Vydyaloka

ಹಾಲು ಬೇಕೇ? ಬೇಡವೇ?

ಹಾಲು ಬೇಕೇ? ಬೇಡವೇ? ನಿಜವಾಗಿಯೂ ಹಾಲು ಕುಡಿಯುವ ಅಗತ್ಯವಿದೆಯೇ? ಹಾಲು ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಡಿ, ಪೊಟ್ಯಾಶಿಯಂನ  ಶ್ರೀಮಂತ ಮೂಲ. ಆದರೆ ನಾವು ಯೋಚಿಸಿರುವಂತೆ ಎಲುಬುಗಳನ್ನು ಗಟ್ಟಿಗೊಳಿಸುವ ಪವಾಡ ಮಾಡುವ ದ್ರವ್ಯ ಅಲ್ಲ. ಗಮನಿಸಿದರೆ, ಹಾಲು ಮತ್ತು ಕ್ಯಾಲ್ಸಿಯಂ ಇರುವಂತಹ ಆಹಾರವನ್ನು ಅತಿ ಹೆಚ್ಚು ಸೇವಿಸುವ ದೇಶಗಳಲ್ಲೂ ಸೊಂಟದ ಮೂಳೆ ಮುರಿತಗಳು ಅತಿ ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿವೆ. 

“ಕ್ಷೀರಂ ಜೀವನೀಯಾನಾಂ ಶ್ರೇಷ್ಠಃ”
ಇದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಾದ ವಾಕ್ಯ.
ಅಂದರೆ ಜೀವಧಾರಣೆ ಮಾಡುವ ಪ್ರಾಮುಖ್ಯ ದ್ರವ್ಯಗಳಲ್ಲಿ ಹಾಲು ಶ್ರೇಷ್ಠವಾದದ್ದು.
ಆದರೆ ಬಹಳ ಜನ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳುವುದನ್ನು ನೋಡಿದ್ದೇವೆ. ” ಹಾಲು ಕುಡಿದರೆ ಕಫ ಆಗುತ್ತದೆಯೇ? “, ” ಹಾಲು ಶೀತ ಅಲ್ವಾ? ” ಇತ್ಯಾದಿ.

ಚಿಕ್ಕವರಿದ್ದಾಗ, ಹಾಲು ಕುಡಿಯಲು ನಮ್ಮನ್ನು ಹುರಿದುಂಬಿಸುತ್ತಿದ್ದರು. ನಾವು ದೊಡ್ಡದಾಗಬೇಕಾದರೆ, ಶಕ್ತಿಶಾಲಿಯಾಗಿ ಬೆಳೆಯಬೇಕಾದರೆ ಹಾಲು ಕುಡಿಯಬೇಕು ಎಂದು ನಮ್ಮ ಹೆತ್ತವರು ಹೇಳಿದ್ದು ಈಗಲೂ ನೆನಪಿದೆ. ಆದರೆ ದೊಡ್ಡವರಾದ ನಂತರ ನಮ್ಮ ಹಾಲು ಕುಡಿಯುವ ಬಯಕೆಗೆ ಏನು ಸಂಭವಿಸುತ್ತದೆ?

ಬಹಳಷ್ಟು ಜನ ವಯಸ್ಕರಿಗೆ ಹಾಲಿನ ಪೌಷ್ಟಿಕಾಂಶದ ಮಹತ್ವ ಮತ್ತು ಹಾಲಿನ ಉತ್ಪನ್ನಗಳ ಪ್ರಯೋಜನ ಖಂಡಿತವಾಗಿಯೂ ಗೊತ್ತಿರುತ್ತದೆ. ಕ್ಯಾಲ್ಸಿಯಂ ಮತ್ತು ಮೂಳೆಗಳಿಗೆ ಸಂಬಂಧಿಸಿದಂತೆ ಇದರ ಪ್ರಯೋಜನವನ್ನು ಎಲ್ಲರೂ ತಿಳಿದುಕೊಂಡಿರುತ್ತಾರೆ. ಹೀಗಿದ್ದರೂ ಹಾಲನ್ನು ನಮ್ಮ ಪ್ರತಿ ಹೊತ್ತಿನ ಆಹಾರದ ಭಾಗವಾಗಿ ಬಹಳಷ್ಟು ಜನ ಪರಿಗಣಿಸುತ್ತಿಲ್ಲ. ಹಾಗಾದರೆ ಈ ಕೊಂಡಿ ಕಳಚಿದ್ದು ಹೇಗೆ ಮತ್ತು ಎಲ್ಲಿ? ಪ್ರಬುದ್ಧರಾದಾಗ ನಿಜವಾಗಿಯೂ ಹಾಲು ಕುಡಿಯುವ ಅಗತ್ಯವಿದೆಯೇ? ಅಥವಾ ಅದು ಮಕ್ಕಳಿಗೆ ಮಾತ್ರ ಮೀಸಲಾದ ಆಹಾರವೇ?

ನಾವು ಮತ್ತೆ ಮತ್ತೆ ಕೇಳುತ್ತಿರುವಂತೆ, ಹಾಲು ಕ್ಯಾಲ್ಸಿಯಂನ ಶ್ರೀಮಂತ ಮೂಲ. ಪ್ರೋಟೀನ್, ವಿಟಮಿನ್ ಡಿ, ಪೊಟ್ಯಾಶಿಯಂ ಅಂಶಗಳದ್ದು ಕೂಡ. 1940ರ ಸಂದರ್ಭದಲ್ಲಿ ಹಾಲನ್ನು ಬಲ, ಆರೋಗ್ಯ ಮತ್ತು ಆನಂದಕ್ಕೆ ಇರುವ ರಾಜಮಾರ್ಗ ಎಂದು ಪ್ರಚುರಪಡಿಸಿದರು. ಹಾಲನ್ನು ಜೀರ್ಣಿಸಿಕೊಳ್ಳಲಾಗದ ವ್ಯಕ್ತಿಗಳನ್ನು ಲ್ಯಾಕ್ಟೋಸ್ ಇನ್ಟಾಲರೆಂಟ್, ಅಂದರೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಎಂಬ ಸಕ್ಕರೆಯ ಅಂಶವನ್ನು ತಾಳಿ ಕೊಳ್ಳದ ವ್ಯಕ್ತಿಗಳು ಎಂದು ತೀರ್ಮಾನಿಸಲಾಗುತ್ತದೆ. ಇದು ಒಂದು ಅಸಹಜ ಸ್ಥಿತಿ. ಏಕೆಂದರೆ ಸಾಮಾನ್ಯವಾಗಿ ಹೆಚ್ಚಿನ ವ್ಯಕ್ತಿಗಳು ಹಾಲು, ಹಾಲಿನ ಉತ್ಪನ್ನಗಳು, ಐಸ್ ಕ್ರೀಂ ಇತ್ಯಾದಿಗಳನ್ನು ಸೇವಿಸುವುದರಲ್ಲಿ ಆರಾಮವಾಗಿ ಇರುತ್ತಾರೆ.

ಆದುದರಿಂದ ಲ್ಯಾಕ್ಟೋಸ್ ಅಸಹನಶೀಲತೆ ಎಂಬುದು ನೆರವಿನ ಅಗತ್ಯವನ್ನು ಸೃಷ್ಟಿಸುವ ಮತ್ತು ಗುರುತಿಟ್ಟುಕೊಳ್ಳಬೇಕಾದ ವಿಷಯ. ಹಾಗೆಂದು ಹಾಲನ್ನು ಜೀರ್ಣಿಸಿಕೊಳ್ಳಲಾಗದ ವ್ಯಕ್ತಿಗಳ ಸಂಖ್ಯೆ ಜಗತ್ತಿನಲ್ಲಿ ತುಂಬಾ ಕಡಿಮೆ ಏನೂ ಅಲ್ಲ. ಹಾಲು ಸೇವಿಸಿದ ನಂತರ ಹೊಟ್ಟೆಯುಬ್ಬರ, ಹೊಟ್ಟೆ ಹಿಂಡಿದಂತಹ ಅನುಭವ, ಜೀರ್ಣಾಂಗದ ತೊಂದರೆಗಳನ್ನು ಅನುಭವಿಸುವ ನತದೃಷ್ಟರ ಸಂಖ್ಯೆ ತುಂಬಾ ಇದೆ. ಕೆಲವು ವ್ಯಕ್ತಿಗಳಲ್ಲಿ ಜೈವಿಕ ವಂಶವಾಹಿ ಪರಿವರ್ತನೆ (genetic mutation) ಎಂಬ ಕ್ರಿಯೆ ಲ್ಯಾಕ್ಟೇಸ್ ಎಂಬ ಕಿಣ್ವವನ್ನು ಉತ್ಪಾದಿಸುವ ವಂಶವಾಹಿಯನ್ನು ಸ್ವಲ್ಪ ಸಮಯ ಕ್ರಿಯಾಶೀಲವಾಗಿ ಸ್ಥಿರವಾಗಿಡುತ್ತದೆ. ಇನ್ನು ಕೆಲವರಲ್ಲಿ ಇನ್ನೂ ಸ್ವಲ್ಪ ಹೆಚ್ಚು ಸಮಯ, ಮತ್ತೆ ಕೆಲವರಲ್ಲಿ ಜೀವನಪೂರ್ತಿ ಅದು ಕ್ರಿಯಾಶೀಲವಾಗಿರುತ್ತದೆ.

ಲ್ಯಾಕ್ಟೋಸ್ ಅಸಹನ ಶೀಲತೆಯ ವೇಗವನ್ನು ಗಮನಿಸಿದರೆ ಬಹುಶಹ ಹಾಲು ಆಹಾರದ ಅನಿವಾರ್ಯ ಭಾಗವಲ್ಲ ಎಂಬ ಯೋಚನೆಯೂ ಕೆಲವರಿಗೆ ಸುಳಿಯಬಹುದು. 2017 ರ ಸಮೀಕ್ಷೆ ಪ್ರಕಾರ ಅಮೆರಿಕದ ಜನಸಂಖ್ಯೆಯ 36 ಶೇಕಡಾ ಜನರು ಲ್ಯಾಕ್ಟೋಸ್ ಅಂಶವನ್ನು ಜೀರ್ಣಿಸಿಕೊಳ್ಳಲಾಗದವರು. ಹಾಗೆಂದು ಅದರ ಅಸಹಿಷ್ಣುತೆಯ ಎಲ್ಲಾ ಲಕ್ಷಣಗಳು ಎಲ್ಲರಲ್ಲೂ ಕಂಡು ಬರಬೇಕೆಂದು ಇಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹೊಟ್ಟೆಯಲ್ಲಿ ಗಾಳಿ ತುಂಬಿದಂತಾಗುವುದು, ಹೊಟ್ಟೆಯ ಕಿರಿಕಿರಿ, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಸಕ್ಕರೆಯನ್ನು ಜೀರ್ಣಿಸುವ ಲ್ಯಾಕ್ಟೇಸ್ ಕಿಣ್ವವನ್ನು ಉತ್ಪಾದಿಸುವಂತಹ ಜೀನ್( ವಂಶವಾಹಿ) ಕೆಲವೊಬ್ಬರಲ್ಲಿ ಹಠಾತ್ತನೆ ಏಕೆ ಕಣ್ಮರೆಯಾಗುತ್ತದೆ ಎಂಬುದಕ್ಕೆ ಇನ್ನು ಕೂಡ ವಿಜ್ಞಾನಿಗಳಿಗೆ ಉತ್ತರ ಸಿಕ್ಕಿಲ್ಲ.

Also Read: ಹಣ್ಣು ತಿಂದರೆ ಬಾಳೇ ಮಧುರ 

ಆದರೆ, ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ವೈದ್ಯಕೀಯ ಅಂಕಣದಲ್ಲಿ ಪ್ರಕಟವಾದ ಲುಡ್ವಿಗ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಎಂಡೋಕ್ರೈನ್ ತಜ್ಞರಾದ ವಾಲ್ಟರ್ ವಿಲ್ಲೆಟ್ ಎಂಬವರ ಅವಲೋಕನ ಹೇಳುವಂತೆ-” ಹಾಲು, ನಾವು ಯೋಚಿಸಿರುವಂತೆ ಎಲುಬುಗಳನ್ನು ಗಟ್ಟಿಗೊಳಿಸುವ ಪವಾಡ ಮಾಡುವ ದ್ರವ್ಯ ಅಲ್ಲ. ಗಮನಿಸಿದರೆ, ಹಾಲು ಮತ್ತು ಕ್ಯಾಲ್ಸಿಯಂ ಇರುವಂತಹ ಆಹಾರವನ್ನು ಅತಿ ಹೆಚ್ಚು ಸೇವಿಸುವ ದೇಶಗಳಲ್ಲೂ ಸೊಂಟದ ಮೂಳೆ ಮುರಿತಗಳು ಅತಿ ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿವೆ. ಹಾಗೆಂದ ಮಾತ್ರಕ್ಕೆ, ಈ ಎಲ್ಲಾ ಮೂಳೆಮುರಿತ ಗಳಿಗೆ ಹಾಲು ಸೇವನೆ ಕಾರಣ ಎಂಬ ಬಾಲಿಶ ಸಮೀಕರಣ ಮಾಡುವುದು ಸರಿಯಲ್ಲ. ಬದಲಿಗೆ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕಡಿಮೆ ಸೇವಿಸುವಂತಹ ರಾಷ್ಟ್ರಗಳಲ್ಲೂ ಮೂಳೆಮುರಿತದ ಪ್ರಮಾಣ ಹೆಚ್ಚಾಗಿಲ್ಲ ಎಂಬುದು ಕೂಡ ಅಷ್ಟೇ ಮಹತ್ವದ ಅಂಶ. ಆದಕಾರಣ ಹಾಲು ಸೇವನೆಯ ಕುರಿತಾಗಿ ಕೆಲವೊಂದು ಅಂಶಗಳು ನಮ್ಮ ಮನಸ್ಸಿನಲ್ಲಿ ಗುರುತು ಮಾಡಿಟ್ಟುಕೊಳ್ಳುವುದು ಒಳ್ಳೆಯದು.

ಶ್ರೇಷ್ಠ ಎಂದ ತಕ್ಷಣ ಅದನ್ನು ಅತಿಯಾಗಿ ಸೇವಿಸಬೇಕು ಎಂದು ಅರ್ಥವಲ್ಲ. ಸಂಪೂರ್ಣ ನಿರಾಕರಣೆ ಮಾಡಬಾರದು ಎಂಬುದು ತಾತ್ಪರ್ಯ. ಆಯುರ್ವೇದದಲ್ಲಿ ಹೇಳಿರುವಂತೆ “ಮಾತ್ರಾವತ್ ಪ್ರಯುಂಜೀತ”, ಮಾತ್ರಾ” ಅಂದರೆ ಪ್ರಮಾಣ ಬದ್ಧವಾಗಿ ಸೇವಿಸಬೇಕು. ದೇಹಕ್ಕೆ ಅದರ ಅಗತ್ಯ ಎಷ್ಟು ಇದೆಯೋ ಅಷ್ಟನ್ನು ಮಾತ್ರ ಯುಕ್ತಿ ಪೂರ್ವಕವಾಗಿ ಸೇವಿಸಬೇಕು. ನಮ್ಮ ರುಚಿಗೆ ತಕ್ಕಂತೆ, ನಮ್ಮ ಆಸೆಗೆ ತಕ್ಕಂತೆ ಸೇವಿಸುವುದು ಪದ್ಧತಿ ಅಲ್ಲ ಎಂಬುದೇ ಅಧ್ಯಯನಗಳ ಮೂಲಕ ನಾವು ಕಲಿಯಬೇಕಾದ ಪಾಠ.

Watch this video: ತಾಯಿಯ ಎದೆ ಹಾಲಿನ ಪ್ರಾಮುಖ್ಯತೆ

ಡಾ. ಆರ್ .ಪಿ .ಬಂಗಾರಡ್ಕ.
ಖ್ಯಾತ ಆಯುರ್ವೇದ ತಜ್ಞ ವೈದ್ಯರು ಹಾಗೂ ಆಡಳಿತ ನಿರ್ದೇಶಕರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ,
ನರಿಮೊಗರು, ಪುತ್ತೂರು .ದ.ಕ.574202
ಅಸಿಸ್ಟೆಂಟ್ ಪ್ರೊಫೆಸರ್, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ.
www.prasadini.com
mail id:rpbangaradka@gmail.com
Mob. 9740545979

Share this: