ಮಕ್ಕಳ ಅತಿಯಾದ ರಕ್ಷಣೆ ಒಳ್ಳೆಯದಲ್ಲ. ಅತಿಯಾದ ರಕ್ಷಣೆ ಮಾಡಿದಲ್ಲಿ ಮಕ್ಕಳಲ್ಲಿ ರೋಗ ನಿರೋಧಕತೆ ಅಥವಾ ಇಮ್ಯುನಿಟಿ ಬೆಳೆಯುವುದಿಲ್ಲ ಎಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ.ಮಕ್ಕಳನ್ನು ಅತಿಯಾದ ಕಾಳಜಿಯಿಂದ ಬೆಳೆಸುವ ಅಗತ್ಯವಿಲ್ಲ.
ಮಕ್ಕಳ ಅತಿಯಾದ ರಕ್ಷಣೆ ಒಳ್ಳೆಯದಲ್ಲ :
ಮನೆಯಲ್ಲಿ ಈ ರೀತಿ ಸಣ್ಣ ಸಣ್ಣ ಗಾಯಗಳಿಗೂ ಅತಿಯಾದ ರಕ್ಷಣೆ ಮಾಡಿದಲ್ಲಿ ಮಕ್ಕಳಲ್ಲಿ ರೋಗ ನಿರೋಧಕತೆ ಅಥವಾ ಇಮ್ಯುನಿಟಿ ಬೆಳೆಯುವುದಿಲ್ಲ. ಮಕ್ಕಳು ಮನೆಯ ಸುತ್ತಮುತ್ತ ಇರುವ ಸುರಕ್ಷಿತ ಜಾಗಗಳಲ್ಲಿ, ಮಣ್ಣಿನಲ್ಲಿ ಆಟವಾಡಿದರೆ ಅಥವಾ ಬಿದ್ದಾಗ ಅತಿಯಾದ ಜಾಣತನ ತೋರಿ ರೋಗ ಬರದಂತೆ ಅತಿಯಾದ ರಕ್ಷಣಾ ವಸ್ತುಗಳನ್ನು ಬಳಕೆ ಮಾಡುವುದು ಸೂಕ್ತವಲ್ಲ. ಸಣ್ಣ ಪುಟ್ಟ ಸುರಕ್ಷಿತ ರೋಗಾಣುಗಳಿಗೆ ಮಕ್ಕಳು ತೆರೆದುಕೊಂಡಲ್ಲಿ ಮಕ್ಕಳಲ್ಲಿ ನೈಸರ್ಗಿಕವಾಗಿ ಸ್ವಾಭಾವಿಕವಾಗಿ ರೋಗ ನಿರೋಧಕತೆ ಬೆಳೆಯುತ್ತದೆ ಎಂದು ಖ್ಯಾತ ಮೈಕ್ರೋಬಯೋಲಜಿಸ್ಟ್ ಮೇರಿಕ್ಲಾರಿ ತಮ್ಮ ಸಂಶೋಧನೆಯಿಂದ ಸಾಬೀತು ಮಾಡಿದ್ದಾರೆ.
ಹೆತ್ತವರು ತಮ್ಮ ಮಕ್ಕಳನ್ನು ಅತ್ಯಂತ ಸುರಕ್ಷಿತವಾಗಿ ಮತ್ತು ಅತಿಯಾದ ಬುದ್ಧಿವಂತಿಕೆ ಬಳಸಿ ರೋಗಾಣು ಮುಕ್ತ ವಾತಾವರಣದಲ್ಲಿ ಬೆಳೆಸಿದ್ದಲ್ಲಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಸರಿಯಾಗಿ ವೃದ್ಧಿಸಲು ಸಾಧ್ಯವೇ ಇಲ್ಲ ಎಂದು ಅಮೇರಿಕಾದ ಕಾಲಗರಿ ಯುನಿರ್ವಸಿಟಿ ಇದರ ವೈದ್ಯರು ತಿಳಿಸಿದ್ದಾರೆ. ಇಂತಹಾ ಮಕ್ಕಳಲ್ಲಿ ಅಲರ್ಜಿ, ದೇಹದ ಅತಿಯಾದ ತೂಕ ಮತ್ತು ಅಸ್ತಮಾ ಮುಂತಾದ ತೊಂದರೆಗಳು ಹದಿಹರೆಯದಲ್ಲಿ ಕಾಣಿಸಿಕೊಳ್ಳವ ಸಾಧ್ಯತೆ, ಇತರ ಮಕ್ಕಳಿಗಿಂತಲೂ ಜಾಸ್ತಿ ಎಂದು ತಿಳಿದುಬಂದಿದೆ.ನವಜಾತ ಶಿಶುಗಳಲ್ಲಿ ಯಾವುದೇ ಬ್ಯಾಕ್ಟೀರಿಯಾ ದೇಹದಲ್ಲಿ ಇರವುದಿಲ್ಲ. ಮತ್ತು ಶಿಶುಗಳಲ್ಲಿ ಯಾವುದೇ ರೋಗ ನಿರೋಧಕ ಶಕ್ತಿ ಇರುವುದಿಲ್ಲ. ತಾಯಿಯಿಂದ ಬಳುವಳಿಯಾಗಿ ಬಂದಂತಹ ಪೂರ್ವ ನಿರ್ಮಿತ ಆಂಟಿಬಾಡಿಗಳು ಅಥವಾ ರೋಗ ಪ್ರತಿಬಂಧಕಾಯಗಳು ಶಿಶುಗಳನ್ನು ರಕ್ಷಿಸುತ್ತದೆ.
ದೇಹವೇ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು:
ಯಾವಾಗ ಮಕ್ಕಳ ಬಾಯಿಯಲ್ಲಿ, ಜಠರದಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡು ತಮ್ಮ ವಂಶಾಭಿವೃದ್ಧಿ ಮಾಡಿಕೊಂಡೆವೋ, ತಕ್ಷಣವೇ ದೇಹ ಅಂತಹಾ ಬ್ಯಾಕ್ಟೀರಿಯಾದ ವಿರುದ್ಧ ಸಮರ ಸಾರುತ್ತದೆ. ಮತ್ತು ಮಗುವಿನ ರೋಗ ನಿರೋಧಕ ಶಕ್ತಿ ದಿನೇ ದಿನೇ ಬೆಳಯುತ್ತದೆ. ಬ್ಯಾಕ್ಟಿರೀಯಾಗಳು ಇಲ್ಲದಿದ್ದಲ್ಲಿ ನಮ್ಮ ದೇಹದಲ್ಲಿ ರಕ್ಷಣಾ ವ್ಯವಸ್ಥೆ ಬೆಳೆಯಲು ಸಾಧ್ಯವೇ ಇಲ್ಲ. ಈ ಕಾರಣದಿಂದಲೇ ನಮ್ಮ ಬೆಳೆಯುವ ಮಕ್ಕಳ ಸಣ್ಣ ಪುಟ್ಟ ಸುರಕ್ಷಿತ ರೋಗಾಣುಗಳಿಗೆ ತೆರೆದುಕೊಳ್ಳುವ ಅನಿವಾರ್ಯತೆ ಇದೆ. ಅದಕ್ಕಾಗಿಯೇ ನಮ್ಮ ಮಕ್ಕಳು ಆಟವಾಡುವಾಗ, ಬಿದ್ದಾಗ, ತರಚಿದಾಗ ದೇಹವೇ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಹೆತ್ತವರು ಅವಕಾಶ ಮಾಡಿಕೊಡಬೇಕು. ಹಾಗೆಂದ ಮಾತ್ರಕ್ಕೆ ತುಕ್ಕು ಹಿಡಿದ ಕಬ್ಬಿಣದ ಮೊಳೆ ಮುಂತಾದ ವಸ್ತು ತಾಗಿದಾಗ ಟೆಟನಸ್ ಇಂಜೆಕ್ಷನ್ ಕೊಡಿಸಲು ಮರೆಯಬಾರದು.
ಈ ರೀತಿ ತರಬೇತಿ ಹೊಂದಿದ ಜೀವಕೋಶಗಳು ದೇಹದ ಇತರ ಭಾಗಕ್ಕೆ ರಕ್ತದ ಮೂಲಕ ಸಂಚರಿಸಿ ದೇಹದ ರಕ್ಷಣೆಯಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಈ ಕಾರಣದಿಂದಲೇ ಸಣ್ಣ ಮಕ್ಕಳಲ್ಲಿ ಸಣ್ಣ ಪುಟ್ಟ ಸೋಂಕು ಬಂದಾಗ ಹೆತ್ತವರು ತಲೆಕೆಡಿಸಿಕೊಳ್ಳದೆ ಅನವಶ್ಯಕವಾಗಿ ಆಂಟಿಬಯೋಟಿಕ್ ಸೇವನೆ ಮಾಡಬಾರದು. ಮಗುವಿಗೆ ತೀವ್ರತರವಾದ ತೊಂದರೆ ಉಂಟಾದಾಗ ಮಾತ್ರ ವೈದ್ಯರ ಆದೇಶದಂತೆ ಆಂಟಿಬಯೋಟಿಕ್ ಸೇವನೆ ಅಗತ್ಯವೆಂದು ಸಂಶೋಧನೆಗಳು ತಿಳಿಸಿದೆ. ಮಕ್ಕಳು ಬೆಳೆಯುವ ಹಂತದಲ್ಲಿ ಸಣ್ಣ ಪುಟ್ಟ ಸೋಂಕುಗಳಿಗೆ ಮಕ್ಕಳು ತೆರೆದುಕೊಂಡಲ್ಲಿ, ದೇಹದ ರಕ್ಷಣಾ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ಬೆಳವಣಿಗೆ ಹೊಂದಿ ಮಕ್ಕಳನ್ನು ಆರೋಗ್ಯವಂತ ವ್ಯಕ್ತಿಗಳಾಗಿ ರೂಪಿಸುತ್ತದೆ.
ಕೊನೆಮಾತು :
ನಮ್ಮ ಸುತ್ತ ಮುತ್ತಲಿನ ಪರಿಸರ ಶುಚಿಯಾಗಿಸಿಕೊಳ್ಳುವುದು ಅತೀ ಅವಶ್ಯಕ. ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಹೆತ್ತವರ ಪ್ರಾಥಮಿಕ ಜವಾಬ್ದಾರಿ. ಹಾಗೆಂದ ಮಾತ್ರಕ್ಕೆ ಅತಿಯಾದ ಕಾಳಜಿ, ರಕ್ಷಣೆ ಮತ್ತು ಮೇಲ್ವಿಚಾರಣೆ ಮಾಡಬಾರದು. ನಿಮ್ಮ ಮಕ್ಕಳು ಮನೆ ಮುಂದೆ ಆಡುವಾಗ ಬಿದ್ದು ಕೊಳೆಯಾದಲ್ಲಿ ಅಥವಾ ತರಚಿದ ಗಾಯವಾದಲ್ಲಿ ಆಕಾಶವೇ ಕಳಚಿ ಬಿದ್ದಂತೆ ವರ್ತಿಸಿ, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿ ಆಂಟಿಬಯೋಟಿಕ್ ಮಾಡುವಂತೆ ವೈದ್ಯರಲ್ಲಿ ದಂಬಾಲು ಬೀಳುವ ಅಗತ್ಯವಿಲ್ಲ. ಮಕ್ಕಳನ್ನು ಅತಿಯಾದ ಕಾಳಜಿಯಿಂದ ಬೆಳೆಸುವ ಅಗತ್ಯವಿಲ್ಲ. ಜಾಗ್ರತೆ ವಹಿಸುವುದರ ಜೊತೆಗೆ, ಮಕ್ಕಳಲ್ಲಿ ಸಣ್ಣ ಪುಟ್ಟ ಸೋಂಕುಗಳಿಗೆ ತೆರೆದುಕೊಳ್ಳುವ ಅವಕಾಶವನ್ನು ನೀಡಬೇಕು. ಈ ಎರಡರ ನಡುವಿನ ಸಮತೋಲನ ಕಾಯ್ದುಕೊಂಡು, ಅತಿಯಾದ ಸುರಕ್ಷತೆ ಮತ್ತು ನಿರ್ಲಕ್ಷತೆಗಳ ನಡುವೇ ಸಮತೋಲನ ಸಾಧಿಸಿದಲ್ಲಿ ಮಗುವಿನ ರೋಗ ನಿರೋಧಕ ಬೆಳೆದು ಒಬ್ಬ ಆರೋಗ್ಯವಂತ ಪ್ರಜೆಯಾಗಲು ಸಾಧ್ಯವಿದೆ.
ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com