Vydyaloka

ಕೊರೋನಾಯಣ : ನನ್ನ ನಿಜವಾದ ಕಥೆಯನ್ನು ಓದಿ

ಕೊರೋನಾಯಣ- ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸಬೇಡಿ.ಈ ಭೂಮಂಡಲದಲ್ಲಿ ನೀವು ಮನುಷ್ಯರಿಗೆ ಬದುಕಲು ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ನಮಗೂ ಇದೆ ಎಂದು ತಿಳಿದವರು ನಾವು. ಇನ್ನಾದರೂ ನಿಮ್ಮ ಹುಚ್ಚಾಟತನವನ್ನು ಬಿಡಿ. ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸಬೇಡಿ.

ನನ್ನ ಹೆಸರು “ಸಾರ್ಸ್ ಕೊರೋನಾ ವೈರಸ್-ಎರಡು” ಎಂಬುದಾಗಿರುತ್ತದೆ. ಚುಟುಕಾಗಿ ಆಂಗ್ಲಭಾಷೆಯಲ್ಲಿ ನನ್ನನ್ನು SARS CoV-2 ಎಂದೂ ಕರೆಯುತ್ತಾರೆ. ನಾನು ಮತ್ತು ನನ್ನ ಪೂರ್ವಜರು ಈ ಭೂಮಂಡಲದಲ್ಲಿ ಹಲವಾರು ವರ್ಷಗಳಿಂದ ಬದುಕುತ್ತಿದ್ದೇನೆ. ನನ್ನ ಕುಟುಂಬದ ಹೆಸರು ‘ಕೊರೋನಾ’. ನಮ್ಮದು ಬಹಳ ದೊಡ್ಡ ಕುಟುಂಬವಾಗಿದ್ದು, ನಮ್ಮ ಕುಟುಂಬದಲ್ಲಿ ಲಕ್ಷಾಂತರ ಮಂದಿ ಜೊತೆ ಜೊತೆಯಾಗಿ ಯಾವುದೇ ವೈಮನಸ್ಸು ಇಲ್ಲದೆ ಹಾಯಾಗಿ ನಾವೆಲ್ಲಾ ಬದುಕಿಕೊಂಡಿದ್ದೆವು. ನಾವು ಈ ಜೀವ ಜಗತ್ತಿನ ಅತ್ಯಂತ ನಿಕೃಷ್ಟವಾದ ಜೀವಿಗಳಾಗಿದ್ದು, ನಮ್ಮ ದೇಹದಲ್ಲಿ RNA ಎಂಬ ನ್ಯೂಕ್ಲಿಯಕ್ ಆಸಿಡ್ ಇದರ ಅತೀ ಕಿರಿದಾದ ತಂತು ಮಾತ್ರ ಇರುತ್ತದೆ.

ಒಬ್ಬ ಮನುಷ್ಯನ ಜೀವಕ್ಕೆ ಹೋಲಿಸಿದಲ್ಲಿ ನಾವು ಅತ್ಯಂತ ಅಸಹಾಯಕ ಮತ್ತು ಹಿಂದುಳಿದ ಗುಂಪಿಗೆ ಸೇರಿದ ಜೀವಿಗಳಾಗಿರುತ್ತೇವೆ. ನಮಗೆ ನಾವಾಗಿಯೇ ವಂಶಾಭಿವೃದ್ಧಿ ಮಾಡುವ ಸಾಮಥ್ರ್ಯವೇ ಇಲ್ಲ. ನಾವು ಪರಾವಲಂಬಿ ಜೀವಿಗಳಾಗಿದ್ದು, ಇತರ ಜೀವಿಗಳಾದ ಬ್ಯಾಕ್ಟೀರಿಯಾ ಹಾಗೂ ಕಾಡುಪ್ರಾಣಿಗಳ ದೇಹದಲ್ಲಿ ಸೇರಿಕೊಂಡು ನಮ್ಮ ಪಾಡಿಗೆ ವಂಶಾಭಿವೃದ್ಧಿ ಮಾಡಿಕೊಂಡು ಯಾರಿಗೂ ತೊಂದರೆ ಕೊಡದೆ ಕಾಡಿನೊಳಗೆ ಹಾಯಾಗಿ ಜೀವನ ಮಾಡುತ್ತಿದ್ದೆವು. ನಾವು ಯಾರ ಕಣ್ಣಿಗೂ ಗೋಚರಿಸದಷ್ಟು ಚಿಕ್ಕದಾಗಿದ್ದು, ಸೂಕ್ಷ್ಮದರ್ಶಕದ ಅಡಿಯಲ್ಲಿ ನಮ್ಮನ್ನು ನೀವು ನೋಡಬಹುದು. ನಮ್ಮಲ್ಲಿ ಗಂಡು ಹೆಣ್ಣು ಎಂಬ ಬೇಧ ಭಾವ ಇಲ್ಲ. ಹಿಂದೂ ಮುಸಲ್ಮಾನ, ಕ್ರೈಸ್ತ ಎಂಬ ತಾರತಮ್ಯ ಇಲ್ಲ. ಕಪ್ಪು-ಬಿಳಿ, ಬಡವ-ಬಲ್ಲಿದ, ಹಣವಂತ-ಗುಣವಂತ, ಸಿರಿವಂತ, ದಲಿತ, ಕುರುಬ, ಬ್ರಾಹ್ಮಣ ಎಂಬ ವೈಷಮ್ಯವೂ ಇಲ್ಲ.

ನಮ್ಮನ್ನು ಜೀವಜಗತ್ತಿನ ವಿಚಿತ್ರ, ಜೀವಜಗತ್ತಿನಂಚಿನಲ್ಲಿರುವ ಜೀವ ಪ್ರಭೇದ (Organisns at the edge of life) ಎಂದೂ ಕರೆಯುತ್ತಾರೆ. ಕೆಲವು ವಿಜ್ಞಾನಿಗಳು ನಮ್ಮನ್ನು ಜೀವ ಇಲ್ಲದ ಜೀವಿಗಳು ಎಂದೂ ಸಂಭೋದಿಸಿದರೂ ನಮಗೆ ಯಾವುದೇ ಬೇಸರವಿಲ್ಲ. ನಾವು ಎಷ್ಟು ಅಸಹಾಯಕ ಜೀವಿಗಳೆಂದರೆ ನಾವು ಇನ್ನೊಬ್ಬರ ಸಹಾಯವಿಲ್ಲದೆ, ನಮ್ಮ ವಂಶೋದ್ಧಾರ ಮಾಡಲು ಸಾಧ್ಯವಿರುವುದಿಲ್ಲ. ಈ ಭೂಮಂಡಲದಲ್ಲಿ ನೀವು ಮನುಷ್ಯರಿಗೆ ಬದುಕಲು ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ನಮಗೂ ಇದೆ ಎಂದು ತಿಳಿದವರು ನಾವು. ನಾವು ಯಾವತ್ತೂ ಯಾರಿಗೂ ಅನಾವಶ್ಯಕವಾಗಿ ತೊಂದರೆ ನೀಡಿದವರೇ ಇಲ್ಲ. ನಾವು ನಮ್ಮ ಪರಿವಾರದವರೊಂದಿಗೆ ಚೀನಾ ದೇಶದ ವುಹಾನ್ ನಗರದ ಕಾಡುಗಳಲ್ಲಿ ತಿಂದುಂಡುಕೊಂಡು ಹಾಯಾಗಿದ್ದೆವು.

ನಾವೇನು ನೇರವಾಗಿ ನಿಮ್ಮ ದೇಹದೊಳಗೆ ಪ್ರವೇಶ ಮಾಡಿಲ್ಲ:

ಕಾಡಿನಲ್ಲಿನ ಚಿಪ್ಪು ಹಂದಿ, ಬಾವಲಿ, ಹುಳ ಹುಪ್ಪಟೆಗಳು ಮತ್ತು ಬ್ಯಾಕ್ಟೀರಿಯಾಗಳ ಜೊತೆ ಸ್ನೇಹ ಸಂಪಾದಿಸಿಕೊಂಡು ಅವರ ದೇಹದೊಳಗೆ ಸೇರಿಕೊಂಡು ನಮ್ಮ ವಂಶಾಭಿವೃದ್ಧಿ ಮಾಡಿಕೊಂಡು ಯಾರಿಗೂ ತೊಂದರೆ ಕೊಡದೆ ಹಾಯಾಗಿದ್ದೆವು. ಆದರೆ ನೀವು ಮನುಷ್ಯರು ಬಹಳ ಜಿಪುಣರು, ಅತೀ ಆಸೆ ಬುರುಕರು. ಜಗತ್ತಿನ ಭೂಮಂಡಲದಲ್ಲಿ ಬದುಕಿರುವ ಎಲ್ಲಾ ವಸ್ತುಗಳು ನಿಮಗಾಗಿ ಬದುಕಿರುವುದು ಮತ್ತು ನಿಮಗೆ ತಿನ್ನಲಿಕ್ಕಾಗಿಯೇ ಹುಟ್ಟಿದ್ದು ಎಂದು ತಿಳಿದವರು. ನೀವು ಮನುಷ್ಯರು ತಿನ್ನಲಿಕ್ಕಾಗಿ ಹುಟ್ಟಿದರೆ, ನಾವು ಬದುಕಲಿಕ್ಕಾಗಿ ತಿನ್ನುವವರು. ನಮ್ಮ ಅಗತ್ಯಕ್ಕಿಂತ ಜಾಸ್ತಿ ನಾವು ತಿನ್ನುವುದೇ ಇಲ್ಲ. ನಮಗೆ ಆಶ್ರಯಕೊಟ್ಟ ಜೀವಿಗಳ ಜೊತೆ ಸ್ನೇಹದಿಂದ ಪ್ರೀತಿಯಿಂದ, ಗೌರವದಿಂದ ಇದ್ದೆವು.

ಭೂಮಂಡಲದಲ್ಲಿ ನಿಮಗೆ ತಿನ್ನಲು ಸಾಕಷ್ಟು ವಸ್ತುಗಳಿದ್ದರೂ ನಿಮ್ಮ ಅತಿಯಾದ ಬಾಯಿ ಚಪಲದಿಂದ, ಕಾಡಿನಲ್ಲಿ ಹಾಯಾಗಿದ್ದ ಹಾವು, ಹಂದಿ, ಮುಂಗುಸಿ, ಚೇಳು, ಚಿಪ್ಪು ಹಂದಿ, ಬಾವಲಿ ಎಲ್ಲವನ್ನು ನೀವು ತಿನ್ನಲು ಆರಂಭಿಸಿದಿರಿ. ನಾವೇನು ನೇರವಾಗಿ ನಿಮ್ಮ ದೇಹದೊಳಗೆ ಪ್ರವೇಶ ಮಾಡಿಲ್ಲ. ನೀವು ತಿಂದ ಚಿಪ್ಪು ಹಂದಿ, ಬಾವಲಿಯ ಮುಖಾಂತರ ನಾವು ನಿಮ್ಮ ದೇಹವನ್ನು ಸೇರಿಕೊಂಡೆವು. ನಾವು ನಮ್ಮ ಜೀವನೋಪಾಯಕ್ಕಾಗಿ ನಿಮ್ಮ ಆಶ್ರಯವನ್ನು ಪಡೆದದ್ದು ಅಲ್ಲ. ನೀವೇ ನಮ್ಮನ್ನು ನಿಮ್ಮೊಳಗೆ ಸೇರಿಸಿಕೊಂಡಿರುವುದು ಎಂಬ ವಿಷಯವನ್ನು ನೀವು ಮನುಷ್ಯರು ಮೊದಲು ಅರಿತುಕೊಳ್ಳಬೇಕು. ನಾವು ನಿಮ್ಮ ದೇಹದೊಳಗೆ ಸೇರಿದ ಮೇಲೆ ನಾವು ಬದುಕಲು ಬೇಕಾಗಿ ನಿಮ್ಮ ಜೀವಕೋಶಗಳ ಒಳಗೆ ಸೇರಿಕೊಳ್ಳದೆ ನಮಗೆ ವಿಧಿಯೇ ಇಲ್ಲ.

ನಾನು ನೀವು ಮನುಷ್ಯರು ತಿಳಿದುಕೊಂಡಷ್ಟು ಕ್ರೂರಿ ಅಲ್ಲವೇ ಅಲ್ಲ. ನೀವುಗಳು ನನ್ನನ್ನು ಹೃದಯ ಶೂನ್ಯ ಎಂಬುದಾಗಿ ಭಾವಿಸಿದರೆ ಅದು ನನ್ನ ತಪ್ಪಲ್ಲ. ನಾನಾಗಿ ನಾನು ಯಾರ ಸಾವಿಗೂ ಕಾರಣವಲ್ಲ. ನಿಮಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ವೈಫಲ್ಯವಿದ್ದರೆ ಅದಕ್ಕೆ ನಾನು ಹೊಣೆಗಾರನಲ್ಲ. ಅಷ್ಟಕ್ಕೂ ನಾನೇನೂ ನಿಮ್ಮ ದೇಹದೊಳಗೆ ಬಲವಂತವಾಗಿ ಪ್ರವೇಶಿಸಿಲ್ಲ. ನೀವು ನನ್ನನ್ನು ನಿಮ್ಮ ದೇಹದೊಳಗೆ ಸೇರಿಸಿಕೊಂಡಿದ್ದು ಎಂಬುದು ನೆನಪಿರಲಿ. ನಾನೀಗ ನನ್ನ ಅಸ್ತಿತ್ವಕ್ಕಾಗಿ ನಿಮ್ಮ ಆಶ್ರಯ ಪಡೆದಿರುವುದು. ಇಲ್ಲಿ ನಿಮ್ಮ ನಾಡಿನಲ್ಲಿ ಕಾಡುಗಳೂ ಇಲ್ಲ, ಕಾಡುಪ್ರಾಣಿಗಳೂ ಇಲ್ಲ. ಕಾಡುಗಳನ್ನು ನಾಶ ಮಾಡಿ ಕಾಡು ಪ್ರಾಣಿಗಳನ್ನು ನೀವು ಬಿಡದೆ ಭಕ್ಷಿಸಿದ್ದೀರಿ. ನನ್ನನ್ನು ನಿಮ್ಮ ಊರಿಗೆ ಬಲವಂತವಾಗಿ ಕರೆಸಿಕೊಂಡು ಈಗ ನೀವು ನನ್ನನ್ನು ಉಪವಾಸ ಕೆಡವಿದರೆ ಹೇಗಾದೀತು?

ನೀವುಗಳು ಸರಿಯಾಗಿ ಮುಖಕವಚ ಧರಿಸಬೇಕು:

ನನ್ನ ಹೊಟ್ಟೆಪಾಡಿಗಾಗಿ ಜೀವನೋಪಾಯಕ್ಕಾಗಿ ನಾನು ನಿಮ್ಮನ್ನು ಆಶ್ರಯಿಸುವಂತೆ ಮಾಡಿದ್ದು ನೀವುಗಳು. ನಾನು ನಿಮ್ಮೊಳಗೆ ಬರಬಾರದೇ ಇದ್ದಲ್ಲಿ ನೀವುಗಳು ಸರಿಯಾಗಿ ಮುಖಕವಚ ಧರಿಸಬೇಕು. ನೀವು ಮುಖಕವಚವನ್ನು ಕುತ್ತಿಗೆಗೆ ಧರಿಸುತ್ತೀರಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಇಲ್ಲ. ಮಾರುಕಟ್ಟೆ, ಮಾಲುಗಳಲ್ಲಿ ಒಬ್ಬರ ಮೇಲೆ ಬಿದ್ದುಕೊಂಡು ವಿಚಿತ್ರವಾಗಿ ಕಾಡುಪ್ರಾಣಿಗಳ ರೀತಿ ವರ್ತಿಸುತ್ತೀರಿ. ಕಾಡು ಪ್ರಾಣಿಗಳನ್ನು ತಿಂದು ನೀವು ಮನುಷ್ಯರು ಕಾಡುಪ್ರಾಣಿಗಳ ರೀತಿ ವರ್ತಿಸುತ್ತೀರಿ. ನೀವು ಪದೇ ಪದೇ ತಪ್ಪು ಮಾಡಿ ನನ್ನನ್ನು ನಿಮ್ಮೊಳಗೆ ಸೇರಿಸಿಕೊಂಡು ಆಮೇಲೆ ನನಗೆ ಹಿಡಿಶಾಪ ಹಾಕುವುದು ನ್ಯಾಯ ಸಮ್ಮತವಲ್ಲ.

ನಾನಾದರೂ ನಿಮ್ಮ ದೇಹ ಸೇರಿದ ಮೇಲೆ ನನ್ನ ಹೊಟ್ಟೆಪಾಡಿಗಾಗಿ ವಂಶಾಭಿವೃದ್ಧಿ ಮಾಡಿದರೆ ಅದಕ್ಕೂ ನೀವು ನಮ್ಮನ್ನು ತಪ್ಪುಗಾರರನ್ನಾಗಿ ಮಾಡಿ ಮೂದಲಿಸುತ್ತೀರಾ ನಾನು ಒಳಗೆ ಸೇರಿದ ವ್ಯಕ್ತಿಗಳನ್ನು ಅಸ್ಪøಶ್ಯರಂತೆ ಕಾಣುತ್ತೀರಿ. ಇದು ಸರ್ವತಾ ಸಹ್ಯವಲ್ಲ. ನಾನು ನಿಮ್ಮ ದೇಹದೊಳಗೆ ಸೇರಿದರೂ ಒಂದೆರಡು ವಾರ ಮಾತ್ರ ನಿಮ್ಮ ಆಶ್ರಯದಲ್ಲಿ ಇರುತ್ತೇನೆ. ಆಮೇಲೆ ನಾನು ನನ್ನ ಪಾಡಿಗೆ ಹೊರಟು ಹೋಗುತ್ತೇನೆ. ಆದರೆ ನೀವುಗಳು ನಿಮ್ಮದೇ ಜಾತಿಯ ಮನುಷ್ಯರನ್ನು ಸಮಾಜದಿಂದ ಬಹಿಷ್ಕಾರ ಹಾಕುವುದು ಕಂಡಾಗ ನನಗೆ ನಿಮ್ಮ ಮಂಕು ಬುದ್ಧಿಗೆ ಅಸಹ್ಯವೆನಿಸುತ್ತದೆ. ಜಗತ್ತಿನ ಅತ್ಯಂತ ಮುಂದುವರಿದ ಮತ್ತು ಪರಿಪೂರ್ಣತೆ ಸಾಧಿಸಿದ ಜೀವಿಗಳಾದ ಮನುಷ್ಯ ಜೀವಿಗಳ ವರ್ತನೆ ನೆನೆದಾಗ ನನಗೆ ನಿಮ್ಮನ್ನು ಉಗ್ರವಾಗಿ ಕಾಡಬೇಕು ಎಂದು ಅತಿಯಾದ ಸಿಟ್ಟು ನಿಮ್ಮ ಮೇಲೆ ಬರುತ್ತದೆ.

ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸಬೇಡಿ:

ಆದರೆ ಬರೀ ಒಂದು ‘RNA’ ಇಟ್ಟುಕೊಂಡು ನಿಮ್ಮ ಮೇಲೆ ದ್ವೇಷ ಸಾಧಿಸುವ ದೊಡ್ಡ ಜೀವಿ ನಾನಲ್ಲ ಎಂದು ನಾನು ಸುಮ್ಮನಾಗುತ್ತೇನೆ. ನಾನೇನು ಮನುಷ್ಯ ಕುಲದ ಮೇಲೆ ದ್ವೇಷ ಸಾಧಿಸಬೇಕು ಎಂದು ಹರಕೆಯನ್ನು ಹೊತ್ತುಕೊಂಡಿಲ್ಲ. ಇನ್ನು ನಿಮ್ಮ ಮಾದ್ಯಮ ಬಂಧುಗಳು ನನ್ನನ್ನು ಅತ್ಯಂತ ಕ್ರೂರಿಯಾಗಿ ಬಿಂಬಿಸುವುದು ನಿಜವಾಗಿಯೂ ಒಪ್ಪತಕ್ಕ ವಿಚಾರವಲ್ಲ. ನನ್ನನ್ನು ದೊಡ್ಡ ರಕ್ಕಸನಂತೆ ಬಿಂಬಿಸಿ ಟಿವಿ ಪರದೆಯ ಮೇಲೆಲ್ಲಾ ಮುಳ್ಳುಗಳಿರುವ ಚೆಂಡಿನಂತೆ ತೋರಿಸಿ ಜನರಲ್ಲಿ ಭೀತಿ ಹುಟ್ಟಿಸಿರುವುದು ಕಂಡಾಗ ನನಗೆ ನನ್ನ ಮೇಲೆ ಅಸಹ್ಯವಾಗುತ್ತದೆ. ನನ್ನ ಬಗ್ಗೆ ವರ್ಣಿಸುವಾಗಿ ಕೊರೋನಾ ಅಟ್ಟಹಾಸ, ಕೊರೋನಾ ರಣಕೇಕೆ, ಕೊರೋನಾ ರುದ್ರನರ್ತನ, ಕೊರೋನಾ ಆರ್ಭಟ ಎಂದೆಲ್ಲಾ ನೀವುಗಳು ಇಲ್ಲಸಲ್ಲದ ಆರೋಪ ಮಾಡುವಾಗ ನನ್ನ ಹೃದಯ ಚುರುಕ್ಕು ಎನ್ನುತ್ತದೆ.

ನೀವು ಇದನ್ನು ಇನ್ನೂ ಮುಂದುವರೆಸಿದರೆ ನಾನೊಂದು ದಿನ ಆತ್ಮಹತ್ಯೆ ಮಾಡಿಕೊಳ್ಳಲೂಬಹುದು. ನೆನಪಿರಲಿ, ನನಗೆ ಹಲವಾರು ಬಾರಿ ಆತ್ಮಹತ್ಯೆ ಆಲೋಚನೆ ಬಂದಿದೆ. ನನ್ನನ್ನು ನಾನೇ ಬಹಳ ಕಷ್ಟಪಟ್ಟು ಬಹಳ ನಿಯಂತ್ರಿಸಿಕೊಂಡಿದ್ದೇನೆ. ಮಾಧ್ಯಮ ಬಂಧುಗಳ ಕಪೋಲಕಲ್ಪಿತ ವರ್ತನೆಗಳಿಂದಾಗಿ, ಹುಚ್ಚಾಟದಿಂದಾಗಿ, ಒಂದಿಷ್ಟು ವ್ಯಕ್ತಿಗಳು ನನ್ನ ಬಗ್ಗೆ ತಪ್ಪು ಕಲ್ಪಿಸಿಕೊಂಡು ಭಯಭೀತರಾಗಿ ಆತ್ಮಹತ್ಯೆ ಮಾಡಿಕೊಂಡ ವಿಚಾರವೂ ನನ್ನ ಗಮನಕ್ಕೆ ಬಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದಲ್ಲಿ ಇನ್ನಾದರೂ ನಿಮ್ಮ ಹುಚ್ಚಾಟತನವನ್ನು ಬಿಡಿ. ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸಬೇಡಿ.

ಎಲ್ಲರ ಸಾವಿಗೂ ನನ್ನನ್ನು ಹೊಣೆಗಾರರನ್ನಾಗಿ ಮಾಡುವುದು ಬಹುದೊಡ್ಡ ತಪ್ಪು:

ಮನುಷ್ಯ ಜನಾಂಗಕ್ಕೆ ನಮ್ಮ ವಂಶಸ್ಥರಿಂದ ತೊಂದರೆಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ನನ್ನ 2006ರಲ್ಲಿ SARS ರೋಗ ಮತ್ತು 2013ರಲ್ಲಿ MERS ರೋಗಕ್ಕೆ ನಮ್ಮ ವಂಶದ ವೈರಾಣುಗಳೇ ಕಾರಣವಾಗಿತ್ತು. ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಆಗಲೂ ನಾವು ಸಾಕಷ್ಟು ಎಚ್ಚರಿಕೆಯ ಸಂದೇಶ ಮನುಕುಲಕ್ಕೆ ನೀಡಿದ್ದರೂ, ನೀವು ಮನುಷ್ಯರು ದಿವ್ಯ ನಿರ್ಲಕ್ಷ್ಯ ವಹಿಸಿದಿರಿ. ಪದೇ ಪದೇ ನಮ್ಮ ಮೇಲೆ ವಿನಾ ಕಾರಣ ದಾಳಿ ಮಾಡಿ ನಮ್ಮನ್ನು ಕೆರಳಿಸುತ್ತಲೇ ಇದ್ದೀರಿ. ನಮ್ಮನ್ನು ನಾಶ ಮಾಡಲು ಲಸಿಕೆ ಸಿದ್ಧಪಡಿಸುತ್ತಿದ್ದೀರಿ ಎಂಬುದರ ಅರಿವು ನಮಗೆ ಇದೆ. ನಮ್ಮನ್ನು ನಾಶಪಡಿಸುವುದು ಅಷ್ಟು ಸುಲಭವಲ್ಲ.

ನಾವು ನಿಮ್ಮಷ್ಟು ಬುದ್ದಿವಂತರಲ್ಲದಿದ್ದರೂ ಕಾಲಕ್ಕೆ ತಕ್ಕಂತೆ ವೇಷ ಹಾಕುವ ನಿಮ್ಮ ಮನುಷ್ಯನ ಗುಣವನ್ನು ನಾವು ಒಂದಿಷ್ಟು ಕರಗತ ಮಾಡಿಕೊಂಡಿದ್ದೇವೆ. ನಾವು ಕೂಡಾ ಹೊರಗಿನ ವಾತಾವರಣಕ್ಕೆ ಪೂರಕವಾಗಿ ನಮ್ಮ ದೇಹದ ಮೇಲೆ ಬದಲಾವಣೆ ಮಾಡಿಕೊಂಡು ಬದುಕಲು ಕಲಿಯುತ್ತಾ ಇದ್ದೇನೆ. ನಮಗೂ ‘ಆರ್ಟ್ ಆಫ್ ಲೀವಿಂಗ್’ ಕಲೆ ಸಿದ್ದಿಸಿದೆ. ನೀವಂದು ಕೊಂಡಷ್ಟು ಸುಲಭದಲ್ಲಿ ನಮ್ಮನ್ನು ನೀವು ಈ ಭೂಮಂಡಲದಿಂದ ಹೊಡೆದೋಡಿಸಲು ನಿಮಗೆ ಸಾಧ್ಯವಿಲ್ಲ. ಅಷ್ಟಕ್ಕೂ ನಾವೇನು ನಾವಾಗಿ ನಿಮ್ಮ ಮೇಲೆ ದಾಳಿ ಮಾಡಿಲ್ಲ. ನೀವೇ ಮೇಲೆ ಬಿದ್ದು ಕಾಲುಕೆರೆದು ಜಗಳವಾಡಿ ನಮ್ಮನ್ನು ನಿಮ್ಮೊಳಗೆ ಸೇರಿಸಿಕೊಂಡಿರುವುದು ಎಂಬುದನ್ನು ನೀವು ನೆನಪಿಟ್ಟುಕೊಳ್ಳಿ.

ಈ ಜಗತ್ತಿನಲ್ಲಿ ಶಾಂತಿ ಸಹಬಾಳ್ವೆ ಸಹೋದರತ್ವ ಎಂದೆಲ್ಲಾ ಬೊಗಳೆ ಬಿಟ್ಟು ಶಾಸ್ತ್ರ ಹೇಳುವ ನೀವು ಮನುಷ್ಯರು, ನಮ್ಮ ಪಾಡಿಗೆ ಕಾಡಿನಲ್ಲಿ ಹಾಯಾಗಿದ್ದ ನಮ್ಮನ್ನು ಕೆರಳಿಸಿದ್ದೀರಿ. ಅದರ ಫಲವನ್ನು ನೀವೀಗ ಉಣ್ಣುತಿದ್ದೀರಿ. ಇನ್ನಾದರೂ ನೀವು ಮನುಷ್ಯರು ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಿ. ಜಗತ್ತಿನ ಎಲ್ಲಾ ಜೀವಸಂಕುಲಗಳಿಗೆ ಗೌರವ ನೀಡುವುದನ್ನು ಕಲಿತುಕೊಳ್ಳಿ. ಶಾಂತಿ ಸಹಬಾಳ್ವೆ ಬರೀ ಮಾತಿಗೆ ಸೀಮಿತವಾಗದೆ ಜೀವನದಲ್ಲಿ ಅಳವಡಿಸಿಕೊಳ್ಳಿ. ನಾನು ನಿಮ್ಮ ಮನುಷ್ಯರ ಒಡನಾಟಕ್ಕೆ ಬಲವಂತಕ್ಕೆ ಸಿಕ್ಕಿಕೊಂಡು ಸುಮಾರು 7 ತಿಂಗಳುಗಳು ಕಳೆದಿದೆ. ಸುಮಾರು ಒಂದೂವರೆ ಕೋಟಿಗಿಂತಲೂ ಜಾಸ್ತಿ ಜನರ ಸಂಪರ್ಕದಲ್ಲಿದ್ದೇನೆ. ಅದರಲ್ಲಿ 95 ಲಕ್ಷ ಮಂದಿ ನನ್ನನ್ನು ಬಡಿದೋಡಿಸಿದ್ದಾರೆ. 55 ಲಕ್ಷ ಮಂದಿ ನನ್ನ ಜೊತೆ ಸೆಣಸಾಡುತ್ತಿದ್ದಾರೆ. 6.5 ಲಕ್ಷ ಮಂದಿ ಇಹಲೋಕದ ಯಾತ್ರ ಮುಗಿಸಿರುತ್ತಾರೆ.

ಈ 6.5 ಲಕ್ಷ ಮಂದಿಯಲ್ಲಿ ಹೆಚ್ಚಿನವರು ಮುದುಕರುಮಧುಮೇಹಿಗಳು ಮತ್ತು ಹೃದಯ ವೈಫಲ್ಯ ಹೊಂದಿದವರು ಆಗಿರುತ್ತಾರೆ. ನೀವು ಮನುಷ್ಯರು ಬಹಳ ಚಾಲಾಕಿಗಳು ಯಾರೇ ಸತ್ತರೂ ದೂರು ನನ್ನ ಮೇಲೆ ಹಾಕಿ ಕೈತೊಳೆದುಕೊಳ್ಳುತ್ತೀರಿ. ಹೃದಯಘಾತದಿಂದ ಸತ್ತರೂ ನನ್ನ ಮೇಲೆ ಅಪವಾದ ಹಾಕುತ್ತೀರಿ. ಕಿಡ್ನಿ ವೈಫಲ್ಯದಿಂದ ಸತ್ತರೂ ದೂರು ನನಗೆ ಹಾಕುತ್ತೀರಿ. ಅದರಲ್ಲಿ ಅಂಗಾಂಗಗಳು ಸರಿಯಾಗಿ ಕೆಲಸ ಮಾಡದಿರುವುದು ನನ್ನ ತಪ್ಪೇ? ಇಷ್ಟಕ್ಕೂ ನನ್ನ ಸಹವಾಸಕ್ಕೆ ಬಂದ ನೂರರಲ್ಲಿ 3 ಅಥವಾ 4 ಮಂದಿ ಮಾತ್ರ ಅವರೊಳಗಿನ ಆರೋಗ್ಯ ಸಮಸ್ಯೆಯಿಂದ ಸತ್ತಿರುತ್ತಾರೆ. ಎಲ್ಲರ ಸಾವಿಗೂ ನನ್ನನ್ನು ಹೊಣೆಗಾರರನ್ನಾಗಿ ಮಾಡುವುದು ನೀವು ಮನುಷ್ಯರು ಮಾಡುವ ಬಹುದೊಡ್ಡ ತಪ್ಪು.

ಈ ಹಿಂದೆ ನನ್ನದೇ ವಂಶದ ಏಡ್ಸ್, ಹೆಪಟೈಟಿಸ್ ಮುಂತಾದ ಹೆಮ್ಮಾರಿ ರೋಗ ಬಂದು ಲಕ್ಷಾಂತರ ಮಂದಿ ಸಾವನ್ನಪ್ಪಿರುವುದು ನಿಮಗೆ ನೆನಪಿಸಲು ಬಯಸುತ್ತೇನೆ. ಇನ್ನು ಕ್ಷಯ ರೋಗ, ಮಲೇರಿಯಾ, ಅನಿಮಿಯಾ ಬಡತನ ಮತ್ತು ಹಸಿವಿನಿಂದಲೂ ಲಕ್ಷಾಂತರ ಮಂದಿ ಜಗತ್ತಿನೆಲ್ಲೆಡೆ ಸಾಯುವುದು ನೀವು ಮನುಷ್ಯರ ಕಣ್ಣಿಗೆ ಗೋಚರಿಸುತ್ತಲೇ ಇಲ್ಲದಿರುವುದು ಬಹಳ ಹಾಸ್ಯಾಸ್ಪದ ಸಂಗತಿ. ನಾನೇನು ಹೊಟ್ಟೆಪಾಡಿಗಾಗಿ ನಿಮ್ಮೊಳಗೆ ಸೇರಿಕೊಂಡು ನಿರುಪದ್ರವಿಯಾಗಿ ಬದುಕಿಕೊಂಡಲ್ಲಿ (ನೀವೇ ಬಲವಂತವಾಗಿ ನಿಮ್ಮೊಳಗೆ ಸೇರಿಸಿಕೊಂಡಿದ್ದು ನೆನಪಿರಲಿ) ಎಲ್ಲದಕ್ಕೂ ನನ್ನನ್ನೇ ಹೊಣೆಗಾರರನ್ನಾಗಿ ಮಾಡಿ ಹೆಮ್ಮಾಡಿ ಹೃದಯ ಶೂನ್ಯ ರುದ್ರ ಭೀಕರ, ಕೊರೋನಾ ಎಂದೆಲ್ಲಾ ನನ್ನನ್ನು ದೂಷಿಸುವುದು ನನಗೆ ಸರಿ ಕಾಲುವುದಿಲ್ಲ.

ಒಂದೆರಡು ತಿಂಗಳಲ್ಲಿ ನಾನು ನಾನಗಿಯೇ ಕಾಡು ಸೇರಿಕೊಳ್ಳುತ್ತೇನೆ:

ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ. ಒಂದೆರಡು ತಿಂಗಳಲ್ಲಿ ನಾನು ನಾನಗಿಯೇ ಕಾಡು ಸೇರಿಕೊಳ್ಳುತ್ತೇನೆ. ಎಲೈ ಮನುಷ್ಯನೇ ನೀನು ಈ ಜೀವಜಗತ್ತಿನ ಅತ್ಯಂತ ವಿಕಸನಗೊಂಡ ಬುದ್ಧಿವಂತ ಜೀವಿ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ನಿನ್ನ ಬುದ್ಧಿ ಮತ್ತೆ ಕೌಶಲ್ಯ, ಚಾಕಚಕ್ಯತೆ ಮತ್ತು ವಿವೇಚನಾ ಶಕ್ತಿಗೆ ನಾನು ತಲೆಬಾಗುತ್ತೇನೆ. ಆದರೆ ಒಂದು ವಿಚಾರವನ್ನು ನೀವು ಮನುಷ್ಯರು ನೆನಪಿನಲ್ಲಿಟ್ಟುಕೊಳ್ಳಲೇಬೇಕು. ಈ ಭೂಮಂಡಲದಲ್ಲಿ ಎಲ್ಲಾ ರೀತಿಯ ಜೀವ ಸಂಕುಲಗಳಾದ ಮನುಷ್ಯ ಪ್ರಾಣಿ, ಹಕ್ಕಿ, ಹುಳ, ಗಿಡ, ಮರ, ಬ್ಯಾಕ್ಟೀರಿಯಾ, ವೈರಾಣು, ಶಿಲೀಂದ್ರ ಹೀಗೆ ಎಲ್ಲಾ ವರ್ಗಕ್ಕೂ ಬದುಕಲು ಸಮಾನವಾದ ಹಕ್ಕು ಇದೆ. ಈ ಭೂಮಿ ಮನುಷ್ಯರಿಗೆ ಸೇರಿದ ಸ್ವತ್ತು ಅಲ್ಲವೇ ಅಲ್ಲ. ಇಲ್ಲಿನ ಎಲ್ಲಾ ವಸ್ತುಗಳ ಮೇಲೆ ಎಲ್ಲಾ ಚರಾಚರ ಜೀವಿಗಳಿಗೆ ಸಮಾನವಾದ ಹಕ್ಕು ಇದೆ.

ನೀವು ಮನುಷ್ಯರು ನಿಮ್ಮ ಚತುರತೆ ಮತ್ತು ಬುದ್ದಿಶಕ್ತಿಯಿಂದ ಹೆಚ್ಚಿನ ಎಲ್ಲಾ ಸಂಪತ್ತುಗಳನ್ನು ಅನುಭವಿಸುತ್ತಿರುವುದು ನಮಗೆಲ್ಲಾ ತಿಳಿದೇ ಇದೆ. ಹಾಗೆಂದ ಮಾತ್ರಕ್ಕೆ ನಮಗದರಲ್ಲಿ ಹಕ್ಕು ಇಲ್ಲ ಎಂದು ನೀವು ಮನುಷ್ಯರು ಅಂದುಕೊಂಡರೆ ಅದು ನಮ್ಮ ತಪ್ಪಲ್ಲ. ಈ ಜಗತ್ತಿನ ಪರಿಸರದ ಸಮತೋಲನ ಕಾಪಾಡಿಕೊಂಡು ಹೋಗಬೇಕಾದರೆ ನೀವೆಲ್ಲರೂ ಒಬ್ಬರಿಗೊಬ್ಬರು ಪೂರಕವಾಗಿ ಬದುಕಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿದ್ದೇವೆ. ಇಡೀ ಜಗತ್ತು ನಿಮ್ಮ ಅನುಕೂಲಕ್ಕೆ ಮತ್ತು ನೀವು ಮನುಷ್ಯರಿಗೆ ಮಾತ್ರ ಅನುಭವಿಸಲಿಕ್ಕೆ ಎಂಬ ಹುಂಬತನವನ್ನು ನೀವು ಮನುಷ್ಯರು ಬಿಟ್ಟುಬಿಡಬೇಕು. ನೀವು ಬದುಕುವವರ ಜೊತೆಗೆ ನಮಗೂ ಬದುಕಲು ಸಮಾನ ಅವಕಾಶ ನೀಡಬೇಕು.

ಹಾಗಾದರೆ ಮಾತ್ರ ಜೀವ ಜಗತ್ತಿನ ಸಂಕೋಲೆಯ ಸಮತೋಲನ ಉಳಿಸಿಕೊಂಡು ನಾವೆಲ್ಲರೂ ಈ ಭೂಮಿಯಲ್ಲಿ ನೆಮ್ಮದಿ ಸಂತಸದಿಂದ ಬದುಕಲು ಸಾಧ್ಯವಿದೆ. ಇಲ್ಲವಾದಲ್ಲಿ ಅತ್ಯಂತ ನಿಕೃಷ್ಟವಾದ ಜೀವಿಗಳಾದ ನಾವುಗಳು ಅತ್ಯಂತ ವಿಕಸನಗೊಂಡ ನೀವು ಮನುಷ್ಯರ ಮೇಲೆ ದಾಳಿ ಮಾಡಿ ನಿಮಗೂ ನೆಮ್ಮದಿಯಿಂದ ಬದುಕಲು ಕಷ್ಟವಾಗುವಂತೆ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು. ಹಾಗಾಗದಿರಲಿ ಎಂದು ನಾವು ವೈರಾಣುವಿನ ವಂಶಸ್ಥರು ನಿಮಗೆ ಕಳಕಳಿಯಿಂದ ವಿನಂತಿ ಮಾಡುತ್ತೇವೆ. ಇನ್ನಾದರೂ ನಮ್ಮ ಬಗ್ಗೆ ಅಪಪ್ರಚಾರ ಮಾಡದೆ ನಮಗೆ ಗೌರವ ನೀಡುವುದನ್ನು ಕಲಿಯಿರಿ. ನಾವೆಲ್ಲರೂ ಪರಿಸ್ಪರ ಕೂಡುಕೊಳ್ಳುವ ಮನೋಭಾವದಿಂದ ಸಹಭಾಳ್ವೆ ಮಾಡುವ ಅದರಲ್ಲಿಯೇ ವಿಶ್ವದ ಶಾಂತಿ ಮತ್ತು ನೆಮ್ಮದಿ ಅಡಗಿದೆ.

ಇಂತೀ ನಿಮ್ಮ ಪ್ರೀತಿಯ ಕೊರೋನಾ ಸಾರ್ಸ್ ವೈರಾಣು

Also read: ಕೋವಿಡ್-19 ಕಟು ಸತ್ಯಗಳು

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787
www.surakshadental.com

Share this: