ಕರುಳು ಕಿರಿಕಿರಿ ಖಾಯಿಲೆ ದೊಡ್ಡ ಕರುಳನ್ನು ಭಾಧಿಸುವ ಬಹಳ ಕಿರಿಕಿರಿ ಉಂಟುಮಾಡುವ ಮತ್ತು ಮಾನಸಿಕವಾಗಿ ವ್ಯಕ್ತಿಗೆ ಹೆಚ್ಚು ಕಿರುಕುಳ ನೀಡುವ ಖಾಯಿಲೆಯಾಗಿದ್ದು, ಆಂಗ್ಲಭಾಷೆಯಲ್ಲಿ ‘ಇರಿಟೇಬಲ್ ಬೋವೆಲ್ ಸಿಂಡ್ರೋಮ್’ ಎಂದು ಕರೆಯುತ್ತಾರೆ. ಕ್ರಿಯಾತ್ಮಕವಾಗಿ ಕರುಳಿನ ಒಳಭಾಗದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲದಿದ್ದರೂ ಈ ರೋಗದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಮಾನಸಿಕವಾಗಿ ಕುಗ್ಗಿರುತ್ತಾರೆ. ಆತಂಕ, ಒತ್ತಡ, ಖಿನ್ನತೆ, ಮುಂತಾದ ಮಾನಸಿಕ ಲಕ್ಷಣಗಳು ಈ ರೋಗಿಗಳಲ್ಲಿ ಹೆಚ್ಚು ಕಂಡುಬರುತ್ತದೆ. ಇಂತಹ ರೋಗಿಗಳ ಮನಸ್ಸಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ ತಮಗೇನು ದೊಡ್ಡದಾದ ಖಾಯಿಲೆ ಇದೆ ಎಂಬ ಬ್ರಾಂತಿಯಿಂದ ಬಳಲುತ್ತಾರೆ. ತಾವು ಬಹಳ ತೀವ್ರವಾದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂಬ ಬ್ರಾಂತಿ ಇವರಿಗೆ ಯಾವತ್ತೂ ಕಾಡುತ್ತಿರುತ್ತದೆ.
ರೋಗದ ಲಕ್ಷಣಗಳು ಏನು?
• ಹೊಟ್ಟೆಯಲ್ಲಿ ನೋವು, ಹೊಟ್ಟೆಯಲ್ಲಿ ಸ್ನಾಯು ಸೆಳೆತ ಅಥವಾ ಹೊಟ್ಟೆಯಲ್ಲಿ ಗಾಳಿ ತುಂಬಿದಂತೆ ಅನಿಸುತ್ತದೆ. ಈ ಲಕ್ಷಣಗಳು ಮಲವನ್ನು ವಿಸರ್ಜಿಸಿದ ಬಳಿಕ ಸರಿಯಾಗುತ್ತದೆ. ಪದೇ ಪದೇ ಮಲವಿಸರ್ಜಿಸಬೇಕೆಂಬ ತುಡಿತ ಇವರಲ್ಲಿ ಹೆಚ್ಚು ಕಂಡು ಬರುತ್ತದೆ.
• ಮಲಬದ್ದತೆ ಅಥವಾ ಅತಿಸಾರ ಬೇಧಿ ಇವರಲ್ಲಿ ಕಂಡು ಬರುತ್ತದೆ.
• ಹೊಟ್ಟೆಯಲ್ಲಿ ಅತಿಯಾದ ಗಾಳಿ ತುಂಬಿದ ಅನುಭವ ಉಂಟಾಗುತ್ತದೆ.
• ಮಲವಿಸರ್ಜಿಸುವಾಗ ರಕ್ತಮಿಶ್ರಿತವಾಗಿರುತ್ತದೆ.
ಕಾರಣಗಳು ಏನು?
ಯಾವುದೇ ನಿರ್ದಿಷ್ಟ ಕಾರಣಗಳು ಈ ಕಿರಿಕಿರಿ ಕರುಳು ಖಾಯಿಲೆಗೆ ಇಲ್ಲ. ಆದರೆ ಸಣ್ಣ ಕರುಳಿನಲ್ಲಿ ಉಂಟಾದ ಸೋಂಕು, ಸಣ್ಣ ಕರುಳಿನಲ್ಲಿ ಬ್ಯಾಕ್ಟೀರಿಯಗಳ ಅತಿಯಾದ ಹೆಚ್ಚಳ, ವಂಶವಾಹಕ ಕಾರಣಗಳು, ಆಹಾರದಲ್ಲಿನ ವ್ಯತ್ಯಾಸ, ವಿಪರೀತ ಒತ್ತಡದ ಜೀವನ, ಕೆಲಸದ ವಾತಾವರಣದಲ್ಲಿನ ವ್ಯಾವಹಾರಿಕವಾದ ಒತ್ತಡಗಳು, ಖಿನ್ನತೆ, ಇವೆಲ್ಲವೂ ಒಟ್ಟು ಸೇರಿ ಈ ಕರುಳು ಕಿರಿಕಿರಿ ಖಾಯಿಲೆಗೆ ಮುನ್ನಡಿ ಬರೆಯುತ್ತದೆ. ಆದರೆ ಕೆಲವೊಂದು ಕಾರಣಗಳಾದ ಆಹಾರ, ಮಾನಸಿಕ ಒತ್ತಡ, ರಸದೂತಗಳ ಏರುಪೇರು ಈ ಕಿರಿಕಿರಿ ರೋಗದ ತೀವ್ರತೆಯನ್ನು ಹೆಚ್ಚುಸುತ್ತದೆ.
• ಆಹಾರ:- ಕೆಲವೊಂದು ಆಹಾರದಲ್ಲಿನ ನ್ಯೂನತೆ ಅಥವಾ ಅಲರ್ಜಿಯಿಂದ ಈ ರೋಗ ಬರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಪರಿಪೂರ್ಣ ಮಾಹಿತಿ ಇನೂ ಲಭಿಸಿಲ್ಲ. ಆದರೆ ಕೆಲವೊಂದು ನಿರ್ದಿüಷ್ಟ ದ್ವಿದಳ ಧಾನ್ಯ, ಕ್ಯಾಬೇಜ್, ಹಾಲು ಮತ್ತು ಇಂಗಾಲಯುಕ್ತ ಕೃತಕ ಪೇಯ ಸೇವಿಸಿದ ಕೂಡಲೇ ಈ ಕರುಳು ಕಿರಿಕಿರಿ ಖಾಯಿಲೆ ಕೆರಳುತ್ತದೆ.
• ಮಾನಸಿಕ ಒತ್ತಡ: ಮಾನಸಿಕ ಒತ್ತಡ ಇರುವವರಿಗೆಲ್ಲ ಈ ಕಿರಿಕಿರಿ ಖಾಯಿಲೆ ಬರಬೇಕೆಂದಿಲ್ಲ ಆದರೆ ಈ ರೋಗದಿಂದ ಬಳಲುತ್ತಿರುವವರಿಗೆ ಮಾನಸಿಕ ಒತ್ತಡ, ಜಾಸ್ತಿಯಾದಾಗ ರೋಗ ಮತ್ತಷ್ಟು ಕೆರಳಿ, ತೀವ್ರತೆಯನ್ನು ಪಡೆಯುತ್ತದೆ. ಕೆಲಸದಲ್ಲಿನ ಒತ್ತಡ, ಕೌಟುಂಬಿಕ ಕಲಹಗಳು, ವೈಯಕ್ತಿಕ ತೊಂದರೆಗಳಿಂದಲೂ ಈ ಖಾಯಿಲೆ ಕೆರಳುವ ಸಾಧ್ಯತೆ ಹೆಚ್ಚಿರುತ್ತದೆ.
• ರಸದೂತಗಳ ಏರುಪೇರು: – ಮಹಿಳೆಯರಲ್ಲಿ ಈ ಕರುಳು ಕಿರಿಕಿರಿ ಖಾಯಿಲೆ ಹೆಚ್ಚು ಕಂಡುಬರುತ್ತದೆ. ಸಾಮಾನ್ಯವಾಗಿ ಖುತುಚಕ್ರದ ಸಮಯದಲ್ಲಿ ರಸದೂತಗಳ ಏರುವಿಕೆಯಿಂದ ಈ ರೋಗ ತಮ್ಮ ತೀವ್ರತೆಯನ್ನು ಪಡೆದುಕೊಂಡು, ಮಹಿಳೆಯನ್ನು ಮತ್ತಷ್ಟು ಕಾಡುತ್ತದೆ. ರಸದೂತಗಳು ಮಾನಸಿಕ ಒತ್ತಡವನ್ನು ಹೆಚ್ಚಿ ಪರೋಕ್ಷವಾಗಿಯೂ ಈ ರೋಗಕ್ಕೆ ಕಿಚ್ಚು ಹಚ್ಚುತ್ತದೆ.
ರೋಗದ ನಿರ್ವಹಣೆ ಹೇಗೆ:-
• ಕರುಳು ಕಿರಿಕಿರಿ ಖಾಯಿಲೆ ಧೀರ್ಘಕಾಲಿಕ ಖಾಯಿಲೆಯಾಗಿದ್ದು, ಒತ್ತಡದ ಸಂದರ್ಭಗಳಲ್ಲಿ ಮತ್ತಷ್ಟು ಕೆರಳುತ್ತದೆ. ಮಾನಸಿಕ ಒತ್ತಡವನ್ನು ಸರಿಯಾಗಿ ನಿಭಾಯಿಸಿದಲ್ಲಿ ಈ ಕಿರಿಕಿರಿ ಖಾಯಿಲೆಯನ್ನು ಸರಿಯಾಗಿ ನಿಯಂತ್ರಿಸಬಹುದು. ಯೋಗ, ಧ್ಯಾನ, ಪ್ರಾಣಾಯಾಮ, ಸತ್ಸಂಗದಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವರು ಔಷಧಿ ಮುಖಾಂತರ ಖಿನ್ನತೆಯನ್ನು ಕಡಿಮೆ ಮಾಡಿಕೊಂಡಾಗ ಈ ಕರುಳು ಕಿರಿಕಿರಿ ಖಾಯಿಲೆ ತನ್ನಿಂತಾನೇ ಕಡಿಮೆಯಾಗುತ್ತದೆ. ಸೂಕ್ತ ಮಾನಸಿಕ ತಜ್ಞರೊಂದಿಗೆ ಸಮಾಲೋಚನೆ ಮತ್ತು ಆಪ್ತ ಸಂದರ್ಶನದಿಂದ ಮಾನಸಿಕ ನೆಮ್ಮದಿ ದೊರೆತು ಕರುಳಿನ ಸ್ನಾಯುಗಳ ಚಲನೆ ಹತೋಟಿಗೆ ಬಂದು ಮಲಬದ್ದತೆ ಮತ್ತು ಬೇಧಿಯಿಂದ ಮುಕ್ತಿ ಪಡೆಯಬಹುದು.
• ಅತಿಯಾದ ಗ್ಯಾಸ್ಟಿಕ್ ಸಮಸ್ಯೆ ಇದ್ದಲ್ಲಿ, ವೈದ್ಯರ ಸಲಹೆಯಂತೆ ಆಂಟಾಸಿಡ್ ಎಂಬ ಅಸಿಡಿಟಿ ಕಡಿಮೆ ಮಾಡುವ ಔಷಧಿ ಸೇವಿಸಬಹುದು.
• ಮಲಬದ್ದತೆ ಇದ್ದಲ್ಲಿ ಮಲ ಸರಾಗವಾಗಿ ಹೊರಹೋಗಿಸುವ ಔಷಧಿ ಬಳಸತಕ್ಕದ್ದು. ಅತಿಸಾರ/ಭೇಧಿ ಇದ್ದಲ್ಲಿ ಪ್ರೊಬಯೋಟಿಕ್ ಔಷಧಿ ಬಳಸಿ ಬೇಧಿಯನ್ನು ನಿಯಂತ್ರಿಸಲಾಗುತ್ತದೆ.
• ಈ ಕರುಳು ಕಿರಿಕಿರಿ ಖಾಯಿಲೆಯಲ್ಲಿ ಮಾನಸಿಕ ಸ್ಥಿತಿಯ ಅಂಶ ಹೆಚ್ಚು ಪರಿಣಾಮ ಬೀರುತ್ತದೆ. ಈ ಕಾರಣದಿಂದ ಇಂತಹ ಆತಂಕ, ಖಿನ್ನತೆಯನ್ನು ಒತ್ತಡದಿಂದ ಬಳಲುತ್ತಿರುವವರಿಗೆ ಮಾನಸಿಕ ತಜ್ಞರ ಆಪ್ತ ಸಮಾಲೋಚನೆ ಅತೀ ಅಗತ್ಯ.
ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ, ರಿಫಾ ಸೆಂಟರ್, ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111 ಮೊ.: 9845135787
www.surakshadental.com
email: drmuraleemohan@gmail.com