Vydyaloka

ಕಾಲ್ಗೆಜ್ಜೆ – ಪಾಸಿಟಿವ್ ಎನರ್ಜಿ ಸೃಷ್ಟಿಸುವ ಗೆಜ್ಜೆ ಸದ್ದು !

ಕಾಲ್ಗೆಜ್ಜೆ ಹೆಣ್ಣಿನ ಹನ್ನೆರಡು ಅಲಂಕಾರಗಳಲ್ಲಿ ಒಂದು. ಅದೊಂದು ಸ್ತ್ರೀಯ ಸೌಂದರ್ಯ ಹೆಚ್ಚಿಸುವ ಸಾಧನ. ಕಾಲ್ಗೆಜ್ಜೆ ನೋಡುವವರ ಕಣ್ಣಿಗೆ ಹಿತ; ಅಷ್ಟೇ ಅಲ್ಲ ಧರಿಸುವ ಸ್ತ್ರೀಯ ಆರೋಗ್ಯಕ್ಕೂ ಪ್ರಯೋಜನಕಾರಿ. ಕಾಲ್ಗೆಜ್ಜೆ ಮತ್ತೆ ಘಲ್ಲೆನ್ನಲಿ..

ಕಾಲ್ಗೆಜ್ಜೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅದರ ಝಣ್ ಝಣ್ ಎಂಬ ನಿನಾದ. ಈ ಸದ್ದಿಗೆ ಮರುಳಾಗದವರಿಲ್ಲ, ಮಾರುಹೋಗದೇ ಇರುವವರಿಲ್ಲ, ಕಾಲ್ಗೆಜ್ಜೆಯ ಸಪ್ಪಳವನ್ನು ಬಣ್ಣಿಸದ ಕವಿಗಳಿಲ್ಲ… ಆ ಗೆಜ್ಜೆಯ ಕಿಂಕಿಣಿಯ ಧ್ವನಿಯೇ ಅಂತಹದು. ಪುಟ್ಟ ಪುಟ್ಟ ಹೆಜ್ಜೆಯಿಡುವ ಕಂದಮ್ಮನಿಂದ ಮೊದಲಾಗಿ ಪ್ರಾಯದ ಹುಡುಗಿಯರಿಗೂ ಇದು ಚೆಂದ. ಪುಟ್ಟ ಕಾಲ್ಗೆಜ್ಜೆಯ ಸದ್ದು ಮಾಡುತ್ತ ಕಂದಮ್ಮ ಮನೆತುಂಬ ಓಡಾಡಿದಲ್ಲಿ ಯಾರಿಗೆ ತಾನೇ ಕಣ್ಣು, ಮನ ತುಂಬಿ ಬರುವುದಿಲ್ಲ ಹೇಳಿ?

ಹಬ್ಬ ಹರಿದಿನಗಳಲ್ಲಿ ಹೆಣ್ಣು ಮಕ್ಕಳು ಗೆಜ್ಜೆ ಹಾಕಿಕೊಂಡು ಅತ್ತಿತ್ತ ಓಡಾಡಿದರೆ ಹಬ್ಬಕ್ಕೆ ಇನ್ನಷ್ಟು ಮೆರುಗು. ಇದು ಭಾರತೀಯ ಸಂಸ್ಕೃತಿ ಕೂಡಾ. ಹಾಡು, ನೃತ್ಯವಲ್ಲದೇ ಅನೇಕ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಕೂಡ ಗೆಜ್ಜೆಯ ಬಳಕೆ ಇದೆ. ಭರತನಾಟ್ಯ ಮುಂತಾದ ನೃತ್ಯಗಳಲ್ಲಂತೂ ಗೆಜ್ಜೆಯ ಪಾತ್ರ ಹಿರಿದು. ಇಂತಹ ನೃತ್ಯಗಳಲ್ಲಿ ಹೆಣ್ಣು ಗಂಡೆಂಬ ಬೇಧವಿಲ್ಲದೆ ಎಲ್ಲರೂ ಗೆಜ್ಜೆ ಕಟ್ಟಿ ಕುಣಿಯುತ್ತಾರೆ. ತಾಳಕ್ಕೆ ತಕ್ಕಂತೆ ಅವರು ಹೆಜ್ಜೆ ಹಾಕಿದರೆ, ಹೆಜ್ಜೆಗೆ ತಕ್ಕಂತೆ ಗೆಜ್ಜೆ ತನ್ನ ಸಪ್ಪಳವನ್ನು ಮುಂದುವರೆಸುತ್ತದೆ.

ಹೆಣ್ಣಿಗೆ ಭೂಷಣ

ಹೆಣ್ಣಿನ ಹನ್ನೆರಡು ಅಲಂಕಾರಗಳಲ್ಲಿ ಕಾಲ್ಗೆಜ್ಜೆಯೂ ಒಂದು. ಅದೊಂದು ಸ್ತ್ರೀಯ ಸೌಂದರ್ಯ ಹೆಚ್ಚಿಸುವ ಸಾಧನ. ಹೆಣ್ಣು ಎಂದರೆ ಕಾಲಿಗೆ ಗೆಜ್ಜೆ ಇರಬೇಕು ಎನ್ನುವಷ್ಟು ಹೆಜ್ಜೆ ಗೆಜ್ಜೆಯ ನಂಟು. ಕೆಲವು ಪರಿವಾರಗಳಲ್ಲಂತೂ ಮದುವೆಯಾದ ಹೆಣ್ಣುಮಗಳು ಕಾಲ್ಗೆಜ್ಜೆ ಹಾಕದೇ ಮನೆಹೊರಗೆ ಕಾಲಿಡುವುದೇ ನಿಷಿದ್ಧವಾಗಿತ್ತು. ಅದಿದ್ದರೆ ಹೆಣ್ಣಿಗೆ ಒಂದು ರೀತಿಯ ರಕ್ಷಣೆ ಎಂಬ ಭಾವನೆ ಇತ್ತು. ಮನೆಯ ಸದಸ್ಯರು ನಿಷ್ಕಾಳಜಿಯಿಂದ ಕೂತು ಹರಟೆಹೊಡೆಯುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿನ ಮಹಿಳೆಯ ಗೆಜ್ಜೆ ಸಪ್ಪಳ ಕೇಳಿತೆಂದರೆ ಎಲ್ಲರೂ ಗಂಭೀರವಾಗಿ ಕೂತು ಬರುವ ಮಹಿಳೆಯನ್ನು ಸ್ವಾಗತಿಸುತ್ತಿದ್ದರು. ಅಷ್ಟಿತ್ತು ಕಾಲ್ಗೆಜ್ಜೆಯ ಮಹತ್ವ!

ಕಾಲ್ಗೆಜ್ಜೆ ನೋಡುವವರ ಕಣ್ಣಿಗೆ ಹಿತ; ಅಷ್ಟೇ ಅಲ್ಲ ಧರಿಸುವ ಸ್ತ್ರೀಯ ಆರೋಗ್ಯಕ್ಕೂ ಪ್ರಯೋಜನಕಾರಿ. ಚಿನ್ನ, ಬೆಳ್ಳಿಯಿಂದ ಮಾಡಲ್ಪಟ್ಟ ಗೆಜ್ಜೆಯ ಆಭರಣ ಆಯುರ್ವೇದದಲ್ಲಿ ಮಹತ್ವದ ಸ್ಥಾನ ಹೊಂದಿದೆ. ಸದಾ ಇದನ್ನು ಧರಿಸುವುದರಿಂದ ಬೆಳ್ಳಿ/ಚಿನ್ನದ ಲೋಹ ಕಾಲಿನ ಮೂಳೆಯನ್ನು ಸದೃಢವಾಗಿ ಮಾಡುತ್ತದೆ ಎಂದು ಆಯುರ್ವೇದದಲ್ಲಿ ವಿವರಿಸಲಾಗಿದೆ. ಜೊತೆಗೆ ಕಾಲ್ಗೆಜ್ಜೆಯ ಸದ್ದು ಮನೆಯಲ್ಲಿರುವ ದುಷ್ಟ ಶಕ್ತಿಯನ್ನು ಹೊರಗೋಡಿಸಿ ದೈವೀ ಶಕ್ತಿ ಪ್ರವೇಶಿಸುವಂತೆ ಮಾಡುತ್ತದೆ. ಮನೆಯಲ್ಲಿ ಪಾಸಿಟಿವ್ ಎನರ್ಜಿಯನ್ನುಂಟು ಮಾಡುತ್ತದೆ ಎನ್ನುವ ನಂಬಿಕೆ ಕೂಡಾ ಇದೆ.

ಈಗೇನಿದ್ದರೂ ಟ್ರೆಂಡಿ ಗೆಜ್ಜೆಗಳ ಕಾಲ:

ಇತ್ತೀಚಿನ ದಿನಗಳಲ್ಲಿ ಕಾಲ್ಗೆಜ್ಜೆಯ ಸಪ್ಪಳ ಮಾಡರ್ನ್ ಫ್ಯಾಷನ್ ಲೋಕದಲ್ಲಿ ಅಡಗಿ ಹೋಗಿದೆ. ಆಧುನಿಕ ಪೋಷಾಕುಗಳ ಕಡೆ ಹೆಚ್ಚಿನ ಒಲವು ತೋರಿಸುತ್ತಿರುವ ಹೆಣ್ಣುಮಕ್ಕಳು ಗೆಜ್ಜೆ ತೊಡುವುದನ್ನೇ ಮರೆತಿದ್ದಾರೆ. ಇನ್ನು ಕೆಲವು ಹೆಣ್ಣುಮಕ್ಕಳು ಸಂಪ್ರದಾಯದ ಗಡಿ ದಾಟಿ ಗೆಜ್ಜೆಯನ್ನೂ ಅವರ ಪ್ಯಾಷನ್ ಟ್ರೆಂಡ್ ಆಗಿ ಬದಲಿಸಿಕೊಂಡಿದ್ದಾರೆ. ಈಗ ಗೆಜ್ಜೆಗಳು ರೂಪ ಬದಲಿಸಿಕೊಂಡಿವೆ. ಈಗೇನಿದ್ದರೂ ಟ್ರೆಂಡಿ ಗೆಜ್ಜೆಗಳ ಕಾಲ. ಆಗ ಗೆಜ್ಜೆಯೊಂದಿಗೆ ಇದ್ದ ಭಾವನಾತ್ಮಕ ನಂಟು ಈಗಿಲ್ಲ. ಮೊದಲಿನ ಬೆಳ್ಳಿ ಗೆಜ್ಜೆಗಳನ್ನು ಈಗ ಕೇಳುವವರಿಲ್ಲ.

ಈಗ ಮಣಿಗಳಿಂದ ಮಾಡಿದ ಗೆಜ್ಜೆಗಳು, ಕಪ್ಪು, ಬಿಳಿ, ಕೆಂಪು, ನೀಲಿ, ಕೇಸರಿ ಮುಂತಾದ ಬಣ್ಣಗಳ ದಾರಗಳನ್ನೇ ಕಾಲಿಗೆ ಕಟ್ಟಿಕೊಳ್ಳುವ ಪ್ರವೃತ್ತಿ ಬಂದಿಬಿಟ್ಟಿದೆ. ಬಟ್ಟೆಗೆ ಹೋಲುವ ಗೆಜ್ಜೆಗಳನ್ನು ಧರಿಸುತ್ತಾರೆ. ಜೀನ್ಸ್, ಸ್ಕರ್ಟ್ ಮುಂತಾದವುಗಳನ್ನು ಧರಿಸಿದಾಗ ದಾರ ವಿಶಿಷ್ಟವಾಗಿ ಕಾಣುತ್ತದೆ ಎಂಬುದು ಈಗಿನ ಹುಡುಗಿಯರ ಅಭಿಪ್ರಾಯ. ಈಗಿನ ಪ್ಯಾಷನ್ ಗೆಜ್ಜೆಗಳಲ್ಲಿ ಝಲ್ ಎಂಬ ಸದ್ದಿಲ್ಲ. ಅದೇನಿದ್ದರೂ ಕೇವಲ ಪ್ಯಾಷನ್‍ಗಾಗಿ ಉಪಯೋಗಸುವ ಒಂದು ಪರಿಕರವಷ್ಟೆ. ಭಾರವಿಲ್ಲದ, ಗೆಜ್ಜೆಗಳಿಲ್ಲದ, ನಾನಾ ಬಗೆಯ ಮಣಿಗಳಿಂದ ತಯಾರಾದ ಕಾಲ್ಗೆಜ್ಜೆಗಳು ಇಂದು ಯುವತಿಯರ ಪಾದವನ್ನು ಅಲಂಕರಿಸಿದೆ.

ಹಿಂದಿನ ಕಾಲದ ಎಷ್ಟೋ ವಸ್ತುಗಳು, ಧಿರಿಸುಗಳು ಮತ್ತೆ ಈಗಿನ ಪ್ಯಾಷನ್ ಆಗಿದೆ. ಹಾಗೆಯೇ ಹಿಂದಿನ ಕಾಲದ ಬೆಳ್ಳಿ ಗೆಜ್ಜೆ ಕೂಡ ಮತ್ತೆ ಹುಡುಗಿಯರ ಪ್ಯಾಷನ್ ಆಗಿ ಬರಲಿ. ಹಬ್ಬಗಳಲ್ಲಿ ಹೆಣ್ಣುಮಕ್ಕಳು ಗೆಜ್ಜೆ ಕಟ್ಟಿ ಸಂಭ್ರಮಿಸುವ ಘಳಿಗೆ ಮತ್ತೆ ಬರಲಿ. ಗೆಜ್ಜೆಯ ಸದ್ದು ಎಲ್ಲರ ಮನೆ, ಮನಗಳಲ್ಲಿ ಗುಂಜಿಸಲಿ.

Also watch this video: ಕಾಲುಂಗುರ ಏಕೆ ಹಾಕಬೇಕು?

ನಾರಾಯಣಿ ಭಟ್

Share this: