ಒಣದ್ರಾಕ್ಷಿ ದೇಹಕ್ಕೆ ಶಕ್ತಿ ಮತ್ತು ಧಾತುಗಳಿಗೆ ಪುಷ್ಠಿ ನೀಡುವ ಅದ್ಭುತ ಫಲ. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಅಮೃತ ಸಮಾನವಾದ ಒಣ ದ್ರಾಕ್ಷಿಯನ್ನು ನಾವು ನಿತ್ಯವೂ ಸೇವಿಸಬೇಕು.
ಆಯುರ್ವೇದದಲ್ಲಿ ಹಣ್ಣುಗಳಲ್ಲಿ ಶ್ರೇಷ್ಠವಾದದ್ದು ಎಂದು ದ್ರಾಕ್ಷಿ ಹಣ್ಣಿಗೆ ಹೇಳುತ್ತಾರೆ. ಭಾವಪ್ರಕಾಶ ನಿಘಂಟುವಿನಲ್ಲಿ ಸ್ವಭಾವದಿಂದಲೇ ದೇಹಕ್ಕೆ ಹಿತವನ್ನು ಉಂಟುಮಾಡುವ ದ್ರವ್ಯಗಳ ಸಾಲಿನಲ್ಲಿ ದ್ರಾಕ್ಷಿಯನ್ನು ಸೇರಿಸಿದ್ದಾರೆ. ಅಂದರೆ ಬಹುತೇಕ ಎಲ್ಲರಿಗೂ ಹಿತವನ್ನು ಉಂಟುಮಾಡುವ, ಆರೋಗ್ಯವನ್ನು ಕೊಡುವ ಗುಣವನ್ನು ದ್ರಾಕ್ಷಿ ಹೊಂದಿದೆ ಎಂದರ್ಥ.
1. ಚೆನ್ನಾಗಿ ಹಣ್ಣಾದ ದ್ರಾಕ್ಷಿಯು ಸ್ನಿಗ್ಧ ಮತ್ತು ತಂಪು ಗುಣವನ್ನು ಹೊಂದಿದ್ದು ವಾತ ಮತ್ತು ಪಿತ್ತದೋಷಗಳನ್ನು ನಿಯಂತ್ರಿಸುತ್ತದೆ. ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
2. ಇದನ್ನು ಉಷ್ಣ ಪ್ರಕೃತಿ ಹೊಂದಿರುವವರು ಹೆಚ್ಚಾಗಿ ಸೇವಿಸಿದರೆ ಅಂಥವರಿಗೆ ಎಷ್ಟೋ ಖಾಯಿಲೆಗಳನ್ನು ಬರದಂತೆ ತಡೆಯುವಲ್ಲಿ ಸಹಾಯ ಮಾಡುತ್ತದೆ.
3. ರಾತ್ರಿ 15 ರಿಂದ 20 ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಉರಿ, ವಾಂತಿ ಬಂದಂತೆನಿಸುವುದು ಕಡಿಮೆಯಾಗುತ್ತವೆ. ವಿಶೇಷವಾಗಿ ಮಲಬದ್ಧತೆಯಲ್ಲಿ ಇದು ಅತ್ಯಂತ ಸಹಕಾರಿ.
4. ಅತಿಯಾಗಿ ಕಂಪ್ಯೂಟರ್, ಮೊಬೈಲ್ ಬಳಸುವುದು ಮತ್ತು ತಡೆರಾತ್ರಿಯವರೆಗೆ ಬೆಳಕಿನಲ್ಲಿ ಇರುವುದರಿಂದ ಕಣ್ಣುಗಳಿಗೆ ಆಗುವ ಹಲವಾರು ರೀತಿಯ ತೊಂದರೆಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸುವಲ್ಲಿ ಒಣದ್ರಾಕ್ಷಿ ತುಂಬಾ ಪ್ರಯೋಜಕ.
5. ಮದ್ಯಪಾನದ ಹ್ಯಾಂಗ್ ಓವರ್ ಅನ್ನು ಕಡಿಮೆ ಮಾಡಲು ಮತ್ತು ಮದ್ಯಪಾನದ ಅಡ್ಡ ಪರಿಣಾಮಗಳನ್ನು ತಕ್ಕಮಟ್ಟಿಗೆ ಕಡಿಮೆ ಮಾಡುವಲ್ಲಿ ಕೂಡ ಒಣದ್ರಾಕ್ಷಿ ಅದ್ಬುತವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಪದೇ ಪದೇ ಮದ್ಯಪಾನ ಮಾಡುವ ಅಭ್ಯಾಸ ಇರುವವರು ಒಣ ದ್ರಾಕ್ಷಿಯನ್ನು ನಿತ್ಯವೂ ಸೇವಿಸುವ ರೂಢಿ ಇಟ್ಟುಕೊಳ್ಳುವುದು ಒಳ್ಳೆಯದು.
6. ಪಿತ್ತ ದೋಷದ ಕಾರಣದಿಂದ ಉಂಟಾದ ಜ್ವರ, ಅತಿಯಾದ ಬಾಯಾರಿಕೆ, ಉರಿ, ನಿದ್ರಾಹೀನತೆಯಂತಹ ತೊಂದರೆಗಳಲ್ಲಿ ಒಣದ್ರಾಕ್ಷಿ ಮೊದಲನೇ ಸಾಲಿನಲ್ಲಿ ನಿಲ್ಲುವ ಔಷಧ. ಶ್ವಾಸಕೋಶಗಳಿಗೆ ಶಕ್ತಿಯನ್ನು ನೀಡಿ ಚಿಕ್ಕಪುಟ್ಟ ಕಾರಣಗಳಿಗೆ ಉಂಟಾಗುವ ಕೆಮ್ಮು, ದಮ್ಮು, ಸುಸ್ತುಗಳನ್ನು ಇದು ತಡೆಯುತ್ತದೆ. ಹಾಗಾಗಿ ಅಲರ್ಜಿ, ಅಸ್ತಮಾದಂತಹ ತೊಂದರೆಗಳನ್ನು ಅನುಭವಿಸುತ್ತಿರುವವರು ಮತ್ತು ನ್ಯೂಮೋನಿಯಾ, ಟಿಬಿ ಮುಂತಾದ ಖಾಯಿಲೆಗಳಿಂದ ಚೇತರಿಸಿಕೊಂಡವರು ಇದನ್ನು ನಿತ್ಯವೂ ಮೇಲೆ ಹೇಳಿದಂತೆ ಸೇವಿಸಿದರೆ ಶ್ವಾಸಕೋಶದ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ.
7. ಅಪೌಷ್ಟಿಕತೆ ಅಥವಾ ಖಾಯಿಲೆಗಳ ಕಾರಣದಿಂದ ತೂಕವನ್ನು ಕಳೆದುಕೊಂಡವರಿಗೆ ಒಣದ್ರಾಕ್ಷಿ ಒಂದು ವರದಾನವೇ ಸರಿ. ಏಕೆಂದರೆ ನಿರಂತರವಾಗಿ ಇದನ್ನು ಸೇವಿಸುವುದರಿಂದ ಇದು ಧಾತುಗಳಿಗೆ ಪುಷ್ಟಿ ನೀಡಿ ದೇಹದ ತೂಕ ಹೆಚ್ಚಾಗಲು ಸಹಾಯ ಮಾಡುತ್ತದೆ. ಹಾಗೆಂದು ಅತಿ ತೂಕ ಇರುವವರು ಕೂಡ ಒಣ ದ್ರಾಕ್ಷಿಯನ್ನು ಸೇವಿಸಬಹುದು. ಮಾನಸಿಕ ಶಕ್ತಿ ಮತ್ತು ಲೈಂಗಿಕ ಶಕ್ತಿಗಳನ್ನು ಹೆಚ್ಚಿಸಲು ಇದು ಸಹಕಾರಿ.
8. ಇದಕ್ಕೆ ಹೃದ್ಯ ಗುಣ ಇದೆ ಎಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ಹೃದ್ರೋಗಿಗಳು ಇದನ್ನು ಹೆಚ್ಚಾಗಿ ಬಳಸಬೇಕು.
9. ಮೂತ್ರದೋಷವನ್ನು ಕಡಿಮೆ ಮಾಡುವಲ್ಲಿಯೂ ಕೂಡ ಇದು ಸಹಾಯ ಮಾಡುತ್ತದೆ.
10. ದ್ರಾಕ್ಷಿಯ ಹೊರ ಪದರದಲ್ಲಿ ಇರುವ ರೆಸ್ವರೆಟ್ರಾಲ್ ಎಂಬ ಅಂಶವು ನಮ್ಮ ಜೀವಕೋಶಗಳು ತಮ್ಮ ಮಾಹಿತಿಗಳನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ದೇಹದ ಎಲ್ಲಾ ಅಂಗಗಳು ಸಮರ್ಪಕವಾಗಿ ಕೆಲಸ ಮಾಡಲು ಮತ್ತು ಮುಪ್ಪನ್ನು ಮುಂದೂಡಲು ಸಹಾಯವಾಗುತ್ತದೆ. ಇದರಿಂದಾಗಿ ನೆನಪಿನ ಶಕ್ತಿ ಕಡಿಮೆಯಾಗುವುದು, ಕೂದಲು ಉದುರುವುದು, ಕೂದಲು ಹಣ್ಣಾಗುವುದು, ಚರ್ಮ ಸುಕ್ಕುಗಟ್ಟುವುದು ಮುಂತಾದ ವಯೋ ಸಹಜ ಲಕ್ಷಣಗಳು ದೂರವಾಗುತ್ತವೆ.
11. ಬಹುತೇಕವಾಗಿ ಎಲ್ಲರಿಗೂ ಬರುವ ಪ್ರಶ್ನೆ ಏನೆಂದರೆ ಮಧುಮೇಹಿಗಳು ಸೇವಿಸಬಹುದೇ ಎಂದು. ಇಷ್ಟೆಲ್ಲಾ ಒಳ್ಳೆಯ ಗುಣಗಳನ್ನು ಹೊಂದಿರುವ ದ್ರಾಕ್ಷಿಯನ್ನು ಮಧುಮೇಹಿಗಳೂ ಸೇವಿಸಬೇಕು. ಆದರೆ ಇದು ಸಿಹಿಯಾಗಿರುವ ಕಾರಣದಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಇದು ಹೆಚ್ಚಿಸುತ್ತದೆ. ಹಾಗಾಗಿ ನಿಯಮಿತವಾಗಿ ಸಕ್ಕರೆಯ ಅಂಶವನ್ನು ಪರೀಕ್ಷಿಸಿಕೊಳ್ಳಬೇಕು ಮತ್ತು ಅನ್ನ, ಗೋಧಿ ಮುಂತಾದ ಕಾರ್ಬೋಹೈಡ್ರೇಟ್ ಆಹಾರಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು.
ಇಷ್ಟೆಲ್ಲಾ ಒಳ್ಳೆಯ ಗುಣಗಳು ದ್ರಾಕ್ಷಿಗೆ ಇದೆಯಾದರೂ ಇವು ಚೆನ್ನಾಗಿ ಬಲಿತ ದ್ರಾಕ್ಷಿಯ ಗುಣಗಳೇ ಹೊರತು ಹುಳಿ ದ್ರಾಕ್ಷಿಗೆ ಈ ಗುಣಗಳಿಲ್ಲ. ಒಟ್ಟಿನಲ್ಲಿ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಅಮೃತ ಸಮಾನವಾದ ಒಣ ದ್ರಾಕ್ಷಿಯನ್ನು ನಾವು ನಿತ್ಯವೂ ಸೇವಿಸಬೇಕು.