Vydyaloka

ಬೆಳ್ಳುಳ್ಳಿ ದಿವ್ಯೌಷಧ

ಬೆಳ್ಳುಳ್ಳಿ ದಿವ್ಯೌಷಧ: ನಮ್ಮ ಅಡುಗೆ ಮನೆಯೆಂದರೆ ಆರೋಗ್ಯದಾತ ದೇವ ಧನ್ವಂತರಿಯ ದೇವಾಲಯವಿದ್ದಂತೆ. ಅಡುಗೆಗೆ ಬಳಸುವ ಎಲ್ಲಾ ಆಹಾರ ದ್ರವ್ಯಗಳೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಗಳೇ. ಅವುಗಳಲ್ಲಿ ಹಿರಿಯ ಸ್ಥಾನಕ್ಕೆ ಅರ್ಹವಾದ ಪದಾರ್ಥಗಳಲ್ಲಿ ಬೆಳ್ಳುಳ್ಳಿಯೂ ಒಂದು. ಹಲವಾರು ಕಾಯಿಲೆಗಳನ್ನು ತಡೆಯುವ ಮತ್ತು ಗುಣಪಡಿಸುವ ಶಕ್ತಿ ಈ ಪುಟ್ಟ ಬೆಳ್ಳಿ ಬೆಡಗಿ ಬೆಳ್ಳುಳ್ಳಿಗೆ ಇದೆ.

ಭಾರತೀಯರು ತಲೆತಲಾಂತರಗಳಿಂದ ಬೆಳ್ಳುಳ್ಳಿಯನ್ನು ಔಷಧವಾಗಿ ಬಳಕೆ ಮಾಡುತ್ತಿದ್ದಾರೆ. ಇಂದು ಆಧುನಿಕ ವಿಜ್ಞಾನ ಕೂಡ ಬೆಳ್ಳುಳ್ಳಿ ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿವೆ ಎಂಬುದನ್ನು ಕಂಡುಕೊಂಡಿದೆ. ಬೆಳ್ಳುಳ್ಳಿಯಲ್ಲಿ ಅಲೀನ್ ಎಂಬ ಅಮೈನೋ ಆಸಿಡ್ ಇರುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ಕೆಲ ನಿಮಿಷಗಳ ಕಾಲ ವಾತಾವರಣದಲ್ಲಿ ಇಟ್ಟಾಗ ಅದು ಆಲಿಸೀನಾಗಿ ಬದಲಾಗುತ್ತದೆ. ಈ ಅಲಿಸೀನ್ ನಮ್ಮ ದೇಹದಲ್ಲಿ ಚಮತ್ಕಾರವನ್ನೇ ಮಾಡಬಲ್ಲ ಶಕ್ತಿಯನ್ನು ಹೊಂದಿರುವಂಥದ್ದು. ಹೆಚ್ಚಾದ ಕೊಲೆಸ್ಟ್ರಾಲ್, ರಕ್ತನಾಳಗಳು ಕಟ್ಟಿಕೊಳ್ಳುವುದು, ಮಧುಮೇಹ, ಅತಿ ರಕ್ತದೊತ್ತಡ ಮುಂತಾದ ಹಲವಾರು ಸಮಸ್ಯೆಗಳನ್ನು ಇದು ಗುಣಪಡಿಸುತ್ತದೆ ಎಂಬುದು ಸಾಬೀತಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಇದು ಹೃದಯ ಸಂಬಂಧೀ ಕಾಯಿಲೆಗಳನ್ನು ತಡೆಯುತ್ತದೆ ಮತ್ತು ಗುಣಪಡಿಸುತ್ತದೆ. ನರಗಳ ದೌರ್ಬಲ್ಯವನ್ನು ನಿವಾರಿಸುವ ಶಕ್ತಿಯು ಬೆಳ್ಳುಳ್ಳಿಗಿದೆ ಎಂಬುದು ಸಾಬೀತಾಗಿದೆ.

ಆಯುರ್ವೇದದಲ್ಲಿ ಇದಕ್ಕೆ ಮಹೌಷಧ ಎಂದು ಕರೆದಿದ್ದಾರೆ. ಇದಕ್ಕಿರುವ ರೋಗ ನಾಶಕ ಗುಣ ಅಂಥದ್ದು. ಇದು ಧಾತುವರ್ಧಕ, ವೀರ್ಯವರ್ಧಕ, ಜೀರ್ಣಶಕ್ತಿಯನ್ನು ಹೆಚ್ಚಿಸುವಂಥದ್ದು, ಮುರಿದ ಎಲುಬುಗಳನ್ನು ಜೋಡಿಸುವಂಥದ್ದು, ಕಂಠಕ್ಕೆ ಹಿತಕಾರಿ, ಬುದ್ಧಿಶಕ್ತಿಯನ್ನು ಹೆಚ್ಚಿಸುವಂಥದ್ದು ಮತ್ತು ಕಣ್ಣುಗಳ ಆರೋಗ್ಯಕ್ಕೆ ಉತ್ತಮವಾದದ್ದು ಎನ್ನುತ್ತದೆ ಆಯುರ್ವೇದ. ಇದಕ್ಕೆ ಉಷ್ಣ ಮತ್ತು ತೀಕ್ಷ್ಣ ಗುಣಗಳಿವೆ; ಅಗ್ನಿವರ್ಧಕ ಗುಣವಿದೆ.  ಈ ಎಲ್ಲ ಗುಣಗಳು ಇರುವ ಕಾರಣದಿಂದಾಗಿ ಇದು ಹೃದ್ರೋಗ, ಹೊಟ್ಟೆ ನೋವು, ತುಂಬಾ ದಿನಗಳಿಂದ ಕಾಡುತ್ತಿರುವ ಜ್ವರ, ವಾತವ್ಯಾಧಿಗಳು. ಮೂಲವ್ಯಾಧಿ, ಚರ್ಮ ರೋಗಗಳು, ಅಗ್ನಿಮಾಂದ್ಯ ಮತ್ತು ಕಫಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಅತ್ಯಂತ ಸಹಾಯಕ ಎಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ.

ಕೆಲವು ರೀತಿಯ ಅರ್ಧಾಂಗವಾಯುವಿನ ಸಮಸ್ಯೆಯಲ್ಲಿ ಬೆಳ್ಳುಳ್ಳಿಯ ಕ್ಷೀರಪಾಕ ಅಂದರೆ ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಕುದಿಸಿ ಕೊಡುವ ಔಷಧವು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಎಂದು ಆಯುರ್ವೇದ ಚಿಕಿತ್ಸಾ ತಜ್ಞರು ಹೇಳುತ್ತಾರೆ. ಇದೊಂದೇ ಅಲ್ಲದೆ ಸೊಂಟನೋವು, ಕೈಗಳ ಸೆಳೆತ, ಸಯಾಟಿಕ, ಕಾಲುಗಳಲ್ಲಿ ಬಾವು, ಆರ್ಥ್ರೈಟಿಸ್ ಮುಂತಾದ ಹಲವಾರು ವಾತವ್ಯಾಧಿಗಳಲ್ಲಿ ಅತ್ಯಂತ ಪ್ರಯೋಜಕ. ಪದೇ ಪದೇ ಕಾಡುವ ಸೀನು, ನೆಗಡಿ, ಸೈನಸೈಟಿಸ್, ಅಸ್ತಮಾ, ಕಫಯುಕ್ತ ಕೆಮ್ಮು ಮುಂತಾದ ಕಫಕ್ಕೆ ಸಂಬಂಧಿಸಿದ ಬಹುತೇಕ ರೋಗಗಳಲ್ಲಿ ಈ ಬೆಳ್ಳುಳ್ಳಿ ದಿವ್ಯೌಷಧ.

ಹಾಗಾಗಿ ಬೆಳ್ಳುಳ್ಳಿಯನ್ನು ವಾತ ಮತ್ತು ಕಫ ದೋಷಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಹಾಗೂ ವಾತ ಮತ್ತು ಕಫ ಪ್ರಕೃತಿಯವರು ಹೆಚ್ಚಾಗಿ ಸೇವನೆ ಮಾಡಿದರೆ ಅನುಕೂಲವಾಗುತ್ತದೆ. ಮಳೆಗಾಲದಲ್ಲಿ, ಜೀರ್ಣಶಕ್ತಿ ಕಡಿಮೆ ಇರುವಾಗ, ಹೊಟ್ಟೆ ಉಬ್ಬರ – ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಇರುವಾಗ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸಬೇಕು. ಹೊಟ್ಟೆಯಲ್ಲಿ ಗ್ಯಾಸ್ ತುಂಬಿ ಸಮಸ್ಯೆಯನ್ನು ಅನುಭವಿಸುವವರ ಸಂಖ್ಯೆ ಇತ್ತೀಚೆಗೆ ತುಂಬಾ ಜಾಸ್ತಿಯಾಗಿದೆ. ಅಂಥವರು ನಿತ್ಯವೂ ಮೂರ್ನಾಲ್ಕು ಎಸಳು ಬೆಳ್ಳುಳ್ಳಿಯನ್ನು ರಾತ್ರಿ ಊಟದ ಪ್ರಾರಂಭದಲ್ಲಿ ಸೇವಿಸಿದರೆ ತುಂಬಾ ಅನುಕೂಲವಾಗುತ್ತದೆ. ಆದರೆ ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಬೆಳ್ಳುಳ್ಳಿಯನ್ನು ಜಜ್ಜಿ ಕೆಲ ನಿಮಿಷಗಳ ಕಾಲ ಗಾಳಿಗೆ ಹಾಗೇ ಬಿಟ್ಟು ನಂತರ ಸೇವಿಸಬೇಕು.

ಉಷ್ಣ ಮತ್ತು ತೀಕ್ಷ್ಣ ಗುಣಗಳ ಕಾರಣದಿಂದಲೇ ಬೆಳ್ಳುಳ್ಳಿ ಇಷ್ಟೆಲ್ಲಾ ಪ್ರಯೋಜನಕಾರಿಯಾದರೂ ಇದೇ ಗುಣಗಳ ಕಾರಣದಿಂದ ಉರಿ ಬೇಸಿಗೆಯಲ್ಲಿ, ಉಷ್ಣತೆಯ ಕಾರಣದಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಇದು ತೊಂದರೆಯನ್ನುಂಟುಮಾಡುತ್ತದೆ. ಹಾಗಾಗಿ ಉಷ್ಣಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸ್ವಲ್ಪ ಎಚ್ಚರಿಕೆಯಿಂದ ಬಳಸಬೇಕು. ಯಾರೇ ಆದರೂ ಹೆಚ್ಚುಹೆಚ್ಚಾಗಿ ಬೆಳ್ಳುಳ್ಳಿಯನ್ನು ಸೇವಿಸುತ್ತಿದ್ದರೆ ಅಂಥವರು ಹೆಚ್ಚಿನ ಪ್ರಮಾಣದಲ್ಲಿ ತುಪ್ಪ, ಮಾಂಸ ಮುಂತಾದ ಒಳ್ಳೆಯ ಕೊಬ್ಬುಗಳನ್ನು ಸೇವಿಸಬೇಕು. ಬೆಳ್ಳುಳ್ಳಿಯ ಇನ್ನೊಂದು ದುರ್ಗುಣವೆಂದರೆ ಅದು ಮನಸ್ಸಿನ ರಾಜಸಿಕ ಗುಣವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಕಾಮ, ಕ್ರೋಧ ಮುಂತಾದ ಗುಣಗಳು ಹೆಚ್ಚುತ್ತವೆ. ಹಾಗಾಗಿ ಸಾತ್ವಿಕ ಗುಣದ ವೃದ್ಧಿಯನ್ನು ಬಯಸುವವರು, ಧ್ಯಾನ – ಜಪ – ತಪಗಳನ್ನು ಮಾಡುವವರು ಬೆಳ್ಳುಳ್ಳಿಯ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಆದರೆ ಆರೋಗ್ಯದ ದೃಷ್ಟಿಯಲ್ಲಿ ಬೆಳ್ಳುಳ್ಳಿ ಒಂದು ವರದಾನವೇ ಸರಿ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: