Vydyaloka

ಮಾನಸಿಕ ಅಸಮತೋಲನ ಕಾರಣ ಹಾಗು ನಿವಾರಣೋಪಾಯಗಳು.

ಮಾನಸಿಕ ಅಸಮತೋಲನ ಏನೆಂದರೆ ನಮ್ಮ ಇಂದ್ರಿಯ ಹಾಗು ಮನಸ್ಸಿನ ಮೇಲಿರುವ ನಮ್ಮ ಹತೋಟಿಯನ್ನು ಕಳೆದುಕೊಳ್ಳುವುದು. ದೇಶದಲ್ಲಿ ಸುಮಾರು 94 ಮಿಲಿಯನ್ ಸಂಖ್ಯೆಯಷ್ಟು ಜನ ಮಾನಸಿಕ ಒತ್ತಡಗಳಾದ ಖಿನ್ನತೆ (Depression), ಉದ್ವೇಗಗಳಿಂದ (Anxiety) ಬಳಲುತ್ತಿದ್ದಾರೆ. ಈ ಮಾನಸಿಕ ಒತ್ತಡವೆಂದರೇನು?? ಇದರ ಲಕ್ಷಣ ಹಾಗು ನಿವಾರಣೋಪಾಯಗಳು ಹೇಗೆ?? 

ಓಡುತ್ತಿದ್ದ ಬದುಕಿನ ಚಕ್ರಕ್ಕೆ ಅಂಕುಶವನಿಟ್ಟು, ಆ ಚಕ್ರವ ಜಟಕಾ ಬಂಡಿ ಮಾಡಿದ್ದು ಕ್ರೂರಿ ಕೊರೋನ. ಈ ಕ್ರೂರಿಯ ದಾಳಿಗೆ ಬದಲಾದ ವಿಷಯಗಳೆಷ್ಟೋ ; ಆದರೆ ಅದರಲ್ಲಿ ಮುಂಚುಣಿಯಲ್ಲಿರುವುದು ಜನರ ಬದಲಾದ ಮನಸ್ಥಿತಿ ಹಾಗು ಖಿನ್ನತೆ, ಉದ್ವೇಗಗಳ ಮುಖವಾಡ ಹಾಕಿರುವ ಮಾನಸಿಕ ಒತ್ತಡ.

ಕೊರೋನ ಮುಂಚೇನು ಈ ಭೂತ ಯಾರನ್ನು ಕಾಡಿಲ್ಲ ಎಂದೇನಿಲ್ಲ; ಜನ ಅದರ ಬಗ್ಗೆ ಗಮನ ಹರಿಸಿದ್ದು ಕಮ್ಮಿ ಅಷ್ಟೇ. ದೇಶದಲ್ಲಿ ಸುಮಾರು 94 ಮಿಲಿಯನ್ ಸಂಖ್ಯೆಯಷ್ಟು ಜನ ಮಾನಸಿಕ ಒತ್ತಡಗಳಾದ ಖಿನ್ನತೆ (Depression), ಉದ್ವೇಗಗಳಿಂದ (Anxiety) ಬಳಲುತ್ತಿದ್ದಾರೆ ಎಂಬುದು ನೀವು ನಂಬಲೆ ಬೇಕಾದ ಸಂಗತಿ. ಈ ಮಾನಸಿಕ ಒತ್ತಡವೆಂದರೇನು?? ಈ ಒತ್ತಡ ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಮ್ಮಿ ಹಾಗೂ ಇನ್ನು ಕೆಲವರಲ್ಲಿ ಕಾಣಿಸುವುದೆ ಇಲ್ಲ ಈ ತರತಮ್ಯವೇಕೆ?? ಇದರ ಲಕ್ಷಣ ಹಾಗು ನಿವಾರಣೋಪಾಯಗಳು ಹೇಗೆ?? ಬನ್ನಿ ತಿಳಿದುಕೊಳ್ಳೋಣ.

ಮಾನಸಿಕ ಒತ್ತಡವೆಂದರೇನು?

ಯಾವ ವಿಷಯವು ಭಯವನ್ನುಂಟು ಮಾಡುತ್ತದೋ, ಯಾವುದು ಮನಸ್ಸಿನ, ದೇಹದ ಶಕ್ತಿಯನ್ನು ಕುಂದಿಸುತ್ತದೋ, ಯಾವುದು ನಮ್ಮ ಬುದ್ಧಿ ಶಕ್ತಿಗೆ ಮಂಕು ಕವಿಸುತ್ತವೆಯೋ; ಅವುಗಳನ್ನೆ ಮಾನಸಿಕ ಒತ್ತಡವೆಂದಾಗಿಯು ಪರಿಗಣಿಸಬಹುದಾಗಿದೆ. ಮಾನಸಿಕ ಅಸಮತೋಲನ ಎಂದ ತಕ್ಷಣ ಹುಚ್ಚರಂತೆ ವರ್ಥಿಸಬೇಕು ಅಥವ ಎಲ್ಲ ಭಾವನೆಗಳಿಗು ಸ್ಫಂದನೆ ಕಳೆದು ಕೊಂಡಂತಿರಬೇಕೆಂದೆನಿಲ್ಲ.

ಭಯದಿಂದ ಅಥವ ಆಟದಲ್ಲಿ ಮಗ್ನವಾದ ಮಗು ಮರೆಯಲ್ಲಿ ಬಚ್ಚಿಟ್ಟುಕೊಂಡಿರುವ ಹಾಗೆ ನಮ್ಮ ದಿನನಿತ್ಯದ ಬದುಕಿನಲಿ ಆಗಾಗ ಮರೆಸಿಕೊಂಡಂತ್ತಿದ್ದರು ಸಂಯಮದ ಗಡಿಮೀರಿದಾಗ ಈ ಅಸಮತೋಲನೆಗಳು ಅತಿಯಾದ ಕೋಪ, ಊದ್ವೇಗ, ಭಯ, ಖಿನ್ನತೆ ಹೀಗೆ ನಾನ ಮುಖವಾಡಗಳ ಧರೆಸಿ ಪ್ರತ್ಯಕ್ಷವಾಗುತ್ತವೆ. ಅದರ ಸಲುವಾಗಿಯೇ ನೆನ್ನೆ ಎಲ್ಲರೊಂದಿಗೆ ನಗು ನಗುತ್ತ ಇದ್ದ ವ್ಯಕ್ತಿ, ಮರುದಿನ ಆತ್ಮಹತ್ಯೆ ಎಂಬ ಹೀನ ಕಾರ್ಯಕ್ಕೆ ಶರಣಾದ ಕಹಿ ಘಟನೆಗಳನ್ನು ಕಾಣಬಹುದಾಗಿದೆ.

“ಇಷ್ಟಸ್ಯ ಅಲಾಭ ಲಾಭತ್ ಚ ಅನಿಷ್ಟಸ್ಯ” – ಅಂದರೇ ಇಷ್ಟಪಟ್ಟಿದ್ದು ದೊರಕದೆಯಿರುವುದು; ಯಾವುದನ್ನು ನೆನೆಸಿರಲಿಲ್ಲವೋ ಅದು ದೊರಕಿದಾಗ ಆಗುವ ಮನೋ ವೈಪರಿತ್ಯವೆ ಈ ಮಾನಸಿಕ ಖಾಯಿಲೆಗಳಿಗೆ ಮೂಲ ಕಾರಣ.

Also Read: ಖಿನ್ನತೆ -ಬೇಡ ಚಿಂತೆ

ವೈಪರಿತ್ಯ ಬುದ್ದಿಯೆ ಮಾನಸಿಕ ಅಸಮತೋಲನಕ್ಕೆ ಮೂಲ ಕಾರಣ

ಮನುಷ್ಯನು ಇಂದ್ರಿಯ ವಿಷಯಗಳನ್ನು ಕುರಿತು ಚಿಂತಿಸಿದಾಗ ಅದರಲ್ಲಿ ಆಸಕ್ತಿಯು ಬೆಳೆಯುತ್ತದೆ, ಆಸಕ್ತಿಯಿಂದ ಆಸೆಯು ವರ್ಧಿಸುತ್ತದೆ. ಆಸೆಯಿಂದ ಕೋಪವು ವ್ಯಕ್ತವಾಗುವುದು. ಕೋಪದಿಂದ ಭ್ರಮೆಯುಂಟಾಗಿ, ಭ್ರಮೆಯು ನೆನಪಿನ ಶಕ್ತಿಯ ಮೇಲೆ ತನ್ನ ಪ್ರಭಾವವಬೀರಿ ಮರೆವಿಗೆ ಕಾರಣವಾಗಿ ಬುದ್ಧಿಯ ವಿನಾಶಕ್ಕೆ ಕಾರಣವಾಗುತ್ತದೆ.ವೈಪರಿತ್ಯ ಬುದ್ದಿಯೆ ನಮ್ಮ ಮಾನಸಿಕ ಅಸಮತೋಲನಕ್ಕೆ ಮೂಲ ಕಾರಣವೆಂದು ಮಹಾಭಾರತದ ಸೂತ್ರಕರ್ತ, ನಾಯಕನಾದ ಶ್ರೀ ಕೃಷ್ಣನ ಮಾತುಗಳು.

ಆಯುರ್ವೇದದ ಪ್ರಕಾರ ಈ ಮಾನಸಿಕ ಅಸಮತೋಲನಕ್ಕೆ ಕಾರಣ ಅಸುಚಿಯಾದ (unclean) ಹಾಗು ಅಹಿತವಾದ (incompatible) ಆಹಾರ (food) ಹಾಗು ಜೀವನ ಶೈಲಿ (life style), ಅತಿಯಾದ ದುಃಖ, ಭಯ ಅಥವ ಹೆದರಿಕೆಯು ಮತ್ತು ಹೀನ (under)-ಮಿಥ್ಯ (wrong) ಅಥವ ಅತಿಯಾಗಿ (over) ಚಿಂತೆ (Thinking), ತರ್ಕ (Analysis), ಕಲ್ಪನೆ (Speculations/ Imagination) ಹಾಗು ಮಹತ್ವಾಕಾಂಕ್ಷೆ (Highly ambitious) ಮಾನಸಿಕ ಅಸಮತೋಲನಕ್ಕೆ ಕಾರಣವಾಗಬಹುದು.

ಮಾನಸಿಕ ಒತ್ತಡದ  ಲಕ್ಷಣಗಳು:

ಇದರ ಲಕ್ಷಣಗಳು ಏನೆಂದರೆ ನಮ್ಮ ಇಂದ್ರಿಯ ಹಾಗು ಮನಸ್ಸಿನ ಮೇಲಿರುವ ನಮ್ಮ ಹತೋಟಿಯನ್ನು ಕಳೆದುಕೊಳ್ಳುವುದು. ಈ ಅಸಮತೋಲನೆಗಳು ಬುದ್ದಿ (Ability to take decision), ಸ್ಮೃತಿ(Ability to recall), ಒಬ್ಬ ವ್ಯಕ್ತಿಯ ದೃಷ್ಟಿಕೋಣ (Orientation to time, place and person), ಅಭ್ಯಾಸ (Habits), ಚಟುವಟಿಕೆ (Activities), ನಡವಳಿಕೆ (Behaviour), ಇಛ್ಚೆ (Desire) ಹಾಗು ಮನಸ್ಸಿನಲ್ಲಿ (Mind) ಆಗುವ ಬದಲಾವಣೆಗಳ ರೂಪದಲ್ಲಿ ತಿಳಿಯಬಹುದಾಗಿದೆ. ಈ ಬದಲಾವಣೆ ಅಲ್ಪವಾಗಿದಲ್ಲಿ ಒಬ್ಬ ವ್ಯಕ್ತಿಯು ಸಾಮಾನ್ಯನಂತೆ ಕಂಡು ಬರುವನು, ಹೆಚ್ಚಾದಲ್ಲಿ ಮಾನಸಿಕ ರೋಗಿಯಾಗಿ ಗುರುತಿಸಲ್ಪಡುವನು. ಈ ಅಸಮತೋಲನ ಕೆಲವರಲ್ಲಿ ಹೆಚ್ಚು ಇನ್ನು ಕೆಲವರಲ್ಲಿ ಕಮ್ಮಿ. ಇದಕ್ಕೆ ಕಾರಣ ನಮ್ಮ ಸತ್ವ (ಮನಸ್ಸು) ಹಾಗು ಸತ್ವವನ್ನು ನಿಗ್ರಹಿಸುವ ಸಾತ್ವಿಕ, ರಾಜಸಿಕ ಹಾಗು ತಾಮಸಿಕ ಗುಣಗಳು.

ಸಾತ್ವಿಕ, ರಾಜಸಿಕ ಹಾಗು ತಾಮಸಿಕ ಗುಣಗಳು:

ಏನೀ ಸತ್ವ-ರಜ ಹಾಗು ತಮ?? ಮಾನಸಿಕ ಆರೋಗ್ಯ ಕಾಪಾಡುವುದರಲ್ಲಿ ಇವುಗಳ ಮಹತ್ವವೇನು ಬನ್ನಿ ತಿಳಿಯೋಣ…..
ನಮ್ಮ ಪ್ರಕೃತಿಯು ನಮ್ಮ ಜಮ್ಮದ ಸಮಯದಲ್ಲಿ ಹಾಗು ಬೆಳೆಯುವ ವಾತವರಣದಲ್ಲಿ ವಿಕಾಸಗೊಳ್ಳುತ್ತದೆ, ಹೀಗಿರುವ ಮನೋ ಪ್ರಕೃತಿಯನ್ನು ಸಾತ್ವಿಕ, ರಾಜಸಿಕ, ತಾಮಸಿಕ ಪ್ರಕೃತಿಯಾಗಿ ವಿಂಗಡಿಸಬಹುದಾಗಿದೆ. ಈ ಮನ ಸ್ಥಿತಿಗಳು ಪರಿಸ್ಥಿತಿಗೆ ಅಣುಗುಣವಾಗಿ ಕೊಂಚ ಮಟ್ಟಿನ ಏರಿಳಿತ ಸಾಮಾನ್ಯವಾದರು, ಒಬ್ಬ ವ್ಯಕ್ತಿಯ ನೈಜ ಮಾನಸಿಕ ಪ್ರಕೃತಿಯ ಮೇಲೆ ಈ ಮಾನಸಿಕ ಅಸಮತೋಲನ ಅಥವ ಮನೋ ಕಾಯಿಲೆಗಳ ತೀವ್ರತೆ ನಿಗದಿಯಾಗುತ್ತದೆ. ಅದರಲ್ಲು ರಾಜಸಿಕ ಹಾಗು ತಾಮಾಸಿಕ ಮನೋ ಪ್ರಕೃತಿಯವರು ಅತಿ ಬೇಗ ಉದ್ವೇಗ, ಖಿನ್ನತೆಗಳಿಗೆ ಒಳಗಾಗುತ್ತಾರೆ, ಅದರಿಂದ ರಜ ಹಾಗು ತಮವನ್ನು ಮನೋ ದೋಷವಾಗಿಯು ಸತ್ವವನ್ನು ಮನೋ ಗುಣವಾಗಿಯು ಗುರುತಿಸುತ್ತಾರೆ.

ಸಾತ್ವಿಕ ಮನೋಭಾವವನ್ನು ಪ್ರಧಾನವಾಗಿ ಹೊಂದಿದವರು ಸತ್ಯವನ್ನು ನುಡಿಯುವವರಾಗಿದು, ಒಳ್ಳೆ ಕರ್ಮ ಮಾಡುವುದರಲ್ಲಿ ನಂಬಿಕೆಯುಳ್ಳವಾರಾಗಿರುತ್ತರೆ, ಙಾನಿಗಳು, ಬುದ್ದಿವಂತರು, ಕರುಣಾ ಗುಣವುಳ್ಳವರಾಗಿರುತ್ತರೆ. ರಾಜಸಿಕ ಮನೋಭಾವವನ್ನು ಪ್ರಧಾನವಾಗಿ ಹೊಂದಿದವರು ಯಾವಾಗಲು ದುಃಖ ಪಡುವ, ಹೆಚ್ಚಗಿ ಸುಳ್ಳು ಹೇಳುವ, ಅಹಂಕಾರವುಳ್ಳ, ಹೆಚ್ಚು ಕೋಪಮಾಡಿಕೊಳ್ಳುವ, ಹೆಚ್ಚು ಮಾತಾಡುವ, ಕರುಣೆಗೆ ದೂರಾದ ಮನೋಭಾವವನ್ನು ಹೊಂದಿರುತ್ತಾರೆ. ತಾಮಸಿಕ ಮನೋಭಾವವನ್ನು ಪ್ರಧನವಾಗಿ ಹೊಂದಿದವರು ದೇವರಲ್ಲಿ ಅಪನಂಬಿಕೆ, ಸೋಮಾರಿತನ, ಧರ್ಮ ಕಾರ್ಯಗಳಿಂದ ದೂರವುಳಿಯುವ, ಮಂದ ಬುದ್ದಿವುಳ್ಳ, ಖಿನ್ನಮನೋಭಾವವುಳ್ಳ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿಯೇ ರಾಜಸಿಕ ಹಾಗು ತಾಮಸಿಕ ಪ್ರಧಾನ ವ್ಯಕ್ತಿಗಳಲ್ಲಿ ಮಾನಸಿಕ ಅಸಮತೋಲನ ಹೆಚ್ಚಗಿ ಕಂಡುಬರುತ್ತದೆ.

ಮಾನಸಿಕ ಒತ್ತಡ ನಿವಾರಣೋಪಾಯಗಳು:

ಸರಿ ಹಾಗಿದ್ದ ಮೇಲೆ ಇದರ ನಿವಾರಣೋಪಾಯಗಳು ಹೇಗೆ?? ಬನ್ನಿ ತಿಳಿಯೋಣ..

1.  ಅವಶ್ಯವಿದ್ದಲ್ಲಿ ಇರಿಸು-ಮುರಿಸು ಮಾಡದೆ ತಙ್ಞರ ಭೇಟಿ ಮಾಡಿ.

2. ನಿಮ್ಮಲ್ಲಿ ಅಗುತ್ತಿರುವ ಬದಲಾವಣೆಯ ಙ್ಞನ ನಿಮಗಿರಲಿ.

3. ತಪ್ಪು-ಸರಿಗಳ ಬಗ್ಗೆ ಅರಿವಿಗಾಗಿ ಹಾಗು ಗೊಂದಲಗಳ ನಿವಾರಣೆಗಾಗಿ ಹಿರಿಯರ ಜೊತೆ ಸಮಾಲೋಚಿಸುವುದು.

4. ಒತ್ತಡ ನಿವಾರಣೆಗೆ ಹಾಗು ಹೊಸ ಆಲೋಚನೆಗೆ ಮಕ್ಕಳ ಜೊತೆ ಕೊಂಚ ಆಟ-ಪಾಠ.

5. ನಿಮ್ಮನ್ನು ನೀವು ಪ್ರೀತಿಸಲು ಒಂದಿಷ್ಟು ಸತ್ಕಾರ್ಯಗಳನ್ನು ಮಾಡಿ (ಉooಜ ಆeeಜs).

6. ಪೌಷ್ಟಿಕವಾದ ಹಾಗು ಮನಸ್ಸಿಗೆ ಹಿತವಾದ ಆಹಾರ ಕ್ರಮದ ಅನುಕರಣೆ ಮಾಡುವುದು.

7. ಒಂದಿಷ್ಟು ವಾಕಿಂಗ್ (Walking) ಅಥವ ದೇಹದ ಕಸರತ್ತು (Exercise/Yogasanas).

8. ಪ್ರಾ ಣಾಯಾಮ ಅಥವ ದೈವ ಧ್ಯಾನಗಳ ಮುಲಕ ಹೆಚ್ಚು ಭಯ-ಕೋಪತಪಗಳ ನಿಯಂತ್ರಣ.

9. ತಪ್ಪು ಕೆಲಸ ಮಾಡಿದ್ದಲ್ಲಿ ಒಂದಿಷ್ಟು ಪಶ್ಚಾತಾಪ ಹಾಗು ಆ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳುವದರಿಂದ ಮಾನಸಿಕ ಅಸಮತೋಲನಕ್ಕೆ ಕಡಿವಾಣವ ಹಾಕಬಹುದಾಗಿದೆ.

ಆತ್ಮವನ್ನು ಒಂದು ರಥದ ಮಾಲೀಕನಾಗಿಯು, ಶರೀರವನ್ನು ರಥವಾಗಿಯು, ಬುದ್ದಿಯನ್ನು ಸಾರಥಿಯಾಗಿಯು, ಪಂಚ ಇಂದ್ರಿಯವನ್ನು ಕುದುರೆಯಾಗಿಯು, ಮನಸ್ಸನ್ನು ಕುದುರೆಗಳ ನಿಯಂತ್ರಿಸುವ ಕಡಿವಾಣವಾಗಿಯು ತಿಳಿದರೆ, ಕುದುರೆಗಳ (ಪಂಚ ಇಂದ್ರಿಯ) ಸರಿಯಾದ ನಡವಳಿಕೆ ಹಾಗು ಸರಿಯಾದ ದಾರಿಯಲ್ಲಿ ಸಾಗುವುದು ಮನಸ್ಸಿನ ನಿಯಂತ್ರ ಣದಲ್ಲಿಡುವ ಬುದ್ಧಿಯ ಕೈಯಲ್ಲಿದೆ. ಶರೀರವು ನಾವು (ಆತ್ಮ) ತಲುಪಬೇಕಾದ ನಿರ್ದಿಷ್ಟ ಸ್ಥಳಕ್ಕೆ ತಲುಪಿಸುವ ಸಾದನಮಾತ್ರ – ಕಟೋಪನಿಷತ್.

ಡಾ || ಅಶ್ವಿನಿ ಎನ್
ಸಾಹಾಯಕ ಪ್ರಾಧ್ಯಪಕಿ ಹಾಗು ತಜ್ಞ ವೈದ್ಯೆ
ಆದಿಚುಂಚನಗಿರಿ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗು ರಿಸರ್ಚ್ ಸೆಂಟರ್,
ನಗರೂರು, ಬೆಂಗಳೂರು.

ಮೊ.ಸಂ – 7026362663
ಇಮೇಲ್ – nashwini97@gmail.com

Share this: