Vydyaloka

ಕರುಳಿನ ಆರೋಗ್ಯ ಕಾಪಾಡಿಕೊಳ್ಳಿ – ಸರ್ವರೋಗ ಮುಕ್ತರಾಗಿ

ಕರುಳಿನ ಆರೋಗ್ಯ ಕಾಪಾಡಿಕೊಳ್ಳಿ. ಮಲಬದ್ಧತೆ ಎಂಬುದು ಆಧುನಿಕ ಮಾನವನ ಶಾಪವೆಂದೇ ಹೇಳಬಹುದು. ಪ್ರಪಂಚದಾದ್ಯಂತ ಅನೇಕ ಜನರು ಇದರಿಂದ ಬಳಲುತ್ತಿದ್ದಾರೆ.

Karulina aarogya - Stomach care Suryakanth
ಸೂರ್ಯಕಾಂತ ಎಸ್. ನಂ.261, 9ನೇ ಮುಖ್ಯರಸ್ತೆ, ಶ್ರೀನಿ ವಾಸ ನಗರ, ಬೆಂಗಳೂರು-560050, ಮೊ: 9916022679 – 1

ಸರ್ವೇರೋಗ ಮಲಾಶಯ ಎಂದು ನಮ್ಮ ಹಿಂದಿನ ಋಷಿಮುನಿಗಳು ಹೇಳಿದ್ದಾರೆ. ಅಂದರೆ, ಶೇ.90 ರಷ್ಟು ಕಾಯಿಲೆಗಳು ಬರುವುದು ನಮ್ಮ ದೊಡ್ಡ ಕರುಳಿನಲ್ಲಿ ಅಧಿಕ ಸಮಯ ಸಂಗ್ರಹವಾಗುವ ಮಲದಿಂದ ಎಂದು ಹೇಳಬಹುದು. ನಮ್ಮ ಶರೀರದಲ್ಲಿ ಅತೀ ಹೆಚ್ಚು ಕಲ್ಮಷ ಮತ್ತು ಅತೀ ಹೆಚ್ಚು ಕೆಟ್ಟ ವಾಸನೆ ಬರುವುದು ನಮ್ಮ ಬಾಯಿ, ಹೊಟ್ಟೆ, ಸಣ್ಣ ಕರುಳು ಮತ್ತು ದೊಡ್ಡ ಕರುಳುಗಳಿಂದ. ಅಂದರೆ ನಮ್ಮ ಬಾಯಿಯಿಂದ ಗುದದ್ವಾರದವರೆಗೂ ಇರುವ ಜೀರ್ಣಾಂಗ ವ್ಯವಸ್ಥೆಯಲ್ಲಿ ಎಂದು ಹೇಳಬಹುದು. ನಾವು ಪ್ರತಿದಿನ ಬೆಳಿಗ್ಗೆ ಹಲ್ಲುಜ್ಜುವ ಮೂಲಕ ಬಾಯಿಯನ್ನು ಸ್ವಚ್ಚಗೊಳಿಸುತ್ತೇವೆ. ಆದರೆ, ಹೊಟ್ಟೆ, ಸಣ್ಣ ಕರುಳು ಮತ್ತು ದೊಡ್ಡ ಕರುಳನ್ನು ಸ್ವಚ್ಚಗೊಳಿಸುವ ಬಗ್ಗೆ ಯೋಚಿಸುವುದಿಲ್ಲ. ಅನೇಕರು ವಿವಿಧ ಕಷಾಯ, ಚೂರ್ಣಗಳನ್ನು ಸೇವಿಸುತ್ತಿದ್ದಾರೆ. ಇದರಿಂದ ಕರುಳು ಸ್ವಚ್ಚಗೊಳ್ಳುವ ಬದಲು ಅಡ್ಡ ಪರಿಣಾಮಗಳೇ ಹೆಚ್ಚಾಗುತ್ತಿವೆ.

ಅದರಲ್ಲೂ ಮಲಬದ್ಧತೆ ಎಂಬುದು ಆಧುನಿಕ ಮಾನವನ ಶಾಪವೆಂದೇ ಹೇಳಬಹುದು. ಪ್ರಪಂಚದಾದ್ಯಂತ ಅನೇಕ ಜನರು ಇದರಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಎಣ್ಣೆಯುಕ್ತ ಮತ್ತು ಅನಾರೋಗ್ಯಕರ ಆಹಾರವನ್ನು ತಿನ್ನುವ ಪ್ರವೃತ್ತಿಯು ಹೆಚ್ಚಾಗುತ್ತಿದೆ. ಇದು ಅನೇಕ ಹೃದಯ ಕಾಯಿಲೆಗಳಿಗೆ ಮತ್ತು ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ನಿರ್ಲಕ್ಷಿಸಿದರೆ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ನಾವು ಸೇವಿಸಿದ ಆಹಾರವು ನಮ್ಮ ಜಠರದಲ್ಲಿ ಸುಮಾರು ಎರಡರಿಂದ ನಾಲ್ಕು ಗಂಟೆಗಳವರೆಗೆ ಇದ್ದರೆ, ನಮ್ಮ ಸಣ್ಣ ಕರುಳು ದೊಡ್ಡ ಕರುಳಿನಲ್ಲಿ ಅತ್ಯಧಿಕ ಸಮಯ ಸಂಗ್ರಹಗೊಂಡಿರುತ್ತದೆ. ಅದರಲ್ಲೂ ಮಲಬದ್ಧತೆ ಇರುವವರಲ್ಲಿ ಎರಡು ಮೂರು ದಿನಗಳವರೆಗೂ ಸಂಗ್ರಹಗೊಂಡಿರುತ್ತದೆ. ಈ ಅಧಿಕ ಸಮಯದಲ್ಲಿ ಆಹಾರವು ಕೊಳೆತು ಗ್ಯಾಸ್ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ರಕ್ತ ಕಲ್ಮಶಗೊಂಡು ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಇದೇ ಕಾರಣಕ್ಕೆ ಶೇಕಡ 90 ರಷ್ಟು ಕಾಯಿಲೆಗಳು ನಮ್ಮ ಕರುಳಿನಲ್ಲಿಯೇ ಉತ್ಪತ್ತಿಯಾಗುತ್ತಿವೆ. ಆದ್ದರಿಂದಲೇ ಹೊಟ್ಟೆ ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ ಎಂದು ಹೇಳುವುದು.

ಪ್ರಾಣಿ ಪಕ್ಷಿಗಳು ತಮಗೆ ಮಲಮೂತ್ರ ವಿಸರ್ಜಿಸುವ ಬಯಕೆ ಉಂಟಾದಾಗ ಅವುಗಳು ಎಲ್ಲಿಯೇ ಇದ್ದರೂ ತಕ್ಷಣ ಮಲಮೂತ್ರಗಳನ್ನು ವಿಸರ್ಜಿಸುತ್ತವೆ. ಆದರೆ, ಆಧುನಿಕ ಮನುಷ್ಯರಾದ ನಾವುಗಳು ಮಲಮೂತ್ರ ವಿಸರ್ಜಿಸಲು ಸಮಯ ನಿಗಧಿಪಡಿಸಿಕೊಂಡಿದ್ದೇವೆ. ಇದು ಕೂಡ ನಮ್ಮ ಅನೇಕ ಕಾಯಿಲೆಗಳಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಮಲಬದ್ಧತೆ ಎಂಬ ಕಾಯಿಲೆ ಇಂದು ಅನೇಕರಲ್ಲಿ ಕಂಡುಬರುತ್ತಿದೆ. ಇದೇ ಕಾರಣಕ್ಕೆ ಇಂದು ಪ್ರತಿಯೊಂದು ಮನೆಯಲ್ಲೂ ಒಬ್ಬರು ಇಬ್ಬರು ಬಿಪಿ ಶುಗರ್ ಕಾಯಿಲೆಯಿಂದ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

 ನಿಮ್ಮ ಶರೀರದಲ್ಲಿದೆ ಎರಡನೇ ಮೆದುಳು!

ನಮ್ಮ ಶರೀರದ ತಲೆ ಬುರುಡೆಯಲ್ಲಿ ಒಂದು ಮೆದುಳು ಇದೆ ಎಂದು ಎಲ್ಲರಿಗೂ ಗೊತ್ತು. ನಿಮ್ಮ ಶರೀರದಲ್ಲಿ ಎರಡನೇ ಮೆದುಳು ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು! ನಿಮ್ಮ ಶರೀರದಲ್ಲಿ ಎರಡನೇ ಮೆದುಳು ಇದೆ. ಅದುವೇ ನಿಮ್ಮ ಕರುಳು. ಹೌದು. ನಿಮ್ಮ ಕರುಳು ಎರಡನೇ ಮೆದುಳಾಗಿದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಕರುಳು ಎಂದರೆ ಬಾಯಿಯಿಂದ ಗುದದ್ವಾರದವರೆಗೆ ಇರುವ ಭಾಗ. ಇದು ಹೊಟ್ಟೆ, ಸಣ್ಣ ಕರುಳು ಮತ್ತು ದೊಡ್ಡ ಕರುಳನ್ನು ಒಳಗೊಂಡಿದೆ. ಈ ನಮ್ಮ ಕರುಳು ನಮ್ಮ ತಲೆಯಲ್ಲಿರುವ ಮೆದುಳಿನಂತೆ ಅನೇಕ ಕಾರ್ಯಗಳನ್ನು ಸ್ವತಃ ನಿರ್ವಹಿಸುತ್ತದೆ. ಈ ಕರುಳಿನಲ್ಲಿ ನಮ್ಮ ಮೆದುಳಿನಲ್ಲಿರುವಂತೆ ಮಿಲಿಯನ್ಗಟ್ಟಲೆ ನ್ಯೂರಾನ್ಗಳಿವೆ. ನಾವು ಯಾವುದೇ ಆಹಾರ ಸೇವಿಸಿದಾಗ ಆಹಾರದಲ್ಲಿರುವ ವಿಷಕಾರಿ ಅಂಶ ಮತ್ತು ಬ್ಯಾಕ್ಟೀರಿಯಾವನ್ನು ಗುರುತಿಸಿ ಅವುಗಳನ್ನು ನಿಷ್ಕ್ರೀಯಗೊಳಿಸುವ ಮತ್ತು ದೇಹದಿಂದ ಹೊರ ಹಾಕುವ ಕೆಲಸವನ್ನು ಮಾಡುತ್ತವೆ. ಇದೇ ರೀತಿ ಅನೇಕ ಕೆಲಸಗಳು ನಮ್ಮ ತಲೆಯಲ್ಲಿರುವ ಮೆದುಳಿನ ನಿರ್ದೇಶನವಿಲ್ಲದೆ ನಡೆಯುತ್ತದೆ. ಅದಕ್ಕಾಗಿಯೇ ನಮ್ಮ ಕರುಳನ್ನು ಎರಡನೇ ಮೆದುಳು ಎಂದು ಕರೆಯುವರು. ವೈದ್ಯಲೋಕವು ಇದನ್ನು Enteric Nervous System (ENS) (ಕರುಳಿನ ನರಮಂಡಲ) ಎಂದು ಕರೆದಿದೆ.

ನಮ್ಮ ಕರುಳಿನಲ್ಲಿರುವ ಈ ಅಸಂಖ್ಯಾತ ನ್ಯೂರಾನ್ಗಳು ನಮ್ಮ ತಲೆಯಲ್ಲಿರುವ ಮೆದುಳಿಗೆ ನೇರ ಸಂಪರ್ಕ ಹೊಂದಿವೆ. ಇದೇ ಕಾರಣಕ್ಕೆ ನಮ್ಮ ಹೊಟ್ಟೆ ಸರಿಯಿಲ್ಲವೆಂದರೆ ನಮ್ಮ ಮನಸ್ಸು ಸರಿ ಇರುವುದಿಲ್ಲ. ನಾವು ಉತ್ತಮ ಆಹಾರ ಸೇವಿಸಿದಾಗ ನಮ್ಮ ಮನಸ್ಸು ಸಂತಸಗೊಳ್ಳುತ್ತದೆ. ಇನ್ನೂ ಆಶ್ಚರ್ಯಕರ ವಿಷಯವೆಂದರೆ ನಮಗೆ ಸಂತೋಷ ನೀಡುವ ಹ್ಯಾಪಿ ಹಾರ್ಮೋನ್ ಆದ ಸಿರೊಟೋನಿನ್ ನಮ್ಮ ಈ ಕರುಳಿನಲ್ಲಿಯೇ ಅತಿ ಹೆಚ್ಚು ಉತ್ಪತ್ತಿಯಾಗುತ್ತದೆ.

ಹಾಗೆಯೇ ಮೆದುಳಿನಲ್ಲಿ ಉತ್ಪತ್ತಿಯಾಗುವ ಇತರೆ ಹಾರ್ಮೋನುಗಳು ಈ ಕರುಳಿನಲ್ಲಿಯೂ ಉತ್ಪತ್ತಿಯಾಗುತ್ತವೆ. ನಮ್ಮ ಹೊಟ್ಟೆಗೆ ಯಾವ ಆಹಾರ ಬಂದಿದೆ? ಈ ಆಹಾರ ಜೀರ್ಣಿಸಲು ಯಾವ ಕೆಮಿಕಲ್ಸ್ ಎಷ್ಟು ಪ್ರಮಾಣದಲ್ಲಿ ಬಿಡುಗಡೆ ಮಾಡಬೇಕು? ಕೆಟ್ಟ ಆಹಾರ ಬಂದರೆ ಅದನ್ನು ಹೊಟ್ಟೆಯಿಂದ ವಾಂತಿ ಮೂಲಕ ಅಥವಾ ಲೂಸ್ ಮೋಷನ್ ಮೂಲಕ ಹೊರ ಹಾಕುವುದು. ಹೀಗೆ ಅನೇಕ ನಿರ್ಧಾರಗಳನ್ನು ಸ್ವಯಂ ತೆಗೆದುಕೊಳ್ಳುತ್ತದೆ ಈ ಕರುಳು. ಹಾಗೆಯೇ ಹಸಿವಾಗಿದೆ, ಹೊಟ್ಟೆ ತುಂಬಿದೆ ಎಂಬ ಸಂದೇಶವನ್ನು ತಕ್ಷಣ ಮೆದುಳಿಗೆ ಕಳುಹಿಸುವ ಕೆಲಸವನ್ನು ನಿರ್ವಹಿಸುತ್ತದೆ ಈ ಕರುಳು. ಆ ಮೂಲಕ ತಲೆಯಲ್ಲಿರುವ ಮೆದುಳಿನ ಅನೇಕ ಕೆಲಸಗಳನ್ನು ಸ್ವಯಂ ನಿರ್ವಹಿಸುತ್ತದೆ. ಈ ವಿಶಾಲವಾದ ಕರುಳಿನ ಜಾಲವು ಮೆದುಳಿನ ಸಹಾಯವಿಲ್ಲದೆ ಅನೇಕ ಕೆಲಸಗಳನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿದೆ. ಅದಕ್ಕಾಗಿಯೇ ಇದನ್ನು ಎರಡನೇ ಮೆದುಳು ಎಂದು ಕರೆಯುವರು.

 ಮೆದುಳು ಮತ್ತು ಕರುಳು ನೇರ ಸಂಬಂಧ ಹೊಂದಿವೆ.

ನಮ್ಮ ದೇಹದ ಪ್ರತಿಯೊಂದು ಅಂಗಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಅಂಗ ಅನಾರೋಗ್ಯಕ್ಕೀಡಾದರೆ ಇಡೀ ದೇಹ ತೊಂದರೆಗೆ ಸಿಲುಕುತ್ತದೆ. ಅದೇ ರೀತಿ ನಮ್ಮ ಮೆದುಳು ಮತ್ತು ಕರುಳು ನಿಕಟ ನೇರ ಸಂಬಂಧ ಹೊಂದಿವೆ. ನಮಗೆ ಹಸಿವು ದಾಹ ಉಂಟಾದಾಗ ನಮ್ಮ ಕರುಳು ಮೆದುಳಿಗೆ ಸಂದೇಶ ಕಳಿಸುತ್ತದೆ. ಹಾಗೆಯೇ ನಾವು ಯಾವುದೇ ಆಹಾರ ಸೇವಿಸಿದಾಗ ಆಹಾರದ ಸಂಪೂರ್ಣ ಮಾಹಿತಿಯನ್ನು ಮೆದುಳಿಗೆ ರವಾನಿಸುತ್ತದೆ. ಆಗಲೇ ನಮ್ಮ ಹೊಟ್ಟೆಯಲ್ಲಿ ಆಹಾರವನ್ನು ಜೀರ್ಣಗೊಳಿಸಲು ವಿವಿಧ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ. ಕೆಟ್ಟ ಆಹಾರವನ್ನು ದೇಹದಿಂದ ಹೊರ ಹಾಕಲು ವಾಂತಿ ಭೇದಿ ಉಂಟಾಗುತ್ತದೆ. ಈ ಎಲ್ಲಾ ಕಾರ್ಯಗಳು ಮೆದುಳು ಮತ್ತು ಕರುಳಿನ ನಿಕಟ ನೇರ ಸಂಬಂಧದಿಂದ ಮಾತ್ರ ಸಾಧ್ಯ.

 ಹ್ಯಾಪಿ ಹಾರ್ಮೋನ್ ಆದ ಸಿರೊಟೋನಿನ್ ಕರುಳಿನಲ್ಲಿಯೇ ಅಧಿಕವಾಗಿ ಉತ್ಪತ್ತಿಯಾಗುತ್ತದೆ.

ಸಿರೊಟೋನಿನ್ ಎಂಬುದು ನಮಗೆ ಸಂತೋಷ ನೀಡುವ ಹಾರ್ಮೋನ್ ಆಗಿದೆ. ಇದು ನಮ್ಮ ಮನಸ್ಸು, ನಿದ್ರೆ, ಹಸಿವು ಮತ್ತು ಲೈಂಗಿಕತೆಯನ್ನು ನಿಯಂತ್ರಿಸುತ್ತದೆ. ಈ ಸಿರೊಟೋನಿನ್ ಅಧಿಕ ಉತ್ಪತ್ತಿಯಾದಾಗ ನಿಮ್ಮ ಮನಸ್ಸು ಪ್ರಸನ್ನವಾಗಿರುತ್ತದೆ. ಈ ಸಿರೊಟೋನಿನ್ ಕಡಿಮೆ ಉತ್ಪತ್ತಿಯಾದರೆ ಖಿನ್ನತೆ ನಿಮ್ಮನ್ನು ಆವರಿಸುತ್ತದೆ. ಮಾನಸಿಕ ಖಿನ್ನತೆಗೆ ಪ್ರಮುಖ ಕಾರಣವೇ ಈ ಸಿರೊಟೋನಿನ್ ಕಡಿಮೆ ಉತ್ಪಾದನೆ. ನಿಮಗೆ ನಿದ್ರೆ ಸರಿಯಾಗಿ ಬರುತ್ತಿಲ್ಲವೆಂದರೂ ಈ ಸಿರೊಟೋನಿನ್ ಪ್ರಮುಖ ಕಾರಣವಾಗಿದೆ. ಹೀಗೆ ಖಿನ್ನತೆ, ಆತಂಕ, ನಿದ್ರಾಹೀನತೆ, ಲೈಂಗಿಕತೆಗಳಲ್ಲಿ ಈ ಸಿರೊಟೋನಿನ್ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ ಇದನ್ನು ಹ್ಯಾಪಿ ಹಾರ್ಮೋನ್ ಎಂದು ಕರೆಯಲಾಗುತ್ತದೆ.

ಈ ಹಾರ್ಮೋನು ಶೇಕಡ 90ರಷ್ಟು ನಿಮ್ಮ ಎರಡನೇ ಮೆದುಳಾದ ಕರುಳಿನಲ್ಲಿಯೇ ಉತ್ಪತ್ತಿಯಾಗುತ್ತದೆ. ಇಷ್ಟೆಲ್ಲ ಕೆಲಸಗಳನ್ನು ನಿರ್ವಹಿಸುವ ನಮ್ಮ ಎರಡನೇ ಮೆದುಳು ತಲೆಯಲ್ಲಿರುವ ಮೆದುಳಿನಂತೆ ಯೋಚಿಸುವ ನಿರ್ಧಾರ ಮಾಡುವ ಜ್ಞಾನ ಸಂಪಾದಿಸುವ, ನೆನಪಿನಲ್ಲಿಟ್ಟುಕೊಳ್ಳುವ ಕೆಲಸಗಳನ್ನು ನಿರ್ವಹಿಸುವುದಿಲ್ಲ. ಆದರೂ ಈ ಅದ್ಭುತ ಕರುಳಿನ ವ್ಯವಸ್ಥೆಯು ಅನೇಕ ಕ್ಲಿಷ್ಟಕರ ಕೆಲಸಗಳನ್ನು ಸ್ವತಃ ಮಾಡುತ್ತದೆ. ಹಾಗೆಯೇ ಇತರೆ ಕೆಲಸಗಳನ್ನು ಮೆದುಳಿನ ನೇರ ಸಂಪರ್ಕದ ಮೂಲಕ ನಿರ್ವಹಿಸುತ್ತದೆ. ಆ ಮೂಲಕ ತಲೆ ಬುರುಡೆಯಲ್ಲಿರುವ ಮೆದುಳಿನ ಅಧಿಕ ಕೆಲಸದ ಒತ್ತಡವನ್ನು ಕಡಿಮೆಗೊಳಿಸಿದೆ ಎಂದು ಹೇಳಬಹುದು. ಇದುವರೆವಿಗೂ ಈ ಎರಡನೇ ಮೆದುಳಿನ ಬಗ್ಗೆ ವೈದ್ಯಲೋಕವು ತಿಳಿದಿರುವುದು ಅತ್ಯಲ್ಪವಷ್ಟೇ. ತಿಳಿಯಬೇಕಿರುವುದು ಬೆಟ್ಟದಷ್ಟಿದೆ ಎನ್ನಬಹುದು.

 ನಮ್ಮ ಕರುಳಿನಲ್ಲಿ ಅಸಂಖ್ಯ ಟ್ರಿಲಿಯನ್ಗಟ್ಟಲೆ ಸೂಕ್ಷ ಜೀವಿಗಳು ವಾಸಿಸುತ್ತಿವೆ.

ನಮ್ಮ ದೇಹದ ಒಳಗೆ ಟ್ರಿಲಿಯನ್ಗಟ್ಟಲೆ ಸೂಕ್ಷ್ಮಜೀವಿಗಳು ವಾಸಿಸುತ್ತಿವೆ. ಹಾಗೆಯೇ ಅತೀ ಹೆಚ್ಚ ಸೂಕ್ಷ್ಮ ಜೀವಿಗಳು ನಮ್ಮ ಕರುಳಿನಲ್ಲಿ ಕಂಡುಬರುತ್ತವೆ. ಅವುಗಳನ್ನು ಗಟ್ ಮೈಕ್ರೋ ಬಯೋಮ್ ಎಂದು ಕರೆಯಲಾಗುತ್ತದೆ. ಹಾಗೆಯೇ ನಮ್ಮ ಕರುಳಿನಲ್ಲಿ ಅನೇಕ ಬ್ಯಾಕ್ಟೀರಿಯಾಗಳು ವಾಸಿಸುತ್ತಿವೆ. ಈ ಬ್ಯಾಕ್ಟೀರಿಯಾಗಳು ನಾವು ಸೇವಿಸಿದ ಆಹಾರವನ್ನು ವಿಭಜಿಸಿ ತಾವು ಸೇವಿಸುವುದಲ್ಲದೆ ನಮ್ಮ ಆಹಾರ ಜೀರ್ಣಗೊಳ್ಳಲು ಮತ್ತು ಆಹಾರದಲ್ಲಿನ ಪೋಷಕಾಂಶಗಳು ನಮ್ಮ ದೇಹ ಸೇರಲು ಸಹಾಯ ಮಾಡುತ್ತವೆ. ಈ ಬ್ಯಾಕ್ಟೀರಿಯಾಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳೆಂದು ಎರಡು ವಿಧಗಳಿವೆ. ಒಳ್ಳೆಯ ಬ್ಯಾಕ್ಟೀರಿಯಗಳು ನಮ್ಮ ಆರೋಗ್ಯವನ್ನು ಕಾಪಾಡಿದರೆ, ಕೆಟ್ಟ ಬ್ಯಾಕ್ಟೀರಿಯಾಗಳು ನಮಗೆ ಅನಾರೋಗ್ಯವನ್ನುಂಟು ಮಾಡುತ್ತವೆ. ಈ ಒಳ್ಳೆಯ ಬ್ಯಾಕ್ಟೀರಿಯಗಳು ನಾವು ಸೇವಿಸುವ ಉತ್ತಮ ಆಹಾರಗಳಿಂದ ದೊರೆಯುತ್ತವೆ. ಅವುಗಳಲ್ಲಿ ಮೊಸರು ಮಜ್ಜಿಗೆ ಫರ್ಮೆಂಟೆಡ್ ಫುಡ್ಗಳಾದ ಇಡ್ಲಿ ದೋಸೆಗಳಿಂದಲೂ ಒಳ್ಳೆಯ ಬ್ಯಾಕ್ಟೀರಿಯಗಳು ದೊರೆಯುತ್ತವೆ.

ಇವುಗಳ ಉಪಯೋಗದಿಂದ ನಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳು ಅಧಿಕಗೊಂಡು ಆರೋಗ್ಯ ಕಾಪಾಡುತ್ತವೆ. ಒಂದು ವೇಳೆ ನಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳು ಕಡಿಮೆಗೊಂಡು, ಕೆಟ್ಟ ಬ್ಯಾಕ್ಟೀರಿಯಾಗಳು ಅಧಿಕಗೊಂಡರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ನಾವು ಸೇವಿಸುವ ಕೆಟ್ಟ ಆಹಾರದಿಂದಲೇ ಕೆಟ್ಟ ಬ್ಯಾಕ್ಟೀರಿಯಾಗಳು ಅಧಿಕಗೊಳ್ಳುತ್ತವೆ. ಅಂದರೆ ಪ್ರೊಸೆಸ್ಡ್ ಫುಡ್, ಪ್ಯಾಕ್ಡ್ ಫುಡ್, ಫಾಸ್ಟ್ ಫುಡ್, ಸಕ್ಕರೆ, ಮೈದಾ, ಎಣ್ಣೆಯಲ್ಲಿ ಕರಿದ ಆಹಾರ ಮತ್ತು ಅನವಶ್ಯಕ ಅಧಿಕ ಔಷಧಿಗಳ ಬಳಕೆಯಿಂದಲೂ ಈ ಕೆಟ್ಟ ಬ್ಯಾಕ್ಟೀರಿಯಗಳು ಅಧಿಕಗೊಂಡು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ.

ಆದ್ದರಿಂದ, ಈ ಆಹಾರಗಳಿಂದ ದೂರ ಇರಬೇಕು. ನಿಮ್ಮ ಸುಖ ದುಃಖಕ್ಕೆ ಕಾರಣ ನಿಮ್ಮ ಹೊಟ್ಟೆ. ನಿಮ್ಮ ಹೊಟ್ಟೆ ಸರಿ ಇದ್ದಾಗ ನಿಮ್ಮ ಮನಸ್ಸು ಸರಿ ಇರುತ್ತದೆ. ನಿಮ್ಮ ಹೊಟ್ಟೆ ಸರಿ ಇದ್ದರೆ ನೀವು ಎಂತಹುದೇ ಪರಿಸ್ಥಿತಿಯನ್ನು ಎದುರಿಸುತ್ತೀರಿ. ನಿಮ್ಮ ಅನೇಕ ಮಾನಸಿಕ ಸಮಸ್ಯೆಗೆ ಮೂಲ ಕಾರಣ ನಿಮ್ಮ ಕರುಳು. ನಿಮ್ಮ ಹೊಟ್ಟೆ ಸರಿ ಇದ್ದಾಗ ನಿಮ್ಮ ಮೆದುಳು ಉತ್ತಮ ರೀತಿಯಲ್ಲಿ ಕೆಲಸ ಮಾಡಬಲ್ಲದು. ಆದ್ದರಿಂದ, ನಿಮ್ಮ ಕರುಳಿನ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ.

 ಕರುಳಿನ ಆರೋಗ್ಯಕ್ಕಾಗಿ ಏನು ಮಾಡಬೇಕು?

ಆಹಾರ ಪದ್ಧತಿಗಳು, ಕೆಲ ಚಿಕಿತ್ಸಾ ಪದ್ಧತಿಗಳು ಮತ್ತು ಜೀವನಶೈಲಿಯ ಆಯ್ಕೆಗಳು ಕರುಳಿನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಸರಿಯಾದ ಆಹಾರವನ್ನು ಸೇವಿಸುವ ಮೂಲಕ ನಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಬಹುದು. ನಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಲು ನಮ್ಮ ಆಹಾರ ಕ್ರಮ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಅತೀ ಮುಖ್ಯವಾಗಿದೆ.

Also Read: ಸಂಪೂರ್ಣ ರೋಗಮುಕ್ತರಾಗಲು ಏನು ಮಾಡಬೇಕು?100% ಆರೋಗ್ಯ ಜೀವನ – Vydyaloka

ಸೂರ್ಯಕಾಂತ ಎಸ್
ನಂ.261, 9ನೇ ಮುಖ್ಯರಸ್ತೆ, ಶ್ರೀನಿ ವಾಸ ನಗರ
ಬೆಂಗಳೂರು-560050, ಮೊ: 9916022679

https://www.facebook.com

Share this: