Vydyaloka

ಹಲ್ಲಿ ಅಪಶಕುನಗಳಿಗೆ ಆಸ್ತಿಯೇ?

ಹಲ್ಲಿ ಎಂಬ ಪ್ರಾಣಿ ನಿಜವಾಗಿಯೂ ಅಪಶಕುನಗಳನ್ನು ಹುಟ್ಟಿನಿಂದಲೇ ಆಸ್ತಿ ಮಾಡಿಕೊಂಡಿದೆಯೇ? ನಡೆದು ಹೋದ ಮತ್ತು ನಡೆದು ಹೋಗುತ್ತಿರುವ ಕ್ರಿಯೆಗಳನ್ನು ಗಮನಿಸಿದಾಗ ಅಲ್ಲ ಎಂದು ಹೇಳಲಾಗದು. ನಮ್ಮ ಬೆರಳ ಗಾತ್ರಗಳಿಗಿಂತ ಕೊಂಚ ಉದ್ದವಿರುವ ಈ ಹಲ್ಲಿಗಳು ಮನುಷ್ಯನ ನಾನಾ ಗಾಬರಿಗಳಿಗೆ ಕಾರಣವಾಗಿರುವುದು ಆಶ್ಚರ್ಯಕರ.

ಹಲ್ಲಿಗಳ ಬಗ್ಗೆ ನಮ್ಮಲ್ಲಿ ಅಪಾರವಾದ ಕೆಟ್ಟ ಅಪಶಕುನಗಳು ಮುಂಚೂಣಿಯಲ್ಲಿವೆ. ಹಲ್ಲಿಗಳು ಗೋಡೆಯ ಮೇಲಿದ್ದರೂ ನೆಲದಲ್ಲಿರುವ ಮನುಷ್ಯನಿಗೆ ಅಪತ್ಕಾಲ ಅಥವಾ ಒಳ್ಳೆಯ ಕಾಲಗಳನ್ನು ನೆನಪಿಸುವ ಶಕ್ತಿ ಎಂಬ ನಂಬಿಕೆ. ಮನುಷ್ಯನ ನೇರ ತಲೆಗೆ ಬಿದ್ದರೆ ಒಂದು ರೀತಿಯ ಅವಘಡವಾದರೆ, ಗಲ್ಲದ ಮೇಲೆ ಬಿದ್ದರೆ ಇನ್ನೊಂದು ರೀತಿಯಲ್ಲಿ ಅವಘಡ, ಮೇಲು ತುಟಿಯ ಮೇಲೆ ಬಿದ್ದರಂತೂ ಐಶ್ವರ್ಯವೆಲ್ಲ ಐಸ್‍ನಂತೆ ಕರಗುವುದೆಂಬ ನಂಬಿಕೆ.

ಒಳ್ಳೆಯ ಶಕುನ

ಬರೀ ಕೆಟ್ಟ ಅಪಶಕುನ ಎಂಬ ಪದದ ಮುಂಚೂಣಿಯಲ್ಲಿರುವ ಹಲ್ಲಿಗಳು ಒಳ್ಳೆಯ ಶಕುನಗಳನ್ನೂ ಬಿಗಿದಪ್ಪಿದೆ. ಮನುಷ್ಯನ ಕೆಲ ಅಂಗಾಗಳಿಗೆ ಹಲ್ಲಿಯ ಸ್ಪರ್ಶವಾದರೆ ಶುಭಯೋಗಗಳುಂಟು. ಮನುಷ್ಯನ ಮೊಣಕಾಲು, ಹಿಮ್ಮಡಿ ಗಂಟಿಗೆ ಹಲ್ಲಿ ಸ್ಪರ್ಶವಾದರೆ ಶುಭ. ಪಾದದ ಮೇಲೆ ಬಿದ್ದರೆ ವಿದೇಶ ಪ್ರವಾಸದ ಯೋಗ ಎಂಬುದು ಮತ್ತೊಂದು ನಂಬಿಕೆ.

ಹಲ್ಲಿ ಶಾಸ್ತ್ರ

ಮನುಷ್ಯನ 50 ರಿಂದ 60 ವಿವಿಧ ಭಾಗಗಳಲ್ಲಿ ಹಲ್ಲಿ ಬಿದ್ದರೆ ಅಥವಾ ಹಲ್ಲಿಯ ಸ್ಪರ್ಶವಾದರೆ ವಿವಿಧ ಶಕುನಗಳಿವೆಯೆಂದು ಗೌಳಿ ಶಾಸ್ತ್ರದ ಪ್ರಕಾರ ಹೇಳಲಾಗುತ್ತಿದೆ. ಈ ಶಾಸ್ತ್ರದ ಪ್ರಕಾರ ಹಲ್ಲಿಯೊಂದು ಮೈಮೇಲೆ ಬಿದ್ದರೆ ಮೊದಲಿಗೆ ತಡ ಮಾಡದೆ ಸ್ನಾನ ಮಾಡಿ ದೇವರ ಕೋಣೆಯಲ್ಲಿ ದೀಪ ಹಚ್ಚಿ ಪೂಜಿಸಿ ಮಹಾ ಮೃತ್ಯುಂಜಯ ಮಂತ್ರವನ್ನು ಜಪಿಸುವುದು. ಮಣ್ಣಿನ ದೀಪ ಅಥವಾ ಎಳ್ಳೆಣ್ಣೆಯನ್ನು ದಾನ ಮಾಡುವುದರಿಂದಲೂ ಕೆಡುಕು ಮತ್ತು ದೋಷಗಳನ್ನು ಪರಿಹಾರ ಮಾಡಿಕೊಳ್ಳುವುದು. ಪುರುಷ ಮತ್ತು ಮಹಿಳೆ ಮೇಲೆ ಬಿದ್ದಾಗ ಹಲ್ಲಿಯ ಶಕುನಗಳನ್ನು ಪ್ರತ್ಯೇಕವಾಗಿ ನೋಡಲಾಗಿದೆ.

ದೀಪಾವಳಿ ಮತ್ತು ಹಲ್ಲಿ

ಹಲ್ಲಿಗಳ ಶಕುನ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳಲ್ಲೂ ವೈವಿಧ್ಯತೆ ಕಾಣುತ್ತದೆ. ಕಂಡ ಕಂಡಲ್ಲಿ ಹಲ್ಲಿಗಳಿಗೆ ತಿರಸ್ಕಾರಗಳಿದ್ದರೂ, ದೀಪಾವಳಿಯ ಸಮಯದಲ್ಲಿ ಎಲ್ಲರೂ ತಮ್ಮ ಮನೆಯ ಗೋಡೆಗಳ ಮೇಲೆ ಕಾಣ ಬಯಸುತ್ತಾರೆ. ಕಾರಣ ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತವೆಂಬಂತೆ ಹಲ್ಲಿಗಳನ್ನು ಆ ದಿನಗಳಲ್ಲಿ ನೋಡುತ್ತಾರೆ.

ಉ. ದೇವರಾಯ ಪ್ರಭು
ಮೊ.: 8105100123

Share this: