Vydyaloka

ಅರೆತಲೆನೋವು ಅಥವಾ ಮೈಗ್ರೇನ್- ಆಯುರ್ವೇದ ಪರಿಹಾರ

ಅರೆತಲೆನೋವು ಅಥವಾ ಮೈಗ್ರೇನ್ ದಿನದ ಯಾವುದೇ ಸಮಯದಲ್ಲಾದರೂ  ಕಾಣಿಸಿಕೊಳ್ಳಬಹುದು. ಅರೆತಲೆನೋವು ಹೆಚ್ಚಾಗಿ ಹೆಂಗಸರಲ್ಲಿ, ಅದರಲ್ಲೂ ಮೊದಲ ಋತುಸ್ರಾವದ ಅವಧಿಯಲ್ಲಿ ಬರುವುದು ಹೆಚ್ಚಾಗಿ ಕಂಡುಬಂದಿದೆ (ಶೇ.70).

ಮೈಗ್ರೇನ್ ಎಂಬ ಗ್ರೀಕ್ ಪದದ ಅರ್ಥ-ಅರೆತಲೆನೋವು. ಇದು ತಲೆಯ ಒಂದು ಅರ್ಧ ಭಾಗವನ್ನಾದರೂ ಬಾಧಿಸುವ ನೋವು. ಆದರೆ ಇದು ತಲೆಯ ಪೂರ್ಣ ಭಾಗವನ್ನು ಕೂಡ ಬಾಧಿಸಬಹುದು. ತಲೆಸುತ್ತುವಿಕೆ, ಕಣ್ಣಿಗೆ ಕತ್ತಲೆ ಬರುವುದು, ಕಿವಿಗಳಲ್ಲಿ ಸದ್ದಾಗುವುದೂ ಇದರೊಂದಿಗಿರಬಹುದು. ದೇಹದ ಒಂದು ಪಾಶ್ರ್ವದಲ್ಲಿ ಜಡತೆ, ಒಂದು ಕೈ ಹಾಗೂ ಕಾಲಿನ ನಿಶ್ಯಕ್ತಿ ಮತ್ತು ಮಾತಿನ ಅಲ್ಪಾವಧಿ ಅಸಹಜತೆಗಳೂ ಇರಬಹುದು. ದಿನದ ಯಾವುದೇ ಸಮಯದಲ್ಲಾದರೂ ಅರೆತಲೆನೋವು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಬೆಳಗಿನ ವೇಳೆಯಲ್ಲಿ ಆರಂಭವಾಗುತ್ತದೆ.

ಶೇ. 60ರಷ್ಟು ರೋಗಿಗಳಿಗೆ 20 ವರ್ಷದ ವಯಸ್ಸಿನೊಳಗೇ ಅರೆತಲೆನೋವು ಬರುತ್ತದೆಂದು ಭಾವಿಸಬಹುದಾಗಿದೆ. ಶೇ.90ರಷ್ಟು ರೋಗಿಗಳಿಗೆ ಅವರ 30ನೇ ವಯಸ್ಸಿನೊಳಗೆ ಬಂದಿದೆ. ಇದೇ ಅಲ್ಲದೇ ಬೇರೆ ವಯೋಮಾನಗಳಲ್ಲೂ ಅರೆತಲೆನೋವು ಕಂಡುಬಂದ ದಾಖಲೆಗಳಿವೆ. ಅರೆತಲೆನೋವು ಹೆಚ್ಚಾಗಿ ಹೆಂಗಸರಲ್ಲಿ, ಅದರಲ್ಲೂ ಮೊದಲ ಋತುಸ್ರಾವದ ಅವಧಿಯಲ್ಲಿ ಬರುವುದು ಹೆಚ್ಚಾಗಿ ಕಂಡುಬಂದಿದೆ (ಶೇ.70). ಅರೆತಲೆನೋವಿನ ಬಾಧೆ ವಯಸ್ಕರಿಗೆ ಬರುವ ರೀತಿಯಲ್ಲೇ ಮಕ್ಕಳಲ್ಲಿಯೂ ಕಂಡುಬರುತ್ತದೆ. ಹೆಚ್ಚು ಸಂವೇದನೀಯ, ಸೂಕ್ಷ್ಮವಾಗಿರುವ ಮಕ್ಕಳಿಗೆ ಬರುವ ಸಾಧ್ಯತೆಗಳು ಹೆಚ್ಚು. ಪರಿಸರದ ಅಂಶಗಳು ಮತ್ತು ಶರೀರದ ಆಂತರಿಕ ಸ್ಥಿತಿಗಳೆರಡೂ ಅರೆತಲೆನೋವು ಬರಲು ಪ್ರಮುಖ ಪಾತ್ರವಹಿಸುತ್ತದೆ.

ಅರೆತಲೆನೋವು ವಿವಿಧ ನಮೂನೆಗಳು:

1. ಸಾಧಾರಣ ವಿಧ (ಶೇ.85)
2.  ಕಣ್ಣಿನ ಬೇನೆ (ಶೇ.85)
3.  ಇದರೊಂದಿಗೆ ಇತರೆ ಬೇನೆಯಿರುವುದು (ಶೇ.1)
4.  ನರಸಂಬಂಧೀ ಅರೆತಲೆನೋವು (ಶೇ.4)
ದೃಷ್ಟಿಯ ತೊಂದರೆಗಳಿರುವುದು ಕಣ್ಣಿನ ಬೇನೆಯ ಸೂಚಕವಾಗಿದೆ. ಕೆಲವು ರೋಗಿಗಳು – ಕಣ್ಣಿನ ಮೇಲ್ಭಾಗದಲ್ಲಿ, ದವಡೆಯಲ್ಲಿ ಮತ್ತು ಬೆನ್ನಿನಲ್ಲಿ ಕೂಡ ಈ ನೋವನ್ನು ಅನುಭವಿಸುತ್ತಾರೆ. ನೋವು ತಲೆಯ ಒಂದು ಪಾಶ್ರ್ವವನ್ನು ಮಾತ್ರ ಆಕ್ರಮಿಸುತ್ತದೆ. ಕೆಲವೊಮ್ಮೆ ಉಬ್ಬಳಿಕೆ ಮತ್ತು ವಾಂತಿಯಾಗಬಹುದು. ನೋವು ಬಂದ 30 ನಿಮಿಷಗಳಿಂದ ಒಂದು ಗಂಟೆಯೊಳಗೆ ಗರಿಷ್ಠ ಮಟ್ಟಕ್ಕೆ ತಲುಪುತ್ತದೆ ಹಾಗೂ ಸುಮಾರು 6 ಗಂಟೆಗಳಿಗಿಂತ ಹೆಚ್ಚಾಗಿ ಮುಂದುವರೆಯುವುದಿಲ್ಲ. ನರಸಂಬಂಧಿ ಅರೆತಲೆನೋವಿದ್ದಾಗ ಹಣೆ ಮತ್ತು ಕಿವಿ ನಡುವಿನ ಭಾಗ ಹಾಗೂ ಕಣ್ಣಿನ ನೋವಿರುತ್ತದೆ.

ಅರೆತಲೆನೋವು ಬರುವ ಹಂತಗಳು:

1. ಮೊದಲ ಹಂತದಲ್ಲಿ ಸೆಳೆತವಿರುವುದರಿಂದ ರೋಗಿಯ ಮುಖ ಬಿಳುಚಿಕೊಂಡಿರುತ್ತದೆ. ಈ ಸೆಳೆತದೊಂದಿಗೇ ತಲೆನೋವು ಆರಂಭವಾಗುತ್ತದೆ. ಈ ಹಂತವು ಅಲ್ಪಾವಧಿಯದ್ದಾಗಿರುತ್ತದೆ.

2. ಮುಖವು ಕೆಂಪೇರುವುದು ಮತ್ತು ತಲೆನೋವು ಕಾಣಿಸಿಕೊಳ್ಳುವುದು-ಇದು ಎರಡನೇ ಹಂತ. ಇದು ಹಲವು ಗಂಟೆಗಳವರೆಗೆ ಇರುತ್ತದೆ.

3. ಮೂರನೇ ಹಂತವು ಅರೆನೋವಿನ ನಂತರದ ಅವಧಿಯಾಗಿದೆ, ತಲೆನೋವಿನಿಂದ ಕ್ರಮೇಣ ಬಿಡುಗಡೆ, ತಲೆಯ ಭಾರದ ಸಂವೇದನೆಯು ತಗ್ಗುವುದು-ಇಲ್ಲಿ ಕಂಡುಬರುತ್ತದೆ. ಈ ಭಾದೆಯ ಹಲವು ಗಂಟೆಗಳಿಂದ ಹಿಡಿದು ಹಲವು ದಿನಗಳವರೆಗೆ ಇರಬಹುದು.

4. ಒಮ್ಮೆ ಈ ಭಾದೆ ಬಂದಾಗ, ರೋಗಿಯ ಹೊರಗಿನ ಪ್ರಚೋದನೆಗೆ ತೀವ್ರವಾಗಿ ಪ್ರತಿಕ್ರಿಯಿಸಿವುದರೊಂದಿಗೆ ಹೃದಯದಲ್ಲಿ ಅಹಿತಕರ ಸಂವೇದನೆ ಅನುಭವಿಸುತ್ತಾನೆ. ಬೆಳಕು ಮತ್ತು ಶಬ್ದಗಳು ಅಸಹನೀಯವಾಗುತ್ತದೆ. ಕತ್ತಲೆಯಾದ ಸ್ಥಳದಲ್ಲಿ ಇರಲು ಬಯಸುತ್ತಾರೆ ಹಾಗೂ ಪಿಸುದನಿಯಲ್ಲಿ ಮಾತನಾಡುತ್ತಾರೆ.

ಅರೆತಲೆನೋವು ಅನಿವಂಶಕವೇ?

ತಂದೆ-ತಾಯಿ (ಹೆಚ್ಚಾಗಿ ತಾಯಿ)ಯರಿಂದ ಮಕ್ಕಳಿಗೆ ಅರೆತಲೆನೋವು ಬರುವ ಸಾಧ್ಯತೆಗಳು ಶೇ.70ರಷ್ಟು ರೋಗಿಗಳಲ್ಲಿ ಕಂಡು ಬಂದಿದೆ. ಆದರೆ, ರೋಗಕ್ಕಿಂತಲೂ ರೋಗ ಬರುವ ಸಾಧ್ಯತೆ ಹೆಚ್ಚು ಅನುವಂಶಿಕವಾದುದಾಗಿದೆ.

ಅರೆತಲೆನೋವನ್ನು ಹೆಚ್ಚಿಸುವ ಅಂಶಗಳು:

1. ಹೆಚ್ಚು ಬಿಸಿಲು ಕಾಯುವುದು, ವಾತಾವರಣದ ಪರಿಸ್ಥಿತಿಗಳಲ್ಲಿ ಬದಲಾವಣೆಗಳು, ಹೆಚ್ಚು ಗಾಳಿ ಬೆಳಕಿಲ್ಲದ ಕೋಣೆಯಲ್ಲಿ ವಾಸ ಮಾಡುವುದು.

2. ಸಾಕಾಗುವಷ್ಟು ನಿದ್ರೆ ಇಲ್ಲದಿರುವುದು ಅಥವಾ ಅತೀ ನಿದ್ರೆ.

3. ಕೆಲಸ ಮತ್ತು ಬಿಡುವಿನ ದಿನಚರಿಗೆ ಹೊಂದಿಕೊಳ್ಳಲು ವಿಫಲತೆ, ದೇಹದ ಅಂತಃಸ್ರಾವಗಳಲ್ಲಾಗುವ ಬದಲಾವಣೆ.

4. ಹೊರ ಪರಿಸರದಲ್ಲಾಗುವ ಜೋರಾದ ಶಬ್ದ ಮತ್ತು ಪ್ರಕಾಶಮಾನವಾದ ಬೆಳಕಿನ ಪ್ರಭಾವಗಳು.

5. ತೀವ್ರವಾದ ಹಸಿವು, ಚಾಕೋಲೇಟ್, ಅಣಬೆ, ಜೇನು, ಹಂದಿ ಮತ್ತು ಇತರ ಕೆಲಬಗೆಯ ಮಾಂಸ ಹಾಗೂ ಮೀನಿನ ಸೇವನೆ.

6. ತಂಬಾಕು ಸೇವನೆ.

7. ಅತಿ ಆಯಾಸ, ಶಾರೀರಿಕವಾದ ಖಾಯಿಲೆಗಳು.

8. ಹಿಂದೊಮ್ಮೆ ಅರೆತಲೆನೋವಿನ ಭಾದೆ ಕಂಡುಬಂದಿದ್ದ ಸ್ಥಳಕ್ಕೆ, ಅದೇ ಸನ್ನಿವೇಶ ಮತ್ತು ಸಮಯಕ್ಕೆ ಬಂದಾಗ ಮತ್ತೊಮ್ಮೆ ಮರುಕಳಿಸಬಹುದು.

9. ಉದ್ವೇಗ, ಭಯ, ಆತಂಕಗಳಿಂದಾಗಿಯೂ ಉಂಟಾಗಬಹುದು.

ಅರೆತಲೆನೋವಿಗೆ ಪರಿಹಾರ:

1. ಪರಿಹಾರವು ಬೇರೆ ಬೇರೆ ರೋಗಿಗಳಿಗೆ ಬೇರೆ ಬೇರೆಯಾಗಿರುತ್ತದೆ.

2. ಹೊಸಗಾಳಿಯಿಂದ ಕೆಲವು ರೋಗಿಗಳಿಗೆ ಕೂಡಲೇ ತಲೆನೋವು ಬಂದು ಸಹಿಸಲು ಸಾಧ್ಯವಾಗಬಹುದು. ಮತ್ತೆ ಕೆಲವರಿಗೆ ಹಾಯೆನಿಸಬಹುದು.

3. ಅರೆತಲೆನೋವಿನಿಂದ ನರಳುವ ರೋಗಿಗಳು ಹಾಲು ಮತ್ತು ತರಕಾರಿಗಳ ಆಹಾರಾಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮೀನು ಮತ್ತು ಮಾಂಸಾಹಾರದಲ್ಲಿ ಅರೆತಲೆನೋವನ್ನು ಹೆಚ್ಚು ಮಾಡುವ ಅಂಶಗಳಿರುತ್ತದೆ.

4. ಮಲವಿಸರ್ಜನೆ ಕಾಲಕಾಲಕ್ಕೆ ನಿಯಮಿತವಾಗಿರಬೇಕು.

5. ರೋಗಿಯು ಸಾಕಾದಷ್ಟು ನಿದ್ದೆಯನ್ನು ಮಾಡಬೇಕು.

6. ವೃತ್ತಿನಿರತ ರೋಗಿಗಳು ಶಾರೀರಿಕ ಕೆಲಸ/ವ್ಯಾಯಾಮಕ್ಕೆ ಒಂದು ನಿರ್ದಿಷ್ಟ ವೇಳೆಯನ್ನು ಅನುಸರಿಸಬೇಕು.

7. ಅರೆತಲೆನೋವಿಗೆ ಕೆಲಸವೇ ಒಂದು ಪರಿಹಾರವಾಗಿದೆ.

ಡಾ. ಎಸ್.ಎಸ್. ಹಿರೇಮಠ
ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ
#1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್,  ರಾಜಾಜಿನಗರ, ಬೆಂಗಳೂರು-10
ದೂ.: 080-2350 5777, ಮೊಬೈಲ್ : 9341226614
Email : dhanvantari.ayurveda@gmail.com

www.dhanvantarihospital.com

Share this: