Vydyaloka

ಮಕ್ಕಳು ಸೂಕ್ಷ್ಮಾಣುಗಳು ಮತ್ತು ಆಂಟಿಬಯೋಟಿಕ್ ದುಷ್ಪರಿಣಾಮಗಳು – ಭಾಗ-1.

ಮಕ್ಕಳು, ಸೂಕ್ಷ್ಮಾಣುಗಳು ಮತ್ತು ಆಂಟಿಬಯೋಟಿಕ್ ದುಷ್ಪರಿಣಾಮಗಳ ಕುರಿತಾದ ಅಧ್ಯಯನದ ಅವಶ್ಯಕತೆಯಿದೆ. ಸೂಕ್ಷ್ಮಾಣು ನಾಶಕ ಎಂಬ ಶಬ್ದವು ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಉತ್ಪನ್ನಗಳ ಪ್ರಮುಖ ಆಕರ್ಷಣೆ! ಆದರೆ ಸೂಕ್ಷ್ಮಾಣು ರಹಿತವಾದ ಬದುಕನ್ನು ಸೃಷ್ಟಿಸುವುದು ಸಾಧ್ಯವಿಲ್ಲ.

” ನಮ್ಮ ಮಕ್ಕಳಿಗೆ ಯಾವುದು ಒಳ್ಳೆಯದು” ಎಂಬುದು ನಮ್ಮೆಲ್ಲರ ಯೋಚನೆಯಾಗಿದೆ, ಅಲ್ಲವೇ ಬಂಧುಗಳೇ?ಸಮಸ್ಯೆ ಏನೆಂದರೆ ಈ ಕುರಿತಾದ ಪರಿಪೂರ್ಣವಾದ ಕೈಪಿಡಿ ಎಂಬುದು ಇಲ್ಲ. ಇಂದು ರೋಗಾಣುಗಳ ಕುರಿತಾದ ಅಧ್ಯಯನ ಮತ್ತು ಜ್ಞಾನ ಅಗಾಧವಾಗಿ ಬೆಳೆದದ್ದರಿಂದ ಅತೀವವಾದ ರೋಗಾಣುಗಳ ಕುರಿತಾದ ಭಯವೂ ಕೂಡ ಅಗಾಧವಾಗಿದೆ. ಹೀಗಿದ್ದರೂ ನಮ್ಮೊಳಗೆ ಮತ್ತು ಹೊರಗೆ ಸೂಕ್ಷ್ಮಾಣು ಜಗತ್ತಿನ ಕೋಟೆಯೊಳಗೆ ನಾವು ಬಂಧಿತರಾಗಿ ಇದ್ದೇವೆ.

ಇತಿಹಾಸದಲ್ಲಿ ಕಂಡು ಕೇಳರಿಯದ ಶುಚಿತ್ವದ ಅತಿ ಪ್ರಜ್ಞೆಯ ಆಧುನಿಕ ಜೀವನ ವಿಧಾನದಲ್ಲಿ, ಶುಚಿತ್ವ ಎಂದರೆ ಸೂಕ್ಷ್ಮಾಣುಗಳನ್ನು ನಾಶಗೊಳಿಸುವುದು ಎಂದು ಸಮೀಕರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಕಾರಣಕ್ಕೆ ಈ ಕೆಳಗಿನ ಪ್ರಶ್ನೆಗಳು ಎಲ್ಲರ ಮುಂದೆ ಬರುತ್ತವೆ.

1. ಮಕ್ಕಳಿಗೆ ಹಾಲು ಕುಡಿಸುವ ಬಾಟಲ್ ಗಳನ್ನು ಸೂಕ್ಷ್ಮಾಣು ರಹಿತ ಮಾಡಬೇಕೇ?
2. ಯಾವ ತರದ ಸಾಬೂನು ಬಳಸಬೇಕು?

ಸೂಕ್ಷ್ಮಾಣು ರಹಿತವಾದ ಬದುಕನ್ನು ಸೃಷ್ಟಿಸುವುದು ಸಾಧ್ಯವಿಲ್ಲ:

ಅಚ್ಚರಿಯ ಸಂಗತಿಯೆಂದರೆ ಜಗತ್ತಿನಲ್ಲಿ ನಕ್ಷತ್ರಗಳ ಸಂಖ್ಯೆಗಿಂತ ಸೂಕ್ಷ್ಮಾಣುಗಳ ಸಂಖ್ಯೆಯು ಎಷ್ಟೋ ಪಟ್ಟು ಹೆಚ್ಚಾಗಿದೆ. ಒಂದು ಅಂಕೆ ಬರೆದು ಅದರ ಮುಂದೆ 30 ಸೊನ್ನೆಗಳನ್ನು ಬರೆದರೆ ಆಗುವಷ್ಟು ಬ್ಯಾಕ್ಟೀರಿಯಾಗಳು ಇವೆ.! ಆದರೆ ನಕ್ಷತ್ರಗಳ ಸಂಖ್ಯೆ ಒಂದು ಅಂಕೆ ಬರೆದು ಅದರ ಮುಂದೆ 21 ಸೊನ್ನೆಗಳನ್ನು ಬರೆದಷ್ಟು.!

ಈ ಸೂಕ್ಷ್ಮಾಣುಗಳು ಕಠಿಣ ಹಾಗೂ ಅಸಾಧ್ಯ ಪರಿಸ್ಥಿತಿಗಳಲ್ಲಿ ಬದುಕುವ ಸಾಮರ್ಥ್ಯವನ್ನು ಹೊಂದಿವೆ. ಒಟ್ಟಿನಲ್ಲಿ ಸೂಕ್ಷ್ಮಾಣು ಗಳಿಂದ ಪಲಾಯನ ಮಾಡಲು ಅಸಾಧ್ಯವಾದ ಜಗತ್ತಿನಲ್ಲಿ ನಾವಿದ್ದೇವೆ. ಅಂದರೆ ಅವು ನಮ್ಮೊಳಗೆ ಇದೆಯೇ? ಅಥವಾ ನಾವು ಅವುಗಳ ಒಳಗೆ ಇದ್ದೇವೆಯೇ? ಎಂಬ ಪ್ರಶ್ನೆ ಬಿಡಿಸಲಾಗದ ಕಗ್ಗಂಟು.” we can create a sterile area, but difficult to live a sterile life ” ! ಸೂಕ್ಷ್ಮಾಣು ರಹಿತವಾದ ಜಾಗವನ್ನು ಸೃಷ್ಟಿಸಬಹುದು. ಆದರೆ ಸೂಕ್ಷ್ಮಾಣು ರಹಿತವಾದ ಬದುಕನ್ನು ಸೃಷ್ಟಿಸುವುದು ಸಾಧ್ಯವಿಲ್ಲ.

ತಾಯಿಯ ಗರ್ಭದಿಂದ ಹೊರಗೆ ಬರುವಾಗ ತಾಯಿಯಿಂದ ಸಿಗುವ ಮೊದಲ ಹುಟ್ಟುಹಬ್ಬದ ಕೊಡುಗೆಯೆಂದರೆ ಅದು ಸೂಕ್ಷ್ಮಾಣುಗಳು.... ಮಗು ಜನಿಸಿದ ಕೆಲವೇ ಸೆಕೆಂಡುಗಳಲ್ಲಿ ಸೂಕ್ಷ್ಮಾಣುಗಳಿಂದ ಆವರಿಸಲ್ಪಡುತ್ತದೆ., ಅದು ಸ್ಪರ್ಶಿಸಿದ ಜಾಗದಿಂದ ತೊಡಗಿ. ಸಹಜ ಹೆರಿಗೆಯಲ್ಲಿ ಯೋನಿ ಹಾಗೂ ಗುದ ಭಾಗದ ಪ್ರದೇಶದಲ್ಲಿನ ಸೂಕ್ಷ್ಮಾಣುಗಳು ಹಾಗೂ ಸಿಸೇರಿಯನ್ ಹೆರಿಗೆಯಲ್ಲಿ ತಾಯಿಯ ಚರ್ಮದಿಂದ ಸಂಪರ್ಕಕ್ಕೆ ಬರುವ ಸೂಕ್ಷ್ಮಾಣುಗಳು ಶಿಶುವನ್ನು ಸುತ್ತುವರಿಯುತ್ತದೆ.

ಸೂಕ್ಷ್ಮಾಣು ರಹಿತ ಸುರಕ್ಷಿತ ಜಗತ್ತಿನ ಭ್ರಾಮಕ ಪರಿಕಲ್ಪನೆಯಲ್ಲಿ, ಮಕ್ಕಳ ಸುತ್ತ ಸೂಕ್ಷ್ಮಾಣುಗಳು ಇರುವುದು ಅಪಾಯವೆಂಬ ಭಾವನೆಯಿಂದ, ಸೂಕ್ಷ್ಮಾಣುಗಳನ್ನು ಮಕ್ಕಳಿಂದ ದೂರ ಸರಿಸುವ ಪ್ರಯತ್ನ ನಡೆಯುತ್ತಲೇ ಇದೆ. ಕಳೆದ ಶತಮಾನದಲ್ಲಿ ವೈದ್ಯಕೀಯ ಕ್ರಾಂತಿಯ ಅನುಕೂಲಗಳಿಂದಾಗಿ ರೋಗಕಾರಕ ಸೂಕ್ಷ್ಮಾಣುಗಳಿಂದ ಬರುವ ಕಾಯಿಲೆಗಳ ಪ್ರಮಾಣ ಹಾಗೂ ತೀವ್ರತೆ ಕಡಿಮೆಯಾಗಿದೆ. ನಿಜ. ಇದರಲ್ಲಿ ಆಂಟಿಬಯೋಟಿಕ್ ಗಳು, ಆಂಟಿ ವೈರಲ್ ಗಳು, ಲಸಿಕೆಗಳು, ಕ್ಲೋರಿನೇಟಡ್ ವಾಟರ್, ಪ್ಯಾಶ್ಚರೈಸೇಷನ್, ಸ್ಟೆರಿಲೈಸೇಷನ್, ರೋಗಾಣು ರಹಿತ ಆಹಾರ, ಕೈ ತೊಳೆಯುವುದು ಮುಂತಾದವುಗಳ ಪಾತ್ರ ಬದುಕಿನುದ್ದಕ್ಕೂ ಇದೆ.

ಸತ್ತ ಸೂಕ್ಷ್ಮಾಣು ಮಾತ್ರ ಒಳ್ಳೆಯ ಸೂಕ್ಷ್ಮಾಣು ಎಂಬ ನಂಬಿಕೆ ಬಂದುಬಿಟ್ಟಿದೆ. ಬೆಳೆಯುತ್ತಿರುವ ದೇಶಗಳಲ್ಲಿ ಸೂಕ್ಷ್ಮಾಣು ಸೋಂಕಿನಿಂದ ಆಗುವ ಸಾವು ತುಂಬಾ ಕಡಿಮೆ. ನೂರು ವರ್ಷದ ಹಿಂದೆ 75 ಮಿಲಿಯ ಜನ ಸೂಕ್ಷ್ಮಾಣು ಸೋಂಕಿನಿಂದ ಸತ್ತರು, ಕೇವಲ ಎರಡು ವರ್ಷದ ಅವಧಿಯಲ್ಲಿ ಹೆಚ್1 ಎನ್1 ಇನ್ಫ್ಲುಯೆನ್ಜಾ ರೋಗದಿಂದಾಗಿ….

ಸೂಕ್ಷ್ಮಾಣು ನಾಶಕ ಎಂಬ ಶಬ್ದವು  ಬಹುತೇಕ ಉತ್ಪನ್ನಗಳ ಪ್ರಮುಖ ಆಕರ್ಷಣೆ!

ಸೂಕ್ಷ್ಮಾಣು ನಾಶಕ ಎಂಬ ಶಬ್ದವು ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಉತ್ಪನ್ನಗಳ ಪ್ರಮುಖ ಆಕರ್ಷಣೆ! ಸಾಬೂನು, ಚರ್ಮದ ಲೋಷನ್ ಗಳು, ಶುಚಿಗೊಳಿಸುವ ಉತ್ಪನ್ನಗಳು, ಆಹಾರವನ್ನು ಕೆಡದಂತೆ ಇಡುವ ಸಂರಕ್ಷಕಗಳು, ಪ್ಲಾಸ್ಟಿಕ್, ಫ್ಯಾಬ್ರಿಕ್ಸ್- ಎಲ್ಲದರಲ್ಲೂ ಇದರದ್ದೇ ಹವಾ.. ಆದರೆ ಕುತೂಹಲದ ಸಂಗತಿಯೆಂದರೆ ಅಸಂಖ್ಯಾತ ಸೂಕ್ಷ್ಮಾಣು ಜಾತಿಗಳ ನಡುವೆ ಕೇವಲ 100 ಜಾತಿಯ ಸೂಕ್ಷ್ಮಾಣುಗಳು ಮಾತ್ರ ರೋಗಕಾರಕ ಆಗಿವೆ.!

ಬಹುತೇಕ ಸೂಕ್ಷ್ಮಾಣುಗಳು ನಮ್ಮ ಸಂಪರ್ಕಕ್ಕೆ ಬಂದು ಸಮಸ್ಯೆಯನ್ನು ಉಂಟು ಮಾಡದೆ, ಉಪಕಾರಿಯಾಗಿ ಕೂಡ ಪರಿಣಮಿಸುತ್ತವೆ. 1915 ರಲ್ಲಿ ಯು.ಎಸ್. ನಲ್ಲಿ ಸರಾಸರಿ ಆಯುಷ್ಯ 52 ವರ್ಷಗಳು ಆಗಿತ್ತು. ಅಂದರೆ ಇಂದಿಗಿಂತ 30 ವರ್ಷ ಕಡಿಮೆ! ಆದರೆ ಈಗ ನೂರು ವರ್ಷ ಹಿಂದಿಗಿಂತ ನಾಲ್ಕು ಪಟ್ಟು ಹೆಚ್ಚು ಮಾನವರು ಇದ್ದಾರೆ. ಲಾಟರಿ ಒಲಿದಿದೆ! ಈಗ ಇನ್ನೊಂದು ಮುಖವನ್ನು ಗಮನಿಸೋಣ.

ಸೂಕ್ಷ್ಮಾಣು ಜನ್ಯ ರೋಗಗಳ ಸಂಖ್ಯೆ ಕಡಿಮೆ ಆಗಿದೆ ಎಂಬುದು ನಿಜ. ಆದರೆ ಸಾಂಕ್ರಾಮಿಕವಲ್ಲದ ದೀರ್ಘಕಾಲೀನ ರೋಗಗಳು ಸ್ಪೋಟಗೊಂಡಿವೆ ಎಂಬುದು ನಾವು ಜಾಗೃತರಾಗಬೇಕಾದ ಅಂಶ. ಇಂತಹ ರೋಗಗಳನ್ನು ತರುವಲ್ಲಿ ನಮ್ಮ ರೋಗನಿರೋಧಕ ವ್ಯವಸ್ಥೆಯಲ್ಲಿ ಆಗುವ ಬದಲಾವಣೆ ಗಳು ಪ್ರಮುಖ ಪಾತ್ರವಹಿಸುತ್ತವೆ. ಡಯಾಬಿಟಿಸ್, ಅಲರ್ಜಿ, ಅಸ್ತಮಾ, ಇರಿಟೇಬಲ್ ಬೋವೆಲ್ ಸಿಂಡ್ರೋಮ್, ಆಟೋ ಇಮ್ಯೂನ್ ಕಾಯಿಲೆಗಳು, ಕ್ಯಾನ್ಸರ್, ಬೊಜ್ಜು- ಇವೇ ಮೊದಲಾದವು.

1. ಇಂತಹ ಕಾಯಿಲೆಗಳ ಪ್ರಮಾಣ ಪ್ರತಿ ಹತ್ತು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗುತ್ತಾ ಇದೆ.

2. ಅವುಗಳು ಬಹುಬೇಗನೆ ಬಾಲ್ಯದಲ್ಲಿ ಕಾಣಿಸಿಕೊಳ್ಳುವುದಕ್ಕೆ ಆರಂಭಿಸಿವೆ.

ಅಂದರೆ ಅವುಗಳನ್ನು ಹೊಸ ಎಪಿಡಿಮಿಕ್ ಅಥವಾ ಆಧುನಿಕ ಯುಗದ ಪ್ಲೇಗ್ ಎಂದು ಕರೆದರೂ ತಪ್ಪಿಲ್ಲ. ಇದೆಲ್ಲದಕ್ಕೂ ಅನುವಂಶೀಯ ವಾದ ಸಂಬಂಧಗಳು ತಳುಕು ಹಾಕಿಕೊಂಡಿದ್ದರೂ, ಕೇವಲ ಅನುವಂಶೀಯತೆ ಒಂದರಿಂದಲೇ ಅದನ್ನು ವಿವರಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ವಂಶವಾಹಿಗಳು ಕೇವಲ ಎರಡು ತಲೆಮಾರುಗಳಲ್ಲಿ ಅಷ್ಟೊಂದು ಬದಲಾವಣೆಗೊಂಡಿರುವುದಿಲ್ಲ. ಆದರೆ ಪರಿಸರ ಮಾತ್ರ ಅತಿವೇಗದಲ್ಲಿ ಬದಲಾವಣೆ ಹೊಂದಿದೆ.

ಬಾಲ್ಯದಲ್ಲಿ ಮಕ್ಕಳಿಗೆ ಸೂಕ್ಷ್ಮಾಣುಗಳ ಸಂಪರ್ಕವು ದೂರವಾಗುತ್ತಿದೆ:

25 ವರ್ಷಗಳ ಹಿಂದೆ ಲಂಡನ್ನಿನ ಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞನೊಬ್ಬ ಒಂದು ವೈಜ್ಞಾನಿಕ ಲೇಖನವನ್ನು ಬರೆದಿದ್ದ. ಆತನ ಹೆಸರು ಡಾ.ಡೇವಿಡ್ ಸ್ಟ್ರಾಚನ್. ಆ ಲೇಖನದಲ್ಲಿ ಆತ ಬರೆದಿದ್ದ- ” ಬಾಲ್ಯದಲ್ಲಿ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಾಣು ಗಳಿಗೆ ಸಂಪರ್ಕಕ್ಕೆ ಬಾರದೆ ಇರುವುದರಿಂದ, ಆ ಮಕ್ಕಳು ಮುಂದಿನ ದಿನಗಳಲ್ಲಿ ಅಲರ್ಜಿ ಸಮಸ್ಯೆಗೆ ಒಳಗಾಗಬಹುದಾದ ಸಂದರ್ಭಗಳು ಹೆಚ್ಚುತ್ತವೆ. ಏಕೆಂದರೆ ಆ ರೀತಿ ಮಾಡುವುದರಿಂದ ಮಕ್ಕಳ ರೋಗನಿರೋಧಕ ವ್ಯವಸ್ಥೆ ಸಶಕ್ತವಾಗಿ ಬೆಳೆಯುವುದು ಸಾಧ್ಯವಿಲ್ಲ”. ಇಂದು ಅತಿ ಶುಚಿತ್ವದ ವ್ಯಸನದಿಂದಾಗಿ ಬಾಲ್ಯದಲ್ಲಿ ಮಕ್ಕಳಿಗೆ ಸೂಕ್ಷ್ಮಾಣುಗಳ ಸಂಪರ್ಕವು ದೂರವಾಗುತ್ತಿದೆ.

ಆಂಟಿಬಯೋಟಿಕ್ ಗಳು ವೈದ್ಯಕೀಯ ಜಗತ್ತಿನಲ್ಲಿ ರೋಗಾಣುಗಳನ್ನು ನಾಶ ಪಡಿಸಲು ಅದ್ಭುತ ಸಾಮರ್ಥ್ಯ ಹೊಂದಿವೆ. ಇದನ್ನು ವೈದ್ಯಕೀಯ ಜಗತ್ತಿನ ಕ್ರಾಂತಿಯೆಂದು ನಾವು ಒಪ್ಪಿಕೊಳ್ಳಲೇಬೇಕು. ಏಕೆಂದರೆ ಆಂಟಿಬಯೋಟಿಕ್ ಗಳು ಬರುವುದಕ್ಕೆ ಮುಂಚೆ 90 ಶೇಕಡಾ ಮಕ್ಕಳು ಬ್ಯಾಕ್ಟೀರಿಯಾದಿಂದ ಉಂಟಾಗುವ ಮೆನಿಂಜೈಟಿಸ್ ಕಾಯಿಲೆಯಿಂದ ಸಾಯುತ್ತಿದ್ದರು. ಕಿವಿಯ ಸೋಂಕು ಮಿದುಳಿಗೆ ಹರಡುತ್ತಿತ್ತು. ಆಧುನಿಕವಾದ ಶಸ್ತ್ರಚಿಕಿತ್ಸೆಗಳು ಅಸಾಧ್ಯ ಆಗಿತ್ತು.

ಜಗತ್ತಿನಾದ್ಯಂತ ಆಂಟಿಬಯೋಟಿಕ್ ಗಳ ಅತಿ ಬಳಕೆ :

2000 ದಿಂದ 2010ರ ಅವಧಿಯಲ್ಲಿ , ಜಗತ್ತಿನಾದ್ಯಂತ ಆಂಟಿಬಯೋಟಿಕ್ ಗಳು 36 ಶೇಕಡಾ ದಷ್ಟು ಹೆಚ್ಚು ಬಳಕೆಯಾದದ್ದು ಕಂಡುಬಂದಿದೆ. ರಷ್ಯಾ, ಬ್ರೆಜಿಲ್ ಭಾರತ, ಚೈನಾ ರಾಷ್ಟ್ರಗಳಲ್ಲಿ ಇದು ಆರ್ಥಿಕ ಅಭಿವೃದ್ಧಿಯ ದ್ಯೋತಕವೆಂದು ಪರಿಗಣಿಸಲಾಗಿದೆ! ಇನ್ನೂ ಮುಖ್ಯ ಅಂಶವೆಂದರೆ ಆಂಟಿಬಯೋಟಿಕ್ ಗಳ ಬಳಕೆ ಇನ್ಫ್ಲುಯೆನ್ಸ ವೈರಾಣು ಸೋಂಕಿನ ಸಂದರ್ಭದಲ್ಲಿ , ವೈರಾಣುಗಳ ಮೇಲೆ ಅವುಗಳು ಪರಿಣಾಮ ಬೀರದಿದ್ದರೂ ಕೂಡ, ಹೆಚ್ಚಾಗಿ ಬಳಕೆಯಾಯಿತು.!

ಕೃಷಿ ಕ್ಷೇತ್ರದಲ್ಲೂ ಆಂಟಿಬಯೋಟಿಕ್ ಗಳು ವ್ಯಾಪಕವಾಗಿ ಬಳಕೆಯಾಗಿದೆ. ದನಗಳಿಗೆ, ಹಂದಿಗಳಿಗೆ, ಕೋಳಿಗಳಿಗೆ ಸಣ್ಣ ಪ್ರಮಾಣದಲ್ಲಿ ಕೊಡುವುದರ ಮೂಲಕ ಪ್ರತಿ ಪ್ರಾಣಿಯ ಮಾಂಸದ ತೂಕದಲ್ಲಿ ಹೆಚ್ಚಳವಾಗುವ ಪ್ರಯೋಜನದ ಉದ್ದೇಶದಿಂದ ಬಳಕೆಯಾಯಿತು. ಆದರೆ ಈಗ ಈ ಬಳಕೆಯನ್ನು ಯುರೋಪ್ ರಾಷ್ಟ್ರದಲ್ಲಿ ನಿಷೇಧಿಸಲಾಗಿದೆ. ಆದರೆ ಉತ್ತರ ಅಮೆರಿಕಾದಲ್ಲಿ ಇನ್ನೂ ಬಳಕೆಯಲ್ಲಿದೆ.

ಮನುಷ್ಯರಲ್ಲೂ ಕೂಡ ಆಂಟಿಬಯೋಟಿಕ್ ಗಳ ಅತಿ ಬಳಕೆಯಿಂದ ಮಕ್ಕಳ ತೂಕದಲ್ಲಿ ಅತಿಯಾದ ಹೆಚ್ಚಳ ಉಂಟಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಆಂಟಿಬಯೋಟಿಕ್ ಗಳ ಬಳಕೆ, ಅತಿ ಬಳಕೆ, ದುರ್ಬಳಕೆ ಗಳಿಂದಾಗಿ ಇದು ಹೆಚ್ಚುತ್ತಿದೆ. ಆಂಟಿಬಯೋಟಿಕ್ ಗಳ ಅತಿಬಳಕೆ ಮಕ್ಕಳಲ್ಲಿ ಬೊಜ್ಜು ತರುವುದಕ್ಕೆ ಹೇಗೆ ಕಾರಣವಾಗುತ್ತದೆ? ಪ್ರಯೋಗ ಆಧಾರಿತ ಅಂಶಗಳೊಂದಿಗೆ, ಕುತೂಹಲಕಾರಿ ಸಂಗತಿಗಳನ್ನು ಮುಂದಿನ ಭಾಗದಲ್ಲಿ ನೋಡೋಣ.

ಡಾ .ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಪ್ರಸಾದ್ ಹೆಲ್ತ್ ಕೇರ್ ಸೆಂಟರ್,
ಪುರುಷರಕಟ್ಟೆ, ,ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್,
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ,ಸುಳ್ಯ.
ಮೊಬೈಲ್:9740545979
rpbangaradka@gmail.com.

Share this: