Vydyaloka

ಅಸ್ತಮಾ ಸಮಸ್ಯೆಗೆ ಶಾಶ್ವತ ಪರಿಹಾರ

ಅಸ್ತಮಾ ಸಮಸ್ಯೆಗೆ ಶಾಶ್ವತ ಪರಿಹಾರ – ಇಂದು ಅಸ್ತಮಾ ರೋಗದ ಬಗ್ಗೆ ಕೆಲವು ಮುಖ್ಯ ಮತ್ತು ವಿಶೇಷ ವಿಷಯಗಳನ್ನು ತಿಳಿದುಕೊಳ್ಳೋಣ. ಅದನ್ನು ಖಂಡಿತ ಹತೋಟಿಯಲ್ಲಿಡಲು ಸಾಧ್ಯವಿದೆ

Asthma samasyege śhaśwata parihāra

ಅಸ್ತಮಾ ಸಮಸ್ಯೆ ಒಮ್ಮೆ ಬಂತೆಂದರೆ, ಜೀವನಪರ್ಯಂತ ಇದರಿಂದ ಬಳಲಲೇಬೇಕು ಮತ್ತು ಇನ್ಹೇಲರ್ ಗಳನ್ನು ಬಿಡಲು ಸಾಧ್ಯವೇ ಇಲ್ಲ ಎಂಬ ಕಲ್ಪನೆ ಜನರಲ್ಲಿ ಇದೆ. ಇದು ಅರ್ಧ ಸತ್ಯ; ಏಕೆಂದರೆ ನಾವು ಮನಸ್ಸು ಮಾಡಿದರೆ ಇದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿದೆ. ಯಾವ ಕಾರಣದಿಂದ ಅಸ್ತಮಾ ಸಮಸ್ಯೆ ಬಂದಿದ್ದರೂ ನಮ್ಮ ಜೀವನ ಶೈಲಿ ಮತ್ತು ದಿನಚರಿಯ ಕ್ರಿಯೆಗಳು ಸರಿಯಾಗಿದ್ದರೆ ಅದನ್ನು ಖಂಡಿತ ಹತೋಟಿಯಲ್ಲಿಡಲು ಸಾಧ್ಯವಿದೆ. ಅತ್ಯುತ್ತಮ ಉದಾಹರಣೆ ಎಂದರೆ ಪ್ರಾಣಾಯಾಮ.

ಭಸ್ತ್ರಿಕಾ, ಕಪಾಲಭಾತಿ, ನಾಡಿಶೋಧನ, ಉಜ್ಜಾಯಿ, ಬಂಧಗಳಂತಹ ಪ್ರಾಣಾಯಾಮದ ಕ್ರಿಯೆಗಳನ್ನು ನಿತ್ಯವೂ ತಪ್ಪದೇ ಅಭ್ಯಾಸ ಮಾಡಿದರೆ ನಮ್ಮ ಶ್ವಾಸಾಂಗವ್ಯೂಹದ ಶಕ್ತಿ ಎಷ್ಟರಮಟ್ಟಿಗೆ ಹೆಚ್ಚಾಗುತ್ತದೆ ಎಂದರೆ ಸುಲಭಕ್ಕೆ ಅಸ್ತಮಾ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಸುಲಭವಾಗಿ ಅರ್ಥವಾಗುವಂತೆ ಹೇಳಬೇಕೆಂದರೆ ಅಸ್ತಮಾ ಖಾಯಿಲೆಯಲ್ಲಿ ಸೂಕ್ಷ್ಮ ಶ್ವಾಸನಾಳಗಳಲ್ಲಿ ಹೆಚ್ಚಾದ ಲೋಳೆಯ ಸ್ರವಿಸುವಿಕೆಯ ಕಾರಣ ನಾಳಗಳು ಕಿರಿದಾಗಿ ಉಸಿರಾಟಕ್ಕೆ ಕಷ್ಟವಾಗುತ್ತದೆ. ಇದರಿಂದ ಹೃದಯ, ಶ್ವಾಸಕೋಶ, ಮೆದುಳು ಮತ್ತು ಇಡೀ ದೇಹಕ್ಕೆ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ತಕ್ಷಣ ಸಮಸ್ಯೆ ಶಮನವಾಗಲು ಆಧುನಿಕ ವೈದ್ಯ ಪದ್ಧತಿಯಲ್ಲಿ ಹೇಳಿದ ಔಷಧಗಳನ್ನು ಅಥವಾ ಇನ್ಹೇಲರ್ ಗಳನ್ನು ಬಳಸುವುದು ಒಳ್ಳೆಯದೇ. ಆದರೆ ಶಾಶ್ವತ ಪರಿಹಾರಕ್ಕಾಗಿ ಭಾರತೀಯ ಚಿಕಿತ್ಸಾ ಪದ್ಧತಿಗಳು ವಿವರಿಸಿರುವ ಚಿಕಿತ್ಸೆಗಳ ಮೊರೆ ಹೋಗಲೇಬೇಕು.

ಆಸನ, ಪ್ರಾಣಾಯಾಮ, ಜಲನೇತಿ, ಸೂತ್ರನೇತಿಯಂತಹ ಕ್ರಿಯೆಗಳನ್ನು ನಿಯಮಿತವಾಗಿ ಅಭ್ಯಾಸದಲ್ಲಿ ಇಟ್ಟುಕೊಂಡರೆ ತುಂಬಾ ಸಹಾಯವಾಗುತ್ತದೆ. ಆಯುರ್ವೇದ ಹೇಳಿದ ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಂಡರೆ ಬಹಳ ದೊಡ್ಡ ಪ್ರಮಾಣದಲ್ಲಿ ಅಸ್ತಮಾ ಹತೋಟಿಗೆ ಬರುತ್ತದೆ ಮತ್ತು ಆನುವಂಶಿಕವಾಗಿ ಬರುವ ಸಾಧ್ಯತೆ ಇದ್ದರೂ ಅದನ್ನು ತಡೆಗಟ್ಟುತ್ತದೆ. ಅಪರೂಪಕ್ಕೆ ಮಾತ್ರ ಜೀರ್ಣಕ್ರಿಯೆಗೆ ಕಷ್ಟಕರವಾದ ಆಹಾರಗಳನ್ನು ಅಂದರೆ ಕರಿದ ಪದಾರ್ಥಗಳು ಅಥವಾ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬೇಕೇ ಹೊರತು ಸಾಮಾನ್ಯವಾಗಿ ನಿತ್ಯವೂ ಲಘು ಭೋಜನವನ್ನೇ ಮಾಡಬೇಕು.

ಇದರಿಂದ ನಮ್ಮ ಶ್ವಾಸಕೋಶದ ಸೂಕ್ಷ್ಮನಾಳಗಳಲ್ಲಿ ವ್ಯತಿರಿಕ್ತ ಬದಲಾವಣೆ ಆಗುವುದನ್ನು ತಡೆಯಬಹುದು. ಹಗಲುನಿದ್ದೆ ಮಾಡುವ ರೂಢಿಯಿದ್ದರೆ ಹಗಲುನಿದ್ದೆಯ ಅವಧಿಯನ್ನು ಕಡಿಮೆ ಮಾಡುತ್ತಾ ಬಂದು ಪೂರ್ತಿಯಾಗಿ ಬಿಟ್ಟುಬಿಡಬೇಕು. ರಾತ್ರಿ ಅತ್ಯಂತ ಲಘು ಭೋಜನ ಮಾಡಬೇಕು ಮತ್ತು ಸಾಧ್ಯವಾದಷ್ಟೂ ಬೇಗ ಮಾಡಬೇಕು. ರಾತ್ರಿಯ ಊಟದಲ್ಲಿ ಹಾಲು, ಮೊಸರು, ತುಪ್ಪ, ಕರಿದ ಪದಾರ್ಥಗಳು, ಮಾಂಸಾಹಾರಗಳನ್ನು ತ್ಯಜಿಸಲೇಬೇಕು. ರಾತ್ರಿ ಊಟದ ನಂತರ ಕನಿಷ್ಟ ಒಂದೂವರೆ ಘಂಟೆ ಬಿಟ್ಟು ಮಲಗಬೇಕು.

ಇನ್ನು ಅಸ್ತಮಾ ತೀವ್ರಾವಸ್ಥೆಯಲ್ಲಿದ್ದು ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದೇ ಇದ್ದಾಗ ಸಾಸಿವೆ ಎಣ್ಣೆಗೆ ಉಪ್ಪು ಸೇರಿಸಿ ಬಿಸಿಮಾಡಿ, ಎದೆಗೆ, ಬೆನ್ನಿಗೆ ಮಸ್ಸಾಜ್ ಮಾಡಿ, ಆ ಜಾಗಗಳಿಗೆ ನೀರಿನ ಉಗಿ ಕೊಡಬೇಕು. ನೀರಿಗೆ ನೀಲಗಿರಿ ಎಣ್ಣೆಯನ್ನು ಬಿಟ್ಟು ಉಗಿ ಕೊಟ್ಟರೆ ಹೆಚ್ಚು ಸಹಾಯವಾಗುತ್ತದೆ. ಕಫ ಸರಿಯಾಗಿ ಹೊರಗೆ ಬರದೆ ತೊಂದರೆಯಾಗುತ್ತಿದ್ದರೆ ಆಡುಮುಟ್ಟದ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ವಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಒಂದು ವೀಳ್ಯದೆಲೆಯಲ್ಲಿ ಐದು ಎಲೆ ತುಳಸಿ, ಒಂದು ಲವಂಗ, ಒಂದು ಚೂರು ಜೇಷ್ಠಮಧು ಹಾಕಿ ಪ್ರತಿ ಬಾರಿ ಊಟವಾದ ನಂತರ ಒಂದು ವಾರದ ಕಾಲ ಸೇವಿಸಬಹುದು. ಕಾಳುಮೆಣಸು, ಶುಂಠಿ, ಹಿಪ್ಪಲಿಗಳ ಸಮಪ್ರಮಾಣದ ಮಿಶ್ರಣವನ್ನು ಅರ್ಧ ಚಮಚ ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ನಿತ್ಯ ಸೇವಿಸುವುದರಿಂದ ಜೀರ್ಣಶಕ್ತಿಯೂ ಹೆಚ್ಚುತ್ತದೆ; ಅಸ್ತಮಾ ಕೂಡಾ ಹತೋಟಿಯಲ್ಲಿರುತ್ತದೆ.

ದೀರ್ಘಾವಧಿಯಿಂದ ಇರುವ ಅಸ್ತಮಾ ರೋಗಿಗಳಿಗೆ ಕೆಲವೊಮ್ಮೆ ಒಳರೋಗಿಯಾಗಿದ್ದು ಪಂಚಕರ್ಮ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಗಳನ್ನು ಪಡೆದು ಗುಣಪಡಿಸಿಕೊಳ್ಳಬೇಕಾಗುತ್ತದೆ. ಅಸ್ತಮಾ ಸಂಪೂರ್ಣವಾಗಿ ಗುಣವಾದ ಮೇಲೆಯೂ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ ಕೆಲವು ಕಾಲದ ನಂತರ ಮರುಕಳಿಸುವ ಸಾಧ್ಯತೆ ಇರುತ್ತದೆ. ಅಸ್ತಮಾ ತೀವ್ರಾವಸ್ಥೆಯಲ್ಲಿದ್ದಾಗ ಸಾಧ್ಯವಾದಷ್ಟೂ ಬೇಗ ಆಸ್ಪತ್ರೆಗೆ ಭೇಟಿ ಕೊಟ್ಟು ತುರ್ತು ಚಿಕಿತ್ಸೆ ತೆಗೆದುಕೂಳ್ಳಬೇಕು. ಉಸಿರಾಟದ ತೊಂದರೆಗಳೆಲ್ಲವೂ ಅಸ್ತಮಾ ಅಲ್ಲ. ಹಾಗಾಗಿ ವೈದ್ಯರ ಭೇಟಿ ಮಾಡದೇ ಅಸ್ತಮಾ ಎಂದು ತೀರ್ಮಾನಿಸಿ ಮನೆಮದ್ದುಗಳನ್ನಾಗಲೀ ಔಷಧ ಸೇವನೆಯನ್ನಾಗಲೀ ಮಾಡಬಾರದು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this: