗೆ, ಹೊರಗಿನಿಂದ ಬರುವ ಅತಿಥಿಗಳಿಗೆ, ಪ್ಲಾಸ್ಟಿಕ್ ತರದಿರಲು ಹೇಳುತ್ತ, ಹಸಿತ್ಯಾಜ್ಯವನ್ನು ದನ ಕರುಗಳಿಗೆ ಹಾಕುತ್ತಿದ್ದಾರೆ. ಒಂದೇ ವರ್ಷದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿದೆ.

ಮುಂಬಯಿಯ ವಾರ್ಸೋವಾ ಕಡಲತಡಿಯ ಬಳಿ ನಡೆದ ಪ್ರಯತ್ನವೇನು ಬಲ್ಲಿರಾ? ಅಫ್ರೋಜ್ ಶಾ ಎಂಬ ವಕೀಲರು 2015ರಲ್ಲಿ ವಸತಿ ಸಂಕೀರ್ಣದ ಒಂದು ಮನೆ ಕೊಂಡರು. ಅವರು ನಿತ್ಯ ಗಮನಿಸಿದಂತೆ, ಹೆಚ್ಚುತ್ತಿದ್ದ ಕಡಲತಡಿಯ ಪ್ಲಾಸ್ಟಿಕ್ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲು, ತಾನೇನಾದರೂ ಮಾಡಬೇಕೆಂದು ನಿರ್ಧರಿಸಿದರು. ತನ್ನ ಮಿತ್ರನೊಂದಿಗೆ ವಾರಾಂತ್ಯಗಳಲ್ಲಿ ಪ್ಲಾಸ್ಟಿಕ್ ಕಸ ಆಯಲು ಆರಂಭಿಸಿದರು. ಅವರೊಂದಿಗೆ ಅನೇಕ ಸ್ವಯಂಸೇವಕರು ಸೇರಿಕೊಂಡರು. ಇವರೆಲ್ಲ ಸುಮಾರು 13 ದಶಲಕ್ಷ ಕಿಲೋಗ್ರಾಂ ತ್ಯಾಜ್ಯ ನಿವಾರಣೆ ಮಾಸಿದಾಗ, ವಿಶ್ವಸಂಸ್ಥೆ ಇದನ್ನು ಪ್ರಪಂಚದ ಅತ್ಯಂತ ದೊಡ್ಡ ಕಡಲತಡಿ ಸ್ವಚ್ಛತಾ ಕಾರ್ಯಕ್ರಮ ಎಂದು ಕರೆದಿದೆ. ಈ ಕಾರ್ಯ ಮುಂದುವರೆದಂತೆ ಈ ಸ್ವಯಂಸೇವಕರು ಗಮನಿಸಿದ್ದೇನು? ಮೊಟ್ಟೆ ಒಡೆದು ಹೊರಬಂದ 80 ಒಲಿವ್ ರಿಡ್ಲೆ ಆಮೆಗಳು ಸಮುದ್ರದತ್ತ ಧಾವಿಸಿದವು. ದಶಕಗಳಿಂದ ಈ ಕಡಲತಡಿಯ ಮೇಲೆ ಈ ಆಮೆಗಳು ಕಂಡಿರಲಿಲ್ಲ. ಈ ಸ್ವಯಂಸೇವಕರು ಆಮೆಗಳ ಗೂಡುಗಳ ಬಳಿ ಮಲಗಿ ಅವುಗಳನ್ನು ಪರಭಕ್ಷಕರಿಂದ ಕಾಯ್ದಿದ್ದರು. ಕಡಲತಡಿ ಸ್ವಚ್ಛ ಮಾಡುವವರು ಅಲ್ಲಿಯ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಕಂಡು, ತಮ್ಮ ಪ್ಲಾಸ್ಟಿಕ್ ಅವಲಂಬನೆ ನಿಲ್ಲಿಸಬೇಕೆಂದು ಸ್ವತಃ ಕಲಿಯುತ್ತಾರೆ.

ಇಂಡೋನೇಶಿಯಾದ ಪ್ಲಾಸ್ಟಿಕ್ ಬ್ಯಾಗ್ ಡೈಟ್ ಚಳುವಳಿ ನಿರ್ದೇಶಕ ಹಾಗೂ ವಕೀಲರಾದ ತಿಝಾ ಮಾಫಿಕಾ ಹೇಳುವಂತೆ ಕಡಲತಡಿ ಸ್ವಚ್ಛ ಮಾಡುವವರಿಗೆ ಸಮಸ್ಯೆಯ ಸ್ವಷ್ಠ ಚಿತ್ರಣ ದೊರೆಯುತ್ತದೆ. ಈ ದೃಶ್ಯ ಆಘಾತ ಹಾಗೂ ಶಿಕ್ಷಣ ಅವರ ಕಣ್ಣು ತೆರೆಸುತ್ತವೆ. ಪುಣೆಯಲ್ಲಿ ಮಹಿಳೆಯರ ಒಂದು ಗುಂಪುನಗರ ಸ್ವಚ್ಛತೆಯ ಮುಂಚೂಣಿಯಲ್ಲಿದೆ. ಸ್ವಯಂ ಉದ್ಯೋಗಿಗಳಾದ ಕಸ ಆಯುವವರ ಸಂಪೂರ್ಣ ಸ್ವಂತ ಸಹಕಾರಿ ಸಂಸ್ಥೆ, ಭಾರತದಲ್ಲೇ ಮೊಟ್ಟ ಮೊದಲನೇಯದು. ಪುಣೆಯ ಪುಸಭೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ 3000 ಮಹಿಳಾ ಕಾರ್ಮಿಕರು, ಮನೆ ಮನೆಗೆ ಹೋಗಿ ಕಸ ಆಯುವ ಸೇವೆ ಮಾಡಿ, ನಗರದ 6 ಲಕ್ಷಕ್ಕಿಂತ ಹೆಚ್ಚು ಮನೆಗಳಿಂದ, ಪ್ರತಿ ವರ್ಷ 50 ಸಾವಿರ ಟನ್ ತ್ಯಾಜ್ಯ ಸಂಗ್ರಹಿಸಿ, ಅವುಗಳ ಪುನರ್‍ಬಳಕೆ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜನಜಾಗೃತಿ

ಆಯ್ದ ತ್ಯಾಜ್ಯಗಳಾದ ಕಾಗದ, ಪ್ಲಾಸ್ಟಿಕ್ ಖನಿಜ, ಗಾಜುಗಳನ್ನು ಪುನರ್ ಬಳಕೆಗಾಗಿ, ಹಾಗೂ ಹಸಿ ಕಸವನ್ನು ಗೊಬ್ಬರ ತಯಾರಿಕೆಗೆ ಒಯ್ಯುತ್ತಾರೆ. ಇದಕ್ಕೆ ಸ್ವಚ್ ಎಂಬ ಹೆಸರಿದೆ. ಇದರ ಪರಿಸರ ಆಯಾಮ ಮುಖ್ಯವಾದುದು.  ಆಯ್ದ ಕಾಗದದ ಪುನರ್ ಬಳಕೆಯಿಂದ, ಒಂದು ವರ್ಷದಲ್ಲಿ ಮೂರುವರೆ ಲಕ್ಷ ಮರಗಳ ಕಡಿಯುವಿಕೆ ತಡೆಯಲ್ಲಡುತ್ತಿದೆ. 1,30,000 ಮೆಟ್ರಿಕ್ ಟನ್ನಿನಷ್ಟು ಇಂಗಾಲದ ಆಕ್ಸೈಡ್‍ಗೆ ಸಮನಾದದ್ದು, ವಾತಾವರಣದಲ್ಲಿ ಬೆರೆಯದಂತೆ ಇವರ ಕೆಲಸ ತಡೆಯುತ್ತಿದೆ. ಪುಣೆಯ ಜನಸಂಖ್ಯೆಯ ಮೂರನೇ ಒಂದು ಭಾಗ, ಅಂದರೆ 1.2 ದಶಲಕ್ಷಕ್ಕಿಂತ ಹೆಚ್ಚು ಜನ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಅಲ್ಲೆಲ್ಲ ತ್ಯಾಜ್ಯ ನಿರ್ವಹಣಾ ಸೇವೆಗಳು ಇಲ್ಲವೇ ಇಲ್ಲ ಅಥವಾ ಸಾಕಷ್ಟಿಲ್ಲ. ಈ ಬಡ ಪ್ರದೇಶಗಳಲ್ಲಿಯ ಮನೆ ಮನೆಯ ತ್ಯಾಜ್ಯ ಸಂಗ್ರಹಣೆಯಲ್ಲಿ, ಸ್ವಚ್ಛ ಸಂಸ್ಥೆಯ ಯತ್ನವೇ ಮೊಟ್ಟ ಮೊದಲ ಪ್ರಯತ್ನವಾಗಿದೆ. ಪುಣೆಯ ಪುರಸಭೆಯ ಜಿಲ್ಲಾಧಿಕಾರಿ ಸುರೇಶ್ ಜಗತಾಪ್ ಈ ಪ್ರಯತ್ನ ಮೆಚ್ಚಿದ್ದಾರೆ.

ವಡೋದರಾದ 32 ವರ್ಷದ ಯುವತಿ ರಾಜೇಶ್ವರಿಸಿಂಗ್ ದಿಲ್ಲಿಗೆ ಕಡು ಬಿಸಿಲಿನಲ್ಲಿ ಪಾದಯಾತ್ರೆ ಹೊರಟಿದ್ದಾರೆ. ಇವರು ಗುಜರಾಥ್, ರಾಜಸ್ಥಾನ್, ಹರಿಯಾಣ ಹಾಗೂ ಕೇಂದ್ರಾಡಳಿತ ಪ್ರದೇಶ ದಿಲ್ಲಿ, ಹೀಗೆ 4 ರಾಜ್ಯಗಳ 22 ನಗರಗಳನ್ನು ಹಾದು, 1100 ಕಿ.ಮಿ ನಡೆಯಲಿದ್ದಾರೆ. ಏಪ್ರಿಲ್ 22ರಂದು ಹೊರಟು 6 ವಾರ ನಡೆದು, ದಿಲ್ಲಿಗೆ ಜೂನ್ 5 ರಂದು ಸೇರುವ ಗುರಿ ಹೊಂದಿದ್ದಾರೆ. ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜನಜಾಗೃತಿ ಮೂಡಿಸುವುದೇ ರಾಜೇಶ್ವರಿಸಿಂಗ್ ಅವರ ಪಾದಯಾತ್ರೆಯ ಗುರಿ. ಗುಜರಾಥಿನ ವಿಧಾನ ಸಭೆ ಅಧ್ಯಕ್ಷರಾದ ರಾಜೇಂದ್ರ ತ್ರಿವೇದಿ ಈಕೆಯನ್ನು ಶ್ಲಾಘಿಸಿದ್ದಾರೆ. ಸಿಂಗ್‍ಳ ಘೋಷವಾಕ್ಯ ನನ್ನ ತ್ಯಾಜ್ಯ ನನ್ನ ಜವಾಬ್ದಾರಿ. ದಾರಿಯಲ್ಲಿ ಕಂಡವರೊಂದಿಗೆ ಮಾತಾಡಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಜಾಗೃತಿ ಮಾಡಿ, ತನ್ನ ಸಂಸ್ಥೆಗೆ ನಿಧಿ ಸಂಗ್ರಹ ಸಹ ಮಾಡುತ್ತಿದ್ದಾಳೆ. ಆಕೆ ಹೇಳುತ್ತಾಳೆ “ ನಾನು ನಡೆಯುವಾಗ ನನ್ನ ಬಳಿ ಶೇಕಡಾ ಸೊನ್ನೆ ಮಾಲಿನ್ಯತೆಯಿದೆ. ಆಹಾರ, ದ್ರವ, ನೀರು ಎಲ್ಲೂ ಪ್ಲಾಸ್ಟಿಕ್ ಒಯ್ಯುತ್ತಿಲ್ಲ. ಗುಜರಾಥ್ ಪ್ರವಾಸೋದ್ಯಮ ಇಲಾಖೆ ಹಾಗೂ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ರಾಜೇಶ್ವರಿ ಸಿಂಗ್‍ಳಿಗೆ ಬೆಂಬಲ ನೀಡಿವೆ. ಕಳೆದ 10 ವರ್ಷಗಳಿಂದ ಈಕೆ ಯಾವುದೇ ರೀತಿ ಪ್ಲಾಸ್ಟಿಕ್ ಬಳಸಿಲ್ಲವಂತೆ. ಪ್ರತಿದಿನ 30 ಕಿ.ಮಿ ನಡೆಯುತ್ತಿದ್ದಾಳೆ. ಶಿಕ್ಷಣ ಸಂಶೋಧನೆ ಹಾಗೂ ತ್ಯಾಜ್ಯ ನಿರ್ವಹಣೆಗಳಿಗಾಗಿ ಈಕೆ ನಿಧಿ ಸಂಗ್ರೆಹಿಸುತ್ತಿದ್ದಾಳೆ. ಪ್ಲಾಸ್ಟಿಕ್ ಬಳಸದೇ, ವಿವಿಧ ಸ್ಥಳಗಳ ಸ್ಥಳೀಯ ನೀರು ಕುಡಿದಾಗ ಅದರ ಭಿನ್ನ ರುಚಿ ಅನುಭವಿಸಿದ್ದಾಳೆ.
ಮುಖ್ಯ ಕ್ರೀಡಾ ಘಟನೆಗಳು ನಡೆದಾಗ, ಏಳೂವರೆ ಲಕ್ಷ ಪ್ಲಾಸ್ಟಿಕ್ ಬಾಟಲಿಗಳು ಅಲ್ಲಿ ಬೀಳುತ್ತವೆ. ವೋಲ್ವೊ ಸಾಗರ ಪಂದ್ಯದಲ್ಲಿ ಟರ್ನ್ ದ ಟೈಡ್ ಆನ್ ಪ್ಲಾಸ್ಟಿಕ್ ವಿಹಾರ ನೌಕೆ ಈ ಬಗ್ಗೆ ಸಾರುತ್ತಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖ್ಯ ಕ್ರಿಕೆಟ್ ಪಂದ್ಯಗಳು ನಡೆದಾಗ, 3-4 ಟನ್ ಮಿಶ್ರ ತ್ಯಾಜ್ಯ ಬಿದ್ದಿರುತ್ತದೆ. ಈ ತ್ಯಾಜ್ಯ ವಿಂಗಡಿಸಲು ಹಸಿರು ಪಡೆ ಸ್ವಯಂಸೇವಕರು ಹೆಣಗುತ್ತಾರೆ, ಹಾಗೂ ವೀಕ್ಷಕರಿಗೆ ಈ ಬಗ್ಗೆ ಶಿಕ್ಷಣ ನೀಡುತ್ತಾರೆ. ಹಸಿರು ಶಿಷ್ಟಾಚಾರ ಒಪ್ಪಂದದಂತೆ, ಒಣ ಹಾಗೂ ಹಸಿ ತ್ಯಾಜ್ಯಕ್ಕಾಗಿ ಪ್ರತ್ಯೇಕ ಕಸದ ಡಬ್ಬ ಇಡಲಾಗಿವೆ. ಇಲ್ಲಿಯ ಹಸಿ ತ್ಯಾಜ್ಯವನ್ನು ಜೈವಿಕ ಇಂಧನ ಉತ್ಪಾದನೆಗೆ ಕಳಿಸಿ, ಒಣತ್ಯಾಜ್ಯದ ಪುನರ್ ಬಳಕೆಗೆ ಪ್ರಯತ್ನಿಸುತ್ತಿದೆ. ಇಂದೂರಿನಲ್ಲಿ ಕಸ ತ್ಯಾಜ್ಯದ ಪುನರ್ ಬಳಕೆ, ಪುನರ್ ಚಕ್ರ ಹಾಗೂ ಇದನ್ನು ಕಡಿಮೆ ಮಾಡಲು 72 ವಿಧಾನಗಳ ಹಸಿರು ಶಿಷ್ಟಾಚಾರವಿದೆ. 2019ರೊಳಗೆ ಈ ಕ್ರೀಡಾಂಗಣ ಪ್ಲಾಸ್ಟಿಕ್ ಮುಕ್ತವಾಗ ಬಯಸಿದೆ.

ಲಂಡನ್ನಿನ  ಓವಲ್ ಕ್ರಿಕೆಟ್ ಮೈದಾನ 2020ರೊಳಗೆ ಪ್ಲಾಸ್ಟಿಕ್ ಮುಕ್ತವಾಗಬಯಸಿದೆ. ಈ ವರ್ಷ ಪ್ಲಾಸ್ಟಿಕ್ ಕೊಳವೆ ನಿಷೇಧ ಮಾಡಿ, ಗೊಬ್ಬರವಾಗಬಲ್ಲ ಕಾಫಿಕಪ್ ಪರಿಚಯಿಸಿದೆ. ಇಂಗ್ಲೀಷ್ ಕ್ಲಬ್‍ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿವರಣೆ ಮಾಡಿದೆ. ಅಮೇರಿಕಾದ ಆಡಿದಾಸ್ ಹಾಗೂ ಸಾಸರ್ ಪಂದ್ಯಗಳು ಪ್ಲಾಸ್ಟಿಕ್ ತ್ಯಾಜ್ಯದಿಂದ ಸೃಷ್ಟಿಸಿದ ತಾಂತ್ರಿಕ ಎಳೆಗಳನ್ನು ಬಳಸಿ, ಪಾರ್ಲೆ ಸಮುದ್ರ ಪ್ಲಾಸ್ಟಿಕ್ ವಿಶೇಷ ಕಿಟ್‍ಗಳನ್ನು ಆಟಗಾರರಿಗೆ ಹಂಚಿದೆ. ಲಂಡನ್ನಿನ ಮೆರಾಥಾನ್‍ದಲ್ಲಿ ಗೊಬ್ಬರವಾಗಬಲ್ಲ ಕಪ್‍ಗಳನ್ನೇ ಬಳಸಿದರು. ಬ್ರಿಟನ್‍ದಲ್ಲಿ 12 ಸಾವಿರ ಗಂಡಸರು, ಹೆಂಗಸರು ಹಾಗೂ ಮಕ್ಕಳು ಒಂದಾಗಿ ಬ್ರಿಟನ್ನಿನ ರಸ್ತೆಗಳನ್ನು, ಹಸಿರು ಪ್ರದೇಶಗಳನ್ನು, ಕಡಲತಡಿಗಳನ್ನು ಸ್ವಚ್ಛ ಮಾಡಲು ತೊಡಗಿ, ದೇಶದಾದ್ಯಂತ ಪ್ಲಾಸ್ಟಿಕ್ ಆಯುವ ಕೆಲಸವನ್ನು, ಮೇ ತಿಂಗಳ ವಾರಾಂತ್ಯದಲ್ಲಿ ಆರಂಭಿಸಿದರು. ಅವರ ಬಳಿ ಚೀಲಗಳು, ಕೈಕವಚಗಳು, ಕಸ ಆಯುವ ಸಾಧನಗಳು ಹಾಗೂ ಬಲವಾದ ಉದ್ದೇಶ ಇದ್ದವು. ಬ್ರಿಟನ್ನಿನ ಪ್ರಧಾನಿ ಥೆರೇಸಾ ಮೇ ಅವರ ಸರಕಾರ, ಎಲ್ಲ ಪ್ರತಿಬಂಧಿಸಬಹುದಾದ ಪ್ಲಾಸ್ಟಿಕ್ ಕಸವನ್ನು, 2042ರ ಒಳಗೆ ದೂರಮಾಡುವ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೆಲವು ಟೀಕಾಕಾರರು ಹೇಳುತ್ತಿರುವಂತೆ ನದಿಗಳನ್ನು ಉಸಿರುಗಟ್ಟಿಸುತ್ತಿರುವ, ಸುಂದರ ಕಡಲತಡಿ ಹಾಳು ಮಾಡುತ್ತಿರುವ, ವೇಲ್ಸ್- ಸಮುದ್ರ ಹಕ್ಕಿಗಳು ಹಾಗೂ ವನ್ಯಜೀವಿಗಳ ಜೀವಕ್ಕೇ ಕುತ್ತು ತರುತ್ತಿರುವತ್ತ ಹೆಚ್ಚು ಗಮನ ಕೊಡಬೇಕಾಗಿದೆ. 2018ರ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಹೀಲಿಯಂ ಬಲೂನ್‍ಗಳನ್ನು ನಿಷೇಧಿಸಿತು. ಮೈದಾನದಲ್ಲಿಯ ನೀರನ್ನು ತುಂಬಿಕೊಳ್ಳಲು ವೀಕ್ಷಕರು ಪಾರದರ್ಶಕ ಬಾಟಲಿಗಳನ್ನು ತರಲು ಇವರು ಉತ್ತೇಜಿಸಿದ್ದರು. ಬೇಸ್ ಬಾಲ್‍ನಲ್ಲಿ ಸ್ಟ್ರಾ ತ್ಯಜಿಸಿದ್ದಾರೆ, ಒಂದು ದೀರ್ಘ ಈಜುಪಂದ್ಯ 8900 ಕಿ.ಮಿ.ದ್ದು. ಬೆನ್‍ಲೆಕೊಮ್ಟ್ ಟೋಕಿಯೋದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ವಿಜ್ಞಾನ ಹಾಗೂ ಸುಸ್ಥಿರತೆ ಹೆಸರಿನಲ್ಲಿ ಈಜಲಿದ್ದಾನೆ. ಯುನೈಟಡ್ ಅರಬ್ ಎಮೆರೇಟ್ಸ್‍ದಲ್ಲಿ ಆಳ ಸಮುದ್ರ ಜಿಗಿಯುವವರು, ಅರೇಬಿಯನ್ ಸಮುದ್ರದ ಆಳದಿಂದ ಟನ್ ಗಟ್ಟಲೆ ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ. ಮೊಹಮ್ಮದ್ ಫಲಾಸಿ ಎಂಬ ಸಮುದ್ರ ಜೈವಿಕ ತಜ್ಞ, ತನ್ನ ಮಿತ್ರರೊಂದಿಗೆ ಈ ಕಾರ್ಯ ಮಾಡುತ್ತಿದ್ದಾರೆ. ಸ್ವೀಡಿಷ್ ಜನ ಓಡುವಾಗ ಕಸ ಸಂಗ್ರಹಿಸುತ್ತಿದ್ದಾರೆ.

ದಿ ಪ್ಲಾಸ್ಟಿಕ್ ಬ್ಯಾಂಕ್ ಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಡೇವಿಡ್ ಕಟ್ಝ ಪ್ಲಾಸ್ಟಿಕ್ ಕಸವನ್ನು ಬಡವರ ಹಣವನ್ನಾಗಿ ಪರಿವರ್ತಿಸುತ್ತಿದ್ದಾರೆ. ಅವರು ಹೇಳುವಂತೆ ಉಕ್ಕಿ ಹರಿಯುವ ಮೋರಿ ಸಮಸ್ಯೆ ಇದ್ದಾಗ, ನಲ್ಲಿ ನಿಲ್ಲಿಸುವವರೆಗೆ ನೆಲ ಒರೆಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಈ ಕಚಡದ, ಕಸಕಡ್ಡಿಯ ಮರುಬಳಕೆ ಅಥವಾ ಭೂಮಿಯ ಆಳದಲ್ಲಿ ಅದನ್ನು ಹುಗಿಯುವುದರಿಂದ, ಹಕ್ಕಿಗಳು, ಆಮೆಗಳು,  ಇವನ್ನು ನುಂಗುವುದಿಲ್ಲ ಅಷ್ಟರ ಮಟ್ಟಿಗೆ ಅವು ಸುರಕ್ಷಿತ. ಫ್ಲೈಮೌತ್ ವಿಶ್ವವಿದ್ಯಾಲಯದ ಜಲಚರ ಜೀವಶಾಸ್ತ್ರದ ಪ್ರಾಧ್ಯಾಪಕರಾದ ರಿಚರ್ಡ್ ಥಾಮ್‍ಸನ್ ಅವರ ಪ್ರಕಾರ, ಕಡಲತಡಿ ಸ್ವಚ್ಛ ಮಾಡುವ ಸ್ವಯಂಸೇವಕರು ಇತರರಿಗೆ ಜಾಗೃತಿ ಮೂಡಿಸುತ್ತಾರೆ.

ಹರಡಿದ ಕಸ ಪ್ರವಾಸಿಗಳನ್ನು ದೂರ ಮಾಡುತ್ತದೆ. ಇಂಡೋನೇಶಿಯಾದ ಬಾಲಿಯಲ್ಲಿ ಕರಾವಳಿಯ 6 ಕಿ.ಮಿ ಉದ್ದದ ಸ್ಥಳದಲ್ಲಿ ಬಾಲಿ ದ್ವೀಪ ಕಸದ ತುರ್ತುಪರಿಸ್ಥಿತಿ ಘೋಷಿಸಿ, ಪ್ರತಿ ದಿನ ಸುಮಾರು 100 ಟನ್ ತ್ಯಾಜ್ಯವನ್ನು ಸಮೀಪದ ಗುಂಡಿಗಳಲ್ಲಿ ಹುಗಿಯುತ್ತಿದೆ. 2025ರೊಳಗೆ ತನ್ನ ಕಡಲ ತ್ಯಾಜ್ಯವನ್ನು, ಶೇಕಡಾ 70 ರಷ್ಟು ಇಳಿಸಲು ವಿಶ್ವಸಂಸ್ಥೆಯ ಸಮದ್ರ ಸ್ವಚ್ಛತಾ ಆಂದೋಳನದೊಂದಿಗೆ ಸಹಿ ಹಾಕಿದೆ. ಪ್ರಪಂಚದ ಕಡಲ ತ್ಯಾಜ್ಯದ ಮೂಲದಲ್ಲಿ ಚೀನಾ ಮೊದಲ ದೇಶವಾದರೆ, ನಂತರದ ಸ್ಥಾನ ಇಂಡೋನೇಶಿಯಾದ್ದು. ಬಾಲಿಯ 120 ಕಡಲತಡಿಗಳ ತ್ಯಾಜ್ಯ ನಿವಾರಿಸಲು ಸತತ ಸ್ವಚ್ಛತೆಗಾಗಿ, 20 ಸಾವಿರ ಜನರನ್ನು ಒಂದು ದ್ವೀಪ ಒಂದು ದ್ವನಿ ಎಂಬ ಗುಂಪು ತೊಡಗಿಸಿತ್ತು. ನಮ್ಮ ನದಿಗಳು ಹಾಗೂ ಸಮುದ್ರಗಳ ಪ್ಲಾಸ್ಟಿಕ್ ತ್ಯಾಜ್ಯ ಭಾರಿ ಗಾತ್ರದ್ದು ಹಾಗೂ ಬಹುಮುಖ್ಯ ಸಮಸ್ಯೆಯಾಗಿದ್ದು, ಇದರಿಂದ ವಿಶ್ವ ಮಟ್ಟದ ಪರಿಣಾಮಗಳಾಗುತ್ತಿವೆ. ಈ ವಿಷಕಾರಿ ಪ್ಲಾಸ್ಟಿಕ್ ತೆರೆ ಅಥವಾ ಅಲೆಯ ವಿರುದ್ಧ ಹೋರಾಡಲು, ಜೂನ್ 5ರ ವಿಶ್ವ ಪರಿಸರ ದಿನ ಉತ್ತಮ ಅವಕಾಶ ನೀಡುತ್ತಿದೆ. ಈ ವರ್ಷ ಪ್ಲಾಸ್ಟಿಕ್ ಮಾಲಿನ್ಯತೆಗೆ ಬಾರಿಸಿ ಸೋಲಿಸೋಣ

ಎನ್.ವ್ಹಿ ರಮೇಶ್

ಮೊ:-98455-65238

Share this: