Vydyaloka

ಧೂಮಪಾನ ಮಾಡದಿರಿ; ಮಾಡಲು ಬಿಡದಿರಿ

tobacco-smoking

ಧೂಮಪಾನ ಮಾಡದಿರಿ; ಮಾಡಲು ಬಿಡದಿರಿ.ಹೊಗೆಸೊಪ್ಪು ವರ್ಜಿಸುವುದರಿಂದ ಹೃದಯ ಸ್ಥಂಬನ, ಶ್ವಾಸಕೋಷದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಕೈ ಕಾಲಿನ ಗ್ಯಾಂಗ್ರೀನ್, ನಪುಂಸಕತ್ವ, ಬಂಜೆತನ ಮುಂತಾದ ಘೋರ ಖಾಯಿಲೆಗಳನ್ನು ತಡೆಗಟ್ಟಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಕೋವಿಡ್ ಸಮಯದಲ್ಲಿ ಧೂಮಪಾನ ಮಾಡದಿರುವುದು ಉತ್ತಮ.

ವಿಶ್ವ ಆರೋಗ್ಯ ಸಂಸ್ಥೆಯು (W.H.O.) ಪ್ರತಿವರ್ಷದ ಮೇ 31ನ್ನು “ವಿಶ್ವ ತಂಬಾಕು ನಿಗ್ರಹ ದಿನ” ವಾಗಿ 1987ರಲ್ಲಿ ಘೋಷಿಸಿದೆ. ಸಿಗರೇಟ್, ಸಿಗಾರ್, ಬೀಡಿ, ಹುಕ್ಕಾ ಸೇರಿದಂತೆ ಎಲ್ಲ ರೀತಿಯ ತಂಬಾಕು ಉತ್ಪನ್ನಗಳ ಅಪಾಯವನ್ನು ಜನರ ಮುಂದಿಟ್ಟು, ಕನಿಷ್ಠ ಒಂದು ದಿನವಾದರೂ ಅವುಗಳಿಂದ ದೂರ ಇಡುವಂತೆ ಚಟದಾಸರಿಗೆ ಪ್ರೇರಣೆ ನೀಡುವುದು ಈ ದಿನದ ಉದ್ದೇಶ. ಪ್ರಪಂಚದಲ್ಲಿ ಪ್ರತಿವರ್ಷ ತಂಬಾಕಿನಿಂದ 60 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಈ ಪೈಕಿ 6 ಲಕ್ಷ ಜನರು ಧೂಮಪಾನ ಮಾಡದೇ ಹೋದರೂ, ಧೂಮಪಾನಿಗಳ ಹೊಗೆಯನ್ನು ಪರೋಕ್ಷವಾಗಿ ಸೇವಿಸಿ ಅಪಾಯಕ್ಕೆ ಈಡಾಗುತ್ತಿದ್ದಾರೆ.

ದೇಹವನ್ನು ದಂಡಿಸಿ ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಮಾಡುವವರು ಎಷ್ಟು ಶ್ರಮ ವಹಿಸುತ್ತಾರೆ ಎಂದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಯಾವುದೇ ಶ್ರಮ ವಹಿಸದೇ ತಾವು ಕೂಡ ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಎಂದು ತಮ್ಮ ಬಗ್ಗೆ ಹೆಮ್ಮೆಯಿಂದ ಹೇಳುವವರೂ ಇದ್ದಾರೆ. ಅವರಾರು ಗೊತ್ತಾ? ಸಿಗರೇಟು ಸೇದುವವರು! ಸಿಗರೇಟು ಯಾಕೆ ಸೇದುತ್ತಾರೆ? ಸಿಗರೇಟು ಸೇದುವುದು ಸ್ಟೈಲಿಗೋ, ಹವ್ಯಾಸಕ್ಕೋ, ಯಾರನ್ನೋ ಮೆಚ್ಚಿಸಲಿಕ್ಕೋ, ಮನಸ್ಸನ್ನು ಹಗುರ ಮಾಡಲಿಕ್ಕೋ, ದುಗುಡವನ್ನು ಕಡಿಮೆ ಮಾಡಲಿಕ್ಕೋ, ಅಪ್ಪ ಸೇದುತ್ತಾನೆಂದೋ ಅಥವಾ ಅದೊಂದು ಅಡಿಕ್ಷನ್ನೋ ಬಹುಶಃ ಧೂಮಲೀಲೆಯ ಪರಿಣಿತರಿಗೂ ಗೊತ್ತಿರಲಿಕ್ಕಿಲ್ಲ. ಇದೊಂದು ಬಗೆಹರಿಸಲಾಗದ ಚಿದಂಬರ ರಹಸ್ಯ. ಒಟ್ಟಿನಲ್ಲಿ ತುಟಿಯ ತುದಿಯಲ್ಲಿ ಸಿಗರೇಟಿಗೆ ಬೆಂಕಿ ಹತ್ತಿಸಿ, ಸುರುಳಿಸುರುಳಿಯಾಗಿ ಹೊಗೆ ಬಿಡುತ್ತಿರಬೇಕು ಅಷ್ಟೇ!!!

ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ- ಕಡಿಮೆ ಮಾಡಲು ಸಾಧ್ಯವಾಗಿಲ್ಲ:

ಈ ಪ್ರಶ್ನೆಗಳಿಗೆ ನಿಖರವಾದ ಉತ್ತರ ಎಂದೂ ದೊರೆಯುವುದಿಲ್ಲ. ತಂಬಾಕಿನಲ್ಲಿ “ನಿಕೋಟಿನ್” ಎಂಬ ಅಪಾಯಕಾರಿ ಪದಾರ್ಥವೇ ಚಟ ಹತ್ತಿಕೊಳ್ಳಲು ಕಾರಣವಾಗುತ್ತದೆ. ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದರೂ ಇದನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಪುರುಷರ ಜೊತೆಗೆ ಮಹಿಳೆಯರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಧೂಮಪಾನ ಆರೋಗ್ಯಕ್ಕೆ, ಅಷ್ಟೇ ಅಲ್ಲದೆ ಸಮಾಜ, ಪರಿಸರ, ಆರ್ಥಿಕ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಒಬ್ಬ ಧೂಮಪಾನಿಯು ಶೇ.25ರಷ್ಟು ಹೊಗೆಯನ್ನು ಒಂದು ಬಾರಿಗೆ ಸೇವಿಸಿದರೆ ಅವನ ಸುತ್ತಮುತ್ತ ಇರುವವರು ಶೇ.75 ರಷ್ಟು ಸೇವಿಸುತ್ತಾರೆ. ಹೊಗೆಸೊಪ್ಪು 4200 ವಿಷಕಾರಕ ವಸ್ತುಗಳನ್ನು ಒಳಗೊಂಡಿದೆ. ಅವುಗಳಲ್ಲಿ 60 ರಷ್ಟು ಕ್ಯಾನ್ಸರ್ ಉಂಟುಮಾಡುತ್ತದೆ! ಹೊಗೆಸೊಪ್ಪು ವರ್ಜಿಸುವುದರಿಂದ ಹೃದಯ ಸ್ಥಂಬನ, ಶ್ವಾಸಕೋಷದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಕೈ ಕಾಲಿನ ಗ್ಯಾಂಗ್ರೀನ್, ನಪುಂಸಕತ್ವ, ಬಂಜೆತನ ಮುಂತಾದ ಘೋರ ಖಾಯಿಲೆಗಳನ್ನು ತಡೆಗಟ್ಟಬಹುದು.

ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕರ, ಹೃದಯಾಘಾತವಾಗತ್ತೆ, ಕ್ಯಾನ್ಸರ್ ಬರುತ್ತೆ ಅಂತ ಎಲ್ಲರಿಗೂ ಗೊತ್ತಿರುತ್ತೆ. ಆದರೂ ಸಿಗರೇಟು ತ್ಯಜಿಸಲು ಏನೋ ಬಿಗುಮಾನ.ಮಕ್ಕಳಿಗೆ ಶಿಕ್ಷಣ ಚೆನ್ನಾಗಿರಲಿ ಅಂತ ದುಡಿಯುವ ಅಪ್ಪ, ಮಕ್ಕಳು ಚೆನ್ನಾಗಿ ಬೆಳೆಯಲಿ ಅಂತ ಬೇಕಿದ್ದನ್ನೆಲ್ಲಾ ಮಾಡಿ ಹಾಕುವ ಅಮ್ಮನಿಗೆ, ಕುಡಿಮೀಸೆ ಚಿಗುರಿರುವ ತಮ್ಮ ಮಗ ಅಥವಾ ಮಗಳು ಕಾಲೇಜಿನ ಹೊರಗೆ ಬೆರಳ ತುದಿಯಲ್ಲಿ ಸಿಗರೇಟು ಹಿಡಿದಿರುತ್ತಾನೆ ಅಂತ ಗೊತ್ತಿರುತ್ತಾ? ಗೊತ್ತಿಲ್ಲದಿದ್ದರೆ ಒಂದು ಬಾರಿ ಚೆಕ್ ಮಾಡಿ! “ಅಷ್ಟು ಈಸಿ ಅಲ್ಲರೀ ಸಿಗರೇಟು ಬಿಡೋದು, ಬೆಳಿಗ್ಗೆ ಒಂದು ದಮ್ ಎಳೆಯದಿದ್ದರೆ ಸರಿಯಾಗಿ ಮೋಷನ್ ಆಗುವುದಿಲ್ಲ ಗೊತ್ತಾ? ನಿಮಗೇನು ಗೊತ್ತು ನಮ್ಮ ಕಷ್ಟ!” ಅಂತ ಡೈಲಾಗು ಸುರುಳಿಯಾಗಿ ಬರುತ್ತಿರುತ್ತವೆ. ನಿಮ್ಮ ವಾದ ನಿಮಗೆ!

ಹೊಗೆಸೊಪ್ಪು — ಆರ್ಥಿಕ ವ್ಯವಸ್ಥೆ , ಪರಿಸರ ಮತ್ತು ಆರೋಗ್ಯ:

1.ಹೊಗೆಸೊಪ್ಪಿಗೆ ವಿದಾಯ – ಆರ್ಥಿಕವಾಗಿ ಆದಾಯ.

2. ವರ್ಷಕ್ಕೆ ಕನಿಷ್ಠ ಹತ್ತು ಸಾವಿರ ಉಳಿತಾಯ.

3. ದೇಶಕ್ಕೆ 30 ಸಾವಿರ ಕೋಟಿ ಉಳಿತಾಯ.

4. 30 ಕಟ್ಟು ಹೊಗೆಸೊಪ್ಪು ಹಾಗೂ 30 ಪ್ಯಾಕ್ ಸಿಗರೇಟ್‍ಗೆ ವಿದಾಯ ಹೇಳಿದರೆ, ಒಂದು ಮರ ರಕ್ಷಿಸಿದಂತೆ.

5. ಹೊಗೆಸೊಪ್ಪು ಹಾಗೂ ಸಿಗರೇಟ್ ಗೆ ಸಂಪೂರ್ಣ ವಿದಾಯ ಹೇಳಿದರೆ ಇಡೀ ಕಾಡನ್ನು ರಕ್ಷಿಸಿದ ಹಾಗೆ.

6. ಭಾರತದಲ್ಲಿ ಪ್ರತಿ 8 ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

7. ಭಾರತದಲ್ಲಿ ಈಗಾಗಲೇ 30 ರಿಂದ 40 ಲಕ್ಷ ಕ್ಯಾನ್ಸರ್ ರೋಗಿಗಳಿದ್ದಾರೆ.

8. ತಂಬಾಕಿಗೆ ಸಂಬಂಧಪಟ್ಟ ಕ್ಯಾನ್ಸರ್ ರೋಗವು ಶೇ.40 ರಷ್ಟಿದೆ.

9. ಇದರಲ್ಲಿ ಶೇ.30 ರಷ್ಟು ಹೆಂಗಸರಿರುವುದು ಬೇಸರದ ಸಂಗತಿ.

ಸಿಗರೇಟ್ ಸೇವನೆ ಹಾಗೂ ಹೃದಯಾಘಾತ:

ಸಿಗರೇಟ್ ಸೇದುವ ಪುರುಷರು ಸೇದದವರಿಗಿಂತ, ಹೆಚ್ಚಿನ ಪ್ರಮಾಣದಲ್ಲಿ, ಕರೋನರಿ ರಕ್ತನಾಳದ ಕಾಯಿಲೆಗೆ ತುತ್ತಾಗುವರು. (ಸುಮಾರು 60-70% ಜಾಸ್ತಿ ಪ್ರಮಾಣದಲ್ಲಿ). ಶೀಘ್ರ ಸಾವು ಅಥವಾ “ಸಡನ್ ಡೆತ್” ಸೇದದೇ ಇರುವವರಿಗಿಂತ 2-4 ಪಟ್ಟು ಹೆಚ್ಚು. ಮಹಿಳೆಯರೂ ಕೂಡಾ ಸಿಗರೇಟ್ ಸೇವನೆಯನ್ನು ಮುಂದುವರೆಸಿದರೆ ಅವರೂ ಹೃದಯದ ಕಾಯಿಲೆಗಳಿಗೆ ತುತ್ತಾಗಬಲ್ಲರು. ಅವರು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಿ, ಸಿಗರೇಟ ಸೇದುತ್ತಿದ್ದರೆ ಈ ಸಂಭವ ಇನ್ನೂ ಜಾಸ್ತಿ.

Also read: ಧೂಮಪಾನ ತಂಬಾಕನ್ನು ತ್ಯಜಿಸಲು ಇದು ಸೂಕ್ತ ಸಮಯ

ಸಿಗರೇಟ್ ಸೇವನೆ ಹಾಗೂ ಕ್ಯಾನ್ಸರ್:

ಇತಿ ಮಿತಿ ಇಲ್ಲದ ಸಿಗರೇಟ್ ಸೇವನೆ, ದೇಹದ ವಿವಿಧ ಭಾಗಗಳ “ಕ್ಯಾನ್ಸರ್” ರೋಗವನ್ನುಂಟು ಮಾಡಿ ವ್ಯಕ್ತಿಯ ಜೀವನವನ್ನೇ “ಕ್ಯಾನ್ಸಲ್” ಮಾಡುತ್ತದೆ ಎಂದರೆ ಉತ್ಪ್ರೇಕ್ಷೆ ಆಗಲಾರದು. ಬಾಯಿ, ಲ್ಯಾರಿಂಕ್ಸ್ (ಧ್ವನಿ ಪೆಟ್ಟಿಗೆ), ಫುಪ್ಫುಸ (ಶ್ವಾಸಕೋಶ), ಅನ್ನನಾಳ, ಹೊಟ್ಟೆ, ಪ್ಯಾಂಕ್ರಿಯಾಸ್, ಮೂತ್ರಕೋಶ, ಮೂತ್ರ ಶೇಖರಿಸುವ ಚೀಲ (ಯುರಿನರಿ ಬ್ಲ್ಯಾಡರ್), ಹೆಣ್ಣು ಮಕ್ಕಳಲ್ಲಿ ಗರ್ಭಾಶಯ, ಗರ್ಭಾಶಯದ ತುದಿ (ಸರ್ವಿಕ್ಸ್) ಮುಂತಾದ ಅವಯವಗಳು, ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ಬೇನೆಗೆ ಗುರಿ ಆಗಬಲ್ಲವು. ರಕ್ತದ ಕ್ಯಾನರ್ ಕೂಡಾ, ಸಿಗರೇಟ್ ಇಲ್ಲವೇ ತಂಬಾಕು ಸೇವನೆಯಿಂದ ಆರಂಭಗೊಳ್ಳುವದು. ಸಿಗರೇಟ್ ಸೇದುವವರು, ಒಂದು ವಾರಕ್ಕೆ ಒಂದು ದಿನದ ಆಯುಷ್ಯನ್ನು ಕಳೆದುಕೊಳ್ಳುತ್ತಾರೆಂದು ತಜÐರು ಎಚ್ಚರಿಕೆ ಹೇಳುತ್ತಾರೆ.

ತಂಬಾಕು ಸೇವಕರು ಅದರ ಗುಲಾಮರಾಗಲು, ಕಾರಣಗಳು ಹಲವಾರು.

1. ಇತ್ತೀಚಿಗೆ, ಒಂದು ಪ್ರಬಲವಾದ “ಜೀನ್ಸ್” (ವಂಶವಾಹಿನಿಗಳು), ಕೂಡಾ, ವಂಶಪಾರಂಪರತೆಯಿಂದ ತಂಬಾಕಿನ ಮೇಲೆ ಅವಲಂಬನೆ ಉಂಟು ಮಾಡುವದೆಂದು ಒಂದು ಸಮೀಕ್ಷೆ ತಿಳಿಸಿದೆ.

2. ಇನ್ನೊಂದು ಕಾರಣ ಅಂದರೆ “ಐಡೆಂಟಿಫೀಕೇಶನ್”!. ಸಿನಿಮಾಗಳಲ್ಲಿ ಪ್ರಸಿದ್ಧ ತಾರೆಯರು, ಸಿಗರೇಟ್ ಸೇದುವ ಶೈಲಿಯನ್ನು, ಹಲವಾರು ಯುವಕರು ಅನುಕರಣೆ ಮಾಡಿ, ತಾವೂ ಸಿಗರೇಟ್ ಸೇವನೆಯನ್ನು ಪ್ರಾರಂಭಿಸುವರು. ಕ್ರಮೇಣ ಅದರ ಮೋಜಿಗೆ ಬಲಿಯಾಗಿ ಎಷ್ಟೇ ಯೋಜನೆ ಹಾಕಿಕೊಂಡರೂ, ಅದರ ಗೋಜು ಬಿಡಲು ಅವರಿಗೆ ಅಸಾಧ್ಯ.

3. ಇನ್ನು ಕೆಲವರು, ತಮ್ಮ ಆತಂಕ, ಖಿನ್ನತೆಯನ್ನು ನಿವಾರಿಸಿಕೊಳ್ಳಲು ತಂಬಾಕು ಸೇವನೆ ಪ್ರಾರಂಭಿಸುವರು. ಮಾನಸಿಕ ಕಾಯಿಲೆಯಾದ “ಮೇನಿಯಾ”ದಲ್ಲಿ ರೋಗಿಗಳು ದಿನಕ್ಕೆ 50 ರಿಂದ 60 ಸಿಗರೇಟ್ ಸೇದಬಲ್ಲರು.

4. ಸಿಗರೇಟ್ ಅಥವಾ ತಂಬಾಕು ಸೇವನೆಯಿಂದ ಶೀಘ್ರವಾಗಿ ಕಂಡುಬರುವ ಕೆಲವು ಶಾರೀರಿಕ ಪರಿಣಾಮಗಳು ಈ ಕೆಳಗಿನಂತಿವೆ. ರಕ್ತದೊತ್ತಡ ಹೆಚ್ಚುವದು. ಹೃದಯದ ಬಡಿತ ತೀವೃಗೊಳ್ಳುವದು. ಹೃದಯದ ಮಾಂಸಖಂಡದ ಅಕುಂಚನಾ ಶಕ್ತಿ ವೃದ್ಧಿ. ಹೃದಯದ ಮುಖ್ಯ ರಕ್ತನಾಳಗಳ “ಕರೋನರಿ” ರಕ್ತನಾಳಗಳಲ್ಲಿ ಅಧಿಕ ರಕ್ತ ಸಂಚಾರ.

5. ತಂಬಾಕು ಸೇದುವವರು ಒಂದು ವಿಶಿಷ್ಟ ವರ್ಗಕ್ಕೆ ಇಲ್ಲವೇ ವ್ಯಕ್ತಿತ್ವಕ್ಕೆ ಸೇರಿರುತ್ತಾರೆಯೇ? ಹೌದು ಎನ್ನುತ್ತದೆ ಕೆಲವೊಂದು ಸಂಶೋಧನೆಗಳು. ಇವರು ಬೇರೆಯವರಿಗಿಂತ ಹೆಚ್ಚು ಕಾಫೀ, ಚಹಾ ಇಲ್ಲವೇ ಮದ್ಯವನ್ನು ಸೇವಿಸುವರು. ಸಿಗರೇಟ್ ಸೇದುವ ಮಹಿಳೆಯರಲ್ಲಿ, ಋತುಸ್ರಾವ ಬೇಗನೇ ಕೊನೆಗೊಳ್ಳುವದು. ಸಿಗರೇಟ್ ಸೇದುವವರು ಹೆಚ್ಚಿಗೆ ವ್ಯಾಯಾಮ ಮಾಡಲಾರರು. ಸ್ವಲ್ಪ ವ್ಯಾಯಾಮ ಮಾಡಿದರೆ ಅವರಿಗೆ ದಣಿವು ಶೀಘ್ರವೇ ಆಗಬಲ್ಲದು. ರಕ್ತದಲ್ಲಿ ಎಚ್. ಡಿ. ಎಲ್. ಹಾಗೂ ಎಲ್. ಡಿ. ಎಲ್. ಕೊಲೆಸ್ಟ್ರಾಲದ ಸರಾಸರಿ ಪ್ರಮಾಣ ಕುಂಠಿತಗೊಳ್ಳುವದು.

ದೇಹದ ಒಳಗೆ ಆಗಿರುವ ಹಾನಿ-ಆಯುರ್ವೇದದ ಸೂಕ್ತ ಪರಿಹಾರ!

ಈಗಾಗಲೇ ಸಾಕಷ್ಟು ಬೀಡಿ, ಸಿಗರೇಟ್ ಸೇದಿ, ಹೊಗೆಸೊಪ್ಪು ಸೇವಿಸಿ ಮಣ್ಣು ತಿನ್ನುವಂಥ ಕೆಲಸ ಮಾಡಿದ್ದೀವಿ. ಇದರ ದುಷ್ಪರಿಣಾಮವನ್ನು ನಿವಾರಿಸುವುದಕ್ಕೆ ಯಾವುದೇ ಪರಿಹಾರ ಇಲ್ಲವೇ ಎಂದು ಸಾಕಷ್ಟು ಜನ ಕೇಳಿರುವುದೂ ಇದೆ! ಇದಕ್ಕೆ ಉತ್ತರ ಇಲ್ಲಿದೆ. “ಮನಸ್ಸಿದ್ದರೆ ಮಾರ್ಗ” ಎನ್ನುವ ಮಾತಿದೆ. ಮನುಷ್ಯ ಮನಸ್ಸು ಮಾಡಿದರೆ ಎಂಥಾ ದೊಡ್ಡ ಸಾಧನೆ ಬೇಕಾದರೂ ಮಾಡಬಹುದು, ಅಂಥದ್ರಲ್ಲಿ ಧೂಮಪಾನ ತ್ಯಜಿಸುವುದು ದೊಡ್ಡ ವಿಷಯ ಏನಲ್ಲ! ಬಿಡುವ ಮನಸ್ಸಿದೆ ಆದರೇ ಎಷ್ಟೇ ಕಷ್ಟ ಪಟ್ಟರೂ ಆಗುತ್ತಿಲ್ಲ ಎನ್ನುವವರಿಗೆ ತಜ್ಞರಿಂದ ಸಲಹೆ (ಕೌನ್ಸೆಲಿಂಗ್) ಅಗತ್ಯ. ಹೇಗೋ ಕಷ್ಟ ಪಟ್ಟು ಧೂಮಪಾನ ಹಾಗೂ ಹೊಗೆಸೊಪ್ಪು ಸೇವನೆ ಬಿಟ್ಟಿದ್ದಾಯ್ತು. ಆದರೇ ದೇಹದ ಒಳಗೆ ಆಗಿರುವ ಹಾನಿಯನ್ನು ರಿಪೇರಿ ಮಾಡುವುದು ಹೇಗೆ? ಅದಕ್ಕೂ ಇದೆ ಆಯುರ್ವೇದದ ಸೂಕ್ತ ಪರಿಹಾರ! ಅಯುರ್ವೇದದ ಸೂಪರ್-ಸ್ಪೆಷಾಲಿಟಿ ಆಗಿರುವ ಪಂಚಕರ್ಮದ ಚಿಕಿತ್ಸೆಯ ಬಗ್ಗೆ ತಮಗೆ ಗೊತ್ತಿರಬಹುದು. ಗೊತ್ತಿಲ್ಲದಿದ್ದರೆ ತಜ್ಞ ವೈದ್ಯರಿಂದ ಮಾಹಿತಿ ಪಡೆಯಿರಿ.

ದೇಹ ಹಾಗೂ ಮನಸ್ಸಿನ ಡೀ-ಟಾಕ್ಸಿಫಿಕೇಷನ್ ಚಿಕಿತ್ಸೆಯೇ ಪಂಚಕರ್ಮ! ನಮ್ಮ ಆಹಾರ, ವಿಹಾರ, ನಾವು ಕಲುಷಿತಗೊಳಿಸಿರುವ ಪರಿಸರ, ಹಾಗೂ ನಮ್ಮ ಜೀವನ ಶೈಲಿಯಿಂದ ಇಂದು ನಾವೆಲ್ಲಾ ದುಬಾರಿ ಹಾಗೂ ವೈವಿಧ್ಯಮಯ ಖಾಯಿಲೆಗಳನ್ನು ಅನುಭವಿಸುತ್ತಿದ್ದೇವೆ. ಇದರಿಂದ ದೇಹದಲ್ಲಿ ಕೋಟ್ಯಂತರ ವಿಷ ಪದಾರ್ಥಗಳು, ಕೃಮಿಕೀಟಗಳು ಸೇರಿಕೊಳ್ಳುತ್ತಿವೆ. ಇದರಿಂದ ಒಳ್ಳೆಯ ಗುಣಮಟ್ಟದ ಜೀವನವನ್ನು ಕಳೆದುಕೊಳ್ಳುತ್ತಿದ್ದೇವೆ. ಆಯಸ್ಸು ಕ್ಷೀಣಿಸುತ್ತಿದೆ. ಇದರಿಂದ ಮನಸ್ಸಿಗೆ ಆಘಾತವಾಗುತ್ತದೆ, ಆಲೋಚನೆಗಳು ಕೆಡುತ್ತವೆ, ಜ್ಞಾಪಕ ಶಕ್ತಿ ಕ್ಷೀಣಿಸುತ್ತದೆ. ಇಂಥ ವಿಷಕಾರಿ ಅಂಶಗಳನ್ನು ಆಗಾಗ ದೇಹದಿಂದ ಹೊರಹಾಕಬೇಕು. ಸಮಯಕ್ಕೆ ಸರಿಯಾಗಿ, ಋತುವಿಗೆ ಅನುಸಾರವಾಗಿ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳುತ್ತಾ ಬಂದರೆ ಕ್ರಮೇಣವಾಗಿ ವಿಷಕಾರಿ ಅಂಶಗಳು ದೇಹವನ್ನು ತೊರೆದು, ಮನಸ್ಸು ಪ್ರಶಾಂತವಾಗಿ, ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ, ಅತ್ಯುತ್ತಮ ಗುಣಮಟ್ಟದ ದೀರ್ಘ ಜೀವನವನ್ನು ಸಂಭ್ರಮಿಸಬಹುದು.

“ಕಿವಿಮಾತು”:

1. ಧೂಮಪಾನ ಮಾಡದಿರಿ; ಮಾಡಲೂ ಬಿಡದಿರಿ.
2. ಧೂಮಪಾನಿಗಳೇ…ಇಂದೇ ತಂಬಾಕು ನಿಲ್ಲಿಸಿ, ಕುಟುಂಬಕ್ಕೆ ಆಸರೆಯಾಗಿ. ಆದಷ್ಟೂ ಬೇಗ ಸಲಹೆ ಹಾಗೂ ಪಂಚಕರ್ಮ ಚಿಕಿತ್ಸೆಯನ್ನು ಪಡೆಯಿರಿ.
3. “ಅನಾಸಾಯೇನ ಮರಣಂ; ವಿನಾದೈನ್ಯೇನ ಜೀವನಂ”
4. ಕೊರಗು ಇಲ್ಲದೇ ಜೀವನ ನಡೆಸಬೇಕು – ನರಳಾಟವಿಲ್ಲದೇ ಸಾಯಬೇಕು

ಒಂದು ವಿಷಯ ನಿಮಗೆ ಗೊತ್ತಾ? ಮೂರಿಂಚಿನ ಸಿಗರೇಟಿನಲ್ಲಿ ಏನೇನಿರತ್ತೆ ಅಂತ? ಕೀಟನಾಶಕದಲ್ಲಿ ಬಳಸಲಾಗುವ ವಿಷಾಕಾರಕ ನಿಕೋಟಿನ್, ಜರ್ಮನಿಯಲ್ಲಿ ಹಿಂದೆ ಮನುಷ್ಯರನ್ನು ಕೊಲ್ಲಲು ಬಳಸಲಾಗುತ್ತಿದ್ದ ಹೈಡ್ರೋಜನ್ ಸೈನೈಡ್, ಇಲಿ ಪಾಶಾಣದಲ್ಲಿ ಉಪಯೋಗಿಸಲಾಗುವ ಅರ್ಸೆನಿಕ್, ಬ್ಯಾಟರಿ ತಯಾರಿಕೆಯಲ್ಲಿ ಬಳಸಲಾಗುವ ಕ್ಯಾಡ್ಮಿಯಂ…..! ಸಾಕಾ ಇನ್ನೂ ಬೇಕಾ?

ಡಾ. ನಿತಿನ್ ವಿ.- ಪಂಚಕರ್ಮ ವಿಶೇಷಜ್ಞ
 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ

ಅಂಚೆಪಾಳ್ಯ, ಕುಂಬಳಗೋಡ್ ಪೋಸ್ಟ್, ಬೆಂಗಳೂರು-ಮೈಸೂರು ಹೈವೇ, ಬೆಂಗಳೂರು.
ದೂ.: +91 99018 65656, 080-22718025   Email: dr.nitin.v.89@gmail.com

Share this: