ಒತ್ತಡ ಎಂದರೇನು? ಅದರ ನಿರ್ವಹಣೆ ಹೇಗೆ? ಎಲ್ಲೋ ಒಂದು ಕಡೆ ನಾವು ಒತ್ತಡದಿಂದ ಯಾಂತ್ರಿಕ ಜೀವನ ನಡೆಸುತ್ತಿದ್ದೇವೆ ಎಂದು ನಮಗೆ ಅನ್ನಿಸುತ್ತದೆ.ನಮ್ಮ ಜೀವನವು ಬಹುತೇಕ ಕುಟುಂಬ, ಕೆಲಸ ಮತು ಸಮುದಾಯ ಬಾಧ್ಯತೆಗಳಿಂದ ತುಂಬಿರುತ್ತದೆ. ಇಲ್ಲಿ ಒತ್ತಡವನ್ನು ತಕ್ಷಣ ಶಮನ ಮಾಡುವ ಸಲಹೆಗಳನ್ನು ನೀಡಲಾಗಿದೆ. ಓದಿ, ಇದನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ.
ಒತ್ತಡವು ದೇಹದ ಸಮತೋಲನೆ ಮತು ಕಾರ್ಯಕ್ಕೆ ಅಡಚಣೆ ಉಂಟು ಮಾಡಿದರೆ ಆಗ ಎಲ್ಲ ಒತ್ತಡಗಳು ಕೆಟ್ಟದೇ? ಅಲ್ಪ ಪ್ರಮಾಣದ ಒತ್ತಡ ಮತ್ತು ಟೆನ್ಷನ್ ಕೆಲವೊಮ್ಮೆ ಅನುಕೂಲ ಕಲ್ಪಿಸುತ್ತದೆ. ಉದಾಹರಣೆಗೆ ಪ್ರಾಜೆಕ್ಟ್ ಅಥವಾ ಅಸೈನ್‍ಮೆಂಟ್ ಮಾಡುವಾಗ ಉಂಟಾಗುವ ಲಘು ಪ್ರಮಾಣದ ಒತ್ತಡವು ಕೆಲವೊಮ್ಮೆ ಉತ್ತಮ ಕೆಲಸ ಮಾಡಲು, ಇನ್ನಷ್ಟು ಸುಧಾರಿಸಿಕೊಳ್ಳುವತ್ತ ಗಮನಹರಿಸಲು ಮತ್ತು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಲು ನಮಗೆ ನೆರವಾಗುತ್ತದೆ.ಇದೇ ರೀತಿ, ವ್ಯಾಯಾಮವು ದೇಹದ ಕೆಲವು ಕಾರ್ಯಗಳ ಮೇಲೆ ತಾತ್ಕಲಿಕ ಒತ್ತಡ ಉಂಟು ಮಾಡುತ್ತದೆ. ಆದರೆ, ಇದರ ಆರೋಗ್ಯಕರ ಪ್ರಯೋಜನಗಳು ವಿವಾದರಹಿತವಾದುದು.
ಒತ್ತಡವು ವಿಪರೀತವಾಗಿದ್ದಾಗ ಅಥವಾ ಅದನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದಾಗ ಧನಾತ್ಮಕ ಪರಿಣಾಮಗಳು ಗೋಚರಿಸುತ್ತವೆ. ಒತ್ತಡಕ್ಕೆ ಒಳಗಾದವರಿಗೆ ಮುಖ್ಯ ಗುರಿಯೆಂದರೆ ಜೀವನ ಒತ್ತಡ ನಿರ್ವಹಣೆ ಮಾಡುವುದು. ಒತ್ತಡ ನಿರ್ಮೂಲನೆ ಅವಾಸ್ತವವಾದುದು. ಏಕೆಂದರೆ ಒತ್ತಡವು ಸಾಮಾನ್ಯ ಜೀವನದ ಒಂದು ಭಾಗ. ಒತ್ತಡವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಹಾಗೂ ಇದು ಸಲಹೆಗೆ ಸೂಕ್ತವಾದುದು ಅಲ್ಲ. ಬದಲಿಗೆ ನಾವು ಒತ್ತಡವನ್ನು ನಿಭಾಯಿಸುವುದನ್ನು ಕಲಿಯಬೇಕು. ಇದರಿಂದ ನಾವು ಒತ್ತಡದ ಮೇಲೆ ನಿಯಂತ್ರಣ ಸಾಧಿಸಬಹುದು ಹಾಗೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು.
ಒತ್ತಡಕ್ಕೆ ಸುಲಭವಾಗಿ ಒಳಗಾಗುವವರು ಯಾರು?
ಒತ್ತಡವು ಎಲ್ಲ ಸ್ವರೂಪಗಳಲ್ಲಿ ಬರುತ್ತದೆ ಹಾಗೂ ಇದು ಎಲ್ಲ ವಯಸ್ಸಿನವರಲ್ಲಿ ಮತ್ತು ಬದುಕಿನ ವಿವಿಧ ವರ್ಗಗಳ ಜನರ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಗಳಲ್ಲಿ ಒತ್ತಡದ ಮಟ್ಟಗಳನ್ನು ಊಹಿಸಿ ಹೇಳುವ ಯಾವುದೇ ಬಾಹ್ಯ ಮಾಪಕಗಳಿಲ್ಲ. ಒತ್ತಡವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಂಪ್ರದಾಯಿಕ ಒತ್ತಡದ ಕೆಲಸದಿಂದ ಕಾರ್ಯನಿರ್ವಹಿಸುವ ಸ್ಥಳದ ಒತ್ತಡ ಅನುಭವ ಒಬ್ಬರಿಗೆ ಆಗದಿರಬಹುದು. ಒಂದು ಮಗುವಿನ ಪೋಷಕರೊಬ್ಬರು ಹಲವಾರು ಮಕ್ಕಳ ಪೋಷಕರೊಬ್ಬರಿಗಿಮತ ಹೆಚ್ಚು ಒತ್ತಡ ಅನುಭವಿಸಬಹುದು. ನಮ್ಮ ದೈಹಿಕ ಆರೋಗ್ಯ, ನಮ್ಮ ಅಂತರ್‍ವೈಯಕ್ತಿಕ ಬಾಂಧವ್ಯಗಳು, ಬದ್ಧತೆಗಳ ಸಂಖ್ಯೆ ಮತ್ತು ನಾವು ಹೊರುವ ಜವಾಬ್ದಾರಿಗಳು, ಇತರರ ಅವಲಂಬನೆ ಪ್ರಮಾಣ ಮತ್ತು ನಮ್ಮ ನಿರೀಕ್ಷೆಗಳು, ಇತರರಿಂದ ನಾವು ಪಡೆಯುವ ಬೆಂಬಲ-ಸಹಕಾರದ ಮೊತ್ತ ಹಾಗೂ ಬದಲಾವಣೆಗಳ ಸಂಖ್ಯೆ ಅಥವಾ ನಮ್ಮ ಜೀವನದಲ್ಲಿ ಇತ್ತೀಚೆಗೆ ನಡೆದ ಆಘಾತಕರ ಘಟನೆಗಳಂಥ ವೈಯಕ್ತಿಕ ಅಂಶಗಳ ಆಧಾರದ ಮೇಲೆ ನಮ್ಮ ಬದುಕಿನ ಒತ್ತಡದ ಮಟ್ಟವು ಹೆಚ್ಚಾಗಿ ಅವಲಂಬಿತವಾಗಿರುತ್ತವೆ.
ಆದಾಗ್ಯೂ ಇದರಲ್ಲಿ ಕೆಲವು ವರ್ಗಗಳನ್ನು ಮಾಡಬಹುದು. ಸದೃಢ ಸಾಮಾಜಿಕ ಬೆಂಬಲ ಜಾಲಗಳನ್ನು (ಕುಟುಂಬ, ಬಂಧು-ಮಿತ್ರರು, ಧಾರ್ಮಿಕ ಸಂಘಟನೆಗಳು ಅಥವಾ ಇತರೆ ಸಾಮಾಜಿಕ ಸಮೂಹಗಳನ್ನು ಒಳಗೊಂಡಿರುವ) ಹೊಂದಿರುವ ಜನರು ಕಡಿಮೆ ಒತ್ತಡಕ್ಕೆ ಒಳಗಾಗುತ್ತಾರೆ ಹಾಗೂ ಇಂಥ ಸಾಮಾಜಿಕ ಸಂಪರ್ಕಗಳನ್ನು ಹೊಂದಿಲ್ಲದೇ ಇರುವ ಮಂದಿಗೆ ಹೊಲಿಸಿದರೆ ಒಟ್ಟಾರೆ ಸುಧಾರಿತ ಮಾನಸಿಕ ಆರೋಗ್ಯ ಉಳ್ಳವರಾಗಿರುತ್ತಾರೆ. ದುರ್ಬಲ ಪೋಷಕಾಂಶ ಹೊಂದಿರುವ ಮಂದಿ, ಅಸಮರ್ಪಕ ನಿದ್ರೆ ಅಥವಾ ದೈಹಿಕ ಅಸೌಖ್ಯ ಹೊಂದಿರುವ ವ್ಯಕ್ತಿಗಳು ದಿನ ನಿತ್ಯದ ಬದುಕಿನಲ್ಲಿ ಎದುರಾಗುವ ಒತ್ತಡಗಳನ್ನು ನಿಭಾಯಿಸುವಲ್ಲಿ ಕಡಿಮೆ ಸಾಮಥ್ರ್ಯ ಹೊಂದಿರುತ್ತಾರೆ. ಇಂಥವರಲ್ಲಿ ಒತ್ತಡದ ಮಟ್ಟ ಅಧಿಕವಾಗಿರುತ್ತದೆ.
ಕೆಲವು ಒತ್ತಡಗಳು ನಿರ್ದಿಷ್ಟವಾಗಿ ಕೆಲವು ವಯಸ್ಸಿನ ಸಮೂಹಗಳು ಅಥವಾ ಜೀವನದ ಹಂತಗಳೊಂದಿಗೆ ಬೆಸೆದುಕೊಂಡಿರುತ್ತದೆ. ಮಕ್ಕಳು, ಕಿಶೋರಾವಸ್ಥೆಯವರು, ಯುವ ಜನಾಂಗ, ಉದ್ಯೋಗಸ್ಥ ಪೋಷಕರು, ಹಿರಿಯ ನಾಗರಿಕರು ಜೀವನ ಪರಿವರ್ತನೆಗೆ ಸಂಬಂಧಿಸಿದ ಸಾಮಾನ್ಯ ಒತ್ತಡಕ್ಕೆ ಒಳಗಾಗುವ ಗುಂಪಿನವರಾಗಿರುತ್ತಾರೆ ಎಂಬುದಕ್ಕೆ ಉದಾಹರಣೆ ನೀಡಬಹುದಾಗಿದೆ.
ಒತ್ತಡವನ್ನು ತಕ್ಷಣ ಶಮನ ಮಾಡುವ ಸಲಹೆ:
1. ನಿಯಮಿತವಾಗಿ ವ್ಯಾಯಾಮ ಮತ್ತು ಪ್ರಾಣಾಯಾಮ ಮಾಡುವ ಮೂಲಕ ಒತ್ತಡದಿಂದ ನೈಸರ್ಗಿಕ ಮಾರ್ಗದಲ್ಲಿ ಉಪಶಮನ ಪಡೆಯಬಹುದು. ಒತ್ತಡದ ಉಪಶಮನ ಕುರಿತ ಇತ್ತೀಚಿನ ಅಧ್ಯಯನವು ಸಾಕಷ್ಟು ಗ್ರೀನ್ ಟೀ ಬಳಕೆ ಪ್ರಯೋಜನಕಾರಿ ಎಂಬುದನ್ನು ಸಾಬೀತು ಮಾಡಿದೆ. ಒತ್ತಡದ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿ ಎರಡರಿಂದ ಮೂರು ಬಾರಿ ಗ್ರೀನ್ ಟೀ ಕುಡಿಯುವುದರಿಂದ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಆದರೆ ಒತ್ತಡ ನಿವಾರಣೆಗಾಗಿ ನಿದ್ರೆ ಮಾತ್ರೆಗಳ ಅಥವಾ ಆಲ್ಕೋಹಾಲ್ ಸೇವನೆ ಮಾಡಬಾರದು.
2. ವಿನಾಕಾರಣ ಕುಪಿತರಾಗುವ ಅಥವಾ ಅಸಮಾಧಾನಕ್ಕೆ ಒಳಗಾದ ಪ್ರಜ್ಞೆಯನ್ನು ರೂಢಿಸಿಕೊಳ್ಳಿ. ಯಾವುದೋ ಕೆಲಸಕ್ಕೆ ಬಾರದ ಅಥವಾ ಮುಖ್ಯವಲ್ಲದ ಸಂಗತಿಯಿಂದ ನೀವು ಅಸಮಾಧಾನ ಅಥವಾ ಕುಪಿತರಾಗುತ್ತೀರೆಂದು ನಿಮಗೆ ಕಂಡುಬಂದರೆ ಅಂಥ ಸಂಗತಿಯಿಂದ ದೂರವಿರಿ. ಮುಂದೆ ಅಂಥ ಘಟನೆ ನಡೆಯದಂತೆ ಎಚ್ಚರ ವಹಿಸಿ.
3. ಅಗತ್ಯವಿಲ್ಲದ ಕಡೆ ವೃಥಾ ಯೋಚನೆ ಮತ್ತು ನಿಮ್ಮ ಎನರ್ಜಿ ನಷ್ಟವಾಗಲು ಅವಕಾಶ ನೀಡಬೇಡಿ. ಕೋಪವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ನಿಜವಾಗಿಯೂ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ.
4. ನಿಧಾನವಾಗಿ ಮತ್ತು ಆಳವಾಗಿ ಉಸಿರಾಡಿ. ಮುಂದಿನ ಒತ್ತಡದ ಘಟನೆಗೆ ಪ್ರತಿಕ್ರಿಯೆ ನೀಡುವುದಕ್ಕೂ ಮುನ್ನ, ಮೂರು ಬಾರಿ ಉಸಿರನ್ನು ಆಳವಾಗಿ ಒಳಗೆ ಎಳೆದುಕೊಂಡು ನಿಧಾನವಾಗಿ ಬಿಡುಗಡೆ ಮಾಡಿ. ಕೆಲವು ನಿಮಿಷಗಳ ಸಮಯವಿದ್ದರೆ, ಧಾನ್ಯ ಅಥವಾ ಗೈಡೆಡ್ ಇಮ್ಯಾಜೆರಿಯಂಥ ರಿಲ್ಯಾಕ್ಸೆಷನ್ ಕೌಶಲ್ಯವನ್ನು ಪ್ರಯತ್ನಿಸಿ.
5. ವಿಪರೀತ ಒತ್ತಡಕ್ಕೆ ಸಿಲುಕಿದ ಅನುಭವ ನಿಮಗಾದರೆ, ಮಾಮೂಲಿಗಿಂತ ನಿಧಾನವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ಇನ್ನಷ್ಟು ಹೆಚ್ಚು ಸ್ಪಷ್ಟವಾಗಿ ಆಲೋಚಿಸಲು ಮತ್ತು ಒತ್ತಡ ಸನ್ನಿವೇಶಗಳಿಗೆ ಹೆಚ್ಚು ಸೂಕ್ತವಾಗಿ ಪ್ರತಿಕ್ರಿಯಿಸಲು ಇದರಿಂದ ಸಾಧ್ಯವಾಗುತ್ತದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಒತ್ತಡಕ್ಕೆ ಒಳಗಾದ ಅನೇಕ ಮಂದಿ ಉಸಿರಾಡಲು ಸಾಧ್ಯವಾಗದಂತೆ ವೇಗವಾಗಿ ಮಾತನಾಡುತ್ತಾರೆ. ನಿಮ್ಮ ಮಾತನ್ನು ನಿಧಾನ ಮಾಡುವುದರಿಂದ ನೀವು ಕಡಿಮೆ ಉದ್ವೇಗಕ್ಕೆ ಒಳಗಾದವರಂತೆ ಕಾಣಿಸುತ್ತೀರಾ ಮತ್ತು ಯಾವುದೇ ಸನ್ನಿವೇಶವನ್ನು ಉತ್ತಮವಾಗಿ ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.
6. ಪರಿಣಾಮಕಾರಿ ಸಮಯ ನಿರ್ವಹಣೆ ಕಾರ್ಯತಂತ್ರವನ್ನು ಅನುಸರಿಸಿ. ನೀವು ಮಾಡಬೇಕಾದ ಕೆಲಸಗಳಲ್ಲಿ ಸರಳ ಸಂಗತಿಗಳನ್ನು ಆಯ್ಕೆ ಮಾಡಿಕೊಳ್ಳಿ (ಉದಾಹರಣೆಗೆ ಫೋನ್ ಕರೆಗೆ ಪ್ರತ್ಯುತ್ತರ, ವೈದ್ಯರ ಸಂದರ್ಶನ ನಿಗದಿ ಇತ್ಯಾದಿ) ಮತ್ತು ಇದನ್ನು ತಕ್ಷಣ ಮಾಡಿ. ಕೇವಲ ಇಂಥ ಸಣ್ಣ ಜವಾಬ್ದಾರಿಯನ್ನು ಕಾಳಜಿಯಿಂದ ಮಾಡಿದರೆ ಅದು ನಿಮ್ಮಲ್ಲಿ ಶಕ್ತಿ ಸಂಚಯವಾಗುವಂತೆ ಮಾಡುತ್ತದೆ ಹಾಗೂ ನಿಮ್ಮ ಧೋರಣೆಯನ್ನು ಸುಧಾರಿಸುತ್ತದೆ.
7. ಹೊರಾಂಗಣದಲ್ಲಿ ವಿಶ್ರಾಂತಿ ಪಡೆಯಿರಿ. ನಮ್ಮ ಪೂರ್ವಜರು ತಾಜಾ ಗಾಳಿಯ ವಾಯುವಿಹಾರದ ಉಪಶಮನ ಶಕ್ತಿಯ ಬಗ್ಗೆ ಸರಿಯಾಗಿಯೇ ತಿಳಿಸಿದ್ದಾರೆ. ತಾಜಾ ಗಾಳಿ ಪಡೆಯುವ ನೆಪದಲ್ಲಿ ಪ್ರತಿಕೂಲ ಹವಾಮಾನದಲ್ಲಿ ಅಡ್ಡಾಡುವುದು ಅಥವಾ ಪೂರ್ತಿ ಸಮಯವನ್ನು ಹೊರಾಂಗಣದಲ್ಲೇ ಮೀಸಲಿಡುವುದು ಬೇಡ. ಕೇವಲ ಐದು ನಿಮಿಷಗಳ ಕಾಲ ಬಾಲ್ಕನಿ ಅಥವಾ ಟೆರೆಸ್ ಮೇಲೆ ನಿಂತರೆ ನೀವು ಪುನ:ಶ್ಚೇತನಗೊಳ್ಳುತ್ತೀರಿ.
8. ಸಾಕಷ್ಟು ನೀರು ಕುಡಿಯಿರಿ ಮತ್ತು ಕಡಿಮೆ ಪ್ರಮಾಣದಲ್ಲಿ ಪೌಷ್ಟಿಕಾಂಶ ಉಪಹಾರಗಳನ್ನು ಸೇವಿಸಿ. ನಿಮ್ಮ ಅರಿವಿಗೆ ಬರುವುದಕ್ಕೆ ಮುನ್ನವೇ ಹಸಿವು ಮತ್ತು ಬಾಯಾರಿಕೆ ನೀವು ಕೋಪಗೊಳ್ಳಲು ಉತ್ತೇಜನ ನೀಡಿದ ಉದ್ವೇಗ ಮತ್ತು ಒತ್ತಡದ ಅನುಭವ ನೀಡುತ್ತದೆ.
9. ನಿಮ್ಮ ಒತ್ತಡದಾಯಕ ದಿನ ಮುಕ್ತಾಯಗೊಂಡಿದ್ದಕ್ಕಾಗಿ ಒಂದು ಬಹುಮಾನದ ಯೋಜನೆ ರೂಪಿಸಿಕೊಳ್ಳಿ. ಕೇವಲ ರಿಲ್ಯಾಕ್ಸ್ ಆಗುವ ಸ್ನಾನ ಅಥವಾ ಅರ್ಧಗಂಟೆ ಒಳ್ಳೆಯ ಪುಸ್ತಕ ವಾಚನ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಕೆಲಸವನ್ನು ರಾತ್ರಿ ಮಲಗುವ ಅವಧಿಗೆ ಮುನ್ನ ಕೆಲಸವನ್ನು ಪಕ್ಕಕ್ಕಿಟ್ಟು, ಅಲ್ಪ ಸಮಯ ಮನೆ ಕೆಲಸ ಅಥವಾ ಕೌಟುಂಬಿಕ ಕಾಳಜಿ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಪೂರ್ಣ ವಿಶ್ರಾಂತಿ ಪಡೆಯಿರಿ. ಈ ಸಮಯ ಯೋಜನೆಯನ್ನು ನಾಳೆಯ ವೇಳಾಪಟ್ಟಿಯಲ್ಲಿ ಮಾಡಬೇಡಿ ಅಥವಾ ದಿನ ವೇಳೆ ಈ ಕೆಲಸ ಮಾಡಲು ನಿಮಗೆ ಸಾಧ್ಯವಾಗದೇ ಇರಬಹುದು. ನೆನಪಿಡಿ. ಮತ್ತೆ ರೀಚಾರ್ಜ್ ಮತ್ತು ಎನರ್ಜೈಜ್ ಆಗಲು ನಿಮಗೆ ಸಮಯ ಬೇಕಾಗುತ್ತದೆ. ಇನ್ನೊಂದು ಒತ್ತಡದಾಯಕ ದಿನ ಎದುರಿಸಲು ನೀವು ಉತ್ತಮ ರೀತಿಯಲ್ಲಿ ಸಿದ್ದತೆ ನಡೆಸಬೇಕಾಗುತ್ತದೆ.
ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
Ph: 080-49069000 Extn:1147/1366 Mob:9945000037