ದೀಪಾವಳಿ ಸಂಪ್ರದಾಯಗಳು ವಾತ ಶಕ್ತಿಯನ್ನು ಶಾಂತ ಮಾಡುತ್ತವೆ. ದೀಪಾವಳಿ ಸಮಯ ಅತಿ ತಿನ್ನುವಿಕೆ ಹಾಗೂ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಉಸಿರಾಟದ ತೊಂದರೆಗಳಿಂದ ನರಳುವ ಜನರಿಗೆ ಇದು ಕೆಟ್ಟ ಸಮಯ. ಈ ಸಮಯದಲ್ಲಿ ಸುರಕ್ಷತೆ ಹಾಗೂ ಆರೋಗ್ಯ ರಕ್ಷಣೆ ಬಹಳ ಮುಖ್ಯ.
ದೀಪಾವಳಿ ಮೊದಲ ದಿನ ನರಕಚತುರ್ದಶಿ, ನೀರು ತುಂಬುವ ಹಬ್ಬ. ಎರಡನೇ ದಿನ ಅಮಾವಾಸ್ಯೆಯ ಲಕ್ಷ್ಮಿ ಪೂಜೆ. ಮೂರನೇ ದಿನ ಬಲಿಪಾಡ್ಯಮಿ. ಈ ಹಬ್ಬದ ಸಂಕೇತವಾಗಿ ಮನಸ್ಸು-ದೇಹ ಹಾಗೂ ಆತ್ಮಗಳ ಶುದ್ಧೀಕರಣಕ್ಕಾಗಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಹಿರಿಯರು ಕಿರಿಯರನ್ನು ಆಶೀರ್ವದಿಸುತ್ತ, ಅವರ ತಲೆಗಳಿಗೆ ಎಣ್ಣೆ ಹಚ್ಚಿ, ಮರುಳು ಮಾಡುವ ವನಸ್ಪತಿಗಳ ನೀರಿನಿಂದ ಅವರಿಗೆ ಎಣ್ಣೆ ಸ್ನಾನ ಮಾಡಿಸುತ್ತಾರೆ. ಈಗಿನ ಶಾಂಪೂ-ಸಾಬೂನು ಪ್ರಪಂಚದಲ್ಲಿ, ಕಡಲೇ ಹಿಟ್ಟು-ಸೀಗೆಕಾಯಿ ಪುಡಿ-ಚುಚ್ಚಲಪುಡಿಗಳ ಅಭ್ಯಂಜನ ಸ್ನಾನದ ಬಗ್ಗೆ ಇಂದಿನ ತಲೆಮಾರಿನ ಬಹಳ ಜನರಲ್ಲಿ ಅರಿವೂ ಇಲ್ಲ, ಅನುಭವವೂ ಇಲ್ಲ, ಆಸಕ್ತಿ ಹಾಗೂ ಸಮಯ ಮೊದಲೇ ಇಲ್ಲ.
ಹೂಗಳ ಕೊಳ್ಳಗಳ ಕಾಶ್ಮೀರ, ದೀಪಾವಳಿಯನ್ನು ಸುಖಸುಪ್ತಿಕಾ ಎಂದು ಆಚರಿಸುತ್ತದೆ. ಅದರರ್ಥ. ಸಂತೋಷದಿಂದ ನಿದ್ರೆ ಮಾಡು ಎಂದು. ಅಮಾವಾಸ್ಯೆಯ ಕತ್ತಲ ರಾತ್ರಿಯಲ್ಲಿ ಲಕ್ಷ್ಮಿ ಪೂಜೆ ಹಾಗೂ ನಾರಾಯಣನ ಹೆಸರಿನಲ್ಲಿ, ದೇವಾಲಯಗಳು- ರಸ್ತೆ-ಮರಗಳ ಕೆಳಗೆ-ನದಿಗಳ ದಂಡೆಗಳ ಮೇಲೆ, ಹಣತೆ ದೀಪಗಳನ್ನು ಹಚ್ಚುತ್ತಾರೆ. ಆಗ ಕತ್ತಲನ್ನು ಸಂತಸ ಹಾಗೂ ನಂಬಿಕೆಗಳ ಬೆಳಕಿನಿಂದ ಜಯಿಸುತ್ತಾರೆ. ಪಂಜಾಬಿನ ಸಿಖ್ಖರ ಪ್ರಕಾರ, ದೀಪಾವಳಿ ಎಂದರೆ ದುರಾಸೆ, ಅಹಂಕಾರ ಹಾಗೂ ದ್ವೇಷಗಳ ವಿರುದ್ಧ ಒಳಿತನ ವಿಜಯ. ಪಶ್ಚಿಮ ಬಂಗಾಳದಲ್ಲಿ ನಕಾರಾತ್ಮಕ ಶಕ್ತಿಗಳ ವಿರುದ್ಧ ಜಯಿಸಲು, ಸಂತಸ-ಸಮೃದ್ಧಿ- ಸಂಪತ್ತು ಹಾಗೂ ಬುದ್ಧಿಗಾಗಿ ಪ್ರಾರ್ಥಿಸುತ್ತಾರೆ. ತಮಿಳುನಾಡಿನಲ್ಲಿ ನರಕಾಸುರನನ್ನು ಕೊಂದ ಶ್ರೀ ಕೃಷ್ಣ ಹಾಗೂ ಸತ್ಯಭಾಮೆಯರ ವಿಜಯದ ಸಂಕೇತವಾಗಿ ಗೌರವಿಸಲು ದೀಪಾವಳಿ ಆಚರಿಸುತ್ತಾರೆ ಹಾಗೂ ಉಪಾಹಾರಕ್ಕೆ ಮೊದಲು ವಿಶೇಷ ದೀಪಾವಳಿ ಲೇಹ್ಯ ತಿನ್ನುತ್ತಾರೆ.
ಆಯುರ್ವೇದದ ಹಿನ್ನೆಲೆಯಲ್ಲಿ ದೀಪಾವಳಿ:
ದೀಪಾವಳಿ ಆಚರಣೆಯಲ್ಲಿ ಮನೆ ಚೆನ್ನಾಗಿ ಸ್ವಚ್ಛ ಮಾಡಿ, ಮನೆಯನ್ನು ಅಲಂಕರಿಸಿ, ಪೂಜೆ ಹಾಗೂ ಪ್ರಾರ್ಥನೆಗಳೊಂದಿಗೆ ದೀಪಗಳನ್ನು ಬೆಳಗುತ್ತೇವೆ. ಕುಟುಂಬದ ಸದಸ್ಯರು, ಮಿತ್ರರು ಒಟ್ಟಾಗಿ ಸಿಹಿ ತಿಂಡಿ ತಿನ್ನುತ್ತಾರೆ. ಆರೋಗ್ಯ, ಶಾಂತಿ ಹಾಗೂ ಸಂತಸ ಹೆಚ್ಚಿಸುವ ಸಂಪ್ರದಾಯಗಳನ್ನು ಪ್ರತಿ ಹಬ್ಬ ಆಧರಿಸಿದೆ. ಆಯುರ್ವೇದದ ಹಿನ್ನೆಲೆಯಲ್ಲಿ, ದೀಪಾವಳಿ ಬರುವಾಗ ಹವಾಮಾನ ಒಣ, ಶೀತ ಇದ್ದು, ಹೆಚ್ಚು ಗಾಳಿ ಬೀಸುತ್ತಿರುತ್ತದೆ. ಹೀಗಾಗಿ ಇದು ವಾತ ಋತು ವಾತಾವರಣದಲ್ಲಿಯ ಹೊರಗಿನ ಬದಲಾವಣೆಗಳು, ದೇಹ ಹಾಗೂ ಮನಸ್ಸುಗಳಲ್ಲಿ ವಾತದ ಅಸಮತೋಲನ ಮಾಡುತ್ತದೆ. ದೀಪಾವಳಿಯ ಸಂಪ್ರದಾಯಗಳು ವಾತ ಶಕ್ತಿಯನ್ನು ಶಾಂತ ಮಾಡುತ್ತವೆ. ದೀಪಾವಳಿಯಲ್ಲಿ ಬೇಗ ಏಳುತ್ತೇವೆ, ದೀಪ ಹಚ್ಚುತ್ತೇವೆ, ಎಣ್ಣೆ ಹಚ್ಚಿಕೊಂಡು ಮೈಗೆ ಮಾಲೀಶು ಮಾಡುತ್ತೇವೆ. ಮೂಲಿಕೆಗಳ ಪುಡಿ ಹಚ್ಚಿಕೊಂಡು ಬಿಸಿನೀರಿನ ಸ್ನಾನ ಮಾಡಿ, ಹೊಸ ಬಟ್ಟೆ ಹಾಕಿಕೊಂಡು ದೇವರನ್ನು ಪ್ರಾರ್ಥಿಸುತ್ತೇವೆ ಅಥವಾ ಧ್ಯಾನ ಮಾಡುತ್ತೇವೆ.
ಆಯುರ್ವೇದ ಬ್ರಾಹ್ಮೀ ಮುಹೂರ್ತದಲ್ಲಿ ಏಳಲು ಶಿಫಾರಸು ಮಾಡುತ್ತದೆ. ಬ್ರಹ್ಮ ಅಂದರೆ ಶುದ್ಧ-ಸತ್ವ-ಶಕ್ತಿ ಪ್ರಕೃತಿಯಲ್ಲಿ ಹೆಚ್ಚಿರುತ್ತದೆ. ಅದು ಮನಶ್ಶಾಂತಿ ತರುತ್ತದೆ. ಬೆಳಗಿನ ಜಾವ 2 ರಿಂದ 6ರವರೆಗೆ ವಾತ ಆಗುತ್ತದೆ. ವಾತದ ಅಪನ ಎಂಬ ಪ್ರಕಾರ, ಆ ಸಮಯದಲ್ಲಿ ಜಾಗೃತವಾಗಿದ್ದು, ವಿಸರ್ಜನೆ ನಿಯಂತ್ರಿಸುತ್ತದೆ. ಹೀಗಾಗಿ ಬೇಗ ಎದ್ದು ಮೂತ್ರ ಹಾಗೂ ಮಲ ಎಂಬ ತ್ಯಾಜ್ಯ ವಸ್ತುಗಳನ್ನು ಹೊರಹಾಕಬೇಕು. ಅಭ್ಯಂಗ ಎಂಬ ಬೆಚ್ಚನೆಯ ಎಣ್ಣೆ ಲೇಪನ, ವಾತದ ಶೀತ ಹಾಗೂ ಒಣ ಗುಣಗಳನ್ನು ಶಾಂತ ಮಾಡುತ್ತದೆ, ಒತ್ರಡ ಕಡಿಮೆ ಮಾಡುತ್ತದೆ, ನರವ್ಯವಸ್ಥೆ ಶಾಂತ ಪಡಿಸುತ್ತದೆ, ನಿದ್ದೆ ಸುಧಾರಿಸುತ್ತದೆ. ಮಹಾನಾರಾಯಣ ತೈಲ, ಅಶ್ವಗಂಧ ತೈಲ, ಸಾದಾ ಎಳ್ಳೆಣ್ಣೆ ಉತ್ತಮ ಫಲ ನೀಡುತ್ತದೆ. ಸೋಪಿನ ಬದಲು, ಗಿಡಮೂಲಿಕೆಗಳಪುಡಿ, ಚರ್ಮದ ಸ್ವಾಭಾವಿಕ ತೇವ ಉಳಿಸುತ್ತದೆ, ಅಶುದ್ಧತೆಗಳನ್ನು ನಿವಾರಿಸುತ್ತದೆ, ಚರ್ಮಕ್ಕೆ ಯೌವ್ವನ ನೀಡುತ್ತದೆ ಹಾಗೂ ಇಂದ್ರಿಯಗಳನ್ನು ತಾಜಾ ಮಾಡುತ್ತದೆ.
ಬೆಚ್ಚನೆಯ ನೀರು, ರಕ್ತ ಪರಿಚಲನೆ ಹೆಚ್ಚಿಸಿ, ದೇಹದ ಬಿಗಿ ಕಡಿಮೆ ಮಾಡಿ, ಜೀರ್ಣಾಗ್ನಿ ಸುಧಾರಿಸುತ್ತದೆ. ದೀಪಾವಳಿ ಸಿಹಿ ತಿಂಡಿಗಳು ಆಯುರ್ವೇದ ತತ್ವಗಳನ್ನು ಆಧರಿಸಿವೆ. ಸಿಹಿ ಮತ್ತು ಕರಿದ ಆಹಾರಗಳಲ್ಲಿ, ಕೆಲವು ವಾತ ಹೆಚ್ಚಿಸಿದರೆ, ಉಳಿದವು ಅದರ ಸಮತೋಲನ ಮಾಡುತ್ತವೆ. ಬೇಸನ್ ಲಡ್ಡು ಗುಣದಲ್ಲಿ ಒಣವಾಗಿದ್ದು, ವಾತ ಹೆಚ್ಚಿಸುತ್ತದೆ. ಆದರೆ ಅದಕ್ಕೆ ಬಹಳ ತುಪ್ಪ ಹಾಕಿರುತ್ತಾರೆ. ತುಪ್ಪ ಸ್ನಿಗ್ಧ-ಜಿಡ್ಡಿನ ಪದಾರ್ಥ. ವಾತ ಋತುವಿಗೆ, ಆರ್ಯುವೇದ ಸಿಹಿ-ಹುಳಿ ಹಾಗೂ ಉಪ್ಪು ತಿನ್ನಲು ಹೇಳುತ್ತದೆ. ತಾಜಾ ಹಾಗೂ ಬಿಸಿ ತಿನ್ನಬೇಕು. ಎಣ್ಣೆ, ತುಪ್ಪ ಬಳಸಿದರೆ, ಹೆಚ್ಚಿದ ವಾತ ಕಡಿಮೆ ಮಾಡುತ್ತದೆ. ಕಹಿ ಹಾಗೂ ಒಗರು ರುಚಿಯ ಹಸಿ ತರಕಾರಿ, ಪಚಡಿಗಳನ್ನು, ಕಚ್ಛಾ ಹಾಗೂ ಶೀತ ಆಹಾರಗಳು, ವಾತ ಹೆಚ್ಚಿಸುವದರಿಂದ ಅವುಗಳನ್ನು ಬಳಸಬಾರದು.
ಮನೆ ಸ್ವಚ್ಛ ಮಾಡಿದಂತೆ ಮನದ ಒಳಗೂ ಸ್ವಚ್ಛ ಮಾಡಬೇಕು. ಇಂದಿನ ಬಿಡುವಿರದ ಕೆಲಸದಲ್ಲಿ, ಚೆನ್ನಾಗಿ ಉಸಿರಾಡಲು ಮರೆಯುತ್ತೇವೆ. ಬಹಳಷ್ಟು ಒತ್ತಡ ಹಾಗೂ ನಕಾರಾತ್ಮಕ ಭಾವನೆಗಳ ಭಾರ ಹೊರುತ್ತೇವೆ. ಆದ್ದರಿಂದ ನಾವೆಲ್ಲ ಈ ಭಾವನೆಗಳನ್ನು, ಇಂದ್ರಿಯಗಳನ್ನು, ದೇಹ ಹಾಗೂ ಮನಸ್ಸುಗಳನ್ನೂ ಸ್ವಚ್ಛ ಮಾಡೋಣ. ಋತು ಬದಲಾವಣೆ ಕಾಲದಲ್ಲಿ ಪಂಚಕರ್ಮ ಮಾಡಿಸಿದರೆ ಒಳ್ಳೆಯದು. ಇದರಿಂದ ಆಂತರಿಕ ವಾತಾವರಣ ಶುದ್ಧವಾಗಿ, ಶಾರೀರಿಕ-ಮಾನಸಿಕ-ಭಾವನಾತ್ಮಕ ಒಳಿತಾಗುತ್ತದೆ. ಧನ್ವಂತರಿಯನ್ನು ಆರೋಗ್ಯಕ್ಕಾಗಿ, ಲಕ್ಷ್ಮಿಯನ್ನು ಆರೋಗ್ಯ ಹಾಗೂ ಸಂಪತ್ತಿಗಾಗಿ ಪೂಜಿಸಿ, ಪೂಜೆ-ಮಂತ್ರ- ಧ್ಯಾನಗಳಿಂದ ಮನಶ್ಶಾಂತಿ ಪಡೆಯುತ್ತೇವೆ. ಹೀಗಾಗಿ ಆತ್ಮದ ಜ್ಯೋತಿ ಬೆಳಗಿಸಲು, ಒಳಗಿನ ಅಡೆತಡೆ ನಿವಾರಿಸಿ, ಕತ್ತಲು ಅಜ್ಞಾನಗಳನ್ನು ಜಯಿಸಿ, ಒಳಗಿನ ದೀಪಗಳನ್ನು ಬೆಳಗಿಸಬಹುದು.
ದೀಪಾವಳಿ,ಪಟಾಕಿ ಹಾಗೂ ಜನರ ಆರೋಗ್ಯ:
ದೀಪಾವಳಿ ಸಮಯ ಅತಿ ತಿನ್ನುವಿಕೆ ಹಾಗೂ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ, ಕೆಲವು ವೈದ್ಯರು. ಉಸಿರಾಟದ ತೊಂದರೆಗಳಿಂದ ನರಳುವ ಜನರಿಗೆ ಇದು ಕೆಟ್ಟ ಸಮಯ. ಈ ಸಮಯದಲ್ಲಿ ಸುರಕ್ಷತೆ ಹಾಗೂ ಆರೋಗ್ಯ ರಕ್ಷಣೆ ಬಹಳ ಮುಖ್ಯ. ಉಸಿರಾಟದ ಸಮಸ್ಯೆ ಇರುವವರು ತಮ್ಮ ಬಳಿ ಇನ್‍ಹೇಲರ್ ಇಟ್ಟುಕೊಳ್ಳಬೇಕು. ಪಟಾಕಿಗಳು-ಮದ್ದುಗಳು ಅವರ ಅಲರ್ಜಿ ಹೆಚ್ಚಿಸುತ್ತವೆ. ಅತಿಯಾಗಿ ಸಿಹಿ ಪದಾರ್ಥಗಳನ್ನು ತಿನ್ನುವ ಬಯಕೆ ನಿಯಂತ್ರಿಸಬೇಕು. ಚೆನ್ನಾಗಿ ನೀರು ಕುಡಿಯಿರಿ. ಎಳನೀರು, ಹಣ್ಣಿನ ರಸ ಕುಡಿಯಿರಿ.
ಪಟಾಕಿಗಳ ಸಿಡಿತದಿಂದ ಉಂಟಾಗುವ ಪರಿಸರ ಮಾಲಿನ್ಯದಿಂದ, ಮರುಕಳಿಸುವ-ದೀರ್ಘಕಾಲದ, ಶ್ವಾಸಕೋಶ ತಡೆ ರೋಗಗಳು, ಅಸ್ಥಮಾ ಹೆಚ್ಚುತ್ತದೆ.
ಅನೇಕ ಪಟಾಕಿಗಳು ತಾಮ್ರ ಹಾಗೂ ಕ್ಯಾಡ್‍ಮಿಯಂ ಎಂಬ ರಾಸಾಯನಿಕ ಪದಾರ್ಥಗಳ, ಬಹುವಿಧ ವಿಷಕಾರಿ ರಾಸಾಯನಿಕ ಪದಾರ್ಥ ಸಂಯುಕ್ತಗಳನ್ನು ಹೊಂದಿದ್ದು, ಅವು ಗಾಳಿಯಲ್ಲಿ ಧೂಳಿನ ರೂಪದಲ್ಲಿ ಅನೇಕ ಕಾಲ ಉಳಿಯುತ್ತವೆ. ಇವು ಉಸಿರಾಟಕ್ಕೆ ಕಿರಿಕಿರಿ ಮಾಡಿ, ಅಸ್ಥಮಾ, ಪಂಗುಸಿರು ನಾಳ ಉರಿತ ಅಥವಾ ಪುಪ್ಪುಸದಲ್ಲಿ ಉರಿತ, ಮೂಗಿನ ಕೆರಳುವಿಕೆ, ಸೀನು, ತಲೆನೋವು, ನೆಗಡಿ ಮುಂತಾದವುಗಳನ್ನು ಹೆಚ್ಚಿಸುತ್ತವೆ. ಅತಿ ಹೆಚ್ಚು ವೇಗದ ಪಟಾಕಿಗಳು ಕಿವಿ ತಮಟೆಗಳಿಗೆ ತೀವ್ರ ಹಾನಿ ಉಂಟು ಮಾಡುತ್ತವೆ. “ಶಬ್ದ ಸ್ಫೋಟದಿಂದ ಕರ್ಣಪಟಲಗಳ ತೂತು, ಶ್ರವಣನಾಶ, ಕಿವಿಗಳಲ್ಲಿ ಅಸಹನೀಯ ಮಾರ್ದನಿಸುವ ಸದ್ದು, ತಲೆ ತಿರುಗುವಿಕೆ ಉಂಟಾಗುತ್ತದೆ”.
ದೀಪಾವಳಿ ಲೇಹ್ಯ- ಆಯುರ್ವೇದದ ಮೂಲಿಕೆಗಳ ಮಿಶ್ರಣ:
ಇದು ಅನೇಕ ಆಯುರ್ವೇದದ ಮೂಲಿಕೆಗಳ ಮಿಶ್ರಣವಾಗಿದ್ದು, ದೇಹದಲ್ಲಿಯ ಜೈವಿಕ ಸಂಸ್ಕರಣೆಯಿಂದ ಉತ್ಪತ್ತಿಯಾಗುವ ವಿಷಕಾರಿ ವಸ್ತುಗಳನ್ನು ದೇಹದ ಹೊರಹಾಕುತ್ತದೆ. ದೀಪಾವಳಿ, ನಮ್ಮೆಲ್ಲರ ಆತ್ಮಗಳಲ್ಲಿರುವ ವಿಷಕಾರಿ ವಸ್ತುಗಳನ್ನು ಅಂತಿಮವಾಗಿ ಹೊರಹಾಕುವುದೇ ಆಗಿದೆ. ದೀಪಾವಳಿ ಲೇಹ್ಯದಿಂದ ಆಯುಷ್ಯ ಹೆಚ್ಚುತ್ತದೆ ಹಾಗೂ ಅನೇಕ ಔಷಧೀಯ ಗುಣಗಳನ್ನು ಇದು ಹೊಂದಿದೆಯಂತೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಮಳೆಗಾಲದ ನಂತರ ದೀಪಾವಳಿ ಬರುತ್ತದೆ. ಆಗ ಭೂಮಿ ತಂಪಾಗಿ ಸೂಕ್ಷ್ಮಜೀವಿಗಳನ್ನು ಮರುಸ್ಥಾಪಿಸಲು, ಚಳಿಗಾಲದ ತಯಾರಿಗಾಗಿ ಅಗ್ನಿ ಅಂಶ ಬೇಕಂತೆ. ಹೀಗಾಗಿ ಚಳಿಗಾಲದ ತಯಾರಿಗಾಗಿ ದೀಪಾವಳಿ ದೀಪಗಳನ್ನು ಹಚ್ಚುತ್ತಾರೆ.
ದೀಪಾವಳಿಯಿಂದ ಒಂದು ತಿಂಗಳು, ದಿನಾ 1 ಚಮಚದಂತೆ ಈ ಲೇಹ್ಯ ತಿನ್ನುತ್ತಾರೆ. ಇದು ವಿಶೇಷ ಆರೋಗ್ಯ ಕಾಳಜಿ ತಿಂಡಿಯಾಗಿದೆ. ದೀಪಾವಳಿ ಸಿಹಿ ತಿಂಡಿಗಳು, ಖಾರಾ ತಿಂಡಿಗಳು ಹೆಚ್ಚಿಸುವ ಕೊಬ್ಬನ್ನು ಕರಗಿಸಲು ಇದು ಸಹಕಾರಿ. ದೀಪಾವಳಿಯ ಹಿಂದಿನ ದಿನ ಇದನ್ನು ತಯಾರಿಸುತ್ತಾರೆ. ಚಾತುರ್ಮಾಸ ಹಾಗೂ ದಸರಾಗಳಲ್ಲಿ ಸಾತ್ವಿಕ ಆಹಾರ ತಿಂದ ಜನ, ಮಳೆಗಾಲದಲ್ಲಿ ಲಘು ಆಹಾರ ತಿಂದವರು, ಚಳಿಗಾಲದಲ್ಲಿ ದೀಪಾವಳಿ ಬಂದಾಗ, ಶೀತ, ನೆಗಡಿ ವಿರುದ್ಧ ಹೋರಾಡಲು, ದೇಹಕ್ಕೆ ಕೊಬ್ಬು ಬೇಕಾಗುತ್ತದೆ. ಹೀಗಾಗಿ ಅನೇಕ ಸಿಹಿ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಹಾಗೂ ತುಪ್ಪ ಬಳಸುತ್ತಾರೆ. ಇವುಗಳನ್ನು ಜೀರ್ಣಮಾಡಲು, ಅಜೀರ್ಣ ತೊಲಗಿಸಲು, ಈ ಲೇಹ್ಯ ಬಳಸುತ್ತಾರೆ.
ಬೇಕಾದ ಪದಾರ್ಥಗಳು: 25 ಗ್ರ್ಯಾಂ ಅಜವಾನ ಅಥವಾ ಓಮ, 20 ಗ್ರ್ಯಾಂ ಉದ್ದ ಹಾಗೂ ಒಣಗಿಸಿದ ಮೆಣಸು, ಉದ್ದ ಮೆಣಸು ಬಳ್ಳಿಯ ಒಣಗಿದ ಬೇರು, 10 ಗ್ರ್ಯಾಂ ಅತಿಮಧುರ, 25ಗ್ರ್ಯಾಂ ಒಣಶುಂಠಿ, 10 ಗ್ರ್ಯಾಂ ಥಾಯ್ ಶುಂಠಿ, 10 ಗ್ರ್ಯಾಂ ಸಿರುನಾಗ ಹೂ, 10 ಗ್ರ್ಯಾಂ ಪರಂಗಿ ಪಟ್ಟೈ, ಸುಳ್ಳು ಕರಿ ಮೆಣಸು, 10 ಗ್ರ್ಯಾಂ ಜಾವಾ ಮೆಣಸು ಅಥವಾ ಬಾಲವಿರುವ ಮೆಣಸು, 100 ಗ್ರ್ಯಾಂ ಒಣಗಿದ ಖರ್ಜೂರ, 4 ಟೀ ಚಮಚ ಕಪ್ಪು ಮೆಣಸು, 50 ಗ್ರ್ಯಾಂ ಒಣಗಿದ ದ್ರಾಕ್ಷಿ, 300 ಗ್ರ್ಯಾಂ ತುಪ್ಪ, 750 ಗ್ರ್ಯಾಂ ಬೆಲ್ಲ. ಎಲ್ಲ ವಸ್ತುಗಳ ಬೀಜ ತೆಗೆದು, ಒಣ ದ್ರಾಕ್ಷಿ ಹಾಗೂ ಒಣ ಖರ್ಜೂರ ಬಿಟ್ಟು, ಉಳಿದವುಗಳನ್ನು ಕಡಾಯಿಯಲ್ಲಿ ಚಿಕ್ಕ ಉರಿಯಲ್ಲಿ ಚೆನ್ನಾಗಿ ಹುರಿಯಬೇಕು.
ಹಿಂದಿನ ರಾತ್ರಿ ಬೆಚ್ಚನೆಯ ನೀರಿನಲ್ಲಿ ನೆನಸಿ ಎಲ್ಲವುಗಳನ್ನು ಮಾರನೇ ದಿನ ನೆನಸಿದ ನೀರಿನೊಂದಿಗೆ ಅರೆಯಿರಿ. ಆಗ ನುಣ್ಣನೆಯ ಮಿಶ್ರಣ ಬರುತ್ತದೆ. ಬಾಣಲೆಯಲ್ಲಿ ಎಲ್ಲ ಹಾಕಿ, 5 ನಿಮಿಷ ಬಿಸಿ ಮಾಡಿ. ಪುಡಿ ಮಾಡಿದ ಬೆಲ್ಲ ಹಾಕಿ. ಮತ್ತೆ ಮಧ್ಯಮ ಉರಿಯಲ್ಲಿ ಬೇಯಿಸಿ. ಆಗಾಗ ತುಪ್ಪ ಹಾಕುತ್ತೀರಿ. ಹಲ್ವಾ ರೀತಿ ಮಿಶ್ರಣ ಬರಬೇಕು. ಅದು ಅಂಟಬಾರದು. ಅವುಗಳನ್ನು ಮೃದು ಉಂಡೆಗಳಾಗಿ ಕಟ್ಟಬಹುದಾದರೆ ಅದೇ ಸರಿಯಾಗಿದೆ ಎಂದರ್ಥ.
ಎನ್.ವಿ. ರಮೇಶ್, ಮೈಸೂರು
ಮೊ : 98455 65238