Vydyaloka

ಅಮೃತಬಳ್ಳಿ ದೇವಲೋಕದಿಂದ ಬಿದ್ದ ಅಮೃತವೇ?

ಅಮೃತಬಳ್ಳಿ ದೇವಲೋಕದಿಂದ ಬಿದ್ದ ಅಮೃತವೇ? ಅಮೃತಬಳ್ಳಿಯ ಗುಣಗಳನ್ನು ನೋಡಿದರೆ ಇದು ದೇವರ ವರ ಎಂದೇ ಅನಿಸುತ್ತದೆ.  ಅದರ ಔಷಧಿ ಗುಣಗಳು ಅಷ್ಟು ಅದ್ಭುತವಾದದ್ದು.ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವವರು ಇದನ್ನು ಹೆಚ್ಚಾಗಿ ಸೇವಿಸಬೇಕು.

ರಾಮ ರಾವಣರ ಯುದ್ಧ ಮುಗಿದ ನಂತರ ಸತ್ತ ವಾನರರನ್ನು ಬದುಕಿಸಲು ದೇವೇಂದ್ರ ಅಮೃತ ಸಿಂಚನವನ್ನು ಮಾಡಿದನಂತೆ. ಹಾಗೆ ಭೂಮಿ ಮೇಲೆ ಬಿದ್ದ ಕೆಲವು ಅಮೃತದ ಹನಿಗಳಿಂದ ಅಮೃತ ಬಳ್ಳಿ ಹುಟ್ಟಿತಂತೆ. ಈ ಕಥೆ ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಅಮೃತಬಳ್ಳಿಯ ಗುಣಗಳನ್ನು ನೋಡಿದರೆ ಇದು ದೇವರ ವರ ಎಂದೇ ಅನಿಸುತ್ತದೆ.  ಅದರ ಔಷಧಿ ಗುಣಗಳು ಅಷ್ಟು ಅದ್ಭುತವಾದದ್ದು. ಮಧುಮೇಹ, ದಮ್ಮು, ಕೆಮ್ಮು, ಮೂತ್ರರೋಗಗಳು, ಹೃದ್ರೋಗ, ವಾತರೋಗಗಳು, ಜ್ವರ, ಕ್ರಿಮಿ, ಕಾಮಲೆ, ರಕ್ತಹೀನತೆ, ಚರ್ಮದ ಸಮಸ್ಯೆಗಳು, ಆಮವಾತ, ಆಸಿಡಿಟಿ, ಆಮಶಂಕೆ, ಅಗ್ನಿಮಾಂದ್ಯ, ಮೂಲವ್ಯಾಧಿ, ಎದೆಹಾಲು ಕೆಟ್ಟು ಮಗುವಿನಲ್ಲಿ ಸಮಸ್ಯೆಯಾಗುತ್ತಿದ್ದರೆ, ಗುಣವಾಗದ ಗಾಯವಿದ್ದರೆ – ಹೀಗೆ ಹಲವಾರು ರೋಗಗಳನ್ನು ತಡೆಯುವುದು ಮತ್ತು ಗುಣಮಾಡುವ ಶಕ್ತಿ ಅಮೃತಬಳ್ಳಿಗಿದೆ.

ಬಹುತೇಕ ಎಲ್ಲಾ ರೀತಿಯ ಜ್ವರಗಳಿಗೆ ಅಮೃತ ಬಳ್ಳಿ ರಾಮಬಾಣ. ಅದಕ್ಕೆ ಕಾರಣವಿದೆ. ಅದು ದೇಹದ ವಿಷವನ್ನು ಹೊರಹಾಕುತ್ತದೆ; ಕೆಟ್ಟ ಬ್ಯಾಕ್ಟೀರಿಯಾ, ವೈರಸ್ ಗಳನ್ನು ಕೊಲ್ಲುತ್ತದೆ. ವೈರಸ್ ನಿರೋಧಕ ಗುಣವಂತೂ ಅತ್ಯಂತ ಪ್ರಬಲವಾಗಿದೆ. ಏಡ್ಸ್ ವೈರಸ್ ನಿಂದ ಹಿಡಿದು ಡೆಂಗ್ಯೂ ವೈರಸ್ ವರೆಗೆ ಇದು ಬಹುತೇಕ ಎಲ್ಲಾ ವೈರಸ್ ಗಳನ್ನೂ ಎದುರಿಸುತ್ತದೆ ಎಂಬುದು ಇತ್ತೀಚಿನ ಸಾವಿರಾರು ಸಂಶೋಧನೆಗಳಲ್ಲಿ ಕೂಡಾ ಸಾಬೀತಾಗಿದೆ. ಇದರ ವಿಶೇಷತೆಯೆಂದರೆ ವೈರಸ್ ನಮ್ಮ ದೇಹ ಪ್ರವೇಶಿಸಿದ ನಂತರ ಅದನ್ನು ಕೊಲ್ಲುವುದೊಂದೇ ಅಲ್ಲ; ನಮ್ಮ ದೇಹದ ಮೇಲೆ ವೈರಸ್ ನ ದಾಳಿಯಾಗುವ ಮೊದಲೇ ಸೇವಿಸಿದರೆ ಬಹುತೇಕ ಎಲ್ಲ ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನೂ ದೇಹಕ್ಕೆ ಕೊಡುತ್ತದೆ. ಇಂತಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿರುವ ಕಾರಣದಿಂದಲೇ ಇದನ್ನು ಆಯುರ್ವೇದದಲ್ಲಿ ’ರಸಾಯನೀ’ ಎಂದು ಕರೆದಿದ್ದಾರೆ.

ಇದರ ವೈಜ್ಞಾನಿಕ ಹೆಸರು ಟಿನೋಸ್ಪೋರಾ ಕಾರ್ಡಿಫೋಲಿಯ ಎಂದು. ಇದು ಮೆನಿಸ್ಪರರ್ಮೆಸಿ ಕುಂಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು ಸಂಸ್ಕೃತದಲ್ಲಿ ಆಮ್ರಾತಕ, ಮಧುಪರ್ಣಿ, ಗುಡುಚಿ, ಅಮೃತ, ವತ್ಸಾದನಿ, ಛಿನ್ನರುಹಾ, ಜೀವಂತಿಕಾ, ಸೋಮವಲ್ಲಿ, ತಂತ್ರಿಕಾಮೃತಾ ಎಂದೂ,  ಆಂಗ್ಲ ಭಾಷೆಯಲ್ಲಿ ಇದನ್ನು ಹಾರ್ಟ ಲೀವ್ಡ ಮೂನ್ ಸೀಡ್ ಅಥವಾ ಗುಲಂಚ ಟಿನೋಸ್ಪೋರ ಎಂದು ಕರೆಯಲಾಗುತ್ತದೆ. ವಾಣಿಜ್ಯಿಕವಾಗಿ ಅಮೃತಬಳ್ಳಿಯನ್ನು ಗುಡುಚಿ ಎಂದು ಸಾಮಾನ್ಯವಾಗಿ ಗುರುತಿಸಲಾಗುತ್ತದೆ.

ಅತಿಯಾದರೆ ಅಮೃತಬಳ್ಳಿಯೂ ತೊಂದರೆ ಮಾಡಬಲ್ಲುದು:

ಆದರೆ ಇದನ್ನು ಸೇವಿಸುವಾಗ ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅತಿಯಾದರೆ ಅಮೃತವೂ ವಿಷವಾದಂತೆ ಅಮೃತಬಳ್ಳಿಯೂ ತೊಂದರೆಗಳನ್ನುಂಟು ಮಾಡಬಲ್ಲುದು. ಉಷ್ಣಗುಣವನ್ನು ಹೊಂದಿರುವ ಕಾರಣ ಅತಿ ಸೇವನೆಯಿಂದ ಬಾಯಿಹುಣ್ಣು, ಸುಸ್ತು, ಮಲಬದ್ಧತೆಯಂತಹ ಸಮಸ್ಯೆಗಳಾಗಬಹುದು. ಇನ್ನೊಂದು ಏನೆಂದರೆ ನಾವು ಸೇವಿಸುತ್ತಿರುವುದು ನಿಜವಾಗಿಯೂ ಅಮೃತ ಬಳ್ಳಿಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು. ಏಕೆಂದರೆ ಚಿಕೂನ್ ಗುನ್ಯಾ ತೀವ್ರವಾಗಿದ್ದ ಸಂದರ್ಭದಲ್ಲಿ ತೊಂಡೆಕಾಯಿಯ ಬಳ್ಳಿಯನ್ನೂ ಅಮೃತಬಳ್ಳಿಯೆಂದು ಮಾರಾಟಮಾಡಲಾಗಿತ್ತು. ಅಮೃತಬಳ್ಳಿಯ ಮುಖ್ಯ ಲಕ್ಷಣವೆಂದರೆ ಅದನ್ನು ಕತ್ತರಿಸಿದಾಗ ಅದು ಚಕ್ರದಂತೆ ಕಾಣುತ್ತದೆ. ಹಾಗೆ ಇಲ್ಲದೇ ಹೋದರೆ ಅದು ಅಮೃತಬಳ್ಳಿಯಲ್ಲ.

ಸ್ವಲ್ಪ ಪ್ರಮಾಣದಲ್ಲಿ ಪ್ರತಿನಿತ್ಯ ಎಲ್ಲರೂ ಸೇವಿಸಬಹುದು. ವಿಶೇಷವಾಗಿ ಮೇಲೆ ಹೇಳಿದ ಸಮಸ್ಯೆಗಳಿರುವವರು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವವರು ಇದನ್ನು ಹೆಚ್ಚಾಗಿ ಸೇವಿಸಬೇಕು. ಇಲ್ಲವಾದರೆ ವಾರಕ್ಕೊಮ್ಮೆ ಬಳಸಿದರೂ ಆದೀತು. ಹಾಗೆ ಬಳಸುತ್ತಿದ್ದರೆ ನಮ್ಮ ದೇಹದಲ್ಲಿನ ವಿಷದ ಪ್ರಮಾಣ ಕಡಿಮೆಯಾಗಿ ದೇಹಶುದ್ಧಿಯಾಗುತ್ತದೆ. ಕಿರುಬೆರಳಿನ ಅರ್ಧ ಉದ್ದದ ಅಮೃತಬಳ್ಳಿಯ ತುಂಡನ್ನು (ಸುಮಾರು 3 – 4 ಗ್ರಾಂ) ತೆಗೆದುಕೊಂಡು ಅದಕ್ಕೆ ಸ್ವಲ್ಪ ಶುಂಠಿ, ಕೊತ್ತಂಬರಿ ಮತ್ತು ಜೀರಿಗೆ ಹಾಕಿ ಲೋಟ ನೀರು ಹಾಕಿ ಸಣ್ಣ ಬೆಂಕಿಯಲ್ಲಿ ಒಂದು ಲೋಟಕ್ಕೆ ಇಳಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಿಮಗೆ ಉಷ್ಣವಾಗುತ್ತಿದೆ ಎಂದೆನಿಸಿದರೆ ಒಂದರಿಂದ ಎರಡು ಗ್ರಾಂ ಮಾತ್ರ ಅಮೃತಬಳ್ಳಿ ಬಳಸಿ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
Share this: