Vydyaloka

ದೊಡ್ಡ ಕರುಳಿನ ಕ್ಯಾನ್ಸರ್

ದೊಡ್ಡ ಕರುಳಿನ ಕ್ಯಾನ್ಸರ್ ಮೂಲತಃ ಆಹಾರಕ್ಕೆ ಸಂಬಂಧಿಸಿದ ಕಾಯಿಲೆ. ನಿಮ್ಮಲ್ಲಿ ಆರೋಗ್ಯಕರವಾದ ಆಹಾರವನ್ನು ಸೇವಿಸುವ ಅಭ್ಯಾಸವಿದ್ದಲ್ಲಿ ಈ ರೋಗವನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಹಾನಿಕಾರಕ ಆಹಾರ ಸೇವನೆಯನ್ನು ಬಿಡಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿರಿ. 

ಕ್ಯಾನ್ಸರ್ ಎಂದರೆ ಬಹಳಷ್ಟು ಜನರ ದೃಷ್ಟಿಯಲ್ಲಿ ಸಾವೆಂದೇ ಅನಿಸುತ್ತದೆ ಮತ್ತು ಅಂತಹ ಭಯ ಅವರನ್ನು ಆ ಕಾಯಿಲೆಯಿಂದ ಹೊರಬರಲು ಬಿಡುವುದಿಲ್ಲ ಮತ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅಸಮರ್ಥರನ್ನಾಗಿ ಮಾಡುತ್ತದೆ. ಆದರೆ ಅವರು ಹೆಚ್ಚಿನ ಆತ್ಮ ಸ್ಥೈರ್ಯವನ್ನು ಹೊಂದಿದ್ದರೆ, ಗಟ್ಟಿ ಮನಸ್ಸಿನವರಾಗಿದ್ದರೆ, ಪರಿವಾರ ಮತ್ತು ಸ್ನೇಹಿತರ ಸಹಾಯವಿದ್ದಾಗ, ಒಳ್ಳೆಯ ವೈದ್ಯರ ಶುಶ್ರೂಷೆ ಮತ್ತು ಉತ್ತಮ ಔಷಧಿಗಳು ದೊರೆತರೆ, ಅವರೂ ಉತ್ತಮವಾದ ಮತ್ತು ದೀರ್ಘಕಾಲ ಬದುಕನ್ನು ನಡೆಸಬಹುದು. ನನಗೆ ಹತ್ತಿರದ ಪರಿಚಿತರೊಬ್ಬರು ದೊಡ್ಡ ಕರುಳಿನ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು ಮತ್ತು ಆ ವ್ಯಕ್ತಿ ಎಷ್ಟು ಧೈರ್ಯದಿಂದ ಹೋರಾಡಿ  ಕ್ಯಾನ್ಸರ್‍ನಿಂದ ಮುಕ್ತರಾಗಿದ್ದಾರೆಂದೂ ತಿಳಿದಿದೆ.

ದೊಡ್ಡ ಕರುಳಿನ ಕ್ಯಾನ್ಸರ್ ನಿಯಂತ್ರಣ:

ದೊಡ್ಡ ಕರುಳಿನ ಕ್ಯಾನ್ಸರ್ ಮೂಲತಃ ಆಹಾರಕ್ಕೆ ಸಂಬಂಧಿಸಿದ ಕಾಯಿಲೆ, ನಿಮ್ಮಲ್ಲಿ ಆರೋಗ್ಯಕರವಾದ ಆಹಾರವನ್ನು ಸೇವಿಸುವ ಅಭ್ಯಾಸವಿದ್ದಲ್ಲಿ ಈ ರೋಗವನ್ನು ತಡೆಗಟ್ಟಬಹುದಾಗಿದೆ. ಮೇಲಾಗಿ, ನೀವು ದೊಡ್ಡ ಕರುಳಿನ ಕ್ಯಾನ್ಸರ್ ಮೊದಲ ಹಂತದಲ್ಲಿದ್ದರೆ ಅದನ್ನು ನಿಯಂತ್ರಿಸಬಹುದಾಗಿದೆ. ಆದ್ದರಿಂದ ಹಾನಿಕಾರಕ ಆಹಾರ ಸೇವನೆಯನ್ನು ಬಿಡಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿರಿ. ನೀವು ನಿಮ್ಮ ದೇಹದಲ್ಲಿ ಆರೋಗ್ಯಕರವೆನಿಸುವ ಕ್ಯಾನ್ಸರ್ಕಾರಕವಲ್ಲದ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು ವಿಶೇಷತಃ ನಿಮ್ಮ ಕರುಳಿನಲ್ಲಿ ಆರೋಗ್ಯಕರ ಕೀಟಾಣುಗಳು ಉತ್ಪತ್ತಿಯಾಗುವಂತೆ ನೋಡಿಕೊಳ್ಳಬೇಕು.

ದೊಡ್ಡ ಕರುಳಿನ ಮೇಲ್ಭಾಗದಲ್ಲಿ ಕ್ಯಾನ್ಸರ್‍ಕಾರಕ ಬೆಳವಣಿಗೆಗಳು ಕಂಡು ಬಂದಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ ಎನ್ನಲಾಗುತ್ತದೆ. ಕರುಳಿನ ಕ್ಯಾನ್ಸರ್ ಒಟ್ಟು ಐದು ಹಂತದಲ್ಲಿ ಗುರುತಿಸಲಾಗುತ್ತದೆ ಮತ್ತು ಈ ರೋಗದ ಲಕ್ಷಣವನ್ನು ಬೇಗ ಗುರುತಿಸಿದಾಗ ರೋಗವು ದೇಹದ ಬೇರೆ ಭಾಗಗಳಿಗೆ ಹರಡದಂತೆ ತಡೆದು ಸಂಪೂರ್ಣವಾಗಿ ಗುಣಮುಖರಾಗುವಂತೆ ನೋಡಿಕೊಳ್ಳಬಹುದಾಗಿದೆ. ಈ ಕಾರಣಕ್ಕಾಗಿ ಐವತ್ತು ವರ್ಷದ ನಂತರ ನಿಯಮಿತವಾಗಿ ಆಗಾಗ ದೊಡ್ಡ ಕರುಳಿನ ಕ್ಯಾನ್ಸರ್ ಪರೀಕ್ಷಣೆ ಮಾಡಿಸಿಕೊಳ್ಳುತ್ತಿರಬೇಕು, ಅದರಲ್ಲೂ ನಿಮ್ಮಲ್ಲಿ ಆ ಲಕ್ಷಣಗಳು ಮತ್ತು ಅಪಾಯ ಹೆಚ್ಚಿದ್ದಾಗ ನಿಯಮಿತವಾಗಿ ಪರೀಕ್ಷಿಸಿಕೊಳ್ಳುತ್ತಿರಬೇಕು.

ದೊಡ್ಡ ಕರುಳಿನ ಕ್ಯಾನ್ಸರ್‍ಗೆ ಸಾಮಾನ್ಯ ಚಿಕಿತ್ಸೆಗಳು ಶಸ್ತ್ರ ಚಿಕಿತ್ಸೆ, ರೇಡಿಯೋ ಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಕಿಮೋ ಥೆರಪಿ ಮತ್ತು ನಿಯಮಿತ ಗುರಿಯ ಔಷಧೀಯ ಚಿಕಿತ್ಸೆ.  ಕ್ಯಾನ್ಸರ್‍ನ ಪ್ರಾರಂಭಿಕ ಹಂತದಲ್ಲಿ, ಶಸ್ತ್ರ ಚಿಕಿತ್ಸೆಯ ಮೂಲಕ ಕ್ಯಾನ್ಸರ್ ಪೀಡಿತ ಪ್ರದೇಶವನ್ನು ತೆಗೆಯಲು ಪ್ರಯತ್ನಿಸುತ್ತಾರೆ. ಶಸ್ತ್ರ ಚಿಕಿತ್ಸೆ ಮತ್ತು ಕಿಮೋ ಥೆರಪಿ ಎರಡನ್ನೂ ಕೆಲವು ರೋಗಿಗಳಿಗೆ ಕೊಡಲಾಗುತ್ತದೆ, ಔಷಧಿಗಳನ್ನು ಕೊಟ್ಟು ಕ್ಯಾನ್ಸರ್ ಪೀಡಿತವಾದ ಜಾಗವನ್ನು ಕಡಿಮೆ ಮಾಡಿ ಮತ್ತು ನಂತರ ಆ ಕ್ಯಾನ್ಸರ್ ಆಗಿರುವ ಸ್ಥಳವನ್ನು ಶಸ್ತ್ರ ಚಿಕಿತ್ಸೆಯಿಂದ ತೆಗೆಯಲಾಗುತ್ತದೆ. ಕಿಮೋ ಥೆರಪಿಯನ್ನು ಕ್ಯಾನ್ಸರ್ ಕಣಗಳನ್ನು ಹೊಂದಿರುವ ಜೀವಕೋಶಗಳನ್ನು ನಾಶ ಮಾಡಲು ಈ ಔಷಧಿಯ ಪದ್ಧತಿಯನ್ನು ಬಳಸಲಾಗುತ್ತದೆ.

ಕಿಮೋ ಥೆರಪಿಯನ್ನು ಮುಂದಿನ ಹಂತದಲ್ಲಿ ಕ್ಯಾನ್ಸರ್ ಸುತ್ತಲಿನ ಜೀವ ಕೋಶಗಳಲ್ಲಿ ಹಬ್ಬುತ್ತಿದ್ದರೆ ಮತ್ತು ಇತರೆ ಅಂಗಗಳಿಗೆ ಹಬ್ಬುತ್ತಿದ್ದಾಗ ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮುಂದಿನದು ವಿಕಿರಣ ಚಿಕಿತ್ಸೆ ಒಂದು ವೇಳೆ ರೋಗವು ಬಹಳ ಮುಂದುವರೆದ ಹಂತವಾಗಿರದೇ ಹೋದ ಪಕ್ಷದಲ್ಲಿ ಅಥವಾ ಶಸ್ತ್ರ ಚಿಕಿತ್ಸೆಯೊಂದಿಗೆ ಬಳಸಲಾಗುತ್ತದೆ. ಬಹಳ ಶಕ್ತಿಯುತ ಕಿರಣಗಳಾದ ಕ್ಷ-ಕಿರಣಗಳನ್ನು ಬಳಸಿ ಆ ಕ್ಯಾನ್ಸರ್ ಬಾಧಿತ ಜೀವಕೋಶವನ್ನು ನಾಶ ಮಾಡುತ್ತಾರೆ .ಇಲ್ಲವೇ ಅವುಗಳ ಪ್ರಮಾಣವನ್ನು ಕಡಿಮೆ ಮಾಡಿ ನಂತರದಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಯಲಾಗುತ್ತದೆ. ದೊಡ್ಡ ಕರುಳಿನ ಕ್ಯಾನ್ಸರ್ ಕಡೆಯ ಹಂತದಲ್ಲಿ ನಿಯಮಿತ ಗುರಿಯ ಔಷಧೀಯ ಚಿಕಿತ್ಸೆಯನ್ನು ನೀಡಲಾಗುತ್ತದೆ ಆದರೆ ಇದು ಯಾವಾಗಲೂ ಉಪಯುಕ್ತವಾಗಿರುವುದಿಲ್ಲ. ಈ ನಿಯಮಿತ ಗುರಿಯ ಔಷಧೀಯ ಚಿಕಿತ್ಸೆಯಲ್ಲಿ ಏನಾದರೂ ಕಡಿಮೆ ಯಾದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೇಯುತ್ತವೆ ಮತ್ತು ಇಮ್ಮಡಿಯಾಗುತ್ತವೆ.

ನಮ್ಮ ಚಿಕಿತ್ಸಾ ಪದ್ಧತಿಯ ಆಯ್ಕೆಗಳು, ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಯು ಮೂರು ರೀತಿಯ ಸಹಾಯವನ್ನು ಬಯಸುತ್ತಾನೆ ಮೊದಲಿಗೆ ಆಧುನಿಕ ಔಷಧಿಯ ಪದ್ಧತಿಗಳಿಂದ, ಎರಡನೆಯದಾಗಿ ಗಿಡಮೂಲಿಕೆಗಳಿಂದ, ಆಯುರ್ವೇದ, ಹೋಮಿಯೋಪತಿ ಮುಂತಾದ ಮತ್ತು ಮೂರನೆಯದಾಗಿ ಆಧುನಿಕ ಮತ್ತು ಗಿಡಮೂಲಿಕೆಗಳೆರಡರ ಮಿಶ್ರಣ. ಆಶಾದಾಯಕ ಪರಿಣಾಮಗಳು ಸಿಗುವುದರಿಂದ ಮತ್ತು ರೋಗಿಯ ದೈಹಿಕ ಪರಿಸ್ಥಿತಿಯನ್ನು ಗಮನಿಸಿ ನಂತರ ಅವರು ನಿರ್ಧಾರ ತೆಗೆದುಕೊಳ್ಳ ಬಹುದು.

ದೊಡ್ಡ ಕರುಳಿನ ಕ್ಯಾನ್ಸರ್ –  ಆಯುರ್ವೇದ ಚಿಕಿತ್ಸೆ:

ಆಯುರ್ವೇದವು ಕ್ಯಾನ್ಸರ್ ನಿಯಂತ್ರಣಕ್ಕೆ ಸಮಗ್ರವಾದ ದೃಷ್ಟಿಕೋನದ ಚಿಕಿತ್ಸೆಯನ್ನು ಸೂಚಿಸುತ್ತದೆ. ಆಯುರ್ವೇದವು ಮನುಷ್ಯನ ರೋಗವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಗುಣಪಡಿಸಲು ಪ್ರಯತ್ಸಿಸುತ್ತದೆ. ಆಯುರ್ವೇದದ ಪುಸ್ತಕಗಳಲ್ಲಿ ಕ್ಯಾನ್ಸರ್ ಗೆ ಅರ್ಬುದ ಎಂಬ ಪದವನ್ನು ಬಳಸಲಾಗುತ್ತದೆ. ವಿಶಿಷ್ಟವಾದ ಕೋಲೋರಕ್ಟಲ್ ಕ್ಯಾನ್ಸರ್‍ಗಳು ಮುಖ್ಯವಾದ ದೋಷಗಳು ಒಟ್ಟಾಗಿ ಸೇರಿ ರೋಗಕ್ಕೆ ಕಾರಣವಾಗುತ್ತದೆ (ವಾತ, ಪಿತ್ತ ಅಥವಾ ಕಫ ಈ ಮೂರರಲ್ಲಿ ಯಾವುದಾದರೂ) ಅಥವಾ ಕರುಳಿನ ಅವರೋಧದಿಂದ (ಇದರಲ್ಲಿ 8ರಲ್ಲಿ ನಾಲ್ಕನ್ನು ವಿವರಿಸಿದೆ).

ಕಿಬ್ಬೊಟ್ಟೆಯ ರೋಗಗಳು ಮುಖ್ಯವಾಗಿ ಮಂದಾಗ್ನಿಯ (ಕಡಿಮೆ ಜೀರ್ಣ ಶಕ್ತಿಯ) ಕಾರಣದಿಂದ ಉಂಟಾಗುತ್ತದೆ ಮತ್ತು ಈ ಕಾರಣದಿಂದ ಮಲದಲ್ಲಿ ಹೆಚ್ಚಳ (ಹೊಲಸಿನ ಹೆಚ್ಚಳ). ಆಹಾರವು ಅನಾರೋಗ್ಯಕರವಾಗಿದ್ದರೆ, ಸಂಸ್ಕರಿಸಿದ ಆಹಾರ, ಮಂಜುಗಟ್ಟಿಸಿದ, ಜಿಡ್ಡುಗಟ್ಟಿದ ಅಥವಾ ಸರಿಯಾಗಿ ಬೇಯಿಸದ ಆಹಾರಗಳಿಂದ ಈ ದೋಷಗಳು ಉಂಟಾಗುತ್ತವೆ, ಇದರಿಂದ ಪ್ರಾಣ (ಜೀವ ಶಕ್ತಿ) ಅಪಾನ (ಗುದವಾಯು ಶಕ್ತಿ) ಮತ್ತು ಅಗ್ನಿ (ಜೀರ್ಣ ಶಕ್ತಿ). ತ್ಯಾಜ್ಯ ವಸ್ತುಗಳು ನಿರ್ಮಾಣವಾಗುತ್ತವೆ, ಶಕ್ತಿಯು ವ್ಯಯವಾಗುತ್ತದೆ ಮತ್ತು ಪ್ರಾಣನಾಳವು ಮೇಲ್ಭಾಗಕ್ಕೆ ಹೋಗುತ್ತದೆ ಮತ್ತು ಮಲವು (ಹೊಲಸು) ಕೆಳಭಾಗಕ್ಕೆ ಹೋಗುವುದು ಮತ್ತು ಬರುವುದಕ್ಕೆ ಅಡಚಣೆ ಉಂಟಾಗುತ್ತದೆ.

ಆಯುರ್ವೇದದ ಸಾಮಾನ್ಯವಾದ ಕ್ಯಾನ್ಸರ್ ನಿವಾರಕಗಳು:

ಆಮಲಕಿ (ನೆಲ್ಲಿಕಾಯಿ), ಅಶ್ವಗಂಧಾ, ಶತಾವರಿ, ಮಂಜಿಷ್ಠಾ, ದಶಮೂಲಗಳು, ತ್ರಿಫಲಾ.

ಅಗ್ನಿಯನ್ನು ಹೆಚ್ಚಿಸುವ ಮೂಲಿಕೆಗಳು:

ಶುಂಠಿ, ತ್ರಿಕಟು, ಅವಿಪಿತ್ತಕಾರ ಪುಡಿ, ತ್ರಿಫಲಾ, ಯಷ್ಠಿಮಧು.

ದೊಡ್ಡ ಕರುಳಿನ ಕ್ಯಾನ್ಸರ್‍ಗೆ ಆಯುರ್ವೇದ ಪಥ್ಯ:
1. ವೈಯಕ್ತಿಕವಾಗಿ ನಿಮ್ಮ ದೇಹಗುಣಕ್ಕನುಗುಣವಾಗಿ ಆಯುರ್ವೇದ ಪಥ್ಯವನ್ನು ಅನುಸರಿಸಿರಿ.

2. ಸಾಮಾನ್ಯವಾಗಿ ಶೇಖರಿಸಿ ಸಂಸ್ಕರಿಸಿದ ಅಹಾರಗಳನ್ನು ತೆಗೆದುಕೊಳ್ಳಬೇಡಿ, ಸಂಸ್ಕರಿಸಿದ ಸಕ್ಕರೆ, ರಸಾಯನಿಕಗಳು ಮತ್ತು ಸೇರ್ಪಡಿಸಿದ ಪದಾರ್ಥಗಳನ್ನು ಹೊಂದಿರುವ ಆಹಾರಗಳನ್ನು ತೆಗೆದುಕೊಳ್ಳಬೇಡಿ.

3. ಕೆಂಪು ಮಾಂಸವನ್ನು ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ. ಶಾಖಾಹಾರಿಗಳಾಗಿ.

4. ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಸಿ (ದಿನಕ್ಕೆ ಒಂದು ಎಸಳು).

5.  ಆಹಾರದಲ್ಲಿ ಈರುಳ್ಳಿಯನ್ನು ಬಳಸಿ.

6.  ಆಹಾರದಲ್ಲಿ ತರಾವರಿ ತರಕಾರಿಗಳನ್ನು ಬಳಸಿ – ಎಲೆಕೋಸು, ಹೂಕೋಸು, ಗಜ್ಜರಿ(ಕ್ಯಾರೆಟ್) ಪಾಲಕ್, ಟೊಮೆಟೊ, ಸೇಬು ಮುಂತಾದವು.

7. ತಾಜಾ ಅರಿಶಿನವನ್ನು ಬಳಸಲೇ ಬೇಕು.

8. ಆಲೀವ್ ಎಣ್ಣೆಯನ್ನು ಅಡುಗೆ ಮಾಡಲು ಮತ್ತು ಕೊಸಂಬರಿಯನ್ನು ಅಲಂಕರಿಸಲು ಬಳಸಿ

9. ಕ್ಷಾರಯುತ ಹಣ್ಣುಗಳು, ನೆಲ್ಲಿಕಾಯಿ, ದ್ರಾಕ್ಷಿಗಳನ್ನನು ಬಳಸಿ.

ಎಚ್ಚರಿಕೆಯ ಮಾತು: ದಯವಿಟ್ಟು ನಿಮ್ಮ ಕ್ಯಾನ್ಸರ್ ಚಿಕಿತ್ಸೆಗಾಗಿ ನುರಿತ ವೈದ್ಯರು ಮತ್ತು ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ. ನಿಮಗೆ ನೀವೇ ವೈದ್ಯರಾಗಬೇಡಿ.

ಡಾ. ವಿಭೂತಿ ಎಸ್. ರಾವ್
ಅಮೃತ್ ಆಯುರ್ವೇದ ಸೆಂಟರ್

66/3, ವಾಣಿವಿಲಾಸ್ ರಸ್ತೆ, ಬಸವನಗುಡಿ, ಬೆಂಗಳೂರು-560004
ಫೋನ್ : 9972060989
Email : drvibhuthirao@gmail.com
Web : www.amruthayurvedic.com

Share this: