Vydyaloka

ಮಕ್ಕಳ ಆಹಾರ ಪದ್ಧತಿ ಹೇಗಿರಬೇಕು?

ಮಕ್ಕಳ ಆಹಾರ ಪದ್ಧತಿ ಭವಿಷ್ಯತ್ತಿನಲ್ಲಿ ಅದು ದೊಡ್ಡ ತೊಂದರೆಯಾಗಿ ಪರಿಣಮಿಸಬಹುದು. ಪ್ರಸ್ತುತ ಜೀವನಶೈಲಿಯೂ ಸಹ ಅವರ ಮೇಲೆ ಗಾಢವಾಗಿ ಪ್ರಭಾವ ಬೀರುವುದು. ಇಂದಿನ ದಿನಗಳಲ್ಲಿ ಮಕ್ಕಳಿಗೆ ನಾವು ನೀಡುವಂತಹ ತಪ್ಪಾದ ಆಹಾರ ಪದ್ಧತಿಯ ಪ್ರಭಾವದಿಂದಾಗಿ ಹಲವಾರು ಸಮಸ್ಯೆಗಳು ಕಂಡುಬರುತ್ತಿದೆ.

ಕರಿದ ಆಹಾರ ಪಧಾರ್ಥಗಳು, ಬೇಕರಿಯ ತಿನಿಸುಗಳು, ಸಂಸ್ಕರಿತ ಆಹಾರ ಪಧಾರ್ಥಗಳು ಮಕ್ಕಳ ಮೆಚ್ಚಿನ ಆಹಾರವಾಗಿದೆ. ಅವರು ಪ್ರಕೃತಿದತ್ತವಾದ, ಸ್ವಾಭಾವಿಕ ಅಥವಾ ನೈಸರ್ಗಿಕ ಆಹಾರದ ಹೊರತಾಗಿ ಮೇಲಿನಂತಹ ಆಹಾರವನ್ನು ಸೇವಿಸುತ್ತಿರುವುದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತಿವೆ. ಇದರಿಂದಾಗಿ ಕೆಟ್ಟ ಕೊಬ್ಬು ಸಂಗ್ರಹವಾಗಿ ಹಲವಾರು ಖಾಯಿಲೆಗಳಿಗೆ ಕಾರಣವಾಗುತ್ತದೆ. ಚಿಕ್ಕವಯಸ್ಸಿನಲ್ಲಿಯೇ ಬೊಜ್ಜು ಸಾಮಾನ್ಯವಾಗಿ ಕಂಡುಬರುತ್ತಿರುವುದಕ್ಕೆ ಕಾರಣ ಇದಾಗಿದೆ.

ಪ್ರಕೃತಿದತ್ತವಾಗಿ ಸಿಗುವ ಆಹಾರ ಒಳಿತು

ಹಾಗಾಗಿ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಕೊಬ್ಬಿನಾಂಶಕ್ಕಾಗಿ ಅವರು ಪ್ರಕೃತಿದತ್ತವಾಗಿ ಸಿಗುವ ಆಹಾರದಿಂದ ಪಡೆಯುವುದು ಒಳಿತು. ಇದು ಉತ್ತಮ ಕೊಬ್ಬು ನೀಡಲು ಸಹಾಯಕವಾಗಿ ಆರೋಗ್ಯ ವರ್ಧನೆಗೆ ಸಹಕಾರಿಯಾಗುವುದು. ಹಿರಿಯರು, ನಮ್ಮ ಪೂರ್ವಿಕರು ಮಕ್ಕಳಿಗೆ ಹೆಚ್ಚು ಹಣ್ಣು – ಹಂಪಲುಗಳನ್ನು ಸೇವಿಸಲು ಹೇಳುತ್ತಿದ್ದರು. ಅಂತೆಯೇ ಹಣ್ಣು – ಹಂಪಲುಗಳನ್ನು ಮಕ್ಕಳು ಹೆಚ್ಚಾಗಿ ಸೇವಿಸುವುದರಿಂದಾಗಿ ಅದರಲ್ಲಿನ ಹೆಚ್ಚು ಆ್ಯಂಟಿ ಆಕ್ಸಿಡೆಂಟ್ಸಗಳು ದೇಹಕ್ಕೆ ದೊರೆಯುತ್ತದೆ. ಹಸಿತರಕಾರಿಗಳು ಹಾಗೂ ಹಸಿರುಸೊಪ್ಪುಗಳನ್ನು ಬಹಳಷ್ಟು ಸೇವಿಸಬೇಕು. ಇದೂ ಸಹ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆ.

ಉತ್ತಮ ಪ್ರೋಟೀನ್‍ಗಳಿಗಾಗಿ ಮೊಳಕೆ ಕಾಳುಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ನಟ್ಸ್‍ಗಳು ಮಕ್ಕಳ ಬೆಳವಣಿಗೆಗೆ ಅತ್ಯಂತ ಪೂರಕವಾದುದು. ಇದರಿಂದಾಗಿ ಮಾನಸಿಕ, ಬೌದ್ಧಿಕ, ದೈಹಿಕ ವಿಕಾಸ ಸರಿಯಾಗಿ ಆಗಲು ಸಾಧ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ನಮ್ಮ ದೇಹಕ್ಕೆ ದಿನಕ್ಕೆ ಎರಡು ಗ್ರಾಂ ಉಪ್ಪು ಸಾಕು. ಆದರೆ, ನಾವು ಸೇವಿಸುವ ಪ್ರತಿಯೊಂದು ಆಹಾರವನ್ನು ಪರಿಗಣಿಸಿದಾಗ ಸುಮಾರು 15-20 ಗ್ರಾಂ ಪ್ರತಿನಿತ್ಯ ಉಪ್ಪನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ಹಲವಾರು ಸಮಸ್ಯೆಗಳಿಗೆ ನಾಂದಿಯಾಗುತ್ತಿದೆ. ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಕಡಿಮೆ ಉಪ್ಪನ್ನು ಸೇವಿಸುವುದನ್ನು ರೂಢಿ ಮಾಡಿಸಬೇಕು.

ಅಂತೆಯೇ ಕರಿದ ಆಹಾರ, ಬೇಕರಿ ಆಹಾರ, ಸಂಸ್ಕರಿತ ಆಹಾರಗಳ ಬದಲಾಗಿ ಉತ್ತಮ, ಪೌಷ್ಟಿಕ, ನಿಸರ್ಗದತ್ತ ಆಹಾರದ ಬಳಕೆ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು. ಹಾಲು, ಮಜ್ಜಿಗೆ, ಬೆಣ್ಣೆ, ತುಪ್ಪ, ಮೊಸರು ಸಹ ಆರೋಗ್ಯ ವರ್ಧನೆಗೆ ಪೂರಕ. ಕೆಲವೊಂದು ಮಕ್ಕಳಲ್ಲಿ ‘ಆಟಿಸಮ್’ ಸಮಸ್ಯೆಯು ಕಂಡುಬರುತ್ತಿದೆ. ಇದನ್ನು ಪಾಲಕರು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವುದು ಅವಶ್ಯ. ಅವರ ಮಿದುಳು ಚುರುಕಾಗಲು ಈ ಮೇಲಿನ ಎಲ್ಲ ಅಂಶಗಳು, ಆಹಾರ ಪದಾರ್ಥಗಳು ಸಹಕಾರಿಯಾಗುತ್ತದೆ. ಜೊತೆಯಲ್ಲಿ ಪಾಲಕರ ತಾಳ್ಮೆ, ಸಂಯಮ ಇವುಗಳು ಮಕ್ಕಳಿಗೆ ಚೈತನ್ಯಶಕ್ತಿಯಂತೆ ಕೆಲಸಮಾಡುತ್ತದೆ.

ಮಕ್ಕಳ ಆಹಾರ ಹೀಗಿರಲಿ

1. ‘ಬೆಳೆಯುವ ಸಿರಿ ಮೊಳಕೆಯಲಿ’್ಲ ಎಂಬ ಗಾದೆಯಂತೆ ಮಗು ತನ್ನ ಗುಣಗಳನ್ನು ಯಾವೊಂದೋ ರೀತಿಯಲ್ಲಿ ಪ್ರಕಟಪಡಿಸಿರುತ್ತದೆ. ಆದರೆ ಕೆಲವೊಂದು ಬಾರಿ ಪಾಲಕರು, ಪೋಷಕರು ಅದನ್ನು ಗುರುತಿಸುವಲ್ಲಿ ವಿಫಲರಾಗಿರುತ್ತಾರೆ. ತಮ್ಮ ಆಸೆಗಳನ್ನು, ಗುರಿಗಳನ್ನು ಹೇಳಿದಾಗ ಅದು ಮಕ್ಕಳ ಮನೋಬಲದ ಮೇಲೆ, ಆರೋಗ್ಯದ ಮೆಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ. ಆದರೆ ಮಕ್ಕಳ ಇಚ್ಛಾಶಕ್ತಿಯನ್ನು, ಪ್ರತಿಭೆಯನ್ನು ಗುರುತಿಸಿ ಅವರಿಗೆ ದಾರಿಯನ್ನು ತೋರಿಸಿದಾಗ ಆ ಪ್ರತಿಭೆಯು ಬೆಳೆದು ಅಲ್ಲಿ ಸಾಧನೆ ಸಫಲವಾಗುತ್ತದೆ.

2. ಮಗುವಿನ ಸರ್ವತೋಮುಖ ಬೆಳವಣೆಗೆಗೆ ಇಚ್ಛಾಬಲ, ಮನೋಬಲ ಹಾಗೂ ದೇಹಬಲ ಎಲ್ಲವೂ ಬೇಕು. ಇದಕ್ಕೆ ಪಾಲಕರ ದಾರಿದೀಪ, ಆರೈಕೆ ಮಕ್ಕಳಿಗೆ ಬೇಕು. ಆರೋಗ್ಯವು ಮಾಧ್ಯಮದಂತೆ ಕಾರ್ಯನಿರ್ವಹಿಸುತ್ತದೆ. ‘ಧರ್ಮಾರ್ಥಕಾಮಮೋಕ್ಷಾಣಾಂ ಆರೋಗ್ಯಮೂಲಮುತ್ತಮಮ್’ ಎನ್ನುವಂತೆ ಸ್ವಸ್ಥ ಆರೋಗ್ಯದಿಂದ ಮಾತ್ರ ಸಕಲ ಕಾರ್ಯ ಸಾಧನೆಯಾಗುತ್ತದೆ. ಪ್ರಾರಂಭದಿಂದಲೇ ಮಕ್ಕಳಿಗೆ ಸರಿಯಾಗಿ ಪೌಷ್ಟಿಕ ಆಹಾರವನ್ನು ನೀಡುತ್ತ ಬಂದಲ್ಲಿ ನಿಯಮಿತವಾದ, ವ್ಯವಸ್ಥಿತ ಆಹಾರದಿಂದ ಆರೋಗ್ಯವರ್ಧನೆ ಸಾಧ್ಯವಾಗುತ್ತದೆ.

3. ಮೊದಲಿನಿಂದಲೂ ಮಕ್ಕಳು ತರಕಾರಿ-ಹಣ್ಣುಗಳನ್ನು ಹೆಚ್ಚು ಸೇವಿಸಬೇಕು ಎಂಬುದಾಗಿ ಹಿರಿಯರು ನಮಗೆ ತಿಳಿಸುತ್ತ ಬಂದಿದ್ದಾರೆ. ವೈಜ್ಞಾನಿಕ ವೈದ್ಯಕೀಯ ದೃಷ್ಟಿಯಿಂದ ನೋಡಿದಾಗಲೂ ಸಹ ಇದು ಆರೋಗ್ಯಕ್ಕೆ ಉತ್ತಮವೆಂದು ತಿಳಿದುಬರುತ್ತದೆ. ಆದರೆ ಇಂದಿನ ದಿನಗಳಲ್ಲಿ ಹಸಿತರಕಾರಿಗಳನ್ನು, ಹಣ್ಣುಗಳನ್ನು ಮಕ್ಕಳು ಹೆಚ್ಚು ಇಷ್ಟ ಪಡುತ್ತಿಲ್ಲ. ಕಾರಣ ಅವರು ಬೇಕರಿಯ ತಿಂಡಿಗಳೊಂದಿಗೆ, ಕರಿದ ಆಹಾರ ಪದಾರ್ಥಗಳೊಂದಿಗೆ (ಮಸಾಲಪೂರಿ, ಬೇಲ್‍ಪೂರಿ, ಗೋಭಿಮಂಚೂರಿ ಇತ್ಯಾದಿ) ಈ ಆಹಾರಗಳನ್ನು ತುಲನೆ ಮಾಡುತ್ತಿದ್ದಾರೆ. ಈ ಆಹಾರಗಳಲ್ಲಿ ಹೆಚ್ಚು ಉಪ್ಪು ಹಾಗೂ ಉಳಿದ ಹಲವಾರು ಪದಾರ್ಥಗಳಿಂದ ರುಚಿಯನ್ನು ಹೆಚ್ಚಿಸಿ ಆಕರ್ಷಿತರಾಗುವಂತೆ ಮಾಡಿರುತ್ತಾರೆ. ಆದರೆ ಆರೋಗ್ಯಕ್ಕೆ ಒಳಿತಾಗುವ ಆಹಾರವನ್ನು ಪಾಲಕರು ಮಕ್ಕಳಿಗೆ ಸಮಝಾಯಿಸಿ ನೀಡುವುದು ಉತ್ತಮ.

4. ನೈಸರ್ಗಿಕ ಪದಾರ್ಥಗಳನ್ನೇ ಉಪಯೋಗಿಸಿಕೊಂಡು ರುಚಿಯಾಗುವಂತೆ ಅಡಿಗೆ ಮಾಡಿ ಮಕ್ಕಳನ್ನು ಪ್ರಕೃತಿದತ್ತ ಆಹಾರದತ್ತ ಆಕರ್ಷಿಸಬೇಕು. ಮೊಳಕೆಕಾಳುಗಳನ್ನು ರುಚಿಕರವಾಗಿ ಮಾಡಿ ನೀಡಬೇಕು. ತರಕಾರಿಗಳನ್ನು ಹಣ್ಣುಗಳನ್ನು ಸಲಾಡ್ ಮಾಡಿ ಸೇವಿಸಬಹುದು. ಅದಕ್ಕೆ ತೆಂಗಿನ ತುರಿಯನ್ನು ಹಾಕುವುದು ಒಳಿತು. ಬೇಕಾದಲ್ಲಿ ಎಕ್ಸ್ಟ್ರಾ ವರ್ಜಿನ್ ಕೊಕೊನಟ್ ಆಯಿಲ್, ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್‍ನ್ನು ಕೂಡ ಸೇರಿಸಬಹುದು. ಅಲ್ಲದೇ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಅಥವಾ ಛಾಟ್ ಮಸಾಲಾ ಪೌಡರ್‍ನ್ನು ರುಚಿಗಾಗಿ ಹಾಕಬಹುದು. ಹೀಗೆ ಸಣ್ಣ ಬದಲಾವಣೆಯೊಂದಿಗೆ ಪೌಷ್ಠಿಕ ಆಹಾರವನ್ನು ಮಕ್ಕಳು ಸೇವಿಸುವಂತೆ ಮಾಡಿದಲ್ಲಿ ಆರೋಗ್ಯವರ್ಧನೆಗೆ ಇದು ಸಹಕಾರಿಯಾಗುತ್ತದೆ. ಪ್ರತಿನಿತ್ಯ ಇಂತಹ ಆಹಾರಪದಾರ್ಥವನ್ನು ನೀಡುತ್ತ ಬಂದಲ್ಲಿ ಅದು ಅಭ್ಯಾಸವಾಗುತ್ತದೆ.

5. ತಾಯಂದಿರು ಈ ಕಾರ್ಯದಲ್ಲಿ ಯಶಸ್ವಿಯಾದಾಗ ಮಕ್ಕಳು ತಮ್ಮ ಆರೋಗ್ಯದಲ್ಲಿ ಸ್ವಾಸ್ಥ್ಯತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಕಾರಣ ಇಂದಿನ ಕಾಲದಲ್ಲಿ ಮಧುಮೇಹ, ಬೊಜ್ಜು, ಕೊಲೆಸ್ಟ್ರಾಲ್, ಅಧಿಕರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳು, ಕಿಡ್ನಿ ಸಂಬಂಧಿತ ತೊಂದರೆ, ಮಂಡಿನೋವು, ಸೊಂಟನೋವು, ಬೆನ್ನುನೋವು, ಅಜೀರ್ಣ, ಮಲಬದ್ಧತೆ, ಗ್ಯಾಸ್ಟ್ರಿಕ್‍ನಂತಹವುಗಳು ಹೆಚ್ಚಾಗಿ ಕಂಡುಬರುತ್ತಿದೆ.

ಭವಿಷ್ಯತ್ತಿನಲ್ಲಿ ಮಕ್ಕಳು ಇವೆಲ್ಲವುಗಳಿಂದ ದೂರವಿರಲು ಈ ಶಿಸ್ತುಬದ್ದ ಪೌಷ್ಟಿಕ, ನೈಸರ್ಗಿಕ ಆಹಾರದ ಅವಶ್ಯಕತೆ ಇದೆ. ಇದು ಸ್ವಾಸ್ತ್ಯ ಜೀವನಕ್ಕೆ ಕಾರಣವಾಗುತ್ತದೆ. ಹಾಗಾಗಿ ನಮ್ಮ ಗಮನ ಹಾಗೂ ಸಾಧನೆ ಈ ಹಾದಿಯಲ್ಲಿ ಸಾಗಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಹಾಗೂ ಆರೋಗ್ಯಕ್ಕಾಗಿ ಪ್ರಯತ್ನ ನಡೆಯಲಿ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: