ಸರ್ವೈಕಲ್ ಸ್ಪಾಂಡಿಲೈಟಿಸ್ ಕುತ್ತಿಗೆಗೇ ಕುತ್ತನ್ನು ತರುವ ವ್ಯಾಧಿ.ಇತ್ತೀಚೆಗೆ ಇದು ಯುವ ಹಾಗೂ ಮಧ್ಯ ವಯಸ್ಕರಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ.ಪೌಷ್ಟಿಕ ಆಹಾರ ಸೇವನೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳ ಸಮರ್ಪಕ ನಿರ್ವಹಣೆ–ಇವೇ ಮೊದಲಾದವುಗಳಿಂದ ಈ ವ್ಯಾಧಿಯನ್ನು ತಡೆಗಟ್ಟಬಹುದು.
ರಮೇಶ್ ಒಬ್ಬ ಆರ್ಕಿಟೆಕ್ಟ್ ಇಂಜಿನೀಯರ್. ಯಾವಾಗಲು ಬ್ಯುಸಿ, ಸದಾ ಲವಲವಿಕೆಯಿಂದಿರುವ ಮನುಷ್ಯ. ಒಂದುದಿನ ಆಫೀಸಿನಲ್ಲಿ ಬಲಗಡೆ ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಂಡಿತು. ಏನೋ ಉಳುಕಿರಬಹುದು ಎಂದುಕೊಂಡು ಮೂವ್ ಹಚ್ಚಿ ತಿಕ್ಕಿದ, ನೋವುನಿವಾರಕ ಮಾತ್ರೆ ಸೇವಿಸಿದ, ಆದರೆ ದಿನದಿನಕ್ಕೆ ನೋವು ಜಾಸ್ತಿ ಆಗುತ್ತಲೇ ಹೋಯಿತು, ಕೆಲವೊಮ್ಮೆ ಕುತ್ತಿಗೆ ತಿರುಗಿಸಲೂ ಕಷ್ಟವೆನಿಸಿತು, ಕೆಲವೊಮ್ಮೆ ತಲೆ ಸುತ್ತುಬರುತ್ತಿತ್ತು, ಕೊನೆಗೆ ಮೂಳೆ ಡಾಕ್ಟರರನ್ನು ಸಂದರ್ಶಿಸಿದ, x -ray, MRI ಮಾಡಿಸಿದ. ಈಗ ಡಾಕ್ಟರ್ ಸಲಹೆಯಂತೆ ದಿನವೂ 3-4 ತರಹದ ಮಾತ್ರೆ ಸೇವಿಸಬೇಕು, ಕುತ್ತಿಗೆಗೆ ಕಾಲರ್ ಹಾಕಿಕೊಳ್ಳಬೇಕಾಯ್ತು, ಯಾವಾಗಲೂ ಲವಲವಿಕೆಯಿಂದ ಇದ್ದ ರಮೇಶನ ಈ ಸ್ಥಿತಿಗೆ ಕಾರಣ ಕುತ್ತಿಗೆಯ ಮೂಳೆ ಉರಿಯೂತ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಸರ್ವೈಕಲ್ ಸ್ಪಾಂಡಿಲೈಟಿಸ್ ಎಂದು ಕರೆಯುತ್ತಾರೆ.
ಸರ್ವೈಕಲ್ ಸ್ಪಾಂಡಿಲೈಟಿಸ್ ಉಂಟಾಗಲು ಮುಖ್ಯ ಕಾರಣಗಳು
ಸರ್ವೈಕಲ್ ಸ್ಪಾಂಡಿಲೈಟಿಸ್ ಒಂದು ತರಹದ ಕುತ್ತಿಗೆಯ ಮೂಳೆಗಳ (bone) ಮತ್ತು ಸಂಧಿಗಳ (joints) ಮತ್ತು ಮೂಳೆಗಳ ನಡುವಿನ ಘರ್ಷಣೆ ತಪ್ಪಿಸುವ ಸರ್ವೈಕಲ್ ಡಿಸ್ಕುಗಳ ಸವೆತವೆನ್ನಬಹುದು. ಈ ಸವೆತದ ಪರಿಣಾಮವಾಗಿ ಕುತ್ತಿಗೆಯ ಮೂಳೆ ಶಕ್ತಿಹೀನವಾಗುತ್ತದೆ, ಮೂಳೆಗಳ ನಡುವಿನ ಗ್ರೀಸಿನಂಥಹ ವಸ್ತು ಕ್ರಮೇಣ ನಶಿಸಿಹೋಗುತ್ತದೆ. ಸವೆದ ಜಾಗದಲ್ಲಿ ಅಡ್ಡಡ್ಡವಾಗಿ, ಕ್ರಮವಿಲ್ಲದ ಹೊಸಮೂಳೆ ಬೆಳೆದು ಅದು ಅಲ್ಲಿನ ನರಗಳಮೇಲೆ ಒತ್ತಡ ಬೀರುತ್ತದೆ. ಇದರಿಂದಲೇ ಸಹಿಸಲಸಾಧ್ಯ ನೋವು. ಕೆಲವೊಮ್ಮೆ ಕುತ್ತಿಗೆಯಿಂದ ಕೈ, ಕೈ ಬೆರಳುಗಳವರೆಗೂ ಉಂಟಾಗುತ್ತದೆ. ಈ ಸವೆತ ದೇಹಕ್ಕೆ ವಯಸ್ಸಾದಂತೆ ಬರುವುದು ಸಾಮಾನ್ಯ, ಆದರೆ ಇತ್ತೀಚೆಗೆ ಇದು ಯುವ ಹಾಗೂ ಮಧ್ಯ ವಯಸ್ಕರಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ.
1. ವಯಸ್ಸು ಸಾಮಾನ್ಯವಾಗಿ 50 ವರ್ಷದಮೇಲೆ ಇದು ಹೆಚ್ಚು ಕಂಡುಬರುತ್ತದೆ
2. ಹಿಂದೆ ಯಾವಾಗಲೋ ಕುತ್ತಿಗೆಗೆ ಪೆಟ್ಟು ಬಿದ್ದಿದ್ದರೆ ಅಂಥವರಲ್ಲೂ ಬರಬಹುದು
3. ಕೆಲವೊಂದು ತರಹದ ಉದ್ಯೋಗದಲ್ಲಿರುವವರಲ್ಲಿ ಅಂದರೆ ಎಲ್ಲಿ ತುಂಬಾ ಸಮಯ ದೇಹವನ್ನು ಅಥವಾ ಕುತ್ತಿಗೆಯನ್ನು ಒಂದೇ ಭಂಗಿಯಲ್ಲಿ ಇಟ್ಟುಕೊಂಡು ಕೆಲಸಮಾಡುವುದಿದ್ದಾಗ ಉದಾ – ಕಂಪ್ಯೂಟರ್ ಕೆಲಸಮಾಡುವವರು, ಇಂಜಿನಿಯರ್ಗಳು, ಜಿಮ್ ಗಳಲ್ಲಿ ಭಾರ ಎತ್ತುವದರಿಂದ, ಲಗ್ಗೇಜು, ಮೂಟೆಹೊರುವ ಕೂಲಿಗಳಲ್ಲಿ ಇದು ಕಾಣಿಸಿಕೊಳ್ಳಬಹುದು.
4. ಒಬೆಸಿಟಿ, ಬೊಜ್ಜುತನ, ವ್ಯಾಯಾಮ ವಿಲ್ಲದಿರುವುದು, ಅವೈಜ್ಞಾನಿಕವಾಗಿ ಕುಳಿತುಕೊಳ್ಳುವ ಭಂಗಿ, ಅಪೌಷ್ಟಿಕತೆ, ಮಾನಸಿಕ ಒತ್ತಡ ಇತ್ಯಾದಿ.
ಸರ್ವೈಕಲ್ ಸ್ಪಾಂಡಿಲೈಟಿಸ್ ವ್ಯಾಧಿಯ ಚಿಹ್ನೆಗಳು :
ಕುತ್ತಿಗೆ, ಭುಜದಲ್ಲಿ ಹಿಡಿಯುವುದು (stiffness) ಮತ್ತು ನೋವು, ಕೆಲವೊಮ್ಮೆ ಕರೆಂಟ್ ಶಾಕ್ ನಂತಹ ನೋವು ಬರುತ್ತದೆ. ಕೆಲವೊಮ್ಮೆ ಕುತ್ತಿಗೆಯಲ್ಲಿ ನೋವು ಶುರುವಾಗಿ ಅದು ತಲೆಗೆ ಹರಡಿ ತಲೆನೋವೂ, ಕೈ ಮತ್ತು ಕೈ ಬೆರಳುಗಳಿಗೆ ಹರಡಿ ಕೈ ನೋವೂಬರುತ್ತದೆ. ಕೈ ಮತ್ತು ಕೈಬೆರಳು ಜೋಮುಹಿಡಿಯುವುದು, ನಿಶ್ಯಕ್ತವಾದ ಅನುಭವಗಳೂ ಸಾಮಾನ್ಯ. ಕುತ್ತಿಗೆ ತಿರುಗಿಸಲು, ವಾಹನ ಚಾಲನೆ ಮಾಡಲು ಕಷ್ಟವೆನಿಸುತ್ತದೆ. ಕೆಲವೊಮ್ಮೆ ವಿಪರೀತ ಪರಿಸ್ಥಿತಿ ಉಂಟಾಗಿ ತಲೆಸುತ್ತುವುದು, ನಡೆಯುವಾಗ ಜೋಲಿ ಹೋಗುವುದು ಆಗುವುದುಂಟು.
ಸರ್ವೈಕಲ್ ಸ್ಪಾಂಡಿಲೈಟಿಸ್ ವ್ಯಾಧಿಯನ್ನು ಬರದಂತೆ ತಡೆಯುವುದು ಹೇಗೆ ?
1. ನಿಯಮಿತ ವ್ಯಾಯಾಮ ಮತ್ತು ಜೀವನಶೈಲಿಯ ಸುಧಾರಣೆ
2. ದೇಹದ ತೂಕದ ನಿಯಂತ್ರಣ,
3. ಒಂದೇ ಭಂಗಿಯಲ್ಲಿ ಬಹಳ ಸಮಯ ಕುಳಿತಿರುವುದು, ನಿಂತಿರುವುದು ಅಥವಾ ಇನ್ಯಾವುದೇ ಅವೈಜ್ಞಾನಿಕ ಭಂಗಿಯಲ್ಲಿ ಇರುವುದನ್ನು ತಪ್ಪಿಸಿ, (computer , cinema , computer games, T.V.ಗಳನ್ನು ವೀಕ್ಷಿಸುವಾಗ, ನಿಮ್ಮ ವೃತ್ತಿಯಲ್ಲಿ )
4. ಹಾಗೆ ಇರಲೇಬೇಕಾದ ಸಂದರ್ಭದಲ್ಲಿ ನಡು ನಡುವೆ ವಿಶ್ರಾಂತಿ ಹಾಗು ಕುತ್ತಿಗೆಯ ವ್ಯಾಯಾಮ ಮಾಡಿ, ಕುಳಿತುಕೊಳ್ಳುವಾಗ ಆದಷ್ಟು ಬೆನ್ನು ನೆಟ್ಟಗಿರಲಿ.
5. ಪೌಷ್ಟಿಕ ಆಹಾರ ಸೇವನೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳ ಸಮರ್ಪಕ ನಿರ್ವಹಣೆ–ಇವೇ ಮೊದಲಾದವುಗಳಿಂದ ನಾವು ಈ ವ್ಯಾಧಿಯನ್ನು ತಡೆಗಟ್ಟಬಹುದು.
ಸರ್ವೈಕಲ್ ಸ್ಪಾಂಡಿಲೈಟಿಸ್ ವ್ಯಾಧಿಯ ಚಿಕಿತ್ಸೆ
ಹೋಮಿಯೋಪತಿ ಚಿಕಿತ್ಸಾ ಪದ್ದತಿಯಲ್ಲಿ ಈ ವ್ಯಾಧಿಗೆ ಸೂಕ್ತ ಪರಿಹಾರವಿದೆ. ಈ ಚಿಕಿತ್ಸೆಯಲ್ಲಿ ಬರೀ ರೋಗಕ್ಕಷ್ಟೇ ಪ್ರಾಮುಖ್ಯತೆ ನೀಡದೇ, ರೋಗದ ಮೂಲ ಕಾರಣವನ್ನು ಪರಿಶೀಲಿಸಿ, ಆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ರೋಗದ ಲಕ್ಷಣಗಳನ್ನ ಗಮನದಲ್ಲಿಟ್ಟುಕೊಂಡು , ಹೋಮಿಯೋಪತಿ ತ್ರಿದೋಷಗಳ (Miasm)ಗಳ ಅನುಗಣವಾಗಿ ವಿಶ್ಲೇಷಿಸಿ ಸೂಕ್ತ ಔಷಧಿಗಳನ್ನು ನೀಡಲಾಗುವುದು. ಹೋಮಿಯೋಪತಿ ವೈದ್ಯಕೀಯ ಪದ್ದತಿಯಲ್ಲಿ ಈ ವ್ಯಾಧಿಗೆ ಅನೇಕ ಔಷಧಿಗಳಿವೆ, ಹೆಚ್ಚಿನ ಖರ್ಚಿಲ್ಲದ ಚಿಕಿತ್ಸೆ ಇದಾಗಿದ್ದು, ಸರಳವಾಗಿ ಸೇವಿಸಬಹುದಾದ ಹೋಮಿಯೋಪತಿ ಔಷಧಗಳು ಸರ್ವೈಕಲ್ ಸ್ಪಾಂಡಿಲೈಟಿಸ್ ಗೆ ಸಂಭಂದಿಸಿದ ತೊಂದರೆಗಳನ್ನು ನಿವಾರಿಸುವುದಲ್ಲದೆ , ಖಾಯಿಲೆಯು ಉಲ್ಬಣಗೊಳ್ಳುವುದನ್ನು ತಡೆಯುತ್ತದೆ ಮತ್ತು ಈ ಔಷಧಿಗಳಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ.
ಡಾ. ತೇಜಸ್ವಿ ಕೆ.ಪಿ.
ಸುರಭಿ ಹೋಮಿಯೋ ಕ್ಲಿನಿಕ್, ಶಾಪ್ ನಂ.2, #823, 6ನೇ ಮುಖ್ಯರಸ್ತೆ,
7ನೇ ಅಡ್ಡರಸ್ತೆ, 4ನೇ ಬ್ಲಾಕ್, ಬೆಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು-97
ಲ್ಯಾಂಡ್‍ಮಾರ್ಕ್ – ಹಳೆ ಅಂಚೆ ಕಛೇರಿ ಬಸ್ ನಿಲ್ದಾಣ, ಸಾಯಿಬಾಬ ದೇವಸ್ಥಾನ ರಸ್ತೆ
ಮೊ: 9731133819