Vydyaloka

ಕೋವಿಡ್ ರೋಗಿಯನ್ನು ನೋಡುವ ದೃಷ್ಟಿಕೋನ ಬದಲಾಯಿಸಬೇಕು.

ಕೋವಿಡ್ ರೋಗಿಯನ್ನು ನೋಡುವ ದೃಷ್ಟಿಕೋನ ಬದಲಾಯಿಸಬೇಕು. ಕೋವಿಡ್-19 ರೋಗ ಬಂದವರನ್ನು ಅಸ್ಪಶ್ಯರಂತೆ ನೋಡುವುದು ಸರ್ವತಾ ಸಹ್ಯವಲ್ಲ.ರೋಗಿ ಚೇತರಿಸಿಕೊಂಡ ಬಳಿಕ ಆ ವೈರಾಣುಗಳು ಆ ವ್ಯಕ್ತಿಯ ದೇಹದಲ್ಲಿ ಬದುಕುಳಿಯುವುದಿಲ್ಲ.

ಕೋವಿಡ್-19 ರೋಗ ಎನ್ನುವುದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ವ್ಯಕ್ತಿಯ ದೇಹಕ್ಕೆ ಸೇರಿದ ವೈರಾಣುವಿನಿಂದ ಈ ರೋಗ ಬರುತ್ತದೆ. ಹೀಗೆ ರೋಗಿಯ ದೇಹಕ್ಕೆ ಸೇರಿದ ವೈರಾಣು ಜೀವನ ಪರ್ಯಂತ ಆ ವ್ಯಕ್ತಿಯ ದೇಹದಲ್ಲಿ ನೆಲೆಸುವುದಿಲ್ಲ. ಈ ನಿಟ್ಟಿನಲ್ಲಿ ಗುಣಮುಖನಾದ ಕೋವಿಡ್-19 ರೋಗಿಯನ್ನು ನೋಡುವ ದೃಷ್ಟಿಕೋನ ಬದಲಾಯಿಸಬೇಕು. ಕೋವಿಡ್-19 ರೋಗ ಬಂದವರನ್ನು ಅಸ್ಪಶ್ಯರಂತೆ ನೋಡುವುದು ಸರ್ವತಾ ಸಹ್ಯವಲ್ಲ. ಯಾಕೆಂದರೆ ಗುಣಮುಖನಾದ ರೋಗಿಯಿಂದ ಪುನ: ಇನ್ನೊಬ್ಬನಿಗೆ ಈ ರೋಗ ಹರಡುವ ಸಾಧ್ಯತೆ ಬಹಳ ವಿರಳ. ಸಾಮಾನ್ಯವಾಗಿ ಕೋವಿಡ್-19 ರೋಗ ಬಂದ ವ್ಯಕ್ತಿ ಆರೋಗ್ಯವಂತನಾಗಿದ್ದಲ್ಲಿ ರೋಗದ ಲಕ್ಷಣಗಳು ತೀವ್ರವಾಗಿ ಇರುವುದಿಲ್ಲ. ಸಣ್ಣ ಜ್ವರ, ಶೀತ ನೆಗಡಿ ಮೈಕೈ ನೋವು ಗಂಟಲು ಕೆರೆತ ಇಷ್ಟಕ್ಕೆ ಸೀಮಿತ ವಾಗಿರುತ್ತದೆ. ಸಾಮಾನ್ಯವಾಗಿ ರೋಗ ಬಂದು 10 ರಿಂದ 14 ದಿನಗಳಲ್ಲಿ ಅವರೂ ಇತರ ವ್ಯಕ್ತಿಗಳಂತೆ ಚೇತರಿಕೆ ಹೊಂದಿ ಮೊದಲಿನಂತಾಗುತ್ತಾರೆ.

ಆದರೆ ದೇಹದ ರಕ್ಷಣಾ ವ್ಯವಸ್ಥೆ ಕುಂದಿದವರಲ್ಲಿ ರೋಗದ ಲಕ್ಷಣಗಳು ತೀವ್ರವಾಗಿ ಕಂಡುಬರಬಹುದು. ಇಂತಹಾ ವ್ಯಕ್ತಿಗಳಲ್ಲಿ ವೈರಾಣುಗಳು ಶ್ವಾಸಕೋಶಗಳಿಗೆ ತಲುಪಿ ನ್ಯೂಮೋನಿಯಾ ಉಂಟುಮಾಡಿ ಒಂದಷ್ಟು ಜಾಸ್ತಿ ದಿನಗಳ ಕಾಲ ಕಾಡಬಹುದು. ಇಂತಹಾ ವ್ಯಕ್ತಿಗಳಿಗೆ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಇರುತ್ತದೆ. ಒಟ್ಟಿನಲ್ಲಿ ಇಂತಹಾ ವ್ಯಕ್ತಿಗಳಿಗೆ ಜಾಸ್ತಿ ಪೋಷಣೆ ಮತ್ತು ನಿಗಾ ಬೇಕಾಗುತ್ತದೆ. ಸಾಮಾನ್ಯವಾಗಿ ರೋಗದ ಲಕ್ಷಣಗಳು ಕಾಣೆಯಾದ ಬಳಿಕ 2 ವಾರಗಳ ಕಾಲ ವೈರಾಣು ದೇಹದಿಂದ ಸಂಪೂರ್ಣವಾಗಿ ನಿರ್ನಾಮವಾಗಲು ಬೇಕಾಗುತ್ತದೆ. ಆತನಿಂದ ರೋಗ ಹರಡುವುದಿಲ್ಲ ಎಂದು ಸಾಬೀತಾಗಲು 4 ಕೋವಿಡ್-19 ಪರೀಕ್ಷೆ ಮಾಡಲಾಗುತ್ತದೆ.

ರೋಗದ ಲಕ್ಷಣಗಳು ಸಂಪೂರ್ಣವಾಗಿ ಕಾಣೆಯಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ ಗಂಟಲಿನ ದ್ರವ ಮತ್ತು ಮೂಗಿನ ದ್ರವದ ಪರೀಕ್ಷೆ ಮಾಡಲಾಗುತ್ತದೆ. ಇವೆರಡು ಪರೀಕ್ಷೆ ನಡೆಸಿದ 24 ಘಂಟೆಗಳ ಬಳಿಕ ಮಗದೊಮ್ಮೆ ಮೂಗಿನ ಮತ್ತು ಗಂಟಲಿನ ದ್ರವ ಪರೀಕ್ಷೆ ಮಾಡಲಾಗುತ್ತದೆ. ಇವೆರಡೂ ಪರೀಕ್ಷೆಗಳಲ್ಲಿ ಋಣಾತ್ಮಕ ವರದಿ ಬಂದಲ್ಲಿ ಮಾತ್ರ ಆ ವ್ಯಕ್ತಿಯಿಂದ ರೋಗ ಹರಡುವುದಿಲ್ಲ ಎಂಬ ನಿರ್ಣಯಕ್ಕೆ ಬರಲಾಗುತ್ತದೆ. ಈ ಕೋವಿಡ್-19 ರೋಗ ಹರಡುವ ವೈರಾಣು ಮಾಗುವಿಕೆಯ ಅವಧಿ 2 ವಾರಗಳು ಆಗಿರುವುದರಿಂದ ರೋಗಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ 14 ದಿನಗಳ ನಂತರ ಆತನನ್ನು ಸಂಪೂರ್ಣವಾಗಿ ಆರೋಗ್ಯವಂತ ಎಂದು ದೃಢೀಕರಿಸಲಾಗುತ್ತದೆ.

ರೋಗಿ ಚೇತರಿಸಿಕೊಂಡ ಬಳಿಕ ವೈರಾಣುಗಳು  ದೇಹದಲ್ಲಿ ಬದುಕುಳಿಯುವುದಿಲ್ಲ:

ಇನ್ನು ಪ್ಲಾಸ್ಮಾ ಥೆರಪಿ ಮಾಡುವಾಗಲೂ ಈ ರೀತಿ ಗುಣಮುಖರಾದ ರೋಗಿಗಳಿಂದ 2 ವಾರಗಳ ಬಳಿಕವೇ ರಕ್ತವನ್ನು ಪಡೆಯಲಾಗುತ್ತದೆ. ಒಟ್ಟಿನಲ್ಲಿ ಒಮ್ಮೆ ರೋಗ ಬಂದು ಗುಣಮುಖರಾದ ಬಳಿಕ ಆ ವ್ಯಕ್ತಿಯಿಂದ ರೋಗ ಹರಡುವ ಸಾಧ್ಯತೆ ಇರುವುದಿಲ್ಲ. ಕೋವಿಡ್-19 ರೋಗ ವೈರಾಣುವಿನಿಂದ ಹರಡುವುದಾದರೂ ಇತರ ವೈರಾಣು ರೋಗಗಳಿಗಿಂತ ಭಿನ್ನವಾದ ರೋಗವಾಗಿರುತ್ತದೆ. ಉದಾಹರಣೆಗೆ HIV ವೈರಾಣುವಿನಿಂದ ಹರಡುವ ಏಡ್ಸ್ ರೋಗ ಮತ್ತು ಹೆಪಟೈಟಿಸ್ ವೈರಸ್‍ನಿಂದ ಹರಡುವ ಹೈಪಟೈಟಿಸ್ ರೋಗ. ಈ ಎರಡೂ ರೋಗಗಳು ಒಬ್ಬ ವ್ಯಕ್ತಿಗೆ ಬಂದಲ್ಲಿ ಅದಕ್ಕೆ ಪರಿಪೂರ್ಣ ಚಿಕಿತ್ಸೆ ಇಲ್ಲ ಮತ್ತು ಆ ವೈರಾಣುಗಳು ಆ ವ್ಯಕ್ತಿಯ ದೇಹದಲ್ಲಿ ನಿರಂತರವಾಗಿ ವಾಸಿಸುತ್ತದೆ ಮತ್ತು ಆ ವ್ಯಕ್ತಿಗಳು ಈ ವೈರಾಣುಗಳ ವಾಹಕರಾಗಿ ಕೆಲಸ ಮಾಡುತ್ತಾರೆ. ಆ ವ್ಯಕ್ತಿಗಳಿಂದ ವೈರಾಣುಗಳು ಇತರರಿಗೆ ಹರಡುವ ಎಲ್ಲಾ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಅಂತಹವರ ಜೊತೆ ಯಾವುದೇ ರೀತಿಯ ಲೈಂಗಿಕ ಸಂಪರ್ಕ, ರಕ್ತದಾನ ಅಥವಾ ಇನ್ನಾವುದೇ ಸಂಪರ್ಕ ಮಾಡುವಂತಿಲ್ಲ.

ಆದರೆ ಕೋವಿಡ್-19 ರೋಗ ಇದಕ್ಕಿಂತ ಭಿನ್ನವಾಗಿದೆ. ಒಮ್ಮೆ ರೋಗ ಬಂದು ಹೋದ ಮೇಲೆ ರೋಗಿಯ ದೇಹದಲ್ಲಿ ವೈರಾಣು ಇರುವ ಸಾದ್ಯತೆ ಬಹಳ ಕಡಿಮೆ. ಆತನಿಂದ ಇನ್ನೊಬ್ಬರಿಗೆ ರೋಗ ಹರಡುವ ಸಾಧ್ಯತೆಯೂ ಬಹಳ ವಿರಳ. ಮಗದೊಮ್ಮೆ ಆತನಿಗೆ ಅದೇ ಕೋವಿಡ್-19 ರೋಗ ಬರಬಹುದಾದರೂ ಆತನಿಂದ ಇತರರಿಗೆ ರೋಗ ಹರಡುವುದು ಅಥವಾ ಬರುವ ಸಾಧ್ಯತೆ ಅತ್ಯಂತ ವಿರಳ. ಯಾವುದೇ ನಿರ್ದಿಷ್ಟ ಚಿಕಿತ್ಸೆ ಮತ್ತು ಲಸಿಕೆ ಇಲ್ಲದಿದ್ದರೂ, ರೋಗಿ ಚೇತರಿಸಿಕೊಂಡ ಬಳಿಕ ಆ ವೈರಾಣುಗಳು ಆ ವ್ಯಕ್ತಿಯ ದೇಹದಲ್ಲಿ ಬದುಕುಳಿಯುವುದಿಲ್ಲ. ಈ ಕಾರಣದಿಂದಾಗಿ ಕೋವಿಡ್-19 ರೋಗದಿಂದ ಗುಣಮುಖರಾದ ವ್ಯಕ್ತಿಯನ್ನು ಪೂರ್ವಾಗ್ರಹ ಪೀಡಿತರಾಗಿ ನೋಡಬಾರದು. ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳಬೇಕು. ಅವರನ್ನು ಅಸ್ಪೃಶ್ಯರಂತೆ ನೋಡಿ ಗೇಲಿ ಮಾಡುವುದು, ಮೂದಲಿಸುವುದು, ಮಾತನಾಡಿಸದೇ ಇರುವುದು ಅಕ್ಷಮ್ಯ ಅಪರಾಧವಾಗುತ್ತದೆ.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
Email: drmuraleemohan@gmail.com

Share this: