ಮನುಕುಲವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ವೈರಸ್ ಎನ್ನುವುದು ಜೀವ ಜಗತ್ತಿನ ಅತ್ಯಂತ ಅದ್ಬುತವಾದ ಸೃಷ್ಟಿ. ಜಗತ್ತಿನಲ್ಲಿ ರೋಗಗಳನ್ನು ಉಂಟು ಮಾಡುವ ಕೋಟ್ಯಾಂತರ ವೈರಾಣುಗಳಿದ್ದು, ಅದರಲ್ಲಿ ಕೇವಲ 5000 ರೀತಿಯ ವೈರಾಣುಗಳನ್ನು ಮಾತ್ರ ಪತ್ತೆ ಹಚ್ಚಲಾಗಿದೆ.
ವೈರಾಣು ಎಂದರೇನು?
ಬ್ಯಾಕ್ಟೀರಿಯಾ V/s ವೈರಸ್:
ವೈರಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಎರಡು ಬೇರೆ ಬೇರೆ ರೀತಿಯ ಜೀವಿಗಳಾಗಿದ್ದು, ಬ್ಯಾಕ್ಟೀರಿಯಾಗಳು ಬಹಳ ಸಂಕೀರ್ಣವಾದ ಜೀವಿಯಾಗಿರುತ್ತದೆ. ಬ್ಯಾಕ್ಟೀರಿಯಾಗಳು ದೇಹದ ಹೊರಗಡೆ ಇತರ ಜೀವಿಯ ಸಹಾಯವಿಲ್ಲದೆ ಸಂತಾನಗಳನ್ನು ವೃದ್ಧಿ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ವೈರಾಣುಗಳು ಇತರ ಜೀವಿಗಳ ಸಹಾಯವಿಲ್ಲದೆ ಸಂತಾನಾಭಿವೃದ್ಧಿ ಮಾಡಲಾರದು.ಬ್ಯಾಕ್ಟೀರಿಯಾ ವೈರಾಣುವಿಗಿಂತ ದೊಡ್ಡದಾಗಿದ್ದು, ಅದರಲ್ಲಿ DNA ಮತ್ತು RNA ಎರಡೂ ಇರುತ್ತದೆ. ಆದರೆ ವೈರಸ್‌ನಲ್ಲಿ ಕೇವಲ DNA ಅಥವಾ RNA ಮಾತ್ರ ಇರುತ್ತದೆ. ಎರಡೂ ಇರುವುದಿಲ್ಲ. ವೈರಸ್‌ಗಳ ಗಾತ್ರ 5 ರಿಂದ 300 ನ್ಯಾನೋಮೀಟರ್ ಇದ್ದರೆ ಬ್ಯಾಕ್ಟೀರಿಯಾಗಳ ಗಾತ್ರ 0.2 ರಿಂದ 20 ಮೈಕ್ರೋಮೀಟರ್ ಇರುತ್ತದೆ. ವೈರಸ್‌ಗಳಿಗಿಂತ ಬ್ಯಾಕ್ಟೀರಿಯಾಗಳು 20 ಪಟ್ಟು ದೊಡ್ಡದಾಗಿರುತ್ತದೆ.
ಈ ವೈರಸ್‌ಗಳು ಮನುಷ್ಯನ ದೇಹದ ಜೀವಕೋಶಗಳ ಒಳಗೆ ಅಥವಾ ಬ್ಯಾಕ್ಟೀರಿಯಾಗಳ ಒಳಗೆ ಸೇರಿಕೊಂಡು ತನ್ನ ಪ್ರತಿರೂಪವನ್ನು ಸೃಷ್ಟಿಸಿಕೊಂಡು ಸಂತಾನೋತ್ಪತ್ತಿ ಮಾಡುತ್ತದೆ. ವೈರಸ್‌ಗಳನ್ನು ಸಾಮಾನ್ಯವಾಗಿ ಆಂಗ್ಲಭಾಷೆಯಲ್ಲಿ “Organisms at the edge of life” ಎಂದು ವಿವರಿಸಲಾಗಿದೆ. ಅವುಗಳನ್ನು ಜೀವವಿಲ್ಲದ ವಸ್ತು ಎಂದು ಕರೆಯುತ್ತಾರೆ. ಒಂದು ಜೀವವಿರುವ ವಸ್ತುಗಳಿಗಿರುವ ಎಲ್ಲಾ ವ್ಯವಸ್ಥೆಗಳು ವೈರಸ್‌ಗಳಲ್ಲಿ ಇರುವುದಿಲ್ಲ. ವೈರಾಣುವಿನೊಳಗೆ DNA ಅಥವಾ RNA ಎಂಬ ವಂಶವಾಹಕ ಜೀನ್ ವ್ಯವಸ್ಥೆ ಇರುವುದರಿಂದ ’ಜೀವಿ’ ಎಂದೂ ಕೆಲವರು ಗುರುತಿಸುತ್ತಾರೆ. ಯಾವುದೇ ಒಂದು ಜೀವಕೋಶಗಳಿಗಿರುವ ರಚನೆ ವೈರಾಣುವಿಗೆ ಇರುವುದಿಲ್ಲ. ಮತ್ತು ಯಾವುದೇ ಜೈವಿಕ ಕ್ರಿಯೆಗಳನ್ನು ವೈರಾಣುಗಳು ನಡೆಸುವುದಿಲ್ಲ.
ಸಾಮಾನ್ಯವಾಗಿ ವೈರಸ್‌ಗಳು ತಾವು ದಾಳಿ ಮಾಡಿದ ಮನುಷ್ಯನ ಜೀವಕೋಶಗಳಿಗೆ ಸೇರಿಕೊಂಡು ಆ ಜೀವಕೋಶಗಳ ನ್ಯೂಕ್ಲಿಯಸ್‌ನ ಸಹಾಯದಿಂದ ಹೊಸ ವೈರಾಣು ಉತ್ಪತ್ತಿ ಮಾಡುತ್ತದೆ. ಈ ಸಂದರ್ಭಗಳಲ್ಲಿ ಹೆಚ್ಚಾಗಿ ವೈರಾಣು ದಾಳಿ ನಡೆಸಿದ ಜೀವಕೋಶಗಳು ಸಾಯುತ್ತದೆ. ಕೆಲವೊಮ್ಮೆ ವೈರಾಣುಗಳು ತಾವು ದಾಳಿ ಮಾಡಿದ ಮನುಷ್ಯನ ಜೀವಕೋಶಗಳನ್ನು ಕ್ಯಾನ್ಸರ್ ಜೀವಕೋಶಗಳಾಗಿ ಮಾರ್ಪಾಡು ಮಾಡುತ್ತದೆ. ಹೆಚ್ಚಿನ ಎಲ್ಲಾ ವೈರಾಣುಗಳು ರೋಗ ಉಂಟು ಮಾಡುವ ಸಾಮರ್ಥ್ಯ ಹೊಂದಿದ್ದು, ಅವುಗಳು ನಿರ್ದಿಷ್ಟ ಜೀವಕೋಶಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತದೆ. ಉದಾಹರಣೆಗೆ ಕೆಲವೊಂದು ವೈರಸ್ ಲಿವರ್‌ಗೆ (ಹೆಪಟೈಟಿಸ್ ವೈರಸ್) ಕೆಲವೊಂದು ವೈರಾಣು ಶ್ವಾಸಕೋಶಗಳಿಗೆ (ಕೋವಿಡ್-19 ವೈರಸ್) ಮತ್ತೆ ಕೆಲವು ವೈರಾಣುಗಳು ರಕ್ತದಲ್ಲಿನ ರಕ್ತಕಣಗಳಿಗೆ (ಎಚ್‌ಐವಿ) ದಾಳಿ ಮಾಡುತ್ತದೆ.
ಬ್ಯಾಕ್ಟೀರಿಯಾಗಳು ಒಂದೇ ಜೀವಕೋಶವಿರುವ ಮತ್ತು ಒಂದು ಸುರಕ್ಷಾ ಕವಚವಾದ ಸೆಲ್‌ವಾಲ್ ಹೊಂದಿರುತ್ತದೆ. ಆದರೆ ವೈರಾಣುವಿನಲ್ಲಿ ಯಾವುದೇ ಸೆಲ್‌ವಾಲ್ ಇರುವುದಿಲ್ಲ. ಕೇವಲ ಒಂದು ಪ್ರೊಟೀನ್ ಪದರ ಇರುತ್ತದೆ. ತಾವಾಗಿಯೇ ಪುನರುತ್ಪತ್ತಿ ಮಾಡಿಕೊಳ್ಳುವ ಶಕ್ತಿ ಇಲ್ಲದ ಈ ವೈರಾಣುಗಳು ತಾವು ದಾಳಿ ಮಾಡಿದ ಜೀವಕೋಶಗಳನ್ನೇ ಹೈಜಾಕ್ ಮಾಡಿ ಆ ಜೀವಕೋಶಗಳಲ್ಲಿರುವ ರೈಬೋಸೋಮ್ ಬಳಸಿ ಹೊಸ ವೈರಾಣು ಉತ್ಪತ್ತಿ ಮಾಡುತ್ತದೆ. ಈ ಕಾರಣದಿಂದಲೇ ವೈರಸ್‌ಗಳನ್ನು ಜೀವವಿಲ್ಲದ ವಸ್ತು ಎಂದು ವಿಂಗಡಿಸಲಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಎಲ್ಲಾ ಬ್ಯಾಕ್ಟೀರಿಯಾಗಳು ಮನುಷ್ಯ ಸ್ನೇಹಿಯಾಗಿರುತ್ತದೆ. ಕೇವಲ ಒಂದು ಶೇಕಡಾ ಬ್ಯಾಕ್ಟೀರಿಯಾ ಮನುಷ್ಯರಲ್ಲಿ ರೋಗ ಉಂಟು ಮಾಡುತ್ತದೆ, ಆದರೆ ಹೆಚ್ಚಿನ ಎಲ್ಲಾ ವೈರಾಣುಗಳು ಮನುಷ್ಯನಲ್ಲಿ ರೋಗ ಉಂಟು ಮಾಡುತ್ತದೆ. ವೈರಾಣುಗಳು ಮನುಷ್ಯ ಮತ್ತು ಪ್ರಾಣಿಗಳು ಅಲ್ಲದೆ, ಸಸ್ಯಗಳನ್ನು ಕಾಡುತ್ತದೆ. ಸಸ್ಯಗಳನ್ನು ತಿನ್ನುವ ಕ್ರಿಮಿಕೀಟಗಳಿಂದ ಈ ವೈರಾಣು ಸಸ್ಯಗಳಿಂದ ಮನುಷ್ಯನಿಗೆ ಹರಡುವ ಸಾಧ್ಯತೆಯೂ ಇರುತ್ತದೆ.
ವೈರಾಣುವಿನಿಂದ ಹರಡುವ ರೋಗಗಳು:
ಇನ್ನು ಬಾವಲಿ ಜ್ವರ, ನಿಫಾಹ್ ವೈರಾಣುವಿನಿಂದ ಬಾವಲಿಗಳ ಮುಖಾಂತರ ಮನುಷ್ಯರಿಗೆ ಹರಡಿದೆ ಎನ್ನಲಾಗುತ್ತದೆ. ಅದೇ ರೀತಿ ಕೋವಿಡ್-19 ಎಂಬ ಹೊಸ ರೋಗ ಬಾವಲಿ ಅಥವಾ ಚಿಪ್ಪು ಹಂದಿಗಳಿಂದ ಮನುಷ್ಯನಿಗೆ ಸಾರ್ಸ್ ಕೋವಿಡ್-2 ಎಂಬ ವೈರಾಣುವಿನಿಂದ ಬಂದಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಸಾಮಾನ್ಯವಾಗಿ ವೈರಸ್ ಜ್ವರ ಕೆಲವೊಂದು ದಿನಗಳ ವರೆಗೆ ಇರುತ್ತದೆ.ಮತ್ತು ರೋಗದ ಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಉದಾಹರಣೆಗೆ ನೋವು, ಜ್ವರ ಮತ್ತು ನಿರ್ಜಲೀಕರಣಕ್ಕೆ ಔಷಧಿ ನೀಡಲಾಗುತ್ತದೆ. ಕೆಲವೊಂದು ವೈರಾಣುಗಳಿಗೆ ಆಂಟಿವೈರಸ್ ಔಷಧಿ ಕಂಡು ಹಿಡಿಯಲಾಗಿದ್ದು, ಈ ಆಂಟಿವೈರಸ್ ಔಷಧಿ ವೈರಸ್ ದೇಹದ ಜೀವಕೋಶಗಳ ಒಳಗೆ ಸೇರದಂತೆ ಅಥವಾ ಜೀವಕೋಶದೊಳಗೆ ಪುನರುತ್ಪತ್ತಿಯಾಗದಂತೆ ತಡೆಯುತ್ತದೆ.
ಆಂಟಿಬಯೋಟಿಕ್ ಔಷಧಿಯನ್ನು ವೈರಾಣು ಸೋಂಕಿಗೆ ಬಳಸಲಾಗುವುದಿಲ್ಲ. ಆದರೆ ವೈರಾಣು ಸೋಂಕಿನ ಜೊತೆಗೆ ಬ್ಯಾಕ್ಟೀರಿಯಾ ಸೋಂಕು ಇದ್ದಲ್ಲಿ ಆಂಟಿಬಯೋಟಿಕ್ ಬಳಸಲಾಗುತ್ತಿದೆ. ಸಾಮಾನ್ಯವಾಗಿ ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟಾಗ ಹೆಚ್ಚಾಗಿ ವೈರಾಣು ಸೋಂಕು ದೇಹಕ್ಕೆ ತಗಲುತ್ತದೆ. ದೇಹದ ರಕ್ಷಣಾ ವ್ಯವಸ್ಥೆಯನ್ನು ದೃಢಗೊಳಿಸಿ ರೋಗವನ್ನು ಉಲ್ಬಣವಾಗದಂತೆ ಮಾಡಲಾಗುತ್ತದೆ. ಕೆಲವೊಂದು ವೈರಾಣುಗಳ ವಿರುದ್ಧ ಲಸಿಕೆ ಕೂಡಾ ತಯಾರಿಸಲಾಗಿದೆ. ಈ ಲಸಿಕೆ ನೀಡಿ ವೈರಾಣು ರೋಗ ಬರದಂತೆ ಮಾಡಲು ಸಾದ್ಯವಿದೆ. ಉದಾಹರಣೆಗೆ ಪೊಲಿಯೋ ಲಸಿಕೆಯನ್ನು ಪೊಲಿಯೋ ಡ್ರಾಫ್ಟ್ ನೀಡಿ ಪೊಲಿಯೋ ಬರದಂತೆ ಮಾಡಲಾಗಿದೆ. ಪೊಲಿಯೋ ರೋಗ ಭೂಮಂಡಲದಿಂದಲೇ ನಿರ್ನಾಮವಾಗಿದೆ. ಅದೇ ರೀತಿ ದಡಾರ ಅಥವಾ Small Pox ರೋಗಕ್ಕೆ ಲಸಿಕೆ ನೀಡಿ ರೋಗವನ್ನು ನಿರ್ಮೂಲನ ಮಾಡಲಾಗಿದೆ. ಈಗ ಚಿಕನ್ ಪಾಕ್ಸ್ ರೋಗಕ್ಕೂ ಲಸಿಕೆ ಲಭ್ಯವಿದೆ. ಆದರೆ ಕೆಲವೊಂದು ವೈರಾಣುಗಳ ಮನುಷ್ಯ ಜೀವಕೋಶದಲ್ಲಿ ಸೇರಿಕೊಂಡು ಹೊಸ ವೈರಸ್‌ಗಳನ್ನು ಸೃಷ್ಟಿಸುವಾಗ ರೂಪಾಂತರ ಹೊಂದುತ್ತದೆ. ಇದನ್ನು ಮ್ಯುಟೇಷನ್ ಎನ್ನಲಾಗುತ್ತದೆ. ಈ ರೀತಿ ಮ್ಯುಟೇಷನ್ ಹೊಂದಿದ ವೈರಾಣುಗಳು ಮೂಲ ವೈರಾಣುವಿಗಿಂತ ಭಿನ್ನವಾಗಿದ್ದು, ಲಸಿಕೆ ಇವುಗಳ ಮೇಲೆ ಯಶಸ್ವಿಯಾಗುವುದಿಲ್ಲ. ಈ ಕಾರಣದಿಂದ ರೂಪಾಂತರ ಹೊಂದುವ ವೈರಾಣುಗಳಿಗೆ ಲಸಿಕೆ ಕಂಡು ಹಿಡಿಯುವುದು ಸುಲಭದ ಮಾತಲ್ಲ.
ವೈರಸ್ ಹೇಗೆ ಹರಡುತ್ತದೆ?
ವೈರಸ್‌ಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ. ಒಬ್ಬ ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಸ್ಪರ್ಶ, ಲೈಂಗಿಕ ಸಂಪರ್ಕ, ದೈಹಿಕ ಸಂಪರ್ಕ, ಎಂಜಲಿನ ಮೂಲಕ, ಕೆಮ್ಮು ನೀರಿನ ಕಿರು ಹನಿಗಳ ಮುಖಾಂತರ, ಕಲುಷಿತ ನೀರು, ಆಹಾರಗಳ ಮುಖಾಂತರವೂ ಹರಡುತ್ತದೆ. ವೈರಾಣುಗಳು ಕೀಟಗಳ ದೇಹದಲ್ಲಿಯೇ ಆಶ್ರಯ ಪಡೆಯುವುದರಿಂದ ಕೀಟಗಳ ಕಡಿತದ ಮುಖಾಂತರ, ಸೊಳ್ಳೆಗಳ ಕಡಿತದ ಮುಖಾಂತರವೂ ಹರಡುವ ಸಾಧ್ಯತೆ ಇರುತ್ತದೆ. ಉದಾಹರಣೆ ಡೆಂಗ್ಯೂ ಜ್ವರ ಮತ್ತು ಚಿಕುನ್‌ಗುನ್ಯಾ ಜ್ವರ. ಸೋಂಕಿತ ತಾಯಿಯಿಂದ ವೈರಾಣು ಪ್ಲಾಸೆಂಟಾ ಮೂಲಕ ತನ್ನಿಂದ ಜನಿಸುವ ಮಗುವಿಗೂ ರೋಗ ಹರಡುವ ಸಾಧ್ಯತೆ ಇರುತ್ತದೆ. ಉದಾಹರಣೆ ಎಚ್‌ಐವಿ ರೋಗ ಕೋವಿಡ್-19 ಬಾಧಿಸುವ ವೈರಾಣು ಮಲದ ಮೂಲಕವೂ ಹೊರಹಾಕಲ್ಪಡುವುದರಿಂದ ದೇಹಬಾಧೆ ತೀರಿಸಿದ ಬಳಿಕ ಸರಿಯಾಗಿ ಕೈ ತೊಳೆಯದಿದ್ದಲ್ಲಿ ಇನ್ನೊಬ್ಬರಿಗೆ ಹರಡುವ ಸಾಧ್ಯತೆಯೂ ಇರುತ್ತದೆ.
ವೈರಾಣುಗಳು ಪ್ರಣಿಗಳಲ್ಲಿ ಇರುವುದರಿಂದ ಸರಿಯಾಗಿ ಬೇಯಿಸದ ಮಾಂಸ ತಿನ್ನುವುದರಿಂದಲೂ ಮನುಷ್ಯನಿಗೆ ಬರುವ ಸಾದ್ಯತೆ ಇರುತ್ತದೆ. ಒಟ್ಟಿನಲ್ಲಿ ಮನುಷ್ಯನಿಂದ ಮನುಷ್ಯನಿಗೆ, ಪ್ರಾಣಿಗಳಿಂದ ಮನುಷ್ಯನಿಗೆ, ಪ್ರಾಣಿಗಳಿಂದ ಸೊಳ್ಳೆಗಳ ಮುಖಾಂತರ ಮನುಷ್ಯನಿಗೆ ವೈರಾಣು ಹರಡುವ ಎಲ್ಲಾ ಸಾದ್ಯತೆ ಇರುತ್ತದೆ. ಕೆಲವೊಮ್ಮೆ ಸೋಂಕಿತ ರೋಗಿ ವಸ್ತುಗಳನ್ನು ಮುಟ್ಟಿದಾಗ, ವೈರಾಣುಗಳು ಆ ವಸ್ತುವಿಗೆ ಸೇರಿಕೊಂಡು ಹಲವಾರು ಗಂಟೆಗಳ ಕಾಲ ಜೀವಂತವಾಗಿರುತ್ತದೆ. ಹೀಗಾಗಿ ಸೋಂಕಿತ ವ್ಯಕ್ತಿಯ ನೇರ ಸಂಪರ್ಕವಿಲ್ಲದಿದ್ದರೂ ನಿರ್ಜೀವ ವಸ್ತುಗಳ ಮುಖಾಂತರ ಸೋಂಕಿತ ವ್ಯಕ್ತಿ ಮುಟ್ಟಿದ ವಸ್ತು ಮುಟ್ಟಿದಾಗ ವೈರಾಣು ಆರೋಗ್ಯವಂತ ವ್ಯಕ್ತಿಗೆ ಸೇರಿಕೊಂಡು ಸೋಂಕು ಉಂಟು ಮಾಡಬಹುದು.
ಕಿಟಕಿ ಅವಧಿ
ಜೀವಕೋಶಗಳು ಸತ್ತು ಹೋದಾಗ ವೈರಾಣುಗಳ ಸಂಖ್ಯೆ ವೃದ್ಧಿಸಿದಾಗ ರೋಗಿಗಳಲ್ಲಿ ರೋಗ ಪ್ರಕಟಗೊಳ್ಳುತ್ತದೆ. ಇದು ಜ್ವರ, ಮೈಕೈನೋವು, ಸುಸ್ತು, ವಾಂತಿ, ಬೇಧಿ, ಕೆಮ್ಮು, ದಮ್ಮು ಮುಂತಾದ ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಜೀವಕೋಶಗಳನ್ನು ಹಾಳುಗೆಡವಿದ ವೈರಾಣು ಮತ್ತಷ್ಟು ಹೊಸ ಜೀವಕೋಶಗಳ ಒಳಗೆ ಸೇರಿ ಹೊಸ ಹೊಸ ವೈರಾಣು ಸೃಷ್ಟಿಗೊಳಿಸುತ್ತಲೇ ಹೋಗುತ್ತದೆ. ಇಲ್ಲಿ ನಾವು ಗಮನಿಸಬೇಕಾದ ವಿಚಾರವೆಂದರೆ ಒಬ್ಬ ವ್ಯಕ್ತಿಯ ದೇಹದ ಒಳಗೆ ಸೇರಿದ ವೈರಾಣು ರೋಗ ಪ್ರಕಟಗೊಳ್ಳುವ ಮೊದಲೇ ಇನ್ನೊಬ್ಬರಿಗೆ ರೋಗವನ್ನು ಹರಡುವ ಸಾಮರ್ಥ್ಯ ಹೊಂದಿರುತ್ತದೆ. ಹೀಗಾಗಿ ವೈರಾಣು ಸೋಂಕಿತ ವ್ಯಕ್ತಿ ಹೊರ ನೋಟಕ್ಕೆ ಆರೋಗ್ಯವಂತ ವ್ಯಕ್ತಿಯಂತೆ ಕಂಡರೂ ಆತನಿಂದ ಸುಲಭವಾಗಿ ವೈರಾಣು ಸೋಂಕು ಹರಡುವ ಎಲ್ಲಾ ಸಾಧ್ಯತೆ ಇರುತ್ತದೆ. ಈ ಸೋಂಕು ಹರಡುವ ಅವಧಿ’ ಯಾವ ವೈರಸ್ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಇದು ಐದು ದಿನಗಳಿಂದ ಐದು ವಾರಗಳವರೆಗೆ ಇರುತ್ತದೆ. ಈ ಸಮಯದಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಅತೀ ಅಗತ್ಯ.
ಆಂಟಿಬಯೋಟಿಕ್ ಮತ್ತು ವೈರಾಣು
ಸಾಮಾನ್ಯವಾಗಿ ಯಾವುದೇ ರೀತಿಯ ಸೋಂಕು ಬಂದಾಗ ಜನರು ವೈದ್ಯರ ಬಳಿ ಹೋದಾಗ ಆಂಟಿಬಯೋಟಿಕ್ ಔಷಧಿ ನೀಡುತ್ತಾರೆ. ಈ ಕಾರಣದಿಂದ ಹೆಚ್ಚಿನ ಜನರು ಆಂಟಿಬಯೋಟಿಕ್ ಔಷಧಿ ಬಳಸಿ ಎಲ್ಲಾ ಸೋಂಕುಗಳನ್ನು ಸಾಯಿಸಬಹುದು ಎಂದು ತಪ್ಪು ಕಲ್ಪನೆ ಹೊಂದಿದ್ದಾರೆ. ಆಂಟಿ ಬಯೋಟಿಕ್‌ಗಳನ್ನು ಬ್ಯಾಕ್ಟೀರಿಯಾ ಸೋಂಕು ಇದ್ದಾಗ ಮಾತ್ರ ಬಳಸಲಾಗುತ್ತದೆ. ಈ ಆಂಟಿಬಯೋಟಿಕ್ ವೈರಸ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವೈರಸ್‌ಗಳ ರಚನೆ ಮತ್ತು ಸಂತಾನೋತ್ಪತ್ತಿಯ ಕ್ರಮ ಬ್ಯಾಕ್ಟೀರಿಯಾಗಳಿಗಿಂತ ಭಿನ್ನವಾಗಿದೆ. ವೈರಸ್‌ಗಳಲ್ಲಿ ಕೇವಲ ವಂಶವಾಹಿ ವಸ್ತು, ಪ್ರೋಟೀನ್ ಕವಚ(ಕ್ಯಾಪ್ಸಿಡ್) ಮತ್ತು ಮೇದಸ್ಸಿನ (ಪಾಲಿಸಾಕರೈಡ್) ಹೊಂದಿಕೆ ಮಾತ್ರ ಇರುತ್ತದೆ. ಸೆಲ್‌ವಾಲ್ ಎಂಬ ರಕ್ಷಣಾ ಕವಚ ಇರುವುದಿಲ್ಲ. ಸೆಲ್‌ವಾಲ್ ಅಥವಾ ಜಿವಕೋಶದ ಗೂಡು ಎಲ್ಲಾ ಬ್ಯಾಕ್ಟೀರಿಯಾಗಳು ಹೊಂದಿರುತ್ತದೆ.
ಹೆಚ್ಚಿನ ಆಂಟಿಬಯೋಟಿಕ್‌ಗಳು ಸೆಲ್‌ವಾಲ್‌ಗಳ ಮೇಲೆ ದಾಳಿ ಮಾಡಿ ಬ್ಯಾಕ್ಟೀರಿಯಾಗಳನ್ನು ಸಾಯಿಸುತ್ತದೆ. ಬ್ಯಾಕ್ಟೀರಿಯಾಗಳು ಜೀವಕೋಶಗಳನ್ನು ಹೊರಗಿನಿಂದ ದಾಳಿ ಮಾಡುತ್ತದೆ. ಆದರೆ ವೈರಸ್ ಇದಕ್ಕೆ ಹೊರತಾಗಿದೆ. ವೈರಸ್‌ಗಳು ಜೀವಕೋಶದ ಒಳಗೆ ಸೇರಿ ಜೀವಕೋಶದೊಳಗಿನ ಡಿಎನ್‌ಎ ಅಥವಾ ಆರ್‌ಎನ್‌ಎ ಬಳಸಿಕೊಂಡು ತನ್ನ ಮರು ಸೃಷ್ಟಿ ಮಾಡುತ್ತದೆ ಮತ್ತು ಜೀವಕೋಶಗಳನ್ನು ಸಾಯಿಸಿಬಿಡುತ್ತವೆ. ಈ ಕಾರಣದಿಂದ ಆಂಟಿಬಯೋಟಿಕ್‌ಗಳು ವೈರಾಣುಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲು ಸಾಧ್ಯವಾಗದು. ಆದರೆ ಒಬ್ಬ ವ್ಯಕ್ತಿಗೆ ವೈರಾಣು ಸೋಂಕು ತಗುಲಿದಾಗ ವೈರಾಣುವಿನ ಸೋಂಕುವಿನ ಜೊತೆ ಜೊತೆಗೆ ಬ್ಯಾಕ್ಟೀರಿಯಾ ಸೋಂಕು ಕೂಡಾ ತಗಲುವ ಸಾದ್ಯತೆ ಇದೆ. ಉದಾಹರಣೆಗೆ ಕೋವಿಡ್-೧೯ ವೈರಾಣು ಸೋಂಕು ಶ್ವಾಸಕೋಶಕ್ಕೆ ತಗಲಿದಾಗ ಶ್ವಾಸಕೋಶಕ್ಕೆ ಬ್ಯಾಕ್ಟೀರಿಯಾ ಸೋಂಕು ಉಂಟಾಗಿ ನ್ಯೂಮೋನಿಯಾ ಕೂಡಾ ಬರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಬ್ಯಾಕ್ಟೀರಿಯಾ ಸೋಂಕು ನಿಯಂತ್ರ್ರಿಸಲು ಆಂಟಿಬಯೋಟಿಕ್ ಬಳಸಬಹುದಾಗಿದೆ.
ಜೀವ ಜಗತ್ತಿನ ಅತ್ಯಂತ ಅದ್ಬುತವಾದ ಸೃಷ್ಟಿ
ವೈರಸ್ ಎನ್ನುವುದು ಜೀವ ಜಗತ್ತಿನ ಅತ್ಯಂತ ಅದ್ಬುತವಾದ ಸೃಷ್ಟಿ ಎಂದರೂ ತಪ್ಪಲ್ಲ. ಈ ವೈರಸ್‌ಗಳಿಗೆ ಜೀವಕೋಶವಿಲ್ಲ. ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಶಕ್ತಿಯಿಲ್ಲ. ಯಾವುದಾದರೊಂದು ಜೀವಕೋಶಗಳ ಸಹಾಯವಿಲ್ಲದಿದ್ದರೆ ವಂಶಾಬಿವೃದ್ಧಿ ಮಾಡುವ ಸ್ವಂತ ಸಾಮರ್ಥ್ಯವೂ ವೈರಾಣುಗಳಿಗಿಲ್ಲ. ಜೀವಕೋಶಗಳು ಪ್ರವೇಶಿಸುವ ಮೊದಲು ವೈರಾಣುಗಳು ವಿರಿಯಾನ್ ಎಂಬ ರೂಪದಲ್ಲಿರುತ್ತದೆ. ವಂಶವಾಹಿನಿ ವಸ್ತುವಾದ ಡಿಎನ್‌ಎ ಅಥವಾ ಆರ್‌ಎನ್‌ಎ ಎಂಬ ವಸ್ತು, ಪ್ರೊಟೀನ್ ಕವಚವಾದ ಕ್ಯಾಪ್ಸಿಡ್ ಮತ್ತು ಮೇದಸ್ಸಿನ ಹೊದಿಕೆ ಮಾತ್ರ ವೈರಸ್‌ಗಳಲ್ಲಿರುತ್ತದೆ. ವೈರಸ್‌ಗಳಲಿ ರೈಬೋಸೋಮ್ ಇಲ್ಲದ ಕಾರಣದಿಂದ ಅವು ಸ್ವಂತವಾಗಿ ಪ್ರೊಟೀನ್ ಉತ್ಪಾದನೆ ಮಾಡಲು ಸಾಧವಿರುವುದಿಲ್ಲ. ಒಟ್ಟಿನಲ್ಲಿ ಸಂಪೂರ್ಣವಾಗಿ ಅತಿಥೇಯ ಜೀವಕೋಶಗಳ ಮೇಲೆ ಅವಲಂಬಿತವಾಗಿರುವ ವೈರಾಣುಗಳು ಪರಾವಲಂಬಿ ಜೀವಿಗಳೆಂದೇ ಹಣೆಪಟ್ಟಿ ಪಡೆದಿದೆ.
ಒಮ್ಮೆ ಜೀವಕೋಶಗಳೊಂದಿಗೆ ಸಂಪರ್ಕ ಸಾದಿಸಿದ ಬಳಿಕ ತನ್ನ ವಂಶವಾಹಿನಿ ವಸ್ತುವಾದ ಡಿಎನ್‌ಎ ಅಥವಾ ಆರ್‌ಎನ್‌ಎಯನ್ನು ಆ ಜೀವಕೋಶದ ಒಳಗೆ ಸೇರಿಸುತ್ತದೆ. ಮತ್ತು ಆ ಜೀವಕೋಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತದೆ. ಆ ಜೀವಕೋಶದೊಳಗೆ ಬಲವಂತವಾಗಿ ಹಿಡಿತ ಸಾಧಿಸಿ ಸಂತಾನೋತ್ಪತ್ತಿ ಮಾಡುತ್ತಲೇ ಅತಿಥೇಯ ಜೀವಕೋಶಗಳನ್ನು ಸಾಯಿಸಿ ಬಿಡುತ್ತದೆ. ಹೀಗೆ ಉಂಡ ಮನೆಗೆ ಕನ್ನ ಹಾಕುವ ದುರುಳ ಬುದ್ಧಿಯ ಮನೆಹಾಳ ವೈರಾಣು ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ನಿರಂತರವಾಗಿ ನೂರಾರು ವರ್ಷಗಳಿಂದ ಮಾಡುತ್ತಲೇ ಬಂದಿದೆ. ಒಟ್ಟಿನಲ್ಲಿ ಅತ್ತ ಜೀವವಿರುವ ಇತ್ತ ಜೀವ ಇಲ್ಲದ ಈ ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿ ವೈರಸ್ ಜೀವ ಜಗತ್ತಿನ ಅತ್ಯಂತ ವಿಕಸನಗೊಂಡ ಮಾನವನ ದೇಹದ ಜೀವಕೋಶಗಳೊಳಗೆ ಸೇರಿಕೊಂಡು ಮನುಕುಲವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವುದು ವಿಪರ್ಯಾಸದ ಪರಮಾವಧಿ ಎಂದರೂ ತಪ್ಪಲ್ಲ.
ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
Email: drmuraleemohan@gmail.com