Vydyaloka

ಹಸ್ತಲಾಘವ ನೀಡುವುದು ಬಲೇ ಅಪಾಯಕಾರಿ

ಹಸ್ತಲಾಘವ ನೀಡುವುದು ಬಲೇ ಅಪಾಯಕಾರಿ.ಎಚ್1ಎನ್1, ಕೋವಿಡ್‌-19 ಮುಂತಾದ ವೈರಸ್‌ಗಳು ಎಬ್ಬಿಸುತ್ತಿರುವ ಹಾವಳಿ ಗಮನಿಸಿದರೆ,ಪರಿಚಿತರಿಗೂ ಹಸ್ತಲಾಘವ ನೀಡುವಾಗ ಹಿಂದೆ ಮುಂದೆ ನೋಡಬೇಕು.

ನೆನಪಿಡಿ, ಸರಿಯಾದ ರೀತಿಯಲ್ಲಿ ಹಸ್ತಲಾಘವ ಮಾಡುವುದರಿಂದ ಮುಂದಿರುವ ವ್ಯಕ್ತಿಯನ್ನು ಅಳೆಯುವುದು ಮಾತ್ರವಲ್ಲ ಅನೇಕ ರೋಗಳಿಂದಲೂ ದೂರವಿರಬಹುದು. ಹಸ್ತಲಾಘವದಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅಳೆಯಲು ಸಾಧ್ಯವೆ? ಹ್ಯಾಂಡ್ ಶೇಕ್ ನಿಂದ ಆಗುವ ಲಾಭ ಮತ್ತು ದುಷ್ಪರಿಣಾಮಗಳು ಯಾವುದು? ಈ ಪ್ರಶ್ನೆಗಳನ್ನು ಕೇಳಿದವರು, ಓದಿದವರು ಸಿಕ್ಕಪಟ್ಟೆ ನಗಬಹುದು. ಹಸ್ತಲಾಘವ ಮಾಡಲೂ ಒಂದು ವಿಧಾನವಿದೆಯೇ ಎಂದು ತಮಾಷೆ ಮಾಡಬಹುದು. ಹಸ್ತಲಾಘವದಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಗಂಭೀರವಾಗಿ ಗಮನಿಸಿದರೆ ಈ ವಿಷಯವನ್ನು ನೀವು ಲಘುವಾಗಿ ನೋಡಲಾರಿರಿ.
ಎಚ್1ಎನ್1, ಕೋವಿಡ್‌-19 ಮುಂತಾದ ವೈರಸ್‌ಗಳು ಎಬ್ಬಿಸುತ್ತಿರುವ ಹಾವಳಿ ಗಮನಿಸಿದರೆ, ಕೈಯನ್ನು ಸ್ವಚ್ಛವಾಗಿ ಇಡುವುದಿರಲಿ, ಅಪರಿಚಿತರಿಗೆ ಹಸ್ತಲಾಘವ ನೀಡುವುದು ಬಲೇ ಅಪಾಯಕಾರಿ. ಪರಿಚಿತರಿಗೂ ಹಸ್ತಲಾಘವ ನೀಡುವಾಗ ಹಿಂದೆ ಮುಂದೆ ನೋಡಬೇಕು, ಹಾಗಿದೆ ಪರಿಸ್ಥಿತಿ. ನಿಜ ಹೇಳಬೇಕೆಂದರೆ, ಹಸ್ತಲಾಘವ ನೀಡುವುದು ಮುತ್ತಿಡುವುದಕ್ಕಿಂತಲೂ ಆಪಾಯಕಾರಿ!?

ಹಸ್ತಲಾಘವ ನಂಬಿಕೆಯ, ಗೌರವದ ಸಂಕೇತ:
ಆದರೆ, ಹ್ಯಾಂಡ್ ಶೇಕ್ ಮಾಡುವಾಗ ಸರಿಯಾದ ವಿಧಾನ ಬಳಸಿದರೆ, ಇಂಥ ಅನೇಕ ಅಪಾಯಗಳಿಂದ ದೂರವಿರಬಹುದು ಅನ್ನುವುದು ವಿಜ್ಞಾನಿಗಳ ಅಂಬೋಣ. ಅಷ್ಟು ಮಾತ್ರವಲ್ಲ, ಎದುರಿಗಿರುವ ವ್ಯಕ್ತಿಯ ವ್ಯಕ್ತಿತ್ವವನ್ನು ಕೂಡ ಅಳೆದುತೂಗಿ ನೋಡಬಹುದು ಎಂಬುದು ಅವರ ಸ್ಪಷ್ಟ ನುಡಿ. ಹಸ್ತಲಾಘವ ಆಧುನಿಕ ಆಚರಣೆಯೇನಲ್ಲ, ಅನಾದಿ ಕಾಲದಿಂದಲೂ ಬಂದಂತಹ ಬೆಳವಣಿಗೆ. ಪರಿಚಯಿಸಿಕೊಳ್ಳುವಾಗ, ಶುಭ ಹಾರೈಸುವಾಗ, ಹಾಗೆ ಸುಮ್ಮನೆ ಪರಿಚಿತರಿಗೆ ಹಸ್ತಲಾಘವ ನೀಡುವುದು ನಮ್ಮ ವಾಡಿಕೆ. ಹಸ್ತಲಾಘವ ನಂಬಿಕೆಯ, ಗೌರವದ ಸಂಕೇತ. ಒಂದು ಹಸ್ತಲಾಘವದಲ್ಲಿ ಮನಸ್ತಾಪಗಳನ್ನು ಕ್ಷಣದಲ್ಲಿ ಬಗೆಹರಿಸುವ ಶಕ್ತಿಯೂ ಇರುತ್ತದೆ. ಆದರೆ, ಅನೇಕ ಬಾರಿ ಸಾಕಷ್ಟು ಕಿರಿಕಿರಿಗಳನ್ನೂ ಮಾಡುತ್ತದೆ.

ಕೆಲವರು ಕೈ ಹಿಡಿದರೆ ಬಿಡಿಸಿಕೊಳ್ಳುವವರೆಗೆ ಬಿಡುವುದಿಲ್ಲ, ಕೆಲವರು ಕೊಡುವ ಹಂತದಲ್ಲಿಯೇ ಕೈಕೊಸರಿಕೊಂಡಿರುತ್ತಾರೆ, ಕೆಲವರು ಕೊಟ್ಟ ಹಸ್ತಲಾಘವದಿಂದ ಬೆರಳಿನ ಮೂಳೆಮೂಳೆಗಳೆಲ್ಲ ಲಟಲಟ ಅಂದಿರುತ್ತವೆ. ಹದಿಹರೆಯದ ಹುಡುಗ ಹುಡುಗಿ ಹಸ್ತಲಾಘವ ನೀಡುವಾಗ ಮೌನದಲ್ಲೇ ಮಾತು ಮುಗಿದುಹೋಗಿರುತ್ತದೆ. ಕೆಲ ಬಾರಿ ಕೈ ಯಾವ ಪರಿ ಬೆವೆತು ಹೋಗಿರುತ್ತದೆಂದರೆ ಹಸ್ತಲಾಘವ ನೀಡವುದಕ್ಕಿಂತ ಅವರಿಗೆ ಮುತ್ತಿಡುವುದೇ ವಾಸಿ ಅನ್ನಿಸಿಬಿಡುತ್ತದೆ. ಅನೇಕ ಬಾರಿ ಕೈ ನೀಡಿದಾಗ ಕಣ್ಣು ಇನ್ನೇನೋ ಹುಡುಕುತ್ತಿರುತ್ತದೆ. ಕೆಲ ಬಾರಿ ಎಡಚರು ಎಡಗೈ ನೀಡಿ ಎಡವಟ್ಟು ಮಾಡಿಕೊಂಡುಬಿಟ್ಟಿರುತ್ತಾರೆ.

ಕೊರೊನಾ ಹಿನ್ನೆಲೆಯಲ್ಲಿ ಹ್ಯಾಂಡ್‌ ಶೇಕ್‌ ಬದಲು ಭಾರತೀಯ ಸಂಪ್ರದಾಯವಾದ ನಮಸ್ತೆಗೆ ಹೆಚ್ಚಿನ ಪ್ರಾಧ್ಯಾನತೆ ಬಂದದ್ದು ವಿಶೇಷ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ವಿಶ್ವದ ಗಣ್ಯಾತಿಗಣ್ಯರು ಅಪ್ಪುಗೆ ಮತ್ತು ಹಸ್ತಲಾಘವದ ಬದಲು ನಮಸ್ತೆ ಹೇಳುವಂತೆ ತಮ್ಮ ರಾಷ್ಟ್ರದ ಜನತೆಗೆ ಕರೆನೀಡಿರುವುದು ವಿಶೇಷ. ಸ್ವಚ್ಛತೆ ಕುರಿತಂತೆ ಭಾರತದ ಅನೇಕ ಸಂಪ್ರದಾಯಗಳು ಕೊರೊನಾ ವಿಷಯದಲ್ಲಿ ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿರುವುದನ್ನು ಗಮನಿಸಬಹುದು.

ಇಲ್ಲಿವೆ ನೋಡಿ ಕೆಲ ನಿಯಮಗಳು:

1. ಹಸ್ತ ನೀಡುವಾಗ ಬಲಗೈಯನ್ನೇ ನೀಡಿ.

2. ಹಸ್ತಗಳು ಸೇರಿದಾಗ ಸಡಿಲಾಗಿಯೂ ಇರಬಾರದು, ತೀರ ಬಿಗಿಯಾಗಿಯೂ ಇರಬಾರದು.

3. ಕೈಗಳು ಒಣ ಇರಲಿ, ಬೆವತಿರಬಾರದು.

4. ಶೇಕಿಂಗ್ ಮೂರಕ್ಕಿಂತ ಜಾಸ್ತಿ ಇರಬಾರದು.

5. ಹಸ್ತಲಾಘವ ಎರಡರಿಂದ ಮೂರು ಸೆಕೆಂಡಿಗಿಂತ ಹೆಚ್ಚು ಇರಬಾರದು.

6. ಹಸ್ತಲಾಘವ ಮಾಡುವಾಗ ದೃಷ್ಟಿ ನೇರವಿರಲಿ ಕಣ್ಣು ಸಂಧಿಸುತ್ತಿರಲಿ.

7. ಅಪರಿಚಿತರಿಗೆ ಹಸ್ತಲಾಘವ ನೀಡಿದ ಮೇಲೆ ಸೋಪಿನಿಂದ ಕೈ ತೊಳೆಯುವುದನ್ನು ಮರೆಯಬೇಡಿ.

ವೈಯಕ್ತಿಕ ಮತ್ತು ಪರಿಸರ ಶುಚಿತ್ವ:

1.ನಿಮ್ಮ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ ಅಗಾಗ ಅವುಗಳನ್ನು ಶುಚಿಗೊಳಿಸಿ.
2.ಆಹಾರ ಸೇವನೆಗೆ ಕುಳಿತುಕೊಳ್ಳುವುದಕ್ಕೂ ಮುನ್ನ ಅಥವಾ ಶೌಚಾಲಯಕ್ಕೆ ಹೋಗಿ ಬಂದ ನಂತರ ನಿಮ್ಮ ಕೈಗಳನ್ನು ಸದಾ ತೊಳೆಯಿರಿ.
3.ಎಲ್ಲ ರೀತಿಯ ಸ್ಥಳಗಳಲ್ಲಿ ಆಹಾರ ಸೇವಿಸುವುದನ್ನು ಸಾಧ್ಯವಾದಷ್ಟೂ ತಪ್ಪಿಸಿ.
4.ಕುದಿಸಿದ ನೀರನ್ನು ಮಾತ್ರ ಕುಡಿಯಿರಿ.
5.ಕಚ್ಚಾ ತರಕಾರಿಗಳನ್ನು ಸೇವಿಸಬೇಡಿ.
6.ತಿಳಿದಿರುವ ಮಾರಾಟಗಾರರಿಂದ ಮಾತ್ರ ಮಾಂಸವನ್ನು ಖರೀದಿಸಿ ಹಾಗೂ ಅದನ್ನು ಚೆನ್ನಾಗಿ ಬೇಯಿಸಿ.
7.ನಿಮ್ಮ ಮನೆಯ ಸುತ್ತಮುತ್ತ ಇರುವ ಪರಿಸರವನ್ನು ಸ್ವಚ್ಚವಾಗಿಡಿ. ಕಲುಷಿತ ನೀರು ನಿಂತುಕೊಳ್ಳಲು ಅವಕಾಶ ನೀಡಬೇಡಿ.
8.ನಿಮ್ಮ ಬಟ್ಟೆಗಳನ್ನು ಮನೆಗಳಲ್ಲೇ ಸ್ವಚ್ಚಗೊಳಿಸಿ.

ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4    ಮೊ.: 97422 74849
 www.vims.ac.in

Share this: