Vydyaloka

ಚಳಿಗಾಲದಲ್ಲಿ ಹಲ್ಲು ನೋವು ತಡೆಯಲು ಬಳಸಬೇಕಾದ ಹತ್ತು ಸರಳ ಸೂತ್ರಗಳು

ಚಳಿಗಾಲದಲ್ಲಿ ಹಲ್ಲು ನೋವು ಪ್ರತಿಯೊಬ್ಬರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಚಳಿಗಾಲದಲ್ಲಿ ಅತಿಯಾದ ದಂತ ಸಂವೇದನೆ ನೋವು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆ ತೆಗೆದು ಕೊಳ್ಳತಕ್ಕದ್ದು.

1. ಅನಗತ್ಯವಾಗಿ ಜಾಸ್ತಿ ಹಲ್ಲು ಉಜ್ಜ ಬಾರದು. ದಿನಕ್ಕೆರಡು ಬಾರಿ 2 ರಿಂದ 3 ನಿಮಿಷ ಸರಿಯಾದ ಕ್ರಮದಲ್ಲಿ ಹಲ್ಲುಜ್ಜಬೇಕು. ಅತಿಯಾಗಿ ಹಲ್ಲುಜ್ಜುವುದರಿಂದ ಹಲ್ಲಿನ ಏನಮಲ್ ಕರಗಿ ಹೋಗಿ ಅತಿ ಸಂವೇದನೆ ಉಂಟಾಗಬಹುದು.

2. ಪ್ಲೋರೈಡ್‍ಯುಕ್ತ ಟೂತ್‍ಪೇಸ್ಟನ್ನು ಉಪಯೋಗಿಸಿ. ಅತಿ ಸಂವೇದನೆ ಇದ್ದಲ್ಲಿ ದಂತ ವೈದ್ಯರ ಸಲಹೆಯಂತೆ ಅತಿ ಸಂವೇದನೆ ತಡೆಯುವ ದಂತ ಚೂರ್ಣವನ್ನು ಬಳಸಿ.

3. ಇಂಗಾಲಯುಕ್ತ ಪೇಯಗಳನ್ನು ವರ್ಜಿಸಿ, ಆಹಾರದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡತಕ್ಕದ್ದು. ನೈಸರ್ಗಿಕ ಪೇಯಗಳಾದ ಹಣ್ಣಿನ ರಸ, ಎಳನೀರು, ಶುದ್ಧ ನೀರು ದೇಹಕ್ಕೆ ಮತ್ತು ಹಲ್ಲಿಗೆ ಅತೀ ಅವಶ್ಯಕ. ಸಾಕಷ್ಟು ದ್ರವಾಹಾರ ಸೇವಿಸತಕ್ಕದ್ದು. ಚಳಿಗಾಲದಲ್ಲಿ ಜೊಲ್ಲುರಸದ ಸ್ರವಿಸುವಿಕೆ ಕಡಿಮೆಯಾಗಿ ಹುಳುಕಾಗುವ ಸಾಧ್ಯತೆ ಜಾಸ್ತಿರುವುದರಿಂದ ಸಿಹಿ ಪದಾರ್ಥಗಳನ್ನು ಕಡಿಮೆ ಸೇವಿಸಿ.

4. ದಿನಕ್ಕೆರಡು ಬಾರಿ ಪ್ಲೋರೈಡ್ ಇರುವ ಬಾಯಿ ಮುಕ್ಕಳಿಸುವ ಔಷಧಿಯನ್ನು ದಂತ ವೈದ್ಯರ ಸಲಹೆಯಂತೆ ಬಳಸಿ.

5. ಬಾಯಿಯಿಂದ ಉಸಿರಾಡಬೇಡಿ. ಮೂಗಿನಿಂದಲೇ ಉಸಿರಾಡಿ. ಬಾಯಿಯಿಂದ ಉಸಿರಾಡಿದಲ್ಲಿ ಶುಷ್ಕ ಬಾಯಿ ಉಂಟಾಗಿ ವಸಡಿನ ಉರಿಯೂತ, ಹಲ್ಲು ನೋವು, ಬಾಯಿ ಹುಣ್ಣಾಗುವ ಸಾಧ್ಯತೆ ಇದೆ.

6. ಚಳಿಗಾಲದಲ್ಲಿ ಸಾಕಷ್ಟು ಬಿಸಿ ದ್ರಾವಣಗಳನ್ನು ಹೆಚ್ಚು ಸೇವಿಸುವುದು ಬಾಯಿಯ ಮತ್ತು ಹಲ್ಲಿನ ಆರೋಗ್ಯಕ್ಕೆ ಉತ್ತಮ. ಬಾಯಿಯಲ್ಲಿನ ಉಷ್ಣತೆ ಜಾಸ್ತಿಯಾದಾಗ ರಕ್ತ ಪರಿಚಲನೆ ಜಾಸ್ತಿಯಾಗಿ ರೋಗಮುಕ್ತ ಬಾಯಿಯಾಗಲು ಸಹಕಾರಿಯಾಗಬಲ್ಲದು.

7. ನಿಮ್ಮ ದಂತ ಕುಂಚವನ್ನು ಶುಚಿಯಾಗಿಸತಕ್ಕದ್ದು. ತಿಂಗಳಿಗೊಮ್ಮೆ ಅದನ್ನು ಬದಲಾಯಿಸಿ, ಹಲ್ಲುಜ್ಜಿದ ಬಳಿಕ ನಾಲಗೆಯನ್ನು ಶುಚಿಗೊಳಿಸಿ. ವಸಡಿನ ಮೋಲ್ಭಾಗವನ್ನು ಹಿತವಾದ ಒತ್ತಡದೊಂದಿಗೆ ಮಸಾಜ್ ಮಾಡಿದಲ್ಲಿ ರಕ್ತ ಪರಿಚಲನೆ ಜಾಸ್ತಿಯಾಗಿ ವಸಡಿನ ರೋಗವನ್ನು ತಡೆಗಟ್ಟಬಹುದು.

8. ಚಳಿಗಾಲದಲ್ಲಿ ‘ಮೌತ್‍ಗಾರ್ಡ್’ ಎಂಬ ಸಾಧನವನ್ನು ಬಳಸಿದಲ್ಲಿ ಹಲ್ಲಿನ ಮೇಲೆ ಅನಗತ್ಯ ಒತ್ತಡ ಬೀಳದಂತೆ ತಡೆಯಬಹುದು. ಇದು ಬಾಹ್ಯ ಉಷ್ಣತೆ ಅತೀ ಕಡಿಮೆ ಇರುವ ಪ್ರದೇಶಗಳಲ್ಲಿ ಮಾತ್ರ ಬಳಸತಕ್ಕದ್ದು.

9. ಒತ್ತಡರಹಿತ ಜೀವನಶೈಲಿ, ಸಾಕಷ್ಟು ದ್ರವಾಹಾರ ಮತ್ತು 8 ಗಂಟೆಗಳ ಸುಖ ನಿದ್ರೆ ಬಾಯಿಯ ಆರೋಗ್ಯಕ್ಕೆ ಅತೀ ಅವಶ್ಯಕ.

10. ನಿಯಮಿತವಾಗಿ ನಿಮ್ಮ ದಂತ ವೈದ್ಯರ ಸಲಹೆ ಅತೀ ಅವಶ್ಯಕ. ಚಳಿಗಾಲದಲ್ಲಿ ಅತಿಯಾದ ದಂತ ಸಂವೇದನೆ ನೋವು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆ ತೆಗೆದು ಕೊಳ್ಳತಕ್ಕದ್ದು.

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ
ಮಂಜೇಶ್ವರ- 671 323
ದೂ.: 04998-273544, 235111  ಮೊ: 98451 35787

www.surakshadental.com
email: drmuraleemohan@gmail.com

Share this: