Vydyaloka

ಬೇಸಿಗೆ ಸಮಸ್ಯೆಗೆ ಲಾವಂಚದಲ್ಲಿದೆ ಪರಿಹಾರ

ಬೇಸಿಗೆ ಸಮಸ್ಯೆಗೆ ಲಾವಂಚ ದಲ್ಲಿದೆ ಪರಿಹಾರ. ಬೇಸಿಗೆಯಲ್ಲಿ ಅತಿಯಾದ ಬೆವರು ಮತ್ತು ಉರಿಗಳು ಸಾಮಾನ್ಯವಾಗಿ ಕಾಡುವ ಸಮಸ್ಯೆಗಳು. ಈ ಎರಡು ತೊಂದರೆಗಳ ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ.

ಬೇಸಿಗೆ ಬೆವರಿಗೆ ಪರಿಹಾರ
ಅತಿಯಾಗಿ ಬೆವರು ಬರಲು ಹಲವು ರೀತಿಯ ಕಾರಣಗಳಿರುತ್ತವೆ. ಆದರೆ ಬೇಸಿಗೆಯಲ್ಲಿ ಬೇರೆ ಕಾರಣಗಳ ಜೊತೆಗೆ ಉಷ್ಣತೆಯೂ ಸೇರಿ ಬೆವರುವಿಕೆ ಹೆಚ್ಚುತ್ತದೆ. ಅತಿಯಾಗಿ ಉಪ್ಪು, ಹುಳಿ, ಖಾರಗಳ ಸೇವನೆಯಿಂದ ಬೆವರಿನ ಪ್ರಮಾಣ ಹೆಚ್ಚುತ್ತದೆ; ಜೊತೆಗೆ ಕೆಟ್ಟ ವಾಸನೆಯೂ ಇರಲು ಕಾರಣವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಪ್ರಾಕೃತಿಕವಾಗಿ ಸಿಹಿಯಾಗಿರುವ ಪದಾರ್ಥಗಳು ಅಂದರೆ ಎಳನೀರು, ಹಣ್ಣುಗಳು, ಹಾಲು, ತುಪ್ಪ ಮುಂತಾದವು ಮತ್ತು ಕಹಿ ಹಾಗೂ ಒಗರು ರುಚಿ ಹೊಂದಿರುವ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಹಸಿರು ಸೊಪ್ಪುಗಳು ಕೂಡಾ ಸೂಕ್ತವಾದವು. ಮಾನಸಿಕ ಒತ್ತಡ, ಭಯ, ಉದ್ವೇಗಗಳೂ ಅತಿಯಾದ ಬೆವರಿಗೆ ಕಾರಣವಾಗಬಲ್ಲವು. ಹಾಗಾಗಿ ಅವುಗಳಿಂದ ದೂರವಿರಲು ಸಾಧ್ಯವಾದಷ್ಟೂ ಪ್ರಯತ್ನಿಸಬೇಕು.

• 10 ಗ್ರಾಂನಷ್ಟು ಕೊತ್ತಂಬರಿ ಬೀಜವನ್ನು ತೆಗೆದುಕೊಂಡು ಬಿಸಿನೀರಿನಲ್ಲಿ ರಾತ್ರಿ ಇಟ್ಟು ಬೆಳಿಗ್ಗೆ ಆ ನೀರನ್ನು ಸೇವಿಸುವುದರಿಂದ ಬಹಳಷ್ಟು ಜನರಲ್ಲಿ ಪರಿಣಾಮ ಕಂಡುಬರುತ್ತದೆ. ಲಾವಂಚ, ಸೊಗದೇ ಬೇರುಗಳ ಕಷಾಯವೂ ತುಂಬಾ ಸಹಾಯ ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಿತ್ಯವೂ ಇವುಗಳ ಕಷಾಯ ಸೇವಿಸುವುದು ಒಳ್ಳೆಯದು.
• ಸೊಗದೇ ಬೇರಿನ ಸೇವನೆಯಿಂದ ಬೆವರಿನ ವಾಸನೆ ಕೂಡಾ ಕಡಿಮೆಯಾಗುತ್ತದೆ.
• ನಿತ್ಯವೂ ಯೋಗಾಸನಗಳು, ಭ್ರಾಮರಿ, ಶೀತಲೀ, ಶೀತ್ಕಾರಿಗಳಂತಹ ಪ್ರಾಣಾಯಾಮಗಳು ಮತ್ತು ಚಿನ್ಮುದ್ರೆ, ವರುಣ ಮುದ್ರೆಗಳಂತಹ ಮುದ್ರೆಗಳನ್ನು ಅಭ್ಯಾಸ ಮಾಡುವುದರಿಂದ ತುಂಬಾ ಸಹಾಯವಾಗುತ್ತದೆ.
• ಶುದ್ಧ ಶ್ರೀಗಂಧವನ್ನು ಕಾಲು ಚಮಚದಷ್ಟು ತೇಯ್ದು ಹಾಲಿಗೆ ಹಾಕಿ ನಿತ್ಯವೂ ಕುಡಿದರೆ ಬೇಸಿಗೆಯಲ್ಲಿ ಕಾಡುವ ಅತಿ ಬೆವರು, ಬೆವರಿನ ವಾಸನೆ ಮತ್ತು ಉರಿಗಳು ಕಡಿಮೆಯಾಗುತ್ತವೆ.

ಬೇಸಿಗೆ ಉರಿಗೆ ಪರಿಹಾರ
ಬೇಸಿಗೆ ಬಂತೆಂದರೆ ಕಣ್ಣುರಿ, ಗಂಟಲು – ಹೊಟ್ಟೆಗಳಲ್ಲಿ ಉರಿ, ಪಾದ – ಹಸ್ತಗಳಲ್ಲಿ ಬಿಸಿ ಮತ್ತು ಉರಿಯಾಗಲು ಪ್ರಾರಂಭವಾಗುತ್ತದೆ ಎಂಬುದು ಬಹಳಷ್ಟು ಜನರ ಸಮಸ್ಯೆ. ಈ ಉರಿಗೆ ಕಾರಣ ನಮ್ಮ ದೇಹದಲ್ಲಿ ಆಗುವ ದೋಷಗಳ ಏರುಪೇರು. ಅವು ಆಗದಂತೆ ತಡೆದರೆ ಹೊರಗೆ ಎಷ್ಟೇ ತಾಪಮಾನವಿದ್ದರೂ ನಾವು ತಂಪಾಗಿರಲು ಸಾಧ್ಯ.

ಈ ಕಾಲದಲ್ಲಿ ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಅಂದರೆ ಹಾಲು, ಬೆಣ್ಣೆ, ಬಸಳೆಸೊಪ್ಪು, ಬೂದುಗುಂಬಳಕಾಯಿ, ಹಾಲುಗುಂಬಳಕಾಯಿ, ಒಂದೆಲಗ, ನೆಲ್ಲಿಕಾಯಿ, ಒಣದ್ರಾಕ್ಷಿ, ಮೆಂತೆಸೊಪ್ಪು, ಖರ್ಜೂರ, ಚಿಕ್ಕು (ಸಪೋಟ), ಸೀತಾಫಲ, ಖರಬೂಜದಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾ ಹೋದರೆ ಮೇಲೆ ಹೇಳಿದ ಉರಿಗಳೆಲ್ಲಾ ಕಡಿಮೆಯಾಗಲು ಸಹಾಯವಾಗುತ್ತದೆ.

• ಈ ರೀತಿ ಸಮಸ್ಯೆ ಇರುವವರು ಉಪ್ಪು, ಹುಳಿ, ಖಾರಗಳನ್ನು ಸಾಧ್ಯವಾದಷ್ಟೂ ಕಡಿಮೆ ಸೇವಿಸಬೇಕು.
• ವಿಶೇಷವಾಗಿ ಹಿರಿಯರಿಗೆ ಬೇಸಿಗೆಯಲ್ಲಿ ಉಷ್ಣವಾಗುವುದರ ಜೊತೆಗೆ ನಿಶ್ಶಕ್ತಿಯೂ ಕಾಡುತ್ತದೆ. ಹಾಗಾಗಿ, ಖರ್ಜೂರದ ಮಿಲ್ಕ್ ಶೇಕ್ ಮಾಡಿಕೊಂಡು ಅಂದರೆ ಮೆತ್ತನೆಯ, ಕಪ್ಪು ಬಣ್ಣದ ಖರ್ಜೂರಗಳ ಬೀಜ ತೆಗೆದು ಹಾಲಿನ ಜೊತೆ ರುಬ್ಬಿ ಹಸಿವಿರುವ ಸಮಯದಲ್ಲಿ ಅಂದರೆ ಮಧ್ಯಾಹ್ನ 12 ಘಂಟೆಯ ಹೊತ್ತಿಗೆ ಸೇವಿಸಿದರೆ ತುಂಬಾ ಅನುಕೂಲವಾಗುತ್ತದೆ.
• ಬೂದುಗುಂಬಳಕಾಯಿಯಂತೂ ಈ ಕಾಲದಲ್ಲಿ ಅತ್ಯಂತ ಪ್ರಶಸ್ತವಾದ ಆಹಾರದ್ರವ್ಯ. ಏಕೆಂದರೆ ಬೂದುಗುಂಬಳಕಾಯಿಯು ತಂಪುಗುಣವನ್ನು ಹೊಂದಿದ್ದು ನಿಶ್ಶಕ್ತಿ, ದೇಹದಲ್ಲಿ ಉರಿ, ಮಾನಸಿಕ ಒತ್ತಡ, ನಿದ್ರಾಹೀನತೆಗಳನ್ನು ಕಡಿಮೆ ಮಾಡಲು ಅತ್ಯಂತ ಸಹಾಯಕ. ಹಾಗಾಗಿ ನಿತ್ಯವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳದ ಜ್ಯೂಸ್ ಅನ್ನು ಸೇವಿಸಿದರೆ ಅನುಕೂಲವಾಗುತ್ತದೆ.
• ಪಾದದ ಉರಿ, ನಿದ್ರಾಹೀನತೆಗಳಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ತುಪ್ಪ ಅಥವಾ ಕೊಬ್ಬರಿ ಎಣ್ಣೆಯಿಂದ ಪಾದಗಳಿಗೆ ಮಸ್ಸಾಜ್ ಮಾಡಿಕೊಂಡು ಮಲಗಿದರೆ ಈ ಸಮಸ್ಯೆಗಳು ಹತೋಟಿಗೆ ಬರುತ್ತವೆ.

ಬೇಸಿಗೆ ಸಮಸ್ಯೆಗೆ ಲಾವಂಚ

ಲಾವಂಚವು ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿಸುವ ಒಂದು ವಿಶೇಷ ಗಿಡಮೂಲಿಕೆ. ಲಾವಂಚವು ತಂಪು ಗುಣವನ್ನು ಹೊಂದಿದ್ದು ಅತಿಯಾದ ಬಾಯಾರಿಕೆ, ಜ್ವರ, ರಕ್ತಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಬೆವರಿನ ವಾಸನೆ, ಅತಿಯಾದ ಬೆವರುವಿಕೆ, ಮೂತ್ರದ ತೊಂದರೆಗಳು, ಚರ್ಮದ ಸಮಸ್ಯೆಗಳು, ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಆಗುವ ವಾಂತಿ, ಗುಣವಾಗದೇ ಇರುವ ಗಾಯ, ಮಧುಮೇಹ ಮುಂತಾದ ತೊಂದರೆಗಳಲ್ಲಿ ತುಂಬಾ ಉಪಯುಕ್ತ. ತಂಪು ಗುಣವನ್ನು ಹೊಂದಿದ್ದರೂ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ದೇಹದಲ್ಲಿರುವ ವಿಷವನ್ನು ಹೊರಹಾಕಲು ಅಂದರೆ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರ ಪರಿಮಳಕ್ಕೆ ಬ್ರಿಟಿಷರು ಕೂಡ ಮನಸೋತಿದ್ದರು. ಹಾಗಾಗಿ ಬೇಸಿಗೆಯಲ್ಲಿ ಅವರು ಕಿಟಕಿಗಳಿಗೆ ಇದರ ಬೇರಿನ ಪರದೆಯನ್ನು ಇಳಿಬಿಟ್ಟು ಅದಕ್ಕೆ ಆಗಾಗ ನೀರನ್ನು ಚಿಮುಕಿಸುತ್ತಿದ್ದರು. ಇದರಿಂದ ಮನೆಯ ವಾತಾವರಣ ತಂಪಾಗಿರಲು ಸಾಧ್ಯವಾಗುತ್ತಿತ್ತು.

ಬೇಸಿಗೆಯಲ್ಲಿ ರಾಸಾಯನಿಕ ಭರಿತ ಸಿದ್ಧ ತಂಪುಪಾನೀಯಗಳನ್ನು ಸೇವಿಸುವುದು ಹಲವರ ರೂಢಿ. ಆದರೆ ಇದರಿಂದ ಆರೋಗ್ಯ ಹಾಳಾಗುವುದು ಶತಃಸಿದ್ಧ. ಆರೋಗ್ಯ ಹೆಚ್ಚಿಸುವ, ಚರ್ಮದ ತೊಂದರೆಗಳನ್ನು ನಿವಾರಿಸುವ, ಚರ್ಮದ ಸೌಂದರ್ಯವನ್ನು ಕಾಪಾಡುವ, ಉರಿಮೂತ್ರ, ಚರ್ಮದಲ್ಲಿ ಉರಿ, ತುರಿಕೆ, ಬೆವರುಸಾಲೆ, ಚರ್ಮ ಕಪ್ಪಾಗುವುದು ಮುಂತಾದ ಉಷ್ಣದಿಂದಾಗುವ ಸಮಸ್ಯೆಗಳನ್ನು ನಿವಾರಿಸಲು ಲಾವಂಚ ಪಾನೀಯ ಸೂಕ್ತ.

ಪಾನೀಯ ಮಾಡಿಕೊಂಡು ಬಳಸುವ ವಿಧಾನ
ಲಾವಂಚ ಮತ್ತು ರಕ್ತ ಚಂದನಗಳನ್ನು ಸಣ್ನ ಸಣ್ಣ ತುಂಡುಗಳನ್ನಾಗಿ ಮಾಡಿ ಇಡೀ ದಿನ ಮನೆಯವರಿಗೆಲ್ಲಾ ಸಾಲುವಷ್ಟು ನೀರಿಗೆ ಹಾಕಿ ಕುದಿಸಬೇಕು. ನೀರು ಕುದಿಯುತ್ತಿದ್ದಂತೆಯೇ ಅದಕ್ಕೆ ಸೊಗದೇ ಬೇರಿನ ಪುಡಿ ಅಥವಾ ಚೂರುಗಳನ್ನು ಹಾಕಿ ಪಾತ್ರೆಯನ್ನು ಮುಚ್ಚಿ ಬೆಂಕಿ ಆರಿಸಬೇಕು. ನೀರು ತಣಿದ ನಂತರ ಮನೆಮಂದಿಯೆಲ್ಲಾ ಇಡೀ ದಿನ ಇದೇ ನೀರನ್ನು ಸೇವಿಸಬಹುದು. ನಾಲ್ಕು ಲೀಟರ್ ನೀರನ್ನು ತಯಾರಿಸುವುದಿದ್ದರೆ ಲಾವಂಚದ ತುಂಡುಗಳನ್ನು ನಾಲ್ಕು ಚಮಚದಷ್ಟು ಮತ್ತು ಸೊಗದೇ ಬೇರು ಹಾಗೂ ಚಂದನಗಳನ್ನು ಒಂದು ಚಮಚದಷ್ಟು ಬಳಸಬೇಕು.

ಜ್ವರ ಬಂದಾಗ ಲಾವಂಚ, ಭದ್ರಮುಷ್ಟಿ, ಸ್ವಲ್ಪೇ ಸ್ವಲ್ಪ ಶುಂಠಿಯನ್ನು ಹಾಕಿ ಎರಡು ತಂಬಿಗೆ ನೀರು ಹಾಕಿ ಒಂದು ತಂಬಿಗೆ ಬತ್ತಿಸಿ ಆ ನೀರನ್ನು ಇಡೀ ದಿನ ಕುಡಿಯುತ್ತಿರುವುದರಿಂದ ಜ್ವರ, ಭೇದಿ, ಬಾಯಾರಿಕೆ, ಉಷ್ಣತೆ, ಸುಸ್ತು ಕಡಿಮೆಯಾಗಿ ಹಿತವಾದ ಶಕ್ತಿ ಬರುತ್ತದೆ. ಅತಿಯಾದ ಉಷ್ಣತೆಯ ಕಾರಣದಿಂದ ಬಹಳಷ್ಟು ಜನರಿಗೆ ದೇಹದ ಬಣ್ಣ ಕಪ್ಪಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಕುದಿಸುವಾಗ ನಾಲ್ಕು ತುಂಡು ಲಾವಂಚವನ್ನು ಹಾಕಿ ನೀರು ಕುದಿಸಿ ಸೋಸಿ ಇಟ್ಟುಕೊಂಡು ಆ ನೀರನ್ನು ನಿತ್ಯವೂ ಸೇವಿಸುವ ರೂಢಿಯನ್ನು ಬೆಳೆಸಿಕೊಂಡರೆ ಅನುಕೂಲವಾಗುತ್ತದೆ.

Also read: ಸೊಂಟನೋವಿನ ಸಮಸ್ಯೆ ಗೆ ಕಾರಣ ಮತ್ತು ಪರಿಹಾರ 

ಜೊತೆಗೆ ಲಾವಂಚ, ಜೇಷ್ಠಮಧು, ಸೊಗದೆ ಬೇರು, ಮಂಜಿಷ್ಟ, ಅರಿಶಿಣಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿ ಹಾಲು ಅಥವಾ ರೋಜ್ ವಾಟರ್ ನಲ್ಲಿ ಕಲಸಿ ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದಲೂ ಬಣ್ಣ ಸುಧಾರಿಸಲು ಸಹಾಯವಾಗುತ್ತದೆ. ಚರಕ ಸಂಹಿತೆಯಲ್ಲಿ ವರ್ಣ್ಯ ಗಣ ಅಂದರೆ ಚರ್ಮದ ಬಣ್ಣವನ್ನು ಸುಧಾರಿಸುವ ಅಥವಾ ಕಾಂತಿಯನ್ನು ಹೆಚ್ಚಿಸುವ ದ್ರವ್ಯಗಳ ಗುಂಪಿನಲ್ಲಿ ಲಾವಂಚವನ್ನು ಸೇರಿಸಿದ್ದಾರೆ.

ಉರಿ, ಚರ್ಮದ ಸಮಸ್ಯೆ, ಅತಿಯಾದ ಬೆವರುವಿಕೆಯಲ್ಲಿ ದೇಹದ ಮೇಲೆ ಹಚ್ಚಲು ಲಾವಂಚಕ್ಕಿಂತ ಉತ್ತಮವಾದ ದ್ರವ್ಯ ಇನ್ನೊಂದಿಲ್ಲ ಎಂದು ಚರಕ ಸಂಹಿತೆಯಲ್ಲಿ ಹೇಳಿದ್ದಾರೆ. ಅದರ ಬೇರನ್ನು ಪುಡಿಮಾಡಿ ನೀರು ಹಾಕಿ ಕಲಸಿ ಆ ಪೇಸ್ಟ್ ಅನ್ನು ಉರಿ, ಗಾಯ, ಸುಟ್ಟ ಗಾಯ, ಚರ್ಮದ ಖಾಯಿಲೆಯಲ್ಲಿ ಉರಿ ಇದ್ದರೆ ಅಂತಹ ಕಡೆಗಳಲ್ಲಿ ಗುಣವಾಗುವವರೆಗೆ ನಿತ್ಯವೂ ಇದನ್ನು ಹಚ್ಚಬೇಕು. ಲಾವಂಚವು ಬಹುತೇಕ ಎಲ್ಲಾ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ. ಅದರ ಬೆಲೆ ಕೂಡಾ ಕಡಿಮೆಯೇ. ಹಾಗಾಗಿ ಪ್ರತಿಯೊಬ್ಬರೂ ಇದನ್ನು ಸುಲಭವಾಗಿ ಬಳಸಬಹುದು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this: