Vydyaloka

ಕೊರೋನಾ ತಡೆಗಟ್ಟಲು ಮನೆಮದ್ದು ಸೇವಿಸುತ್ತಿದ್ದರೆ, ಈ ತಪ್ಪುಗಳನ್ನು ಮಾಡಬೇಡಿ

ಕೊರೋನಾ ತಡೆಗಟ್ಟಲು ಮನೆಮದ್ದು ಬಳಕೆಯಲ್ಲಿ, ಆಯುರ್ವೇದದ ಹೆಸರಿನಲ್ಲಿ ಕೆಲವು ತಪ್ಪುಗಳನ್ನು ಹಲವರು ಮಾಡುತ್ತಿದ್ದಾರೆ.ತಿಳಿಯದೇ, ಯಾವ್ಯಾವುದೋ ಗಿಡಮೂಲಿಕೆಗಳನ್ನು ಆಯುರ್ವೆದವೆಂದು ಪರಿಗಣಿಸಿ, ತಮ್ಮಿಷ್ಟಕ್ಕೆ ಸೇವಿಸಬೇಡಿ.

ಕೊರೋನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ ಸಮಯದಿಂದ ಈ ರೋಗದ ಚಿಕಿತ್ಸೆಗಾಗಿ, ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಸಂಶೋಧನೆಗಳು ವೈದ್ಯಕೀಯ ರಂಗದಲ್ಲಿ ನಡೆಯುತ್ತಿದೆ. ಕೊರೋನಾಗೆ ಫಲಕಾರಿಯಾದ ಔಷಧ ಅಥವಾ ವ್ಯಕ್ಸಿನ್ ಅನ್ನು ಪಡೆಯುವ ಹುಡುಕಾಟದಲ್ಲಿ ವೈದ್ಯ ವಿಜ್ನಾನಿಗಳು ನಿರತರಾಗಿರುವ ಸಂದರ್ಭ ಒಂದಾದರೆ, ಭಾರತೀಯ ಪ್ರಾಚೀನ ವೈದ್ಯ ಪದ್ದತಿಯಾದ ಆಯುರ್ವೇದ ಶಾಸ್ತ್ರದಲ್ಲಿ ಕೊರೋನಾಗೆ ಗಿಡಮೂಲಿಕೆಯಿಂದ ಪರಿಹಾರದ ಲಭ್ಯತೆಯ ಬಗ್ಗೆಯೂ ಜನರಲ್ಲಿ ಕುತೂಹಲ ಮತ್ತು ಆಸಕ್ತಿ ಮೂಡಿದೆ.

ಹಲವು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಗಿಡಮೂಲಿಕೆಗಳ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಆ ಮೂಲಕ ಕೊರೊನಾದಿಂದ ದೂರ ಉಳಿಯುವ ನಿಟ್ಟಿನಲ್ಲಿ ಆಹಾರ, ಆಚಾರ ಮತ್ತು ಮನೆಮದ್ದುಗಳ ಬಳಕೆ ಎಲ್ಲೆಲ್ಲೂ ಪ್ರಾರಂಭವಾಗಿದೆ. ಅಮೃತಬಳ್ಳಿ, ತುಳಸಿ, ಕಿರಾತಕಡ್ಡಿ, ನೆಲನಲ್ಲಿ, ಅರಿಶಿಣ, ಶುಂಠಿ, ಮುಂತಾದ ಗಿಡಮೂಲಿಕೆಗಳ ಕಷಾಯ, ಚೂರ್ಣಾ ಮತ್ತು ಚ್ಯವನಪ್ರಾಶದಂತಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲೇಹ್ಯಗಳ ಬಳಕೆ ಯತೇಚ್ಚೆವಾಗಿ ಮಾಡುತ್ತಿದ್ದಾರೆ. ಆದರೆ, ಪ್ರಾಕೃತವಾಗಿ ಗಿಡಮೂಲಿಕೆಗಳಿಂದ ರೋಗವನ್ನು ತಡೆಗಟ್ಟುವ ಸಲುವಾಗಿ ಸೇವಿಸುತ್ತಿರುವ ಈ ಔಷಧಿಗಳ ಬಳಕೆಯಲ್ಲಿ, ಆಯುರ್ವೇದದ ಹೆಸರಿನಲ್ಲಿ ಕೆಲವು ತಪ್ಪುಗಳನ್ನು ಹಲವರು ಮಾಡುತ್ತಿದ್ದಾರೆ.

1. ಆಯುರ್ವೇದದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮತ್ತು ನಿವಾರಿಸುವ ಹಲವು ಗಿಡಮೂಲಿಕೆಗಳ ಉಲ್ಲೇಖವಿದ್ದು, ಮನುಷ್ಯನ ದೇಹಪ್ರಕೃತಿ, ದೇಹದ ಬಲ, ವಯಸ್ಸು ಮತ್ತು ರೋಗದ ಅವಸ್ಥೆಯ ಪ್ರಕಾರ ಇದರ ಬಳಕೆ ಭಿನ್ನವಾಗಿದೆ. ಆದರೆ ಇದನ್ನರಿಯದ ಹಲವರು ತಮಗೆ ತಿಳಿದಿರುವ ಎಲ್ಲ ಮೂಲಿಕೆಗಳನ್ನು ಬಳಸುತಿದ್ದಾರೆ.

2. ಆಯುರ್ವೇದದಲ್ಲಿ ಔಷಧಿಗಳನ್ನು ರೋಗಿಗೆ ಬಳಸುವ ಮೊದಲು ಅಥವಾ ರೋಗ ಇಲ್ಲದಿದ್ದಾಗ ಆರೋಗ್ಯವನ್ನು ವೃದ್ದಿಸಿಕೊಳ್ಳಲು ಮನುಷ್ಯನ ಪ್ರಕೃತಿಗೆ ಅನುಗುಣವಾಗಿ ಸೂಕ್ತ ಔಷಧಿಯನ್ನು ಆಯ್ದು ಚಿಕಿತ್ಸೆಯನ್ನು ನೀಡಲಾಗುವುದು. ಎಲ್ಲ ಗಿಡಮೂಲಿಕೆಗಳು ಎಲ್ಲಾ ಪ್ರಕೃತಿಯ ದೇಹದವರಿಗೂ ಹೊಂದುವುದಿಲ್ಲ. ಉದಾ- ಕೆಲವರಿಗೆ ಶುಂಠಿ ಉತ್ತಮವಾದರೆ, ಪಿತ್ತ ಪ್ರಕೃತಯ ದೇಹದವರಿಗೆ ಸರಿಹೊಂದುವುದಿಲ್ಲ.

3. ನಮ್ಮ ದೈನಂದಿನ ಆಹಾರದಲ್ಲಿ ನಿಗದಿತ ಪ್ರಮಾಣದಲ್ಲಿ ಅರಿಶಿಣ, ಶುಂಠಿ, ಮೆಣಸು ಮುಂತಾದ ಪದಾರ್ಥಗಳ ಬಳಕೆ ಇರುವುದರಿಂದ ಇದನ್ನೆ ಮತ್ತೆ ಮನೆಮದ್ದಾಗಿ ಬಳಸುವುದರಿಂದ ಔಷಧಿಯ ಪ್ರಮಾಣ ಹೆಚ್ಚಾಗಿ, ಪ್ರತಿಕೂಲ ಪರಿಣಾಮ ಬೀರಬಹುದು.

4. ನಿಮಗೆ ಹೊಂದುವ ಯಾವುದಾದರು ಒಂದು ಮನೆಮದ್ದನ್ನು ಬಳಸಿದರೆ ಸೂಕ್ತ. 3-4 ರಂತೆ ಹೆಚ್ಚೆಚ್ಚು ಮನೆಮದ್ದುಗಳನ್ನು ತಿಳಿಯದೇ ಬಳಸಿದರೆ ಔಷಧಿಯ ಪರಿಣಾಮದಲ್ಲಿ ವ್ಯತ್ಯಾಸ ಉಂಟಾಗಬಹುದು.

5. ಕೊರೋನಾ ತಡೆಗಟ್ಟಲು, ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸುತಿದ್ದರೆ, ಮನೆಮದ್ದುಗಳ ಅವಶ್ಯಕತೆ ಇರುವುದಿಲ್ಲ.

6. ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ರೋಗಿಗಳು, ಬಿಪಿ, ಸಕ್ಕರೆ ರೋಗ, ಹೃದಯ ಸಂಬಂಧಿ ರೋಗಿಗಳು ಸಾಮಾನ್ಯವಾಗಿ ಉಪಯೋಗಿಸುವ ವ್ಯಾಧಿನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲೇಹ್ಯ, ಚೂರ್ಣಗಳನ್ನು ಸ್ವಯಂ ನಿರ್ಧರಿಸಿ ಬಳಸಬಾರದು. ಬದಲಿಗೆ, ವೈದ್ಯರ ನಿರ್ದೇಶನದಂತೆ ರೋಗಕ್ಕೆ ಅನುಗುಣವಾದ, ನಿರ್ದಿಷ್ಟ ರೋಗನಿರೋಧಕ ಔಷಧಿಯನ್ನು ಪಡೆಯಬೇಕು. ಉದಾ- ಹೆಚ್ಚು, ಕ್ಯಾಲರಿ, ಸಿಹಿಯ ಅಂಶ ಇರುವ ಲೇಹ್ಯದ ಬಳಕೆ ಮಧುಮೇಹ ರೋಗಿಗಳಲ್ಲಿ ನಿಶಿದ್ದ.

7. ಆಯುರ್ವೇದದಲ್ಲಿ ಸಾಮಾನ್ಯವಾದ ಕೆಲವು ರೋಗನಿರೋಧಕ ಔಷಧಿಗಳನ್ನು ಮತ್ತು ರೋಗಕ್ಕೆ ಅನುಗುಣವಾಗಿ ನಿರ್ಧಿಷ್ಠವಾದ ಕೆಲವು ಔಷಧಿಗಳನ್ನು ತಿಳಿಸಿರುವುದರಿಂದ ಎಲ್ಲರಿಗೂ ಎಲ್ಲಾ ಔಷಧಿ ಅನ್ವಯವಾಗುವುದಿಲ್ಲ.

8. ತಿಳಿಯದೇ, ಯಾವ್ಯಾವುದೋ ಗಿಡಮೂಲಿಕೆಗಳನ್ನು ಆಯುರ್ವೆದವೆಂದು ಪರಿಗಣಿಸಿ, ತಮ್ಮಿಷ್ಟಕ್ಕೆ ಸೇವಿಸಬೇಡಿ.

9. ಫೇಸ್ಬುಕ್, ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಜ್ನರಲ್ಲದ, ಪರಿಣತಿಹೊಂದದ ಮೂಲಗಳಿಂದ ದೊರೆಯುವ ಔಷಧಿ ಬಗೆಗಿನ ಮಾಹಿತಿಯನ್ನು ಪೂರ್ವಾಪರ ಯೋಚಿಸದೆ ಬಳಸಬೇಡಿ.

10. ಕೊರೋನ ರೋಗವನ್ನು ತಡೆಯಲು, ಮುಂಜಾಗ್ರತವಾಗಿ ಆಯುರ್ವೇದ ಔಷಧಿಯನ್ನು ಪಡೆಯಲು ವೈದ್ಯರಿಂದ ತಪಾಸಣೆಗೊಳಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ.

ಡಾ. ಮಹೇಶ್ ಶರ್ಮಾ ಎಂ
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
Mob: 9964022654

Share this: