ಅಡುಗೆ ಮನೆಯಲ್ಲಿ ಬಿಸಿ ನೀರು ಹಾಗೂ ತಣ್ಣೀರು ಬರುವಂತಹ ಒಂದು “ವಾಷ್ ಬೇಸಿನ್” ಇರಬೇಕು. ಬಿಸಿ ನೀರಿಗಾಗಿ ಸೌರಶಕ್ತಿಯನ್ನು ಬಳಸಿಕೊಳ್ಳುವುದು ಒಳ್ಳೆಯದು. ಹತ್ತಿರದಲ್ಲಿ ಸೋಪಿರಬೇಕು. ಮೊಣಕೈಯಿಂದ ನೀರನ್ನು ತಿರುಗಿಸಲು ಬರುವಂತಹ ನಲ್ಲಿಯಿರಬೇಕು.
ಅಡುಗೆ ಮನೆಯ ಬೇಸಿನ್/ ಸಿಂಕ್ ರೋಗ ಕ್ರಿಮಿಗಳ ಗೂಡಾಗಿರುತ್ತದೆ. ಇದನ್ನು ಸ್ವಚ್ಛಗೊಳಿಸಲು ಸೂಕ್ತ ಕ್ರಿಮಿನಾಶಕವನ್ನು ನಿಯಮಿತವಾಗಿ ಬಳಸಬೇಕು.
ಅಡುಗೆ ಮಾಡುವ ಕಟ್ಟೆಯನ್ನು ಒರೆಸಲು 4-5 ಶುಭ್ರ ಬಟ್ಟೆ/ ಸ್ಪಾಂಜ್ ಇರಬೇಕು. ಒಂದು ಸಲ ಒರೆಸಲು ಬಳಸಿದ ಬಟ್ಟೆ,ಸ್ಪಾಂಜನ್ನು ಮತ್ತೆ ಒರೆಸಲು ಬಳಸಬಾರದು. ಅದನ್ನು ತೊಳೆಯಲು ಹಾಕಬೇಕು.
ಅಡುಗೆ ಮಾಡುವಾಗ ಉಳಿಯುವ ನಾರು, ಸಿಪ್ಪೆ ಇತ್ಯಾದಿಗಳನ್ನು ಹಾಕಲು ಹಾಗೂ ಕಸಮುಸುರೆಯನ್ನು ಹಾಕಿಡಲು ಕಾಲಿನಿಂದ ಒತ್ತಿ ಮುಚ್ಚಳ ತೆಗೆಯಬಹುದಾದ ಒಂದು ಬಕೆಟನ್ನು ಇಟ್ಟುಕೊಳ್ಳಬೇಕು. ಎಲ್ಲ ಕಸವನ್ನು ಅದರೊಳಗೆ ಹಾಕಿಡಬೇಕು. ದಿನಕ್ಕೆ ಒಂದು ಸಲ ಅದರೊಳಗಿರುವುದನ್ನೆಲ್ಲ ಖಾಲಿ ಮಾಡಬೇಕು.
ರಾತ್ರಿಯಲ್ಲಿ ಕಿಟಕಿ ಬಾಗಿಲನ್ನು ಭದ್ರವಾಗಿ ಮುಚ್ಚಿಡಬೇಕು. ಹಲ್ಲಿ, ಜಿರಲೆ, ಇಲಿಗಳು ಒಳಗೆ ಬರುವಂತಿರಬಾರದು. ವಾಶ್ ಬೇಸಿನ್ ಒಳಗೊಂಡಂತೆ ಅಡುಗೆ ಮನೆಯಲ್ಲಿ ಎಲ್ಲಿಯೂ ಆಹಾರದ ಚೂರು ಪಾರು ಉಳಿದಿರಬಾರದು. ಇವೂ ಜಿರಲೆಗಳನ್ನು ಆಹ್ವಾನಿಸುತ್ತವೆ.
ಹಸಿ ತರಕಾರಿಗಳನ್ನು ಪ್ರತ್ಯೇಕವಾಗಿಡಬೇಕು. ಇವು ಸಿದ್ಧಪಡಿಸಿದ ಆಹಾರದ ಸಂಪರ್ಕಕ್ಕೆ ಬರುವಂತಿರಬಾರದು.
ಹಸಿ ತರಕಾರಿಗಳನ್ನು ತೊಳೆದು ಹೆಚ್ಚಲು ಬಳಸುವ ಪಾತ್ರೆ ಹಾಗೂ ಅಡುಗೆ ಮಾಡಲು ಬಳಸುವ ಪಾತ್ರೆಗಳು ಬೇರೆ ಬೇರೆಯಾಗಿರಬೇಕು. ಇವನ್ನು ಅದಲು ಬದಲು ಮಾಡಬಾರದು.
ತರಕಾರಿ ಹೆಚ್ಚಿದ ಚಾಕುವಿನಿಂದ ಹಣ್ಣನ್ನು ಹೆಚ್ಚಬಾರದು. ಹಣ್ಣು ಹಾಗೂ ತರಕಾರಿ ಹೆಚ್ಚಲು ಬಳಸಿದ ಉಪಕರಣಗಳನ್ನು ಕೆಲಸ ಮುಗಿದ ಕೂಡಲೇ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಎತ್ತಿಡಬೇಕು. ಈ ಮಾತು ಹೆಚ್ಚಲು ಬಳಸಿದ ಮಣೆಗಳಿಗೂ ಅನ್ವಯಿಸುತ್ತದೆ.
ಹೊರಗಡೆ ಸುತ್ತಾಡಿದ ಕೊಳಕು ಕಾಲುಗಳನ್ನು ತೊಳೆಯದೇ ಅಡುಗೆ ಮನೆಯನ್ನು ಪ್ರವೇಶಿಸಬೇಡಿ. ಚಪ್ಪಲಿ ಶೂ ಹಾಕಿಕೊಂಡು ಖಂಡಿತ ಅಡುಗೆ ಮನೆ ಪ್ರವೇಶಿಸಲು ಯಾರಿಗೂ ಅವಕಾಶ ಕೊಡಬೇಡಿ.
ಅನಗತ್ಯ ಉಪಯುಕ್ತವಲ್ಲದ ವಸ್ತುಗಳನ್ನು ಅಡುಗೆ ಮನೆಯಲ್ಲಿಡಬೇಡಿ.