Vydyaloka

ಹಲ್ಲು ಕಿತ್ತ ಬಳಿಕ ರಕ್ತಸ್ರಾವ

ಹಲ್ಲು ಕಿತ್ತ ಬಳಿಕ ರಕ್ತಸ್ರಾವ ಬಹಳ ಸಾಮಾನ್ಯವಾದ ಮತ್ತು ನೈಸರ್ಗಿಕವಾದ ಪ್ರಕ್ರಿಯೆ. ಆದರೆ ಕೆಲವೊಮ್ಮೆ ಹಲ್ಲು ಕಿತ್ತ ಬಳಿಕ ಅತಿಯಾದ ರಕ್ತಸ್ರಾವವಾಗುವ ಸಾದ್ಯತೆಯೂ ಇದೆ. ಹಲ್ಲು ಕಿತ್ತು ಸುಮಾರು ಅರ್ಧಗಂಟೆಗಳ ಬಳಿಕವೂ ರಕ್ತಸ್ರಾವವಾಗುತ್ತಿದ್ದಲ್ಲಿ ಯಾವ ಕಾರಣಕ್ಕಾಗಿ ರಕ್ತ ಬರುತ್ತಿದೆ ಎಂಬುದನ್ನು ತಿಳಿದುಕೊಂಡು ಸೂಕ್ತ ಚಿಕಿತ್ಸೆ ಸಕಾಲದಲ್ಲಿ ನೀಡತಕ್ಕದ್ದು.

ಹಲ್ಲು ಕಿತ್ತ ಬಳಿಕ ರಕ್ತ ಒಸರುವುದು ಬಹಳ ಸಾಮಾನ್ಯವಾದ ಮತ್ತು ನೈಸರ್ಗಿಕವಾದ ಪ್ರಕ್ರಿಯೆ. ಹಲ್ಲು ಕಿತ್ತ ಬಳಿಕ ರಕ್ತ ಬಂದಿಲ್ಲವೆಂದರೆ ಹಲ್ಲು ಕಿತ್ತ ಗಾಯ ಒಣಗದು. ಹೀಗೆ ಒಸರಿದ ರಕ್ತ ಹೆಪ್ಪುಗಟ್ಟಿ ಕ್ರಮೇಣ ಅದರ ಮೇಲೆ ಜೀವಕೋಶಗಳು ಬೆಳೆದು, ಹಲ್ಲು ಕಿತ್ತ ಜಾಗದಲ್ಲಿ ಹೊಸ ಅಂಗಾಂಶಗಳಿಂದ ತುಂಬಿ ಗಾಯ ಒಣಗುತ್ತದೆ. ಆದರೆ ಕೆಲವೊಮ್ಮೆ ಹಲ್ಲು ಕಿತ್ತ ಬಳಿಕ ಅತಿಯಾದ ರಕ್ತಸ್ರಾವವಾಗುವ ಸಾದ್ಯತೆಯೂ ಇದೆ. ಹೀಗೆ ರಕ್ತಸ್ರಾವವಾಗಲು ಹಲವಾರು ಕಾರಣಗಳಿವೆ. ದೇಹ ಸಂಬಂಧಿ ಕಾರಣಗಳು ಮತ್ತು ಸ್ಥಳೀಯ ಕಾರಣಗಳು ಎಂಬುದಾಗಿ ವಿಂಗಡಿಸಲಾಗಿದೆ.

ರಕ್ತಸ್ರಾವವಾಗಲು ಕಾರಣಗಳು:

1. ಹಲ್ಲು ಕಿತ್ತ ಬಳಿಕ ಜೋರಾಗಿ ಬಾಯಿ ಮುಕ್ಕಳಿಸುವುದರಿಂದ ಹೆಪ್ಪುಗಟ್ಟಿದ ರಕ್ತ ಬಿದ್ದು ಹೋಗಿ ರಕ್ತಸ್ರಾವವಾಗಬಹುದು. ಈ ಕಾರಣಗಳಿಂದಲೇ ಹಲ್ಲು ಕಿತ್ತ ದಿನದಂದು ಜೋರಾಗಿ ಬಾಯಿ ಮುಕ್ಕಳಿಸಬಾರದು ಮತ್ತು ಪದೇ ಪದೇ ಉಗುಳಬಾರದೆಂದು ದಂತವೈದ್ಯರು ಎಚ್ಚರಿಕೆ ನೀಡುತ್ತಾರೆ. ಅದೇ ರೀತಿ ಬಿಸಿಯಾದ ಆಹಾರ ತೆಗೆದುಕೊಂಡಲ್ಲಿ ರಕ್ತನಾಳಗಳು ಹಿಗ್ಗಿಕೊಂಡು ರಕ್ತಸ್ರಾವವಾಗಬಹುದು. ಗಟ್ಟಿಯಾದ ಆಹಾರ ಸೇವಿಸಿದಲ್ಲಿ, ಹೆಪ್ಪುಗಟ್ಟಿದ ರಕ್ತ ಬಿದ್ದು ಹೋಗಿ ರಕ್ತಸ್ರಾವವಾಗುವ ಸಾದ್ಯತೆ ಇರುತ್ತದೆ. ಅದಕ್ಕಾಗಿಯೇ ಹಲ್ಲು ಕಿತ್ತ ಬಳಿಕ ಬಿಸಿ ಮತ್ತು ಗಟ್ಟಿ ಆಹಾರ ಸೇವನೆ ಮಾಡಬಾರದು.

2. ಹಲ್ಲು ಕಿತ್ತ ಜಾಗಕ್ಕೆ ಪದೇ ಪದೇ ಕೈ ಹಾಕುವುದು, ನಾಲಗೆಯಿಂದ ಹಲ್ಲು ಕಿತ್ತ ಜಾಗವನ್ನು ಸ್ಪರ್ಶಿಸುವುದರಿಂದ ಹೆಪ್ಪುಗಟ್ಟಿದ ರಕ್ತ ಜಾರಿ ಹೋಗಿ, ಪುನಃ ರಕ್ತಸ್ರಾವವಾಗಬಹುದು.

3. ಹಲ್ಲು ಕಿತ್ತ ಬಳಿಕ, ಹಲ್ಲು ಕಿತ್ತ ಜಾಗದಲ್ಲಿ ಸೋಂಕು ಉಂಟಾದಲ್ಲಿ ರಕ್ತನಾಳಗಳು ಹಿಗ್ಗಿಕೊಂಡು ರಕ್ತಸ್ರಾವವಾಗಬಹುದು. ಈ ಕಾರಣದಿಂದಲೇ ಹಲ್ಲು ಕಿತ್ತ ಬಳಿಕ ದಂತವೈದ್ಯರು ನೀಡಿದ ಔಷದಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳತಕ್ಕದು.

4. ಪೂರ್ತಿಯಾಗಿ ಹಲ್ಲು ಕೀಳದಿದ್ದಲ್ಲಿ ಉಳಿದು ಹೋದ ಹಲ್ಲಿನ ಬೇರಿನ ಭಾಗದಿಂದ ರಕ್ತ ಒಸರಬಹುದು.

5. ಹಲ್ಲು ಕಿತ್ತ ಬಳಿಕ ಹಲ್ಲಿನ ಬೇರಿನ ಸುತ್ತಲೂ ಇರುವ ದುರ್ಮಾಂಸವನ್ನು ಪೂರ್ತಿಯಾಗಿ ತೆಗೆಯತಕ್ಕದು. ಇಲ್ಲವಾದಲ್ಲಿ ಹೆಪ್ಪುಗಟ್ಟಿದ ರಕ್ತ ಜಾರಿ ಹೋಗಿ ಸೋಂಕು ಉಂಟಾಗಿ ರಕ್ತಸ್ರಾವವಾಗಬಹುದು.

6. ಹಲ್ಲು ಕಿತ್ತ ದಿನದಂದು ಮದ್ಯಪಾನ ಮಾಡಬಾರದು. ಮದ್ಯಪಾನ ಮಾಡಿದಲ್ಲಿ ರಕ್ತನಾಳಗಳು ಹಿಗ್ಗಿಕೊಂಡು ರಕ್ತ ಒಸರಬಹುದು. ಅದೇ ರೀತಿ ಧೂಮಪಾನವನ್ನೂ ಮಾಡಬಾರದು. ಇಲ್ಲವಾದಲ್ಲಿ ಹೆಪ್ಪು ಗಟ್ಟಿದ ರಕ್ತ ಜಾರಿ ಹೋಗಿ, ಸೋಂಕು ಉಂಟಾಗಿ ರಕ್ತಸ್ರಾವವಾಗಹುದು.

7. ಹಲ್ಲು ಕಿತ್ತು ದಿವಸ ಸ್ಟ್ರೊ ಬಳಸಿ ದ್ರವಾಹಾರ ಸೇವಿಸಲೇಬಾರದು. ಹಾಗೆ ಮಾಡಿದಲ್ಲಿ ಹೆಪ್ಪುಗಟ್ಟಿದ ರಕ್ತ ಜಾರಿ ಹೋಗಿ ರಕ್ತಸ್ರಾವವಾಗಬಹುದು.

ದೇಹ ಸಂಬಂಧಿ ಕಾರಣಗಳು

1. ರೋಗಿ ಅಧಿಕ ರಕ್ತದೊತ್ತಡ ರೋಗದಿಂದ ಬಳಲುತ್ತಿದ್ದಲ್ಲಿ ಹಲ್ಲು ಕಿತ್ತ ಬಳಿಕ ಜೋರಾಗಿ ರಕ್ತಸ್ರಾವವಾಗುತ್ತದೆ. ಈ ಕಾರಣಕ್ಕಾಗಿಯೇ ಎಲ್ಲ ರಕ್ತದೊತ್ತಡ ರೋಗಿಗಳಿಗೆ ಹಲ್ಲು ಕಿತ್ತ ಬಳಿಕ ಹಲ್ಲು ಕಿತ್ತ ಜಾಗದಲ್ಲಿ ಹೊಲಿಗೆ ಹಾಕಲಾಗುತ್ತದೆ. ಕೆಲವೊಮ್ಮೆ ಹಲ್ಲು ಕಿತ್ತು 24 ಗಂಟೆಗಳ ಬಳಿಕವೂ ರಕ್ತದೊತ್ತಡ ಜಾಸ್ತಿಯಾದಾಗ ಹೆಪ್ಪುಗಟ್ಟಿದ ರಕ್ತ ಜಾಗದಿಂದ ಕಿತ್ತು ಹೋಗಿ ರಕ್ತಸ್ರಾವವಾಗಬಹುದು.

2. ಹೃದಯ ಸಂಬಂಧಿ ರೋಗದಿಂದ ಮತ್ತು ಮೆದುಳಿನ ಸ್ರ್ಟೋಕ್ ಅಥವಾ ಪಾರ್ಶ್ವ ವಾಯುವಿನಿಂದ ಬಳಲುತ್ತಿರುವ ರೋಗಿಗಳಲ್ಲಿ, ರಕ್ತನಾಳಗಳಲ್ಲಿ ರಕ್ತ ಸರಾಗವಾಗಿ ಹರಿಯುವಂತೆ ಮಾಡಲು ಮತ್ತು ರಕ್ತದ ಸಾಂದ್ರತೆಯನ್ನು ಕಡಿಮೆ ಮಾಡಿ ರಕ್ತ ತೆಳುವಾಗುವಗಂತೆ ಮಾಡಲು ಅಸ್ಪರಿನ್ ಮತ್ತು ರಕ್ತ ನಾಳದೊಳಗೆ ರಕ್ತ ಹೆಪ್ಪುಗಟ್ಟದಿರುವಂತೆ ವಾರ್‍ಫಾರಿನ್ ಔಷಧಿಯನ್ನು ಬಳಸಲಾಗುತ್ತದೆ. ಇಂತಹ ರೋಗಿಗಳಲ್ಲಿ ಬಹಳ ಜಾಗರೂಕತೆಯಿಂದ ಹಲ್ಲು ಕಿತ್ತು, ಬಳಿಕ ಹೊಲಿಗೆ ಹಾಕಲಾಗುತ್ತದೆ. ಮತ್ತು ರೋಗಿಗಳನ್ನು ಒಳರೋಗಿಯಾಗಿ ದಾಖಲಿಸಿ ರಕ್ತಸ್ರಾವವಾಗದಂತೆ ಎಚ್ಚರವಹಿಸಲಾಗುತ್ತದೆ.

3. ಅನುವಂಶಿಕ ಕುಸುಮ ರೋಗ ಮತ್ತು ವಾನ್‍ವಿಲ್‍ಬ್ರಾಂಡ್ ರೋಗ ಎಂಬ ರಕ್ತತಟ್ಟೆಗಳ ರೋಗದಿಂದ ಬಳಲುತ್ತಿರುವವರಲ್ಲಿ ಹಲ್ಲು ಕೀಳಿಸಲೇಬಾರದು. ಒಂದು ವೇಳೆ ಗೊತ್ತಿಲ್ಲದೆ ಹಲ್ಲು ಕಿತ್ತಲ್ಲಿ ತೀವ್ರ ರಕ್ರಸ್ರಾವವಾಗಿ ಜೀವಕ್ಕೇ ಕುತ್ತು ತರಬಹುದು. ಇಂಥಹ ರೋಗಿಗಳನ್ನು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಿಸಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಿ, ರಕ್ತಪೂರಣದ ವ್ಯವಸ್ಥೆ ಮಾಡಿದ ಬಳಿಕವೇ ಹಲ್ಲು ಕೀಳತಕ್ಕದು.

4. ಡೆಂಗು, ಚಿಕುನ್‍ಗುನ್ಯ ರೋಗಗಳಿಂದ ಬಳಲಿದ್ದಲಿ, ರಕ್ತದಲ್ಲಿ ರಕ್ತತಟ್ಟೆಗಳ ಸಂಖ್ಯೆ ಕಡಿಮೆಯಾಗಿ ಹಲ್ಲು ಕಿತ್ತ ಬಳಿಕ ರಕ್ತಸ್ರಾವವಾಗಬಹುದು. ಅದೆ ರೀತಿ ತ್ರೊಂಬೊಸೈಟೋಪಿನಿಯಾ ಎಂಬ ರೋಗದ ಸ್ಥಿತಿಯಲ್ಲಿ ರಕ್ತಸ್ರಾವ ಜಾಸ್ತಿ ಉಂಟಾಗುತ್ತದೆ.

5. ಕೆಲವೊಂದು ಔಷದಿ ತೆಗೆದುಕೊಂಡಾಗ ಎಲುಬಿನ ಒಳಗಿರುವ ಅಸ್ತಿಮಜ್ಜೆಯನ್ನು ರಕ್ತಕಣಗಳನ್ನು ಉತ್ಪತ್ತಿ ಮಾಡzಂತೆ ತಡೆಯುತ್ತದೆ. ಕ್ಲೋರಾಮ್‍ಫೆನಿಕಾಲ್, ಕ್ಯಾನ್ಸರ್ ಗುಣಪಡಿಸುವ ಕಿಮೋಥೆರಸಿ ಔಷದಿಗಳು, ಸ್ಟಿರಾಯ್ಡಗಳನ್ನು ಸೇವಿಸುವ ಸಮಯದಲ್ಲಿ ಹಲ್ಲು ಕೀಳುವಾಗ ಬಹಳ ಜಾಗ್ರತೆ ವಹಿಸಬೇಕು. ಇಲ್ಲವಾದಲ್ಲಿ ತೀವ್ರ ರಕ್ತಸ್ರಾವವಾಗಬಹುದು.

6. ರಕ್ತದ್ರ ಕ್ಯಾನ್ಸರ್ (ಲೂಕೊಮಿಯಾ) ಮಲ್ಟಿಪಲ್ ಮೈಲೋಮಾ ರೋಗದಿಂದ ಬಳಲುತ್ತಿರುವರಲಿ,್ಲ ಅಜಮಜ್ಜೆಯಲ್ಲಿ ಸರಿಯಾಗಿ ರಕ್ತದ ಕಣಗಳು ಉತ್ಪತಿಯಾಗದೆ ಆಪಕವಾದ ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು ಮತ್ತು ಪ್ಲೇಟ್‍ಲೇಟ್‍ಗಳು ರಕ್ತದಲ್ಲಿರುತ್ತದೆ. ಇಂತಹ ರೋಗಿಗಳಲ್ಲಿ ಹಲ್ಲು ಕೀಳಲೇಬಾರದು.

7. ಹಿಮಾಂಜಿಯೋಮಾ, ಆರ್ಟಿರೋವೀನಸ್ ಮಾಲ್‍ಪಾರ್ಮೆಶನ್ ಎಂಬ ರೋಗಿಗಳಲ್ಲೂ ಹಲ್ಲು ಕೀಳುವುದು ಸಂಪೂರ್ಣವಾಗಿ ನಿಷಿದ್ದ. ಒಂದು ವೇಳೆ ಗೊತ್ತಿಲ್ಲದೆ ಹಲ್ಲು ಕಿತ್ತಲ್ಲಿ ಜೀವಕ್ಕೆ ಕುತ್ತು ತರಬಹುದು.

8. ಮಧುಮೇಹ ರೋಗಿಗಳಲ್ಲಿ, ಬಹಳ ವರ್ಷಗಳಿಂದ ಮಧುಮೇಹ ರೋಗವನ್ನು ನಿಯಂತ್ರಿಸಲು ಔಷಧಿ ಬಳಲುತ್ತಿದ್ದಲ್ಲಿ, ಎಲುಬಿನೊಳಗಿನ ಅಸ್ಥಿಮಜ್ಜೆಯಲ್ಲಿ ರಕ್ತದ ಕಣಗಳು ಉತ್ಪತಿಯಾಗದಂತೆ ಅಡ್ಡ ಪರಿಣಾಮ ಬೀರುತ್ತದೆ. ಇಂತಹ ರೋಗಿಗಳಲ್ಲಿ ರಕ್ತ ತಟ್ಟೆಗಳು ಮತ್ತು ಇತರ ರಕ್ತ ಕಣಗಳ ಸಂಖ್ಯೆ ವಿಪರೀತವಾಗಿ ಕುಂಠಿತಗೊಂಡು ಹಲ್ಲು ಕಿತ್ತ ಬಳಿಕ ರಕ್ತಸ್ರಾವವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೊನೆಯ ಮಾತು

ಸಾಮಾನ್ಯವಾಗಿ ಹಲ್ಲು ಕಿತ್ತಾಗ 10 ರಿಂದ 30 ಮಿ.ಲೀ ರಕ್ತ ಸೋರಿ ಹೋಗುತ್ತದೆ. ಹಲ್ಲು ಕಿತ್ತ ಬಳಿಕ ಜೋರಾಗಿ ರಕ್ತ ಬರುತ್ತಿದ್ದಲ್ಲಿ ಹೊಲಿಗೆ ಹಾಕಿ, ಒತ್ತಡ ಹೇರಿ ಇಲ್ಲವೇ ಔಷಧಿ ನೀಡಿ ರಕ್ತಸ್ರಾವವನ್ನು ನಿಲ್ಲಿಸಲಾಗುತ್ತದೆ. ಹಲ್ಲು ಕಿತ್ತು ಸುಮಾರು ಅರ್ಧಗಂಟೆಗಳ ಬಳಿಕವೂ ರಕ್ತಸ್ರಾವವಾಗುತ್ತಿದ್ದಲ್ಲಿ, ಯಾವ ಕಾರಣಕ್ಕಾಗಿ ರಕ್ತ ಬರುತ್ತಿದೆ ಎಂಬುದನ್ನು ತಿಳಿದುಕೊಂಡು ಸೂಕ್ತ ಚಿಕಿತ್ಸೆ ಸಕಾಲದಲ್ಲಿ ನೀಡತಕ್ಕದ್ದು. ಪ್ರತಿಬಾರಿ ಹಲ್ಲು ಕೀಳುವಾಗಲೂ ವೈದ್ಯರು, ರೋಗಿಯ ಬಳಿ ರೋಗಿಯ ರೋಗದ ಬಗೆಗಿನ ಸಂಪೂರ್ಣ ಮಾಹಿತಿ ಪಡೆಯತಕ್ಕದ್ದು ಮತ್ತು ದಾಖಲಿಸಬೇಕು. ಅದೇ ರೀತಿ ರೋಗಿಗಳು ಕೂಡ ವೈದ್ಯರ ಬಳಿ ಸಂಪೂರ್ಣವಾಗಿ, ತಮ್ಮ ರೋಗದ ಬಗೆಗಿನ ಮಾಹಿತಿ ನೀಡಬೇಕು. ರಕ್ತದೊತ್ತಡ, ಮಧುಮೇ ಹ, ಹೃದಯ ಸಂಬಂಧಿ ರೋಗ, ರಕ್ತ ಸಂಬಂದಿ ರೋಗಗಳಿಂದ ಬಳಲುತ್ತಿದ್ದಲ್ಲಿ ಮೊದಲಾಗಿ ವೈದ್ಯರ ಬಳಿ ಯಾವುದೇ ಮುಚ್ಚುಮರೆ ಇಲ್ಲದೆ ಹೇಳಿಕೊಳ್ಳಬೇಕು. ಯಾವುದೇ ಔಷಧಿ ತೆಗೆದುಕೊಳ್ಳುತ್ತಿದ್ದಲ್ಲಿ ಎಲ್ಲವನ್ನೂ ವೈದ್ಯರಿಗೆ ಹೇಳಲೇಬೇಕು. ದಂತವೈದ್ಯ ಮತ್ತು ರೋಗಿಗಳ ನಡುವೆ ಮದುರ ಬಾಂಧವ್ಯ ಮತ್ತು ನಂಬಿಕೆ ಹುಟ್ಟಿದ್ದಲ್ಲಿ ಯಾವುದೇ ಸಮಸ್ಯೆ ಉದ್ಬವಿಸದು.

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ, ಮಂಜೇಶ್ವರ – 671323     

ದೂ.: 04998-273544, 235111     ಮೊ.: 9845135787

Share this: