ಮೆದುಳಿನ ಬೆಳವಣಿಗೆಗೆ ಯಾವ ಆಹಾರ ಸೂಕ್ತ? ಆರೋಗ್ಯಕರ ಕೊಬ್ಬಿನಾಂಶ, ಪೋಷಕಾಂಶಗಳು, ಜೀವಸತ್ವಗಳು, ಖನಿಜಾಂಶಗಳು ಹಾಗೂ ಇತರೆ ಆಂಟಿ ಆಕ್ಸಿಡಂಟ್‍ಗಳು ನೇರವಾಗಿ ಅಥವಾ ಪರೋಕ್ಷವಾಗಿ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ.
ಪ್ರತಿಯೊಬ್ಬರ ಮೆದುಳಿನ ಬೆಳವಣಿಗೆಯು ತಾಯಿಯ ಗರ್ಭದಲ್ಲಿದ್ದಾಗಿನಿಂದ ಹಿಡಿದು ಮಗು ಹುಟ್ಟಿದ ನಂತರದ ಸುಮಾರು 18 ತಿಂಗಳಗಳ ಕಾಲದವರೆಗೆ ಮುಂದುವರೆಯುತ್ತದೆ. ಮಗು ಹುಟ್ಟಿದಾಗ, ದೇಹದ ತೂಕದ ಪ್ರತಿಶತ 10 ರಷ್ಟು ಮೆದುಳಿನ ತೂಕವಿದ್ದು, ಕ್ರಮೇಣ ಬೆಳೆಯುತ್ತಾ ಕೇವಲ ದೇಹದ ತೂಕದ ಪ್ರತಿಶತ 2 ರಷ್ಟು ಮಾತ್ರ ಒಳಗೊಂಡಿರುತ್ತದೆ. ಮೆದುಳಿನ ವಿವಿಧ ಭಾಗಗಳು ಬೇರೆ ಬೇರೆ ದರದಲ್ಲಿ ಬೆಳೆಯುತ್ತವೆ. ಇದನ್ನು ನಾವು `ನಿರ್ಣಾಯಕ ಅವಧಿ’ ಎಂದೇ ಕರೆಯುತ್ತೇವೆ. ಇಂತಹ ಅವಧಿಗಳಲ್ಲಿ ದೇಹದ ಬೆಳವಣಿಗೆಯು ತೀವ್ರವಾಗಿರುತ್ತದೆ.
ಆದ್ದರಿಂದ ಮಕ್ಕಳು ಬೆಳೆಯುವ ಸಮಯದಲ್ಲಿ ಅನೇಕ ರೀತಿಯ ಪೌಷ್ಟಿಕಾಂಶಗಳ ಕೊರತೆ ಹಾಗೂ ಸೋಂಕುಗಳಿಗೆ ತುತ್ತಾಗುವರು. ಇಂತಹ ದೇಹದ ಅತ್ಯಮೂಲ್ಯ ಅವಧಿಗಳಲ್ಲಿ ಅವರಿಗೆ ಸೂಕ್ತವಾಗುವಂತಹ ಆಹಾರದ ಅವಶ್ಯಕತೆ ಪ್ರಮುಖವಾದದ್ದು. ಭ್ರೂಣದ ಮೆದುಳಿನ ಬೆಳವಣಿಗೆಯು ತಾಯಿಯ ಗರ್ಭದಲ್ಲಿದ್ದಾಗಲೆ ಪ್ರಾರಂಭವಾಗುತ್ತದೆ. ಬೆಳವಣಿಗೆಗೆ ಬೇಕಾಗುವಂತಹ ಪೋಷಕಾಂಶಗಳು ತಾಯಿಯ ಗರ್ಭದಲ್ಲಿಯೇ ತಲುಪಿರುತ್ತವೆ. ಹೀಗಾಗಿ ತಾಯಿಯ ಆಹಾರ ಸೇವನೆ, ಆರೋಗ್ಯ ಹಾಗೂ ಪೌಷ್ಟಿಕತೆಯು ಅತ್ಯಂತ ಗಣನೀಯ ಅಂಶವಾಗಿವೆ.
ಆಹಾರ ಸೇವನೆ ಮತ್ತು ಮೆದುಳು
ಮೆದುಳಿನ ಬೆಳವಣಿಗೆಗೆ ಹಾಗೂ ಸಮತೋಲನೆಯನ್ನು ಕಾಪಾಡಿಕೊಳ್ಳುವುದಕ್ಕೆ ಶಕ್ತಿಯ ಅವಶ್ಯವಿದೆ. ದೇಹಕ್ಕೆ ಶಕ್ತಿಯು ಆಹಾರ ಸೇವನೆಯ ಮೂಲಕ ದೊರಕುತ್ತದೆ. ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿನ ಶರ್ಕರ, ಪ್ರೋಟಿನ್ ಹಾಗೂ ಕೊಬ್ಬಿನಾಂಶಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಈ ಶಕ್ತಿಯು ದೇಹದಲ್ಲಿರುವ ರಕ್ತದ ಮೂಲಕ ದೇಹದ ಎಲ್ಲಾ ಭಾಗಗಳನ್ನು ತಲುಪುತ್ತೆ. ಮೆದುಳು ಕೂಡ ರಕ್ತದ ಮೂಲಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಖಾಲಿ ಹೊಟ್ಟೆಯಲ್ಲಿ ಮಧ್ಯ ಸೇವನೆ ಮಾಡುವುದರಿಂದ ದೇಹದಲ್ಲಿನ ಇನ್ಸುಲಿನ್ ಎಂಬ ಹಾರ್ಮೋನಿನ ಅತೀ ಹೆಚ್ಚು ಸ್ರವಿಕೆ ಉಂಟಾಗಿ ಮೆದುಳಿಗೆ ಶಕ್ತಿಯ ಕೊರತೆ ಉಂಟಾಗಿ ಕೆಲವೊಮ್ಮೆ ಕೋಮ ಅಥವಾ ಸಾವು ಕೂಡ ಸಂಭವಿಸುವ ಸಂಧರ್ಭಗಳಿರುತ್ತವೆ.
ಮೆದುಳಿನ ಬೆಳವಣಿಗೆಗೆ ಸೇವಿಸಬೇಕಾದ ಆಹಾರ ಪದಾರ್ಥಗಳು:
ಹಸಿರು ಸೊಪ್ಪು ತರಕಾರಿಗಳು, ಮೀನು ಮತ್ತು ಮೀನಿನ ಪದಾರ್ಥಗಳು, ಅವಕಾಡೋ, ಕೋಸು ಗಡ್ಡೆ, ಎಣ್ಣೆ ಬೀಜಗಳಾದ – ಅಕ್ರೋಡು, ಬಾದಾಮಿ, ಗೋಡಂಬಿ, ಬೀಟ್‍ರೂಟಗಳು, ಕೊಬ್ಬರಿ ಎಣ್ಣೆ, ನೇರಳೆ ಹಣ್ಣು, ಡಾರ್ಕ ಚಾಕಲೇಟ್‍ಗಳು, ಮೊಟ್ಟೆಯ ಹಳದಿ ಭಾಗ, ಅರಿಶಿಣ ಮತ್ತು ಇತರೆ ಪದಾರ್ಥಗಳನ್ನು ಸೇವಿಸುವುದರಿಂದ ಇವುಗಳಲ್ಲಿರುವ ಆರೋಗ್ಯಕರ ಕೊಬ್ಬಿನಾಂಶ, ಪೋಷಕಾಂಶಗಳು, ಜೀವಸತ್ವಗಳು, ಖನಿಜಾಂಶಗಳು ಹಾಗೂ ಇತರೆ ಆಂಟಿ ಆಕ್ಸಿಡಂಟ್‍ಗಳು ನೇರವಾಗಿ ಅಥವಾ ಪರೋಕ್ಷವಾಗಿ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ.
ಚೈತನ್ಯ ಆರ್. ಇಟಗಿ
ಕಿರಿಯ ವಿಜ್ಞಾನಿ, ಆಹಾರ ಮತ್ತು ಪೋಷಣೆ
`ಶ್ರೀ ದುರ್ಗಾ’, ಎಂಐಜಿ-1-57,
ಕೆಹೆಚ್‍ಬಿ ಕಾಲೋನಿ, ಸಂಪಿಗೆ ನಗರ ಸಮೀಪ, ದೊಡ್ಡನಾಯಕನ್‍ಕೊಪ್ಪ, ಧಾರವಾಡ-580008
ಮೊ.: 9449970666