Vydyaloka

ಕಣ್ಣಿನ ಆರೋಗ್ಯಕ್ಕೆ ಆಯುರ್ವೇದ ಸೂತ್ರಗಳು

ಕಣ್ಣಿನ ಆರೋಗ್ಯ ರಕ್ಷಿಸಿ ಪೋಷಿಸುವುದು ಬಹಳ ಅವಶ್ಯಕ. ಅಕ್ಟೋಬರ್ 8 ವಿಶ್ವ  ದೃಷ್ಟಿ ದಿನ. ಕಣ್ಣುಗಳು ಮಾನವನಿಗೆ ಪ್ರಮುಖವಾದ ಇಂದ್ರಿಯ ಅಥವಾ ಅಂಗ. ಹೊರ ಜಗತ್ತನ್ನು ನೋಡಿ ಆನಂದಿಸಲು ಇರುವ ಪ್ರಮುಖ ಸಾಧನ ನಯನ ಅಥವಾ ಕಣ್ಣುಗಳು.

ಕಣ್ಣುಗಳು ಬಹಳ ಸೂಕ್ಷವಾದ ಅಂಗಗಳು. ಇವುಗಳನ್ನು ರಕ್ಷಿಸಿ ಪೋಷಿಸುವುದು ಬಹಳ ಅವಶ್ಯಕ. ಬದಲಾದ ಜೀವನಶೈಲಿ, ಆಹಾರ ಮತ್ತು ವಾತಾವರಣದಲ್ಲಿನ ಪ್ರದೂಷಣೆ ಕಣ್ಣಿನ ಆರೋಗ್ಯವನ್ನು ನಾಶಗೊಳಿಸುತ್ತದೆ. ಆಯುರ್ವೇದ ಕಣ್ಣುಗಳಿಗೆ ಮಹತ್ವವನ್ನು ನೀಡುತ್ತಾ “ ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ” ಅಂದರೆ ಎಲ್ಲ ಇಂದ್ರಿಯಗಳಲ್ಲಿ ಕಣ್ಣು ಪ್ರಧಾನವಾದದ್ದು ಎಂದು ಅರ್ಥ. ಕಣ್ಣಿನ ಮಹತ್ವ, ಇದರ ರೋಗ ಮತ್ತು ಚಿಕಿತ್ಸೆಯ, ವಿಶೇಷ ಆರೈಕೆಯ ವಿಧಾನವನ್ನು ಶಾಲಾಕ್ಯ ತಂತ್ರ ಎಂಬ ಪ್ರತ್ಯೇಕ ವಿಭಾಗದಲ್ಲಿ ಉಲ್ಲೇಖಿಸಲಾಗಿದೆ.

ಕಣ್ಣಿನ ಆರೋಗ್ಯಕ್ಕೆ ಸುಲಭ ಸೂತ್ರಗಳು

• ನೀರಿನಿಂದ ಶುದ್ದಿಗೊಳಿಸುವುದು: ಬೆಳಿಗ್ಗೆ ಎದ್ದ ಕೂಡಲೆ ಮುಖ ತೊಳೆಯುವಾಗ, ಬಾಯಲ್ಲಿ ನೀರನ್ನು ತುಂಬಿಸಿಕೊಂಡು ಕಣ್ಣುಗಳಿಗೆ ನೀರನ್ನು ಸಿಂಪಡಿಸುವುದರಿಂದ ಕಣ್ಣುಗಳು ಶುದ್ದ ಹಾಗೂ ಫ್ರೆಶ್ ಆಗುತ್ತದೆ. ಆದರೆ ಅತಿಯಾದ ಶೀತ ಮತ್ತು ಬಿಸಿನೀರಿನಿಂದ ಕಣ್ಣನ್ನು ಶುದ್ದಮಾಡಬಾರದು.

• ಸೂರ್ಯನನ್ನು ನೋಡುವುದು: ಸೂರ್ಯೋದಯವಾಗುವ ಸಮಯದಲ್ಲಿ ಸೂರ್ಯನನ್ನು ನೋಡುವುದರಿಂದ ದೃಷ್ಥಿ ಉತ್ತಮವಾಗುತ್ತದೆ. ಅಲ್ಲದೆ ಮೂರನೆ ಕಣ್ಣು ಎಂದು ತಿಳಿಸುವ ಪೀನಲ್ ಗ್ರಂಥಿಯು ಪ್ರಚುರವಾಗುತ್ತದೆ. ಸೂರ್ಯನ ತೀಕ್ಷ್ಣ ಕಿರಣಗಳನ್ನು ನೋಡಬಾರದು.

• ತ್ರಾಟಕ ಕ್ರಿಯೆ: ಕಣ್ಣಿನ ತೊಂದರೆಗಳನ್ನು ನಿವಾರಿಸಲು ಬಹು ಉಪಕಾರಿ. ಕಣ್ಣುಗಳನ್ನು ಮಿಟುಕಿಸದೆ ಕತ್ತಲೆ ಕೋಣೆಯಲ್ಲಿ ತುಪ್ಪದ ದೀಪದ ಜ್ಯೋತಿಯನ್ನು 2-3 ನಿಮಿಷ ಸತತವಾಗಿ ನೋಡುವುದರಿಂದ ದೃಷ್ಟಿಯ ಶಕ್ತಿ ಮತ್ತುಕಣ್ಣಿನ ಕಾಂತಿ ಹೆಚ್ಚುವುದು.

• ಪಾದಾಭ್ಯಂಜನ: ಪಾದಗಳನ್ನು ಗಿಡಮೂಲಿಕೆಯುಕ್ತವಾದ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಹಚ್ಚಿ, ಮೃದುವಾಗಿ ಅಭ್ಯಂಜನ ಮಾಡುವುದರಿಂದ ರಕ್ತಸಂಚಾರ ಹೆಚ್ಚಾಗಿ, ದೃಷ್ಠಿಯ, ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿ ಉತ್ತಮಗೊಳ್ಳುತ್ತದೆ. ಅಭ್ಯಂಜನದಿಂದ ಪಾದಗಳಲ್ಲಿನ ದೃಷ್ಟಿಗೆ ಸಂಬಂದಿಸಿದ ಕೆಲವು ನಿರ್ದಿಷ್ಠ ಬಿಂದುಗಳನ್ನು ಪ್ರಚುರವಾಗುತ್ತದೆ. ಆದ್ರೆ ಜ್ವರ, ಶೀತ, ನೆಗಡಿ ಇದ್ದಾಗ ಮಾಡಬಾರದು.

• ಕಣ್ಣಿಗೆ ಆಯುರ್ವೇದ ವಿಶೇಷ ಚಿಕಿತ್ಸೆಗಳು: ಅಕ್ಷಿ ತರ್ಪಣ, ಕ್ರಿಯಾ ಕಲ್ಪ ಚಿಕಿತ್ಸೆಗಳು, ನಶ್ಯ ಕರ್ಮ ಬಹು ಉಪಯೋಗಿ – ಆದರೆ ಆಯುರ್ವೇದ ವೈದ್ಯರ ನಿರ್ದೇಶನದ ಮೇಲೆ ಚಿಕಿತ್ಸೆ ಪಡೆಯಬೇಕು.

ಕಣ್ಣಿನ ರೋಗಗಳಿಗೆ ಸಾಮಾನ್ಯ ಕಾರಣಗಳು

• ಬದಲಾದ ಜೀವನ ಪದ್ದತಿ
• ಪೋಷಕಾಂಶಗಳ ಕೊರತೆ
• ದುರಭ್ಯಾಸಗಳು
• ಕೊಬ್ಬು, ಜಿಡ್ಡಿನ ಅತಿಯಾದ ಸೇವನೆ
• ಝಂಕ್ ಆಹಾರಗಳು
• ಅತಿಯಾದ ಮಾನಸಿಕ ಒತ್ತಡ
• ಟಿ.ವಿ , ಮೊಬೈಲ್ ಮತ್ತು ಕಂಪ್ಯುಟರನ ಅತಿಯಾದ ವೀಕ್ಷಣೆ
• ನಿದ್ರಾಹೀನತೆ
• ಮಧುಮೇಹ, ರಕ್ತದೊತ್ತಡ, ರೆಟಿನೋಪತಿ, ಕಂಪ್ಯುಟರ್ ಸಿಂಡ್ರೋಮ್ ನಂತಹ ರೋಗಗಳು.

ನೈಸರ್ಗಿಕವಾಗಿ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುವ ವಿಧಾನಗಳು

• ಕೆಲವೊಂದು ಯೋಗ ಅಥವಾ ಕಣ್ಣಿನ ವ್ಯಾಯಾಮಗಳು- ಸುಖಾಸನದಲ್ಲಿ ಕುಳಿತು ಕಣ್ಣಿನ ಗುಡ್ಡೆಯನ್ನು ಮೇಲೆ ಕೆಳಗೆ, ಎಡ-ಬಲ, ಹೀಗೆ ಪುನರಾವರ್ತಿತವಾಗಿ ಬಹಳಷ್ಟು ಸಲ ಮಾಡಬೇಕು.
2 ನಿಮಿಷ ವಿಶ್ರಾಂತಿ-ಕಂಪ್ಯುಟರ್ ನಲ್ಲಿ ಸತತವಾಗಿ ಕೆಲಸ ಮಾಡುವಾಗ 2 ನಿಮಿಷ ವಿಶ್ರಾಂತಿ ಪಡೆದು, ದೂರದ ವಸ್ತುವನ್ನು ನೋಡಿ ಮತ್ತೆ ಹತ್ತಿರದ ವಸ್ತುವನ್ನು ಒಂದರ ನಂತರ ಒಂದಂತೆ ನೋಡುವುದರಿಂದ ಕಣ್ಣಿಗೆ ಆಗುವ ಒತ್ತಡ ನಿವಾರಣೆಯಾಗುತ್ತದೆ.
• ಕಣ್ಣು ಮಿಟುಕಿಸುವುದು- ಸರಿಯಾಗಿ ಕಣ್ಣನ್ನು ಮಿಟುಕಿಸುವುದರಿಂದ ಕಣ್ಣಿನ ಒತ್ತಡ ಕಡಿಮೆಯಾಗಿ ಕಣ್ಣುಗಳು ಆರಾಮವಾಗುತ್ತದೆ. ಸುಖಾಸನದಲ್ಲಿ ಕುಳಿತು 10 ಸೆಕೆಂಡ್ ಕಣ್ಣು ಮಿಟುಕಿಸಿ, ನಂತರ ಕಣ್ಣು ಮುಚ್ಚಿ 20 ಸೆಕೆಂಡ್ ವಿಶ್ರಾಂತಿ ಪಡೆಯಬೇಕು.

ಕೆಲವು ಮನೆಮದ್ದುಗಳು

• 2 ಹನಿ ಅರಳೆಣ್ಣೆಯನ್ನು ಎರಡು ಕಣ್ಣುಗಳಿಗೆ ಮಲಗುವಾಗಿ ಹಾಕಿಕೊಳ್ಳುವುದರಿಂದ ಕಣ್ಣಿನ ಕಾರ್ಯಕ್ಷಮತೆ ಹೆಚ್ಚುತ್ತದೆ. (ಪ್ರಿಸರ್ವೇಟಿವ್ ಇಲ್ಲದ ಒಳ್ಳೆಯ ಎಣ್ಣೆಯನ್ನು ಬಳಸಬೇಕು)
• ಸಣ್ಣ ಹತ್ತಿಯ ಉಂಡೆಯನ್ನು ಮೇಕೆಯ ಹಾಲಿನಲ್ಲಿ ಅದ್ದಿ, ಕಣ್ಣುಗಳ ಮೇಲೆ ಇರಿಸುವುದರಿಂದ ಕಣ್ಣಿನ ಒತ್ತಡ ನಿವಾರಣೆಯಾಗುತ್ತದೆ ಮತ್ತು ಹಿತಕರ ಅನುಭವ ನೀಡುತ್ತದೆ.
• ಕಣ್ಣಿನ ಮೇಲೆ ಹೆಚ್ಚಿದ ಸೌತೇಕಾಯಿ ತುಂಡುಗಳನ್ನು ಇಡುವುದರಿಂದ ಕಣ್ಣಿಗಾಗುವ ಕಿರಿಕಿರಿ, ಉರಿ ಊತ ಕಡಿಮೆಯಾಗುವುದು, ನೀರಿನಾಂಶ ಸಿಗುವುದರಿಂದ ಒಣ ಕಣ್ಣಿನ ಸಮಸ್ಯೆ ನಿವಾರಣೆಯಾಗುವುದು
• ಕಣ್ಣಿನ ಸುತ್ತ ಒಣ ಚರ್ಮ, ಕಪ್ಪು ಕಲೆ ಇದ್ದರೆ ಬಾದಾಮಿ ಎಣ್ಣೆಯಿಂದ ಅಭ್ಯಂಜನ ಮಾಡುವುದರಿಂದ ನಿವಾರಣೆಯಾಗುತ್ತದೆ.

ಇವುಗಳನ್ನು ನಿಶೇದಿಸಬೇಕು

• ಅತೀ ಹೆಚ್ಚು ಖಾರ, ಉಪ್ಪಿನ ಪದಾರ್ಥ
• ಕಾರ್ಬೊನೇಟೆಡ್ ಪಾನೀಯ
• ಅತಿಯಾದ ಬಿಸಿನೀರಿನ ಸ್ನಾನ
• ರಾತ್ರಿ ಜಾಗರಣೆ, ಹಗಲಲ್ಲಿ ನಿದ್ರಿಸುವುದು
• ತುಂಬಾ ಎತ್ತರದ ಅಥ್ವಾ ಸಣ್ಣ ತಲೆದಿಂಬಿನ ಬಳಕೆ
• ಅತಿಯಾದ ದುಃಖ, ಕೋಪ, ಅಳು
• ಕಲುಷಿತ ಗಾಳಿಯಲ್ಲಿ ವಿಹರಿಸುವುದು
• ಧೂಮಪಾನ, ಮದ್ಯಪಾನ, ತಂಬಾಕು
• ಟಿ.ವಿ, ಕಂಪ್ಯುಟರ್, ಮೊಬೈಲ್ನ್ ಅತಿಯಾದ ಬಳಕೆ

ಕಣ್ಣಿನ ಆರೋಗ್ಯಕ್ಕೆ ಹಿತಕರ ಆಹಾರ

• ವಿಟಮಿನ್ ಎ ಯುಕ್ತ ಹಣ್ಣು ತರಕಾರಿಯ ಸೇವನೆ, ಉದಾ- ಕ್ಯಾರೆಟ್, ಖರ್ಜೂರ, ಬೀಟ್ರೂಟ್, ಎಲೆಕೋಸು
• ಬಸಳೆ ಸೊಪ್ಪು, ಪಾಲಕ್ ಸೊಪ್ಪು, ಹೊನಗೊನ್ನೆ ಸೊಪ್ಪು
• ಬಾದಾಮಿ, ನೆಲ್ಲಿಕಾಯಿ, ಕೆಂಪು ಅಕ್ಕಿ, ಗೋಧಿ, ಬಾರ್ಲಿ,
• ತ್ರಿಫಲ, ಸೋಂಪು
• ಶುದ್ದವಾದ ನೀರು, ಹಾಲು, ದಾಳಿಂಬೆ
• ಕಲ್ಲುಪ್ಪು ಹೆಸರು ಕಾಳು, ಹೆಸರು ಬೇಳೆ
• ಸರಿಯಾದ ನಿದ್ದೆ
ಹೀಗೆ ಆಯುರ್ವೇದದಲ್ಲಿ ಹೇಳಿರುವ ದಿನಚರಿ, ಋತುಚರಿ ಪಾಲಿಸುವುದರಿಂದ, ಕೆಲವು ವಿಶೇಷ ನೇತ್ರ ಚಿಕಿತ್ಸೆಗಳನ್ನು ಪಡೆಯುವುದರಿಂದ ಕಣ್ಣಿನ ರೋಗ ತಡೆಯಬಹುದು, ಉತ್ತಮ ದೃಷ್ಠಿಯನ್ನು ಹಲವು ವರ್ಷಗಳ ಕಾಲ ಉಳಿಸಿಕೊಳ್ಳಬಹುದು.

ಡಾ. ಮಹೇಶ್ ಶರ್ಮಾ. ಎಂ
ಆಯುರ್ವೇದ ವೈದ್ಯರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಮೈಸೂರು ರಸ್ತೆ, ಬೆಂಗಳೂರು
Mob: 99640 22654

Share this: