ನೀವು ಒಳಗಿದ್ದರೆ, ಕೊರೋನಾ ಹೊರಗೆ. ದಯವಿಟ್ಟು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ.
ವೆಂಟಿಲೇಟರ್‍ಗಿಂತ ಮಾಸ್ಕ್ ಉತ್ತಮ
ಚಿಕಿತ್ಸೆಗಿಂತ ತಡೆಯುವುದೇ ಉತ್ತಮ
ಆಸ್ಪತ್ರೆಗಿಂತ ಮನೆಯೇ ಉತ್ತಮ
ಕೊರೊನ ಮಹಾಮಾರಿಯನ್ನು ಓಡಿಸಲು ಇದುವೇ ದಿವ್ಯಾಸ್ತ್ರ:
ಮೇಲಿನ ಸಾಲುಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡರೆ ನಾವು ಮನೆಯಲ್ಲಿಯೇ ಇದ್ದು ಕೊರೊನ ವಿರುದ್ದ ಹೋರಾಡಲು ಭಾಗವಹಿಸುತ್ತೇವೆ. ಕೊರೊನ ಮಹಾಮಾರಿಯನ್ನು ಓಡಿಸಲು ಇದುವೇ ದಿವ್ಯಾಸ್ತ್ರ. ಇವೆಲ್ಲಾ ಕಷ್ಟ ಎನ್ನುವವರು ಇತಿಹಾಸದೆಡೆಗೆ ತಿರುಗಿ ಒಮ್ಮೆ ನೋಡಲೇ ಬೇಕು. ಅನೇಕ ಸ್ವತಂತ್ರ ಹೋರಾಟಗಾರರು ವರ್ಷಾನುಗಟಲೆ ಜೈಲಿನಲ್ಲಿ ಇರಲಿಲ್ಲವೇ? ದಕ್ಷಿಣ ಆಫ್ರಿಕಾದ ಶ್ರೀ ನೆಲ್ಸನ್ ಮಂಡೇಲಾ ಇಪ್ಪತ್ತೇಳು ವರ್ಷಗಳ ಕಾಲ ಸೆರೆಮನೆಯಲ್ಲಿಯೇ ಜೀವ ಸವೆಸಲಿಲ್ಲವೇ? ಅದೂ ಯಾವ ಸೌಲಭ್ಯಗಳೂ ಇಲ್ಲದಂತೆ? ಹಾಗಿರುವಾಗ, ಮನೆಮಂದಿಯೊಂದಿಗಿನ ಒಡನಾಟ, ಹೊಟ್ಟೆತುಂಬಾ ರುಚಿ/ಶುಚಿಯಾದ ಊಟ, ಕಣ್ಣುತುಂಬಾ ನಿದ್ದೆ, ಮನರಂಜನೆಗಾಗಿ ಟಿ.ವಿ. ರೇಡಿಯೋ, ಇಷ್ಡೆಲ್ಲಾ ಸೌಲಭ್ಯವಿದ್ದರೂ ನಮಗೆ ಮನೆಯಲ್ಲಿರಲು ಕಷ್ಟವೆಂದರೆ ಹೇಗೆ.?
ಒಮ್ಮೆ ದೇವರು ಭಕ್ತನಿಗೆ ಪ್ರತ್ಯಕ್ಷನಾಗಿ ಕೇಳಿದನಂತೆ. ನಿನ್ನ ಹತ್ತಿರ ನಿನ್ನದೂ ಅಂತ ಏನಿದೆ. ಅದಕ್ಕೆ ಭಕ್ತ ತಾನು ಸಂಪಾದಿಸಿದ ಆಸ್ತಿ, ಧನಕನಕಗಳ ಬಗ್ಗೆ ಜಂಭದಿಂದ ಹೇಳಿದಾಗ ಭಗವಂತ ನಗುತ್ತಾ ಅದ್ಯಾವುದೂ ನಿನ್ನದಲ್ಲ. ನಿನ್ನ ಆಸ್ತಿ ನಿನ್ನ ಹೆಂಡತಿ ಮಕ್ಕಳ ಪಾಲಾಗುವುದು ನಾನು ಕೇಳಿದ್ದು ಕೇವಲ ನಿನ್ನದೂ ಅಂತ ಏನಿದೆ ಅಂತ. ಕೊಂಚ ಗಲಿಬಿಲಿಗೊಂಡ ಭಕ್ತ ಹೇಳ್ತಾನೆ, ನನ್ನವರು ಅಂತ ನನ್ನ ಹೆಂಡತಿ ಮಕ್ಕಳಿದ್ದಾರೆ. ಭಗವಂತ ಮತ್ತೆ ನಗುತ್ತಾ ಹೇಳ್ತಾನೆ. ಅವರ್ಯಾರೂ ನಿನ್ನವರಲ್ಲ ಅವರೇನಿದ್ದರೂ ಸ್ಮಶಾನದವರೆಗೂ ಬರಬಲ್ಲ್ಟರಷ್ಟೇ. ನಿನ್ನೊಂದಿಗೆ ಕೊನೇತನಕ ಬರಬಲ್ಲದು ಏನಿದೆ? ಆಗ ಭಕ್ತ ಮತ್ತೆ ಹೇಳ್ತಾನೆ ನನ್ನ ಸುಂದರ ಸಧೃಢವಾದ ದೇಹವಿದೆ. ಆಗ ಭಗವಂತ ಗಹಗಹಿಸುತ್ತ ಹೇಳ್ತಾನೆ, ಅಯ್ಯೋ ಮಂಕೆ ಪ್ರಾಣ ಬಿಟ್ಟುಹೋದಮೇಲೆ ನಿನ್ನ ದೇಹ ಪಂಚಭೂತಗಳ ಪಾಲಾಗುವುದೇ ಹೊರತು ನಿನ್ನದಾಗಿರುವುದಿಲ್ಲ. ಕೊನೆಗೆ ಭಕ್ತ ಭಗವಂತನಿಗೆ ಶರಣಾಗುತ್ತಾ ದೇವ ನನ್ನ ಜೊತೆ ನಾನೇನು ತರಬಲ್ಲೆ ಅಂತ ನೀನೇ ನನಗೆ ತಿಳಿಸಿಕೊಡಬೇಕು ಎಂದು ಭಗವಂತನ ಮೊರೆಹೋಗುತ್ತಾನೆ. ಆಗ ದೇವರು ಹೇಳುತ್ತಾನೆ, ನಿನ್ನೊಂದಿಗೆ ಬರುವುದು ನೀನು ನಿನ್ನ ಜೀವನದಲ್ಲಿ ಕಳೆದ ಮಧುರ ಕ್ಷಣಗಳು ಮಾತ್ರ. ಆದ್ದರಿಂದ ನಿಮ್ಮ ಜೀವನದ ಮಧುರ ಕ್ಷಣಗಳನ್ನು ಪಡೆಯುವ ಅವಕಾಶ ನಿಮ್ಮ ಮನೆಯಲ್ಲಿಯೇ ಇದೆ. ಮಧುರ ಕ್ಷಣಗಳಿಗಾಗಿ ಮನೆಯಲ್ಲಿಯೇ ಇರಿ, ಆನಂದದಿಂದ ಆರೋಗ್ಯವಾಗಿರಿ. ಆರೋಗ್ಯದಿಂದ ಆನಂದವಾಗಿರಿ. ಕೊರೊನಾ ಓಡಿಸುವಲ್ಲಿ ನಿಮ್ಮ ಸಹಕಾರವೂ ಇರಲಿ.
ಮನೆಯಲ್ಲಿಯೇ ಇರಿ ; ಸ್ವಚ್ಛವಾಗಿರಿ.
ಮನೆಯಲ್ಲಿಯೇ ಇರಿ ; ನಗು ನಗುತ್ತಾ ಇರಿ.
ಮನೆಯಲ್ಲಿಯೇ ಇರಿ; ಸುರಕ್ಷಿತವಾಗಿರಿ.
ಮನೆಯಲ್ಲಲಿಯೇ ಇರಿ; ಆರೋಗ್ಯದಿಂದಿರಿ
ಏಕೆಂದರೆ ಕೊರೊನ ಓಡಿಸಬೇಕೂರಿ !
ಮನೆಯಲ್ಲಿಯೇ ಇದ್ದು ಕೊರೊನ ಓಡಿಸೋಣ:
(1). ಅನವಶ್ಯಕವಾಗಿ ಹೊರಹೋದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು
(2). ಹೊರಗೆ ಹೋದರೆ ಕೊರೊನ ಸೋಂಕಿತರಾಗಬಹುದು
(3). ಕೊರೊನಾ ಸೋಂಕಿತರಾದರೆ ನಿಮ್ಮ ಹೆಸರನ್ನು ಕಳೆದುಕೊಂಡು ಪೇಷಂಟ್ ನಂಬರ್ ಆಗುವಿರಿ
(4). ಪಡೆಯಬೇಕಾದ ಚಿಕಿತ್ಸೆಯ ಆಗುಹೋಗುಗಳು
(5). ಕೊರೊನ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾದರೆ ಯಾವುದೇ ಬಂಧುಬಳಗದ ¸ಸಂಪರ್ಕವಿರುವುದಿಲ್ಲ
(6). ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಪಾತ್ರ ಮತ್ತು ನಿಮ್ಮ ಸಾಮಾಜಿಕ ಜವಾಬ್ದಾರಿ
(7). ಭಾರತದ ಪ್ರಜೆಯಾಗಿ ಘನ ಸರ್ಕಾರದ ಆದೇಶಗಳನ್ನು ಪಾಲಿಸುವುದು
(8). ನಿಮ್ಮ ಮುಂದಿನ ಜೀವನ ಮತ್ತು ಕುಟುಂಬ ಸದಸ್ಯರ ಹೊಣೆಗಾರಿಕೆ
ಮನುಷ್ಯ ಪ್ರಕೃತಿಯ ಭಾಗವಾದರೂ ಅವನ ವಾಸಸ್ಥಾನ ಮನೆಯೇ ಆಗಿರುತ್ತದೆ. ಮನುಷ್ಯನಿಗೆ ಜೀವನದಲ್ಲಿ ಉತ್ತಮವಾದ ಸ್ಥಳವೆಂದರೆ ಅವನ ಮನೆ. ಮನುಷ್ಯನಿಗೆ ಸುರಕ್ಷತೆ ಮತ್ತು ಸುಭದ್ರತೆ ಒದಗಿಸುವ ಮತ್ತು ಉತ್ತಮ ಭವಿಷ್ಯವನ್ನು ಕಲ್ಪಸಿಕೊಡುವ ಮೊಟ್ಟ ಮೊದಲ ಸ್ಥಳವೇ ಮನೆ. ಸಂಬಂಧಗಳು ಹುಟ್ಟಿ ಬೆಳೆದು, ಭದ್ರತೆಯನ್ನು ಕೊಡುವ ಸ್ಥಳವೂ ಗೃಹವೇ ಆಗಿರುತ್ತದೆ. ಮನುಷ್ಯ ತನ್ನ ಜೀವನದಲ್ಲಿ ಹೆಚ್ಚು ಸಮಯವನ್ನು ಕಳೆಯುವ ಸ್ಥಳವೇ ಮನೆಯಾಗಿರುತ್ತದೆ. ಆದ್ದರಿಂದ ಮನೆಯಲ್ಲಿರುವುದನ್ನು ಪ್ರೀತಿಸಬೇಕು. ನಾವೆಲ್ಲಾ ಜೀವಿಸಬೇಕು. ಜೀವವಿದ್ದರೆ ತಾನೆ ಜೀವಿಸುವುದು. ಜೀವಕ್ಕಾಗಿ ಕೊರೊನ ವಿರುದ್ದ ಹೋರಾಡಬೇಕಾಗಿದೆ. ಆದ್ದರಿಂದ ಮನೆಯಲ್ಲಿಯೇ ಇದ್ದು ಕೊರೊನ ಓಡಿಸೋಣ.
ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ.
ಡಾ. ಅಮರ್‌ನಾಥ್
ಕನ್ಸಲ್ಟೆಂಟ್ – ಆಮ್‍ಕೀ ಎಜುಕೇಷನ್, ಕ್ಯಾರಿಯರ್ ಗೈಡೆನ್ಸ್ ಸೆಂಟರ್
ನಿರ್ದೇಶಕರು, ಸಿಗ್ಫಾ (SIGFA) ಸಲ್ಯೂಷನ್ಸ್
E-Mail: amarn41@gmail.com
ದೂ.: 7353685241 Whatsapp : 9108937631