ಕಣ್ಣಿನ ಸೋಂಕನ್ನು ತಡೆಯಿರಿ. ಏಕೆಂದರೆ ಕೋವಿಡ್ ಕಣ್ಣುಗಳ ಮೂಲಕವೂ ನಮ್ಮ ದೇಹವನ್ನು ಪ್ರವೇಶಿಸಬಹುದು. ಕಣ್ಣಿನ ಆರೈಕೆ ಸರಿಯಾಗಿ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಆಗಾಗ ಕೈ ತೊಳೆಯುವುದು ಹಾಗೂ ಕಣ್ಣನ್ನು ಪದೇಪದೇ ಮುಟ್ಟಿಕೊಳ್ಳದೇ ಇರುವುದು ಯಾವುದೇ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಕಣ್ಣಿನ ಸೋಂಕುಗಳನ್ನು ತಡೆಯಿರಿ:
ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸರಿಯಾದ ಕಣ್ಣಿನ ಆರೈಕೆಯು ನಮ್ಮ ಆದ್ಯತೆಯಾಗಬೇಕು. ಇದು ಕಾಂಜಂಕ್ಷಿವಿಟೀಸ್, ಡ್ರೈ ಐ, ಕಾರ್ನಿಯಲ್ ಹುಣ್ಣುಗಳಂತಹ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ ಶಾಶ್ವತ ಕುರುಡುತನಕ್ಕೆ ಕಾರಣವಾಗಬಹುದು. ಕೋವಿಡ್ ಸಾಂಕ್ರಾಮಿಕದ ಮಧ್ಯೆ ಕಣ್ಣುಗಳೂ ವಿವಿಧ ಸಾಂಕ್ರಾಮಿಕಗಳಿಗೆ ತುತ್ತಾಗುತ್ತವೆ. ಆದ್ದರಿಂದ ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟೆನ್ಸ್) ಹಾಗೂ ವಯಕ್ತಿಕ ನೈರ್ಮಲ್ಯದ ಕಡೆ ಗಮನ ನೀಡುವುದು ಯಾವುದೇ ರೀತಿಯ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. (ಕೊರೊನಾ ವೈರಸ್ ಕಣ್ಣುಗಳ ಮೂಲಕ ಹರಡುತ್ತವೆ ಎನ್ನುವುದು ಇನ್ನೂ ಸಾಬೀತಾಗಿಲ್ಲ, ಆದರೂ ಮುನ್ನೆಚ್ಚರಿಕೆಗಳು ಅಗತ್ಯ).
1. ಆಗಾಗ ಕೈ ತೊಳೆಯುವುದು ಹಾಗೂ ಕಣ್ಣಿನ ಸಂಪರ್ಕವನ್ನು ತಪ್ಪಿಸುವುದು ಯಾವುದೇ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
2. ನಮ್ಮ ಬೆರಳುಗಳಲ್ಲಿ ಹೆಚ್ಚಾಗಿ ಸೂಕ್ಷ್ಮಜೀವಿಗಳಿಂದ ಆವೃತವಾಗಿ ಇರುವುದರಿಂದ ಕಣ್ಣುಗಳನ್ನು ಉಜ್ಜುವುದನ್ನು ತಪ್ಪಿಸಿ.
3. ಹೊರಗಿನಿಂದ ಮನೆಯೊಳಗೆ ಬಂದ ತಕ್ಷಣ ತಣ್ಣೀರಿನಿಂದ ಕಣ್ಣುಗಳನ್ನು ತೊಳೆಯಿರಿ.
4. ಕಣ್ಣುಗಳನ್ನು ಉಜ್ಜಬೇಡಿ. ಉಜ್ಜುವುದರಿಂದ ಕಣ್ಣುಗಳು ಒಣಗುತ್ತವೆ ಹಾಗೂ ತುರಿಕೆ ಉಲ್ಭಣಗೊಳ್ಳುತ್ತವೆ.
5. ಕನ್ನಡಕಗಳನ್ನು ಆಗಾಗ ಸ್ವಚ್ಛಗೊಳಿಸುತ್ತಾ ಬಳಸುವುದರಿಂದ ಶಿಲೀಂದ್ರಗಳ ಬೆಳವಣಿಗೆ ತಪ್ಪಿಸಬಹುದು.
6. ನಿಮ್ಮ ಕನ್ನಡಕಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ ಮತ್ತು ಬಳಕೆಯ ಮೊದಲು ಅಥವಾ ನಂತರ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸಿರಿ.
7. ಕನ್ನಡಕದ ಬದಲು ಕಾಂಟಾಕ್ಟ್ ಲೆನ್ಸ್ ಬಳಸುವುದು ಉತ್ತಮ. ಇದಕ್ಕೆ ಯಾವುದೇ ಸಾಬೀತಾದ ಪುರಾವೆಗಳು ಇಲ್ಲದಿದ್ದರೂ ಸಹಾ ಕನ್ನಡಕವು ಹೆಚ್ಚುವರಿ ರಕ್ಷಣೆಯ ಪದರವನ್ನು ಒದಗಿಸಬಹುದು.
ವಯಸ್ಸಾದವರಿಗೆ ಹೆಚ್ಚಿನ ಕಾಳಜಿ:
ವಯಸ್ಸಾದವರಿಗೆ ಕಡಿಮೆ ನಿರೋಧಕ ಶಕ್ತಿ ಇರುವುದರಿಂದ ಅವರು ಬೇಗನೆ ಸೋಂಕಿಗೆ ಒಳಗಾಗುತ್ತಾರೆ. ವಿಶೇಷವಾಗಿ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕಣ್ಣಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ. ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ರಕ್ತದೊತ್ತಡದ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಸೂಚಿಸಲಾಗುತ್ತದೆ. ಏಕೆಂದರೆ ಇದು ಹೆಚ್ಚಿನ ಇಂಟ್ರಾಕ್ಯುಲರ್ ಒತ್ತಡಕ್ಕೆ (ಐಒಪಿ) ಕಾರಣವಾಗಬಹುದು ಮತ್ತು ಇದು ದೃಷ್ಟಿ ಸಮಸ್ಯೆಯನ್ನು ಶಾಶ್ವತವಾಗಿ ಉಂಟುಮಾಡಬಹುದು. ವಿಶೇಷವಾಗಿ ಮಧುಮೇಹ ರೋಗಗಳಲ್ಲಿ ಹೆಚ್ಚಿನ ಕಾಳಜಿಯು ಕಣ್ಣಿನ ಗಂಭೀರ ಕಾಯಿಲೆಗಳನ್ನು ತಡೆಯುತ್ತದೆ.
ಸಮತೋಲಿತ ಆಹಾರ ಕ್ರಮ:
ಸಮತೋಲಿತ ಆಹಾರ ಕ್ರಮವನ್ನು ಪಾಲಿಸುವುದು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ದೇಹಕ್ಕೆ ಮತ್ತು ಕಣ್ಣಿಗೆ ಪೋಷಕಾಂಶಗಳನ್ನು ನೀಡುವ ಆಹಾರಗಳನ್ನು ಪ್ರತಿದಿನವೂ ಸೇವಿಸುವುದು ಉತ್ತಮ. ಲಾಕ್ ಡೌನ್ ಸಮಯದಲ್ಲಿ ನಿರ್ಣಾಯಕ ಔಷಧಿಗಳ ಕೊರತೆಯನ್ನು ತಪ್ಪಿಸಲು ವಿಶೇಷವಾಗಿ ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಹಾಗೂ ಇತರ ಯಾವುದೇ ಗಂಭೀರ ಕಣ್ಣಿನ ಕಾಯಿಲೆಗಳಿಗೆ ಔಷಧಿಗಳನ್ನು ದಾಸ್ತಾನು ಇಡಲು ಸೂಚಿಸಲಾಗುತ್ತದೆ. ಹಾಗಾಗಿ ರೋಗಿಗಳು ದಿಗಿಲು ಬೀಳುವ ಅಗತ್ಯವಿಲ್ಲ.
ಡಾ. ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು-10, ದೂ: 080-23373311/66121300
Email : info@narayananethralaya.com ; info@nnmail.org
Website : www.narayananethralaya.org