Vydyaloka

ಆರೋಗ್ಯ ವೃದ್ದಿಸುವ ಹಣ್ಣುಗಳು

ಆರೋಗ್ಯ ವೃದ್ದಿಸುವ ಹಣ್ಣುಗಳು ದೀರ್ಘಾವಧಿ ರೋಗಗಳನ್ನು ನಿರ್ಮೂಲನೆ ಮಾಡುತ್ತವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿವೆ. ರೋಗ ಗುಣಪಡಿಸಲು ಮತ್ತು ತಡೆಗಟ್ಟಲು ಹಣ್ಣುಗಳು ಮಹತ್ವದ ಪಾತ್ರ ವಹಿಸುತ್ತವೆ.

ಹಣ್ಣುಗಳು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ರುಚಿ ರುಚಿಯಾದ ರಸಭರಿತ ತಾಜಾ ಹಣ್ಣುಗಳನ್ನು ಮೆಲ್ಲುವುದೇ ಒಂದು ಮಜಾ. ಆದರೆ ಯಾವ ಯಾವ ಹಣ್ಣುಗಳು ಯಾವ ಯಾವ ಅಂಶಗಳನ್ನು ಒಳಗೊಂಡಿರುತ್ತವೆ. ಅವು ನಮ್ಮ ಆರೋಗ್ಯ ವೃದ್ದಿಗೆ ಹೇಗೆ ಸಹಕರಿಸುತ್ತವೆ ಎಂಬುದು ಬಹುತೇಕ ಮಂದಿಗೆ ತಿಳಿದಿರುವುದಿಲ್ಲ.

ಹಣ್ಣುಗಳಲ್ಲಿ ಇರುವ ವಿವಿಧ ಮೈಕ್ರೋನ್ಯೂಟ್ರಿಯೆಂಟ್‍ಗಳು ಮತ್ತು ಫೈಟೋಕೆಮಿಕಲ್‍ಗಳನ್ನು ಪ್ರತಿ ನಿತ್ಯ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದಾಗ ಅವು ಬೊಜ್ಜು ರೋಗದ ಸಾಧ್ಯತೆಯನ್ನು ಕಡಿಮೆಗೊಳಿಸಿ ಹೃದ್ರೋಗಗಳು, ಕೆಲವು ವಿಧದ ಕ್ಯಾನ್ಸರ್‍ಗಳು, ಟೈಪ್ 2 ಡಯಾಬಿಟಿಸ್, ದೀರ್ಘ ಕಾಲೀನ ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳು, ವಯೋಮಾನ ಸಹಜ ಮರೆವು ರೋಗ, ವಯಸ್ಸಿಗೆ ಸಂಬಂಧಪಟ್ಟ ಕಣ್ಣಿನ ರೋಗಗಳು ಹಾಗೂ ರಿಮಾಟೊಯ್ಡ್ ಅರ್ಥ್‍ರೈಟಿಸ್ ಸೇರಿದಂತೆ ಒತ್ತಡಕ್ಕೆ ಸಂಬಂಧಿಸಿದ ದೀರ್ಘಾವಧಿ ರೋಗಗಳನ್ನು ನಿರ್ಮೂಲನೆ ಮಾಡುತ್ತವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿವೆ.

ಹಣ್ಣುಗಳನ್ನು ತಿನ್ನಲು ಕೂಡ ಒಂದು ಕ್ರಮವಿದೆ:

ಊಟ ಅಥವಾ ಉಪಾಹಾರ ಸೇವಿಸುವುದಕ್ಕು ಅರ್ಧ ಗಂಟೆ ಮೊದಲು ಹಣ್ಣು ತಿನ್ನಬೇಕು. ಊಟವಾದ ಕೂಡಲೇ ಹಣ್ಣನ್ನು ತಿನ್ನಬಾರದು. ಊಟವಾದ ಬಳಿಕ ಸುಮಾರು 3 ಗಂಟೆಯ ನಂತರ ಹಣ್ಣನ್ನು ಸೇವಿಸುವುದು ಉತ್ತಮ. ಏಕೆಂದರೆ ನಾವು ಸೇವಿಸಿದ ಆಹಾರ ಜಠರಕ್ಕೆ ತಲುಪಿದ ನಂತರ ಅದು ಕಿಣ್ವವಾಗಿ ಪರಿವರ್ತನೆಯಾಗುತ್ತದೆ. ಬಳಿಕ ಅದು ಆಮ್ಲವಾಗಿ ಬದಲಾಗಿ ಪಚನವಾಗಲು ಆರಂಭವಾಗುತ್ತದೆ. ಆದರೆ ಹಣ್ಣು ಹಾಗಲ್ಲ. ಅದು ಜಠರಕ್ಕೆ ಸೇರಿದ ತಕ್ಷಣವೇ ಜೀರ್ಣವಾಗಲು ಆರಂಭವಾಗುತ್ತದೆ. ಹೀಗಾಗಿ ನಾವು ಆಹಾರ ಮತ್ತು ಹಣ್ಣನ್ನು ಒಟ್ಟಿಗೆ ತಿಂದರೆ ತಿಂದ ಆಹಾರ ಹಣ್ಣಿನ ಜೊತೆಗೇ ಪಚನವಾಗಲು ಪ್ರಾರಂಭವಾಗುತ್ತದೆ.

ಆಹಾರ ಕಿಣ್ವವಾಗದೇ ಆಮ್ಲವಾಗಿ ಪರಿವರ್ತನೆ ಹೊಂದಲು ಹಣ್ಣು ಆಹಾರಕ್ಕೆ ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕಾಗಿಯೇ ಅಸಿಡಿಟಿ, ಹುಳಿತೇಗಿನಂಥ ತೊಂದರೆ ಕಾಣಿಸಿಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ಸೇವಿಸುವುದರಿಂದ ಅವಧಿಗೆ ಮುನ್ನವೇ ಕೂದಲಿಗೆ ವಯಸ್ಸಾಗಿ, ಬಕ್ಕತಲೆ, ಕೈ-ಕಾಲು ನಡುಗುವಿಕೆ ಮತ್ತು ಕಣ್ಣಿನ ಸುತ್ತ ಕಪ್ಪು ವರ್ತುಲಗಳು ಕಂಡುಬರುವಿಕೆ ಮೊದಲಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಒಂದು ವೇಳೆ ಹಣ್ಣುಗಳನ್ನು ತಿನ್ನಲು ಸರಿಯಾದ ಕ್ರಮವನ್ನು ಅನುಸರಿಸಿದಲ್ಲಿ ದೀರ್ಘಾಯುಷ್ಯ, ಚೈತನ್ಯ, ಆರೋಗ್ಯ, ಸಂತೋಷ ಮತ್ತು ಸ್ವಾಸ್ಥ್ಯ ತೂಕವನ್ನು ಕಾಯ್ದುಕೊಳ್ಳಬಹುದು. ಹಣ್ಣಿನ ರಸವನ್ನು ಕುಡಿಯುವುದಕ್ಕಿಂತಲೂ ಹಣ್ಣನ್ನು ತಿನ್ನುವುದು ಉತ್ತಮ.

ಗರ್ಭಿಣಿಯರಿಗೆ ಉಪಯುಕ್ತ:

ಹಣ್ಣುಗಳು ವಿಟಮಿನ್, ಖನಿಜಾಂಶ, ಪೋಷಕಾಂಶಗಳನ್ನು ಹೊಂದಿರುವ ಉತ್ತಮ ಆಹಾರ. ಹೀಗಾಗಿ ಗರ್ಭಿಣಿಯರು ಕೂಡ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದು ಸೂಕ್ತ. ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೆ ಬೇಕಾದ ಜೀವಸತ್ವಗಳು ನೈಸರ್ಗಿಕವಾಗಿ ಲಭಿಸಬೇಕಾದರೆ ಹಣ್ಣುಗಳನ್ನು ಸೇವಿಸಲೇಬೇಕು. ಮಗುವಿನ ಮೂಳೆ ಹಾಗೂ ಹಲ್ಲುಗಳು ಆರೋಗ್ಯಕರವಾಗಿ ರೂಪುಗೊಳ್ಳಲು, ದೃಷ್ಟಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ನರವ್ಯೂಹ ನಳಿಕೆಗಳ ನ್ಯೂನತೆಗಳಿಂದ ಮಗುವನ್ನು ರಕ್ಷಿಸಲು ಮತ್ತು ಆರೋಗ್ಯಕರ ತೂಕವನ್ನು ಹೊಂದಲು ಸಹಕಾರಿಯಾಗುವ ಗುಣಗಳು ಹಣ್ಣುಗಳಿಂದ ಮಗುವಿಗೆ ಲಭಿಸಲು ಸಾಧ್ಯ. ಗರ್ಭಿಣಿಯರನ್ನು ಸಾಮಾನ್ಯವಾಗಿ ಕಾಡುವ ಮಲಬದ್ದತೆ ಮತ್ತು ಮೂಲವ್ಯಾಧಿಯಂಥ ತೊಂದರೆಗಳಿಗೆ ಹಣ್ಣುಗಳು ಔಷಧಿಯಾಗಿವೆ.

ಆರೋಗ್ಯ ವೃದ್ದಿಸುವ ಹಣ್ಣುಗಳು:

1. ಹಿಪ್ಪು ನೇರಳೆ ಮತ್ತು ಸ್ಟ್ರಾಬೆರಿ : ನೆನಪಿನ ಶಕ್ತಿಯನ್ನು ಈ ಹಣ್ಣುಗಳು ವೃದ್ದಿಸುತ್ತವೆ. ವಯಸ್ಸಾಗುತ್ತಾ ಹೋದಂತೆ ನೆನೆಪಿನ ಶಕ್ತಿಯ ತೊಂದರೆಯಿಂದ, ಮರೆಗುಳಿಗಳಾಗುವ ಹಿರಿಯರಿಗೆ ಈ ಹಣ್ಣುಗಳು ಒಳ್ಳೆಯದು.

2. ಕಿತ್ತಳೆ ಮತ್ತು ಮೂಸಂಬಿ : ಮೂಳೆಯ ಕೀಲುಗಳಿಗೆ ಶಕ್ತಿ ತುಂಬಲು ಸಹಕಾರಿ.

3. ಶುಷ್ಕ ಫಲಗಳು (ಡ್ರೈ ಫ್ರೂಟ್‍ಗಳು) : ಇವು ಹಲವು ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯಕರ ಆಹಾರ. ಬಹಳ ಪ್ರಮಾಣದಲ್ಲಿ ಖನಿಜಾಂಶ, ವಿಟಮಿನ್‍ಗಳನ್ನು ಹೊಂದಿರುವ ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಅತಿ ಉತ್ತಮ ವಿಧಾನ.

4. ಸೇಬು : ದೊಡ್ಡ ಕರುಳಿನ ಕ್ಯಾನ್ಸರ್ ತಡೆಯಲು ಸಹಕಾರಿ. ಮಲಬದ್ದತೆಯಂಥ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ನ್ಯೂಟ್ರಿಶನ್ ಹಣ್ಣು ಸೇಬು. ದೇಹಕ್ಕೆ ಬೇಕಾಗಿರುವ ಉತ್ತಮ ಕೊಬ್ಬನ್ನು ಇದು ಒದಗಿಸುತ್ತದೆ.

5. ದ್ರಾಕ್ಷಿ : ರಕ್ತದೊತ್ತಡವನ್ನು ಹತೋಟಿಗೆ ತರಲು ಇದು ನೆರವಾಗುತ್ತದೆ.

6. ಬಾಳೆಹಣ್ಣು : ಬಾಳೆಹಣ್ಣು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಕಿಡ್ನಿಯ ತೊಂದರೆ ಇದ್ದವರು ಮತ್ತು ಮಲಬದ್ದತೆಯ ತೊಂದರೆ ಉಳ್ಳವರು ಬಾಳೆಹಣ್ಣನ್ನು ದಿನವೂ ಉಪಯೋಗಿಸಬೇಕು.

7. ಕಲ್ಲಂಗಡಿ ಹಣ್ಣು : ರಕ್ತ ವೃದ್ದಿಗೆ ಸಹಕಾರಿ. ಕಜ್ಜಿ, ತುರಿಕೆಯಂಥ ಸಮಸ್ಯೆಗಳಿಗೆ ಕಲ್ಲಂಗಡಿ ಹಣ್ಣು ಪರಿಹಾರ ನೀಡುತ್ತದೆ.

8. ಮಾವಿನ ಹಣ್ಣು : ನಿದ್ರಾ ಹೀನತೆಗೆ ಇದು ಪರಿಹಾರ ನೀಡಬಲ್ಲದು. ಮೂಲವ್ಯಾಧಿ, ವಾತ-ಪಿತ್ತ, ಮಲಬದ್ದತೆ, ಅಜೀರ್ಣ ಸಮಸ್ಯೆಗಳಿಗೆ ಇದು ರಾಮಬಾಣ.

9. ದಾಳಿಂಬೆ ಹಣ್ಣು : ಹಲ್ಲುಗಳ ಸುರಕ್ಷತೆಗೆ ಬೇಕಾದ ವಿಟಮಿನ್‍ಗಳನ್ನು ಒದಗಿಸುತ್ತದೆ. ಖನಿಜಾಂಶಗಳಿಂದ ಸಮೃದ್ಧ ವಾಗಿರುವ ಹಣ್ಣು ಇದು.

10. ಹಲಸಿನ ಹಣ್ಣು : ಪಿತ್ತ ವಿಕಾರಗಳನ್ನು ದೂರ ಮಾಡಬಲ್ಲದು, ಪೌಷ್ಟಿಕಾಂಶಯುಕ್ತ ಹಣ್ಣು. ನರಗಳ ದೌರ್ಬಲ್ಯಕ್ಕೆ ಪರಿಹಾರ ನೀಡುತ್ತದೆ.

11. ಮುರುಗಲು ಹಣ್ಣು (ಪುನರ್ಪುಳಿ) : ಪಿತ್ತ ಸಮಸ್ಯೆಗೆ ರಾಮಬಾಣವಾಗಿರುವ ಹಣ್ಣು.

12. ಪಪ್ಪಾಯಿ : ವಿಟಮಿನ್ ಎ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

13. ಅಂಜೂರ : ಒತ್ತಡ, ಮಲಬದ್ದತೆ, ಮೂಲವ್ಯಾಧಿ ಸಮಸ್ಯೆಗಳನ್ನು ಶಮನ ಮಾಡಬಲ್ಲ ಶಕ್ತಿ ಈ ಹಣ್ಣಿಗಿದೆ.

14. ಖರ್ಜೂರ : ಜಂತು ಹುಳು ಸಮಸ್ಯೆ ಹಾಗೂ ಬೇಧಿ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ಹಣ್ಣು. ಪುಷ್ಟಿದಾಯಕ ಆಹಾರಗಳಲ್ಲಿ ಒಂದು.

15. ಅನಾನಸ್ : ರೋಗ ನಿರೋಧಕ ಶಕ್ತಿ ಹೆಚ್ಚಳ, ಬೊಜ್ಜು ಕರಗುವಿಕೆಗೆ ನೆರವು ನೀಡುತ್ತದೆ.

ಡಾ. ಯೋಗಿತಾ ಬಾಲಿ ಎಂ.ಆರ್.
ಆಯುರ್ವೇದ, ಯೋಗ ತಜ್ಞರು, ದೀರ್ಘಾಯು ಆಯುರ್ವೇದಿಕ್ ಹೆಲ್ತ್ ಕೇರ್ ಸೆಂಟರ್,
ಬನ್ನೇರುಘಟ್ಟ ರಸ್ತೆ, ಬೆಂಗಳೂರು. ದೂ.: 080-26892450, ಮೊ.: 98869 48511,
Email: baliyogitha@gmail.com

Share this: