ಜೀವರಕ್ಷಕತ್ವ ಕಳೆದುಕೊಳ್ಳುತ್ತಿರುವ ಆಂಟಿಬಯೋಟಿಕ್‍ಗಳು ಜೀವಭಕ್ಷಕ ಔಷಧಗಳಾಗುತ್ತಿರುವುದೇ ಬಹಳ ನೋವಿನ ಸಂಗತಿ. ಇತ್ತೀಚಿನ ದಿನಗಳಲ್ಲಿ ಆಂಟಿಬಯೋಟಿಕ್ ಬಳಕೆ ಮಿತಿಮೀರುತ್ತಿದೆ. ಇದಕ್ಕೆ ಸೂಕ್ತ ನಿಯಂತ್ರಣ ಮಾಡದಿದ್ದಲ್ಲಿ ಮುಂದೊಂದು ದಿನ ಪ್ರತಿಯೊಬ್ಬರು, ಊಟದ ಜೊತೆಗೆ ರೋಗ ಬರದಂತೆ ಆಂಟಿಬಯೋಟಿಕ್ ಬಳಸಬೇಕಾದ ಸಂದಿಗ್ಧ ಪರಿಸ್ಥಿತಿ ಬರಲೂಬಹುದು.
ಕಾಲಕ್ರಮೇಣ ಬ್ಯಾಕ್ಟೀರಿಯಾ ಹಾಗೂ ಇತರ ರೋಗಾಣುಗಳು ಕೂಡ ಆಂಟಿಬಯೋಟಿಕ್‍ಗಳಿಗೆ ಪ್ರತಿರೋಧಕತ್ವವನ್ನು ಬೆಳೆಸಿಕೊಂಡು ತನ್ನ ದೇಹದಲ್ಲಿ, ಜೀನ್‍ಗಳಲ್ಲಿ, ವರ್ಣತಂತುಗಳಲ್ಲಿಅಗತ್ಯ ಮಾರ್ಪಾಡು ಮಾಡಿಕೊಂಡು ವಿಷಮ ಪರಿಸ್ಥಿತಿಯಲ್ಲಿಯೂ ಬದುಕುವ ಕಲೆಯನ್ನು ರೂಢಿಸಿಕೊಂಡವು. ಹೊಸ ಹೊಸ ಆಂಟಿಬಯೋಟಿಕ್‍ಗಳು ಹುಟ್ಟಿಕೊಂಡಂತೆ, ಹೊಸ ಹೊಸ ರೋಗಾಣುಗಳು ಮತ್ತು ಹೊಸ ಹೊಸ ರೋಗಗಳೂ ಹುಟ್ಟಿಕೊಂಡವು. ಅನಿಯಂತ್ರಿತ ಅನಗತ್ಯ ಆಂಟಿಬಯೋಟಿಕ್‍ಗಳ ಬಳಕೆ ಮತ್ತು ಸತ್ವರಹಿತ ಆಂಟಿಬಯೋಟಿಕ್‍ಗಳು, ರೋಗಿಗಳ ಅತಿಯಾದ ನಿರೀಕ್ಷೆಗಳು, ವೈದ್ಯರ ಅತಿಯಾದ ಆಸೆ ಬುರುಕುತನ ಹೇಗೆ ಎಲ್ಲವೂ ಮೇಳೈಸಿ ಜೀವರಕ್ಷಕವಾಗ ಬೇಕಿದ್ದ ಆಂಟಿಬಯೋಟಿಕ್‍ಗಳು ತಮ್ಮ ಜೀವಸತ್ವ ಮತ್ತು ಜೀವರಕ್ಷಕತ್ವವನ್ನು ಕಳೆದುಕೊಂಡು ಜೀವಭಕ್ಷಕ ಔಷಧಗಳಾಗುತ್ತಿರುವುದೇ ಬಹಳ ನೋವಿನ ಸಂಗತಿ.
ವಾಸ್ತವ ಏನು?
ಇತ್ತೀಚಿನ ವಿಶ್ವಸಂಸ್ಥೆಯ ವರದಿಯಂತೆ 76 ದೇಶಗಳಲ್ಲಿ ನಡೆದ ಸರ್ವೆಯ ಪ್ರಕಾರ, 2000ರಲ್ಲಿ 20 ಬಿಲಿಯನ್ ರಷ್ಟಿದ್ದ ದಿನವೊಂದರಲ್ಲಿ ಬಳಸುವ ಆಂಟಿಬಯೋಟಿಕ್ ಸೇವನೆ 35 ಬಿಲಿಯನ್‍ಗೆ ತಲಿಪಿದೆ. ಏನಿಲ್ಲವೆಂದರೂ 15 ವರ್ಷಗಳಲ್ಲಿ ಶೇಕಡಾ 65ರಷ್ಟು ಏರಿಕೆ ಕಂಡಿದೆ. ಭಾರತವೂ ಈ ಏರಿಕೆಗೆ ಹೊರತಾಗಿಲ್ಲ. 2000ದಲ್ಲಿ 3.3 ಮಿಲಿಯನ್ ನಷ್ಟಿದ್ದ ಬಳಕೆ, 6.6 ಮಿಲಿಯನ್‍ಗೆ ತಲುಪಿರುವುದು ಬಹಳ ವಿಷಾದನೀಯ ಸಂಗತಿ. ಕಳೆದ 15 ವರ್ಷಗಳಲ್ಲಿ ದ್ವಿಗುಣವಾಗಿರುವ ಈ ಆಂಟಿಬಯೋಟಿಕ್‍ಗಳ ಸೇವನೆಗೆ ಕಾರಣಗಳನ್ನು ನೀಡಬಹುದು. ಹೆಚ್ಚುತ್ತಿರುವ ಆದಾಯ, ವೈದ್ಯರ ಚೀಟಿಯಿಲ್ಲದ ಏಲ್ಲೆಂದರಲ್ಲಿ ಸುಲಭವಾಗಿ ಸಿಗುವ ಆಂಟಿಬಯೋಟಿಕ್‍ಗಳು, ಸರಿಯಾದ ಕಾನೂನು ಇಲ್ಲದೆ ಅನಧಿಕೃತ ಔಷಧ ಮಾರಾಟ, ಕಡಿಮೆ ವೆಚ್ಚದ ಕಳಪೆ ಔಷಧಿಗಳು, ಹೆಚ್ಚುತ್ತಿರುವ ಆಸ್ಪತ್ರೆಯ ಸೋಂಕು ರೋಗಗಳು, ಪದೇ ಪದೇ ಮನುಕುಲದ ಮೇಲೆ ಸವಾರಿ ಮಾಡುವ ಸಾಂಕ್ರಾಮಿಕ ರೋಗಗಳು ಇವೆಲ್ಲವೂ ಸೇರಿ ಆಂಟಿಬಯೋಟಿಕ್‍ಗಳ ಸೇವನೆಯಲ್ಲಿ ಬಹಳಷ್ಟು ಹೆಚ್ಚಳ ಉಂಟಾಗಿರುವುದು ಬಹಳ ಅಪಾಯಕಾರಿಯಾದ ಬೆಳವಣಿಗೆ ಎಂದರೂ ತಪ್ಪಲ್ಲ.
ಈ ರೀತಿಯಾಗಿ ಅತಿಯಾದ ಆಂಟಿಬಯೋಟಿಕ್ ಬಳಕೆಯಿಂದಾಗಿ ರೋಗಾಣುಗಳು ಬಹಳ ಸುಲಭವಾಗಿ ರೋಗ ಪ್ರತಿರೋಧಕತ್ವ ಬೆಳೆಸಿಕೊಂಡಿರುವುದು ಸತ್ಯವಾದ ಮಾತು. ಇ-ಕೊಲೈ,ಸ್ಟೆಫೈಲೋಕೋಕಸ್, ನ್ಯೂಮೋಕೋಕೈ, ಮತ್ತು ಟ್ಯುಬರುಕುಲಸ್ ಬ್ಯಾಸಿಲೈ ಮುಂತಾದ ರೋಗಾಣುಗಳು ಬಹಳ ಸುಲಭವಾಗಿ ಪ್ರತಿರೋಧಕತ್ವ ಬೆಳೆಸಿಕೊಂಡು ರೋಗ ನಿಯಂತ್ರಣಕ್ಕೆ ಸಿಗದೆ ಮನುಕುಲದ ಮೇಲೆ ಸವಾರಿ ಮಾಡುವ ಹಂತಕ್ಕೆ ಬಂದು ನಿಂತಿದೆ. ಈ ಎಲ್ಲಾ ಕಾರಣದಿಂದಾಗಿ ಮೊದಲೆಲ್ಲಾ ಬಹಳ ಸುಲಭವಾಗಿ ಸರಳ ಆಂಟಿಬಯೋಟಿಕ್‍ಗಳಿಂದ ಗುಣಪಡಿಸಲಾಗುತ್ತಿದ್ದ ರೋಗಗಳು ಇದೀಗ ಅತ್ಯಂತ ದುಬಾರಿ ಮತ್ತು ಪರಿಷ್ಕರಿಸಿದ ಆಂಟಿಬಯೋಟಿಕ್‍ಗಳಿಗೂ ಸ್ಪಂದಿಸದಿರುವುದೇ ಬಹಳ ಆತಂಕಕಾರಿ ಬೆಳವಣಿಗೆಯಾಗಿದೆ.
ನಿಯಂತ್ರಣ ಹೇಗೆ?
1.ವೈದ್ಯರ ಚೀಟಿ ಇಲ್ಲದೆ ಪಾರ್ಮಸಿಗಳಲ್ಲಿ ಆಂಟಿಬಯೋಟಿಕ್ ನೀಡಬಾರದೆಂಬ ಕಠಿಣ ಕಾನೂನು ತರಬೇಕು.
2.ಅನಗತ್ಯವಾಗಿ ರೋಗಿಗಳೇ ವೈದ್ಯರಾಗಿ ಸಣ್ಣ ಪುಟ್ಟ ರೋಗಗಳಿಗೂ ಆಂಟಿಬಯೋಟಿಕ್ ಬಳಸುವ ಛಾಳಿಯನ್ನು ಬಿಡಬೇಕು.
3.ಶೀತ, ನೆಗಡಿ ವೈರಾಣುವಿನ ಸೋಂಕಿನಿಂದ ಬರುವ ಕಾರಣದಿಂದ, ಆಂಟಿಬಯೋಟಿಕ್ ಅವಶ್ಯಕತೆ ಇರುವುದಿಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ಎಲ್ಲರೂ ಒಪ್ಪಲೇ ಬೇಕು.
4.ಹೆಚ್ಚಿನ ರೋಗಗಳಿಗೆ ಲಸಿಕೆ ಲಭ್ಯವಿದ್ದು ಎಲ್ಲರೂ ಲಸಿಕೆ ಹಾಕಿಸಿಕೊಂಡಲ್ಲಿ ಆಂಟಿಬಯೋಟಿಕ್ ಸೇವಿಸಬೇಕಾದ ಪ್ರಮೇಯವೇ ಇರುವುದಿಲ್ಲ.
5.ಸರಕಾರ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಸೂಕ್ತ ಸೌಲಭ್ಯ ನೀಡಬೇಕು ಮತ್ತು ಜನರು ಇದನ್ನು ಅನುಸರಿಸಲೇ ಬೇಕು.
6.ವೈದ್ಯರೂ ಕೂಡಾ ಅತೀ ಅವಶ್ಯವಿದ್ದಲ್ಲಿ ಮಾತ್ರ ಆಂಟಿಬಯೋಟಿಕ್ ನೀಡಬೇಕು.
7.ರೋಗಿಗಳು ರೋಗ ಬೇಗ ಕಡಿಮೆಯಾಗಬೇಕೆಂದು ಆಂಟಿಬಯೋಟಿಕ್ ನೀಡಲು ವೈದ್ಯರ ಮೇಲೆ ಒತ್ತಡ ಹೇರಬಾರದು.
8.ಅತಿಯಾದ ಆಂಟಿಬಯೋಟಿಕ್ ಬಳಸಲು ಪ್ರೇರೇಪಿಸುವ ಔಷಧಿ ಕಂಪೆನಿಗಳ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳಬೇಕು.
9.ರೋಗಿಗಳು ದಿನ ಬೆಳಗಾಗುವುದರೊಳಗೆ ರೋಗ ಕಡಿಮೆಯಾಗಬೇಕು ಎಂಬ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬಾರದು.
10.ವೈದ್ಯರಿಗೆ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಅವಕಾಶ ನೀಡಬೇಕು.
11,ಡಾ. ಗೂಗಲ್ ಸಹಾಯದಿಂದ ವೈದ್ಯರ ಬಳಿ ತಮ್ಮ ಆಂಟಿಬಯೋಟಿಕ್ ಬಗೆಗಿನ ಅಲ್ಪ ಜ್ಞಾನವನ್ನು ತೋರಿಸಿ ವೈದ್ಯರ ದಾರಿ ತಪ್ಪಿಸಬಾರದು.
ಇತ್ತೀಚಿನ ದಿನಗಳಲ್ಲಿ ಆಂಟಿಬಯೋಟಿಕ್ ಬಳಕೆ ಮಿತಿಮೀರುತ್ತಿದೆ. ಇದಕ್ಕೆ ಸೂಕ್ತ ನಿಯಂತ್ರಣ ಮಾಡದಿದ್ದಲ್ಲಿ ಮುಂದೊಂದು ದಿನ ಪ್ರತಿಯೊಬ್ಬರು, ಊಟದ ಜೊತೆಗೆ ರೋಗ ಬರದಂತೆ ಆಂಟಿಬಯೋಟಿಕ್ ಬಳಸಬೇಕಾದ ಸಂದಿಗ್ಧ ಪರಿಸ್ಥಿತಿ ಬರಲೂಬಹುದು. ಔಷಧಿಯನ್ನು ಔಷಧಿಯ ರೀತಿಯಲ್ಲಿಯೇ ಸೇವಿಸಬೇಕು. ಲಸಿಕೆಯಿಂದ ತಡೆಗಟ್ಟ ಬಹುದಾದ ಎಲ್ಲಾ ರೋಗಗಳಿಗೂ ಲಸಿಕೆ ಹಾಕಿಸಿ ಕೊಳ್ಳಲೇಬೇಕು. ಹಾಗಾದಲ್ಲಿ ಮಾತ್ರ ಸುಂದರ ಸುದೃಡ ಆರೋಗ್ಯವಂತ ಸಮಾಜದ ನಿರ್ಮಾಣ ಆಗಬಹುದು. ಅದರಲ್ಲಿಯೇ ನಮ್ಮೆಲ್ಲರ ಒಳಿತು ಅಡಗಿದೆ.
ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
email: drmuraleemohan@gmail.com