Vydyaloka

ಬಾಯಿ – ಮುಖದ ವಿಕಲಾಂಗತೆ ಎಂದರೇನು?

ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕವಾಗಿ ದಂತ ವೈದ್ಯಕೀಯ ಪದವಿ ಅಥವಾ ಬಿ.ಡಿ.ಎಸ್ ಪದವಿ ಪಡೆದ ಬಳಿಕ ಸುಮಾರು ಒಂಬತ್ತು ವಿವಿಧ ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಅಥವಾ ಸ್ನಾತ್ಸಕೋತ್ತರ ಪದವಿ ಪಡೆಯುವ ಅವಕಾಶವಿದೆ. ಇದರಲ್ಲಿ ದಂತ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಸ್ನಾತ್ತಕೋತ್ತರ ಪದವಿಯನ್ನು ಬಾಯಿ, ಮುಖ ಮತ್ತು ದವಡೆ ಶಾಸ್ತ್ರ ಎಂದು ಕರೆಯಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಓರಲ್ ಮತ್ತು ಮಾಕ್ಸಿಲೋ ಫೇಷಿಯಲ್ ಸರ್ಜರಿ ಎಂದು ಕರೆಯುತ್ತಾರೆ. ಜನರಲ್ಲಿ ಈ ದಂತ ವೈದ್ಯಕೀಯ ಶಾಸ್ತ್ರದ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಯಾವುದಾದರೊಂದು ಧ್ಯೇಯ ವಾಕ್ಯ ಇಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಫೆಬ್ರವರಿ 13ರಂದು ನಡೆಸಲಾಗುತ್ತದೆ.

1969ರ ಫೆಬ್ರವರಿ 13ರಂದು ಭಾರತೀಯ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ಸಂಘ ಅಸ್ಥಿತ್ವಕ್ಕೆ ಬಂದಿತ್ತು. ಇದರ ನೆನಪಿಗಾಗಿ ಫೆಬ್ರವರಿ 13ರಂದು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ ಎಂದು ಆಚರಿಸಿ ಜನರಲ್ಲಿ ಈ ದಂತ ವೈದ್ಯಕೀಯ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಮೂಡಿಸುವ ಕಾರ್ಯ ದೇಶದಾದ್ಯಂತ ಮಾಡಲಾಗುತ್ತದೆ. 2020ರ ಈ ಆಚರಣೆಯ ಧ್ಯೇಯ ವಾಕ್ಯ “ಮುಖದ ವಿಕಲಾಂಗತೆ ನಿವಾರಣೆ” ಎಂಬುದಾಗಿದೆ. ಯಾವ ಯಾವ ಕಾರಣಗಳಿಂದ ಮುಖದ ವಿಕಲಾಂಗತೆ ಉಂಟಾಗುತ್ತದೆ ಮತ್ತು ಈ ವಿಕಲಾಂಗತೆಯನ್ನು ಯಾವ ರೀತಿ ಸರಿಪಡಿಸಬಹುದು ಎಂಬುದನ್ನು ಜನರಿಗೆ ತಿಳಿಸಿಕೊಡುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಭಾರತ ದೇಶದಾದ್ಯಂತ ಸುಮಾರು ಇಪ್ಪತ್ತು ಸಾವಿರದಷ್ಟು ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು ಇದ್ದು, ಇವೆಲ್ಲರೂ ಇದೇ ದಿನ ಈ ಆಚರಣೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಬಾಯಿ ಮುಖದ ವಿಕಲಾಂಗತೆ ಎಂದರೇನು?

ಬಾಯಿ ಮತ್ತು ಮುಖ ತನ್ನ ರೂಪವನ್ನು ಕಳೆದುಕೊಂಡು ವಿಕಾರವಾಗುವುನ್ನು ವಿಕಲಾಂಗತೆ ಎನ್ನಲಾಗುತ್ತದೆ. ಇದು ಹಲವಾರು ಕಾರಣಗಳಿಂದ ಉಂಟಾಗಬಹುದು, ಹುಟ್ಟುವಾಗಲೇ ಉಂಟಾಗುವ ವಿಕಲತೆಯನ್ನು ಜನ್ಮಜಾತ ವಿಕಲತೆ ಎನ್ನಲಾಗುತ್ತದೆ. ಇನ್ನು ಹುಟ್ಟಿದ ಬಳಿಕ ಬೇರೆ ಬೇರೆ ಕಾರಣಗಳಿಂದ ಉಂಟಾಗುವ ವಿಕಲತೆಯನ್ನು ಕೃತಕ ವಿಕಲಾಂಗತೆ ಎನ್ನಲಾಗುತ್ತದೆ.

1. ಜನ್ಮಜಾತ ವಿಕಲಾಂಗತೆ : ಸೀಳು ತುಟಿ, ಸಿಳಂಗಳ ಮತ್ತು ಇನ್ನಾವುದೇ ಮುಖದ ವಿಕಾರತೆ ಹುಟ್ಟುವಾಗಲೇ ಇರುತ್ತದೆ. ಇದನ್ನು ಜನ್ಮಜಾತ ವಿಕಲಾಂಗತೆ ಎನ್ನಲಾಗುತ್ತದೆ

2. ಕೃತಕ ವಿಕಲಾಂಗತೆ : ಕೆಲವೊಮ್ಮೆ ಅಪಘಾತಗಳ ಕಾರಣದಿಂದಲೂ ಮುಖದ ಎಲುಬು ಮತ್ತು ದವಡೆ ಮುರಿದು ಎಲುಬು ನಷ್ಟವಾದಾಗ ಮುಖದ ವಿಕಲಾಂಗತೆ ಉಂಟಾಗುತ್ತದೆ.

3. ದವಡೆ ಕೀಲು ಸೋಂಕಿನಿಂದಾಗಿ ಕೆಳಗಿನ ದವಡೆ ಮತ್ತು ಮೇಲ್ಭಾಗದ ಎಲುಬುಗಳು ಒಂದಾಗಿ ಬಾಯಿ ತೆರೆಯದಂತಾಗಿ ಮುಖದ ದವಡೆ ಮತ್ತು ಎಲುಬುಗಳ ಬೆಳವಣಿಗೆ ಕುಂಠಿತವಾಗಿ ಮುಖದ ವಿಕಲಾಂಗತೆ ಉಂಟಾಗುತ್ತದೆ. ಅಪಘಾತಗಳಿಂದಲೂ ಕೆಳಗಿನ ದವಡೆ ಕುತ್ತಿಗೆ ಭಾಗ ತುಂಡಾಗಿ ಮೇಲಿನ ಎಲುಬಿನ ಜೊತೆ ಒಂದಾಗಿ ಮುಖದ ಬೆಳವಣಿಗೆ ಕುಂಠಿತವಾಗಿ ವಿಕಲಾಂಗತೆ ಕಾರಣವಾಗುತ್ತದೆ. ಇದನ್ನು ಶಸ್ತ್ರ ಚಿಕಿತ್ಸ ಮುಖಾಂತರ ಸರಿಪಡಿಸಬಹುದಾಗಿದೆ.

4. ಇನ್ನು ಮೇಲಿನ ಮತ್ತು ಕೆಳಗಿನ ದವಡೆಯ ಬೆಳವಣಿಗೆಯ ವ್ಯತ್ಯಾಸದಿಂದಾಗಿ ಮುಖದ ಅಂದ ಕೆಡುತ್ತದೆ. ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಮುಖಾಂತರ ಮೇಲಿನ ಮತ್ತು ಕೆಳಗಿನ ದವಡೆಗಳನ್ನು ಕತ್ತರಿಸಿ, ಮರುಜೋಡಣೆ ಮಾಡಿ ಮುಖದ ಅಂದವನ್ನು ಹೆಚ್ಚಿಸಲಾಗುತ್ತದೆ.

5. ಕೆಲವೊಮ್ಮೆ ಬಾಯಿ, ಮುಖ ಮತ್ತು ದವಡೆಗಳಲ್ಲಿ ಗೆಡ್ಡೆ ಬೆಳೆದಾಗ ಶಸ್ತ್ರ ಚಿಕಿತ್ಸೆ ಮುಖಾಂತರ ಈ ಗೆಡ್ಡೆಗಳನ್ನು ಕತ್ತರಿಸಿ ತೆಗೆಯಲಾಗುತ್ತದೆ. ಆಗ ಮುಖದ ರೂಪ ಹಾಳಾಗಿ ವಿಕಲಾಂಗತೆ ಉಂಟಾಗಬಹುದು. ಇದನ್ನು ಕೂಡಾ ನಂತರದ ದಿನಗಳಲ್ಲಿ ಶಸ್ತ್ರ ಚಿಕಿತ್ಸೆ ಮುಖಾಂತರ ಸರಿಪಡಿಸಬಹುದಾಗಿದೆ.

ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸೆ ಎನ್ನುವುದು ಅತ್ಯಂತ ಮುಂದುವರಿದ ಶಸ್ತ್ರ ಚಿಕಿತ್ಸಾ ವಿಭಾಗವಾಗಿದ್ದು ಮುಖದ ಅಂದವನ್ನು ಹೆಚ್ಚಿಸುವಲ್ಲಿ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. 2015ರಲ್ಲಿ “ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿ ಮುಂಬರುವ ಅಪಘಾತ ತಪ್ಪಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಮೂರು ವರ್ಷಗಳ ಕಾಲ ಆಚರಣೆ ಮಾಡಲಾಗಿತ್ತು. 2018 ಮತ್ತು 2019ರಲ್ಲಿ ‘ಹಸಿರು ಉಳಿಸಿ ಬೆಳೆಸಿ’ ಎಂಬ ಸಂದೇಶ ನೀಡಿ ಆಚರಣೆ ಮಾಡಲಾಗಿತ್ತು. 2020ರಲ್ಲಿ ‘ಮುಖದ ವಿಕಲಾಂಗತೆ ವಿವಾರಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದಾದ್ಯಂತ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನವನ್ನು ಆಚರಿಸಲಾಗುತ್ತದೆ. ಒಟ್ಟಿನಲ್ಲಿ ತಮಗೂ ಸಾಮಾಜಿಕ ಹೊಣೆಗಾರಿಕೆ ಇದೆ ಮತ್ತು ಸಾಮಾಜಿಕ ಬದ್ಧತೆ ಇದೆ ಎಂದು ಜನರಿಗೆ ಈ ವೈದ್ಯರು ಈ ಮೂಲಕ ಸಂದೇಶ ನೀಡುತ್ತಿದ್ದಾರೆ ಎಂದರೂ ತಪ್ಪಾಗಲಾರದು.

ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ – ಫೆಬ್ರವರಿ 13

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 98451 35787

www.surakshadental.com
email: drmuraleemohan@gmail.com

Share this: